ಕಾವ್ಯ, ಕಥೆ, ನಾಟಕ, ಅಂಕಣ ಬರಹ, ಸಾಮಾಜಿಕ ಅಧ್ಯಯನ, ಮುಂತಾಗಿ ಕನ್ನಡ ಸಾಹಿತ್ಯ ವಲಯದ ಅನೇಕ ಮುಖ್ಯ ಕ್ರಿಯಾಶೀಲ ಬರಹಗಳ ಜೊತೆ ಅಷ್ಟೇ ಕ್ರಿಯಾಶೀಲವಾಗಿ ಒಡನಾಡುತ್ತ ಬಂದ ಅಧ್ಯಯನಶೀಲನ ಟಿಪ್ಪಣಿಗಳಿವು.
ಇದು ಕಳೆದ ನಲವತ್ತು ವರ್ಷಗಳ ಸುದೀರ್ಘ ಅವಧಿಯಲ್ಲಿ ಎಚ್.ಎಸ್.ರಾಘವೇಂದ್ರರಾವ್ ಅವರು ಬರೆದ ಮೂವತ್ತೆಂಟು ಮುನ್ನುಡಿ ಮತ್ತು ಪ್ರಸ್ತಾವನೆಗಳ ಸಂಗ್ರಹ. ಕಾವ್ಯ, ಕಥೆ, ನಾಟಕ, ಅಂಕಣ ಬರಹ, ಸಾಮಾಜಿಕ ಅಧ್ಯಯನ, ಮುಂತಾಗಿ ಕನ್ನಡ ಸಾಹಿತ್ಯ ವಲಯದ ಅನೇಕ ಮುಖ್ಯ ಕ್ರಿಯಾಶೀಲ ಬರಹಗಳ ಜೊತೆ ಅಷ್ಟೇ ಕ್ರಿಯಾಶೀಲವಾಗಿ ಒಡನಾಡುತ್ತ ಬಂದ ಅಧ್ಯಯನಶೀಲನ ಟಿಪ್ಪಣಿಗಳಿವು.
ಅಂದಿನಿಂದ ಇಂದಿನವರೆಗೆ ಉಳಿದುಕೊಂಡು ಬಂದಿರುವ ಕೆಲವು ನಂಬಿಕೆಗಳು, ಲಕ್ಷಣಗಳ ಜೊತೆಯಲ್ಲೇ ಒಟ್ಟು ಪರಿಸರದಲ್ಲಿ ಆಗಿರುವ ಬದಲಾವಣೆಗಳನ್ನೂ ಅವರು ಸಾವಧಾನದಿಂದ ಪರಿಶೀಲಿಸುತ್ತಾರೆ. ಗುರಿಯಿಲ್ಲದ ಹಿಂಸಾಪರತೆ, ಜಾಗತೀಕರಣ, ವ್ಯಾಪಾರೀಕರಣಗಳ ಅವಕಾಶವಾದ, ಹುಸಿ ಮತ್ತು ದಿಟಗಳ ನಡುವಿನ ಅಂತರವನ್ನೇ ಅಳಿಸಿಹಾಕಿರುವ ಕಲುಷಿತ ಅಲೋಚನಾಕ್ರಮ, ಸೂಕ್ಷ್ಮವಾಗಿ ಮೊಳಕೆ ಒಡೆಯುತ್ತಿರುವ ಜಾತೀಯತೆ…
ಇವೆಲ್ಲ ಹುಟ್ಟಿಸುತ್ತಿರುವ ಆತಂಕ, ಕಳವಳ ಈ ಲೇಖಕರ ಬರಹಗಳ ಹಿಂದಿದೆ. ಅವರ ದೃಷ್ಟಿಯಲ್ಲಿ ವಿಮರ್ಶಕನೂ ಸೃಷ್ಟಿಶೀಲ ಸಾಹಿತಿಗಳ ದಾರಿಯಲ್ಲೇ ನಡೆಯುತ್ತಿರುವ ಪಯಣಿಗ. ಅವರು, `ವಿಮರ್ಶೆ ನಮ್ಮ ಸುತ್ತಲಿನ ಬದುಕು ಮತ್ತು ಸಮಾಜಗಳನ್ನು ಕಾಣುವ, ತಿಳಿದುಕೊಳ್ಳುವ, ಅದರ ಒಳಸುಳಿಗಳನ್ನು ಗ್ರಹಿಸುವ ಉಪಕರಣ’ವೆಂದು ತಿಳಿಯುತ್ತಾರೆ.
ಸಾಹಿತ್ಯ ಚರಿತ್ರೆಯ ಕೃತಕ ನಿರ್ಮಾಣಗಳಿಗಿಂತ ಭಿನ್ನವಾಗಿ ವಾಸ್ತವದ ಸಾಂಸ್ಕೃತಿಕ ಲೋಕದ ಸ್ವರೂಪ ಹೇಗಿದ್ದೀತೆಂಬ ಕುತೂಹಲದ ಹುಡುಕಾಟ `ಇಪ್ಪತ್ತನೆಯ ಶತಮಾನದ ಕಾವ್ಯ’ದ ಪ್ರಸ್ತಾವನೆಯಲ್ಲಿದೆ. ಭಾಷೆಯನ್ನು ಅವರು `ನಿತ್ಯಮದುವಣಗಿತ್ತಿ’ ಎಂದು ವರ್ಣಿಸುತ್ತಾರೆ.
ಆಧುನಿಕಗೊಳ್ಳುವಾಗಲೂ ಸಾತತ್ಯವನ್ನು ಕಾಪಾಡಿಕೊಳ್ಳುವ ಯತ್ನದಲ್ಲಿ ಅಥವಾ ಸಾತತ್ಯ ಉಳಿಸಿಕೊಳ್ಳುತ್ತಲೇ ಆಧುನಿಕಗೊಳ್ಳುವ ತಹತಹದಲ್ಲಿ ಗಳಿಸಿದ್ದೆಷ್ಟು, ಕಳೆದದ್ದೆಷ್ಟು? ಅಕ್ಷರಲೋಕದ ಅಂಚಿನ ಸುಪ್ತ ಜಾನಪದದ ಲೋಕದರ್ಶನದಲ್ಲಿ ಒಟ್ಟು ಸಮುದಾಯದ ಅನುಭವದ ಎದೆಬಡಿತ ಕೇಳಬಹುದೆಂಬ ನಿರೀಕ್ಷೆ ಅವರದು. ಸಾಹಿತ್ಯ ಚರಿತ್ರೆಯ ರಚಿತ ಆಕೃತಿಗಿಂತ ಬೇರೆಯೇ ಆಗಿರಬಹುದಾದ ನಿಜ ಜೀವನದರ್ಶನವನ್ನು ಅನುಸಂಧಾನಗೈವ ಅಪೇಕ್ಷೆ ಇಲ್ಲಿಯ ಬರಹಗಳ ಹಿಂದಿದೆ.
ಇದು ಎಚ್.ಎಸ್.ಆರ್. ಕ್ರಿಯಾಶೀಲವಾಗಿ ವಿಮರ್ಶಾ ಬರಹಗಳಲ್ಲಿ ತೊಡಗಿಕೊಂಡ ಕಾಲಘಟ್ಟದಲ್ಲಿ- ಅಂದರೆ ಸರಿಸುಮಾರು ಕಳೆದ ನಾಲ್ಕು ದಶಕಗಳಲ್ಲಿ- ಒಟ್ಟಾರೆಯಾಗಿ ಕನ್ನಡ ಸಾಹಿತ್ಯ ತುಂಬ ಆಸಕ್ತಿಯಿಂದ ಪರಿಶೀಲಿಸಿದ ಮಹತ್ವದೊಂದು ಸವಾಲು. ಲೇಖಕರೇ ಹೇಳುವಂತೆ- `ವಿಮರ್ಶೆಯು ಸಂಸ್ಕೃತಿ- ಸಮಾಜ ಕೇಂದ್ರಿತವಾದ ನೆಲೆಗಳನ್ನು ವಿಪುಲವಾಗಿ ಪಡೆದುಕೊಂಡಿದ್ದು ಈ ಅವಧಿಯಲ್ಲಿಯೇ’. ಇಲ್ಲಿಂದ ಮುಂದೆ ಎಚ್.ಎಸ್.ಆರ್ ಇನ್ನೊಂದು ಮುಖ್ಯ ಪ್ರಶ್ನೆ ಕೇಳಿಕೊಳ್ಳುತ್ತಾರೆ:
`ಕನ್ನಡ ಸೃಜನಶೀಲ ಸಾಹಿತ್ಯವು ಎದುರಿಸಿದ, ಬಿಡಿಸಿದ ಸಾಮಾಜಿಕ- ಸಾಂಸ್ಕೃತಿಕ ಸವಾಲುಗಳನ್ನು ಅಷ್ಟೇ ಸಂಕೀರ್ಣವಾಗಿ, ವೈವಿಧ್ಯಮಯವಾಗಿ ವಿಮರ್ಶೆಯು ಅನುಸಂಧಾನ ಮಾಡಿದೆಯೇ?’. ಕನ್ನಡ ವಿಮರ್ಶೆಯಲ್ಲಿ ಅಂಥ ಅಪರೂಪದ ಹೊಳಹುಗಳಿರುವುದಾದರೂ ಸ್ವಯಂಪೂರ್ಣವಾದ ಲೋಕದರ್ಶನ ಮೂಡಿರುವ ಕುರಿತು ಅವರು ಸಂಶಯ ತಾಳುತ್ತಾರೆ. ವಾಸ್ತವಿಕವಾಗಿ ಸ್ವತಃ ರಾಘವೇಂದ್ರರಾವ್ ಅವರ ಬರಹಗಳು ಆ ನಿಟ್ಟಿನಲ್ಲಿ ಸಾಕಷ್ಟು ದೂರ ನಡೆದಿವೆ.
`ವಿಮರ್ಶೆಯು ಸಹಪ್ರಯಾಣ ಮಾತ್ರವಾಗದೆ ಸ್ವತಂತ್ರವಾದ ಹುಡುಕಾಟವೂ ಆಗಿರುತ್ತದೆ’ ಚಂಪಾ ಕಾವ್ಯ ಕುರಿತ ಲೇಖನ. ಕೆ.ಎಸ್.ನ. ಕಾವ್ಯದ ಕುರಿತು ಬರೆಯುವಾಗ ಅವರು ಆಡುವ ಮಾತುಗಳನ್ನು ಗಮನಿಸಿ: `…ಅವರು ಜನಪದದ ಅರ್ಕವನ್ನು ಮಧ್ಯಮವರ್ಗದ ಭಾಷೆ ಮತ್ತು ಮೌಲ್ಯಸಂಹಿತೆಯ ನೆಲೆಗಟ್ಟಿಗೆ ಪರಿವರ್ತಿಸಿದರು…
ಇಪ್ಪತ್ತನೆಯ ಶತಮಾನದ ಕನ್ನಡ ಜನಪದದ ಚಲನಶೀಲತೆಯನ್ನು ಅವರ ಹಾಗೆ ಹಿಡಿದಿಟ್ಟಿರುವವರು ಬಹಳ ಕಡಿಮೆ’. ಸಂವಹನಶೀಲವಲ್ಲದ ಬಿಗಿ ಆಕೃತಿಗಿಂತ ಸರಳ ನುಡಿಗಟ್ಟುಗಳು ಮುಖ್ಯವೆಂಬ ಕವಿಯ (ಕೆಎಸ್‌ನ) ನಿಲುವಿಗೂ, ಸಮಾಜದ ಅಪೇಕ್ಷೆಗಳಿಗೂ ಇರಬಹುದಾದ ಸಂಬಂಧದ ಕುರಿತು ಈ ಲೇಖನ ಯೋಚಿಸಲು ತೊಡಗಿಸುತ್ತದೆ.
ರಾಮಚಂದ್ರ ಶರ್ಮರ `ಸಮಗ್ರಕಾವ್ಯ’ಕ್ಕೆ ಬರೆದ ಮುನ್ನುಡಿಯಲ್ಲಿ ಆಧುನಿಕ ಕನ್ನಡ ಕಾವ್ಯಸೃಷ್ಟಿಯ ಸಾಂಸ್ಕೃತಿಕ ಸನ್ನಿವೇಶದ ಅಪೇಕ್ಷೆಗಳಿಂದ, ಅವಶ್ಯಕತೆಗಳಿಂದ ಭಿನ್ನವಾಗಿಯೇ ಉಳಿದ ಅವರ ಕಾವ್ಯಭಾಷೆ, ಅನುಭವ ಪ್ರಪಂಚಗಳ ಬಿಕ್ಕಟ್ಟನ್ನು ಕುರಿತು ಈ ವಿಮರ್ಶಕರು ಮಾಡಿರುವ ಪರಿಶೀಲನೆ; ಮನೆ ಜಗಳ ಮತ್ತು ಹೊರಗಿನ ಮಾರಿಗಳೆರಡನ್ನೂ ಏಕಕಾಲಕ್ಕೆ ಎದುರಿಸಬೇಕಾಗಿರುವ ದಲಿತ ಕಾವ್ಯದೆದುರಿಗಿರುವ ಪಂಥಹ್ವಾನದ ಕುರಿತ ವಿವೇಚನೆ (ಮಾಲಗತ್ತಿ ಕಾವ್ಯ ಚರ್ಚೆ)- ಇವು ರಾಘವೇಂದ್ರರಾವ್ ಅವರ ವಿಮರ್ಶಾ ಬರಹಗಳು ಕೃತಿಸಮೀಕ್ಷೆಯ ಒಟ್ಟೊಟ್ಟಿಗೇ ಇಡಿಯ ಕನ್ನಡ ಸಾಹಿತ್ಯ, ಸಂಸ್ಕೃತಿ, ಸಮಾಜದ ಸಂಕೀರ್ಣ ಸಮಸ್ಯೆಗಳನ್ನು ಎದುರುಗೊಳ್ಳುವ ಬಗೆಯನ್ನು ತೋರುವ ಎರಡು ಉದಾಹರಣೆಗಳು.
ಹೊಸದಾಗಿ ಕಾವ್ಯರಚನೆಗೆ ತೊಡಗಿದ ಹುಡುಗನಿಂದ ಹಿಡಿದು ಹಿರಿಯ ಮುಖ್ಯಲೇಖಕರ ಕೃತಿಗಳವರೆಗೂ ಇಲ್ಲಿ ಮುನ್ನುಡಿ ಬರಹಗಳ ಹರಹು ಇದೆ. ಆ ಎಲ್ಲ ಬರಹಗಳ ಹಿಂದೆ ಶಿಕ್ಷಣದ ಶ್ರದ್ಧೆ, ಶಿಸ್ತಿನಿಂದ ರಾಘವೇಂದ್ರರಾವ್ ತಮ್ಮ ವಿಮರ್ಶೆಯ ಮುಖ್ಯ ಕಾಳಜಿಗಳೊಂದಿಗೆ ಕಾರ್ಯಪ್ರವೃತ್ತರಾಗಿರುವುದು ಕಂಡು ಬರುತ್ತದೆ.
ವಯೋಮಾನದ ದೃಷ್ಟಿಯಿಂದ ಮಾತ್ರವಲ್ಲ, ಪಂಥ ಪ್ರವೃತ್ತಿಗಳ ನೆಲೆಗಳಿಂದಲೂ ಇಲ್ಲಿಯ ಮುನ್ನುಡಿಗಳನ್ನು ಪಡೆದವರು ವಿವಿಧ ವಿಭಾಗಗಳಲ್ಲಿ ಹಂಚಿ ಹೋಗುವವರು. ಎಚ್.ಎಸ್.ಆರ್. ಅವರ ವಿಮರ್ಶನ ಪ್ರಜ್ಞೆಯು ಈ ಎಲ್ಲ ವೈವಿಧ್ಯಗಳನ್ನೂ ಸಹಜ ಕುತೂಹಲ ಮತ್ತು ವಿನಯದಿಂದ ಮುಟ್ಟಲು, ಅರಿಯಲು ಬಯಸುತ್ತದೆ ಎಂಬುದು ಅದರ ಸ್ಥಾನವನ್ನು ವಿಶಿಷ್ಟಗೊಳಿಸಿದೆ.
ಲೇಖಕರು ವಿಮರ್ಶಕರ ಆತ್ಮೀಯರಾದಾಗಲೂ (ಚಿ.ಶ್ರೀನಿವಾಸರಾಜು, ಎಸ್.ಜಿ.ಸಿದ್ದರಾಮಯ್ಯ, ಶೂದ್ರ ಶ್ರೀನಿವಾಸ, ಕೆ ಮರುಳಸಿದ್ದಪ್ಪ…) ಒಲವಿನ ನೆನಕೆಯೊಂದಿಗೇ ರಾಘವೇಂದ್ರರಾವ್ ಮುಂಭಾಗಗಳಲ್ಲಿ ವಿಮರ್ಶನೋದ್ಯಮದಲ್ಲಿ ನಿರಾತಂಕವಾಗಿ ತಲ್ಲೆನರಾಗುತ್ತಾರೆ. ಪ್ರತ್ಯಕ್ಷ ಒಡನಾಟವಿಲ್ಲದ ಲೇಖಕರ ವಿಷಯದಲ್ಲೂ ಅವರದು ವಿಶ್ವಾಸಪೂರ್ಣ ದೃಷ್ಟಿಯೇ. ಈ ಮಾತನ್ನು ಇಷ್ಟು ವಿವರವಾಗಿ ಹೇಳಿದುದಕ್ಕೆ ಕಾರಣವಿದೆ.
ಎಚ್.ಎಸ್.ಆರ್. ಅವರದು ನಿರ್ಮಮ ಧೋರಣೆಯಲ್ಲ. ಅದು ಒಟ್ಟಾರೆಯಾಗಿ ಸೃಷ್ಟಿಶೀಲವಾದ ಎಲ್ಲ ಕೃತಿಗಳನ್ನೂ, ಕೃತಿಕಾರರನ್ನೂ ಪ್ರೀತಿ, ಆದರಗಳಿಂದ ಕಾಣುವಂಥದು. ಒಟ್ಟು ಕನ್ನಡ ಸಾಹಿತ್ಯದ ಗತಿ, ಕ್ರಿಯಾಶೀಲತೆಗಳನ್ನು ತಾಯ ಪ್ರೇಮದಿಂದ ಕಾವು ಕೊಟ್ಟು ಪೊರೆಯುವ ಅಂತಃಕರಣ ಈ ಬರಹಗಳೊಳಗೆ ಮಿಡಿಯುತ್ತಿದೆ. ಇದಕ್ಕೆ ಅಪವಾದ ಎನ್ನಬಹುದಾದ ಒಂದು ಸಾಲನ್ನೂ ನಾನು ಕಾಣಲಿಲ್ಲ.
`ವಿಮರ್ಶೆಯು ಯಾವಾಗಲೂ ಸಾಹಿತ್ಯ ಕೃತಿಗಳ ವಿಶ್ಲೇಷಣೆ, ವಿಮರ್ಶೆಗಳಿಗೆ ಮೀಸಲಾದ ಪರಾವಲಂಬೀ ಚಟುವಟಿಕೆಯಾಗಿಲ್ಲ. ಬದಲಾಗಿ ಒಂದು ಸಂಸ್ಕೃತಿಯು ಸ್ವಾಭಿಮುಖವಾಗಿ ತೊಡಗಿಕೊಂಡು ಜ್ಞಾನಸೃಷ್ಟಿ ಮಾಡುವ ಜವಾಬ್ದಾರಿ ಹೊತ್ತುಕೊಂಡಾಗ ನಡೆಯುವ ಎಲ್ಲ ಪವಾಡಗಳೂ ಸಾಹಿತ್ಯ ವಿಮರ್ಶೆಯಲ್ಲಿಯೂ ಒಂದು ಮಿತಿಯೊಳಗೆ ನಡೆದಿವೆ’ (ಶತಮಾನದ ಸಾಹಿತ್ಯ ವಿಮರ್ಶೆ) ಎಂದು ಹೇಳುವಾಗಲೂ ಎಚ್.ಎಸ್.ಆರ್. ಅದರ ಮಿತಿಯತ್ತಲೂ ಗಮನ ಸೆಳೆಯಲು ಮರೆಯುವುದಿಲ್ಲ:
`ಜೀವಂತವಾದ ಕೃತಿಯು ಓದುಗನ ಮನಸಿನಲ್ಲಿ ಅಸಂಖ್ಯ ಸಾಧ್ಯತೆಗಳನ್ನು ಕಂಡುಕೊಳ್ಳುತ್ತದೆ. ಆದ್ದರಿಂದಲೇ ವಿಮರ್ಶೆ-ವಿಶ್ಲೇಷಣೆಗಳಿಗೆ ಅಲ್ಪಾಯುಷ್ಯದ ಶಾಪವಿರುತ್ತದೆ. ಅವು ತಾವು ರಚಿತವಾಗುತ್ತಿರುವ ಕಾಲದ ಒತ್ತಡಗಳಿಗೆ ಹಿಡಿದ ಕನ್ನಡಿಗಳು’ (`ಭೃಂಗಮಾರ್ಗ’ದ ಪ್ರಸ್ತಾವನೆ). ಸಾಹಿತ್ಯದ ಯಾವ ನೆಲೆಗಳು ಯಾಕೆ ಮುನ್ನೆಲೆಗೆ ಬರುತ್ತವೆ ಎಂಬುದಕ್ಕೂ, ಅದನ್ನು ಯಾವಾಗ ಯಾರು ಓದುತ್ತಾರೆ ಎಂಬುದಕ್ಕೂ ನಿಕಟ ಸಂಬಂಧವಿದೆ ಎಂದು ಎಚ್.ಎಸ್.ಆರ್. ಪ್ರತಿಪಾದಿಸುತ್ತಾರೆ.
ಕಳೆದ ಸರಿಸುಮಾರು ನೂರು ವರ್ಷಗಳಲ್ಲಿ ನಮ್ಮ ಸಂಸ್ಕೃತಿಗಳು ಗಳಿಸಿಕೊಂಡಿದ್ದು, ಕಳೆದುಕೊಂಡಿದ್ದು, ಬೇಕೆಂದೇ ಬದಿಗೆ ತಳ್ಳಿದ್ದು ಎಲ್ಲವನ್ನೂ ಮತ್ತೊಮ್ಮೆ ನೋಡುವ, ಕಾಪಾಡಿಕೊಳ್ಳುವ ಕೆಲಸವು ಈಗಾಗಲೇ ಮೊದಲಾಗಿದೆ ಮತ್ತು ರಾಘವೇಂದ್ರರಾವ್ ಅವರೂ ಕೂಡ ತಮ್ಮೆಲ್ಲ ವಿಮರ್ಶಾ ಸಾಹಿತ್ಯದೊಡನೆ ಆ ಕೆಲಸದಲ್ಲಿ ಪ್ರೀತಿಯಿಂದ ತೊಡಗಿಕೊಂಡಿದ್ದಾರೆ.
`ಆಧುನಿಕ ಕನ್ನಡ ಸಾಹಿತ್ಯದಲ್ಲಿ ಇದು ನಿಧಿಧ್ಯಾಸದ ಕಾಲ’- ಇದೂ ಲೇಖಕರದೇ ಮಾತು. ನಮ್ಮ ಲೋಕದೃಷ್ಟಿಯೇ ನಮ್ಮ ಲೋಕದರ್ಶನವನ್ನೂ ರೂಪಿಸುವುದಾದರೂ ಕನ್ನಡಕ ಕಡಿವಾಣವಾಗಬಾರದು ಎಂಬ ಆತಂಕ ಅವರದು. ಎಂಥ ಖಚಿತವಾದ ಧೋರಣೆಯೂ, ತನಗಿರುವ ವಿನಯದ ಮೂಲಕವೇ ಲೋಕವನ್ನು ಸಮೀಪಿಸಬೇಕೆಂಬ, ಅದರಿಂದಲೇ ಅದು ಮುಕ್ತತೆಯನ್ನು ಪಡೆಯಲು ಸಾಧ್ಯವೆಂಬ ಎಚ್.ಎಸ್.ಆರ್. ಅವರ ತಾತ್ತ್ವಿಕ ನಿಲುವಿಗೆ ಅವರ ಬರಹಗಳೇ ಸಾರ್ಥಕ ನಿದರ್ಶನಗಳಾಗಿವೆ.
-ಡಾ. ಚಿಂತಾಮಣಿ ಕೊಡ್ಲೆಕೆರೆ
ಶೀರ್ಷಿಕೆ: ಸಂಗಡ ಲೇಖಕರು : ಡಾ.ಎಚ್.ಎಸ್.ರಾಘವೇಂದ್ರರಾವ್; ಪ್ರಕಾಶಕರು: ಕನ್ನಡ ವೇದಿಕೆ, ಜೈನ್ ವಿ.ವಿ., ಬೆಂಗಳೂರು ಪುಟ: ಬೆಲೆ: ರೂ. 200/-
ಕೃಪೆ:ಪ್ರಜಾವಾಣಿ ಸಾಪ್ತಾಹಿಕ ಪುರವಣಿ
Filed under: ವಿಮರ್ಶೆ | Tagged: ಕನ್ನಡ ವೇದಿಕ ಜೈನ್ ವಿ.ವಿ. ಬೆಂಗಳೂರು, ಡಾ. ಚಿಂತಾಮಣಿ ಕೊಡ್ಲೆಕೆರೆ, ಡಾ.ಎಚ್.ಎಸ್.ರಾಘವೇಂದ್ರರಾವ್;, ಪ್ರಜಾವಾಣಿ ಸಾಪ್ತಾಹಿಕ ಪುರವಣಿ, ಸಂಗಡ | Leave a comment »