ಗ್ರಾಮೀಣ ಬದುಕಿನ ಆಳ-ವಿಸ್ತಾರ ಹೊಂದಿರುವ ಕತೆಗಳು

ದ.ರಾ. ಬೇಂದ್ರೆ ಕಾವ್ಯ ಪುರಸ್ಕಾರ ಗಳಿಸಿದ ಕವನ ಸಂಕಲನ `ಕನಸು ಮಾರುವ ಹುಡುಗಿ’ ಕಥಾಸಂಕಲನಗಳಾದ `ಮೂಕ ಹಕ್ಕಿ ನಕ್ಕಾಗ’, `ಬಾರಪ್ಪಾ ಬಾರೋ ಮಳೆರಾಯ’ ಹಾಗೂ ಕಾದಂಬರಿ `ಸಪ್ನ ಗೆಜ್ಜೆ’ ಗಳ ಮೂಲಕ ಈಗಾಗಲೇ ಸಾರಸ್ವತ ಲೋಕದಲ್ಲಿ ಯುವ ಬರಹಗಾರರಾಗಿ ಗುರುತಿಸಿಕೊಂಡು ಗಟ್ಟಿ ಹೆಜ್ಜೆಯನ್ನಿಟ್ಟಿರುವ ವೈ.ಎಸ್.ಹರಗಿಯವರ ಈ ಮೂರನೇ ಕಥಾಸಂಕಲನ `ದೇವ್ರು ಬರ್ತಾನೆ ದಾರಿಬಿಡಿ’. ಸಣ್ಣ ಕತೆಗಳ ಲಕ್ಷಣ ಏನೆಲ್ಲಾ ಒಳಗೊಂಡ ಇಲ್ಲಿಯ ಕಥೆಗಳು ಗ್ರಾಮೀಣ ಬದುಕಿನ ಆಳ-ವಿಸ್ತಾರವನ್ನು ಕಂಡು, ಉಂಡು ಅನುಭವದ ರಸಘಟ್ಟಿಯಾಗಿ ಹುಟ್ಟಿಕೊಂಡಿವೆ. ಇದರಿಂದಾಗಿಯೇ ಈ ಕತೆಗಳಲ್ಲಿ ಬಡವರು, ಸಣ್ಣ ಪುಟ್ಟ ಕಾರುಬಾರಿನವರು, ಕೆಲಸ ಇಲ್ಲದವರು ಹೀಗೆ ಸಮಾಜದ ಸಾಮಾನ್ಯ ಸ್ತರದವರು ಉಸಿರಾಡುತ್ತಾರೆ. ಸಮಾಜದಲ್ಲಿ ನೆಲೆ ನಿಲ್ಲಲು ಹರಸಾಹಸ ಪಡುತ್ತಾರೆ, ಬದುಕಿಗಾಗಿ ಹೋರಾಡುತ್ತಾರೆ, ಏನೂ ಇಲ್ಲದೆಯೂ ಎಲ್ಲವನ್ನು ಒಳಗೊಂಡವರಂತೆ ಸುಖಿಸುತ್ತಾರೆ. ತಮ್ಮದೇ ಪ್ರಪಂಚವನ್ನು ಕಟ್ಟಿಕೊಳ್ಳುತ್ತಾರೆ. ಇದು ಸಾಧ್ಯವಾಗುವುದು ಹರಗಿಯವರಿಗೆ, ಆ ಎಲ್ಲಾ  ಜನರ ಬಗೆಗಿರುವ ಪ್ರೀತಿ, ಅಭಿಮಾನ, ಸಹಾನುಭೂತಿಗಳಿಂದ. ಉತ್ತರ ಕರ್ನಾಟಕ ಭಾಷೆ ಇಲ್ಲಿಯ ಬಾಹ್ಯ ಸ್ತೋತ್ರವಾದರೆ, ಒಳಹರಿವು ಅನುಕಂಪ, ಇವೆರಡನ್ನೂ ಸಮರಸಗೊಳಿಸುತ್ತದೆ. ಲೇಖಕರದ್ದೇ ಆದ ಶೈಲಿ ಇವು ಮುಪ್ಪುರಿಗೊಂಡಾಗ ಕಥಾ ವಿಸ್ತರಣೆ ಪ್ರಿಯವಾಗುತ್ತದೆ. ಇದರಲ್ಲಿ ಎಲ್ಲಾ ಕತೆಗಳ ಪಾತ್ರಗಳು – ಸ್ವತಂತ್ರವಾಗಿ ಇರಬಹುದು, ಪ್ರತಿ ಪಾತ್ರಗಳಿಂದಾದರೂ ಆಗಬಹುದು – ಸಜೀವವಾಗಿ ಓದುಗರ ಮನೋಮಂದಿರದಲ್ಲಿ ನೆಲೆ ನಿಲ್ಲುತ್ತವೆ, ನೆನಪಾದಾಗಲೆಲ್ಲಾ ನಮ್ಮನ್ನು ಕಾಡುತ್ತವೆ, ಪರಿಹಾರಕ್ಕಾಗಿ ಬೇಡುತ್ತವೆ, ಓದುಗನ ಅನುಕಂಪದ ನಿಟ್ಟುಸಿರ ಬಿಸಿಗೆ ಬಾಡುತ್ತದೆ.
-ಪ್ರೊ. ಸಿ. ಉಪೇಂದ್ರ ಸೋಮಯಾಜಿ (ಬೆನ್ನುಡಿಯಿಂದ)

ಶೀರ್ಷಿಕೆ: ದೇವ್ರು ಬರ್ತಾನೆ ದೇವ್ರು  ಲೇಖಕರು:ವೈ.ಎಸ್.ಹರಗಿ ಪ್ರಕಾಶಕರು:ಶ್ರೀನಿವಾದ ಪುಸ್ತಕ ಪ್ರಕಾಶನ  ಪುಟ:118 ಬೆಲೆ:ರೂ.60/- ಪ್ರಕಟಣೆ: 2010