ರಹಮತ್ ತರೀಕೆರೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಾಗಿ ಅಭಿನಂದನೆಗಳು

ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾ ನಿಕಾಯದ ಡೀನ್ ಡಾ.ರಹಮತ್ ತರೀಕೆರೆ ಅವರ `ಕತ್ತಿಯಂಚಿನ ದಾರಿ’ ಕೃತಿಗೆ ಪ್ರಸಕ್ತ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾ ನಿಕಾಯದ ಡೀನ್ ಡಾ.ರಹಮತ್ ತರೀಕೆರೆ ಅವರ `ಕತ್ತಿಯಂಚಿನ ದಾರಿ’ ಕೃತಿಗೆ ಪ್ರಸಕ್ತ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

`ಈ ಕೃತಿಯನ್ನು 2006ರಲ್ಲಿಯೇ ರಚಿಸಿದ್ದು, ಈ ಪ್ರಶಸ್ತಿಯಿಂದ ನನಗೆ ಅತೀವ ಸಂತೋಷವಾಗಿದೆ. ನನ್ನ ಬೌದ್ಧಿಕ ಬೆಳವಣಿಗೆಗೆ ಕಾರಣವಾದ ಹಂಪಿ ಕನ್ನಡ ವಿ.ವಿ.ಯು 19ನೇ ನುಡಿಹಬ್ಬದ ಸಂಭ್ರಮದಲ್ಲಿರುವಾಗ ಈ ಪ್ರಶಸ್ತಿ ಘೋಷಣೆಯಾಗಿರುವುದರಿಂದ ಸಂತಸ ಉತ್ತುಂಗಕ್ಕೇರಿದೆ. ಈ ಎರಡೂ ಸಮ್ಮಿಲನಗಳ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಕನ್ನಡ ವಿ.ವಿ.ಗೆ ಸಮರ್ಪಿಸುತ್ತೇನೆ’ ಎಂದು ಅವರು ಪ್ರತಿಕ್ರಿಯಿಸಿದರು.

– ಕೃಪೆ ಪ್ರಜಾವಾಣಿ


ರಹಮತ್ ತರೀಕೆರೆ : ಕತ್ತಿಯಂಚಿನ ದಾರಿ (೨೦೦೬)

ಈ ಪುಸ್ತಕದ ಶೀರ್ಷಿಕೆಯು, ನಮ್ಮ ಲೇಖಕರೊಬ್ಬರು ಸಾಹಿತ್ಯ ಸಮ್ಮೇಳನದಲ್ಲಿ ಮಾಡಿದ ಭಾಷಣಕ್ಕೆ ಮಾಡಿದ ಪ್ರತಿಕ್ರಿಯೆಯಿಂದ ಬಂದಿದ್ದು;  ಇದು ನಮ್ಮ ಸುತ್ತ ಏರ್ಪಟ್ಟಿರುವ ಪರಿಸರಕ್ಕೂ ಅದನ್ನು ಮುಖಾಮುಖಿ ಮಾಡುತ್ತ ಹುಟ್ಟುತ್ತಿರುವ ನಮ್ಮ ಬರೆಹಕ್ಕೂ ನಮಗೂ ಮಧ್ಯೆ ಹುಟ್ಟಿರುವ ಬಿಕ್ಕಟ್ಟುಗಳಿಗೆ ರೂಪಕವಾಗಬಲ್ಲದು ಎಂದು ಅನಿಸಿತು. ಸಾಹಿತ್ಯ ಕೃತಿಯ ಹೊರಗಿನ ಆಕೃತಿ ಮತ್ತು ಒಳಗಿನ ಇರುವ ಆಶಯ – ಇವುಗಳ ನಡುವಣ ಸಂಬಂಧದಲ್ಲಿ ವೈರುಧ್ಯಗಳಿರುತ್ತವೆ. ಈ ವೈರುಧ್ಯಗಳ ನಡುವಣ ಸೆಳೆದಾಟಗಳ ಶೋಧ ಮಾಡುವುದು ಸಾಹಿತ್ಯ ವಿಮರ್ಶೆಗೆ ಯಾವತ್ತೂ ಸವಾಲು. ಇಲ್ಲಿನ ಲೇಖನಗಳಲ್ಲಿ ಇಂತಹದೊಂದು ಶೋಧದ ಸಣ್ಣ ಯತ್ನವಿದೆ. ಸಾಹಿತ್ಯ ವಿಮರ್ಶೆಯಲ್ಲಿ ನಿರ್ದಿಷ್ಟ ವಾದವನ್ನು ಇಟ್ಟುಕೊಂಡು ಅದಕ್ಕೆ ಬೇಕಾದ ಸಾಕ್ಷ್ಯಗಳನ್ನು ಗುಡ್ಡೆ ಹಾಕಿಕೊಂಡು ಪ್ರತಿಪಾದನೆ ಮಾಡುವುದು ಸುಲಭ. ಆದರೆ ಕೃತಿಗಳು ಬಿಟ್ಟುಕೊಡುವ ಹಲವು ವಿಭಿನ್ನ ಕೆಲವೊಮ್ಮೆ ಪರಸ್ಪರ ವಿರುದ್ಧ ದನಿಗಳನ್ನು ಹಿಡಿದು, ಒಂದಕ್ಕೆ ತೆತ್ತುಕೊಳ್ಳದೆ, ಮತ್ತೊಂದನ್ನು ಕಡೆಗಣಿಸದೆ ಅರ್ಥಮಾಡಿಕೊಳ್ಳುವುದು ಕಷ್ಟದ ಕೆಲಸ; ಈ ಕಷ್ಟ ವಿಮರ್ಶೆಯದು ಮಾತ್ರವಲ್ಲ, ನನ್ನನ್ನೂ ಒಳಗೊಂಡಂತೆ ನನ್ನ ತಲೆಮಾರಿನ ಅನೇಕರ ನಡೆ ಮತ್ತು ನುಡಿಗಳ ನಡುವೆ ಕಾಣಿಸಿರುವ ಕಷ್ಟ ಕೂಡ.


ಇದೊಂದು ಬಿಕ್ಕಟ್ಟಿನ ಕಾಲ; ಚರಿತ್ರೆಯಲ್ಲಿ ಬಿಕ್ಕಟ್ಟಿಲ್ಲದ ಕಾಲವಾದರೂ ಯಾವುದು? ಆದರೆ ನಮ್ಮ ನಾಡಿನ ಚರಿತ್ರೆಯಲ್ಲಿ ಯಾವತ್ತೂ ಇಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿರಲಿಲ್ಲ. ಜಗತ್ತಿನ ದೊಡ್ಡ ಮಿಲಿಟರಿ ಶಕ್ತಿಗಳು, ಕೋಮುವಾದ, ಪ್ರಭುತ್ವಗಳು ಹುಟ್ಟಿಸಿರುವ ಕ್ರೌರ್ಯ, ಅದಕ್ಕೆ ಎದುರಾಗಿ ಹುಟ್ಟಿಕೊಂಡ ಜನರ ಪ್ರತಿರೋಧಗಳು, ಮಧ್ಯಮವರ್ಗದ ಅವಕಾಶವಾದಿ ವರ್ತನೆ, ಜನರಿಗಾಗಿ ಕೆಲಸ ಮಾಡುವ ಚಳುವಳಿಗಾರರ ದಮನ – ಇವೆಲ್ಲವೂ ನಮ್ಮ ಓದು ಮತ್ತು ಬರೆಹದ ಮೇಲೆ ಹೇಗೋ ಆವರಿಸಿಕೊಂಡಿವೆ. ಇವನ್ನು ಮರೆತು ಬರೆಯುವಂತಿಲ್ಲ; ಮರೆಯದೆ ಬರೆದರೆ, ಬರೆದ ಬರೆಹವು ಆತ್ಮವಿಶ್ವಾಸ ಕೊಡುವುದಕ್ಕೆ ಬದಲಾಗಿ ಪ್ರಶ್ನೆಯಾಗಿ ಎದುರು ನಿಂತು ಕಾಡುತ್ತದೆ. ಇದನ್ನೆ ಕತ್ತಿಯಂಚಿನ ಹಾದಿಯಲ್ಲಿ ನಡೆವ ಕಷ್ಟ ಎಂದು ನಾನು ಭಾವಿಸಿದ್ದೇನೆ. ಕತ್ತಿಯಲುಗಿನ ಮೇಲೆ ನಡೆದರೆ ಕಾಲು ಕತ್ತರಿಸಿ ಹೋಗುತ್ತದೆ; ಬಾಗಿ ಎತ್ತಿಕೊಂಡರೆ ಕೈಯ ಆಯುಧವಾಗುತ್ತದೆ; ಸ್ವವಿಮರ್ಶೆಯನ್ನಾಗಿ ಮಾಡಿ ಚುಚ್ಚಿಕೊಂಡರೆ, ಒಡಲಲ್ಲಿ ಮುರಿದು ನೋವುಂಟು ಮಾಡುತ್ತದೆ……
– ರಹಮತ್ ತರೀಕೆರೆ
(ಮುನ್ನುಡಿಯಿಂದ)

ಕೃಪೆ : ಪುಸ್ತಕ ಜಗತ್ತು: ರಹಮತ್ ತರೀಕೆರೆ

 

 

ನಾಚಿಕೆಯಿಂದ ತಲೆತಗ್ಗಿಸುವ ದಿನ


ಡಿಸೆಂಬರ‍್ 6, 1992.
ತಮ್ಮ ಜಾತ್ಯಾತೀತ ಸಂವಿಧಾನದ ಬಗ್ಗೆ ಹೆಮ್ಮೆ ಪಡುವಂತಹ ಭಾರತೀಯರೆಲ್ಲರೂ ನಾಚಿಕೆಯಿಂದ ತಲೆತಗ್ಗಿಸುವ ದಿನ. ಈ ದಿನದಂದು ಭಾರತೀಯರ ಹೆಮ್ಮೆಯ ಜಾತ್ಯಾತೀತ, ಪ್ರಜಾಪ್ರಭುತ್ವ ಹಾಗೂ ಸಂವಿಧಾನ ನಿಷ್ಟೆಯ ಮಹಾ ಗೋಪುರಗಳು ನೆಲಕಚ್ಚಿದ ದಿನ.

ರೇಡಿಯೋ ಅಂಗಡಿಯಿಂದ ಆಕಸ್ಮಿತವಾಗಿ ವ್ಯಂಗ್ಯಲೋಕಕ್ಕೆ ಜಿಗಿದ ಪಿ. ಮಹಮ್ಮದ್ ಇಂದು ನಮ್ಮೊಂದಿಗಿನ ಅತ್ಯುತ್ತಮ ವ್ಯಂಗ್ಯಚಿತ್ರಕಾರರಲ್ಲೊಬ್ಬರು. ದಕ್ಷಿಣ ಕನ್ನಡ ಜಿಲ್ಲೆಯ ಪಡುಬಿದ್ರಿಯ ಮಹಮ್ಮದ್ ಇಂದು ಪರಿಚಿತ ಹೆಸರು. `ಸಂಯುಕ್ತ ಕರ್ನಾಟಕ’, `ಮುಂಗಾರು’ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಕಾರರಾಗಿ ದುಡಿದಿರುವ ಮಹಮ್ಮದ್  ಖ್ಯಾತ ಆಂಗ್ಲ ದೈನಿಕ `ಹಿಂದುಸ್ತಾನ್ ಟೈಮ್ಸ್’ನ ಪ್ರತಿಷ್ಟಿತ ವ್ಯಂಗ್ಯಚಿತ್ರ ಪ್ರಶಸ್ತಿಯನ್ನು ಕರ್ನಾಟಕಕ್ಕೆ 3 ಬಾರಿ ತಂದುಕೊಟ್ಟ ಹೆಮ್ಮೆ ಇವರದ್ದು. ಹೆಸರಾಂತ ವ್ಯಂಗ್ಯಚಿತ್ರಕಾರ ಆರ‍್.ಕೆ.ಲಕ್ಷ್ಮಣರ ರೇಖೆಗಳಿಗೆ ಮಾರುಹೋದ ಇವರು ಸದಾ ಸಮಾಜದ ನೋವಿಗೆ ಸ್ಪಂದಿಸಿದರು. ಕೇಂದ್ರ ಸರ್ಕಾರದ ಆರ್ಥಿಕ ನೀತಿಯಿಂದ ಹಿಡಿದು ಅಯೊದ್ಯೆಯವರೆಗೆ ಇವರ ಬತ್ತಳಿಕೆಯಲ್ಲಿ ಹಲವು ವ್ಯಂಗ್ಯಬಾಣಗಳು.

ಕೋಮುವಾದ ತನ್ನ ಕರಾಳ ಹಸ್ತಗಳನ್ನು ಎಲ್ಲೆಡೆ ಚಾಚುತ್ತಿರುವುದನ್ನು ಕಂಡ ಖ್ಯಾತ ವ್ಯಂಗ್ಯಚಿತ್ರಕಾರ ಅಬಿದ್ ಸುರ್ತಿ `ನನ್ನ ಜೋಳಿಗೆಯಲ್ಲಿ ಇನ್ನು ವ್ಯಂಗ್ಯದ ಬಾಣಗಳಿಲ್ಲ’ ಎಂದು ಕಣ್ಣೀರಿಟ್ಟರು. ಅಂತೆಯೇ ಪಿ. ಮಹಮ್ಮದ್ ವ್ಯಂಗ್ಯರೇಖೆಗಳಲ್ಲಿ ಕಂಡ ವಿಷಾದದ ಚಿತ್ರಗಳು ಈ ಪುಸ್ತಕದಲ್ಲಿವೆ.

-ಪುಸ್ತಕದ ಬೆನ್ನುಡಿಯಿಂದ

ಶೀರ್ಷಿಕೆ: ಅಯೊಧ್ಯಾ ಕಣೀರ ಕಾಂಡ ಕಲಾವಿದರು:ಪಿ. ಮಹಮ್ಮದ್ ಪ್ರಕಾಶಕರು:ಜನಸ್ನೇಹ ಪ್ರಕಾಶನ ಪುಟ:28 ಮೊದಲ ಮುದ್ರಣ:1993 ಬೆಲೆ:ರೂ.3/-