ರಾಷ್ಟ್ರೀಯವಾದದ ಅರ್ಥ ಹುಡುಕುತ್ತಾ

ಸರಕಾರವೊಂದು ತನ್ನನ್ನು ’ರಾಷ್ಟ್ರ’ದೊಂದಿಗೆ ಸಮೀಕರಿಸಿಕೊಂಡು, ತನ್ನ ಟೀಕಾಕಾರರನ್ನು, ಭಿನ್ನಮತೀಯರನ್ನು ’ರಾಷ್ಟ್ರ-ವಿರೋಧಿ’ ಎಂದು ಕರೆಯುವುದು ಜರೆಯುವುದು ಜಗತ್ತಿನಲ್ಲಾಗಲಿ ಭಾರತದಲ್ಲಾಗಲಿ ಹೊಸದೇನಲ್ಲ. ಅಂತಹವರ ಮೇಲೆ ’ದೇಶದ್ರೋಹ’ದ ಕೇಸು ದಾಖಲಿಸಿ ಬಂಧಿಸುವುದೂ ಹೊಸದಲ್ಲ. ಆದರೆ ಫೆಬ್ರವರಿ ೯, ೨೦೧೬ರಂದು ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿ ಸಂಘದ ಚುನಾಯಿತ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ನನ್ನು ಮತ್ತಿತರ ವಿದ್ಯಾರ್ಥಿಗಳನ್ನು ’ದೇಶದ್ರೋಹ’ದ ಕೇಸು ಹಾಕಿ ಬಂಧಿಸಿದ್ದು ಒಂದು ಹೊಸ ಟ್ರೆಂಡಿನ ಆರಂಭವಾಗಿತ್ತು. ದೇಶವ್ಯಾಪಿಯಾಗಿ ಉನ್ನತ ಶಿಕ್ಷಣದ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ವೆಚ್ಚ ಏರಿಸುವ, ಅದನ್ನು ಬಡ ವಿದ್ಯಾರ್ಥಿಗಳಿಗೆ ನಿಲುಕದಂತೆ ಮಾಡುವ, ಅಲ್ಲಿನ ಕ್ಯಾಂಪಸ್ ಪ್ರಜಾಪ್ರಭುತ್ವವನ್ನು ಕೊನೆಗೊಳಿಸುವ ನೀತಿಗಳ ಜಾರಿ, ಅದನ್ನು ವಿರೋಧಿಸಿದ ಅದಕ್ಕೆ ಪ್ರತಿರೋಧ ಒಡ್ಡಿದ ವಿದ್ಯಾರ್ಥಿ ನಾಯಕರು ಹಾಗೂ ವಿದ್ಯಾರ್ಥಿಗಳ ಮೇಲೆ ಮತ್ತು ಜತೆಗೆ ಎಲ್ಲಾ ರಾಜಕೀಯ ವಿರೋಧಿಗಳ ಮೇಲೆ ’ದೇಶ-ವಿರೋಧಿ’, ’ದೇಶ-ದ್ರೋಹಿ’ ಎಂದು ವ್ಯಾಪಕವಾಗಿ ಅಪಪ್ರಚಾರ ಮಾಡುವುದು, ಖಾಸಗಿ ಸಶಸ್ತ್ರ ಗ್ಯಾಂಗುಗಳು ಅವರ ಮೇಲೆ ದಾಳಿ-ಹಿಂಸಾಚಾರಗಳನ್ನು ಎಸಗುವುದು ಈ ಹೊಸ ಟ್ರೆಂಡಿನ ಮುಖ್ಯ ಗುಣಗಳಾಗಿದ್ದವು. ಜೆಎನ್‌ಯು ಮತ್ತಿತರ ಉನ್ನತ ಶಿಕ್ಷಣಗಳ ಮೇಲೆ ಡಿಸೆಂಬರ್ ೨೦೧೯ರಿಂದ ನಡೆದ ಇನ್ನೊಂದು ಸುತ್ತಿನ ದಾಳಿ ಇನ್ನಷ್ಟು ತೀವ್ರವಾಗಿದ್ದು, ಇದು ತಾರಕಕ್ಕೆ ಮುಟ್ಟಿದೆ.

೨೦೧೬ರಿಂದಲೂ ಇದಕ್ಕೆ ಪ್ರತಿರೋಧವೂ ಬೆಳೆಯುತ್ತಾ ಬಂದಿದೆ ಮತ್ತು ಅದು ಹೆಚ್ಚೆಚ್ಚು ವ್ಯಾಪ್ತಿ ಹಾಗೂ ಆಳಗಳನ್ನು ಪಡೆಯುತ್ತಿದೆ. ಈ ಟ್ರೆಂಡ್ ಒಂದು ಹೊಸ ಸಕಾರಾತ್ಮಕ ಸಂಗತಿಯನ್ನು ಹುಟ್ಟು ಹಾಕಿತ್ತು.  ದೇಶ/ರಾಷ್ಟ್ರವೆಂದರೇನು? ರಾಷ್ಟ್ರವಾದ ಎಂದರೇನು? ರಾಷ್ಟ್ರವಾದದ ಹಲವು ವಿಧಗಳಿವೆಯೆ? ಇದ್ದರೆ ’ಸರಿಯಾದ’ ರಾಷ್ಟ್ರವಾದವನ್ನು ನಿರ್ಧರಿಸುವವರು ಯಾರು? ಒಂದು ಪ್ರದೇಶದ ಅಥವಾ ಒಂದು ಜನವಿಭಾಗದ ಜನರು ತಮ್ಮ ಆಶೋತ್ತರಗಳು ಈಡೇರದಿದ್ದಾಗ ಅಥವಾ ದಮನಕ್ಕೊಳಗಾದಾಗ ಅವರು ಆಳುವವರ ಪ್ರಭುತ್ವದ ಅಧಿಕೃತ ’ರಾಷ್ಟ್ರವಾದ’ವನ್ನು ಪ್ರಶ್ನಿಸುವುದು, ಅದಕ್ಕೆ ಬದಲಿ ಪ್ರಸ್ತಾವಿಸುವುದು ತಪ್ಪೆ? ’ದೇಶದ್ರೋಹ’ವೇ? ೨೦೧೬ರ ಜೆಎನ್‌ಯು ಮೇಲೆ ದಾಳಿಯ ಸಂದರ್ಭದಲ್ಲೇ ಈ ಪ್ರಶ್ನೆಗಳು ಜೆಎನ್‌ಯು ನ ಒಳಗೂ ಹೊರಗೂ ತೀವ್ರ ಚರ್ಚೆಗೆ ಒಳಗಾದವು. ಇದಕ್ಕೆ ಉತ್ತರ ಹುಡುಕುವ ಭಾಗವಾಗಿ ಜೆಎನ್‌ಯು ಅಧ್ಯಾಪಕರ ಸಂಘ ಜೆಎನ್‌ಯು ಆಡಳಿತ ಬ್ಲಾಕಿನ ಅಂಗಳದಲ್ಲಿ ರಾಷ್ಟ್ರವಾದದ ಕುರಿತ ವಿವಿಧ ಜ್ಞಾನಕ್ಷೇತ್ರಗಳ (ಇತಿಹಾಸ, ರಾಜಕೀಯಶಾಸ್ತ್ರ, ಸಮಾಜಶಾಸ್ತ್ರ, ಭಾಷಾಶಾಸ್ತ್ರ ಇತ್ಯಾದಿ) ಹಲವು ಪರಿಣತರಿಂದ ಉಪನ್ಯಾಸ ಮಾಲೆ ಏರ್ಪಡಿಸಿತು. ಸುಮಾರು ಒಂದು ತಿಂಗಳ ಕಾಲ ನಡೆದ ೨೪ ಉಪನ್ಯಾಸಗಳಲ್ಲಿ ರೊಮಿಲಾ ಥಾಪರ್, ಪ್ರಭಾತ್ ಪಟ್ನಾಯಕ್, ಗೋಪಾಲ ಗುರು ರಂತಹ ಪ್ರಸಿದ್ಧ ಜೆಎನ್‌ಯು ಪ್ರಾಧ್ಯಾಪಕರಲ್ಲದೆ, ಅಚಿನ್ ವನೈಕ್, ಜೈರಸ್ ಬಾನಾಜಿ ರಂತಹ ದೇಶ/ವಿದೇಶಗಳ ಪ್ರಸಿದ್ಧ ವಿ.ವಿಗಳ ಪರಿಣತರೂ ಉಪನ್ಯಾಸ ನೀಡಿದರು. ಇದು ೨೦೧೬ರಲ್ಲೇ ಇಂಗ್ಲೀಷಿನಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಯಿತು.

ರಾಷ್ಟ್ರವಾದದ ಬಗೆಗಿನ ಗಂಭೀರ ಚರ್ಚೆಯನ್ನು ಕರ್ನಾಟಕದಲ್ಲೂ ಆರಂಭಿಸುವ ಅಗತ್ಯ ಹಿಂದೆಂದಿಗಿಂತಲೂ ಈ ಆವಶ್ಯಕವಾಗಿದೆ.

ರಾಷ್ಟ್ರವಾದದ ಬಗೆಗಿನ ವಿವಿಧ ಅಭಿಪ್ರಾಯಗಳ, ಹಲವು ಮಗ್ಗುಲುಗಳಿಂದ ನೋಡುವ, ಹಲವು ಆಯಾಮಗಳನ್ನು ಪ್ರಸ್ತುತಪಡಿಸುವ ಈ ಪುಸ್ತಕ, ಕರ್ನಾಟಕದ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಬಹಳ ಉಪಯೋಗಿ ಆಕರ ಗ್ರಂಥವಾಗಬಲ್ಲದು. ರಾಷ್ಟ್ರವಾದದ ಬಗೆಗಿನ ಚರ್ಚೆಯ ಕುರಿತು ಆಸಕ್ತಿ ಇರುವ ಎಲ್ಲರಿಗೂ ಇದೊಂದು ಉತ್ತಮ ಕೈಪಿಡಿ. ಕರ್ನಾಟಕದಲ್ಲಿ ರಾಷ್ಟ್ರವಾದದ ಕುರಿತು ಭಿನ್ನಾಭಿಪ್ರಾಯಗಳನ್ನು ಲಾಠಿ-ಮಚ್ಚುಗಳ ಮತ್ತು ಐಪಿಸಿ ಕಲಮುಗಳ ಭಾಷೆಯಲ್ಲಿ ’ಪರಿಹರಿಸು’ವುದರಿಂದ ಗಂಭೀರ ವಾಗ್ವಾದದತ್ತ ಹೊರಳಿಸುವುದರಲ್ಲಿ ಈ ಪುಸ್ತಕ ನೆರವಾಗಬಲ್ಲದು.

ಶೀರ್ಷಿಕೆ : ಜೆಎನ್ ಯು ಅಂಗಳದಲ್ಲಿ ರಾಷ್ಟ್ರೀಯವಾದದ ಕ್ಲಾಸುಗಳು ಅನುವಾದ : ಬಿ. ಶ್ರೀಪಾದ ಭಟ್ ಪ್ರಕಾಶಕರು : ಕ್ರಿಯಾ ಮಾಧ್ಯಮ ಪ್ರೈ. ಲಿ.      ಪುಟಗಳು : 216 ಬೆಲೆ : ರೂ.180/- ಪ್ರಕಟಣಾ ವರ್ಷ : 2020

ಅದು ಬಲು ಕಷ್ಟದ ಕೆಲಸ

ನಿಮ್ಮ ಮಾತುಕತೆಗಳಲ್ಲಿ ಹುದುಗಿದ ಬೆಕ್ಕು

ಸಂಶಯದ ಪಂಜವೆತ್ತಿ

ನನ್ನ ನಂಬಿಕೆಯ ನೀಯತ್ತು ಹಕ್ಕು

ಕೊನೆಗೆ ಸಾಚಾತನವನ್ನು ಪರಚಿ, ಒತ್ತಿ

ನೋವಿಗೆ ಕಣ್ಣು ತುಂಬಿದ್ದರೂ

ಚೆಲ್ಲಿದ ರಕ್ತದಲ್ಲಿ ರಾಷ್ಟ್ರೀಯತೆಯ ಧಾತುಗಳ

ನನ್ನೆದುರಿನಲ್ಲೇ ತನಿಖೆ ಮಾಡುವುದನ್ನು

ಹುಸಿನಗುತ್ತಾ ಎದುರಿಸುವುದಿದೆಯಲ್ಲಾ

ಅದು ಬಲು ಕಷ್ಟದ ಕೆಲಸ

 – ಕೆ ಎಸ್ ನಿಸಾರ್ ಅಹ್ಮದ್

ಸಾವಿರಾರು ನೂರಾರು ವರ್ಷಗಳಿಂದ ಬಾಳಿ ಬದುಕಿ ಬಹುತ್ವದ ಭಾರತ ಕಟ್ಟಿದವರಿಗೆ, ಇಲ್ಲಿನ ಮಣ್ಣಿನ ಕಣಕಣದಲ್ಲೂ ರಕ್ತವನ್ನೇ ಬೆವರಾಗಿಸಿದವರಿಗೆ, ಈ ನೆಲದೊಂದಿಗಿನ ಸಂಬಂಧದ ದಾಖಲೆ ಒದಗಿಸಿ ಎಂದು ಕೇಳುವುದೇ ಮೂರ್ಖತನ. ಇಂತಹ ಮೂರ್ಖತನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜಾತಿ, ಧರ್ಮ, ಭಾಷೆ, ಪ್ರದೇಶ, ಲಿಂಗ ಬೇಧಗಳನ್ನು ಮೀರಿ ದೇಶದಾದ್ಯಂತ ಪ್ರತಿಭಟನೆಯ ಕಿಚ್ಚು ಹಬ್ಬಿದೆ. ಸ್ವಾತಂತ್ರ್ಯ ಚಳುವಳಿಯನ್ನು ನೆನಪಿಸುವಂತೆ ಸಾಗರದ ಅಲೆಗಳಂತೆ ಜನ ಮುನ್ನುಗ್ಗುತ್ತಿದ್ದಾರೆ.

ಈ ಶತಮಾನದ ’ಅವಮಾನಿತ ಕಾಲ’ ಎಂದೇ ವ್ಯಾಖ್ಯಾನಿಸಬಹುದಾದ ಈ  ಕಾಲದಲ್ಲಿ ಕಾವ್ಯ ಬೀದಿಗೆ ಬರದಿರಲು ಸಾಧ್ಯವೇ ಇಲ್ಲ.

ಕೊಪ್ಪಳದ ಕವಿ ಹಾಗೂ ಪತ್ರಕರ್ತ ಸಿರಾಜ್ ಬಿಸರಳ್ಳಿಯವರು ಇತ್ತೀಚೆಗೆ ನಡೆದ ಆನೆಗೊಂದಿ ಉತ್ಸವದಲ್ಲಿ ತಾವು ರಚಿಸಿದ್ದ ’ನಿನ್ನ ದಾಖಲೆ ಯಾವಾಗ ನೀಡುತ್ತಿ?’ ಎಂ ಕವಿತೆಯೊಂದನ್ನು ಓದಿದರು. ಪ್ರಭುತ್ವದ ಭಕ್ತರು  ನೀಡಿದ ದೂರಿನ ಮೇರೆಗೆ ಪೊಲೀಸರು ಕವಿಯ ಮೇಲೆ ಎಫ್ ಐ ಆರ್ ಹಾಕಿದ್ದಾರೆ. ಕವಿಗಳನ್ನು ದೇಶದ್ರೋಹಿಗಳೆಂದು, ಕವಿತೆಗಳನ್ನು ದೇಶದ್ರೋಹದ, ಧರ್ಮದ್ರೋಹದ ಕೃತ್ಯಗಳು ಎಂದು ಪರಿಗಣಿಸುವ ಪರಿಪಾಠ ಇಂದು ನೆನ್ನೆಯದೇನೂ ಅಲ್ಲ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ’ನರಬಲಿ’ ಎಂಬ ಕವಿತೆ ಬರೆದ ದ.ರಾ.ಬೇಂದ್ರೆಯವರನ್ನೂ ಜೈಲಿಗೆ ತಳ್ಳಿತ್ತು ಅಂದಿನ ಬ್ರಿಟಿಶ್ ಸರ್ಕಾರ. ಆ ಮೆಲೆಯೂ ಇಂತ ಪ್ರಕರಣಗಳು ಆಗಾಗ ನಡೆದದ್ದಿದೆ.  ಆದರೆ ಪ್ರತಿರೋಧದ ದನಿಗೆ ಮುಖಾಮುಖಿಯಾಗಲು ಬೆದರಿದ ಪ್ರಭುತ್ವ  ಇಂದು ಈ ದಾಳಿಯನ್ನು ತೀವ್ರಗೊಳಿಸಿದೆ.

ಒಂದು ಕವಿತೆಯ ಮೇಲೆ ಎಫ್ ಐ ಆರ್ ದಾಖಲಿಸಿದ್ದನ್ನು ಪ್ರತಿಭಟಿಸಿ, ಸಿ.ಎ.ಎ-ಎನ್.ಆರ್.ಸಿ-ಎನ್.ಪಿ.ಆರ್ ಗಳನ್ನು ಪ್ರಶ್ನಿಸುವ, ಪ್ರಭುತ್ವಕ್ಕೆ ಸೆಡ್ಡು ಹೊಡೆಯುವ ಸಾಲು ಸಾಲು ಕವಿತೆಗಳು ಬಂದಿವೆ. ಅಕ್ಷರ ಲೋಕದ ಈ ಸಾತ್ವಿಕ ಪ್ರತಿರೋಧ ಹೇಗಿದೆ ಎಂದರೆ ಸಿರಾಜ್ ಬಿಸರಳ್ಳಿಯವರ ಪದ್ಯ ಕೇವಲ ಎರಡು ದಿನಗಳಲ್ಲಿ ೧೧ ಭಾಷೆಗಳಿಗೆ ಅನುವಾದವಾಗಿ ’ವೈರಲ್ ಆಗಿದೆ. ಈಗಾಗಲೇ ಎನ್‌ಆರ್‌ಸಿ-ಪ್ರತಿರೋಧದ ಸಭೆ, ರ‍್ಯಾಲಿ, ಮೆರವಣಿಗೆಗಳಲ್ಲಿ ಕವಿತೆ ವಾಚನ ಸಾಮಾನ್ಯವಾಗಿದೆ. ಅತ್ಯಂತ ಸೃಜನಶೀಲ ಪೋಸ್ಟರುಗಳು, ಬ್ಯಾನರುಗಳು, ಕಲಾಕೃತಿಗಳು ದೇಶದಾದ್ಯಂತ ಪ್ರತಿರೋಧದ ಭಾಗವಾಗಿ ಬಂದಿವೆ. ಒಟ್ಟಾರೆಯಾಗಿ ಇದನ್ನು ’ಎನ್‌ಆರ್‌ಸಿ ವಿರುದ್ಧ ಕಲಾ ಪ್ರತಿರೋಧ’ ಎಂದು ಕರೆಯಬಹುದಾದಷ್ಟು ನಿಚ್ಚಳವಾದ ಟ್ರೆಂಡ್ ಆಗಿದೆ.

’ನಿನ್ನ ದಾಖಲೆ ಯಾವಾಗ ನೀಡುತ್ತಿ?’ ಇಂತಹ ಕಲಾ ಪ್ರತಿರೋಧದ ಕವಿತೆಗಳ ಸಂಕಲನ. ಇಲ್ಲಿ ಕನ್ನಡದಲ್ಲಿ ಪ್ರಮುಖವಾಗಿ ಎನ್‌ಆರ್‌ಸಿ ಗೆ ಪ್ರತಿರೋಧದ ಹಿನ್ನೆಲೆಯಲ್ಲಿ ಬಂದ ಕವಿತೆಗಳಿವೆ. ಇವಲ್ಲದೆ ಚಳುವಳಿಯ ’ಅಧಿಕೃತ ಗೀತೆ’ಯೇ ಆಗಿರುವ ವರುಣ್ ಗ್ರೋವರ್ ಅವರ ’ಹಮ್ ಕಾಗಜ್ ನಹೀ ದಿಖಾಯೆಂಗೆ’ ಸೇರಿದಂತೆ ಹಿಂದಿ, ಇಂಗ್ಲೀಷ್ ಮತ್ತಿತರ ಭಾಷೆಗಳಲ್ಲಿ ಎನ್.ಆರ್.ಸಿ ಗೆ ಪ್ರತಿರೋಧ ಚಳುವಳಿಯ ಭಾಗವಾಗಿ ಬಂದ ಕೆಲವು ಪ್ರಮುಖ ಕವಿತೆಗಳ ಅನುವಾದಗಳೂ ಇವೆ. ಇಲ್ಲಿರುವ ಕವಿತೆಗಳಲ್ಲಿ ’ನನ್ನ ದಾಖಲೆ ಕೇಳುವ ಮೊದಲು ನಿಮ್ಮ ದಾಖಲೆ ತೋರಿಸಿ’ ಎಂದು ಸವಾಲು ಹಾಕುವ ’ಅವರ’ ಕೆಟ್ಟ ಭೀಕರ ದಾಖಲೆಗಳನ್ನು ಬಯಲಿಗೆಳೆಯುವ ಕವಿತೆಗಳು ಒಂದು ವಿಧ. ನಮ್ಮ ಗುರುತು ದಾಖಲೆಗಳಲ್ಲಿ ಅಲ್ಲ, ನೆಲದಲ್ಲಿ ಹಾಸುಹೊಕ್ಕಾಗಿರುವ ನಮ್ಮ ಬದುಕಿನ ವಿವಿಧ ಆಯಾಮಗಳಲ್ಲಿ ಇದೆ ಎಂದು ದೃಢವಾಗಿ ತಿಳಿಹೇಳುವ ಕವಿತೆಗಳು ಇನ್ನೊಂದು ವಿಧ. ಕವಿತೆಗೆ ಬೆದರಿ ಕೇಸು ಹಾಕುವುದನ್ನು ಮತ್ತಿತರ ದಮನ ಕ್ರಮಗಳನ್ನು ಎದುರಿಸುವ, ಲೇವಡಿ ಮಾಡುವ, ಜನರ ದನಿಯಾಗಬಲ್ಲ ಕಾವ್ಯದ ಶಕ್ತಿಯನ್ನು ಎತ್ತಿ ಹಿಡಿಯುವ ಕವಿತೆಗಳು ಮಗದೊಂದು ವಿಧ. ಇವಲ್ಲದೆ ಹಿಟ್ಟರನ ನಾಜಿವಾದ ಅವನೊಂದಿಗೆ ಸತ್ತಿಲ್ಲ ಎಂಬುದರ ಕುರಿತು ಬರೆದ ಆಡೆನ್ ಅವರ ಚಾರಿತ್ರಿಕ ಕವಿತೆಯ ಅನುವಾದವೂ ಇಲ್ಲಿದೆ. ಸರ್ವಾಧಿಕಾರಿ, ಅದರಲ್ಲೂ ಧರ್ಮದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುವ, ಪ್ರಭುತ್ವಗಳ ದಮನದ ವಿರುದ್ಧ ಚಳುವಳಿಗಳ ಪ್ರತಿರೋಧದ ಗೀತೆಯಾಗಿದ್ದು, ಎನ್‌ಆರ್‌ಸಿ ವಿರುದ್ಧ ಚಳುವಳಿಯಲ್ಲೂ ವ್ಯಾಪಕವಾಗಿ ಕೇಳಿ ಬಂದಿರುವ ಫೈಜ್ ಅಹ್ಮದ್ ಫೈಜ್ ಅವರ ’ಹಮ್ ದೇಖೇಂಗೆ’ಯ ಅನುವಾದವೂ ಇದೆ. ಇವಲ್ಲದೆ ಪ್ರತಿರೋಧದ ಭಾಗವಾಗಿ ಬಂದ ಪೋಸ್ಟರುಗಳು, ಕಲಾಕೃತಿಗಳು ಇಲ್ಲಿವೆ.

ಶೀರ್ಷಿಕೆ: ನಿನ್ನ ದಾಖಲೆ ಯಾವಾಗ ನೀಡುತ್ತೀ? ಎನ್ ಆರ್ ಸಿ ಗೆ ಕಲಾ ಪ್ರತಿರೋಧ ಸಂಪಾದಕರು ಯಮುನಾ ಗಾಂವ್ಕರ್ ಪ್ರಕಾಶಕರು ಕ್ರಿಯಾ ಮಾಧ್ಯಮ ಪ್ರೈ.ಲಿ. ಪುಟಗಳು:64 ಬೆಲೆ: ರೂ.50/- ಪ್ರಕಟಣಾ ವರ್ಷ:2020

 

ಜೆಎನ್ಯೂ ಅಂಗಳದಲ್ಲಿ ರಾಷ್ಟ್ರೀಯವಾದದ ಕ್ಲಾಸುಗಳು : ಪುಸ್ತಕ ಬಿಡುಗಡೆಗೆ ಬನ್ನಿ

ಸಮಾಜದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದ್ದು, ಪ್ರಜಾಸತ್ತಾತ್ಮಕ ಆವರಣವು ಕುಗ್ಗುತ್ತಿದೆ

ಇತ್ತೀಚಿನ ವರ್ಷಗಳಲ್ಲಿ, ಭಾರತದಲ್ಲಿ ಮಾನವಹಕ್ಕು ಹೋರಾಟಗಾರರ ಮೇಲೆ ಹಲ್ಲೆಗಳು ಹೆಚ್ಚಾಗುತ್ತಿದ್ದು, ಅವರನ್ನು ಅಪರಾಧಿಗಳಂತೆ ಚಿತ್ರಿಸಲಾಗುತ್ತಿದೆ. ಸಮಾಜದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದ್ದು, ಪ್ರಜಾಸತ್ತಾತ್ಮಕ ಆವರಣವು ಕುಗ್ಗುತ್ತಿದೆ. ಈ ಬಗ್ಗೆ ನಾಗರಿಕರು, ಸಾಮಾಜಿಕ ಸಂಘಟನೆಗಳು ಆತಂಕಗೊಂಡಿವೆ. ಈ ಹಿನ್ನೆಲೆಯಲ್ಲಿ ’ಕುಗ್ಗುತ್ತಿರುವ ಪ್ರಜಾಸತ್ತಾತ್ಮಕ ಆವರಣ ಕುರಿತ ನಾಗರಿಕ ಆಯೋಗ’ (ಪೀಪಲ್ಸ್ ಕಮಿಷನ್ ಆನ್ ಶ್ರಿಂಕಿಂಗ್ ಡಮಾಕ್ರೆಟಿಕ್ ಸ್ಪೇಸ್ – ಪಿಸಿಎಸ್‌ಡಿಎಸ್) ಎಂಬ ರಾಷ್ಟ್ರ ಮಟ್ಟದ ವೇದಿಕೆಯನ್ನು ಸ್ಥಾಪಿಸಲಾಗಿದೆ.

ಸದಸ್ಯತ್ವವನ್ನು ಆಧರಿಸಿದ ಈ ವೇದಿಕೆಯು, ಪ್ರಾದೇಶಿಕ ಹಂತದಲ್ಲಿ ಹಲವಾರು ಚರ್ಚೆ, ಸಭೆ, ಸಂವಾದಗಳನ್ನು ನಡೆಸಿದ ನಂತರ ೨೦೧೬ರ ಮೇ ೨೧ ಮತ್ತು ೨೨ರಂದು ನವದೆಹಲಿಯಲ್ಲಿ ರಾಷ್ಟ್ರೀಯ ಸಮಾವೇಶವನ್ನು ಏರ್ಪಡಿಸಿತ್ತು. ಅಲ್ಲಿ ವೇದಿಕೆಯ ನಿಯಮಾವಳಿಯನ್ನು ಹಾಗೂ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಅದೇ ಸಮ್ಮೇಳನದಲ್ಲಿ, ಎರಡು ವಿಷಯಗಳ ಕುರಿತು ಜನನ್ಯಾಯಮಂಡಳಿಯನ್ನು ಸ್ಥಾಪಿಸಿ ಸಾಕ್ಷ್ಯ ಸಂಗ್ರಹಿಸಿ, ವರದಿ ಮಾಡಬೇಕು ಎಂದೂ ನಿರ್ಧರಿಸಲಾಯಿತು.

ಶೈಕ್ಷಣಿಕ ಸಂಸ್ಥೆಗಳ ಮೇಲೆ ನಡೆಯುತ್ತಿರುವ ಆಕ್ರಮಣ

ನೈಸರ್ಗಿಕ ಸಂಪನ್ಮೂಲದ ರಕ್ಷಣೆಗೆ ಕೆಲಸ ಮಾಡುತ್ತಿರುವ ಮಾನವ ಹಕ್ಕು ಹೋರಾಟಗಾರರ ಮೇಲೆ ನಡೆಯುತ್ತಿರುವ ಹಲ್ಲೆಗಳು.

ಹೀಗೆ ರೂಪುಗೊಂಡ ’ಭಾರತದಲ್ಲಿ ಶೈಕ್ಷಣಿಕ ಸಂಸ್ಥೆಗಳ ಮೇಲೆ ನಡೆಯುತ್ತಿರುವ ಹಲ್ಲೆ ಕುರಿತು ಜನ ನ್ಯಾಯಮಂಡಳಿ’ ಯ ವರದಿಯಲ್ಲಿ  ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಸೇರಿದಂತೆ ೧೩೦ ಜನರ ಹೇಳಿಕೆಗಳು ಮಾತ್ರವಲ್ಲದೆ ತಜ್ಞರ ಹೇಳಿಕೆಗಳು ಹಾಗೂ ಪರಿಣತರ ಅಭಿಪ್ರಾಯಗಳು ಇವೆ.

ಮೇಲೆ ಸೂಚಿಸಿದ ವರದಿಯ ಸಂಕ್ಷಿಪ್ತ ರೂಪ ಈ ಪುಸ್ತಕ.

ಶಿಕ್ಷಣ ಸಂಸ್ಥೆಗಳ ಮೇಲಿನ ಹಲ್ಲೆಗಳು ಅಂದರೆ ಈ ದೇಶದ ಮುಂದಿನ ಜನಾಂಗ ಅಂದರೆ ನಮ್ಮ ಮಕ್ಕಳ ಭವಿಷ್ಯದ ಮೇಲಿನ ದಾಳಿ.

ನಮ್ಮ ದೇಶದ ಭವಿಷ್ಯದ ಕುರಿತಾಗಿ ಕಾಳಜಿ ಇರುವವರೆಲ್ಲರೂ ಓದ ಬೇಕಾದ ಪುಸ್ತಕ ಇದು.

ಶೀರ್ಷಿಕೆ : ಕ್ಯಾಂಪಸ್ ಕಥನಗಳು – ಹಲ್ಲೆಗಳನ್ನು ಮೆಟ್ಟಿನಿಂತ ಪ್ರತಿರೋಧಗಳು ಅನುವಾದ:ಸತ್ಯಾ ಎಸ್, ನಟರಾಜು ಪ್ರಕಾಶಕರು : ಕ್ರಿಯಾ ಮಾಧ್ಯಮ ಪ್ರೈ.ಲಿ. ಪುಟಗಳು : 112 ಬೆಲೆ:ರೂ.80/- ಪ್ರಕಟಣಾ ವರ್ಷ:  2020