ಮೇ ಡೇ ಚಿರಾಯುವಾಗಲಿ

ಶೀರ್ಷಿಕೆ: ಮೇ ಡೇ ಹುತಾತ್ಮದ ಮಹಾಗಾಥೆ  ಲೇಖಕರು:ವಿಲಿಯಂ ಆಡಲ್ ಮನ್  ಅನುವಾದ:ರಾಹು  ಪುಟಗಳು:278 ಬೆಲೆ:200/-

ಗಣಿಯಾಳದಲ್ಲಿ ಸಿಕ್ಕಿಹಾಕಿಕೊಂಡ 33 ಕಾರ್ಮಿಕರನ್ನು ಮೇಲಕ್ಕೆತ್ತಿದ ಅಭೂತಪೂರ್ವ ಘಟನೆಯ ದಾಖಲೆ ಕನ್ನಡದಲ್ಲಿ !

. . .
ರಾಷ್ಟಪತಿ ಬಂದರೆಂಬ ಸುದ್ಧಿ ಕೇಳಿ ಎಲ್ಲಾ ಕ್ಯಾಮರಾಗಳೂ ಮಾಧ್ಯಮ ಕೇಂದ್ರಕ್ಕೆ ದೌಡಾಯಸಿದವು.

ಅದುವರೆಗೆ ಸುರಕ್ಷಿತವಾಗಿ ಬಚ್ಚಿಟ್ಟಿದ್ದ ಕೆಂಪಕ್ಷರದ ಚೀಟಿ ಆಂಡ್ರೂ ಸುಗಾರೆಯ ಕೈ ದಾಟಿ ಈಗ ಪಿನೆರೊ ಕೈಗೆ ಬಂತು. ಆಳದಿಂದ ಬಂದ ಆ ಪುಟ್ಟ ಸಂದೇಶವನ್ನು ರಾಷ್ಟ್ರಪತಿ ಎತ್ತಿ ಹಿಡಿದು ಕ್ಯಾಮೆರಾಗಳಿಗೆ ಪ್ರದರ್ಶಿಸಿದರು. `ನಾವು 33 ಜನರೂ ಸುರಕ್ಷಿತವಾಗಿದ್ದೇವೆ’ ಎಂಬರ್ಥದ ಬರಹದ `ಲೋಸ್ 33′ (ಈ 33) ಎಂಬ ಪುಟ್ಟ ಪದ ಇಡೀ ಅಮೆರಿಕಾ ಖಂಡದ ಸಹಸ್ರಾರು ಟಿವಿ ಚಾನೆಲ್ ಗಳಲ್ಲಿ, ಪತ್ರಿಕೆಗಳಲ್ಲಿ ತಲೆಬರಹವಾಗಿ ರಾರಾಜಿಸಿತು.

ಅದೇ ವೇಳೆಗೆ ಡ್ರಿಲ್ಲಿಂಗ್ ಯಂತ್ರದ ತಾಂತ್ರಿಕ ಸಿಬ್ಬಂದಿ ಭಾರೀ ಗಾತ್ರದ ತಂತಿ ಸುರುಳಿಯನ್ನು ಹೊತ್ತು ತಂದಿದ್ದರು. ತಂತಿಯ ತುದಿಯಲ್ಲಿ ಒಂದು ಪುಟ್ಟ ಫೋನ್ ಉಪಕರಣವೊಂದನ್ನು ಕಟ್ಟಿ ಮೆಲ್ಲಗೆ ರಂಧ್ರದ ಮೂಲಕ ಇಳಿ ಬಿಟ್ಟರು. `ಸಹಾಯ ಬರಲಿದೆ, ಗಣಿ ಸಚಿವರು ತುಸು ಹೊತ್ತಿನಲ್ಲೇ ಮಾತಾಡಲಿದ್ದಾರೆ. ನಿಮ್ಮಲ್ಲಿ ಯಾರಾದರೊಬ್ಬರು ರಂಧ್ರದ ಬಳಿ ನಿಂತಿರಿ’ ಎಂಬ ಪುಟ್ಟ ಸಂದೇಶದ ಚೀಟಿಯೊಂದನ್ನು ಫೋನ್ ಜತೆ ಕಟ್ಟಿದ್ದರು. ಅದು ಆ ಮುಷ್ಟಿಯಗಲದ ರಂಧ್ರದಲ್ಲಿ ಮೆಲ್ಲಮೆಲ್ಲನೆ ಇಳಿಯುತ್ತ 680 ಮೀಟರ‍್ ಆಳದಲ್ಲಿದ್ದವರನ್ನು ತಲುಪಿತು. ರೆಕಾರ್ಡಿಂಗ್ ವ್ಯವಸ್ಥೆಯನ್ನೆಲ್ಲ ಮತ್ತೊಮ್ಮೆ ಪರಿಶೀಲಿಸಿದ್ದಾಯಿತು.

ಅರ್ಧ ಗಂಟೆಯಲ್ಲಿ ಪಾತಾಳದಲ್ಲಿ ಫೋನ್ ರಿಂಗಾಯಿತು. ಕಾರ್ಮಿಕ ತಂಡದ ಮುಖ್ಯಸ್ಥ ಲೂಯಿಸ್ ಊರ್ಝುವಾ ಫೋನ್ ಎತ್ತಿಕೊಂಡ.

`ಹೇಗಿದ್ದೀರಾ ಎಲ್ಲ?’ ಸಚಿವರ ಪ್ರಶ್ನೆಗೆ ಕೆಳಿಗಿನಿಂದ ತುಸು ಕ್ಷೀಣವಾದ ಆದರೆ ಸ್ಪಷ್ಟ ಉತ್ತರ ಬಂತು.

`ನಾವೆಲ್ಲಾ ಕ್ಷೇಮವಾಗಿದ್ದೇವೆ. ರಕ್ಷಣೆ ಬರುವುದನ್ನೇ ಕಾಯ್ತಾ ಇದ್ದೇವೆ’ ಉರ್ಝುವಾ ಧ್ವನಿ.

ಗೋಲ್ ಬೋರ್ನ್ ಮುಂದಿನ ಮಾತು ಹೇಳುವ ಮೊದಲೇ ಕೆಳಗಿನಿಂದ ಮಾತು ಕೇಳಿಸಿತು:

`ಸರ‍್, ಒಂದು ಕ್ಷಣ ನಿಲ್ಲಿ. ನಾವೆಲ್ಲ ಇಲ್ಲಿ ಒಟ್ಟಾಗಿ ನಿಂತಿದ್ದೇವೆ’.

ತುಸು ಅವಾಕ್ಕಾದ ಗಣಿಸಚಿವರು ಫೋನನ್ನು ಆಚೆ ಕಿವಿಯಿಂದ ಈಚೆ ಕಿವಿಯತ್ತ ತರುತ್ತಲೇ ಕೆಳಗಿನಿಂದ ತೀರ ಪರಿಚಿತ ವೃಂದಗಾನ ಕೇಳಬಂತು –

`ಪ್ಯೂರೊಚಿಲೀ ಎಸ್ತೂಸಿಲೋ ಅಜುವಾಲ್ಡೊ. . .’

ಗೋಲ್ ಬೋರ್ನ್ ಹಠಾತ್ತನೆ ಸೆಟೆದು ನಿಂತರು. ಸಚಿವರ ಸುತ್ತ ನಿಂತವರಿಗೆ ತುಸು ಗಾಬರಿ. ಏನಾಗಿರಬಹುದು?

ಎರಡು ನಿಮಿಷ ಮೌನವಾಗಿ ಸೆಟೆದೇ ನಿಂತಿದ್ದ ಸಚಿವರು,

`ಓ ಎಲ್ ಸಿಲೋ…. ಓ ಎಲ್ ಸಿಲೊ …. ಕೊಂತ್ರಾಲಾ ಒಪ್ರೆಸೆನ್ ….’ ಎಂದು ರಾಗವಾಗಿ ಹೇಳಿದಾಗ ಎಲ್ಲರಿಗೂ ಅರ್ಥವಾಯಿತು.

ಪಾತಾಳದಲ್ಲಿದ್ದ ಎಲ್ಲ 33 ಜನರೂ ಒಟ್ಟಾಗಿ ಚಿಲಿಯ ರಾಷ್ಟಗೀತೆಯನ್ನು ಹಾಡುತ್ತಿದ್ದರು!

ನೆರೆದಿದ್ದವರ ಕಣ್ಣು ಮಂಜಾಗಿತ್ತು.
….

– ಪುಸ್ತಕದೊಳಗಿನಿಂದ (ಪುಟ : 39-40)

ಏಳುನೂರು ಮೀಟರ‍್ ಆಳದಲ್ಲಿ 33 ಗಣಿಗಾರರು ಸಿಕ್ಕಿಹಾಕಿಕೊಂಡಿದ್ದಾರೆ. ಹದಿನೇಳು ದಿನ ಶ್ರಮಿಸಿ 3 ಅಂಗುಲ ಬೋರ‍್ ರಂಧ್ರ ಕೊರೆದು ನೋಡಿದರೆ ಅವರೆಲ್ಲ ಬದುಕಿರುವುದು ಗೊತ್ತಾಗಿದೆ. ಇನ್ನೂ ದೊಡ್ಡ ರಂಧ್ರ ಕೊರೆದು ಅವರನ್ನು ಮೇಲಕ್ಕೆತ್ತಲು ನಾಲ್ಕು ತಿಂಗಳೇ ಬೇಕು. ಅದುವರೆಗೆ ಆ ಮುಷ್ಟಿಗಾತ್ರದ ರಂಧ್ರದ ಮೂಲಕ ಅವರಿಗೆ ಆಹಾರ-ಔಷಧ ರವಾನಿಸಬೇಕು; ಅವರನ್ನು ಮೇಲಕ್ಕೆತ್ತಲು ರಾಕೆಟ್ ಮಾದರಿಯ ಲಿಫ್ಟ್ ನಿರ್ಮಿಸಬೇಕು.,

2010ರ ಅಕ್ಟೋಬರ‍್ ನಲ್ಲಿ ಚಿಲಿ ಎಂಬ ಪುಟ್ಟ ದೇಶ ಎಲ್ಲರನ್ನೂ ಸುರಕ್ಷಿತ ಮೇಲೆತ್ತಿದಾಗ ಆ ಮಹಾಸಾಹಸದ ವೀಕ್ಷಣೆಗೆ 3000 ವರದಿಗಾರರು ಸೇರಿದ್ದರು. ನೂರು ಕೋಟಿಗೂ ಹೆಚ್ಚು ಜನರು ನೇರ ಪ್ರಸಾರದಲ್ಲಿ ಅದನ್ನು ಕಣ್ಣಾರೆ ನೋಡಿದರು. ಸಾಮಾನ್ಯ ಪ್ರಜೆಗಳ ಈ ಅಸಾಮಾನ್ಯ ಸಾಧನೆ `ಮನುಕುಲಕ್ಕೇ ಸ್ಫೂರ್ತಿದಾಯಕ ಸಾಧನೆ’ ಎಂಬ ಶ್ಲಾಘನೆಗೆ ಪಾತ್ರವಾಯಿತು.

ಕಲ್ಪನೆಗೂ ಮೀರಿದ ಈ ನೈಜಕತೆಯನ್ನು ಥ್ರಿಲ್ಲರ‍್ ಶೈಲಿಯಲ್ಲಿ ಬರೆದ ಸರೋಜಾ ಪ್ರಕಾಶ್ ಭೌತವಿಜ್ಞಾನದ ಉಪನ್ಯಾಸಕಿಯಾಗಿದ್ದವರು. ವಿಜ್ಞಾನವನ್ನು ಎಲ್ಲರಿಗೂ ಅರ್ಥವಾಗುವಂತೆ ಬರೆಯುವ ಇವರು ಚಿಲಿ ಸಾಹಸದ ಕಥೆಯನ್ನು ಎಲ್ಲರಿಗೂ ಇಷ್ಟವಾಗುವಂತೆ ಬರೆದಿದ್ದಾರೆ. ಈ ಅಪೂರ್ವ ಘಟನೆ ಇಂಗ್ಲೀಷ್ ನಲ್ಲಿ ಕಾದಂಬರಿಯಾಗಿಯೋ, ಸಿನೆಮಾ ಆಗಿಯೋ ಬರುವ ಮೊದಲೇ ಕನ್ನಡ ಸಾಹಿತ್ಯಕ್ಕೆ ಸೇರ್ಪಡೆಯಾಗುತ್ತಿದೆ. ಅದು ಹೆಮ್ಮೆಯ ದಾಖಲೆ.

– ನಾಗೇಶ ಹೆಗಡೆ
(ಪುಸ್ತಕದ ಬೆನ್ನುಡಿಯಿಂದ )

ಶೀರ್ಷಿಕೆ: ಚಿಲಿಯ ಕಲಿಗಳು – ಗಣಿ ಪಾತಾಳದಲ್ಲಿ 33 ಜನ 69 ದಿನ ಲೇಖಕರು:ಸರೋಜಾ ಪ್ರಕಾಶ ಪ್ರಕಾಶಕರು: ಭೂಮಿ ಬುಕ್ಸ್ ಪುಟಗಳು:156+8 ಬೆಲೆ:ರೂ.110/-

ಅಕ್ಷರ ಕರ್ನಾಟಕ ಪುಸ್ತಕ ಮಳಿಗೆಗೆ ಬನ್ನಿ ಪುಸ್ತಕ ಖರೀದಿಸಿರಿ

ವಿಜಯನಗರದ ಸುತ್ತಮುತ್ತ ವಾಸಿಸುವವ ಸಾಹಿತ್ಯಾಸಕ್ತರಿಗೆ, ಓದುಗರಿಗೆ ಒಂದು ಸಂತೋಷದ ಸುದ್ದಿ. ಸಾಹಿತ್ಯಕ್ಕೆ ಸಂಬಂಧಪಟ್ಟ ಸಂವಾದ ಕಾರ್ಯಕ್ರಮವನ್ನು ತಿಂಗಳಿಗೊಂದು ಬಿಡದಂತೆ ನಡೆಸಿಕೊಂಡು ಬರುತ್ತಿದ್ದಾರೆ ಅಕ್ಷರ ಕರ್ನಾಟಕ ಪುಸ್ತಕ ಮಳಿಗೆ, ವಿಜಯನಗರ ಇವರು. ಇದರ ಸಾರಥ್ಯ ವಹಿಸಿದವರು ಖ್ಯಾತ ಪತ್ರಕರ್ತೆ ಆರ‍್.ಪೂರ್ಣಿಮಾ ಹಾಗೂ ಕರ್ನಾಟಕ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಸಿ.ವೀರಣ್ಣ ಅವರು.

ಪ್ರತೀ ತಿಂಗಳು ಎರಡನೇ ಶನಿವಾರ ಅಥವಾ ಭಾನುವಾರ ಈ ಕಾರ್ಯಕ್ರಮ ಇರುತ್ತದೆ. ಡಾ. ಸಿದ್ದಲಿಂಗಯ್ಯ ಮತ್ತು ಮುಖ್ಯಮಂತ್ರಿ ಚಂದ್ರು ಅವರಿಂದ ಆರಂಭವಾದ ಈ ಕಾರ್ಯಕ್ರಮದಲ್ಲಿ ಇದುವರೆಗೆ ಕೆ.ವಿ. ನಾರಾಯಣ, ರವಿಂದ್ರ ರೇಷ್ಮೆ, ನಾ. ಸೋಮೇಶ್ವರ, ಪ್ರೊ. ಕಲ್ಬುರ್ಗಿ, ನೇಮಿಚಂದ್ರ, ಚಿದಾನಂದ ಮೂರ್ತಿ, ಪ್ರಸನ್ನ, ದಿನೇಶ್ ಅಮಿನ್ ಮಟ್ಟು ಮೊದಲಾದವರು ಭಾಗವಹಿಸಿದ್ದಾರೆ. (ಕಳೆದ ತಿಂಗಳು ರಾಜರಾಜರಾಜೆಶ್ವರಿ ನಗರದಲ್ಲಿ ಅಕ್ಷರ ಕರ್ನಾಟಕದ ಶಾಖೆ ಆರಂಭ ಆಯಿತು).

ಹಾಗೇ ನಮಗೆ ಬೇಕಾಗುವ ಪುಸ್ತಕಗಳೂ ಅಲ್ಲಿವೆ. ಬೇಕಾಗಿರುವ ಪುಸ್ತಕಗಳಿಗೆ ಗಾಂಧೀನಗರದ ವರೆಗೆ ಹೋಗಬೇಕಾದ ಅಗತ್ಯ ಇನ್ನಿಲ್ಲ

ವಿಳಾಸ : ಅಕ್ಷರ ಕರ್ನಾಟಕ ಪುಸ್ತಕ ಮಳಿಗೆ: ನಂ 46ಇ, 15ನೇ ಮುಖ್ಯರಸ್ತೆ, ವಿಜಯನಗರ

ಪುಸ್ತಕ ಬಿಡುಗಡೆಗೆ ಆಹ್ವಾನ

ಆತ್ಮೀಯರೆ,
ಇದೇ ತಿಂಗಳ 26ರಂದು (26/04/2011) ಸಂಜೆ 6 ಗಂಟೆಗೆ ನನ್ನ
‘ನೆನಪುಗಳಿಗೇಕೆ ಸಾವಿಲ್ಲ’ – ಕಥಾಸಂಕಲನ ಹಾಗೂ
‘ಮಳೆಬಿಲ್ಲ ನೆರಳು’ – ವಿಜ್ಞಾನ ಲೇಖನಗಳ ಸಂಕಲನ ಬಿಡುಗಡೆಯಾಗುತ್ತಿದೆ.
ಪುಸ್ತಕಗಳ ಬಿಡುಗಡೆ ಮತ್ತು ಅಧ್ಯಕ್ಷತೆ: ಡಾ.ಜಿ.ರಾಮಕೃಷ್ಣ
‘ನೆನಪುಗಳಿಗೇಕೆ ಸಾವಿಲ್ಲ’ ಕೃತಿ ಪರಿಚಯ: ಡಾ.ಕೆ.ವೈ.ನಾರಾಯಣಸ್ವಾಮಿ
‘ಮಳೆಬಿಲ್ಲ ನೆರಳು’ ಕೃತಿ ಪರಿಚಯ: ಶ್ರೀ ಅದ್ದೆ ಮಂಜುನಾಥ್
ಸ್ಥಳ: ನಯನ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು
ಎಲ್ಲರಿಗೂ ಸ್ವಾಗತ
ಪುಸ್ತಕ ಪರಿಚಯ ಇಲ್ಲಿದೆ:


ಮಳೆಬಿಲ್ಲ ನೆರಳು- ವಿಜ್ಞಾನ ಲೇಖನಗಳ ಸಂಕಲನ

ಪುಟಗಳು:244, ಬೆಲೆ ರೂ.150-00

ಪ್ರಕಾಶಕರು: ಬರಹ ಪಬ್ಲಿಶಿಂಗ್ ಹೌಸ್, ಹಂಪಿನಗರ, ಬೆಂಗಳೂರು-560104

“ಮೇಲುನೋಟಕ್ಕೆ ವಿಜ್ಞಾನದ ಲೇಖನಗಳು ಎಂಬಂಥೆ ತೋರಿದರೂ ಸೂಕ್ಷ್ಮ ಮತ್ತು ಸಮಗ್ರ, ವೈಯುಕ್ತಿಕ ಮತ್ತು ಸಾಮಾಜಿಕ ಸ್ಥಳೀಯ ಮತ್ತು ಜಾಗತಿಕ ಎಂಬ ಧ್ರುವೀಕರಣವಿಲ್ಲದ ಅಖಂಡ ಗ್ರಹಿಕೆ ಮತ್ತು ಸಂಕೀರ್ಣ ನೇಯ್ಗೆಯ ಮೂಲಕ ಕೇವಲ ಮಾಹಿತಿಯ ತಂತ್ರಜ್ಞಾನವಾಗುಳಿಯದೆ ಸಂಸ್ಕೃತಿ ಚಿಂತನೆಯ ನಿಜೋದಯವಾಗಿ ಸ್ಥಿತ್ಯಂತರಗೊಂಡಿರುವ ಇಲ್ಲಿನ ಬರೆಹಗಳನ್ನು `ನಿರಂಕುಶ ಸಾಹಿತ್ಯ’ವೆಂದೇ ಕರೆಯಲಿಚ್ಛಿಸುತ್ತೇನೆ. ಮಾನವ ಕೇಂದ್ರಿತವಾದ ಎಲ್ಲ ಬಗೆಯ ರಚನೆಗಳನ್ನು ನಿರಾಕರಿಸುತ್ತಾ ಉಳ್ಳವರು ಹುಟ್ಟುಹಾಕಿದ ಸುಳ್ಳು ಸೃಷ್ಟಿಯ `ಸಚರಾಚರವೆಲ್ಲ’ ರಚನೆಗೆ ಬಾರದಂದಿನ ನೆಲೆಗೆ ನಮ್ಮನ್ನು ಕರೆದೊಯ್ಯುವ ಇಲ್ಲಿನ ಬರೆಹಗಳು ಅಪರಿಮಿತದ ಕತ್ತಲೆಯೊಳಗೆ ಈಜುತ್ತಿರುವ ವಿಪರೀತದ ಬೆಳಕಿನ ಹುಳುಗಳಾಗಿ ಕಾಣುತ್ತವೆ.”

– ಪ್ರೊ.ವಿ.ಚಂದ್ರಶೇಖರ ನಂಗಲಿ

“ಪ್ರತಿ ಪ್ರಬಂಧದಲ್ಲಿಯೂ ಓದುಗನನ್ನು ತನ್ನದೆ ಅವಲೋಕನೆಯತ್ತ ನೂಕಿ, ಆ ಪ್ರಬಂಧ ರಚನೆಯಲ್ಲಿಯೇ ತಾನೂ ಒಂದು ಪಾತ್ರವಾಗುವಂತೆ ಪ್ರೇರೇಪಿಸುತ್ತಾರೆ. ಇದು ಬಾಲು ಅವರ ಲೇಖನಗಳ ಅನನ್ಯತೆ. ಬಹುಶಃ ಈ ವಿಭಿನ್ನತೆಗೆ ಕಾರಣ – `ವಿಜ್ಞಾನದಲ್ಲಿ ರಹಸ್ಯ ಬಗೆದಷ್ಟೂ ನಿಗೂಢ ಹೆಚ್ಚುತ್ತಾ ಹೋಗುತ್ತದೆ. ಆ ನಿಗೂಢದ ಬೆಡಗೇ ಜೀವನ ಪ್ರೀತಿಯ ಮೂಲ ಸೆಲೆ’ ಎಂಬ ಅವರ ನಂಬಿಕೆ. ಈ ನಂಬಿಕೆಯಿಂದಲೇ ಬರೆಯುವ ಅವರು ತಮ್ಮೆಲ್ಲ ಲೇಖನಗಳಲ್ಲೂ, ವಿಜ್ಞಾನವನ್ನು ಓದುಗನ ಆಂತರ್ಯದ ಸಮೀಪಕ್ಕೆ ತಂದಿಡುವ ಕುಶಲತೆಯನ್ನು ಅಳವಡಿಸಿಕೊಂಡಿರುವುದು ವಿಶೇಷ.”

– ಡಾ.ಕೆ.ಎನ್.ಗಣೇಶಯ್ಯ

ನೆನಪುಗಳಿಗೇಕೆ ಸಾವಿಲ್ಲ? – ಕಥಾ ಸಂಕಲನ; ಡಾ. ಜೆ.ಬಾಲಕೃಷ್ಣ

ಪುಟಗಳು:146; ಬೆಲೆ ರೂ.100-00

ಪ್ರಕಾಶಕರು: ಬರಹ ಪಬ್ಲಿಶಿಂಗ್ ಹೌಸ್, ಹಂಪಿನಗರ, ಬೆಂಗಳೂರು-560104

ಇದು ನನ್ನ ಮೊದಲ ಕಥಾ ಸಂಕಲನ. ನಾನು 1983ರಿಂದ ಬರೆದ ಹದಿನಾಲ್ಕು ಕತೆಗಳು ಇಲ್ಲಿವೆ. ಸಾವಿರಾರು ವರ್ಷಗಳ ಹಿಂದೆ ಆದಿಮಾನವ ಮಾಡಿದ ಕೆಲಸವನ್ನೇ ನಾನು ಮಾಡಿದ್ದೇನೆ. ಬಾಲ್ಯದಿಂದ ಇದುವರೆಗಿನ ನನ್ನ ಬದುಕಿನ ಅಲ್ಲೊಂದು ಇಲ್ಲೊಂದು ಎಳೆಯನ್ನು ತೆಗೆದು ಅದಕ್ಕೆ ನನ್ನ ಕಲ್ಪನೆಯ ಮತ್ತೊಂದಷ್ಟು ಎಳೆಗಳನ್ನು ಸೇರಿಸಿ `ಕತೆ ಕಟ್ಟುವ’ ಪ್ರಯತ್ನ ಮಾಡಿದ್ದೇನೆ.

ಕೇಂದ್ರ ಸಾಹಿತ್ಯ ಅಕಾದೆಮಿಯಿಂದ ನಾನು ಅನುವಾದಿಸಿರುವ ‘ಭಾರತದ ಮೊದಲ ಕಾದಂಬರಿಗಳು’ ಇತ್ತೀಚೆಗೆ ಪ್ರಕಟವಾಗಿದೆ. ಅದರ ಪರಿಚಯವನ್ನೂ ಇಲ್ಲಿ ನೀಡಿದ್ದೇನೆ.

ಭಾರತದ ಮೊದಲ ಕಾದಂಬರಿಗಳು: ಮೂಲ ಸಂಪಾದಕರು: ಮೀನಾಕ್ಷಿ ಮುಖರ್ಜಿ

ಕನ್ನಡ ಅನುವಾದ: ಜೆ.ಬಾಲಕೃಷ್ಣ

ಪುಟಗಳು: 21+282; ಬೆಲೆ:ರೂ.175-00

ಪ್ರಕಾಶಕರು: ಸಾಹಿತ್ಯ ಅಕಾದೆಮಿ; ನವದೆಹಲಿ

ಯಾವುದೇ ಸಾಹಿತ್ಯ ಪ್ರಕಾರದ ಪ್ರಾರಂಭ ಮಸುಕು ಮಸುಕಾಗಿರುವಂತೆ ಭಾರತೀಯ ಕಾದಂಬರಿಗಳ ಪ್ರಾರಂಭವೂ ಮಸಕು ಮಸುಕಾಗಿದೆ. ಹತ್ತೊಂಬತ್ತನೇ ಶತಮಾನದಲ್ಲಿ ಬ್ರಿಟಿಷರು ಪರಿಚಯಿಸಿದ ಇಂಗ್ಲಿಷ್ ಶಿಕ್ಷಣದ ನೇರ ಪರಿಣಾಮದಿಂದಾಗಿ ಭಾರತದ ಕಾದಂಬರಿ ಒಂದು ಎರವಲು ಪ್ರಕಾರವೆಂಬ ಅನಿಸಿಕೆ ಬಹಳ ಕಾಲ ಪ್ರಶ್ನಾತೀತವಾಗಿ ಉಳಿದಿತ್ತು. ಆದರೆ ಇಂತಹ ಸಿದ್ಧಾಂತಗಳನ್ನು ಮರುಪರೀಕ್ಷಿಸುವ ಮತ್ತು ಭಾರತದಂತಹ ಬಹುಸಂಸ್ಕೃತಿಯ ಹಾಗೂ

ಬಹು ಭಾಷಾ ಪರಂಪರೆ ಆಯಾ ಚಾರಿತ್ರಿಕ-ಸಾಮಾಜಿಕ ಘಟ್ಟಗಳಲ್ಲಿ ಸಾಹಿತ್ಯದ ಈ ಪ್ರಕಾರದ ಮೇಲೆ ಬೀರಿರುವ ಪರಿಣಾಮಗಳನ್ನು ಈ ಕೃತಿ ಪರಿಶೋಧಿಸುವ ಪ್ರಯತ್ನ ಮಾಡುತ್ತದೆ. ಭಾರತದಲ್ಲಿ ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ರಾಷ್ಟ್ರದ ಪರಿಕಲ್ಪನೆಯೊಂದಿಗೇ ಕಾದಂಬರಿ ಪ್ರಕಾರ ಉಗಮವಾಯಿತೆನ್ನುತ್ತಾರೆ ಕೆಲ ಸಾಹಿತ್ಯ ಚರಿತ್ರಕಾರರು. ಈ ಸಂಪುಟವು ಸಾಹಿತ್ಯ ವಿಮರ್ಶಕರು, ಚರಿತ್ರಕಾರರು ಮತ್ತು ರಾಜಕೀಯ ತಾತ್ವಿಕ ಸಿದ್ಧಾಂತಕಾರರು ರಚಿಸಿರುವ ಹದಿನಾಲ್ಕು ಪ್ರಬಂಧಗಳನ್ನು ಒಳಗೊಂಡಿದೆ ಹಾಗೂ ಅವು ವಿವಿಧ ಭಾರತೀಯ ಭಾಷೆಗಳಲ್ಲಿನ ಮೊದಲ ಕಾದಂಬರಿಗಳನ್ನು ಮತ್ತು ಅವು ರಚನೆಗೊಂಡ ಸಂದರ್ಭಗಳನ್ನು ಪರಾಮರ್ಶಿಸುತ್ತದೆ.

Dr.J. BALAKRISHNA, Ph.D.
Associate Professor
Dept. of Kannada Studies
University of Agricultural Sciences
Hebbal, Bangalore-560024

Visit my Kannada blogs:

And also my English blog:

ಸಂವಿಧಾನ ಶಿಲ್ಪಿ ಡಾ. ಬಿ.ಆರ‍್.ಅಂಬೇಡ್ಕರ‍್

ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆ ಮತ್ತು ಅದರ ಭಾಗವಾದ ಅಸ್ಪೃಶ್ಯತೆಯ ಪ್ರಶ್ನೆ ಮತ್ತೆ- ಮತ್ತೆ ಏಳುತ್ತಾ ಬಂದಿದೆ. ಇದರಲ್ಲಿ ಅಡಕವಾಗಿರುವ ಅಸಮಾನತೆ ಮತ್ತು ಶೋಷಣೆಯ ಅಂಶಗಳ ಮೇಲೆ ಚರ್ಚೆಗಳು, ಆಂದೋಲನಗಳು ನಡೆಯುತ್ತ ಬಂದಿವೆ. ಆಧುನಿಕ ಭಾರತದಲ್ಲಿ ಡಾ. ಅಂಬೇಡ್ಕರ್ ಅವರ ನೇತೃತ್ವದ ಹೋರಾಟ ಇಂತವುಗಳಲ್ಲಿ ಪ್ರಮುಖವಾದದ್ದು. ಈ ಅವಿರತ ಹೋರಾಟಗಾರ ದಲಿತ ವಿಭಾಗಗಳಲ್ಲಿ ಆತ್ಮವಿಶ್ವಾಸವನ್ನು ತುಂಬಿದರು, ಮೇಲ್ಜಾತಿ ಆಪಾಢಭೂತಿತನಗಳನ್ನು ಬಯಲಿಗೆಳೆದರು, ಸ್ವಾತಂತ್ರ್ಯ ಹೋರಾಟ ಕಾಲದಲ್ಲೂ, ನಂತರವೂ ಕಾಂಗ್ರೆಸ್ ಮತ್ತು ಅದರ ನೀತಿಗಳನ್ನು ಬಯಲಿಗೆಳೆದರು. ಆದರೆ ಅಂತಿಮವಾಗಿ ಹಿಂದೂ ಸಮಾಜದ ಅನ್ಯಾಯಗಳಿಂದ ತಪ್ಪಿಸಿಕೊಳ್ಳಲು ಬೌದ್ಧ ಧರ್ಮವನ್ನು ಅಂಗೀಕರಿಸಿ ಎಂದು ತಮ್ಮ ಅನುಯಾಯಿಗಳಿಗೆ ಹೇಳಿದರು. ಇದರಿಂದ ದಲಿತರ ಪರಿಸ್ಥಿತಿ ಬದಲಾಗಲಿಲ್ಲ. ಈಗಲೂ ಒಂದೆಡೆ ಅಂಬೇಡ್ಕರ್‌ರವರನ್ನು ಅಧಿಕೃತವಾಗಿ ಹಾಡಿ ಹೊಗಳಲಾಗುತ್ತಿದೆ, ಅವರ ಹೆಸರನ್ನು ಬಳಸಿಕೊಳ್ಳಲು ಆಳುವ ವರ್ಗಗಳ ಪಕ್ಷಗಳ ನಡುವೆ ಪೈಪೋಟಿ ನಡೆದಿದೆ; ಇನ್ನೊಂದೆಡೆ ಸಮಾನತೆಯ ಟೊಳ್ಳು ಹೇಳಿಕೆಗಳು, ಮೀಸಲಾತಿ ಇತ್ಯಾದಿಗಳು ಕೇಳಬರುತ್ತಿವೆಯೇ ಹೊರತು ಬಹುಪಾಲು ದಲಿತರ ಬದುಕಿನ ಬವಣೆಗಳು ಕೊನೆಗಾಣುತ್ತಿಲ್ಲ. ಇದು ಸಮಾನತೆಗಾಗಿ ದುಡಿಯುತ್ತಿರುವ ಸಾಮಾಜಿಕ ಕಾರ್ಯಕರ್ತರ ಮುಂದೆ ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ.

ಇಂತಹ ಸನ್ನಿವೇಶದಲ್ಲಿ ಡಾ. ಅಂಬೇಡ್ಕರ್‌ರವರ ಜೀವನ ಮತ್ತು ಹೋರಾಟದ ಒಂದು ವಸ್ತುನಿಷ್ಟ ಪರಾಮರ್ಶೆ ಇಂತಹ ಕಾರ್ಯಕರ್ತರಿಗೆ ಮುಂದಿನ ದಾರಿ ತೋರಬಲ್ಲದು. ಅವರ ಕರ್ಮಭೂಮಿಯಾದ ಮಹಾರಾಷ್ಟ್ರದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕಾರ್ಮಿಕ ಮುಂದಾಳು ಪ್ರಭಾಕರ ಸಂಝಗಿರಿಯವರು ಇಂತಹ ಒಂದು ಪರಾಮರ್ಶೆಯನ್ನು ಡಾ.ಅಂಬೇಡ್ಕರ್‌ರವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಮಾಡಿದ್ದರು. ಮುಂದೆ ಅದು ಪುಸ್ತಕರೂಪದಲ್ಲಿ ಭಾರತದ ಹಲವು ಭಾಷೆಗಳಲ್ಲಿ ಪ್ರಕಟವಾಯಿತು. ಅದರ ಅನುವಾದ ಈ ಪುಸ್ತಕ.

ಶೀರ್ಷಿಕೆ: ಡಾ. ಬಿ.ಆರ‍್.ಅಂಬೇಡ್ಕರ‍್ – ಜೀವನ ಮತ್ತು ಹೋರಾಟ ಲೇಖಕರು: ಪ್ರಭಾಕರ‍್ ಸಂಝಗಿರಿ ಅನುವಾದ:ಸಬಿತಾ ಶರ್ಮ ಪ್ರಕಾಶಕರು: ಕ್ರಿಯಾ ಪ್ರಕಾಶನ ಪುಟ: 48+4 ಬೆಲೆ:ರೂ.15/-

ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ 2009ನೇ ಸಾಲಿನ ಪುಸ್ತಕ ಬಹುಮಾನ ಮತ್ತು 2010ನೇ ಸಾಲಿನ ಗೌರವ ಪ್ರಶಸ್ತಿಗಳು ಪ್ರಕಟವಾಗಿವೆ.

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ 2009ನೇ ಸಾಲಿನ ಪುಸ್ತಕ ಬಹುಮಾನ ಮತ್ತು 2010ನೇ ಸಾಲಿನ ಗೌರವ ಪ್ರಶಸ್ತಿಗಳು ಪ್ರಕಟವಾಗಿವೆ.

ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಎಂ. ವೃಷಭೇಂದ್ರಸ್ವಾಮಿ, ವಿಮರ್ಶಕ ಡಾ.ಎಚ್.ಎಸ್. ರಾಘವೇಂದ್ರ ರಾವ್, ಲೇಖಕರಾದ ಡಾ.ಶ್ರೀಕಂಠ ಕೂಡಿಗೆ, ಕವಯತ್ರಿ ಪ್ರೊ.ಸ. ಉಷಾ ಮತ್ತು  ಲೇಖಕರಾದ ಕೋಟಿಗಾನಹಳ್ಳಿ ರಾಮಯ್ಯ ಅವರ ಜೀವಮಾನದ ಸಾಧನೆಯನ್ನು ಗುರುತಿಸಿ 2010ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಇಲ್ಲಿನ `ಕನ್ನಡ ಭವನ’ದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅಕಾಡೆಮಿಯ ಅಧ್ಯಕ್ಷ ಪ್ರೊ.ಎಂ.ಎಚ್. ಕೃಷ್ಣಯ್ಯ ಅವರು, `ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶಿವಮೊಗ್ಗದಲ್ಲಿ ಮೇ ತಿಂಗಳ ಕೊನೆಯ ವಾರದಲ್ಲಿ ನಡೆಸಲು ಉದ್ದೇಶಿಸಿದ್ದೇವೆ’ ಎಂದರು.
ಗೌರವ ಪ್ರಶಸ್ತಿಯು 10 ಸಾವಿರ ರೂಪಾಯಿ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ ಎಂದು ಅವರು ತಿಳಿಸಿದರು.

ಡಾ.ಕೆ. ಪುಟ್ಟಸ್ವಾಮಿ ಅವರ `ಸಿನಿಮಾಯಾನ’ ಕೃತಿ ಸೇರಿದಂತೆ ಒಟ್ಟು 18 ಮಂದಿ ಲೇಖಕ/ಸಾಹಿತಿಗಳ ಪುಸ್ತಕಗಳಿಗೆ 2009ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿ ದೊರೆತಿದೆ (ಬಾಕ್ಸ್ ನೋಡಿ). ಈ ಪ್ರಶಸ್ತಿ ಐದು ಸಾವಿರ ರೂಪಾಯಿ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ಕೃಷ್ಣಯ್ಯ  ತಿಳಿಸಿದರು. ಅಕಾಡೆಮಿಯ ರಿಜಿಸ್ಟ್ರಾರ್ ಮಲ್ಲಿಕಾರ್ಜುನ ಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವಿಶ್ವ ಆರೋಗ್ಯದಿನದ ಶುಭಾಶಯಗಳೊಂದಿಗೆ

ಭಾರತದಲ್ಲಿ ಜನಾರೋಗ್ಯ ಸಾಧನೆ ದೇಶ ಸ್ವಾತಂತ್ರ್ಯ ಪಡೆದು ಆರು ದಶಕಗಳೇ ಕಳೆದರೂ ಸಾಧ್ಯವಾಗದಿರುವುದು ವಿಷಾದದ ಸಂಗತಿ. ನಮ್ಮ ದೇಶದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡುವ ಹಣ ಬಹಳ ಕಡಿಮೆ. ಬಡತನ, ಅನಕ್ಷರತೆ ಹೆಚ್ಚಾಗಿರುವ ಈ ದೇಶದಲ್ಲಿ ಸಹಜವಾಗಿಯೇ ರೋಗರುಜಿನಗಳು ಕೂಡ ಅಧಿಕ. ಔಷಧಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಾಗಿರುವುದರಿಂದ ಮತ್ತು ಸರ್ಕಾರವೂ ಕೂಡ ಖಾಸಗೀಕರಣ ನೀತಿಗೆ ಪ್ರೋತ್ಸಾಹ ಕೊಡುತ್ತಿರುವುದರಿಂದ ರೋಗ ಚಿಕಿತ್ಸೆಗೆ ತಗಲುವ ವೆಚ್ಚಕ್ಕಿಂತ ರೋಗಪತ್ತೆಯ ವಿಧಾನಗಳಿಗೆ ಜನತೆ ಹಣ ಹೆಚ್ಚು ಖರ್ಚು ಮಾಡಬೇಕಾದ ಅನಿವಾರ್ಯತೆ ಸೃಷ್ಟಯಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಬಡಜನರಿಗೆ ಮತ್ತು ಅನಕ್ಷರಸ್ಥರಿಗೆ ಆರೋಗ್ಯ ವ್ಯವಸ್ಥೆ ಕಡಿಮೆ ಖರ್ಚಿನಲ್ಲಿ ಕೈಗೆಟಕುತ್ತಿಲ್ಲ. ಆರೋಗ್ಯ ಎಂಬುದು ಅವರ ಪಾಲಿಗೆ ಮರೀಚಿಕೆಯಾಗಿದೆ. ಭಾರತೀಯ ವೈದ್ಯಪದ್ಧತಿಯ ಚಿಕಿತ್ಸಾ ವಿಧಾನಗಳನ್ನು ಯಾವ ಪ್ರಮಾಣದಲ್ಲಿ ಬಳಸಬಹುದಿತ್ತೋ ಅಷ್ಟರಮಟ್ಟಿಗೆ ಬಳಕೆಯಾಗದಿರುವುದು ಬೇಸರದ ಸಂಗತಿ.

ಜನಾರೋಗ್ಯ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಮತ್ತು ಔಷಧಿ ಕ್ರಿಯಾ ಸಮಿತಿಯಲ್ಲಿ ಸಕ್ರಿಯರಾಗಿರುವ ಡಾ. ಪ್ರಕಾಶ್ ಸಿ. ರಾವ್ ರವರು ರಚಿಸಿರುವ `ಜನಾರೋಗ್ಯದ ಸವಾಲುಗಳು’ ಪುಸ್ತಕ ವೈದ್ಯರ ಕಣ್ಣು ಹಾಗೂ ಮನಸ್ಸನ್ನು ತೆರೆಸುವಂತಿದೆ. ಪ್ರತಿಯೊಂದು ಅಧ್ಯಾಯದಲ್ಲಿಯೂ ಲೇಖಕರ ಜನಪರ ಕಾಳಜಿ ವ್ಯಕ್ತವಾಗುತ್ತದೆ. ವೈದ್ಯ ವೃತ್ತಿ ವ್ಯಾಪಾರೀಕರಣಗೊಂಡಿರುವ ಇಂದಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರ ಮತ್ತು ಔಷಧಿಗಳ ಜಗತ್ತಿನ ಹಲವು ಆಯಾಮಗಳ ಕುರಿತು ಈ ಪುಸ್ತಕ ಓದುಗರೆದುರು ಅನೇಕ ವಿಷಯಗಳನ್ನು ಅನಾವರಣಗೊಳಿಸುತ್ತಾ ಹೋಗುತ್ತದೆ. ವೃತ್ತಿಯಲ್ಲಿ ನಿರತರಾದ ಪ್ರತಿಯೊಂದು ವೈದ್ಯರೂ ಓದಲೇಬೇಕಾದಂತಹ ಕೃತಿಯಿದು. ಕೇವಲ ಓದುವುದು ಮಾತ್ರವಲ್ಲ ವೃತ್ತಿ ಬದುಕಿನಲ್ಲೂ ಅಳವಡಿಸಿಕೊಂಡಲ್ಲಿ ಡಾ. ಪ್ರಕಾಶ್ ರಾವ್ ರವರ ಶ್ರಮ, ಪ್ರಯತ್ನ ಸಫಲತೆ ಪಡೆಯುತ್ತದೆ. ವೈದ್ಯರು ಮಾತ್ರವಲ್ಲ ಜನಸಾಮಾನ್ಯರ ಈ ವಿಷಯಗಳನ್ನು ಅರಿತುಕೊಂಡಲ್ಲಿ ಒಳಿತು. ಸರ್ಕಾರದ ನೀತಿಗಳನ್ನು ರೂಪಿಸುವವರು, ಮಂತ್ರಿಗಳು, ಅಧಿಕಾರ ವರ್ಗದವರೂ ಈ ಪುಸ್ತಕ ಓದಿದಲ್ಲಿ ನೀತಿ ನಿಯಮಾವಳಿ ರೂಪಿಸುವಾಗ ಬದಲಾವಣೆ ತರಲು ಸಾಧ್ಯವಾಗಬಹುದು.

`ಜನಾರೋಗ್ಯದ ಸವಾಲುಗಳು’ ಪುಸ್ತಕದಲ್ಲಿ ಲೇಖಕರು ತಿಳಿಸಿರುವ ಕೆಮ್ಮಿನ ಔಷಧಿಗಳು, ಸಂಮಿಶ್ರ ಔಷಧಿಗಳ ಕುರಿತ ವಿಚಾರ ಓದುಗರನ್ನು ಬೆಚ್ಚಿಬೀಳಿಸುತ್ತದೆ. ಜನಪರವಾದ ಔಷಧಿ ನೀತಿ ಜಾರಿಗೊಳಿಸುವಲ್ಲಿ ಸರ್ಕಾರ ಕುರುಡು ಮತ್ತು ಕಿವುಡಾಗುವುದು ದುಃಖಕರ ಸಂಗತಿ. ಲಸಿಕಾ ಕಾರ್ಯಕ್ರಮ ಜಾರಿಗೊಳಿಸುವಾಗ ನಿಗದಿತ ನಿಯಮಗಳನ್ನು ಅನುಸರಿಸದೇ ಜನರ ಜೀವದೊಡನೆ ಆಟವಾಡುವ ವ್ಯವಸ್ಥೆ ಮುಂದುವರೆಯುತ್ತಿರುವುದು ನಿಜಕ್ಕೂ ಅಪಾಯಕಾರಿ. ಮಹಿಳೆಯರ ಮತ್ತು ಮಕ್ಕಳ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಿದ್ದಲ್ಲಿ ಮಾತೃಮರಣ ಮತ್ತು ಶಿಶುಮರಣಗಳನ್ನು ತಡೆಗಟ್ಟಬಹುದಾಗಿದೆ. ಇಡೀ ದೇಶದ ಜನರಿಗೆ ಶುದ್ಧವಾದ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಶೌಚಾಲಯ ನಿರ್ಮಾಣ ಸಾಧ್ಯವಾದಲ್ಲಿ ಜನಾರೋಗ್ಯ ಕಷ್ಟವೆನಿಸಲಾರದು.

– ಡಾ. ವಸುಂಧರ ಭೂಪತಿ (ಅಧ್ಯಕ್ಷರು, ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು)
– ಪುಸ್ತಕದ ಮುನ್ನುಡಿಯಿಂದ

ಶೀರ್ಷಿಕೆ: ಜನಾರೋಗ್ಯದ ಸವಾಲುಗಳು ಲೇಖಕರು:ಡಾ. ಪ್ರಕಾಶ್ ಸಿ ರಾವ್, ಪ್ರಕಾಶಕರು: ಚಿಂತನ ಪುಸ್ತಕ ಪುಟ:124 ಬೆಲೆ:ರೂ.60/-