ಅಪವ್ಯಾಖ್ಯಾನಗಳನ್ನು ನಿಜವ್ಯಾಖ್ಯಾನಗಳಿಂದ ಹಿಮ್ಮೆಟ್ಟಿಸಲು ಪುಸ್ತಕಪ್ರೀತಿ ಮಾತುಕತೆ – ಬರಗೂರು

 20140726_155236
ಇದು ಅಪವ್ಯಾಖ್ಯಾನಗಳ ಕಾಲ. ಧರ್ಮ, ಭಕ್ತಿ, ಸಂಸ್ಕೃತಿ, ರಾಜಕೀಯ, ದೇಶಭಕ್ತಿ – ಇವೆಲ್ಲವುಗಳ ಅಪವ್ಯಾಖ್ಯಾನ ನಡೆದಿದೆ. ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ಇಂತಹ ಅಪವ್ಯಾಖ್ಯಾನಕ್ಕೆ ಅತ್ಯಂತ ಹೆಚ್ಚು ಒಳಗಾಗಿದೆ. ಅಭಿವೃದ್ಧಿ ಸೇರಿದಂತೆ ಇವುಗಳ ನಿಜ ವ್ಯಾಖ್ಯಾನ ಆಗಬೇಕಾಗಿದೆ. ಪುಸ್ತಕಗಳ ಸುತ್ತ ಮಾತುಕತೆ ಇದರಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಸಫ್ದರ್ ಹಷ್ಮಿ ತಮ್ಮ ಒಂದು ಕವನದಲ್ಲಿ ಹೇಳಿದಂತೆ ‘ಪುಸ್ತಕಗಳು ಮಾತನಾಡುತ್ತವೆ’. ಪುಸ್ತಕಗಳ ಜತೆ ನಮ್ಮದು ಮೌನ ಮಾತುಕತೆ. ಪುಸ್ತಕಪ್ರೀತಿ ಅಂದರೆ ಪುಸ್ತಕಗಳ ಬಗ್ಗೆ ಪ್ರೀತಿ ಮಾತ್ರ ಅಲ್ಲ. ಪುಸ್ತಕಗಳನ್ನು ಓದುವ ಬಗ್ಗೆ ಪ್ರೀತಿ ಅಭಿರುಚಿ ಉಂಟು ಮಾಡುವುದು ಮಾತ್ರವಲ್ಲ. ಮನುಷ್ಯಪ್ರೀತಿ ಸಹ. ನಿಜವಾದ ಮಾನವಪ್ರೀತಿ ಸಮಾನತೆ ಇಲ್ಲದೆ ಸಾಧ್ಯವಿಲ್ಲ.  ಆದ್ದರಿಂದ  ಮಾನವಪ್ರೀತಿ ಇರುವ ಪುಸ್ತಕಗಳು ಪ್ರೀತಿಯನ್ನು ಹಂಚುತ್ತವೆ. ಚಂದ್ರ ಪೂಜಾರಿ ಅವರ  ‘ಅಭಿವೃದ್ಧಿ ಮತ್ತು ರಾಜಕೀಯ’ ಇಂತಹ ಪುಸ್ತಕ. ಭೀತಿಯನ್ನು ಹಂಚುವ ಪುಸ್ತಕಗಳೂ ಇವೆ. 20ನೇ ಶತಮಾನ ವಾಗ್ವಾದಗಳ, ಜಿಗಿತಗಳ, ‘ಅನೇಕ’ಗಳ ಕಾಲವಾಗಿತ್ತು. ಪ್ರಗತಿಪರರಿಗೆ ಆತ್ಮವಿಶ್ವಾಸದ ಕಾಲವಾಗಿತ್ತು. 21ನೇ ಶತಮಾನ ‘ಅನೇಕ’ಗಳನ್ನು ‘ಏಕ’ಗೊಳಿಸಿದ ಕಾಲ – ಏಕ ಧರ್ಮ, ಏಕ ಭಾಷೆ, ಏಕ ಸಿದ್ಧಾಂತ, ಏಕ ಸಂಸ್ಕೃತಿ.  ಪ್ರಗತಿಪರರಿಗೆ ಆತ್ಮಾವಲೋಕನದ ಕಾಲ. ಪ್ರಜಾಪ್ರಭುತ್ವ ಸಮಾನತೆಗಳ ಆಶಯಗಳನ್ನು ಗಟ್ಟಿಗೊಳಿಸುವ  ವಿಸ್ತರಿಸುವ, ‘ಅನೇಕ’ಗಳ ಅನನ್ಯತೆ ಉಳಿಸಿಕೊಳ್ಳುವ, ಬೌದ್ಧಿಕ ವಿಭಜನೆ ಮಾಡದ, ಪುಸ್ತಕಗಳ ಓದು ಮತ್ತು ಅದರ ಬಗ್ಗೆ ಮಾತುಕತೆ ಇಂದಿನ ಅಗತ್ಯ. ಹೊಸ ಅರಿವಿನೊಂದಿಗೆ ಹಳೆಯ ಪುಸ್ತಕಗಳ ಓದು, ಹಳೆಯ ಅರಿವಿನೊಂದಿಗೆ ಹೊಸ ಪುಸ್ತಕಗಳ ಓದು ಬೇಕಾಗಿದೆ.  ‘ಪುಸ್ತಕಪ್ರೀತಿ ತಿಂಗಳ ಮಾತುಕತೆ’ಗಳ ಮಾಲಿಕೆ ಈ ಆಶಯಗಳನ್ನು ಸಾಕಾರಗೊಳಿಸುತ್ತದೆ. ಆ ಮೂಲಕ ಸೈದ್ಧಾಂತಿಕ ರಾಜಕಾರಣವನ್ನು ಗಟ್ಟಿಗೊಳಿಸುತ್ತದೆ. ಜಾತಿಗಳನ್ನು ಮೀರಿದ ಸಾಮಾಜಿಕ ನಾಯಕತ್ವ, ಧರ್ಮಗಳನ್ನು ಮೀರಿದ ಧಾರ್ಮಿಕ ನಾಯಕತ್ವ, ಪಕ್ಷಗಳನ್ನು ಮೀರಿದ ರಾಜಕೀಯ ನಾಯಕತ್ವ ಸಾಧ್ಯ ಮಾಡುತ್ತದೆ ಎಂಬ ವಿಶ್ವಾಸ ನನಗಿದೆ.
20140726_155337 (2)
ಇದು ನಾಡೋಜ ಬರಗೂರು ರಾಮಚಂದ್ರಪ್ಪ ಅವರ ಮಾತುಗಳ ಸಾರ. ಅವರು ‘ಪುಸ್ತಕಪ್ರೀತಿ ತಿಂಗಳ ಮಾತುಕತೆ’ ಮಾಲಿಕೆ ಉದ್ಘಾಟಿಸುತ್ತಿದ್ದರು. ‘ಪುಸ್ತಕಪ್ರೀತಿ’ ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟಿನಲ್ಲಿ ಹೊಸದಾಗಿ ಆರಂಭವಾದ ಪುಸ್ತಕ ಮಳಿಗೆ. ‘ಪುಸ್ತಕಪ್ರೀತಿ’ ಪ್ರತಿ ತಿಂಗಳು ಒಂದು ಪುಸ್ತಕವನ್ನು ಎತ್ತಿಕೊಂಡು ಅದರ ಬಗ್ಗೆ ಮಾತುಕತೆ ಹಮ್ಮಿಕೊಳ್ಳಲಿದೆ. ಈ ಮಾಲಿಕೆಯ ಮೊದಲ ಮಾತುಕತೆ ಪ್ರೊ.ಚಂದ್ರ ಪೂಜಾರಿ ಅವರ ‘ಅಭಿವೃದ್ಧಿ ಮತ್ತು ರಾಜಕೀಯ’ ಎಂಬ ಪುಸ್ತಕದ ಬಗ್ಗೆ ಇತ್ತು. ‘ಪುಸ್ತಕಪ್ರೀತಿ’, ‘ಪುಸ್ತಕಪ್ರೀತಿ ತಿಂಗಳ ಮಾತುಕತೆ’ ಮಾಲಿಕೆಯ ಆಶಯ ಮತ್ತು ಮೊದಲ ಮಾತುಕತೆಯ ಪುಸ್ತಕದ ವಿಷಯ – ಇವನ್ನೆಲ್ಲಾ ಬರಗೂರು ಅವರು, ಬಹುಶಃ ಸಂಘಟಕರು ಸಹ ಕಂಡುಕೊಳ್ಳದಷ್ಟು, ಸಮಗ್ರವಾಗಿ ಮತ್ತು ಮನಮುಟ್ಟುವಂತೆ ಮಂಡಿಸಿದರು.ಐಸೆಕ್(ISEC)ನ ಸಮಾಜವಿಜ್ಞಾನಿ  ಡಾ.ಕೆ.ಜಿ.ಗಾಯತ್ರಿದೇವಿ ಪುಸ್ತಕದ ಸಾರವನ್ನು ಅಚ್ಚುಕಟ್ಟಾಗಿ ಮಂಡಿಸಿ ಚರ್ಚೆಗೆ ಚಾಲನೆ ನೀಡಿದರು. ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಕೆ.ಪ್ರಕಾಶ್ ಪುಸ್ತಕದ ಕೆಲವು ಪ್ರಮುಖ ಆಯಾಮಗಳ ಬಗ್ಗೆ ಬೆಳಕು ಚೆಲ್ಲಿ ಚರ್ಚೆಯನ್ನು ಮುಂದಕ್ಕೊಯ್ದರು. ಆ ಮೇಲೆ ಚರ್ಚೆಯಲ್ಲಿ ಸಭಿಕರು ಭಾಗವಹಿಸಿದರು.
20140726_173653 (2)
1980ರ ದಶಕದ ನಂತರ ಅಕಾಡೆಮಿಕ್ ಚರ್ಚೆಗಳಿಂದ ಮತ್ತು ವಿಶ್ವಸಂಸ್ಥೆಯ ಮಿಲೆನಿಯಂ ಡೆವಲೆಪ್ ಮೆಂಟ್ ಗೋಲ್ಸ್ ನಿಂದ  ಅಭಿವೃದ್ಧಿಯ ಬಗ್ಗೆ ಹೊಮ್ಮಿದ ವಿಚಾರಗಳು ಅಕಾಡೆಮಿಕ್ ಸರಕಾರಿ ವಲಯಗಳಿಗೆ ಸೀಮಿತವಾಗಿದ್ದವು. ‘ಅಭಿವೃದ್ಧಿ ಮತ್ತು ರಾಜಕೀಯ’ ಇವನ್ನು ಜನಪರ ದೃಷ್ಟಿಯಿಂದ ಟೀಕಾತ್ಮಕವಾಗಿ ನೋಡುತ್ತಾ ಜನರ ಮಧ್ಯೆ ಕೊಂಡೊಯ್ಯುವ ವಿಶಿಷ್ಟ ಪ್ರಯತ್ನ. ವಿಶಾಲವಾದ ಕ್ಯಾನ್ವಾಸ್ ಹೊಂದಿದ್ದೂ ನಿರ್ದಿಷ್ಟವಾಗಿದ್ದೂ ಎಲ್ಲರಿಗೂ ನಿಲುಕುವ ಪರಿಭಾಷೆಯಲ್ಲಿ ಸರಾಗವಾಗಿ ಓದಿಸಿಕೊಂಡು ಹೋಗುವ ಕೃತಿ ಇದು. ಜನಪರ ಕಾರ್ಯಕರ್ತರಿಗೆ ಅಭಿವೃದ್ಧಿ ಬಗ್ಗೆ ಉತ್ತಮ ಕೈಪಿಡಿ. ಬಡತನ, ಮಹಿಳೆ, ಜಾತಿ, ಗುರುತಿನ ರಾಜಕೀಯ, ಸಾಂಸ್ಕೃತಿಕ ರಾಜಕೀಯ, ಶಿಕ್ಷಣ ಹಾಗೂ ಅಭಿವೃದ್ಧಿ ನಡುವಿನ ಸಂಬಂಧಗಳನ್ನು ಎಳೆ ಎಳೆಯಾಗಿ ಬಿಡಿಸಿಡುವ ಕೃತಿ. ಅಭಿವೃದ್ಧಿ ಬಗ್ಗೆ ಇರುವ ಹಲವು ಜನ-ವಿರೋಧಿ (ಉದಾ: ಶ್ರೀಮಂತರ ಅಭಿವೃದ್ಧಿ ಸೋರುತ್ತಾ ಕ್ರಮೇಣ  ಬಡವರಿಗೆ ತಲುಪುತ್ತದೆ ಎನ್ನುವ ಟ್ರಿಕಲ್ ಡೌನ್ ಥಿಯರಿ) ಮತ್ತು ಜನ-ಪರ ದೃಷ್ಟಿಕೋಣಗಳನ್ನು ವಿಶ್ಲೇಷಿಸಿ ತಾರ್ಕಿಕವಾಗಿ ನಿರ್ದಿಷ್ಟ ಜನಪರ ದೃಷ್ಟಿ ಮೂಡಿಸುತ್ತದೆ. ಸಾಮಾನ್ಯವಾಗಿ ಯಾವುದೇ ಅಭಿವೃದ್ಧಿಯ ಚರ್ಚೆಯಲ್ಲಿ ಪ್ರಧಾನವಾಗಿ ಯಜಮಾನಿಕೆ ಸ್ಥಾಪಿಸುವ ಜಿಡಿಪಿ ಮತ್ತು ಅಗಾಧ ಗೋಜಲು ಮಾಡುವ ಅಂಕೆಸಂಖ್ಯೆಗಳನ್ನು ಬಹುಶ: ಉದ್ದೇಶಪೂರ್ವಕವಾಗಿಯೇ ಬಿಟ್ಟುಕೊಟ್ಟು ಪರಿಕಲ್ಪನೆಗಳ ಮೇಲೆ ಒತ್ತು ಕೊಡುತ್ತದೆ. 1950ರ ದಶಕದಿಂದ 1970ರವರೆಗಗಿನ ಅಭಿವೃದ್ಧಿ ಮಾದರಿಯನ್ನು ಸೋಶಲಿಸ್ಟ್ ಅಥವಾ ಸೋಶಲ್ ಡೆಮೊಕ್ರಾಟಿಕ್ ಎಂದು ಕರೆಯುವುದು ತಪ್ಪಾಗುತ್ತದೆ. ಇದು ಕ್ಯಾಪಿಟಲಿಸ್ಟ್ ಅಭಿವೃದ್ಧಿಯ  (ಬಂಡವಾಳಶಾಹಿ ಬಳಿ ಸಾಕಷ್ಟು ಬಂಡವಾಳ ಇಲ್ಲದಾಗ ಅಥವಾ ಲಾಭ ಇಲ್ಲದ ಕ್ಷೇತ್ರದಲ್ಲಿ ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲದ)ಮೊದಲ ಹಂತದಲ್ಲಿ ಕಂಡು ಬರುವ ಪ್ರಭುತ್ವ ಬಂಡವಾಳಶಾಹಿ ಅಷ್ಟೆ. ಮೈಸೂರು ಪ್ರಾಂತ್ಯದಲ್ಲಿ ಸಹ ಸ್ವಾತಂತ್ರ್ಯಪೂರ್ವದಲ್ಲಿ ಇಂತಹುದೇ ಮಾದರಿಯನ್ನು ನೋಡಬಹುದು. 1990ರ ದಶಕದ ನಂತರ ವ್ಯಾಪಕವಾಗಿ ಜಾರಿಗೆ ಬಂದ ‘ಮಾರುಕಟ್ಟೆ ನಿರ್ದೇಶಿತ ಮಾದರಿ’ ಕ್ಯಾಪಿಟಲಿಸ್ಟ್ ಮಾದರಿಯ ಇನ್ನೊಂದು ಹಂತ. ಅದಕ್ಕೆ ಮೂಲಕಾರಣವಾದ ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳದ ಉದಯ, ಅಲ್ಲದೆ ವಿಕೇಂದ್ರೀಕರಣ, ಪರಿಸರ ತಾಳಿಕೊಳ್ಳುವ ಅಭಿವೃದ್ಧಿ ಇವುಗಳ ಪ್ರಸ್ತಾಪ ಇದ್ದರೆ ಪುಸ್ತಕ ಇನ್ನಷ್ಟು ಸಮಗ್ರವಾಗುತ್ತಿತ್ತು. ಆಮ್ ಆದ್ಮಿ ಪಕ್ಷದ ಅಭಿವೃದ್ಧಿ ಮಾದರಿ, ಗುರುತಿನ ರಾಜಕೀಯ ಇತ್ಯಾದಿಗಳ ಬಗ್ಗೆ ಕೆಲವು ಸಂದೇಹಗಳನ್ನು ವ್ಯಕ್ತಪಡಿಸಲಾಯಿತು. ಇದು ನಡೆದ ಮಾತುಕತೆಗಳ ಸಾರ.
20140726_155300 (2)
ಮಾತುಕತೆಯಲ್ಲಿ ಭಾಗವಹಿಸಿದವರ ಪ್ರಶ್ನೆ, ಸಂದೇಹಗಳಿಗೆ ಪ್ರತಿಕ್ರಿಯಿಸುತ್ತಾ ತಮ್ಮ ಪುಸ್ತಕದ ಸಾರದ ಬಗ್ಗೆ ಪ್ರೊ.ಚಂದ್ರ ಪೂಜಾರಿ ಮಾತನಾಡಿದರು. ಆಮ್ ಆದ್ಮಿ ಪಕ್ಷ ಕ್ಯಾಪಿಟಲಿಸ್ಟ್ ಹಿಡಿತದಲ್ಲಿರುವ ಮಾಧ್ಯಮಗಳ ಸೃಷ್ಟಿ. ಎಡಪಕ್ಷಗಳ ಜನಪರ ಬದಲಿ ಮುನ್ನೆಲೆಗೆ ಬರದಂತೆ ಅದನ್ನು ಮಾಧ್ಯಮಗಳು ಅಬ್ಬರದ ಪ್ರಚಾರ ಕೊಟ್ಟು ಮುಂದಿಟ್ಟವು. ದೆಹಲಿಯಲ್ಲಿ ಅಧಿಕಾರಕ್ಕೆ ಬಂದು ಕೆಲವು ಕ್ಯಾಪಿಟಲಿಸ್ಟ್ -ವಿರೋಧಿ (ಅಂಬಾನಿ ಮೇಲೆ ಚಾರ್ಜ್ ಶೀಟ್, ವಿದ್ಯುತ್ ಕಂಪನಿಗಳ ಆಡಿಟ್) ಕ್ರಮಗಳನ್ನು ಕೈಗೊಂಡ ಕೂಡಲೇ ಅದನ್ನು ಮಾಧ್ಯಮಗಳೇ ನಾಶ ಮಾಡಿದವು. ಆಮ್ ಆದ್ಮಿ ಪಕ್ಷದ ಉದಯ, ಏಳು-ಬೀಳು ಬಗ್ಗೆ ಪುಸ್ತಕದಲ್ಲಿ ವ್ಯಕ್ತಪಡಿಸಿದ  ತಮ್ಮ ಅಭಿಪ್ರಾಯ ಬದಲಾಗಿಲ್ಲ ಎಂದರು.  ಬಡತನ, ನಿರುದ್ಯೋಗ, ಕಾರ್ಮಿಕರ ಶೋಷಣೆ ಇವೆಲ್ಲ ಕ್ಯಾಪಿಟಲಿಸ್ಟ್ ಮಾದರಿಯ ನೀತಿಗಳ ಫಲ. ಸರಕಾರ ಇದನ್ನು  ನಿವಾರಿಸುವುದಿಲ್ಲ ಮಾತ್ರವಲ್ಲ, ಇವನ್ನು ಸೃಷ್ಟಿ ಮಾಡುತ್ತವೆ. ಅಭಿವೃದ್ಧಿಗೆ ಸಂಬಂಧಿಸಿದಂತೆ ಕಾಂಗ್ರೆಸ್-ಬಿಜೆಪಿ ಸೇರಿದಂತೆ ಹಲವು ಪಕ್ಷಗಳ ಧೋರಣೆ ಕ್ಯಾಪಿಟಲಿಸ್ಟ್ ಪರ ಎಂದು ಮುಂದಿನ 5-10 ವರ್ಷಗಳಲ್ಲಿ ಬಹುಪಾಲು ಜನರಿಗೆ ಸ್ಪಷ್ಟವಾಗಲಿದೆ. ಅವುಗಳ ಬಗ್ಗೆ ಭ್ರಮನಿರಸನವಾಗಲಿದೆ. ಈ ಅವಧಿ ಪರ್ಯಾಯ ಅಭಿವೃದ್ದಿ ಮಾದರಿ ಆಧಾರಿತ ಪರ್ಯಾಯ ರಾಜಕೀಯದ ಬಗ್ಗೆ ಜನರಿಗೆ ಮನವರಿಕೆ ಮಾಡಲು ಪ್ರಶಸ್ತವಾದ ಸಮಯ. ಎಡ-ಪ್ರಗತಿಪರ ಪಕ್ಷಗಳಿಗೆ ಇದು ಒಂದು ಸವಾಲು ಮತ್ತು ಮಹಾನ್ ಅವಕಾಶ ಕೂಡಾ. ವರ್ಗ ದೃಷ್ಟಿಕೋಣ ಬಿಟ್ಟು ಕೊಡದೆ ಎಲ್ಲಾ ಸಮುದಾಯಗಳ ತಳಸ್ತರದ ಜನರನ್ನು ಒಗ್ಗೂಡಿಸುವ ಮತ್ತು ಮುಟ್ಟುವ ಹೊಸ ಪರಿಭಾಷೆಯನ್ನು ರೂಪಿಸಬೇಕಾಗಿದೆ ಎಂದು ಅವರು ಹೇಳಿದರು. ಇದು ವಿಚಾರಗಳ ಸಮರ. ಪ್ರಗತಿಪರ ವಿಚಾರಗಳನ್ನು ಜನರ ಪ್ರಜ್ಞೆಯ ಭಾಗವಾಗಿಸುವ ಸಮರ. ಇದರಲ್ಲಿ ಶಿಕ್ಷಿತರು ದೊಡ್ಡ ಪ್ರಮಾಣದಲ್ಲಿ ಭಾಗವಹಿಸಬೇಕು. ಈ ನಿಟ್ಟಿನಲ್ಲಿ ಈ ಪುಸ್ತಕ ಒಂದು ಪ್ರಯತ್ನ ಎಂದು ಚಂದ್ರ ಪೂಜಾರಿಯವರು ಹೇಳಿದರು.
ವಿ.ಜೆ.ಕೆ.ನಾಯರ್ ಅಧ್ಯಕ್ಷೀಯ ಮಾತುಗಳನ್ನು ಆಡುತ್ತಾ ಕ್ಯಾಪಿಟಲಿಸ್ಟ್ ಮಾದರಿಯ ಈಗಿನ ಹಂತದ  ನೀತಿಗಳು 1980ರ ದಶಕದಲ್ಲಿ ವಿಶ್ವಬ್ಯಾಂಕ್ ಹೊರಿಸಿದ ನೀತಿಗಳ ಫಲ ಎಂದು ಬಿ,ಇ.ಎಲ್.ನ ಉದಾಹರಣೆಯೊಂದಿಗೆ ವಿವರಿಸಿದರು. ಈ  ಹಂತದಲ್ಲಿ ಕಾರ್ಮಿಕರಿಂದ ಹೆಚ್ಚುವರಿ ಮೌಲ್ಯ ಕಿತ್ತುಕೊಳ್ಳುವುದರ ಜತೆ, ಎಲ್ಲಾ ದುಡಿಯುವ ಜನರ ಮತ್ತು ಸಾರ್ವಜನಿಕ ಸಂಪತ್ತನ್ನು ಕಿತ್ತುಕೊಳ್ಳುವ ಆದಿಮ ಕ್ಯಾಪಿಟಲ್ ಸಂಗ್ರಹದಲ್ಲಿ ತೊಡಗಿದ್ದಾರೆ ಎಂದರು. ಪುಸ್ತಕಪ್ರೀತಿಯ ಕೆ.ಎಸ್.ವಿಮಲ ಮಾತುಕತೆಯನ್ನು ನಡೆಸಿಕೊಟ್ಟರು.

‘ಅಭಿವೃದ್ಧಿ ಮತ್ತು ರಾಜಕೀಯ’ ಪುಸ್ತಕದಲ್ಲಿ ಏನಿದೆ ?

‘ಅಭಿವೃದ್ಧಿ ಮತ್ತು ರಾಜಕೀಯ’ ಪುಸ್ತಕದಲ್ಲಿ ಏನಿದೆ ?
ಕೆಳಗಿರುವ ಪುಸ್ತಕದ ಪರಿವಿಡಿ ಈ ಬಗ್ಗೆ ಚಿತ್ರ ನೀಡುತ್ತದೆ..

20140723_124232 (2)

‘ಅಭಿವೃದ್ಧಿ ಮತ್ತು ರಾಜಕೀಯ’ ಯಾವುದರ ಬಗ್ಗೆ ?

ಅಭಿವೃದ್ಧಿ ಮತ್ತು ರಾಜಕೀಯ’ ಪುಸ್ತಕ ಯಾವುದರ ಬಗ್ಗೆ ..

ಅದನ್ನು ಪುಸ್ತಕದ ಬ್ಲರ್ಬಿನಲ್ಲಿ ಇರುವ ಲೇಖಕ ಪ್ರೊ.ಚಂದ್ರ ಪೂಜಾರಿ ಅವರ ಮಾತುಗಳಲ್ಲೇ ಕೇಳಿ..

 
20140723_124136 (2)

ಪುಸ್ತಕಪ್ರೀತಿ ತಿಂಗಳ ಮಾತುಕತೆ-1 : ಹೋಗುವುದು ಹೇಗೆ ?

ಪುಸ್ತಕಪ್ರೀತಿ ತಿಂಗಳ ಮಾತುಕತೆ-1 ನಡೆಯುವ ಸ್ಥಳಕ್ಕೆ ಹೋಗುವುದು ಹೇಗೆ ?

 

ವಾಹನದಲ್ಲಿ ಬರುವುದಾದರೆ ಇಸ್ಕಾನ್ ಅಥವಾ ನಾರಾಯಣ ನೇತ್ರಾಲಯದ ಎದುರು ಇರುವ ಮಹಾಲಕ್ಷ್ಮಿ ಲೇ ಔಟ್ ರಸ್ತೆಗೆ ತಿರುಗಬೇಕು

(ರಾಜಾಜಿನಗರದಿಂದ ಬುರುವುದಾದರೆ ಎಡಕ್ಕೆ ಯಶವಂತಪುರದಿಂದ ಬರುವುದಾದರೆ ಬಲಕ್ಕೆ)

 

ಮೆಟ್ರೊದಲ್ಲಿ ಬಂದರೆ ‘ಮಹಾಲಕ್ಷ್ಮಿ’ ಸ್ಟೇಶನಿನಲ್ಲಿ ಇಳಿದು ಮ್ಯಾಪಿನಲ್ಲಿ ತೋರಿಸಿದಂತೆ ಹೋಗಬೇಕು.

 

ಬಸ್ಸಿನಲ್ಲಿ ಬಂದರೆ ‘ಮಹಾಲಕ್ಷ್ಮಿ ಲೇ ಔಟ್ ಎಂಟ್ರೆನ್ಸ್’  ಸ್ಟಾಪಿನಲ್ಲಿ ಇಳಿದು ಮ್ಯಾಪಿನಲ್ಲಿ ತೋರಿಸಿದಂತೆ ಹೋಗಬೇಕು.

ಮೆಜೆಸ್ಟಿಕ್ ನಿಂದ ಬರುವ ಬಸ್ಸು ರೂಟ್ ನಂಬರುಗಳು – 80, 80A, 80B, 80C, 80D, 252F

ವಿಜಯನಗರದಿಂದ ಬರುವ ಬಸ್ಸು ರೂಟ್ ನಂಬರುಗಳು – 200, 64

ಶಿವಾಜಿನಗರದಿಂದ ಬರುವ ಬಸ್ಸು ರೂಟ್ ನಂಬರುಗಳು – 79E

ಸಿಟಿ ಮಾರ್ಕೆಟ್ ನಿಂದ ಬರುವ ಬಸ್ಸು ರೂಟ್ ನಂಬರುಗಳು – 77, 77E

 

ವಿಜಯನಗರದಿಂದ ಬರುವ ಈ ಬಸ್ಸು ರೂಟ್ ನಂಬರುಗಳಿಗೆ ಮಾತ್ರ  ಇಸ್ಕಾನ್’ಸ್ಟಾಪಿನಲ್ಲಿ ಇಳಿದು ಮ್ಯಾಪಿನಲ್ಲಿ ತೋರಿಸಿದಂತೆ ಹೋಗಬೇಕು.

401, 401B, 401E, 401R

Pusthaka Preethi Mathukathe-Routemap

 

ಪುಸ್ತಕಪ್ರೀತಿ ತಿಂಗಳ ಮಾತುಕತೆ -1: ಚಂದ್ರ ಪೂಜಾರಿ ಅವರ ‘ಅಭಿವೃದ್ಧಿ ಮತ್ತು ರಾಜಕೀಯ’

Pusthaka Preethi Mathukathe 1-July26