ನವಕರ್ನಾಟಕಕ್ಕೆ ಚಿನ್ನದ ಹಬ್ಬದ ಶುಭಾಶಯಗಳು


ಪುಸ್ತಕಗಳು ಸಾಯುವುದಿಲ್ಲ, ಉಸಿರಾಡುತ್ತವೆ

ಸಂದರ್ಶನ : ಸಂದೀಪ ನಾಯಕ
`ನವಕರ್ನಾಟಕ ಪ್ರಕಾಶನ’ ತನ್ನ ಐದು ದಶಕಗಳ ಪುಸ್ತಕ ಪ್ರಕಟಣೆಯಲ್ಲಿ ತಲೆಮಾರುಗಳ ಓದುವ ರುಚಿಯನ್ನು ಹೆಚ್ಚಿಸಿದೆ. ಕನ್ನಡದಲ್ಲಿ ಚಿಂತನೆ ಮಾಡುವುದನ್ನು ಯುವತಲೆಮಾರಿಗೆ ಕಲಿಸಿದೆ. ಕೇವಲ ಪುಸ್ತಕ ಪ್ರಕಟಣೆ ಮೂಲಕ ಸಾಧ್ಯವಾದ ಅಸಾಮಾನ್ಯ ಸಂಗತಿ ಇದು. ಕನ್ನಡದ ಈ ವಿಶಿಷ್ಟ ಪ್ರಕಾಶನದ ಒಂದು ಹೊರಳು ನೋಟ…

ಕನ್ನಡ ಪುಸ್ತಕಗಳ ಪ್ರಕಾಶನ ಸಂಸ್ಥೆಗಳಲ್ಲಿ ತನ್ನದೇ ಆದ ಅಚ್ಚನ್ನು ಓದುಗರ ಮನದಲ್ಲಿ ಮೂಡಿಸಿರುವ ನವಕರ್ನಾಟಕ ಪ್ರಕಾಶನಕ್ಕೆ ಈಗ ಐವತ್ತರ ಹರೆಯ. 1960ರಲ್ಲಿ ಆರಂಭವಾದ ನವಕರ್ನಾಟಕ `ಪುಸ್ತಕಗಳ ಮೂಲಕ ಮನುಕುಲದ ಸೇವೆ’ ಎಂಬ ತನ್ನ ಧ್ಯೇಯವಾಕ್ಯದಂತೆ ಕೆಲಸ ಮಾಡಲು ಪ್ರಯತ್ನಿಸಿದೆ. ಈವರೆಗೆ ಇಂಗ್ಲಿಷ್, ಹಿಂದಿ ಭಾಷೆಯ ಪುಸ್ತಕಗಳೂ ಸೇರಿದಂತೆ 2951 ಪುಸ್ತಕಗಳನ್ನು ಅದು ಪ್ರಕಟಿಸಿದೆ. ಪ್ರಾದೇಶಿಕ ಭಾಷೆಯ ಪ್ರಕಾಶನ ಸಂಸ್ಥೆಗಳಲ್ಲಿ ಈ ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸಿರುವುದು ಭಾರತದಲ್ಲಿ ಬಹುಶಃ ದಾಖಲೆಯೇ. ಪ್ರಕಾಶನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರವು 2006ರಲ್ಲಿ `ಅತ್ಯತ್ತಮ ಪ್ರಕಾಶನ ಸಂಸ್ಥೆ’ ಎಂಬ ಪ್ರಶಸ್ತಿ ನೀಡಿದೆ. ಕಳೆದ ಹತ್ತು ವರ್ಷಗಳಿಂದ `ಹೊಸತು’ ಎಂಬ ವಿಚಾರ ಪ್ರಧಾನವಾದ ಪತ್ರಿಕೆಯನ್ನು ಜಿ.ರಾಮಕೃಷ್ಣ ಸಂಪಾದಕತ್ವದಲ್ಲಿ ಪ್ರಕಟಿಸಲಾಗುತ್ತಿದೆ. `ನವಕರ್ನಾಟಕ’ ಚಿನ್ನದ ಹಬ್ಬದ ನೆಪದಲ್ಲಿ, ಪ್ರಕಾಶನದ ರೂವಾರಿ ಹಾಗೂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಆರ್.ಎಸ್.ರಾಜಾರಾಮ್‌ರೊಂದಿಗೆ ಮಾತುಕತೆಯ ಆಯ್ದ ಭಾಗ.


ವಿಶ್ವಕಥಾಕೋಶ ಬಿಡುಗಡೆ ಮಾಡಿ ಮಾತನಾಡುತ್ತಿರುವ ಡಾ.ಹಾ.ಮಾ.ನಾಯಕ. ಬಿ.ವಿ.ಕಕ್ಕಿಲ್ಲಾಯ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಕಥಾಕೋಶದ ಸಂಪಾದಕ, ನಿರಂಜನ ಇದ್ದಾರೆ.

* ಸಂಸ್ಥೆಯ ಆರಂಭದ ದಿನಮಾನಗಳು ಹೇಗಿದ್ದವು. ಅದರ ಹಿನ್ನೋಟ ಒಂದನ್ನು ಕೊಡಿ.

ಸ್ವಾತಂತ್ರ್ಯ ಹೋರಾಟಗಾರರು, ಶ್ರಮಜೀವಿ ಚಳವಳಿಗಳಲ್ಲಿ ತೊಡಗಿಸಿಕೊಂಡವರು, ಸಾಹಿತಿಗಳು, ಪತ್ರಕರ್ತರು, ಜನಪರ ಕಾಳಜಿಯಿದ್ದು ಸಮತಾವಾದಕ್ಕೆ ಬದ್ಧರಾಗಿದ್ದವರು ಈ ಸಂಘಟನೆಯ ರೂವಾರಿಗಳು. ಸ್ಥಾಪಕ ಅಧ್ಯಕ್ಷ ಬಿ.ವಿ.ಕಕ್ಕಿಲ್ಲಾಯರು. ಈಗ ಅವರಿಗೆ 91ರ ಹರೆಯ. ಸಂಸ್ಥೆಯಲ್ಲಿ ಈಗಲೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಸಂಸ್ಥೆಯ ಆರಂಭದಲ್ಲೇ ನನ್ನನ್ನು ಗುರುತಿಸಿ ಕರೆಸಿಕೊಂಡವರು.

ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಎಸ್.ಆರ್.ಭಟ್‌ರು. ಸರಳ- ಸಜ್ಜನಿಕೆಯ ಸ್ವಾತಂತ್ರ್ಯ ಹೋರಾಟಗಾರರು. ನಮ್ಮ ಪ್ರಾಚೀನ ಇತಿಹಾಸ, ಸಂಸ್ಕೃತಿ, ಪರಂಪರೆಗಳ ಆಳವಾದ ಅಧ್ಯಯನ, ವೇದೋಪನಿಷತ್ತುಗಳನ್ನು, ಸ್ಮೃತಿ-ಶಾಸ್ತ್ರಗಳನ್ನು ಮಾರ್ಕ್ಸ್‌ವಾದಿ ದೃಷ್ಟಿಕೋನದಿಂದ ವಿಶ್ಲೇಷಣೆ ಮಾಡಬಲ್ಲವರಲ್ಲಿ ಎಸ್.ಆರ್.ಭಟ್ ಒಬ್ಬರು.
ಸಂಘಟನೆಯನ್ನು ಕಟ್ಟುವಲ್ಲಿ, ಆಂತರಿಕ ಭಿನ್ನತೆಗಳನ್ನು ಹೋಗಲಾಡಿಸುವಲ್ಲಿ, ಸಂಸ್ಥೆಗೆ ಸ್ಥಿರತೆಯನ್ನು ತಂದುಕೊಡುವಲ್ಲಿ ಅವರ ಕೊಡುಗೆ ಅನನ್ಯವಾದದ್ದು. ಆರಂಭದಲ್ಲಿ ನಮ್ಮ ಕಾರ್ಯಪಡೆಯ ಸಂಖ್ಯೆ ಐದು. ಅವರ ಪೈಕಿ ಸಂಸ್ಥೆಯಲ್ಲಿ ಈಗ ಉಳಿದವ ನಾನೊಬ್ಬನೆ.

ಆಡಳಿತ ನಿರ್ವಹಣೆ, ಲೆಕ್ಕಪತ್ರ, ಪತ್ರಲೇಖನ, ಪುಸ್ತಕ ಖರೀದಿ, ಮಾರಾಟ ಇವೆಲ್ಲವುಗಳ ತರಬೇತಿ ಪಡೆದ ಐದು ವರ್ಷಗಳ ನಂತರ, ನಷ್ಟದಲ್ಲಿ ನಡೆಯುತ್ತಿದ್ದ ನಮ್ಮ ಮುದ್ರಣಾಲಯದ ಹೊಣೆಯನ್ನು ನನ್ನ ಹೆಗಲಿಗೇರಿಸಿದವರು ಭಟ್ಟರು. 1974ರಲ್ಲಿ `ಕೆಂಬಾವುಟ’ ವಾರಪತ್ರಿಕೆಗೆ ಸಂಪಾದಕರಾಗಿ ನಿಯೋಜಿಸಲ್ಪಟ್ಟ ಭಟ್ಟರು, ಸಂಸ್ಥೆಯ ಕಾರ್ಯದಂಡವನ್ನು ನನ್ನ ಕೈಗಿತ್ತು, ಮುಂದೆ ಅವರಿರುವವರೆಗೂ ನನಗೆ ಸಲಹೆ ಸೂಚನೆಗಳನ್ನು ನೀಡುತ್ತಾ ಸಂಸ್ಥೆಯ ಪ್ರಗತಿಗೆ ಕಾರಣರಾದರು.

ಮೊದಲ 15 ವರ್ಷಗಳಲ್ಲಿ ಸಂಸ್ಥೆ ಪ್ರಕಟಣೆಗಳ ಸಂಖ್ಯೆ 15. ನಮ್ಮ ಮೊದಲ ಪ್ರಕಟಣೆ (1962) ಎನ್.ಸೀತಾರಾಮ ಶಾಸ್ತ್ರಿ ಅವರು ಅನುವಾದಿಸಿದ `ಲೆನಿನ್‌ನ ಆತ್ಮಕಥೆ’. ಅದಕ್ಕೆ ಕಲಾವಿದ ಆರ್.ಎಸ್.ನಾಯ್ಡು ಚಿತ್ರ ಬರೆದಿದ್ದರು.

* ನಿಮ್ಮ ಪ್ರಕಟಣೆಗಳಲ್ಲಿ ಯಾವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ  ನೀಡಿದ್ದೀರಿ?

ನಾವು ಮಕ್ಕಳ ಸಾಹಿತ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದೇವೆ. ತೆನಾಲಿರಾಮ, ಮಹಾಭಾರತ, ಪಂಚತಂತ್ರದ ಕಥೆಗಳೆಲ್ಲ ಆಗಲೇ ಮಾರುಕಟ್ಟೆಯಲ್ಲಿವೆ. ಇವೆಲ್ಲ ಕೆಲಸ ಇಲ್ಲದಂಥವು. ಇವುಗಳಿಗೆ ಗೌರವಧನ ಕೊಡಬೇಕಿಲ್ಲ, ಚಿತ್ರ ಬರೆಸಬೇಕಿಲ್ಲ.

ನಾವು ಅಂಥದ್ದೇನೂ ಮಾಡಲಿಲ್ಲ. ಮಕ್ಕಳಿಗೆ ಬೇರೆ ರೀತಿಯದನ್ನು ಕೊಡಬೇಕು ಎಂದು ಪೂರಕ ಪಠ್ಯಗಳನ್ನು ಸಮಾಜ ವಿಜ್ಞಾನ, ಜ್ಞಾನಗಳನ್ನು, ವೈಜ್ಞಾನಿಕ ಕಥೆಗಳನ್ನು, ಮಕ್ಕಳ ಪದ್ಯಗಳನ್ನು ಬರೆಸಿ ಪ್ರಕಟಿಸಿದೆವು. ಮಕ್ಕಳಿಗೆ ತಿಳಿವಳಿಕೆ ಕೊಡುವಂಥ ಸಾಮಾಜಿಕ, ಪರಿಸರದ ಕಥೆಗಳನ್ನೂ ಪ್ರಕಟಿಸಿದ್ದೇವೆ. ಕೆಲವು ಪುಸ್ತಕಗಳು ಎರಡರಿಂದ ಎಂಟು ಮುದ್ರಣಗಳನ್ನು ಕಂಡಿವೆ. ಮಕ್ಕಳ ಪುಸ್ತಕ ಬರೆಸಲು ನಾವು ಕಾರ್ಯಾಗಾರವನ್ನೂ ಮಾಡಿದ್ದೇವೆ. ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳಲ್ಲಿ ವಿಜ್ಞಾನದ ತಾಂತ್ರಿಕ ಪದಗಳನ್ನು ಹೇಳದೆ ತಿಳಿಸುವ ಪ್ರಯತ್ನ ಮಾಡಿದ್ದೇವೆ.

* ಇವುಗಳೊಂದಿಗೆ ಯಾವ ಪುಸ್ತಕಗಳನ್ನು ಹೆಚ್ಚಾಗಿ ಪ್ರಕಟಿಸಿದ್ದೀರಿ?

ನಾವು ಅತಿಹೆಚ್ಚು ಆರೋಗ್ಯ, ವೈದ್ಯಕೀಯ ಪುಸ್ತಕಗಳನ್ನು ತಂದಿದ್ದೇವೆ. ಎಲ್ಲ ವಿಶ್ವವಿದ್ಯಾಲಯದವರು ವಿಫಲರಾದರೂ ನಾವು ಈ ವಿಷಯಗಳ ಪುಸ್ತಕಗಳನ್ನು ತಂದಿದ್ದೇವೆ. ನಾವು ತಂದವುಗಳಲ್ಲಿ ಕೆಲವು 18 ಮುದ್ರಣವನ್ನೂ ಕಂಡಿವೆ. ಇವನ್ನು ಮಾರಿದ್ದು ಮಾತ್ರವಲ್ಲ ಇದರ ಪ್ರಚಾರದ ಕೆಲಸವನ್ನೂ ಮಾಡಿದೆವು. 2003ರಲ್ಲಿ ವೈದ್ಯ ಸಾಹಿತ್ಯ ಪ್ರಚಾರ ಆಂದೋಲನವನ್ನು ಮಾಡಿದ್ದೇವೆ. ಕನ್ನಡದಲ್ಲಿ ಬಂದ ವೈದ್ಯ ಸಾಹಿತ್ಯದ ಲೆಕ್ಕವನ್ನು ಹಾಕಿದಾಗ 500 ಪುಸ್ತಕಗಳು ಬಂದದ್ದು ಗೊತ್ತಾಯಿತು. ಬೆಂಗಳೂರಿನ 25 ಆಸ್ಪತ್ರೆಗಳಲ್ಲಿ ಒಂದು ಆಸ್ಪತ್ರೆಯಲ್ಲಿ ಐದು ದಿನಗಳಂತೆ 125 ದಿನ ಈ ಪುಸ್ತಕಗಳ ಪ್ರದರ್ಶನವನ್ನು ನಡೆಸಿದೆವು. ಇದಕ್ಕೆ ಪ್ರತಿಕ್ರಿಯೆ ಹೇಗಿತ್ತು ಎಂದರೆ ಆ ರಂಗದಲ್ಲಿ ಇದ್ದವರಿಗೇ ಇಷ್ಟು ಪುಸ್ತಕ ಬಂದದ್ದು ಗೊತ್ತಿರಲಿಲ್ಲ!

* ಪುಸ್ತಕದ ಮಾರಾಟ, ಪ್ರದರ್ಶನ, ಹಸ್ತಪ್ರತಿಯ ಆಯ್ಕೆ ಹೇಗೆ? ವರ್ಷಕ್ಕೆ ಪ್ರಕಟವಾಗುವ ಒಟ್ಟೂ ಪುಸ್ತಕಗಳು ಎಷ್ಟು? ಮಾರಾಟ ಎಷ್ಟಾಗುತ್ತದೆ?

ಮೊದಲಿಗೆ ನಾನೇ ಪುಸ್ತಕ ಪ್ರದರ್ಶನ, ಮಾರಾಟಕ್ಕೆ ಹೋಗುತ್ತಿದ್ದೆ. ಈಗ ಎಂಟು ತಂಡಗಳು ಪ್ರದರ್ಶನದ ಕೆಲಸ ಮಾಡುತ್ತವೆ. 365 ದಿನವೂ ಪ್ರದರ್ಶನ, ಮಾರಾಟ ತಾಲೂಕು ಮಟ್ಟದಲ್ಲೂ ಇರುತ್ತದೆ. ಮೈಸೂರು, ಗುಲ್ಬರ್ಗಾ, ಮಂಗಳೂರುಗಳಲ್ಲಿ ನಮ್ಮ ಮಳಿಗೆಗಳಿವೆ. ಕನ್ನಡದಲ್ಲಿ ಸ್ವಂತ ಮುದ್ರಣ, ಮಾರಾಟಜಾಲ ಇರುವ ಪ್ರಕಾಶನ ಸಂಸ್ಥೆಯೆಂದರೆ ನಮ್ಮದೊಂದೇ. ನಮ್ಮಲ್ಲಿನ ಸಮಾಲೋಚಕ ಮಂಡಳಿ ಹಸ್ತಪ್ರತಿಯನ್ನು ಪರಿಶೀಲಿಸಿ ಆಯ್ಕೆ ಮಾಡುತ್ತದೆ. ಕಳೆದ ಒಂದು ವರ್ಷದಲ್ಲಿ 150 ಹೊಸ ಶೀರ್ಷಿಕೆಗಳ, 250 ಮರುಮುದ್ರಣಗಳ 400 ಪುಸ್ತಕಗಳು ಪ್ರಕಟವಾಗಿವೆ. ಸುಮಾರು ನಾಲ್ಕೂವರೆ ಲಕ್ಷದಷ್ಟು ಪ್ರತಿಗಳನ್ನು ಮುದ್ರಿಸಿದ್ದೇವೆ. ಮೂರು ಕೋಟಿ ರೂಪಾಯಿಗಳ ನಾಲ್ಕು ಲಕ್ಷ ಪ್ರತಿಗಳನ್ನು ಮಾರಿದ್ದೇವೆ. ಪುಸ್ತಕಗಳಿಂದ ಬಂದ ಹಣವನ್ನು ‘ಕೆರೆಯ ನೀರನ್ನು ಕೆರೆಗೆ ಚೆಲ್ಲಿ’ ಎಂಬಂತೆ ಪುಸ್ತಕ ಪ್ರಕಟಣೆಗೇ ಹಾಕುತ್ತೇವೆ. ನಮ್ಮಲ್ಲಿ ಅತಿಹೆಚ್ಚು ಮಾರಾಟವಾಗುವ ಲೇಖಕರೆಂದರೆ ಡಾ. ಸಿ.ಆರ್. ಚಂದ್ರಶೇಖರ್. ಅವರ ನೂರು ಶೀರ್ಷಿಕೆಗಳ ಸುಮಾರು ಐದು ಲಕ್ಷದಷ್ಟು ಪ್ರತಿಗಳು ಮಾರಾಟವಾಗಿವೆ. ನಾವು ಸರ್ಕಾರದ ಸಗಟು ಖರೀದಿಯ ಮೇಲೆ ಹೆಚ್ಚು ಅವಲಂಬಿತರಾಗಿಲ್ಲ. ಇದಕ್ಕಾಗಿ ವಿಧಾನಸೌಧದ ಕಂಬಗಳನ್ನು ಸುತ್ತಿಲ್ಲ. ಒಂದು ಉದಾಹರಣೆ ಕೊಡುವುದಾದರೆ ನಾವು ‘ಜ್ಞಾನ ವಿಜ್ಞಾನ ಕೋಶ’ವನ್ನು ಮಾಡುತ್ತೇವೆ ಎಂದು ಪ್ರಕಟಿಸಿದಾಗ ಕೆಲವರು ಇವರಿಗೆ ಹುಚ್ಚು ಹಿಡಿದಿದೆ ಎಂದರು. ಆದರೆ, 3300 ಜನರು ಪ್ರಕಟಣಾಪೂರ್ವ ಪ್ರತಿಗಳಿಗೆ ನೋಂದಾಯಿಸಿದರು. ನಾವು 11 ತಿಂಗಳಿನಲ್ಲಿ ಐದು ಸಾವಿರ ಪ್ರತಿಗಳನ್ನು ಮಾರಿದೆವು.

* ನವಕರ್ನಾಟಕ ಅನೇಕ ಪ್ರಥಮಗಳನ್ನು ಪ್ರಕಾಶನ ರಂಗದಲ್ಲಿ ಮಾಡಿದೆ…

ಜ್ಞಾನ ವಿಜ್ಞಾನ ಕೋಶ ಇಂಥದ್ದೊಂದು ಪ್ರಯತ್ನ. ವಿಶ್ವಕಥಾಕೋಶವನ್ನು ನಿರಂಜನರ ಸಂಪಾದಕತ್ವದಲ್ಲಿ 85 ದೇಶ, ಪ್ರದೇಶಗಳ 340 ಕಥೆಗಳನ್ನು 25 ಸಂಪುಟಗಳಲ್ಲಿ ಪ್ರಕಟಿಸಿದೆವು. ಆಗ ಐದು ಸಾವಿರ ಪುಟಗಳನ್ನು 200 ರೂಪಾಯಿಗಳಿಗೆ ಕೊಟ್ಟೆವು. ಇದು ಬೇರೆ ಭಾಷೆಯಲ್ಲಿ ನಡೆದಿಲ್ಲ. ಕೇಂದ್ರಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ಕನ್ನಡ ಲೇಖಕರ ಮಾಲೆಯನ್ನು ನಾವು ಪ್ರಕಟಿಸುತ್ತಿದ್ದೇವೆ. ಪ್ರಧಾನ ಗುರುದತ್, ಹಾ.ಮಾ.ನಾಯಕ ಇದರ ಸಂಪಾದಕರಾಗಿದ್ದರು. ಈಗ  ಪ್ರಧಾನ ಗುರುದತ್ ಸಂಪಾದಕರಾಗಿದ್ದಾರೆ. ಈವರೆಗೆ 44 ಲೇಖಕರ ಪುಸ್ತಕಗಳನ್ನು ತಂದಿದ್ದೇವೆ. ಇದು ಭಾರತದಲ್ಲೇ ಪ್ರಥಮ. ಇದೇ ಸಾಲಿನಲ್ಲಿ ವಿಜ್ಞಾನ ಪದ ವಿವರಣಾ ಕೋಶವೂ ಉಲ್ಲೇಖಾರ್ಹ.

* ನಿಮ್ಮಲ್ಲಿ ಕಥಾ ಸಾಹಿತ್ಯ ಕಡಿಮೆ. ಈಚೆಗೆ ಎಡಪಂಥೀಯ ಸಾಹಿತ್ಯವೂ ಕಡಿಮೆ ಅನಿಸುತ್ತಿಲ್ಲವೆ?

ಕಥಾ ಸಾಹಿತ್ಯದಲ್ಲಿ ನಮ್ಮದೇ ಆಯ್ಕೆಗಳಿವೆ. ಜನರೂ ಕೂಡ ವಿಜ್ಞಾನ, ವಿಚಾರ ಸಾಹಿತ್ಯ ಎಂದು ನಮ್ಮನ್ನು ಗುರುತಿಸುತ್ತ, ಓದುತ್ತ ಬಂದಿದ್ದಾರೆ. ಕಥಾಸಾಹಿತ್ಯವನ್ನು ಪ್ರಕಟಿಸುವವರು ಬೇರೆ ಇದ್ದಾರೆ, ವಿಚಾರ ಸಾಹಿತ್ಯವನ್ನು ಪ್ರಕಟಿಸುವ ನೀವು ಇದನ್ನೇ ಪ್ರಕಟಿಸಿ ಎನ್ನುತ್ತಾರೆ. ನಾವು ಮೊಟ್ಟಮೊದಲಿಗೆ ಮರಾಠಿ ದಲಿತ ಆತ್ಮಕಥೆಗಳನ್ನು ಕನ್ನಡಕ್ಕೆ ತಂದಿದ್ದೇವೆ. ಮಲೆಯಾಳಂನ ಹತ್ತು ಲೇಖಕಿಯರ ಕಥೆಗಳನ್ನು ಕನ್ನಡಕ್ಕೆ ತಂದೆವು. ಅದು ನಮ್ಮ ಲೇಖಕಿಯರನ್ನು ಪ್ರಭಾವಿಸಲಿಲ್ಲ. ಇನ್ನು, ಎಡಪಂಥೀಯ ಸಾಹಿತ್ಯವಷ್ಟೇ ಈ ಮೊದಲು ಬರುತ್ತಿದ್ದರಿಂದ ಅದನ್ನೇ ಹೆಚ್ಚಾಗಿ ಪ್ರಕಟಿಸಿದ್ದು ಎದ್ದು ಕಾಣುತ್ತಿತ್ತು. ಸೋವಿಯತ್ ಯೂನಿಯನ್‌ನ ರಾದುಗ, ಪ್ರಗತಿ, ಮೀರ ಪ್ರಕಾಶನದ ಸಹಯೋಗದಿಂದ ಅವನ್ನು ತರುತ್ತಿದ್ದೆವು. ಈಗಲೂ ಅದು ಬರುತ್ತಿದೆ.

* ಪ್ರಕಟಣೆಗಳ ಸಂದರ್ಭದಲ್ಲಿ ಬೇಸರ ಉಂಟುಮಾಡುವ ಘಟನೆ?

ನಾವು ಕರ್ನಾಟಕ ಏಕೀಕರಣದ 40ನೇ ವಾರ್ಷಿಕೋತ್ಸವ (1996)ದ ಸಂದರ್ಭದಲ್ಲಿ `ಕರ್ನಾಟಕ ಏಕೀಕರಣ ಇತಿಹಾಸ’ ಪುಸ್ತಕವನ್ನು ಪ್ರಕಟಿಸಿದೆವು. ಆಗ ಜೀವಂತರಾಗಿದ್ದ 33 ಹೋರಾಟಗಾರರ ಸಂದರ್ಶನ ಮಾಡಿದ್ದೆವು. 100 ವರ್ಷಗಳ ಹಿಂದಿನ ಪತ್ರಿಕೆಗಳನ್ನು ಸಂಪಾದನೆ ಮಾಡಿದ್ದೆವು. ಅದರಲ್ಲಿ 139 ಜನರ ಚಿತ್ರಗಳು, ರೇಖಾಚಿತ್ರಗಳು ಇದ್ದವು. ಇದೇ ಪುಸ್ತಕವನ್ನು ಆಧರಿಸಿ ಕರ್ನಾಟಕ ಸುವರ್ಣಮಹೋತ್ಸವದ ಸಂದರ್ಭದಲ್ಲಿ 26 ಜನರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಯಿತು. ಇದರ ಮಹತ್ವವನ್ನು ಮನಗಂಡ ಸರ್ಕಾರ ಪುಸ್ತಕದ ಎರಡು ಸಾವಿರ ಪ್ರತಿಗಳನ್ನು ಕೊಂಡುಕೊಳ್ಳಿ ಎಂದರೂ ಗ್ರಂಥಾಲಯ ಇಲಾಖೆ ತಾಂತ್ರಿಕ ಕಾರಣ ನೀಡಿ ಆ ಪುಸ್ತಕವನ್ನು ಕೊಂಡುಕೊಳ್ಳಲಿಲ್ಲ. ಗ್ರಂಥಾಲಯ ಇಲಾಖೆಯ ಅಧಿಕಾರಿಗಳು ಪುಸ್ತಕದ ಅವಧಿ ಮೀರಿದ್ದನ್ನು ನೋಡಿದರೇ ಹೊರತು ಒಂದು ಪುಸ್ತಕದ ಜೀವಂತಿಕೆಯನ್ನಲ್ಲ. ಪುಸ್ತಕಗಳು ಎಂದಿಗೂ ಸಾಯುವುದಿಲ್ಲ, ಕೈಯಿಂದ ಕೈಗೆ ದಾಟುತ್ತ ಉಸಿರಾಡುತ್ತಲೇ ಇರುತ್ತವೆ.

ಕೃಪೆ : ಪ್ರಜಾವಾಣಿ

ಬೋಳುವಾರು ಮಹಮದ್ ಕುಞ್ಞಿ ಅವರಿಗೆ ಅಭಿನಂದನೆಗಳು

ಬೆಂಗಳೂರು : ಆಗಸ್ಟ ೨೨ : ಹೆಸರಾಂತ ಕನ್ನಡ ಲೇಖಕರಾದ ಬೋಳುವಾರು ಮಹಮದ್ ಕುಞ್ಞಿ ಅವರನ್ನು ೨೦೧೦ ನೇ ವರ್ಷದ ಪ್ರತಿಷ್ಟಿತ `ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ’ ಗಾಗಿ ಅವರ ಪುಸ್ತಕ “ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ” ಆಯ್ಕೆ ಮಾಡಲಾಗಿದೆ.ಪ್ರಶಸ್ತಿ ಪ್ರಧಾನ ಸಮಾರಂಭ ದೆಹಲಿಯಲ್ಲಿ ನವೆಂಬರ್ ತಿಂಗಳಲ್ಲಿ ನಡೆಯುತ್ತದೆ.

ಪ್ರತಿಕ್ರಿಯೆ “ಭಾರತ ಉನ್ನತ ಪ್ರಶಸ್ತಿಯಾದ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಗಾಗಿ ನನ್ನನ್ನು ಆಯ್ಕೆ ಮಾಡಿರುವುದು ನನಗೆ ತುಂಬಾ ಸಂತೋಷವನ್ನುಂಟು ಮಾಡಿದೆ. ಈ ಪ್ರಶಸ್ತಿ ಹಲವು ಮಕ್ಕಳನ್ನು ಈ ಪುಸ್ತಕ ಓದುವಂತೆ ಆ ಮೂಲಕ ರಾಷ್ಟಪಿತ ನ ಬಗ್ಗೆ ಎಳೆಯ ಹೃದಯಗಳಲ್ಲಿ ಗೌರವ ಮೂಡುವಂತೆ ಮಾಡಲು ಪ್ರೇರೇಪಿಸಬಹುದು.

ಕನ್ನಡ ಪುಸ್ತಕ ಪ್ರಾಧಿಕಾರ ಈ ಪುಸ್ತಕದ ಪ್ರಕಾಶಕರು. ಈ ಪುಸ್ತಕಕ್ಕೆ `ಮಕ್ಕಳ ಸಾಹಿತ್ಯ’ ವಿಭಾಗದಿಂದ ಈ ಪ್ರಶಸ್ತಿ ಬಂದಿದೆ.

ಅವರ ಇತರ ಕೃತಿಗಳು : ಕಥಾಸಂಗ್ರಹಗಳಾದ `ಅತ್ತ ಇತ್ತಗಳ ಸುತ್ತ ಮುತ್ತ’, `ಅಂಕ’, `ದೇವರುಗಳ ರಾಜ್ಯದಲ್ಲಿ’, `ಆಕಾಶಕ್ಕೆ ನೀಲಿ ಪರದೆ’, `ಒಂದು ತುಂಡು ಗೋಡೆ’ , ಕಾದಂಬರಿ `ಜಿಹಾದ್’, ಮಕ್ಕಳ ಹಾಡುಗಳ ಸಂಗ್ರಹ `ತಟ್ಟು ಚಪ್ಪಾಳೆ ಪುಟ್ಟ ಮಗು’ ಇವುಗಳಲ್ಲದೆ ಅವರು ೧೨ ಮಕ್ಕಳ ನಾಟಕಗಳನ್ನು ರಚಿಸಿದ್ದಾರೆ.

ಅವರಿಗೆ ಕರ್ನಾಟಕ ಸಾಹಿತ್ಯ ಪ್ರಶಸ್ತಿ ಯನ್ನೊಳಗೊಂಡು ಹಲವು ಪ್ರಶಸ್ತಿಗಳು ದೊರೆತಿವೆ.

ಕೃಪೆ:

Bolavaru Muhammad Kunhi to receive Kendra Sahitya Academy Awardಶೀರ್ಷಿಕೆ: ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ ಲೇಖಕರು:ಬೋಳುವಾರು ಮಹಮದ್ ಕುಂಞ್ಞಿ ಪ್ರಕಾಶಕರು:ಕನ್ನಡ ಪುಸ್ತಕ ಪ್ರಾಧಿಕಾರ ಪುಟ:184 ಬೆಲೆ:ರೂ.90/-

ಪಠ್ಯಪುಸ್ತಕಗಳು ಮತ್ತು ಸಾಂಸ್ಕೃತಿಕ ರಾಜಕಾರಣ

ಏನನ್ನು ಓದಬೇಕು ಎಂದು ನಿಗದಿ ಮಾಡುವಾಗ ಕೆಲಮೊಮ್ಮೆ ಗೊತ್ತಿದ್ದೂ ಮತ್ತೆ ಕೆಲವೊಮ್ಮೆ ಗೊತ್ತಿಲ್ಲದೆಯೂ ಯಜಮಾನಿಕೆಯ ನೆಲೆಗಳು ತಮ್ಮ ಬೇರುಗಳನ್ನು ಗಟ್ಟಿಮಾಡಿಕೊಳ್ಳುತ್ತಿರುತ್ತವೆ. ಕಲಿಯುವವರು, ಮೊದಲಿನಂತೆ ತಲೆಮಾರುಗಳಿಂದ ಕಲಿಕೆ ಮತ್ತು ತಿಳಿವಿನ ಹಕ್ಕುಗಳನ್ನು ಪಡೆದುಕೊಂಡವರಷ್ಟೇ ಆಗಿಲ್ಲ. ಈಗ ಹಲವು ಮೂಲೆ ಮುಡುಕುಗಳಿಂದ ಮಕ್ಕಳು ಕಲಿಯುವ ವಲಯಕ್ಕೆ ಬರುತ್ತಿದ್ದಾರೆ. ಆದರೆ ಅವರು ಏನನ್ನು ಕಲಿಯಬೇಕೆಂದು ಹೇಳುವವರು ಮಾತ್ರ ಈ ಬದಲಾವಣೆಗೆ ತಾವು ಸಜ್ಜುಗೊಳ್ಳಬೇಕೆಂದು ತಿಳಿದಿಲ್ಲ. ಇದು ತಿಳಿವಿನ ಕೊರತೆಯೆಂದು ಹೇಳಲಾಗದು. ಬೇಕೆಂತಲೇ ಕಲಿಕೆಯಲ್ಲಿ ನಡೆಯಬೇಕಿದ್ದ ಬದಲಾವಣೆಗಳನ್ನು ಹತ್ತಿಕ್ಕುವುದು ಮತ್ತು ತಾರತಮ್ಯಗಳನ್ನು ಮುಂದುವರೆಸುವುದು ಗುರಿಗಳಾಗಿವೆ. ಇವು ಕೇವಲ ಹೇಳಿಕೆಗಳಲ್ಲ. ಈ ನಿಬಂಧ ಅದಕ್ಕೆ ತಕ್ಕ ಪುರಾವೆಗಳನ್ನು ನಮ್ಮೆದುರು ತೆರೆದಿಡುತ್ತದೆ.

– ಕೆ.ವಿ.ನಾರಾಯಣ (ಪುಸ್ತಕದ ಬೆನ್ನುಡಿಯಿಂದ)

ಶೀರ್ಷಿಕೆ: ಪಠ್ಯಪುಸ್ತಕಗಳು ಮತ್ತು ಸಾಂಸ್ಕೃತಿಕ ರಾಜಕಾರಣ ಲೇಖಕರು: ಡಾ. ಆರ‍್. ಚಲಪತಿ ಪ್ರಕಾಶಕರು : ಪ್ರಗತಿ ಗ್ರಾಫಿಕ್ಸ್ ಬೆಂಗಳೂರು ಪುಟ:232 ಬೆಲೆ:150/-

ಅವಳಿಗೆ ಸಿಕ್ಕಂಥ ಶಾಲೆ ನಮಗೇಕೆ ಸಿಗಲಿಲ್ಲ?!

ಇವಳು `ತುಂಗಾ’ ಅಲ್ಲ ಗಾಯತ್ರಿ. . .
ಜಪಾನಿನ ಟೆಲಿವಿಷನ್ ಕ್ಷೇತ್ರದ ದೊಡ್ಡ ಹೆಸರು ತೆತ್ಸುಕೋ ಕುರೋಯಾನಾಗಿ. `ಸರಿಯಾದ’ ಶಾಲೆ ಪಡೆಯಲು ಆಕೆ (ಆಕೆಯ ತಾಯಿ) ಪಟ್ಟ ಬವಣೆಯೇ `ತೊತ್ತೋಚಾನ್’ ಕಾದಂಬರಿಯಾಗಿ ಮೂಡಿ ಬಂದಿದೆ. ಇಡೀ ಜಗತ್ತನ್ನು ಇನ್ನಿಲ್ಲದಂತೆ ಕಾಡಿದ ಕೃತಿ ಇದು. ಈ ಕೃತಿಯನ್ನು ಕನ್ನಡಕ್ಕೆ ತಂದದ್ದು ವಿ. ಗಾಯತ್ರಿ. ಈಗ ಅದೇ `ತೊತ್ತೋಚಾನ್’ ನಿಂದ ಪ್ರೇರಣೆ ಪಡೆದ, ಅದೇ ಎಳೆ ಹೊಂದಿರುವ

`ತುಂಗಾ’ವನ್ನು ನಮ್ಮೆದುರು ಇಡುತ್ತಿದ್ದಾರೆ. ಒಂದು ಘಟ್ಟದವರೆಗೆ ಆತ್ಮ ಕಥಾನಕ ಎನಿಸುವ ಈ ಕೃತಿ ಈ ನೆಲದ ಗುಣವನ್ನು ತುಂಬಿಕೊಂಡಿದೆ. ಕೃತಿ ರೂಪಿತವಾದ ಪ್ರತಿ ಹಂತದಲ್ಲೂ ಹತ್ತಿರವಿದ್ದ ನನಗೆ ಇದರ ಪ್ರಕಟಣೆಯ ಕ್ಷಣ ಅಮೃತಘಳಿಗೆ.
ಗಾಯತ್ರಿ ನಾನು ತುಂಬಾ ಪ್ರೀತಿಸುವ ಗೆಳತಿ. ಆಕೆಯ ಮುನ್ನೋಟವೇ ಅಚ್ಚರಿ ತರುವಂತಹದ್ದು. ಅತ್ಯಂತ ನಿಷ್ಟುರ, ದಿಟ್ಟ ನುಡಿಗಳ ಗಾಯತ್ರಿ ಎಂದೂ ಉಡಾಫೆ ಮಾಡಿದವರಲ್ಲ. ಎಲ್ಲಾ ಮಾತಿನ ಹಿಂದೆಯೂ ಆಳವಾದ ಚಿಂತನೆ, ವಿವೇಚನೆ ಇರುತ್ತದೆ. ತಣ್ಣಗಿದ್ದು, ದೊಡ್ಡ ಕೆಲಸ ಮಾಡುವ ಗಾಯತ್ರಿ ನನಗೆ ಮೆಚ್ಚು.
ಡಾ. ವಿಜಯಾ
– ಬೆನ್ನುಡಿಯಿಂದ
ಶೀರ್ಷಿಕೆ:     ತುಂಗಾ : ಅವಳಿಗೆ ಸಿಕ್ಕಂಥ ಶಾಲೆ ನಮಗೇಕೆ ಸಿಗಲಿಲ್ಲ?!         ಲೇಖಕರು:ವಿ. ಗಾಯತ್ರಿ         ಪ್ರಕಾಶನ: ಮೇಫ್ಲವರ‍್        ಪುಟಗಳು:176       ಬೆಲೆ:ರೂ.120/-

ಆರ್.ಐ.ಎನ್. ಹೋರಾಟದ ಧೀರ ಯೋಧರಿಗೆ ನಮ್ಮ ಕೃತಜ್ಞತಾಪೂರ್ವಕ ಶ್ರದ್ಧಾಂಜಲಿಗಳು.

ಸರ್ವ ಸಾಧಾರಣವಾಗಿ 1757 ರ ಪ್ಲಾಸಿ ಕದನದೊಂದಿಗೆ ಭಾರತದಲ್ಲಿ ಬ್ರಿಟಿಷ್ ಆಧಿಪತ್ಯವು ಭದ್ರವಾಗಿ ನೆಲೆ ಊರಿತೆನ್ನಲಾಗುತ್ತದೆ. ನೂರು ವರ್ಷಗಳಲ್ಲಿ ಎಲ್ಲ ಪ್ರತಿರೋಧಗಳನ್ನು ಧಮನಿಸಿ ಬ್ರಿಟಿಷ್ ಆಧಿಪತ್ಯ ಭದ್ರವಾಗಿ ತಳವೂರಿತು.
ಆದರೆ ನಮ್ಮ ಸ್ವಾತಂತ್ರ್ಯಾಭಿಮಾನಿ ಜನರು ಬ್ರಿಟಿಷರ ವಿರುದ್ಧ ಹೊರಾಟವನ್ನು ಬೇರೆ ಬೇರೆ ಕಡೆ, ಬೇರೆ ಬೇರೆ ರೂಪಗಳಲ್ಲಿ ನಿರಂತರವಾಗಿ ನಡೆಸುತ್ತಲೇ ಬಂದರು. ಅಹಿಂಸಾ ಹೋರಾಟದಿಂದ ನಾವು ಸ್ವಾತಂತ್ರ್ಯ ಗಳಿಸಿದ್ದೇವೆ ಎನ್ನುವುದು ಪೂರ್ಣ ಸತ್ಯವಲ್ಲ. ನಾಯಕತ್ವದ ಅಹಿಂಸೆಗೆ ಮಣಿಯುವಂತೆ ತೋರಿಸುತ್ತಲಿದ್ದರೂ ಎಂದೂ ಬ್ರಿಟಿಷ್ ಆಡಳಿತ ಜನಸಾಮಾನ್ಯರ ರಕ್ತ ಹರಿಸುವುದನ್ನು ಬಿಟ್ಟಿರಲಿಲ್ಲ. ಸ್ವಾತಂತ್ರ್ಯ ಗಂಗೆಯ ಸಾವಿರಾರು ತೊರೆಗಳ ಪರಿಣಾಮವೇ ನಮ್ಮ ಸ್ವಾತಂತ್ರ್ಯ.

100 ವರ್ಷಗಳ ಕಾಲ ಒಳಗೊಳಗೇ ಹೊಗೆಯಾಡುತ್ತಿದ್ದ ಸ್ವಾತಂತ್ರ್ಯದ ಅಭಿಲಾಷೆ 1857ರಲ್ಲಿ ಬ್ರಿಟಿಷ್ ಅಧಿಕಾರಿಗಳ ಅಧೀನದಲ್ಲಿದ್ದ ಭಾರತೀಯ ಸೈನ್ಯಗಳೊಳಗೆ ಸ್ಫೋಟಗೊಂಡಿತು. ಬ್ರಿಟಿಷ್ ಚರಿತ್ರಕಾರರು ಅದನ್ನು ಬಂಡಾಯ ಎಂದು ಕರೆದರೆ ಭಾರತೀಯರಾದ ನಮ್ಮ ಪಾಲಿಗೆ ಅದು “ಪ್ರಥಮ ಸ್ವಾತಂತ್ರ್ಯ ಸಂಗ್ರಾಮ”.
1857ರಲ್ಲಿ ನಡೆದ `ಸಿಪಾಹಿ ದಂಗೆ’ಯೆಂದೇ ಕರೆಯಲ್ಪಟ್ಟ ಸ್ವಾತಂತ್ರ್ಯದ ಈ ಹಂಬಲ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಹೆಜ್ಜೆಯಾದರೆ 1946ರಲ್ಲಿ ಮುಂಬಯಿ ನೌಕಾದಳದ ಸ್ವಾತಂತ್ರ್ಯಾಪೇಕ್ಷೆಯ ಫಲರೂಪವಾದ `ರಿನ್ ಬಂಡಾಯ’ ಅಂತಿಮ ಹೆಜ್ಜೆ ಎನ್ನಬಹುದು.
ದೇಶಾದ್ಯಂತ ಕಾಮರ್ಿಕ ಹಾಗೂ ಜನಸಾಮಾನ್ಯರ ಬೆಂಬಲ ಪಡೆದ `ರಿನ್ ಬಂಡಾಯ’ ಜವಾಹರಲಾಲ ನೆಹರೂ ಉದ್ಘರಿಸಿದಂತೆ `ಭಾರತೀಯ ಸ್ವಾತಂತ್ರ್ಯ ಸಂಗ್ರಾಮ’ದ ಉಜ್ವಲ ಹೊಸ ಅಧ್ಯಾಯ.
ರಿನ್ ಅಂದರೆ ಆರ್. ಐ. ಎನ್. ರಾಯಲ್ ಇಂಡಿಯನ್ನ ನೇವಿ ಅಥವಾ ನೌಕಾದಳ. ಇದು ಜನತೆಯಿಂದಲೂ, ರಾಷ್ಟ್ರೀಯ ಸ್ವಾತಂತ್ರ್ಯ ಸಂಗ್ರಾಮದಿಂದಲೂ ಪ್ರತ್ಯೇಕವಾಗಿ ನಡೆದಿದ್ದ ಗಲಭೆಯಾಗಿರಲಿಲ್ಲ.
`ಒಳಗಿರುವ ನಮ್ಮ ಜೀವನದ ಬಗ್ಗೆ ನಿಮಗೆ ಹೆಚ್ಚು ವಿವರಗಳು ಗೊತ್ತಿರದಿರಬಹುದು. ಆದರೆ ಹೊರಗಿರುವ ನೀವು ಎದುರಿಸುತ್ತಿರುವ ಕರಾಳತೆಯ ಬಗ್ಗೆ, ನಾವು ಸಾಕಷ್ಟು ತಿಳುವಳಿಕೆ ಹೊಂದಿದ್ದೇವೆ. ನಾವು ಎಲ್ಲಿಂದ ಬಂದಿರುವೆವೋ ಅಲ್ಲೆಲ್ಲಾ ತುಂಬಿ ತುಳುಕಾಡುತ್ತಿರುವ ಅಶಾಂತಿಯನ್ನು ನಾವು ಮನವರಿಕೆ ಮಾಡಿಕೊಂಡಿದ್ದೇವೆ.’
`ನಮ್ಮ ಹೋರಾಟ ಬಂಧವಿಮೋಚನೆಯ ಆಶೆ ಹೊತ್ತ ಜನಸಮುದಾಯದ ದೊಡ್ಡ ಹೋರಾಟದಲ್ಲಿ ಸೇರಿ ಹೋಗಿದೆ. ಈಗ ಶರಣಾಗುವುದೆಂದರೆ, ಆ ಸಮುದಾಯಕ್ಕೆ ದ್ರೋಹ ಬಗೆದಂತೆ”
ಇದು `ರಿನ್’ ಹೋರಾಟದ ಧ್ವನಿ.
ಆದರೆ ಇಂತಹ ಧೋರಣೆಯ `ರಿನ್’ ಹೋರಾಟವನ್ನು ಬ್ರಿಟಿಷ್ ಸಕರ್ಾರ `ಕೇವಲ, ಸಂಬಳ ಮುಂತಾದ ಆಥರ್ಿಕ ಸೌಲಭ್ಯಕ್ಕಾಗಿ ನಡೆಸಿದ ಮಿಲಿಟರಿ ಅಶಿಸ್ತಿನ ಒಂದು ಕೆಟ್ಟ ಉದಾಹರಣೆ’ ಎಂಬಂತೆ ನಾಡಿನ ಜನರಲ್ಲಿ ಜನನಾಯಕರಲ್ಲಿ ಬಿಂಬಿಸಲು ಯತ್ನಿಸಿ ಯಶಸ್ವಿಯಾಯಿತು. ಹೀಗೆ ಪ್ರಾರಂಭದಲ್ಲಿ ಜನ  ಬೆಂಬಲ ಪಡೆದ ಈ ಹೋರಾಟವನ್ನು ಜನರಿಂದ ಬೇರ್ಪಡಿಸುವ ಮೂಲಕ ಹೊತ್ತಿಕೊಂಡು ಉರಿಯುತ್ತಿದ್ದ ಈ ಕ್ರಾಂತಿ ಕಿಡಿಯನ್ನು ಆರಿಸಲಾಯಿತು.
ಆದರೇನಂತೆ ಆರ್.ಐ.ಎನ್. ಇಂದಿಗೂ ದೇಶಪ್ರೇಮೀ ಹೃದಯಗಳಲ್ಲಿ ಚಿರಸ್ಥಾಯಿಯಾಗಿದೆ.

ಶೀರ್ಷಿಕೆ: ಆರ‍್.ಐ.ಎನ್ ಬಂಡಾಯ ಲೇಖಕರು:ಜಿ.ಎಮ್.ಕೃಷ್ಣಮೂರ್ತಿ ಪ್ರಕಾಶನ: ನವಕರ್ನಾಟಕ ಪ್ರಕಾಶನ ಪುಟ:64

ಜ್ಯೋತಿಬಸು ಅಧಿಕೃತ ಜೀವನ ಚರಿತ್ರೆ

ಜ್ಯೋತಿಬಸು ಕೂಡಾ ರಾತ್ರೋರಾತ್ರಿ ರಾಜಕೀಯ ಶಿಖರಕ್ಕೇರಿಲ್ಲ. ಈ ಎತ್ತರದ ಸ್ಥಾನ ಅವರಿಗೆ ಲಭಿಸಿರುವುದರ ಹಿಂದೆ ಅತುಲ ತ್ಯಾಗವಿದೆ; ಸಹನೆ ಸಂಕಟಗಳ ಪರಂಪರೆಯಿದೆ; ರಾಜಕೀಯ ಚತುರತೆಯಿದೆ; ತಾತ್ವಿಕ ಬದ್ಧತೆಯಿದೆ; ಜನತೆಯ ಬಗ್ಗೆ ಅಪಾರ ಪ್ರೀತಿ, ವಿಶ್ವಾಸವಿದೆ. ಎಲ್ಲಕ್ಕೂ ಮಿಗಿಲಾಗಿ, ವಾಸ್ತವದ ಸಮಸ್ಯೆಗಳ ಸಂಕೀರ್ಣತೆಯನ್ನು ಅರಿತು ಅದಕ್ಕನುಗುಣವಾಗಿ ಸೈದ್ಧಾಂತಿಕ ನಿಲುವುಗಳನ್ನು ಅನ್ವಯಿಸಿ ಆಚರಿಸುವ ಔಚಿತ್ಯ ಪ್ರಜ್ಞೆಯಿದೆ; ಸಂಘಟನಾ ನಿಪುಣತೆಯಿದೆ. ಅವರೊಬ್ಬ ಅಚಲ ನಿರ್ಧಾರದ ಮನುಷ್ಯ. ಶ್ಲಾಘನೀಯ ನಮ್ರತೆ, ಜಿದ್ದಿನ ಜಿಗುಟುತನ ಅವರ ವ್ಯಕ್ತಿತ್ವದ ಅವಿಭಾಜ್ಯ ಅಂಗಗಳಾಗಿವೆ. ಯಾರ ಮೇಲೂ ದಬ್ಬಾಳಿಕೆ ನಡೆಸದ ಅಧಿಕಾರವಾಣಿ ಅವರಿಗೆ ಒಲಿದು ಬಂದಿದೆ. ಸೈದ್ಧಾಂತಿಕ ಬದ್ಧತೆ ಮತ್ತು ಜನಮಾನಸಕ್ಕೆ ಸ್ಪಂದಿಸಬಲ್ಲ ವಿನಮ್ರತೆ ಈ ಎರಡನ್ನೂ ಏಕೀರ್ಭವಿಸಿದ ವಿರಳ ವ್ಯಕ್ತಿತ್ವ ಅವರಿಗೆ ಸಿದ್ಧಿಸಿದೆ. ಅವರನ್ನು ಒಬ್ಬ ಮಹಾನ್ ವ್ಯಕ್ತಿಯೆಂದು ಕರೆಯಬಹುದೇ? ಬಸು ಅವರ ಮಹಾನತೆಯಿರುವುದು ಅವರ ಸಪ್ರಮಾಣ ಪ್ರಜ್ಞೆಯಲ್ಲಿ; ಯಾವುದನ್ನೂ ಅತಿಗೆ ಒಯ್ಯದ ಸಂಯಮದಲ್ಲಿ; ಹಿತಮಿತವಾದುದ್ದರ ಆಯ್ಕೆಯಲ್ಲಿ ತೋರುವ ವಿವೇಕ ಮತ್ತು ಸಂದರ್ಭಕ್ಕೆ ಸೂಕ್ತವಾಗಿ ಭ್ರಾಮಕ ಅಧಿಕಾರದ ನಡುವಿನ ಭಿನ್ನತೆಯನ್ನು ಗುರುತಿಸುವ ಪರಿಜ್ಞಾನ ಅವರಲ್ಲಿ ಮೂರ್ತಗೊಂಡಿದೆ. ಒಂದು ಕೆಲಸಕ್ಕೆ ಒಬ್ಬ ನಿರ್ದಿಷ್ಟ ವ್ಯಕ್ತಿ ಅನಿವಾರ್ಯವೆಂಬುವುದೇ ಚಾರಿತ್ರಿಕ ಮಹಾನತೆಯ ನಿರ್ಧಾರದ ಅಂಶ ಎಂದು ಒಪ್ಪುವುದಾದರೆ, ಬಸು ಅದರಿಂದ ಬಹು ದೂರ ಇಲ್ಲವೆಂಬುದನ್ನು ಅಲ್ಲಗಳೆಯಲಾಗದು. . . .

ಬಸು ಯಾರದೋ ತಾಳಕ್ಕೆ ತಕ್ಕಂತೆ ಕುಣಿಯುವ ಸೂತ್ರದ ಬೊಂಬೆಯಂಥ ಮುಖ್ಯಮಂತ್ರಿಯಾಗಲು ಬಯಸಲಿಲ್ಲ. ಹಾಗೆಂದೇ ಅಧಿಕಾರ ವಹಿಸಿಕೊಂಡ ಮೊಟ್ಟಮೊದಲ ದಿನವೇ ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಸ್ಪಷ್ಟವಾಗಿ ಹೇಳಿದರು: “ನಾವು ನಮ್ಮ ಕಾರ್ಯಕ್ರಮವನ್ನು ಜಾರಿಗೊಳಿಸುವುದು ರೈಟರ್ಸ್ ಬಿಲ್ಡಿಂಗ್ ನಿಂದಲ್ಲ. ಬದಲಾಗಿ, ಹೊಲ ನೆಲಗಳಿಂದ; ಫ್ಯಾಕ್ಟರಿ ಫಾರ್ಮುಗಳಿಂದ. ನಮ್ಮ ಶಕ್ತಿಯಿರುವುದೇ ಅಲ್ಲ. ಜನಸಾಮಾನ್ಯರ ಸಹಾಯದ ಮೂಲಕವೇ ನಾವು ನಮ್ಮ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕಾಗಿದೆ.”……

ಚುರುಕುತನವೇ ಮೈವೆತ್ತಂತಿದ್ದ ಬಸುಗೆ ಯಾವುದೇ ಕೆಲಸ ಮುಂದೂಡುವುದೆಂದರೆ ಎಳ್ಳಷ್ಟೂ ಆಗಿ ಬರುತ್ತಿರಲಿಲ್ಲ. ಮೈಗಳ್ಳತನದಿಂದ ಕೆಲಸವನ್ನು ಮುಂದೆ ತಳ್ಳುವುದೆಂದರೆ ಅವರಿಗೆ ಮೈಯೆಲ್ಲಾ ಸಿಟ್ಟು. ಇವತ್ತಿಗೂ ತ್ವರಿತ ನಿರ್ಧಾರಗಳಿಗೆ ಬಸು ಮತ್ತೊಂದು ಹೆಸರು. “ಯಾವುದೇ ಕೆಲಸ ಸಾಧ್ಯವೋ, ಇಲ್ಲವೋ ಎಂಬುವುದನ್ನು ಖಂಡತುಂಡವಾಗಿ ಹೇಳಿಬಿಡಬೇಕು. ಸುಮ್ಮನೆ ಡೆಸ್ಕಿನ ಮೇಳೆ ಫೈಲುಗಳ ರಾಶಿ ಒಟ್ಟಿಕೊಂಡಿರಬಾರದು. ಅದೊಂದು ಕಣ್ಣಿಗೆ ಹುಣ್ಣು ಇದ್ದಂತೆ ಎಂದು ನಾನು ಯಾವಾಗಲೂ ನನ್ನ ಸಹೋದ್ಯೋಗಿಗಳಿಗೆ ಹೇಳುತ್ತಿದ್ದೆ.” – ಎಂದು ಬಸು ತಮ್ಮ ಕಾರ್ಯವೈಖರಿಯ ಬಗ್ಗೆ ವಿವರಿಸುತ್ತಾರೆ. ತಮ್ಮ ಸಹೋದ್ಯೋಗಿಗಳಿಗೆ ಸದಾ ಸಲಹೆ ಸೂಚನೆಗಳನ್ನು ಕೊಡುತ್ತಲೇ ಇದ್ದ ಬಸು. ಸಮರ್ಥರ ಸಾಧನೆಗಳನ್ನು ಕಂಡು ಮೆಚ್ಚಿ ಕೊಂಡಾಡುತ್ತಿದ್ದದ್ದೂ ಇದೆ. ಇದಕ್ಕೆ ಸಂಬಂಧಿಸಿ ಯತೀನ್ ಚಕ್ರವರ್ತಿ ಒಂದು ನಿದರ್ಶನ ಕೊಡುತ್ತಾರೆ.
. . .
– ಪುಸ್ತಕದ ಪುಟಗಳಿಂದ

ಶೀರ್ಷಿಕೆ: ಜ್ಯೋತಿಬಸು ಅಧಿಕೃತ ಜೀವನ ಚರಿತ್ರೆ ಲೇಖಕರು:ಪ್ರೊ. ಸುರಭಿ ಬ್ಯಾನರ್ಜಿ ಅನುವಾದ:ರಾಹು ಪ್ರಕಾಶನ: ಚಿಂತನ ಪುಸ್ತಕ ಪುಟಗಳು:432 ಬೆಲೆ:ರೂ.250/-