ಹುತಾತ್ಮ ಭಗತ್ ಸಿಂಗರ ಅಲ್ಪಕಾಲದ ಬದುಕಿನ ಅಸಾಮಾನ್ಯ ಹರಹಿನ ಸಂಗ್ರಹರೂಪ


ಕೇವಲ 23 ವರ್ಷಗಳ ಬದುಕು. ಅಷ್ಟರಲ್ಲೇ ಇತಿಹಾಸದಲ್ಲಿ ಒಂದು ಶಾಶ್ವತ ಸ್ಥಾನ ಪಡೆದ ಭಗತ್ ಸಿಂಗ್ ಹುತಾತ್ಮನಾಗಿ ೮೦ ವರ್ಷಗಳಾಗುತ್ತಿದ್ದರೂ ಈಗಲೂ ಯುವಜನರ ಆರಾಧ್ಯ ಮೂರ್ತಿ, ಅದರಲ್ಲೂ ಒಂದು ಸಮಾನತೆಯ ಸಮಾಜದ ಕನಸನ್ನು ತುಂಬಿಕೊಂಡಿರುವವರಿಗೆ. ಧೈರ್ಯ, ಸಾಹಸ, ತ್ಯಾಗ, ಜತೆಗೆ ತಾತ್ವಿಕ ಸ್ಪಷ್ಟತೆ ಮತ್ತು ಜನಮಾನಸವನ್ನು ತಟ್ಟು ಸಾಮರ್ಥ್ಯ ಅವರ ಬದುಕನ್ನು ಅಮರಗಾಥೆಯನ್ನಾಗಿಸಿದೆ. ಸಹಜವಾಗಿಯೇ ಬಾಲಿವುಡ್ ಕೂಡಾ ಈ ಗಾಥೆಯ ಆಕರ್ಷಣೆಗೆ ಒಳಗಾಗದಿಲ್ಲ. ಅವರ ಮೇಲೆ ಕನಿಷ್ಟ ಐದು ಚಲನಚಿತ್ರಗಳು ತಯಾರಾಗಿವೆ. ಬರವಣಿಗೆಗಳಂತೂ ಲೆಕ್ಕವಿಲ್ಲದಷ್ಟು. ಭಗತ್ ಸಿಂಗ್ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಅವರ ಬಗ್ಗೆ ಪ್ರಕಟವಾಗಿರುವ ವಿಶ್ಲೇಷಣೆಗಳನ್ನು ಆಧರಿಸಿ, ಡಾ. ಅಶೋಕ್ ಧವಳೆಯವರು ಬರೆದಿರುವ Shaheed Bhagat Singh: An Immortal Revolutionary ಅವರ ಅಲ್ಪಕಾಲದ ಬದುಕಿನ ಅಸಾಮಾನ್ಯ ಹರಹನ್ನು ಸಂಗ್ರಹ ರೂಪದಲ್ಲಿ ಪ್ರಸ್ತುತಪಡಿಸುವ ಒಂದು ಧೀರ್ಘ ಲೇಖನ.

ಲೇಖಕರು ಹೇಳುವಂತೆ ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳ ಬದುಕು, ಕೃತಿ ಮತ್ತು ವಿಚಾರದ ನಾಲ್ಕು ಉತ್ಕೃಷ್ಟ ಎಳೆಗಳೆಂದರೆ: ಸಾಮ್ರಾಜ್ಯಶಾಹಿಯ ವಿರುದ್ಧ ರಾಜಿಯಿಲ್ಲದ ಹೋರಾಟ; ಕೋಮುವಾದ ಮತ್ತು ಜಾತಿ ದಮನದ ವಿರುದ್ಧ ಎಂದೂ ಕುಗ್ಗದ ಪ್ರತಿರೋಧ; ಭೂಮಾಲಿಕ-ಬಂಡವಾಳಶಾಹಿ ಆಳ್ವಿಕೆಯ ವಿರುದ್ಧ ಜಗ್ಗದ ಹೋರಾಟ; ಮತ್ತು ಸಮಾಜವಾದ ಮಾತ್ರವೇ ನಮ್ಮ ಸಮಾಜದ ಮುಂದಿರುವ ಏಕೈಕ ಪರ್ಯಾಯ ಎಂಬ ಬಗ್ಗೆ ಅಚಲವಾದ ವಿಶ್ವಾಸ.

ಶೀರ್ಷಿಕೆ:ಅಮರ ಕ್ರಾಂತಿಕಾರಿ ಭಗತ್ ಸಿಂಗ್ ಲೇಖಕರು:ಡಾ. ಅಶೋಕ್ ಧವಳೆ ಅನುವಾದ:ಕೃಷ್ಣಪ್ಪ ಕೊಂಚಾಡಿ ಪ್ರಕಾಶನ: ಕ್ರಿಯಾ ಪ್ರಕಾಶನ ಪುಟ:72 ಬೆಲೆ:ರೂ.25/-

ವರ್ಧಮಾನ ಪ್ರಶಸ್ತಿ ವಿಜೇತರಿಗೆ ಅಭಿನಂದನೆಗಳು


ಕನ್ನಡದ ಮುಖ್ಯ ವಿಮರ್ಶಕರಾದ ಡಾ.ಎಚ್.ಎಸ್.ರಾಘವೇಂದ್ರ ರಾವ್ ಅವರು ತಮ್ಮ `ತರು ತಳೆದ ಪುಷ್ಪ’ ವಿಮರ್ಶಾ ಕೃತಿಗೆ ವರ್ಧಮಾನ ಪ್ರಶಸ್ತಿ ಪಡೆದಿದ್ದಾರೆ. ಹಾಗೂ ಉದಯೋನ್ಮುಖ ಲೇಖಕ ವಸುದೇಂದ್ರ ತಮ್ಮ `ಯುಗಾದಿ’ ಕಥಾ ಸಂಕಲನಕ್ಕೆ ಉದಯೋನ್ಮುಖ ವರ್ಧಮಾನ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರಿಬ್ಬರಿಗೂ ನಮ್ಮ ಪ್ರೀತಿಪೂರ್ವಕ, ಗೌರವಪೂರ್ವಕ ಅಭಿನಂದನೆಗಳು.

`ನನಗೆ ಭಾವನೆಗಳಿಲ್ಲದ ಲೋಕದಲ್ಲಿ ನಂಬಿಗೆಯಿಲ್ಲ, ನಾವು ದ್ವೀಪಗಳಾಗುವುದು ಬೇಡ, ಗೋಡೆ ಕಟ್ಟುವುದು ಬೇಡ, ನಾವು ಸೇತುವೆ ಕಟ್ಠೋಣ ದೀಪ ಹಚ್ಚೋಣ. ‘ ಇದು ಖ್ಯಾತ ವಿಮರ್ಶಕ ಡಾ.ಎಚ್.ಎಸ್.ರಾಘವೇಂದ್ರ ರಾವ್ ಅವರು ಮೂಡುಬಿದಿರೆಯ ರಮಾರಾಣಿ ಸಂಶೋಧನೆ ಕೇಂದ್ರದಲ್ಲಿ ಭಾನುವಾರ ನಡೆದ ವರ್ಧಮಾನ ಪ್ರಶಸ್ತಿ ಪೀಠದ ವರ್ಧಮಾನ ಪ್ರಶಸ್ತಿ ಸ್ವೀಕರಿಸಿ ಹೇಳಿದ ಮಾತು.

`ಕತೆಗಾರರು ಕಡಿಮೆ ಮಾ ತಾಡಿದ್ರೆ ಒಳ್ಳೆಯದು. ಅವರು ಹೇಳುವುದನ್ನು ಕತೆಯಲ್ಲಿ ಹೇಳುತ್ತಾನೆ. ನನಗೆ ಮನುಷ್ಯನೇ ನನಗೇ ಶ್ರೇಷ್ಠ ಧರ್ಮ.’ ಇದು ವರ್ಧಮಾನ ಉದಯೋನ್ಮುಖ ಪ್ರಶಸ್ತಿ ಸ್ವೀಕರಿಸಿದ ವಸುದೇಂದ್ರ ಅವರ ಅಭಿಪ್ರಾಯ.

ಕೃಪೆ: http://www.gulfkannadiga.com/news-30693.html

http://www.daijiworld.com/news/news_disp.asp?n_id=84900&n_tit=Moodbidri%3A+Let%92s+Not+Turn+Into+Islands%2C+but+Build+Bridges+%96+Dr+HSR+

ವರ್ಧಮಾನ ಪ್ರಶಸ್ತಿ ಪಡೆದ ಕೃತಿ

ಈ ಪುಸ್ತಕವು ನಾನು ಪತ್ರಿಕೆಗಳಿಗೆಂದು ಬರೆದ ಹಲವು ಅಂಕಣಗಳು ಮತ್ತು ಕೆಲವು ಬಿಡಿ ಬರಹಗಳ ಸಂಕಲನ. ಮೊದಲ ಮೂವತ್ಮೂರು ಬರಹಗಳು `ಜನವಾಹಿನಿ’ ದಿನಪತ್ರಿಕೆಯ ಭಾನುವಾರದ ಪುರವಣಿಯಲ್ಲಿ 08-03-2001 ರಿಂದ 28-10-2001 ರ ಅವಧಿಯಲ್ಲಿ ನಿರಂತರವಾಗಿ ಪ್ರಕಟವಾದವು. ಆ ಅಂಕಣಕ್ಕೂ `ತರು ತಳೆದ ಪುಷ್ಪ’ ಎಂಬ ಶೀರ್ಷಿಕೆಯೇ ಇತ್ತು. ಉಳಿದವು ಬೇರೆ ಕಡೆ ಪ್ರಕಟವಾದರೂ ಆಶಯಗಳ ಸಾಮ್ಯದಿಂದ ಇಲ್ಲಿ ಜಾಗ ಪಡೆದಿವೆ.

ಹಲವು ವರ್ಷಗಳಿಂದ, ಪತ್ರಿಕೆಗಳಿಗೆ ಬರೆಯುವುದನ್ನು ತಪ್ಪಿಸಿಕೊಳ್ಳುತ್ತಾ ಬಂದ ನನಗೆ ಈ ಬಗೆಯ ಬರವಣಿಗೆ ಕೊಂಚ ಹೊಸದು. ಸಾಹಿತ್ಯಕ ಪತ್ರಿಕೆಗಳಲ್ಲಿ ಬರೆಯುವುದಕ್ಕೂ ಸಾಕಷ್ಟು ದೊಡ್ಡ ಓದುಗ ಸಮುದಾಯವನ್ನು ತಲುಪುವ ಪತ್ರಿಕೆಗಳಲ್ಲಿ ಬರೆಯುವುದಕ್ಕೂ ವ್ಯತ್ಯಾಸವಿದೆ. ಸಂವಹನಶೀಲತೆ ಮತ್ತು ಸಂಕೀರ್ಣತೆಗಳ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳುವುದು ಕಷ್ಟ. ಹಾಗೆಂದು ಸರಳವಾದ ವಿವರಣೆಗಳನ್ನು ನೀಡೋಣವೆಂದರೆ ಪುಟಮಿತಿ, ಪದಮಿತಿಗಳು ಅಡ್ಡಬರುತ್ತವೆ. ಇದು ಪತ್ರಿಕೆಗಳನ್ನು ಓದುವವರ ಬೌದ್ಧಿಕ ಸಾಮರ್ಥ್ಯವನ್ನು ಶಂಕಿಸುವ ಹುಂಬ ಕೆಲಸ ಅಲ್ಲ. ವಿಮರ್ಶೆಗೆ ಸಹಜವಾದ ಪರಿಭಾಷೆಯನ್ನು ಎಷ್ಟು ಹೇಗೆ ಬಳಸಬಹುದು ಎನ್ನುವುದು ಇಲ್ಲಿನ ಪ್ರಶ್ನೆ. ಹೆಚ್ಚು ರಾಜಿಗಳನ್ನು ಮಾಡಿಕೊಳ್ಳದೆ ಬರೆದರೆ, ಇಂಥ ಬರವಣಿಗೆಯು ಕಲಿಯುವ, ಕಲಿಸುವ ಕೆಲಸವೂ ಆಗಬಹುದು. ಪತ್ರಿಕೆಗಳನ್ನು ಓದುವವರೆಲ್ಲರೂ ಇಂಥ ಅಂಕಣಗಳನ್ನು ಓದುವುದಿಲ್ಲವೆಂಬ ವಾಸ್ತವಜ್ಞಾನವು ಇಲ್ಲಿನ ನನ್ನ ಧೋರಣೆಯನ್ನು ರೂಪಿಸಿದೆ.

ನನ್ನ ಆಯ್ಕೆಯ ಪುಸ್ತಕಗಳ ಬಗ್ಗೆ ಬರೆಯುವ ಸ್ವಾತಂತ್ರವು ನನಗೆ ಸಿಕ್ಕಿತ್ತು. ಸಂಪಾದಕರ ಸೆನ್ಸಾರ‍್ ಇರಲಿಲ್ಲ. ನಮ್ಮ ಸಂಸ್ಕೃತಿಗೆ ಮುಖ್ಯವೆಂದು ತೋರಿದ, ನನಗೆ ಸಂತೋಷಕೊಟ್ಟ ಕೃತಿಗಳನ್ನು ನಾನು ಆರಿಸಿಕೊಂಡಿದ್ದೇನೆ. ಸಾಂಸ್ಕೃತಿಕ ಹಾಗೂ ಸಾಮಾಜಿಕ ಸನ್ನಿವೇಶಗಳ ಬಗ್ಗೆ ಕಾಳಜಿಯಿಟ್ಟುಕೊಂಡೇ ಕೃತಿ ಕೇಂದ್ರಿತವಾದ ಸಾಹಿತ್ಯಕ ವಿಧಾನಗಳನ್ನು ಬಳಸುವುದು ಇಲ್ಲಿ ನನ್ನ ಆಯ್ಕೆಯಾಗಿದೆ. ಕಾಲಮಿತಿ ಹಾಗೂ ಪದಮಿತಿಗಳಲ್ಲಿ ಬರೆಯುವುದು ಅನಿವಾರ್ಯವಾದ ಈ ಕೆಲಸವು ನನಗೆ ಕೆಲವು ಪಾಠಗಳನ್ನು ಕಲಿಸಿದೆ. ಬರೆದುದನ್ನು ಮತ್ತೆ ಓದುವುದರಿಂದ ಹಿಡಿದು ಸೂಕ್ತ ಪದಗಳ ಆಯ್ಕೆ ಮತ್ತು ವಾಕ್ಯರಚನೆಗಳವರೆಗೆ ಈ ಕಲಿಕೆಯ ಹರಹಿದೆ.

-ಪುಸ್ತಕದ ಲೇಖಕರ ಮಾತಿನಿಂದ
ಶೀರ್ಷಿಕೆ: ತರು ತಳೆದ ಪುಷ್ಪ ಲೇಖಕರು:ಎಚ್ ಎಸ್ ರಾಘವೇಂದ್ರ ರಾವ್ ಪ್ರಕಾಶನ:ಕ್ರೈಸ್ಟ್ ಕಾಲೇಜು ಕನ್ನಡ ಸಂಘ ಪುಟ:200 ಬೆಲೆ:


ವರ್ಧಮಾನ ಉದಯೋನ್ಮುಖ ಪ್ರಶಸ್ತಿ ಪಡೆದ ಕೃತಿ

`ಯುಗಾದಿ’ ಕತೆಯಲ್ಲಿ ಹೊಸ ತಲೆಮಾರಿನ ಜೀವನ ಕ್ರಮವೊಂದನ್ನು ಹಳೆಯ ತಲೆಮಾರಿನ ಕಣ್ಣುಗಳಿಂದ ಕಾಣುವ ಪ್ರಯತ್ನವಿದೆ. ತಾವು ಬದುಕಿ ಬಂದ ರೀತಿಗೆ ತಮ್ಮ ಮಗ ಬದುಕುತ್ತಿರುವ ರೀತಿಯನ್ನು ಹೋಲಿಸುತ್ತಾ ಅದನ್ನು ತಮ್ಮ ಗ್ರಹಿಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವ ಗೋಪಣ್ಣ ಮಾಸ್ತರರಿಗೆ ಆಗುವ ಗಲಿಬಿಲಿಗಳು ಮನನೀಯವಾಗಿವೆ. ಮುಖ್ಯವಾದ ಸಂಗತಿ ಎಂದರೆ ತಮ್ಮ ಮಗನ ಜೀವನದ ಇತಿಮಿತಿಗಳು ಗೋಚರಿಸುವಂತೆ ಹೊಸ ತಲೆಮಾರಿನ ಪ್ರಚಂಡ ಶಕ್ತಿಯ ಅರಿವೂ ಅವರಿಗೆ ಆಗುವುದು; ತಮಗೆ ಅಸಾಧ್ಯವಾಗಿದ್ದು, ಕಷ್ಟಸಾಧ್ಯವಾಗಿದ್ದು ತನ್ನ ಮಗನಿಗೆ ಸುಲಭವಾಗಿ, ಸರಳವಾಗಿ ಸಾಧ್ಯವಾಗುತ್ತಿರುವುದು. ಈ ಕತೆ ಗುರುತಿಸುವ ಮತ್ತೊಂದು ಮಹತ್ವದ ಸಂಗತಿ ಎಂದರೆ ಗೋಪಣ್ಣ ಮಾಸ್ತರರಿಗೆ ತಮ್ಮ ಮಗನ ಜೀವನಕ್ರಮ, ಅವನ ಆದ್ಯತೆಗಳು, ಮೌಲ್ಯಗಳು ಇನ್ನೂ ಅರ್ಥವಾಗದ ನಿಗೂಢ, ಅರ್ಥೈಸಿಕೊಳ್ಳಲಾಗದ ಗೋಜಲು; ಆದರೆ ಪ್ರಹ್ಲಾದನಿಗೆ ತನ್ನ ಅಪ್ಪ ಹಾಗೆ ಒಂದು ಸಮಸ್ಯೆ ಏನಲ್ಲ. ಅಂದರೆ ಹೊಸ ತಲೆಮಾರನ್ನು ಹಳೆಯ ತಲೆಮಾರು ಅರ್ಥ ಮಾಡಿಕೊಳ್ಳುವ ಜಟಿಲ ಪ್ರಕ್ರಿಯೆಯೊಂದರ ಕಥನವಾಗಿ `ಯುಗಾದಿ’ ಯನ್ನು ಓದಬಹುದಾಗಿದೆ. `ಬೆಟ್ಟದ ಜೀವ’ದ ಗೋಪಾಲಯ್ಯನಿಗೆ ತನ್ನ ಮಗ ಶಂಭುವಿನ ಜೀವನಕ್ರಮದ ಭೌತಿಕ ಸ್ವರೂಪ ಅದರ ಅಧಿಕೃತ ವಿವರಗಳಲ್ಲಿ ಅರಿವಿಗೇ ಬರುವುದಿಲ್ಲ.ಅವರಿಬ್ಬರ ಜಗತ್ತುಗಳು ನಿಜವಾಗಿ ಸಂಧಿಸುವುದೇ ಇಲ್ಲ.

ಅಡಿಗರ `ವರ್ಧಮಾನ’, ಅನಂತಮೂರ್ತಿಯವರ `ಸೂರ್ಯನಕುದುರೆ’ ಮುಂತಾದ ಕೃತಿಗಳಲ್ಲಿ ಹೊಸ ತಲೆಮಾರಿನಲ್ಲಿ ಸುಪ್ತವಾಗಿರುವ ವಿಕಾಸದ ಸಾಧ್ಯತೆಗಳು ಅಸ್ಪಷ್ಟವಾಗಿಯಾದರೂ ಗೋಚರಿಸುತ್ತವೆ. ವಸುಧೇಂದ್ರರ , `ಯುಗಾದಿ’ಯಲ್ಲಿ ಎರಡೂ ಜಗತ್ತುಗಳು ಭೌತಿಕವಾಗಿ ಸಂಧಿಸುವುದಷ್ಟೇ ಅಲ್ಲ ಹೆಚ್ಚಿನ ಸಹಾನುಭೂತಿಯಲ್ಲಿ ಅರ್ಥಪೂರ್ಣವಾದ ಅನುಸಂಧಾನಕ್ಕಾಗಿ ಪ್ರಯತ್ನಿಸುವ ವಿನ್ಯಾಸವೊಂದು ಸೂಚಿತವಾಗುತ್ತದೆ.

– ಟಿ.ಪಿ. ಅಶೋಕ

ಶೀರ್ಷಿಕೆ:ಯುಗಾದಿ ಲೇಖಕರು:ವಸುದೇಂದ್ರ ಪ್ರಕಾಶನ:ಛಂದ ಪ್ರಕಾಶನ ಪುಟ:206 ಬೆಲೆ:ರೂ.95

ಶ್ರೇಷ್ಠ ಶಾಲೆಗೆ ಸೇರಿಸಿಬಿಟ್ಟರೆ, ಮಗುವಿಗೆ ಶ್ರೇಷ್ಠ ಶಿಕ್ಷಣ ಸಿಗುವುದಿಲ್ಲ

ಶಿಕ್ಷಣದ ಬಗ್ಗೆ ಯಾರು ಯೋಚಿಸಬೇಕು ಎಂಬ ಒಂದು ಮಹತ್ವದ ಪ್ರಶ್ನೆ ನಮ್ಮ ಮುಂದೆ ಯಾವಾಗಲೂ ಇದೆ. … ಶಿಕ್ಷಣದ ಬಗ್ಗೆ ಯಾರಾದರೂ ಯೋಚಿಸುತ್ತಿದ್ದರೆ ಅದು ನಮಗೆ ತಿಳಿಯುವುದು ಆ ಬಗ್ಗೆ ಬರೆಯುವುದರಿಂದ ಮತ್ತು ಆ ಬಗ್ಗೆ ಮಾತನಾಡುವವರಿಂದ. ನಮ್ಮ ಪ್ರಶ್ನೆ: ಇವತ್ತು ಆ ಕೆಲಸ ಎಷ್ಟು ಮಂದಿ ಮಾಡುತ್ತಿದ್ದಾರೆ? ಎಷ್ಟು ಮಂದಿ ಬರೆಯುತ್ತಿದ್ದಾರೆ? ಎಷ್ಟು ಸಂಶೋಧನೆ ನಡೆಯುತ್ತಿದೆ? ಎಷ್ಟು ಪುಸ್ತಕಗಳು ಪ್ರಕಟವಾಗುತ್ತಿವೆ? ಸಂಶೋಧನೆಗಳ ಬಗ್ಗೆ, ಪುಸ್ತಕಗಳ ಬಗ್ಗೆ ಎಷ್ಟು ಚರ್ಚೆ ನಡೆಯುತ್ತಿದೆ? ಅಮೆರಿಕಾ ಇಂಗ್ಲಂಡು ಜರ್ಮನಿಗಳಲ್ಲದೆ ಇತರ ಹಲವು ದೇಶಗಳಲ್ಲಿ ನಿರಂತರವಾಗಿ ನಡೆಯುವ ಈ ಕೆಲಸ ನಮ್ಮಲ್ಲಿ ಯಾಕೆ ನಡೆಯುತ್ತಿಲ್ಲ? ಇಷ್ಟರವರೆಗೆ ಆಗದಿದ್ದುದು ಇನ್ನು ಬೇಗನೆ ಆದೀತು ಎಂದು ನಂಬಿ ಕೂರಲು ಸಾಧ್ಯವಿಲ್ಲ. ಯಾಕೆಂದರೆ ಇದು ನಮ್ಮ ಮಕ್ಕಳ ಭವಿಷ್ಯದ ಪ್ರಶ್ನೆ. ನಾಳೆ ನಾಡಿದ್ದರಲ್ಲಿ ಮುಗಿದುಹೋಗುವ ಉದ್ಯೋಗಾವಕಾಶಗಳಿಗಾಗಿ ವಿದ್ಯಾರ್ಥಿಗಳನ್ನು ತಯಾರು ಮಾಡುವ ವಿದ್ಯಾಭ್ಯಾಸ ಸಾಕೆ? ಅದಕ್ಕಿಂತಲೂ ದೂರದ ಭವಿಷ್ಯಕ್ಕೆ ವಿದ್ಯಾರ್ಥಿಗಳನ್ನು ತಯಾರು ಮಾಡಬೇಡವೇ? ಅಂಥ ಶಿಕ್ಷಣದ ಬಗ್ಗೆ ಯೋಚಿಸಬೇಕಾದ ಸ್ಥಿತಿ ಈಗ ನಿರ್ಮಾಣವಾಗಿಲ್ಲವೇ? ಯಾಕೆ ವಿಜ್ಞಾನ, ಇತಿಹಾಸ, ರಾಜಕಾರಣ, ಸಮಾಜ ವಿಜ್ಞಾನ, ಸಾಹಿತ್ಯ, ಅರ್ಥಶಾಸ್ತ್ರ ಮುಂತಾದ್ದು ಮೂಲೆಗುಂಪಾಗಿದೆ? ಇವು ನಮಗೆ ಬೇಡವೇ? ಇವೆಲ್ಲ ನಮ್ಮ ಬದುಕಿಗೆ ಎಷ್ಟು ಅನಿವಾರ್ಯ ಎಂಬುದನ್ನು ಕಂಡುಕೊಳ್ಳಲು ಇಂದಿನ ಶಿಕ್ಷಣದ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವಿಲ್ಲವೆ?
ಖಂಡಿತವಾಗಿಯೂ ಇದೆ. ಆದರೆ ಯಾರು ಮಾಡಬೇಕಾದ ಚಿಂತನೆ ಇದು? ಸದ್ಯದ ಸ್ಥಿತಿಯಲ್ಲಿ ಮಕ್ಕಳ ತಾಯಿತಂದೆಯರೇ ಇದನ್ನು ಮಾಡಬೇಕಾಗಿದೆ. ಶ್ರೇಷ್ಠ ಶಾಲೆಗೆ ಸೇರಿಸಿಬಿಟ್ಟರೆ, ಮಗುವಿಗೆ ಶ್ರೇಷ್ಠ ಶಿಕ್ಷಣ ಸಿಗುವುದಿಲ್ಲ ಎಂಬುದು ಸ್ಪಷ್ಟ. . . . .
ಮಗು ಸಮಾಜದಲ್ಲಿ ಓರ್ವ ಉತ್ತಮ ವ್ಯಕ್ತಿಯಾಗಿ, ಜವಾಬ್ದಾರಿಯುಳ್ಳ ಪ್ರಜೆಯಾಗಿ ಬದುಕಬೇಕು. ಸ್ವಾರ್ಥ ಸಾಧಕನೆನಿಸಿಕೊಳ್ಳದೆ, ಯಾರಿಗೂ ಹಿಂಸೆ ನೀಡದೆ, ಶಾಂತಿಯನ್ನು ಪ್ರೀತಿಸುವ, ಶಾಂತಿಯಿಂದ ಜೀವಿಸುವ ವ್ಯಕ್ತಿಯಾಗಿರಬೇಕು. ವಿದ್ಯಾಭ್ಯಾಸ ಅವನನ್ನು ಕೇವಲ ಬುದ್ಧಿವಂತನನ್ನಾಗಿಸಿದರೆ ಸಾಲದು; ಅವನ್ನು ಸನ್ನಡತೆಯವನ್ನಾಗಿಸಬೇಕು. ಅವನು ವಿವೇಕಶಾಲಿಯಾಗಿರಬೇಕು. ಪರಿಸರವನ್ನು ಪ್ರೀತಿಸುವವನಾಗಿರಬೇಕು. ಭೂತದಯೆಯುಳ್ಳವನಾಗಿರಬೇಕು. ಸಮ್ಯಕ್ ದೃಷ್ಟಿಯವನಾಗಿರಬೇಕು. ಒಬ್ಬ ಉತ್ತಮ ವ್ಯಕ್ತಿಯಾಗಿ ಬದುಕಲು ಇನ್ನೂ ಇಂಥ ಎಷ್ಟೋ ಗುಣಗಳು ಬೇಕು. ಇದು ಇವತ್ತು ಯಾವ ಶಿಕ್ಷಣ ಸಂಸ್ಥೆಯಲ್ಲಿ ಸಿಗುತ್ತದೆ? ಸಿಲೆಬಸಿನಲ್ಲಿ, ಯಾವ ಶಿಕ್ಷಣ ಕ್ರಮದಲ್ಲಿ ಇದನ್ನು ಅಳವಡಿಸಿಕೊಳ್ಳಲಾಗಿದೆ? ಈ ಪ್ರಶ್ನೆಗಳಿಗೆ ಸದ್ಯದ ಪರಿಸ್ಥಿತಿಯಲ್ಲಿ ಉತ್ತರ ಸಿಗುವುದಿಲ್ಲ.
ಆದರೆ ಇದನ್ನೆಲ್ಲ ಮನೆಯಲ್ಲೇ ನೀಡಲು ಸಾಧ್ಯವಿದೆ. ತಾಯಿತಂದೆ ಸ್ವಲ್ಪ ಪ್ರಯತ್ನಿಸಿದರೆ, ಶಿಕ್ಷಣ ಕ್ರಮದಲ್ಲಿನ ಕೊರತೆಯನ್ನು ಮನೆಯಲ್ಲಿ ಸರಿಪಡಿಸಬಹುದು. ಮನೆಯೆಂಬುದು ಶಾಲೆಯಷ್ಟೇ ಮುಖ್ಯವಾದ ಶಿಕ್ಷಣ ಗೃಹವಾಗಬಹುದು. ಈ ದಿಸೆಯಲ್ಲಿ ಚಿಂತಿಸುವ ಕೆಲಸವನ್ನು ತಾಯಿತಂದೆಯರೇ ಮಾಡಬೇಕು.
ಈ ಆಶಯವನ್ನು ಪ್ರಧಾನವಾಗಿಟ್ಟುಕೊಂಡು ಈ ಪುಸ್ತಕವನ್ನು ಸಿದ್ಧಪಡಿಸಿದ್ದೇನೆ. ತಾಯಿ ತಂದೆಯರಿಗೆ ಮಾತ್ರ ಎಂದರೆ, ಇದು ಶಿಕ್ಷಕರಿಗಲ್ಲ, ಮುಂದೆ ತಾಯಿ ತಂದೆಯರಾಗುವವರಿಗಲ್ಲ ಎಂದರ್ಥವಲ್ಲ. `ಮಗು ಮನುಷ್ಯನ ತಂದೆ’ ಎಂಬ ಮಾತಿನಂತೆ ತಾಯಿ ತಂದೆಯರು ಎಂಬುದಕ್ಕೂ ಬಹಳ ವಿಶಾಲವಾದ ಅರ್ಥವಿದೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ.
ಇದೊಂದು ದ್ವಿಭಾಷೀ(A Bilingual) ಪುಸ್ತಕ. ಈ ಪುಸ್ತಕದಲ್ಲಿ 12 ಅಧ್ಯಾಯಗಳಿವೆ. ಪ್ರತಿ ಅಧ್ಯಾಯದಲ್ಲಿಯೂ ಕೆಲವು ವಿಚಾರಗಳನ್ನು ಇಂಗ್ಲೀಷಿನಲ್ಲಿಯೂ ಕೆಲವು ವಿಚಾರಗಳನ್ನು ಕನ್ನಡದಲ್ಲಿಯೂ, ಮುಖ್ಯವಿಚಾರಗಳನ್ನು ಎರಡೂ ಭಾಷೆಗಳಲ್ಲಿಯೂ ಕೊಡಲಾಗಿದೆ. ಆದರೆ ಒಂದು ಇನ್ನೊಂದರ ನೇರ ಭಾಷಾಂತರವಾಗಿರುವುದಿಲ್ಲ. ಮುಖ್ಯ ಆಶಯವು ಮಾತ್ರಾ ಒಂದೇ ರೀತಿಯಾಗಿರುತ್ತದೆ.
-ಕೆ.ಟಿ.ಗಟ್ಟಿ (ಪುಸ್ತಕದ ಮುನ್ನುಡಿಯಿಂದ)


ಶೀರ್ಷಿಕೆ:ಗುರುಗಳಾಗಿ ತಾಯಿ-ತಂದೆ PARENTS AS EDUCATORS ಲೇಖಕರು:ಕೆ.ಟಿ.ಗಟ್ಟಿ ಪ್ರಕಾಶಕರು:ನವಕರ್ನಾಟಕ ಪ್ರಕಾಶನ ಪುಟ:216 ಬೆಲೆ:ರೂ.110/-

ನಿರಂಜನರ ಮೂಲಕ ಕಯ್ಯೂರು ಕಲಿಗಳು, ಕಯ್ಯೂರು ಕಲಿಗಳ ಮೂಲಕ ನಿರಂಜನರು ಚಿರಸ್ಮರಣೀಯರು.

ನಿರಂಜನರ ಮೂಲಕ ಕಯ್ಯೂರು ಕಲಿಗಳು, ಕಯ್ಯೂರು ಕಲಿಗಳ ಮೂಲಕ ನಿರಂಜನರು ಚಿರಸ್ಮರಣೀಯರು.
ಕಯ್ಯೂರು ಹೋರಾಟಕ್ಕೆ ಸಂಬಂಧಿಸಿದಂತೆ 60 ಜನರನ್ನು ಬಂಧಿಸಿ ಮಂಗಳೂರಿಗೆ ತಂದಿದ್ದರು ವಿಚಾರಣೆಗಾಗಿ…… ಸೆರೆಮನೆಯಲ್ಲಿ ಆ ಕೈದಿಗಳನ್ನು ಭೇಟಿಯಾದೆ. ಧೀರ್ಘ ವಿಚಾರಣೆಯ ವೇಳೆ ವರದಿಗಾರನಾಗಿ ಪ್ರತಿ ದಿನವೂ ಅವರ ಸಾಮಿಪ್ಯದ ಸವಿಯುಂಡೆ.
ಆ ವಿಚಾರಣೆ ಭಾರೀ ನಾಟಕ. ಅದರ ಭೀಕರತೆ ಸ್ಪಷ್ಟವಾದದ್ದು ನ್ಯಾಯಮೂರ್ತಿ ತೀರ್ಪು ನೀಡಿದ ದಿನ. ನಾಲ್ವರಿಗೆ ಮರಣದಂಡನೆ.
ನಾನು ನೋಡನೋಡುತ್ತಿದ್ದಂತೆಯೇ ಕಯ್ಯೂರಿನ ಶೋಷಿತರು ಇತಿಹಾಸ ರಚಿಸಿದ್ದರು, ಕಥೆಯಾಗಿದ್ದರು, ದಂತಕಥೆಯಾಗಿದ್ದರು.
`ಚಿರಸ್ಮರಣೆ’ ಒಂದು ಕಾದಂಬರಿ, ಚರಿತ್ರೆಯಲ್ಲ. ಈ ಕೃತಿಯಲ್ಲಿ ನಾನು ಮಾಡಿರುವುದು, ಕಯ್ಯೂರಿನ ಹೋರಾಟದ ಅಂತಸ್ಸತ್ವವನ್ನು – ಆ ಕಾಲಾವಧಿಯ ಚೇತನವನ್ನು – ಕಲೆಯಲ್ಲಿ ಸೆರೆಹಿಡಿಯುವ ಯತ್ನ.
`ಚಿರಸ್ಮರಣೆ’ಯ ಅನೇಕ ಪಾತ್ರಗಳು ನಿಜಜೀವನದಿಂದಲೇ ಕಾದಂಬರಿಯ ಪುಟಗಳಿಗೆ ನಡೆದುಬಂದಿವೆ. ಆದರೆ ಇಲ್ಲಿನ ಪಾತ್ರ ನಿರ್ವಹಣೆಗಾಗಿ ರಂಗ ಸಜ್ಜಿಕೆಯ ವೇಷಭೂಷಣಗಳನ್ನು ಅವು ನಿರಾಕರಿಸಿಲ್ಲ. ಇನ್ನು ಕೆಲ ಪಾತ್ರಗಳನ್ನು ನಾನು ಕಡೆದದ್ದು ನನ್ನ ಕಲ್ಪನೆಯ ಮೂಸೆಯಲ್ಲಿ.
-ನಿರಂಜನ
(ಪುಸ್ತಕದ ಬೆನ್ನುಡಿಯಿಂದ)

ಶೀರ್ಷಿಕೆ: ಚಿರಸ್ಮರಣೆ ಲೇಖಕರು:ನಿರಂಜನ ಪ್ರಕಾಶಕರು:ಡಿ.ವಿ.ಕೆ. ಮೂರ್ತಿ ಪುಟ:281 ಬೆಲೆ:ರೂ.45/-


ರಚಿತವಾಗಿ ಇಪ್ಪತ್ತು ವರ್ಷಗಳಾದಮೇಲೆ `ಚಿರಸ್ಮರಣೆ’ ಮಲಯಾಳಂ ಭಾಷೆಯಲ್ಲಿ ಮರುಹುಟ್ಟು ಪಡೆಯಿತು. ಕೇರಳದಲ್ಲಿ ಅದಕ್ಕೆ ದೊರೆತ ಸ್ವಾಗತದ ವಿವರ ತಿಳಿದಾಗ `ಧನ್ಯನಾದೆ’ ಎನಿಸಿತು. ಸ್ವಲ್ಪ ಸಮಯದ ಅನಂತರ ಕನ್ನಡದಲ್ಲಿ ಎರಡನೆಯ ಮುದ್ರಣ ಬಂತು. ಮುಂದೆ ತಮಿಳು, ತೆಲುಗು, ಮರಾಠಿ, ಬಂಗಾಳಿ, ತುಳು ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಅನುವಾದ ಬರತೊಡಗಿದವು.
ಚಿತ್ರೀಕರಣದ ಹಕ್ಕು ಪಡೆಯಲು ಬಂದವರು ಪ್ರಶ್ನೆ ಕೇಳಿದರು:
“ನಿಮ್ಮ ಕಾದಂಬರಿಯ ನಂಬೂದಿರಿ-ನಂಬಿಯಾರ‍್ ಯಾರು?”
ಉತ್ತರ:”ಪಾಳೆಗಾರಿಕೆಯ ಪ್ರತಿನಿಧಿಗಳು”
ಪ್ರಶ್ನೆ: “ದೇವಕಿ ಎಲ್ಲಿದ್ದಾಳೆ?”
ಉತ್ತರ:”ನನ್ನ ಕಾದಂಬರಿಯಲ್ಲಿ”
ಪ್ರಶ್ನೆ: “ಕಣ್ಣ…..”
ಉತ್ತರ: “ಜನತೆಯ ಚಳವಳಿಯಲ್ಲಿ ಸಿರಿಕಂಠದ ಹಾಡುಗಾರ ಇರಲೇಬೇಕು, ಅಲ್ಲ?
ಸಾಕ್ಷ್ಯಚಿತ್ರವೋ? ಕಥಾ ಚಿತ್ರವೋ?
ಚರಿತ್ರೆಯೋ? ಕಾದಂಬರಿಯೋ?
ಅವರು ಗೊಂದಲಕ್ಕೀಡಾಗಿದ್ದರು. ನಾನು ತಲೆಕೆಡಿಸಿಕೊಳ್ಳಲಿಲ್ಲ.
1925ರಲ್ಲಿ ಸೋವಿಯತ್ ಚಲಚ್ಚಿತ್ರ ನಿರ್ದೇಶಕ ಐಸೆನ್ ಸ್ಟೀನ್ `ಯುದ್ಧ ನೌಕೆ ಪೊಟೆಮ್ ಕಿನ್’ ಎಂಬ ಕಥಾಚಿತ್ರವನ್ನು ನಿರ್ಮಿಸಿದರು. ಅದು ಅಪಾರ ಮೆಚ್ಚುಗೆ ಗಳಿಸಿತು. ಆದರೆ ನಿಂದಕರೂ ಕೆಲವರಿದ್ದರು. ಅವರೆಂದರು:”ಇದು ಇತಿಹಾಸದ ಯತಾವತ್ ಚಿತ್ರಣವಲ್ಲ.”
ಆ `ಟೀಕೆ’ಗೆ ಉತ್ತರವಾಯಿತು, ಅದಕ್ಕೂ 150 ವರ್ಷ ಹಿಂದೆ ಜರ್ಮನ್ ಮಹಾಕವಿ ಗಯಟೆ ಹೇಳಿದ್ದ ಒಂದು ಮಾತು: `ಸಮ್ಯಕ್ ಸತ್ಯದ ದರ್ಶನಕ್ಕಾಗಿ ಸಣ್ಣ ಪುಟ್ಟ ಸತ್ಯಾಂಶಗಳು ಅಮುಖ್ಯವಾಗುತ್ತದೆ.’ ಅದೇ ಮಾತನ್ನು `ಚಿರಸ್ಮರಣೆ’ ಕಾದಂಬರಿಗೆ ಸಂಬಂಧಿಸಿ ನಾನು ಆಡಿದರೆ ತಪ್ಪಾದೀತೇ?
-ನಿರಂಜನ
(ಮೂಲ ಕನ್ನಡ ಕಾದಂಬರಿ `ಚಿರಸ್ಮರಣೆ’ಯ ಮುನ್ನುಡಿಯಿಂದ)
ಶೀರ್ಷಿಕೆ: ಸಾಶ್ವಿಲೊ ಉಗ್ಡಾಸ್ ಭಾಷೆ: ಕೊಂಕಣಿ ಲೇಖಕರು:ವಿತ್ತಿ, ಬೆಂಗ್ಳುರ‍್ ಪ್ರಕಾಶಕರು:ಕರ್ನಾಟಕ ಕೊಂಕಣಿ ಸಾಹಿತ್ ಅಕಾಡೆಮಿ ಪುಟ:280 ಬೆಲೆ:ರೂ.50/-

ಕನ್ನಡಕ್ಕೆ ಪ್ರಪ್ರಥಮ ಬಾರಿ ಸಿನೆಮಾ ಕುರಿತ ಪುಸ್ತಕಕ್ಕೆ ಸ್ವರ್ಣಕಮಲ

ಕನ್ನಡದಲ್ಲಿ ಸಿನೆಮಾ ಕುರಿತ ಕೃತಿಯೊಂದಕ್ಕೆ ಪ್ರಪ್ರಥಮವಾಗಿ ಸ್ವರ್ಣಕಮಲ ಬಂದಿದೆ. ಸಿನೆಮಾ ಕುರಿತ ಈ ಪುಸ್ತಕಕ್ಕೆ 57ನೇ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿಗಳಲ್ಲಿ ಸಿನೆಮಾ ಕುರಿತಾದ ಪುಸ್ತಕ “ಸಿನೆಮಾ ಯಾನ” ಎಂಬ ಕನ್ನಡ ಕೃತಿಗೆ ಸಂದಿದೆ. ಇದರ ಲೇಖಕರು ಡಾ. ಕೆ. ಪುಟ್ಟಸ್ವಾಮಿ  ಅವರಿಗೆ ನಮ್ಮ ಅಭಿನಂದನೆಗಳು. ಆನ್ ಲೈನ್ ಕನ್ನಡ ನ್ಯೂಸ್ ವೆಬ್ ಸೈಟ್ ವಿಕ್ರಾಂತ ಕರ್ನಾಟಕ ದಲ್ಲಿ ಬಂದ ಅಂಕಣ ಬರಹವನ್ನು ಪುಸ್ತಕ ರೂಪಕ್ಕೆ ತಂದದ್ದು ಹಸಿರು ಪ್ರಕಾಶನ. ಹೆಚ್ಚಿನ ವಿವರಗಳಿಗೆ ಇದು ‘ಯಾನ’ ಕ್ಕೆ ಭೇಟಿ ಕೊಡಿ

ಶೀರ್ಷಿಕೆ: ಸಿನೆಮಾ ಯಾನ ಲೇಖಕರು:ಡಾ. ಕೆ. ಪುಟ್ಟಸ್ವಾಮಿ ಪ್ರಕಾಶಕರು:ಹಸಿರು ಪ್ರಕಾಶನ ಪುಟ:     ಬೆಲೆ:ರೂ.360/-

ಬೇರೆ ಬೇರೆ ದೃಷ್ಟಿಯಲ್ಲಿ ಬದುಕಿನ ಪುಟ್ಟ ಪುಟ್ಟ ಸಂಗತಿಗಳು

ಇದು ಲಲಿತ ಪ್ರಬಂಧಗಳ ಸಂಕಲನ.  ಬದುಕಿನಲ್ಲ ಕಾಣಿಸುವ ಪುಟ್ಟ ಸಂಗತಿಗಳ ಬಗ್ಗೆ ವಿವಿಧ ದೃಷ್ಟಿಕೋನಗಳಲ್ಲಿ ನೋಡಲು ಪ್ರಯತ್ನಿಸಿ ಬರೆದ ಲೇಖನಗಳ ಸರಮಾಲೆ.
ಈ ಪುಸ್ತಕ ಕರ್ನಾಟಕದ ಎಲ್ಲಾ ನವಕರ್ನಾಟಕ ಪುಸ್ತಕ ಮಳಿಗೆಗಳು, ಸ್ವಪ್ನ ಪುಸ್ತಕ ಮಳಿಗೆ, ಅಂಕಿತ ಪುಸ್ತಕ ಮಳಿಗೆ, ಜಯನಗರದ “ಟೋಟಲ್ ಕನ್ನಡ.ಕಾಂ ಪುಸ್ತಕ ಮಳಿಗೆಗಳಲ್ಲಿ ದೊರೆಯುತ್ತದೆ.
ಶೀರ್ಷಿಕೆ:ಗುಬ್ಬಿ ಎಂಜಲು ಲೇಖಕರು:ಶಿವು ಕೆ. ಪ್ರಕಾಶಕರು:ತುಂತುರು ಪ್ರಕಾಶನ ಪುಟಗಳು:   ಬೆಲೆ:ರೂ.

ದಿನಪತ್ರಿಕೆ ಹಂಚುವವರ ಜೀವನ ಜೋಕಾಲಿ

ಈ ಪುಸ್ತಕದ ವಿಚಾರವೇ ಹೊಸತು.  ಮುಂಜಾನೆ ಚುಮುಚುಮು ಬೆಳಕಿನಲ್ಲಿ ನಡೆಯುವ ದಿನಪತ್ರಿಕೆ ವಿತರಣೆ ಎನ್ನುವ ಸಂತೆಯೊಳಗೆ ನಡೆಯುವ ವೈವಿಧ್ಯತೆಗಳನ್ನು ಪರಿಚಯಿಸುವಲ್ಲಿ ಒಂದು ಪ್ರಯತ್ನ. ಈ ಪುಸ್ತಕ ಮೊದಲ ಮುದ್ರಣ ಪ್ರತಿಗಳೆಲ್ಲ ಮುಗಿದು ಎರಡನೇ ಮುದ್ರಣವಾಗಿದೆ.
ಈ ಪುಸ್ತಕ ಕರ್ನಾಟಕದ ಎಲ್ಲಾ ನವಕರ್ನಾಟಕ ಪುಸ್ತಕ ಮಳಿಗೆಗಳು, ಸ್ವಪ್ನ ಪುಸ್ತಕ ಮಳಿಗೆ, ಸ್ವಪ್ನ ಪುಸ್ತಕ ಮಳಿಗೆ, ಜಯನಗರದ “ಟೋಟಲ್ ಕನ್ನಡ.ಕಾಂ ಪುಸ್ತಕ ಮಳಿಗೆಗಳಲ್ಲಿ ದೊರೆಯುತ್ತದೆ.

ಶೀರ್ಷಿಕೆ:ವೆಂಡರ್ ಕಣ್ಣು ಲೇಖಕರು:ಶಿವು ಕೆ. ಪ್ರಕಾಶಕರು:                    ಪುಟಗಳು:   ಬೆಲೆ:ರೂ.