ರಾಗ ಮಾಲ
ಸಂಗೀತವನ್ನು, ಸಂಗೀತಗಾರರನ್ನು ಕುರಿತು ಗಂಭೀರವಾದ ಚಿಂತನೆ ನಡೆಯಬೇಕು. ಸಂಗೀತವನ್ನು ಸೂಕ್ಷ್ಮವಾಗಿ ಆಲಿಸಬಲ್ಲ ಒಂದು ಕೇಳುಗವರ್ಗವೂ ಬೇಕಾಗಿದೆ. ಅದಕ್ಕಾಗಿ `ಹಿರಿಯರ ಮಾರ್ಗದರ್ಶನದಲ್ಲಿ ಸಂಗೀತದ ಕೇಳ್ಮೆ’ ಮೊದಲಾದ ಕಾರ್ಯಕ್ರಮಗಳು ಸಾಕಷ್ಟು ನಡೆಯಬೇಕು. ಆಗ ಸಂಗೀತರ ಮಟ್ಟವೂ ಹೆಚ್ಚುತ್ತದೆ. ಸಂಗೀತವೂ ಬೆಳೆಯುತ್ತದೆ. ಹೀಗೆ ಹತ್ತು ಹಲವು ಕನಸುಗಳನ್ನು ಇಟ್ಟುಕೊಂಡಿರುವ ಹಿರಿಯ ಸಂಗೀತಗಾರರಾದ ಪಂಡಿತ ರಾಜೀವ ತಾರಾನಾಥ ಅವರ ಒತ್ತಾಸೆಯಿಂದ ಮೈಸೂರಿನಲ್ಲಿ ಈ ನಿಟ್ಟಿನಲ್ಲಿ ಒಂದಿಷ್ಟು ಕಾರ್ಯಕ್ರಮಗಳು ನಡೆದವು. ಹಾಗೆಯೇ ಸಂಗೀತವನ್ನು, ಸಂಗೀತದ ಕೇಳ್ಮೆಯನ್ನು, ಸಂಗೀತದ ಶಿಕ್ಷಣವನ್ನು, ಸಂಗೀತ ವಿಮರ್ಶೆಯನ್ನು, ಸಂಗೀತಗಾರರನ್ನು ಕುರಿತ ಚಿಂತನೆಗೆ ಒಂದು ವೇದಿಕೆಯಾಗಿ ಒಂದು ಪುಸ್ತಕ ಮಾಲಿಕೆಯನ್ನು ತರಬೇಕು ಎಂಬುದೂ ಅವರ ಇಚ್ಛೆ. ಈ ಇಚ್ಛೆಯನ್ನು ಪೂರೈಸುತ್ತಿರುವ ವೇಣುಗೋಪಾಲ್ ಮತ್ತು ಶೈಲಜಾ ರಾಗಮಾಲ ಪ್ರಕಾಶನದಿಂದ ರಾಗಮಾಲ ಪುಸ್ತಕ ಮಾಲೆಯನ್ನು ಪ್ರಕಟಿಸುತ್ತಿದ್ದಾರೆ.
`ರಾಗಮಾಲ’ ದ ಮೊದಲ ಪುಸ್ತಕ `ಪಂಡಿತ ರವಿಶಂಕರ್’
ಭಾರತದ ಅನಭಿಷಿಕ್ತ ಸಂಗೀತ ರಾಯಭಾರಿಯಾಗಿ ವಿಶ್ವದಾದ್ಯಂತ ಕಲಾಸಕ್ತರ ಅಭಿಮಾನಕ್ಕೆ ಪ್ರೀತಿ ಪಾತ್ರರಾಗಿದ್ದ ಪಂಡಿತ್ ರವಿಶಂಕರ್ ಭಾರತದ ವಾದ್ಯ ಸಿತಾರ್’ಗೆ ವಿಶ್ವಮನ್ನಣೆ ದೊರಕಿಸಿಕೊಟ್ಟ ಮೇರು ಪ್ರತಿಭೆ. ಇದು ದಶಕಗಳ ಕಾಲ ಭಾರತೀಯ ಸಂಗೀತ ಪರಂಪರೆಯನ್ನು ವಿಶ್ವಮಟ್ಟದಲ್ಲಿ ಬೆಳಗಿದ ಸಿತಾರ್ ಮಾಂತ್ರಿಕ ಪಂಡಿತ್ ರವಿಶಂಕರ್ ಕುರಿತಾದ ಪುಸ್ತಕ.
ಇದರಲ್ಲಿ ರವಿಶಂಕರರ ಜೀವನ ಮತ್ತು ಸಂಗೀತ ಸಾಧನೆ ಕುರಿತ ಲೇಖನ ಮಾತ್ರವಲ್ಲದೆ ಅವರ ಬಗ್ಗೆ ಬೇರೆ ಬೇರೆ ಚಿಂತಕರು, ಸಂಗೀತಗಾರರು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಲೇಖನಗಳ ಭಾಗಗಳ, ಹಾಗೇ ರವಿಶಂಕರರ ಕೆಲವು ಅಪರೂಪದ ಛಾಯಾಚಿತ್ರಗಳ ಸಂಗ್ರಹವೂ ಇಲ್ಲಿದೆ.
`ರಾಗಮಾಲ’ ದ ಎರಡನೆಯ ಪುಸ್ತಕ `ಕೇಳು ಜನಮೇಜಯ’
ಸಾಹಿತ್ಯಕೇಂದ್ರಿತವಾದ (ಯಾಕೆ?) ಕನ್ನಡ ಸಂಸ್ಕೃತಿ ಚಿಂತನೆಯಲ್ಲಿ ಸಂಗೀತ, ಚಿತ್ರ, ಶಿಲ್ಪ ಮುಂತಾದ ಕಲೆಗಳನ್ನು ಕುರಿತ ಬರಹಗಳು ಕಡಿಮೆ. ಬಂದರೂ ಅವು ಕಲಾವಿದರ ವ್ಯಕ್ತಿತ್ವದ ಸುತ್ತ ಗಿರಕಿ ಹೊಡೆಯುತ್ತವೆಯೇ ವಿನಾ ಕಲೆಯ ಬಗ್ಗೆ ಇರುವುದಿಲ್ಲ. ಕಳೆದ ವರ್ಷ ಬಂದ ರವಿಕುಮಾರ್ ಕಾಶಿ ಅವರ `ಅನುಕ್ತ'(ಚಿತ್ರ ಕಲೆ) ಮತ್ತು ಸಂಗೀತವನ್ನು ಕುರಿತ ಈ ಕೃತಿ ನನ್ನ ಮಾತಿಗೆ ಅಪವಾದಗಳು.
ಇದು ಹಿಂದೂಸ್ತಾನೀ ಸಂಗೀತ ಮತ್ತು ಕರ್ನಾಟಕ ಸಂಗೀತವನ್ನು ಕೇಳುವ ಅನುಭವದ ಸ್ವರೂಪ ಮತ್ತು ಅವುಗಳ ಸರಿಯಾದ ಆಸ್ವಾದನೆಗೆ ಅಗತ್ಯವಾದ ತಯಾರಿಗಳನ್ನು ಕುರಿತ ಬರವಣಿಗೆಗಳ ಸಂಕಲನ. ಇದರಲ್ಲಿ ರಾಜೀವ ತಾರಾನಾಥ, ಎ.ಎನ್. ಮೂರ್ತಿ ರಾವ್ ಮುಂತಾದವರ ಸ್ವತಂತ್ರ ಲೇಖನಗಳಿವೆ. ಹಾಗೆಯೇ ಭಾರತೀಯ ಸಂಗೀತದ ಎರಡೂ ನೆಲೆಗಳನ್ನು ಕುರಿತಂತೆ ಹಲವು ಮೂಲಗಳಿಂದ ಸಂಗ್ರಹಿಸಿ ಸಿದ್ಧಪಡಿಸಿದ ಲೇಖನಗಳಿವೆ.
ಪ್ರಸಿದ್ಧ ಸಂಗೀತಕಾರರೂ ಚಿಂತಕರೂ ಆದ ಅರಿಯಕ್ಕುಡಿ, ಜಿ.ಎನ್. ಬಾಲಸುಬ್ರಹ್ಮಣ್ಯಂ, ಟಿ.ಎಂ. ಕೃಷ್ಣ ಮುಂತಾದವರ ಬರಹಗಳ ಸಂಗ್ರಹಾನುವಾದಗಳು ಕೂಡ ಇಲ್ಲಿವೆ. ಮುಖ್ಯವಾದ ಮಾತೆಂದರೆ ಸಂಗೀತಗಾರ, ವಾದ್ಯಗಳನ್ನು ನುಡಿಸುವವನು, ವಿದ್ವಾಂಸ ಮುಂತಾದ ಬೇರೆ ಬೇರೆ ನೆಲೆಗಳಿಂದ ಕೇಳುವ ಪ್ರಕ್ರಿಯೆಯನ್ನು ಪರಿಶೀಲಿಸಲಾಗಿದೆ. ಸಂಗೀತಕ್ಕೆ ಸಂಬಂಧಿಸಿದ ಹಲವು ಪರಿಕಲ್ಪನೆಗಳನ್ನು ಪರಿಚಯ ಮಾಡಿಕೊಡುವ ಹಾಗೆಯೇ, ಕಾಲದಿಂದ ಕಾಲಕ್ಕೆ ಮೂಡಿಬಂದಿರುವ ತಾತ್ವಿಕ ವಾಗ್ವಾದಗಳನ್ನು ಕೂಡ ಮಂಡಿಸಲಾಗಿದೆ.
`ಸಂಗೀತದಲ್ಲಿ ಏನನ್ನು ಕೇಳಬೇಕು?’, `ಹಿಂದೂಸ್ತಾನೀ ಸಂಗೀತದ ಆಸ್ವಾದನೆ’, `ಶಾಸ್ತ್ರೀಯ ಸಂಗೀತ ಕಛೇರಿ ಪದ್ಧತಿ’, `ಕಲಾ ಸಂಗೀತ ಎಂದರೇನು?’, `ಅರಿವುಳ್ಳ ಕೇಳ್ಮೆ’ ಮುಂತಾದ ತಲೆಬರಹಗಳೇ ಈ ಪುಸ್ತಕದ ವಿಶಿಷ್ಟತೆಯನ್ನು ಹೇಳಬಲ್ಲವು. ಇಲ್ಲಿರುವ ಅಪರೂಪದ ವರ್ಣಚಿತ್ರಗಳು ಮತ್ತು ಭಾವಚಿತ್ರಗಳು ಇದರ ಸೊಬಗನ್ನು ಇಮ್ಮಡಿಸಿವೆ. ಈ ಪುಸ್ತಕವನ್ನು ವಿಮರ್ಶೆಗೆ ಒಳಪಡಿಸುವ ಸಾಮರ್ಥ್ಯ ನನಗೆ ಇಲ್ಲ. ಈ ಕಿರುಬರಹದಲ್ಲಿ ಅದಕ್ಕೆ ಅವಕಾಶವೂ ಇಲ್ಲ. ಆದರೆ, ಸಂಗೀತದಲ್ಲಿ ಆಸಕ್ತಿ ಇರುವವರು, ಅಂತಹುದನ್ನು ಬೆಳೆಸಿಕೊಳ್ಳಲು ಇಷ್ಟಪಡುವವರು, ಈಗಾಗಲೇ ಪರಿಣಿತರಾದವರು ಎಲ್ಲರೂ ಇದನ್ನು ಓದಬೇಕು.
ಎನ್ನುತ್ತಾರೆ ಎಚ್.ಎಸ್. ರಾಘವೇಂದ್ರರಾವ್
ಇದೀಗ ರಾಗಮಾಲ ದ 3ನೇ ಪುಸ್ತಕ `ಸಹಸ್ಪಂದನ – ಸಂಗೀತವನ್ನು ಕುರಿತ ಟಿ.ಎಂ.ಕೃಷ್ಟ ಅವರ ಚಿಂತನೆಗಳು’ ಬಿಡುಗಡೆಗಾಗಿ ಕಾದಿದೆ.
Filed under: ಬಿಡುಗಡೆ | Tagged: ಎಚ್.ಎಸ್. ರಾಘವೇಂದ್ರರಾವ್, ಕೇಳು ಜನಮೇಜಯ, ಟಿ.ಎಂ.ಕೃಷ್ಟ, ಪಂಡಿತ್ ರವಿಶಂಕರ್, ರಾಗಮಾಲ, ವೇಣುಗೋಪಾಲ್ ಮತ್ತು ಶೈಲಜಾ, ಸಹಸ್ಪಂದನ' - ಸಂಗೀತವನ್ನು ಕುರಿತ ಟಿ.ಎಂ.ಕೃಷ್ಟ ಅವರ ಚಿಂತನೆಗಳು, ಸಿತಾರ್ | Leave a comment »