ದಿನ ನಿತ್ಯದ ಕಿಟಿಕಿಟಿ ಶ್ರಮದ ನಂತರವೂ ಜೀವನ ಪ್ರೀತಿಯನ್ನು ಮೈ ಮನದಲ್ಲಿ ತುಂಬಿಕೊಳಬಯಸುವವರಿಗೆ ತಮ್ಮ ಕವನಗಳ ಮೂಲಕ ಎಲ್ಲವನ್ನೂ ಕೊಟ್ಟ ಕೆ.ಎಸ್.ನ. ಅವರನ್ನು ಮತ್ತೆ ಏನನ್ನೂ ಬೇಡಬೇಕಾಗಿಲ್ಲ.
ನನ್ನವಳು ನನ್ನೆದೆಯ ಹೊನ್ನಾಡನಾಳುವಳು ಬೆಳಗುಗೆನ್ನೆಯ ಚೆನ್ನೆ ನನ್ನ ಮಡದಿ!
ಶಾನುಭೋಗರ ಮಗಳು ರತ್ನದಂತಹ ಹುಡುಗಿ; ಗಂಡು ಸಿಕ್ಕುವುದೊಂದು ಕಷ್ಟವಲ್ಲ; ಸರಿಯಾಗಿ ಗಂಡೊದಗಿ ಹೆಣ್ಣು ಸುಖವಾಗಿರಲಿ ತಡವಾದರೇನಂತೆ?- ನಷ್ಟವಿಲ್ಲ
ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು ಚೆಂದ ನಿನಗಾವುದೆಂದು – ನಮ್ಮೂರು ಹೊನ್ನೂರೋ, ನಿಮ್ಮೂರು ನವಿಲೂರೋ
ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು ಒಳಗೆ ಬರಲಪ್ಪಣೆಯೆ ದೊರೆಯೇ
ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು, ನಿದ್ದೆ ಬರುವಳು ಹೊದ್ದು ಮಲಗು, ಮಗುವೇ ಸುತ್ತಿ ಹೊರಳಾಡದಿರು, ಮತ್ತೆ ಹಟ ಹೂಡದಿರು, ನಿದ್ದೆ ಬರುವಳು ಕದ್ದು ಮಲಗು, ಮಗುವೆ.
ಕೇತಕಿಯ ಬನಗಳಲಿ ಸಂಚರಿಸದಿರು ಚೆಲುವೆ, ಸರ್ಪಮಂದಿರವಂತೆ ತಂಪಿನೊಡಲು
ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ ಅತ್ತಿತ್ತ ಸುಳಿದವರು ನೀವಲ್ಲವೇ? ಹತ್ತಿರದ ಹೆಣ್ಣೆಂದು ಮತ್ತೆ ಮುತ್ತೂರಿನಲಿ ಒಪ್ಪಿ ಕೈ ಹಿಡಿದವರು ನೀವಲ್ಲವೇ?
. . .. ತೊತ್ತೆಂದು ಜರೆದವರು, ಮುತ್ತೆಂದು ಕರೆದವರು ಎತ್ತರದ ಮನೆಯವರು ನೀವಲ್ಲವೆ .
. . . ಬಡತನವೋ, ಸಿರಿತನವೊ, ಯಾರಿರಲಿ, ಎಲ್ಲಿರಲಿ, ದೊರೆಯಾಗಿ ಮೆರೆದವರು ನೀವಲ್ಲವೇ? ಗಂಡನಿಗೆ ಒಪ್ಪಾಗಿ ಕಂದನಿಗೆ ದಿಕ್ಕಾಗಿ, ಪಯಣದಲಿ ಜೊತೆಯಾಗಿ ನಾನಿಲ್ಲವೇ?
ಸಂಬಳದ ಸಂಜೆ ಒಳಜೇಬು ಬೆಳಕಾಗಿರಲು ಮುಗುಳು ನಗೆ ಸೂಸಬೇಕು ತಂದ ಹಣ ತುಂಡಾಗಿ ತಲೆನೋವು ಬಂದಿರಲು ಮಂದಲಗೆ ಹಾಕಬೇಕು.
`ಹಿಂದಿನ ಸಾಲಿನ ಹುಡುಗರು’ ಎಂದರೆ ನಮಗೇನೇನೂ ಭಯವಿಲ್ಲ! ನಮ್ಮಿಂದಾಗದು ಶಾಲೆಗೆ ತೊಂದರೆ; ನಮಗೆಂದೆಂದೂ ಜಯವಿಲ್ಲ!
. . . ಪುಸ್ತಕ ಓದದೆ ಪ್ರೀತಿಯನರಿತೆವು; ಗೆಲ್ಲದೆ ಹೆಮ್ಮೆಯ ಗಳಿಸಿದೆವು; ನಾವೀ ಶಾಲೆಯನೆಂದೂ ಬಿಡೆವು; ನೆಮ್ಮದಿಯಾಗಿಯೆ ಉಳಿಯುವೆವು!
ಮಲ್ಲಿಗೆ ಕವಿಯ ಈ ಎಲ್ಲಾ ಕವಿತೆಗಳನ್ನು ಓದಿ ಹಗುರಾಗದವರು ಯಾರು?
ಸುವರ್ಣ ಕರ್ನಾಟಕ ವರ್ಷದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೈಗೆತ್ತಿಕೊಂಡ ಅನೇಕ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದು ಕನ್ನಡ ಪ್ರಮುಖ ಲೇಖಕರ ಸಮಗ್ರ ವಾಙ್ಮಯವನ್ನು ಮರುಮುದ್ರಣದ ಮೂಲಕ ಕನ್ನಡ ಓದುಗರಿಗೆ ಸುಲಭ ಬೆಲೆಯಲ್ಲಿ ದೊರಕಿಸುವುದು. ಈ ಯೋಜನೆಯಡಿ ಈಗ ಡಾ.ಕೆ.ಎಸ್.ನರಸಿಂಹಸ್ವಾಮಿಯವರ ಸಮಗ್ರ ವಾಙ್ಮಯ ಆರು ಸಂಪುಟಗಳಲ್ಲಿ ಪ್ರಕಟಗೊಳ್ಳುತಿದೆ.
ಆಧುನಿಕ ಕನ್ನಡದ ಅತಿಶ್ರೇಷ್ಟ ಕವಿಗಳಲ್ಲಿ ಕೆ.ಎಸ್.ನ. ಒಬ್ಬರು. ೧೯೪೨ರಲ್ಲಿ ಪ್ರಕಟವಾದ ಅವರ `ಮೈಸೂರ ಮಲ್ಲಿಗೆ’ಯಿಂದ ಅಪಾರ ಜನಪ್ರಿಯತೆಯನ್ನು ಗಳಿಸಿದ ಕೆ.ಎಸ್.ನ. ತಮ್ಮ ಕೊನೆಯ ದಿನಗಳವರೆಗೂ ಕಾವ್ಯಕ್ಷೇತ್ರದಲ್ಲಿ ಕ್ರಿಯಾಶೀಲರಾಗಿಯೇ ಇದ್ದು ಒಟ್ಟು ಹದಿನಾರು ಕವನ ಸಂಕಲನಗಳನ್ನು ರಚಿಸಿದರು. ಕಾವ್ಯ ಸೃಷ್ಟಿಯಷ್ಟೇ ಅಲ್ಲದೆ ಅನುವಾದ, ವಿಮರ್ಶೆ, ಸಣ್ಣಕಥೆ ಇತ್ಯಾದಿ ಪ್ರಬೇಧಗಳಲ್ಲಿಯೂ ಸಾಕಷ್ಟು ಕೆಲಸ ಮಾಡಿದ ಕೆ.ಎಸ್.ನ. ಅವರ ಒಟ್ಟು ಕೃತಿಗಳ ಸಂಖ್ಯೆ ಮೂವತ್ತೈದು.
ಈ ಯೋಜನೆಯ ಮೊದಲೆರಡು ಸಂಪುಟಗಳೂ ಅವರ ಸಮಗ್ರ ಕಾವ್ಯಗಳನ್ನೊಳಗೊಂಡಿದ್ದರೆ, ಉಳಿದ ನಾಲ್ಕರಲ್ಲಿ ಅವರ ಇನ್ನಿತರ ಸಾಹಿತ್ಯ ರಚನೆಗಳು ಸಂಗ್ರಹಗೊಂಡಿವೆ.
ಶೀರ್ಷಿಕೆ: ಕೆ.ಎಸ್.ನರಸಿಂಹಸ್ವಾಮಿ ಸಮಗ್ರ ವಾಙ್ಮಯ ಸಂಪುಟ ಒಂದು: ಕಾವ್ಯ ೧ ಸಂಪಾದಕರು: ಡಾ. ಸಿ.ಎನ್.ರಾಮಚಂದ್ರನ್ ಪ್ರಕಾಶಕರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪುಟಗಳು:484 ಬೆಲೆ:ರೂ.110/-
Filed under: ಕಾವ್ಯ-ಕವನ | Tagged: ಡಾ. ಸಿ.ಎನ್.ರಾಮಚಂದ್ರನ್, ಮೈಸೂರು ಮಲ್ಲಿಗೆ, ಶೀರ್ಷಿಕೆ: ಕೆ.ಎಸ್.ನರಸಿಂಹಸ್ವಾಮಿ ಸಮಗ್ರ ವಾಙ್ಮಯ | 2 Comments »