ಮಕ್ಕಳ ದಿನದ ಶುಭಾಶಯಗಳು

ಮಕ್ಕಳ ಪುಸ್ತಕ ಹೇಗಿರಬೇಕು?

ನ.ರವಿಕುಮಾರ
ಮಕ್ಕಳಿಗಾಗಿ ಬರೆಯುವುದು ಒಂದು ಮನೋಧರ್ಮ. ಈ ಮನೋಧರ್ಮದ ಕಾರಣಕ್ಕಾಗಿಯೇ ಬರೆದವರು ಮಾತ್ರ ಯಶಸ್ವಿಯಾಗಿದ್ದಾರೆ. ಉದ್ದೇಶಕ್ಕೆ ಬರೆದದ್ದು ಸಾಹಿತ್ಯವೆ?

ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರು ಒಮ್ಮೆ ಮಾತನಾಡುತ್ತಾ ನೊಬೆಲ್ ಪ್ರಶಸ್ತಿ ಪುರಸ್ಕೃತ ಲೇಖಕ ಸಿಂಗರ್‌ನ ಸಂದರ್ಶನವನ್ನು ಪ್ರಸ್ತಾಪಿಸಿದ್ದರು. ಅದರಲ್ಲಿ ಸಂದರ್ಶಕ ಸಿಂಗರ್ ಕುರಿತು `ನೀವು ದೊಡ್ಡವರಿಗೂ ಬರೆದಿದ್ದೀರಿ. ಮಕ್ಕಳಿಗೂ ಬರೆದಿದ್ದೀರಿ. ನಿಮಗೆ ಮಕ್ಕಳಿಗೆ ಬರೆಯುವುದು ಕಷ್ಟವೋ? ದೊಡ್ಡವರಿಗೆ ಬರೆಯುವುದು ಕಷ್ಟವೂ?’ ಎಂದು ಕೇಳುತ್ತಾನೆ. ಅದಕ್ಕೆ ಸಿಂಗರ್ ಉತ್ತರಿಸುತ್ತಾರೆ: `ಮಕ್ಕಳಿಗೆ ಬರೆಯುವುದೇ ತುಂಬ ಕಷ್ಟ. ಕಾರಣ-ದೊಡ್ಡವರ ಮುಂದೆ ನಾನು ಬರೆದ ಪದ್ಯವನ್ನು ಓದಿದಾಗ ಅವರು ದಾಕ್ಷಿಣ್ಯಕ್ಕೋ, ಶಿಷ್ಟಾಚಾರಕ್ಕೋ ತಲೆ ಅಲ್ಲಾಡಿಸಿ ಭೇಷ್ ಎನ್ನಬಹುದು. ಆದರೆ ಮಕ್ಕಳ ಮುಂದೆ ನಾನು ಬರೆದ ಪದ್ಯವನ್ನು ಓದಿದಾಗ ಅವರಿಗೆ ಇಷ್ಟವಾದರೆ ಪೂರ್ತಿ ಕೇಳುತ್ತಾರೆ; ಇಲ್ಲದಿದ್ದರೆ ಆಕಳಿಸಿಬಿಡುತ್ತಾರೆ’ ಎಂದು. ಮಕ್ಕಳಿಗೆ ಬರೆಯುವುದೇ ಕಷ್ಟವಿರುವಾಗ ಮಕ್ಕಳಿಗಾಗಿ ಪುಸ್ತಕ ಪ್ರಕಟಿಸುವುದು ಇನ್ನೂ ಕಷ್ಟದ ಕೆಲಸ.

ಮಕ್ಕಳ ಸಾಹಿತ್ಯದಲ್ಲಿ `ಮಕ್ಕಳೇ ಬರೆದ ಪುಸ್ತಕಗಳು’ ಒಂದು ಬಗೆಯವು. `ಮಕ್ಕಳಿಗಾಗಿ ಬರೆದವು’ ಮತ್ತೊಂದು ಬಗೆಯವು. ಮಕ್ಕಳು ಬರೆವಾಗ ಅವರಿಗೆ ಭಾಷೆಯ, ನಿರೂಪಣೆಯ ತಂತ್ರ, ವಿಧಾನಗಳು ಗೊತ್ತಿರುವುದಿಲ್ಲ. ಅವರು ತಮ್ಮ ಅನುಭವಗಳನ್ನು ತಮಗೆ ತೋಚಿದಂತೆ ಬರೆದುಬಿಡುತ್ತಾರೆ. ಕೆಲವೊಮ್ಮೆ ಅವರಿಗರಿವಿಲ್ಲದೆಯೇ ಉತೃಷ್ಟವಾದದ್ದನ್ನು ಬರೆದುಬಿಡಬಹುದು. ಹೀಗಾಗಿ ಪಾಶ್ವಾತ್ಯರಲ್ಲಿ ಮಕ್ಕಳು ಬರೆದ ಬರಹಗಳನ್ನು ಕೂಡ ಮುಖ್ಯವಾಹಿನಿಯ ಸಾಹಿತ್ಯದ ಜೊತೆಗೇ ನೋಡುವ ಪರಿಪಾಠ ಇದೆ.

ಈ ಹೊತ್ತು ಮಕ್ಕಳಿಗಾಗಿ ಬರೆವ ದೊಡ್ಡವರ ಪುಸ್ತಕಗಳಲ್ಲಿ ಮಕ್ಕಳ ಮೆದುಳಿನ ವಿಕಾಸಕ್ಕೆ ಬೇಕಾದಂತಹ ಪುಸ್ತಕಗಳೇ ಹೆಚ್ಚು. ಹೃದಯ ವಿಕಾಸಕ್ಕೆ ಬೇಕಾದ ಪುಸ್ತಕಗಳು ತೀರಾ ಕಡಿಮೆ. ದೇಹದ ರಚನೆ-ವಿನ್ಯಾಸ, ರೋಗಗಳು-ಗುಣಪಡಿಸುವ ವಿಧಾನಗಳು, ರಾಷ್ಟ್ರೀಯ ಹಬ್ಬಗಳು, ರಾಷ್ಟ್ರಪತಿಗಳು, ಸ್ವಾತಂತ್ರ್ಯ ಹೋರಾಟಗಾರರು, ಕ್ವಿಜ್, ಸಮಯ ಪಾಲನೆ, ಹವ್ಯಾಸ, ವ್ಯಕ್ತಿತ್ವ ವಿಕಾಸ ಮುಂತಾದ ವಿಷಯಗಳ ಬಗೆಗೇ ಹೆಚ್ಚು ಪುಸ್ತಕಗಳು ಪ್ರಕಟವಾಗುತ್ತವೆ. ಇವೆಲ್ಲವೂ ಬೇಕು ನಿಜ. ಆದರೆ ಇವೆಲ್ಲ ಮಕ್ಕಳ ಪಠ್ಯಕ್ರಮದ ವಿಸ್ತರಣೆ ಮಾತ್ರ.

ಇದರಿಂದ ಮಕ್ಕಳ ಬೌದ್ಧಿಕ ವ್ಯಕ್ತಿತ್ವದ ಬೆಳವಣಿಗೆಗೆ ಸಹಾಯಕಾರಿಯೇ ಹೊರತು ಅವರ ಭಾವನಾತ್ಮಕ ವ್ಯಕ್ತಿತ್ವದ ಬೆಳವಣಿಗೆಗಲ್ಲ. ಕರ್ತವ್ಯದ ಬಗೆಗೋ, ಸಮಯ ಪಾಲನೆಯ ಕುರಿತಾಗಿಯೋ, ಸತ್ಯದ ಮಹತ್ವವನ್ನು ತಿಳಿಸಲೋ ಪುಟಗಟ್ಟಲೆ ದಪ್ಪ ದಪ್ಪ ಅಕ್ಷರಗಳಲ್ಲಿ ಮುದ್ರಿಸಿಕೊಟ್ಟರೆ ಅದರ ಪರಿಣಾಮ ಅಷ್ಟಕ್ಕಷ್ಟೇ. ಆದರೆ ಸತ್ಯ ಹರಿಶ್ಚಂದ್ರನ ಕಥೆಯೋ, ಶ್ರವಣಕುಮಾರನ ಮಾತಾ ಪಿತೃಭಕ್ತಿಯ ಕಥೆಯೋ (ಇವು ಗಾಂಧೀಜಿಯವರ ಬದುಕನ್ನೇ ರೂಪಿಸಿದವೆಂಬುದನ್ನು ನೆನಪಿಸಿಕೊಳ್ಳಿ), ಆಲಿ ಬಾಬನ ಕಥೆಯೋ, ಕಿಂದರಜೋಗಿಯ ಕಥೆಯೋ ಬೀರುವ ಪರಿಣಾಮ ಹೆಚ್ಚಿನದು. ಕಥೆ ಕೇಳುತ್ತಾ ಕೇಳುತ್ತಾ ಅವರ ಮನಸ್ಸಿನಲ್ಲಿ ಹುಟ್ಟುವ ಪ್ರಶ್ನೆಗಳು, ಬೆಳೆಯುವ ಭಾವನೆಗಳ ಲೋಕ ವಿಸ್ತಾರದ್ದು.

ಹೀಗಾಗಿ ಎಲ್ಲರೂ ಮಕ್ಕಳಿಗಾಗಿ ಬರೆಯಲಾರರು. ಮಕ್ಕಳಿಗಾಗಿ ಬರೆಯುವುದು ಒಂದು ಮನೋಧರ್ಮ. ಈ ಮನೋಧರ್ಮದ ಕಾರಣಕ್ಕಾಗಿಯೇ ಬರೆದವರು ಮಾತ್ರ ಯಶಸ್ವಿಯಾಗಿದ್ದಾರೆ. ಉದ್ದೇಶಕ್ಕೆ ಬರೆದದ್ದು ಸಾಹಿತ್ಯವೆ? ಈ ನಿಟ್ಟಿನಲ್ಲಿ ರಾಜರತ್ನಂ ಅವರ ಮಕ್ಕಳ ಸೇವೆ/ಮನೋಧರ್ಮ ಅನನ್ಯವಾದದ್ದು. ಮಕ್ಕಳಿಗಾಗಿ ಬರೆದರೆ ತನ್ನ ಕೆಲಸ ಮುಗಿಯಿತು ಎಂದು ಅವರು ಭಾವಿಸಲಿಲ್ಲ. ತಾವೇ ಆ ಪದ್ಯಗಳನ್ನು ಹಾಡುತ್ತಾ, ಹಾಡಿಸುತ್ತಾ ಆಸಕ್ತಿಯನ್ನು ಹುಟ್ಟಿಸಿದರು. ಅವುಗಳನ್ನು ಮಕ್ಕಳಿಗೆ ಕೈಗೆಟುಕುವ ಬೆಲೆಯಲ್ಲಿ ಸ್ವತಃ ತಾವೇ ಪ್ರಕಟಿಸಿದರು. ಮಕ್ಕಳಿಗಾಗಿ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಅವರಿಗೆ ಪುಸ್ತಕಗಳ ಬಹುಮಾನ ನೀಡಿದರು. ಆ ಮೂಲಕ ಸಾಹಿತ್ಯಾಸಕ್ತಿಯನ್ನು ಬೆಳೆಸಿದರು.

ಮಕ್ಕಳ ಪುಸ್ತಕಗಳ ಪ್ರಕಟನೆಗೆ ವಿಪುಲ ಅವಕಾಶಗಳಿದ್ದರೂ ಆ ಕಡೆಗೆ ಯಾರೂ ಗಮನಹರಿಸುತ್ತಿಲ್ಲ. ಚಿಲ್ಡ್ರನ್ ಬುಕ್ ಟ್ರಸ್ಟ್‌ನಂಥಾ ಮಕ್ಕಳಿಗಾಗಿಯೇ ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸುವ ಪ್ರಕಾಶನ ಸಂಸ್ಥೆಗಳು ಕೆಲವೇ ಕೆಲವು. ಎಲ್ಲ ಪುಸ್ತಕಗಳನ್ನು ಪ್ರಕಟಿಸುವ ಪ್ರಕಾಶಕರೇ ಮಕ್ಕಳ ಪುಸ್ತಕಗಳನ್ನೂ ಪ್ರಕಟಿಸುತ್ತಾರೆ. ಇದಕ್ಕೆ ಕಾರಣಗಳು ಇಲ್ಲದಿಲ್ಲ. ಮಕ್ಕಳ ಪುಸ್ತಕಗಳನ್ನು ಪ್ರಕಟಿಸುವಾಗ ಅವುಗಳ ಆಕಾರ, ಗಾತ್ರ ಬೇರೆ ಬೇರೆಯದ್ದಾಗಿರಬೇಕಾಗುತ್ತದೆ. ಬಣ್ಣದ ಚಿತ್ರಗಳಿರಬೇಕಾಗುತ್ತದೆ, ವಿಶೇಷವಾದ ಕಾಗದ, ರಟ್ಟು ಮುಂತಾದವನ್ನು ಉಪಯೋಗಿಸಬೇಕಾಗುತ್ತದೆ. ಹೀಗಾಗಿ ಪ್ರಕಟನೆಯ ವೆಚ್ಚ ದುಬಾರಿಯಾಗುತ್ತದೆ. ಇಂಥ ಪುಸ್ತಕಗಳ ಬೆಲೆ ಹೆಚ್ಚಾಗುತ್ತದೆ (ಬೆಲೆ ಹೆಚ್ಚಾದರೆ ಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತದೆ ಎಂಬ ಭಾವನೆ). ಹೀಗಾಗಿ ಮಕ್ಕಳ ಪುಸ್ತಕಗಳನ್ನು ಪ್ರಕಟಿಸುವವರು ಮಾಮೂಲಿ ಪುಸ್ತಕದ ಅಳತೆ ಮತ್ತು ಆಕಾರದಲ್ಲಿ ಪುಸ್ತಕಗಳನ್ನು  ಪ್ರಕಟಿಸುತ್ತಿದ್ದಾರೆ.

ಪುಸ್ತಕ ಮಾರಾಟ ಜಾಲದ ಸುವ್ಯವಸ್ಥೆಯೇ ಇಲ್ಲವೆಂದಾದರೆ ಮಕ್ಕಳ ಪುಸ್ತಕಗಳ ವಿರತಣೆ ಮತ್ತು ಮಾರಾಟಕ್ಕೆ ಎಲ್ಲಿ ಅವಕಾಶ? ಅಷ್ಟೇ ಅಲ್ಲ; ಮಕ್ಕಳ ಪುಸ್ತಕಗಳು ಬೇರೆ ಬೇರೆ ಆಕಾರದಲ್ಲಿರುವುದರಿಂದ ಅವುಗಳಿಗಾಗಿ ಪ್ರತ್ಯೇಕ ಸ್ಟ್ಯಾಂಡ್‌ಗಳನ್ನು ಮಾಡಿಸಬೇಕಾಗುತ್ತದೆ, ಜೋಡಿಸಬೇಕಾಗುತ್ತದೆ. ಇನ್ನು, ಮಕ್ಕಳು ಇಂಥಾ ಪುಸ್ತಕಗಳನ್ನು ಮುಟ್ಟಲು ಕೆಲ ಮಾರಾಟಗಾರರೂ ಬಿಡುವುದಿಲ್ಲ. ಏನಿದ್ದರೂ ಕಣ್ಣಿನಲ್ಲಿ  ನೋಡಿ ಬೇಕಿದ್ದರೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಪುಸ್ತಕ ಹಾಳಾಗುತ್ತದೆಂಬ ಭಯ! ಪುಸ್ತಕವನ್ನು ಮುಟ್ಟಿ ಅದರ ಸುಖವನ್ನು, ಒಳಗಿನ ವಿವರಗಳನ್ನು ನೋಡದೆ ಮಗು ಪುಸ್ತಕವನ್ನು ಹೇಗೆ ಆರಿಸಿಕೊಳ್ಳುತ್ತದೆ. ಅದರ ಬಗೆಗೆ ಪ್ರೀತಿ ಹೇಗೆ ಹುಟ್ಟುತ್ತದೆ? ಕೆಲ ಇಂಗ್ಲಿಷ್ ಪುಸ್ತಕ ಮಾರಾಟ ಮಳಿಗೆಗಳಲ್ಲಿ ವಾರಕ್ಕೊಂದು ಬಾರಿಯಾದರೂ ಮಕ್ಕಳನ್ನೆಲ್ಲ ಸೇರಿಸಿ ತಮಗಿಷ್ಟವಾದ ಪುಸ್ತಕವನ್ನು ಆರಿಸಿಕೊಂಡು ಓದಿಯೋ, ಹಿರಿಯ ಲೇಖಕರಿಂದ ಓದಿಸಿಯೋ, ಕಥೆ ಹೇಳಿಸಿಯೋ ಆಸಕ್ತಿಯನ್ನು ಬೆಳೆಸುತ್ತಾರೆ. ಅಂಥಾ ಪ್ರಯತ್ನವನ್ನು ಕನ್ನಡದಲ್ಲಿ ಮನೋಹರ ಗ್ರಂಥಮಾಲೆ ಮಾಡುತ್ತಿದೆ. ಒಂದು ಶಾಲೆಗೆ ಒಂದೇ ಪುಸ್ತಕದ ಸುಮಾರು 30 ಪ್ರತಿಗಳನ್ನು ಕೊಡುವುದು. ಗ್ರಂಥಾಲಯ ತರಗತಿಯಲ್ಲಿ  ಮಕ್ಕಳು ಆ ಪುಸ್ತಕಗಳನ್ನು ಓದುವುದು. ಆ ಪುಸ್ತಕ ಓದಿದ ನಂತರ ಅವರ ಅನಿಸಿಕೆಗಳನ್ನು ವಿನಿಮಯ ಮಾಡಿಕೊಳ್ಳುವುದು, ಬರೆಸುವುದು ಮುಂದಿನ ಘಟ್ಟ. (ಇದೇ ರೀತಿಯ ಪ್ರಯೋಗವನ್ನು ಬೆಂಗಳೂರಿನ ಸ್ಮಾರ್ಟ್ ಶಾಲೆಯಲ್ಲಿ ಈ ವರ್ಷದಿಂದ ಅಭಿನವದ ಸಹಯೋಗದಲ್ಲಿ ಪ್ರಯೋಗಕ್ಕೆ ತರಲಾಗುತ್ತಿದೆ). ವಿದೇಶಗಳಲ್ಲಿನ ಶಾಲೆಗಳಲ್ಲಿ ಮಕ್ಕಳು ತಮಗೆ ಬೇಕಾದ ಪುಸ್ತಕಗಳನ್ನು ಮನೆಗೆ ಯಾವುದೇ ಒತ್ತಡವಿಲ್ಲದೆ ಮನೆಗೆ ಒಯ್ಯಬಹುದಂತೆ. ವಾರಾಂತ್ಯಗಳಲ್ಲಿ ಅವರು ಓದಿದ ಪುಸ್ತಕಗಳ ಬಗೆಗೆ ಬರೆದ ಬರವಣಿಗೆಗಳನ್ನು ಆರಿಸಿ ಉತ್ತಮವಾದುವಕ್ಕೆ ಪುಸ್ತಕ ರೂಪದ ಬಹುಮಾನಗಳನ್ನೂ ನೀಡುತ್ತಾರಂತೆ.

ನಮ್ಮಲ್ಲಿ ಮಕ್ಕಳ ಕಥೆಗಳೆಂದರೆ ಪೌರಾಣಿಕ ಕಥೆಗಳು, ಐತಿಹಾಸಿಕ ಕಥೆಗಳು, ಪುರಾಣಪ್ರಸಿದ್ಧರ ಕಥೆಗಳೆಂದು ಮಾತ್ರ ತಿಳಿಯಲಾಗಿದೆ. ಆದರೆ ನಾವು ದಿನನಿತ್ಯ ನೋಡುವ ಘಟನೆಗಳನ್ನೇ, ವಿವರಗಳನ್ನೇ ಕಥೆಗಳನ್ನಾಗಿ ಹೇಳಿದರೆ ಅವುಗಳ ಬಗೆಗೆ ಆಸಕ್ತಿಯೂ ಹೆಚ್ಚುತ್ತದೆ ಮತ್ತು ದಿನನಿತ್ಯದ ವಿವರಗಳಿಗೆ ಅಪ್‌ಡೇಟ್ ಕೂಡ ಆಗುತ್ತಾರೆ. ಇಂತಹ ಅನೇಕ ಪ್ರಯೋಗಗಳನ್ನು ತೇಜಸ್ವಿಯವರು ಮಾಡಿದರು. ತಮ್ಮ ಮಕ್ಕಳು ಕೇಳಿದ ಪ್ರಶ್ನೆಗಳನ್ನೇ ಆಧಾರವಾಗಿಟ್ಟುಕೊಂಡು, ಅವುಗಳಿಗೆ ರುಚಿಕಟ್ಟಾಗಿ ಕಥಾ ಸ್ವರೂಪದಲ್ಲಿ ವೈಜ್ಞಾನಿಕ ಸಂಗತಿಗಳನ್ನು ಕಟ್ಟಿಕೊಟ್ಟ ಅವರದು ಸ್ತುತ್ಯ ಪ್ರಯೋಗ. ಅದಕ್ಕೆ ಬೇಕಾದ ಚಿತ್ರಗಳನ್ನು ಅವರೇ ವಿನ್ಯಾಸ ಮಾಡಿದ್ದು ಪುಸ್ತಕ ಆಕರ್ಷಕವಾಗಲು ಕಾರಣ.

ರಾಷ್ಟ್ರೋತ್ಥಾನ ಸಾಹಿತ್ಯದವರು ಹೊರತಂದಿರುವ `ಭಾರತ ಭಾರತಿ ಪುಸ್ತಕಗಳ ಸರಣಿ’ ಮಕ್ಕಳಿಗಾಗಿ ಮಾಡಿದ ಪ್ರಯೋಗಗಳಲ್ಲಿ ಒಂದು. ಅವುಗಳ ಆಕಾರ, ಮುಖಪುಟ, ಅಕ್ಷರ ವಿನ್ಯಾಸಗಳು ಮಕ್ಕಳಿಗೆ ಓದುವಿಕೆಯ ರುಚಿಯನ್ನು ತೋರಿಸುವಂಥವು. ಹಿಂದೆ ಸೋವಿಯತ್ ಲ್ಯಾಂಡ್‌ನ ಅನುವಾದಿತ ಪುಸ್ತಕಗಳು ಕೂಡ ಮಕ್ಕಳ ಪುಸ್ತಕ ಹೇಗಿರಬೇಕೆಂಬುದಕ್ಕೆ ಸಾಕ್ಷಿ. ರೊಟ್ಟಿಯ ಬಗೆಗೆ ಕಥೆ ಹೇಳುವ ಪುಸ್ತಕ ರೊಟ್ಟಿಯ ಆಕಾರದಲ್ಲಿಯೇ ಮುದ್ರಣಗೊಂಡಿದ್ದು, ಅದರ ಸ್ಪರ್ಶ ಕೂಡ ಮಕ್ಕಳಿಗೆ ಆಸಕ್ತಿ ಹುಟ್ಟಿಸಲು ಕಾರಣವಾಗುತ್ತಿತ್ತು. ಅವುಗಳಲ್ಲಿದ್ದ ದೊಡ್ಡ ದೊಡ್ಡ ಬಣ್ಣಬಣ್ಣದ ಚಿತ್ರಗಳು ಆಕರ್ಷಿಸುತ್ತಿದ್ದವು. ಈಗ ನವಕರ್ನಾಟಕ ಪ್ರಕಾಶನ ಹೊರತರುತ್ತಿರುವ ಮಕ್ಕಳ ಪುಸ್ತಕಗಳು ಮಕ್ಕಳ ಬೌದ್ಧಿಕ ಮತ್ತು ಭಾವನಾತ್ಮಕ ಬೆಳವಣಿಗೆಗೆ ಪೂರಕವಾಗಿವೆ. ಭಾಷಾ ಬಳಕೆ, ಹವ್ಯಾಸವನ್ನು ರೂಢಿಸಿಕೊಳ್ಳುವ ವಿಧಾನ, ಪರಿಣಾಮಕಾರಿ ಓದು ಹೇಗೆ? ನೀರು, ಶಾಖ ಮುಂತಾದವುಗಳ ಬಗೆಗೆ ಮಕ್ಕಳಲ್ಲಿ ಆಸಕ್ತಿ ಹುಟ್ಟಿಸುವ ಪುಸ್ತಕಗಳ ಜೊತೆಗೆ ಅನೇಕ ಮಕ್ಕಳ ಕಥೆ, ಕಾದಂಬರಿಗಳನ್ನು ಪ್ರಕಟಿಸುತ್ತಿದಾರೆ. ಇನ್ನು ಮಕ್ಕಳಿಗಾಗಿ ಪ್ರಕಟಿಸುತ್ತಿರುವ ಇನ್ನೊಂದು ಸಂಸ್ಥೆ ಸಪ್ನಾ ಬುಕ್ ಹೌಸ್. ದಿವ್ಯದರ್ಶನ ಮಾಲೆ, ಮಹಿಳೆಯರು, ಮುಂತಾದ ಮಾಲಿಕೆಯ ಪುಸ್ತಕಗಳು ಹಿಂದೆ ಐಬಿಎಚ್ ಪ್ರಕಾಶನ ಸಂಸ್ಥೆಯವರು ಹೊರತಂದ ಕರ್ನಾಟಕ ನಾಡು ನುಡಿ ಪರಂಪರೆಯ ಪುಸ್ತಕಗಳನ್ನು ನೆನಪಿಸುತ್ತವೆ.

ನಮಗಿರುವ ಸೌಲಭ್ಯ ಮತ್ತು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಕನ್ನಡದಲ್ಲಿ ಅತ್ಯುತ್ತಮವಾದ ಪುಸ್ತಕಗಳನ್ನು  ಹೊರತರಬಹುದು. ಕರ್ನಾಟಕದಲ್ಲಿ ಸುಮಾರು 70 ಸಾವಿರ ಶಾಲೆಗಳಿವೆಯೆಂಬ ಅಂದಾಜು. ಈ ಶಾಲೆಗಳಿಗೆ ಒಂದೊಂದು ಪುಸ್ತಕವೆಂದರೆ 70 ಸಾವಿರ ಪ್ರತಿಗಳನ್ನು ಪ್ರಕಟಿಸಬಹುದು. ಈ ಶಾಲೆಯಲ್ಲಿರುವ ಮಕ್ಕಳಿಗೊಂದರಂತೆ ಪ್ರಕಟಿಸಿದರೆ ಅದೆಷ್ಟು ಲಕ್ಷ ಪ್ರತಿಗಳು ಮಾರಾಟವಾಗಬೇಕು? ಹೆಚ್ಚು ಪ್ರತಿಗಳನ್ನು ಮುದ್ರಿಸಿದರೆ ಬೆಲೆಯೂ ಕಡಿಮೆಯಾಗುತ್ತದೆ. ಆದರೆ ಈ ಕುರಿತು ಯಾರೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ.

ನಮ್ಮಲ್ಲಿ ಸಾಹಿತ್ಯ ಸಮ್ಮೇಳನ, ಪುಸ್ತಕ ಮೇಳಗಳಿಗೆ ಮಕ್ಕಳನ್ನು ಕರೆದುಕೊಂಡು ಬರುತ್ತಾರಾದರೂ ಅವರಿಗೆ ಬೇಕಾದ ಪುಸ್ತಕವನ್ನು ಕೊಡಿಸುವುದಿಲ್ಲ. ಪೋಷಕರು ತಾವೇ ನಿರ್ಧರಿಸಿದ ಪುಸ್ತಕವನ್ನು ಕೊಡಿಸುವುದೇ ಹೆಚ್ಚು. ಇನ್ನು ಶಾಲಾ ಕಾಲೇಜು ಗ್ರಂಥಾಲಯಗಳಿಗೆ ಪುಸ್ತಕ ಆರಿಸಲು/ಖರೀದಿಸಲು ಬರುವವರೂ ಕೂಡ ಕೇಳುವುದು `ನಮ್ಮ ಮಕ್ಕಳ/ವಿದ್ಯಾರ್ಥಿಗಳ ಪ್ರಾಜೆಕ್ಟ್, ಮನೆಪಾಠಗಳಿಗೆ ಅನುಕೂಲವಾಗುವಂಥ ಪುಸ್ತಕಗಳನ್ನು ಕೊಡಿ’ ಎಂದು. ಇನ್ನು ಪಠ್ಯಪುಸ್ತಕಗಳ ಮಾತಂತೂ ದುರಂತವೇ ಸರಿ. ಬೇರೆ ಬೇರೆ ವ್ಯವಸ್ಥೆಗಳಿಗಾಗಿ ಹಣ ಖರ್ಚು ಮಾಡುವ ಸರ್ಕಾರ ಪಠ್ಯ ಪುಸ್ತಕವನ್ನು ಆಕರ್ಷಕವಾಗಿ ಪ್ರಕಟಿಸಲು ಆಸಕ್ತಿಯನ್ನು ತೋರುವುದಿಲ್ಲ. ಪುಸ್ತಕವೇ ಆಕರ್ಷಕವಾಗಿಲ್ಲದಿದ್ದರೆ ಓದಿನ ರುಚಿ ಮಕ್ಕಳಿಗೆ ಹತ್ತುವುದಾದರೂ ಹೇಗೆ? ಅದಕ್ಕೆ ಬಳಸುವ ಕಾಗದ, ಕಳಾಹೀನ ಚಿತ್ರಗಳು ಪುಸ್ತಕದ್ವೇಷಿಗಳನ್ನಾಗಿಸಿದರೆ ಆಶ್ಚರ್ಯವಿಲ್ಲ.

ಅನೇಕ ಹಬ್ಬಗಳು ಬರುತ್ತವೆ. ಮಕ್ಕಳ ದಿನಾಚರಣೆ, ಶಾಲಾ ವಾರ್ಷಿಕೋತ್ಸವ, ಸ್ವಾತಂತ್ರ್ಯ ದಿನ ಇತ್ಯಾದಿ. ಆ ಸಂದರ್ಭಗಳಲ್ಲೆಲ್ಲ ದೊಡ್ಡವರಿಗಾಗಿ ಬರೆದ ನಾಟಕಗಳನ್ನೋ, ಬರಹಗಳನ್ನೋ ಉರು ಹೊಡೆಸಿ ಪ್ರದರ್ಶಿಸುವ ಸಂಪ್ರದಾಯವೇ ಹೆಚ್ಚು. ಸ್ವಲ್ಪ ಆಸಕ್ತಿ ಇರುವ ಶಿಕ್ಷಕರಾಗಿದ್ದಲ್ಲಿ ಮಕ್ಕಳ ಪಾಠವನ್ನೇ ವಿಸ್ತರಿಸಿ ಅಥವಾ ಅವರ ಭಾವನಾತ್ಮಕ ವ್ಯಕ್ತಿತ್ವದ ವಿಕಾಸಕ್ಕೆ ಪೂರಕವಾದ ನಾಟಕಗಳನ್ನು ಬರೆಯಬಹುದು. ಹೀಗಾದಾಗ ಅಂಥಾ ಬರಹಗಳು ಮಕ್ಕಳೇ ಅಭಿನಯಿಸಲು ಸಾಧ್ಯವಾಗುತ್ತದೆ. ಇದು ಒಂದು ಪ್ರಯೋಗ. ಇಂಥಾ ಅನೇಕ ಅವಕಾಶಗಳಂತೂ ಇದ್ದೇ ಇವೆ. ಪ್ರತಿವರ್ಷ ಶಾಲೆಯ ಗೋಡೆ ಪತ್ರಿಕೆಗಳಲ್ಲಿ, ಶಾಲಾ ಮ್ಯಾಗಝೀನ್‌ಗಳಲ್ಲಿ ಮಕ್ಕಳ ಬರಹಗಳು ಪ್ರಕಟವಾಗುತ್ತವೆಯಾದರೂ ಅವು ಸಂಕಲಿತವಾಗದೇ ಯಾರ ಗಮನಕ್ಕೂ ಬಾರದೆ ಹಾಗೇ ಮರೆಯಾಗಿಬಿಡುತ್ತವೆ. ಇಂಥ ಬರಹಗಳನ್ನು ಗಮನಿಸುವ, ಗುರುತಿಸುವ ಕೆಲಸವನ್ನು ಮಾಡಬೇಕು.

ನಮ್ಮ ಮಕ್ಕಳಿಗೆ ಹವ್ಯಾಸಗಳೆಂದರೆ ಟೀವಿ ನೋಡುವುದು, ಆಟವಾಡುವುದು ಎಂದಾಗಿಬಿಟ್ಟಿದೆ. ಪುಸ್ತಕಗಳನ್ನು ಓದುವುದು ಒಳ್ಳೆಯ ಹವ್ಯಾಸವೆಂಬುದನ್ನು ಮನದಟ್ಟುಮಾಡಿಕೊಡಬೇಕಿದೆ. ಹೀಗಾದಲ್ಲಿ ಮಾತ್ರ ಪುಸ್ತಕಗಳ ಮೂಲಕ ಸಂಸ್ಕೃತಿಯನ್ನು ಅರಿಯುವ ಕೆಲಸ ಮುಂದೆ ಸಾಗುತ್ತದೆ.

ಕೃಪೆ : ಪ್ರಜಾವಾಣಿ ಸಾಪ್ತಾಹಿಕ ಪುರವಣಿ – 14.11.2010

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: