ಆತ್ಮಕಥೆಯೋ ಕಾದಂಬರಿಯೋ!

ಗಾಂಧಿ ಕ್ಲಾಸ್’ ಕೃತಿಯನ್ನು ಓದಿದ ನಂತರ ನನಗೆ ಬಂದ ಸಂದೇಹ ಇದು: ಕುಂವೀ ಮರೆತು ಆತ್ಮಕತೆಯ ಬದಲಿಗೆ ತಾವು ಬರೆದಿರುವ ಹೊಸ ಕಾದಂಬರಿಯೊಂದನ್ನು ನನಗೆ ಕಳುಹಿಸಿದ್ದಾರೆಯೇ?

ಇಷ್ಟು ರೋಚಕ ನಿರೂಪಣೆ, ಇಷ್ಟು ರಂಜಕ ಹಾಗೂ ಅಸಾಧಾರಣ ಘಟನೆಗಳು ಕಾದಂಬರಿಯಲ್ಲಲ್ಲದೆ ಆತ್ಮಕಥೆಯಲ್ಲಿರಲು ಸಾಧ್ಯವೆ? ಉದಾಹರಣೆಗೆ: ಕೇವಲ ತನ್ನ ಸುಯೋಧನ-ಛಲದಿಂದಾಗಿ ಸಾಕಷ್ಟಿದ್ದ ಸ್ಥಿರ-ಚರಾಸ್ತಿಗಳನ್ನು ಕಳೆದುಕೊಂಡು ಅಹನಹ್ಯನಿಗೆ ಒದ್ದಾಡುವ ಸ್ಥಿತಿಗೆ ಬಂದ `ಹೀರೋ’ ತಂದೆಯ ಮಗನಾಗಿ, ಅನೇಕರ ಸಹಾಯದಿಂದ, ಅತಿ ಕಷ್ಟದಿಂದ ಎಸ್.ಎಸ್.ಎಲ್.ಸಿ. ಪಾಸಾಗಿ ಕೆಲಸವಿಲ್ಲದೆ ಸೈನ್ ಬೋರ್ಡ ಪೇಂಟರ್ ಆಗುವ, ರೈಲ್ವೇ ದಿನಗೂಲಿಯಾಗುವ, ರೈಲ್ವೇ ಪ್ಲಾಟ್ ಫಾರ್ಮನಲ್ಲಿ ಮೂರು ದಿನ ಹಸಿವೆಯಿಂದ ಸಾಯುವ ಸ್ಥಿತಿ ತಲುಪುವ, ಕೊನೆಗೆ ಶತಮಾನದಷ್ಟು ಹಿಂದುಳಿದಿರುವ ಊರೊಂದರಲ್ಲಿ ಶಾಲಾ ಮಾಸ್ತರಾಗುವ, ತಿಂಗಳಿಗೊಂದು ಕೊಲೆಯಾಗುವ ಆ ಕುಗ್ರಾಮದಲ್ಲಿ ಧೈರ್ಯದಿಂದ ದಲಿತರನ್ನು ಶಾಲೆಗೆ ಸೇರಿಸಿಕೊಂಡೂ ಬದುಕಿ ಉಳಿಯುವ, `ಕಪ್ಪು’ ಎಂಬ ತನ್ನ ಮೊದಲ ಕಾದಂಬರಿಯ ಕಾರಣದಿಂದ ಎಂದೋ ಕೊಲೆಯಾಗಬಹುದಾಗಿದ್ದ, ಸಿನೆಮಾ ಪ್ರಪಂಚದಲ್ಲಿ ಎಲ್ಲರಿಂದ ವಂಚಿಸಲ್ಪಡುವ, ಅಕಾಡೆಮಿ ಪ್ರಶಸ್ತಿ ಪಡೆದ `ಅರಮನೆ’ ಕಾದಂಬರಿಯ ಬ್ಲರ್ಬ ತೋರಿಸಿ ಅಮೆರಿಕಾಕ್ಕೆ ವೀಸಾ ಪಡೆಯುವ – ಇಂತ ವ್ಯಕ್ತಿ ಕಥಾ ನಾಯಕನಾಗಿರುವುದು.

ಆ ವ್ಯಕ್ತಿಯೇ ಕವಿಯಾಗಿ, ಸಾಹಿತ್ಯಕ ಕ್ಷೇತ್ರವನ್ನು ಪ್ರವೇಶಿಸಿ, ಅಶ್ವಥ್ ಅವರ ಕೂಗಾಟಕ್ಕೆ ಹೆದರಿ ಒಂದು ರಾತ್ರಿಯಲ್ಲಿ 15 ಹಾಡು ಬರೆದು ಅಗಾಧ ಜನಪ್ರಿಯತೆ ಪಡೆಯುವ, ನೂರಾರು ಕತೆ ಬರೆದು ಸವೆದ ತನ್ನ ನಡುಬೆರಳನ್ನು `ಇದೊಂದು ರೂಪಕ’ ಎಂದು ಅಭಿಮಾನದಿಂದ ತೋರಿಸುವ, ಪ್ರಕಾಶಕರಿಗೆ ಮಾತು ಕೊಟ್ಟಂತೆ ಮೂರು ವಾರಗಳಲ್ಲಿ 600 ಪುಟಗಳ `ಶಾಮಣ್ಣ’ ಎಂಬ ಕಾದಂಬರಿ ಬರೆದು ಪ್ರಸಿದ್ಧನಾದ, `ಅರಮನೆ’ ಎಂಬ 1200 ಪುಟಗಳ ಕಾದಂಬರಿಯನ್ನು 500 ಪುಟಗಳಿಗೆ ತರಲು ಮತ್ತೆ ಮತ್ತೆ ಅದನ್ನು ಮುರಿದು ಕಟ್ಟಿ ಕೊನೆಗೆ ಅದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ, ಈ ಸಾಧನೆಗಳ ನಂತರವೂ ಅಬೋಧ ಬಾಲಕನ ಪ್ರೀತಿ=ವಿಸ್ಮಯತೆಗಳನ್ನು ಉಳಿಸಿಕೊಂಡಿರುವ ಸಾಹಿತಿಯೂ ಆಗಿರುವುದು.

ಇವೆಲ್ಲವೂ ಒಂದು ರೋಚಕ ಕಾದಂಬರಿಯಲ್ಲಿ ಮಾತ್ರ ಸಾಧ್ಯ: ಅಥವಾ ಸೋಮಶೇಖರ್ ಉರುಫ್ ವೀರಭದ್ರಪ್ಪ ಉರುಫ್ ಕುಂವೀ ಎಂಬ ಅಧ್ಬುತ ಪ್ರತಿಭಾಶಾಲಿಯ ಅಸಾಧಾರಣ ಬದುಕಿನಲ್ಲಿ ಮಾತ್ರ ಸಾಧ್ಯ ಎಂದು ಆಶ್ಚರ್ಯ, ಅಭಿಮಾನ, ಅಸೂಯೆ, ಇತ್ಯಾದಿಗಳೊಡನೆ ಗ್ರಹಿಸುವಲ್ಲಿಗೆ – ಶಂಭೋ ಶಂಕರ ಮಹಾದೇವ.

– ಡಾ. ಸಿ.ಎನ್.ರಾಮಚಂದ್ರನ್
ಪುಸ್ತಕದ ಬೆನ್ನುಡಿಯಿಂದ

ಶೀರ್ಷಿಕೆ: ಗಾಂಧೀ ಕ್ಲಾಸು (ಕುಂವೀ ಆತ್ಮ ಕಥನ)  ಲೇಖಕರು: ಕುಂವೀ   ಪ್ರಕಾಶನ: ಸಪ್ನ ಬುಕ್ ಹೌಸ್ ಪುಟ:   ಬೆಲೆ:ರೂ.225/-

ಕೃಪೆ: ಅವಧಿ ಬ್ಲಾಗು, ಸಂಯುಕ್ತ ಕರ್ನಾಟಕ

Advertisements

2 Responses

 1. Wha ! What a typical style and flow! Great.

 2. from Raaj …
  to pusthakapreethi@gmail.com
  date Tue, Sep 14, 2010 at 8:44 PM
  subject “ಪಾಸ್‍ಪೋರ್ಟ್ ಸಿಗದೆ ಗಾಂಧಿಕ್ಲಾಸ್‍ಗೆ ವೀಸಾ ತಗೊಂಡೆ”- ಹೀಗೊಂದು ಗಾಂಧಿಕ್ಲಾಸ್ ಓದಿದವನ ಅನಿಸಿಕೆ, ಅನುಭವ..
  mailed-by gmail.com
  signed-by gmail.com

  “ಪುಸ್ತಕಪ್ರೀತಿ”ಬ್ಲಾಗನೊಡೆಯರಿಗೆ ನಮಸ್ತೆ, ಗಾಧಿಕ್ಲಾಸ್ ಓದಿ ಅದರ ಬಗ್ಗೆ ಅನಿಸಿಕೆ ಬರೆದು, ನಿಮ್ಮ ಬ್ಲಾಗ್‍ನಲ್ಲಿ ಪ್ರಕಟಿಸಲು ನಿಮಗೆ ಈ ಮೇಲ್ ಮಾಡತ್ತಿದ್ದೇನೆ. ಓದಿ, ಇಷ್ಟಾವಾದಲ್ಲಿ ಪ್ರಕಟಿಸಿ, ಇಲ್ಲವಾದಲ್ಲಿ ನೋ ಕಮೆಂಟ್ಸ್

  ಹೀಗೆ ಸರಿಯಾಗಿ ತಿಂಗಳ ಹಿಂದೆ ಪಾಸ್‍ಪೋರ್ಟ್ ಮಾಡಿಸ್ಕೊಂಡ್ ಬರೋಣ ಅಂತ ಊರ್ವಶಿ ಹತ್ತಿರದ ಪಾಸ್‍ಪೋರ್ಟ್ ಕಛೇರಿಗೆ ಹೋಗಿ, ಅದು ಸಿಗದೆ ನಿರಾಶನಾಗಿ ಮರಳಿ ಬರುವಾಗ ಗಾಂಧಿನಗರದ ನವಕರ್ನಾಟಕದ ಪುಸ್ತಕ ಮಳಿಗೆಯಲ್ಲಿ ಗಾಂಧಿಕ್ಲಾಸ್‍ ಖರೀದಿಸಿ ಅದರ ಒಳ ಪುಟಗಳ ಮೊದಲ ಪುಟದಲ್ಲಿ ನೆನಪಿಗೆಂದು, “ಪಾಸ್‍ಪೋರ್ಟ್ ಸಿಗದೆ ಗಾಂಧಿಕ್ಲಾಸ್‍ಗೆ ವೀಸಾ ತಗೊಂಡೆ” ಅಂಥ ಬರೆದು ಒಂದು ಹುಮ್ಮಸ್ಸಿನಿಂದ ಓದಲು ಶುರುಮಾಡಿ ತಿಂಗಳಿಗೆ ಎರಡು ದಿನ ಉಳಿದಿರುವಂತೆಯೇ ಗಾಂಧಿಕ್ಲಾಸ್‍ನಲ್ಲಿ ಕೂತು ಕುಂ.ವೀಯವರ ಹನ್ನೊಂದು+ಒಂದು ಓಣಿಗಳನ್ನು ಒಮ್ಮೆ ದಾಪುಗಾಲಿಡುತ್ತಾ, ಮತ್ತೊಮ್ಮೆ ಕುಂಟುತ್ತಾ.. ಸಾಗುತ್ತಾ ಓದಿಮುಗಿಸಿದ್ದೇನೆ. ಹಾಸ್ಯ ಮಿಶ್ರಣದ ಒಂದು ಕ್ರೈಮ್ ಥ್ರಿಲ್ಲರ್ ಅನ್ನಿಸೋ ಹೊತ್ತಿಗೆ, ವ್ಯಕ್ತಿಯ ಅಡ್ವೆಂಚರ್ ಅನ್ನಿಸಿದೆ. ಬೆರಗಾಗಿಸುತ್ತಲೆ ಬೆಚ್ಚಿ ಬೀಳಿಸಿದೆ. ಕೊಟ್ಟೂರು, ವಾಗಿಲಿಯಾಂಥ ಅಸಂಖ್ಯ ಕೊಳಗೇರಿ, ಬಳ್ಳಾರಿ ಬೆಂಗಳೂರಂಥ ಪಟ್ಟಣಗಳಿಂದ ಹಿಡಿದು, ದೆಹಲಿ,ಆಗ್ರಾ ಮತ್ತಿತರ ಉತ್ತರ ಭಾರತದ ಪ್ರೇಕ್ಷಣೀಯ ಸ್ಥಳಗಳ ಮಾರ್ಗವಾಗಿ ನ್ಯೂಯಾರ್ಕ್,ವಾಷಿಂಗ್ಟನ್ ಎಂಬ ದೂರದ ದೇಶಗಳನ್ನು ಇಲ್ಲೆ ಗಾಂಧಿಕ್ಲಾಸ್‍ನಿಂದಲೆ ಕುಳಿತು ಸುತ್ತಿದ್ದೇನೆ.. ಕುಗ್ರಾಮಗಳ ಕೊಳಗೇರಿಗಳಿಂದ ನಯಾಗರದವರೆಗಿನ ಈ Virtual ಪ್ರಯಾಣ ಅನುಭವಕ್ಕಷ್ಟೆ ದೊರಕುವಂಥದ್ದು..
  ಕುಂ.ವೀಯವರನ್ನ ಇದೇ ಮೊದಲ ಬಾರಿಗೆ ಅವರ ಆತ್ಮಚರಿತ್ರೆಯ ಮೂಲಕ ಓದಿದ್ದು. ಒಂದು ವಿಶಿಷ್ಟ,ವಿಚಿತ್ರ ಶೈಲಿ ಮನಸೂರೆ ಮಾಡಿದ್ದು ಸುಳ್ಳಲ್ಲ..
  ಈ ಪುಸ್ತಕದ ಓದಿನ ನಡುವೆಯೆ City of God ಎಂಬ ಚಿತ್ರ ನೋಡಿದೆ.. ಅದಕ್ಕಿದಕ್ಕು ಸಂಬಂಧ ಇಲ್ಲ ಆದರೆ ಎರಡರ ತೂಕ ಹೆಚ್ಚು ಕಡಿಮೆ ಒಂದೇ ಎಂದನಿಸಿದ್ದು ಖರೆ..

  ಕಡೆಗೆ “ಹನ್ನೆರಡನೆ ಓಣಿ” ಮುಗಿಯುತ್ತಲೇ ಹೀಗೆ ಅನಿಸಿಕೆ ಬರೆದಿಟ್ಟಿದ್ದೀನಿ: “ಬರೋಬ್ಬರಿ ಒಂದು ತಿಂಗಳಿಗೆ 2 ದಿನ ಉಳಿದಿರುವಂತೆ ಗಾಂಧಿಕ್ಲಾಸು ಮುಗಿಸಿದ್ದೇನೆ. 1ನೇ ಓಣಿಯಿಂದ ದಾಪುಗಾಲಿಡುತ್ತಾ,9ನೇ ಓಣಿಗೆ ಬಂದು ಕುಂಟುತ್ತಾ ಕೊಟ್ಟೂರು,ವಾಗಿಲಿಯಾಂಥ ಅಸಂಖ್ಯ ಅಪರಿಚಿತ ಹಳ್ಳಿಗಳಿಂದ ಹಿಡಿದು, ನ್ಯೂಯಾರ್ಕ್, ವಾಷಿಂಗ್ಟನ್ ಸುತ್ತಾಡಿ.. ಅಲ್ಲಲ್ಲಿ ರಕ್ತದೋಕುಳಿ, ನಗುವಿಗೆ ಕಚಗುಳಿ,ಎಷ್ಟೋ ಕಡೆ ಕಣ್ತುಂಬಿ, ಅಸಂಖ್ಯ ಓಣಿ,ಗಲ್ಲಿ, ಮೋರಿ ಕೊನೆಗೆ ನಯಾಗರ.
  12ನೇ ಓಣಿಗೆ ಕಲು ಇಡು ಇಡುತ್ತಲೇ ಮುಗಿದು Dead End..”
  ————————————————————
  ರಾಜ್ ಅವರಿಗೆ ನಮಸ್ಕಾರ,

  ನಿಮ್ಮ ಅನಿಸಿಕೆ ತುಂಬಾ ಇಷ್ಟವಾಯ್ತು. ಅನಿಸಿಕೆಯನ್ನು ನಮಗೆ ಕಳುಹಿಸಿದ್ದು ಇನ್ನೂ ಖುಷಿ ಕೊಡ್ತು. ಈ ಅನಿಸಿಕೆಯನ್ನು ನೇರವಾಗಿ ಗಾಂಧಿ ಕ್ಲಾಸ್ ಪೋಸ್ಟ್ ನ ಕಮೆಂಟ್ ನಲ್ಲಿ ಹಾಕಬಹುದಿತ್ತು. ಇನ್ನು ಮೇಲೆ ಈಗಾಗಲೆ ವಿಮರ್ಶೆ ಬ್ಲಾಗ್ ನಲ್ಲಿ ಬಂದಿದ್ದಾಗ ಆ ಪುಸ್ತಕದ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ನಲ್ಲಿ ಹಾಕಿ. ಹೊಸ (ಅಂದರೆ ಬ್ಲಾಗ್ ನಲ್ಲಿ ಬಂದಿರದೆ ಇರುವ) ಪುಸ್ತಕದ ಬಗೆಗಿನ ಅನಿಸಿಕೆಯನ್ನು ನಮಗೆ ಪುಸ್ತಕದ ಮುಖಪುಟದ ಸಾಫ್ಟ್ ಕಾಪಿಯೊಡನೆ ಇ-ಮೈಲ್ ಮಾಡಿ. ಅದನ್ನು ಬ್ಲಾಗ್ ನಲ್ಲಿ ಪ್ರಕಟಿಸುತ್ತೇವೆ.

  -ವಿಶಾಲಮತಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: