`ಇಂಡಿಯಾ 70′, ಜನಶಕ್ತಿ ಕನ್ನಡ ವಾರಪತ್ರಿಕೆಯ ವಿಶೇಷ ಸಂಚಿಕೆಯ ಬಿಡುಗಡೆಗೆ ಆಹ್ವಾನ

ಕ್ಯೂಬಾ ಎಂದರೆ ಕ್ಯಾಸ್ಟ್ರೋ, ಕ್ಯಾಸ್ಟ್ರೋ ಎಂದರೆ ಕ್ಯೂಬಾ ಅನ್ನುವಂತೆ ಬದುಕಿದ ಕ್ಯಾಸ್ಟ್ರೋ ಜನ್ಮದಿನವಾದ ಇಂದು ಅವರನ್ನು ನೆನೆಸೋಣ

ಕ್ಯೂಬಾ ಎಂದರೆ ಕ್ಯಾಸ್ಟ್ರೋ, ಕ್ಯಾಸ್ಟ್ರೋ ಎಂದರೆ ಕ್ಯೂಬಾ – ಈ ಎರಡನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಫೀಡೆಲ್ ಕ್ಯಾಸ್ಟ್ರೊ ತಮ್ಮ ದೇಶವನ್ನು, ತಮ್ಮ ಜನರನ್ನು ಬದುಕಿದರು.

ದೈತ್ಯ ಅಮೆರಿಕಾ ಸಂಯುಕ್ತ ಸಂಸ್ಥಾನದ ಮಗ್ಗುಲಲ್ಲಿರುವ ಕ್ಯೂಬಾ ಎಂಬ ಪುಟ್ಟ ದೇಶದ ಅಧ್ಯಕ್ಷರಾಗಿದ್ದ ಫೀಡೆಲ್ ಕ್ಯಾಸ್ಟ್ರೊ 5 ದಶಕಗಳಷ್ಟು ಸುದೀರ್ಘ ಕಾಲ ಅಧಿಕಾರದಲ್ಲಿದ್ದವರು. 1959ರಿಂದ 76ರವರೆಗೆ ಅಧ್ಯಕ್ಷರಾಗಿಯೂ 1976ರಿಂದ 2008ರವರೆಗೆ ಅಧ್ಯಕ್ಷರಾಗಿಯೂ ಕ್ಯೂಬಾವನ್ನು ಮುನ್ನಡೆಸಿದ ಕ್ಯಾಸ್ಟ್ರೋ, ನಂತರದಲ್ಲಿ ರಾಜಕೀಯ ನಿವೃತ್ತಿ ಪಡೆದಿದ್ದರು. ಅಲ್ಲಿಂದ ಮುಂದೆ ಅವರು ಸಾರ್ವಜನಿಕರ ನಡುವೆ ಕಾಣಿಸಿಕೊಂಡಿದ್ದು ಬಹಳ ಅಪರೂಪ. ಹಾಗಿದ್ದೂ ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಕಮ್ಯುನಿಸ್ಟ್ ಪಕ್ಷದ ಸಭೆಯಲ್ಲಿ ಭಾಗವಹಿಸಿ, “ನಾನು ಜೀವನದಲ್ಲಿ ಇಷ್ಟು ವರ್ಷಗಳನ್ನು ನೋಡ್ತೇನೆ ಅಂದುಕೊಂಡಿರಲಿಲ್ಲ, ಕ್ಯೂಬಾವನ್ನು ಚೆನ್ನಾಗಿ ನೊಡಿಕೊಳ್ಳಿ” ಎಂದು ಭಾವುಕರಾಗಿ ಮಾತನಾಡಿದ್ದರು. ಅವರ ಈ ಮಾತು ಈ ಹೊತ್ತು ಕ್ಯೂಬನ್ನರ ಪಾಲಿಗೆ ಅಂತಿಮ ಸಂದೇಶದಂತೆ ಮಹತ್ವದ್ದಾಗಿಯೂ, ಭವಿಷ್ಯದ ದಿನಗಳಿಗೆ ನಿರ್ದೇಶನದಂತೆಯೂ ಇದೆ.

ಜಾಗತಿಕ ರಾಜಕೀಯ ಪಂಡಿತರು, ಟೀಕಾಕಾರರು ಏನೇ ಹೇಳಿದರೂ ಬಹುಪಾಲು ಕ್ಯೂಬನ್ನರು ತಮ್ಮ ಪ್ರೀತಿಯ ನಾಯಕನನ್ನು ಬಿಟ್ಟುಕೊಡುವುದಿಲ್ಲ. “ಎಲ್ಲ ದೇಶಗಳಲ್ಲೂ ಒಂದಲ್ಲ ಒಂದು ಸಮಸ್ಯೆ ಇರುವಂತೆಯೇ ಕ್ಯೂಬಾದಲ್ಲೂ ಇದೆ. ಆದರೆ ನೀವು ಮನೆಯಿಲ್ಲದೆ ಬೀದಿಯ ಮೇಲೆ ವಾಸಿಸುವ ಒಬ್ಬನೇ ಒಬ್ಬ ಕ್ಯೂಬನ್ ಪ್ರಜೆಯನ್ನು ನೋಡಲಾರಿರಿ” ಎಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಮತ್ತು ಅದಕ್ಕೆ ಕಾರಣರಾದ ಕ್ಯಾಸ್ಟ್ರೋರನ್ನು ಮನದುಂಬಿ ನೆನೆಯುತ್ತಾರೆ.

ತನ್ನ ನೆಲಕ್ಕಾಗಿ ಬಾಳಿ ಬದುಕಿದ, ಸಮಾನತೆ ಮತ್ತು ಸರ್ವೋದಯಕ್ಕಾಗಿ ಶ್ರಮಿಸಿದ ನಾಯಕನೊಬ್ಬನ ಯಶಸ್ಸಿಗೆ ಇದಕ್ಕಿಂತ ದೊಡ್ಡ ಮಾನದಂಡ ತಾನೆ ಏನಿದ್ದೀತು!?

ಸರ್ವಾಧಿಕಾರವನ್ನು ಎದುರಿಸಿ ನಿಂತ ಹೋರಾಟದಲ್ಲಿ ಬಂಧಿಯಾಗಿ ವಿಚಾರಣೆಗೆ ಒಳಗಾದಾಗ ತನ್ನ ಪರವಾಗಿ ತಾನೇ ವಾದ ಮಾಡಿದ ವಿಶಿಷ್ಟ ವ್ಯಕ್ತಿ ಫೀಡೆಲ್ ಕ್ಯಾಸ್ಟ್ರೋ. 1953 ಅಕ್ಟೋಬರ್ 6 ರಂದು ತಮ್ಮ ವಾದದ ಕೊನೆಯಲ್ಲಿ ಲಿಖಿತ ರೂಪದಲ್ಲಿ ಓದಿದ ದೀರ್ಘ ಭಾಷಣದ ಅಂತಿಮ ವಾಕ್ಯವೇ “ಇತಿಹಾಸ ನನ್ನನ್ನು ಮುಕ್ತಗೊಳಿಸುತ್ತದೆ”. ಈ ಲಿಖಿತ ಭಾಷಣವು ಒಂದು ದಸ್ತಾವೇಜು. ಇದು ದಬ್ಬಾಳಿಕೆ (tyranny) ವಿರುದ್ಧ ಕ್ರಾಂತಿಕಾರಿ ಸಂಘರ್ಷದ ಒಂದು ಪ್ರಣಾಳಿಕೆ, ಕಾರ್ಯಕ್ರಮ, ಆರೋಪ ಮತ್ತು ಖಂಡನೆಯಾಗಿದೆ. ಜೊತೆಗೆ ಕಾನೂನಾತ್ಮಕ, ನೈತಿಕ, ತಾತ್ವಿಕ ಮತ್ತು ರಾಜಕೀಯ ಪ್ರತಿವಾದವಾಗಿದೆ. ಇದು ಒಂದು ರೀತಿ ಕ್ಯೂಬನ್ ಕ್ರಾಂತಿಯ ಮೂಲಭೂತ ದಸ್ತಾವೇಜು. ಕ್ಯೂಬಾ ಮತ್ತು ಲ್ಯಾಟಿನ್ ಅಮೇರಿಕಾದಲ್ಲಿ ರಾಜಕೀಯ ತತ್ವ ಮತ್ತು ಕ್ರಾಂತಿಕಾರಿ ಕಾರ್ಯಾಚರಣೆಯ ಚರಿತ್ರೆಯಲ್ಲಿ ಒಂದು ಪ್ರಮುಖ ಪಠ್ಯವಾಗಿದೆ.

ಇಂತಹ ಮಹಾನ್ ಚೇತನದ ಜೀವನ ಚರಿತ್ರೆ ಕನ್ನಡದ ಓದುಗರಿಗಾಗಿ ಪ್ರಕಟಣೆಗೊಂಡಿದೆ

-ಕೃಪೆ ಜನಶಕ್ತಿ ವಾರಪತ್ರಿಕೆ, ಮಾಧ್ಯಮನೆಟ್

ಶೀರ್ಷಿಕೆ : ಕ್ಯಾಸ್ಟ್ರೋ ಕತೆ ಮೂಲ:ಇಗ್ನೀಷಿಯಾ ರಮೋನೆಟ್  ಕನ್ನಡಕ್ಕೆ : ಕೆ.ಪ್ರಕಾಶ್ ಪ್ರಕಾಶನ : ಕ್ರಿಯಾ ಪುಸ್ತಕ ಪುಟ :  286   ಬೆಲೆ : ರೂ.225 ಪ್ರಕಟಣಾ ವರ್ಷ : 2017