ಖ್ಯಾತ ಲೇಖಕ ಬೊಳುವಾರು ಮಹ್ಮದ್ ಕುಂಞ ಬರೆದ ಹಲ್ಲಾ ಬೋಲ್ ಪುಸ್ತಕಕ್ಕೆ ಹೊಳಹು ನೀಡುವ ಮುನ್ನುಡಿ

ಸಫ್ದರ್ ಹಾಶ್ಮಿಯ ಸಾವು ಮತ್ತು ಬದುಕಿನ ಕುರಿತಾದ ‘ಹಲ್ಲಾಬೋಲ್’ ಪುಸ್ತಕವು ಅಕ್ಟೋಬರ್ 30 ರಂದು ಸಂಜೆ  5 ಗಂಟೆಗೆ ಬಿಡುಗಡೆಯಾಗುತ್ತಿದೆ. ಸುಧನ್ವ ದೇಶಪಾಂಡೆಯವರ ಮೂಲಕೃತಿಯನ್ನು  ಕನ್ನಡಕ್ಕೆ ಎಂ.ಜಿ.ವೆಂಕಟೇಶ್ ಅನುವಾದಿಸಿದ್ದಾರೆ.  ಕ್ರಿಯಾ ಮಾಧ್ಯಮ ಪುಸ್ತಕವನ್ನು ಹೊರತರುತ್ತಿದೆ. ಖ್ಯಾತ ಚಲನಚಿತ್ರ ನಟ ನಸೀರುದ್ದೀನ್ ಶಾ ಬಿಡುಗಡೆ ಮಾಡಲಿದ್ದಾರೆ.  ಈ ಸಂದರ್ಭದಲ್ಲಿ ಪುಸ್ತಕದ ಕುರಿತು ಹೊಳಹು ನೀಡುವ ಖ್ಯಾತ ಲೇಖಕ ಬೊಳುವಾರು ಮಹ್ಮದ್ ಕುಂಞ ಪುಸ್ತಕಕ್ಕೆ ಬರೆದ ಮುನ್ನುಡಿ

ಚಂದವನ್ನು ಕೊಂದ ಬಳಿಕ…

`ನಾವು ಪಯಣಿಸಬೇಕಾಗಿರುವ ಬಸ್ಸು,

ಒಂದಲ್ಲ ಒಂದು ದಿನ, ಸಮಯಕ್ಕೆ ಸರಿಯಾಗಿ ಬಂದೇ ಬರಲಿದೆ’

          `ನಿಮ್ಮ ಒಬ್ಬರು ಆ ರಸ್ತೆಯಲ್ಲಿ ಸಾಯುತ್ತಿದ್ದಾರೆ. ಅಲ್ಲಿ ಎಲ್ಲ ಕಡೆಗಳಲ್ಲೂ ಹೆಣಗಳು ಬಿದ್ದಿವೆ. ಐದು ಹೆಣಗಳು..!’ ಹೆಣ್ಣು ಮಗಳೊಬ್ಬಳು, ನಾವು ಬೀದಿನಾಟಕ ಪ್ರದರ್ಶಿಸಿದ್ದ ಜಾಗದತ್ತ ಕೈ ತೋರಿಸುತ್ತಾ ಆತಂಕದಿAದ ಹೇಳಿದ್ದಳು. ಸಿ.ಐ.ಟಿ.ಯು. ಕಚೇರಿಯನ್ನು `ಅವರು’ ಧ್ವಂಸ ಮಾಡುತ್ತಿರುವುದನ್ನು ಕಣ್ಣಾರೆ ಕಂಡಿದ್ದರೂ, ಕೊಂದಿದ್ದಾರೆ ಎಂಬುದನ್ನು ನಂಬಲು ಸಾಧ್ಯವಾಗಿದ್ದಿರಲಿಲ್ಲ. ಅದೂ ಐದು ಹೆಣಗಳು! ಯಾಕೋ ಉತ್ಪ್ರೇಕ್ಷೆ ಅನ್ನಿಸಿತ್ತು. ಅಲ್ಲಿಗೆ ಹೋಗಿ ನೋಡಲು ನಿರ್ಧರಿಸಿದೆವು. ಬ್ರಿಜೇಶ್ ಮುಂದೆ ಹೊರಟ. ಅವನ ಹಿಂದೆ ನಾನು, ನನ್ನ ಹಿಂದೆ ಬಿಸ್ವಜೀತ್. ಬ್ರಿಜೇಶನಿಗೆ ಅಲ್ಲೇನೋ ಕಂಡಿರಬೇಕು. ಬಾಣದಂತೆ ಚಿಮ್ಮಿದ. ಅವನೇಕೆ ಹಾಗೆ ಓಡಿದನೆಂಬುದು ಅರ್ಥವಾಗದೆ, ನಾನೂ ಅತ್ತ ಧಾವಿಸಿದೆ. ಅವನು ಮೂಲೆಯಲ್ಲಿ ತಿರುಗಿದ. ನಾನೂ ತಿರುಗಿದೆ. ಅವನು ನೆಲದಲ್ಲಿ ಬಿದ್ದಿದ್ದ ಮನುಷ್ಯನೊಬ್ಬನ ಬಳಿ ನಿಂತುಬಿಟ್ಟಿದ್ದ. ಬಿದ್ದಿದ್ದವನು ನಮ್ಮ ಕಲಾವಿದರಲ್ಲಿ ಒಬ್ಬನಾದ ವಿನೋದ್’ನಂತೆ ಕಾಣಿಸಿದ್ದ ಒಂದು ಕ್ಷಣ; ಅಲ್ಲ. ಆನಂತರ ಕಾಣಿಸಿದ್ದು ಆ ಹಸಿರು ಸ್ವೆಟರ್.  ಚಂದದ ಸಫ್ದರ್.’

*******

          ಸುಮಾರು ನಾಲ್ಕು ದಶಕಗಳ ಹಿಂದಿನ ಒಂದು ಮಧ್ಯಾಹ್ನದ ಹೊತ್ತು. ಚರಣ ಸಿಂಗರ ಪ್ರಧಾನಿತ್ವದ ಸುಡುವ ತಿಂಗಳು ಎಂಬ ನೆನಪು. ದೆಹಲಿಯ ಆರ್.ಕೆ. ಪುರಂ’ನಲ್ಲಿರುವ ಕರ್ನಾಟಕ ಸಂಘದ ಬಳಿಯಿದ್ದ  ಬಸ್ ನಿಲ್ದಾಣದಲ್ಲಿ ನಿಂತಿದ್ದೆ. ನನ್ನ ಎಡಬಲಗಳಲ್ಲಿ ಸುಮಾರು ಒಂದು ಹತ್ತು ಮಂದಿ,  ಕತ್ತುಗಳನ್ನೆತ್ತಿ  ಅತ್ತಿತ್ತ  ನೋಡುತ್ತಾ, `ಇಸ್ಕಿ ಮಾ.., ಯೇ ದೇಶ್ ಕಭೀಭೀ ಸುಧರ್ನೇವಾಲೀ ನಹೀ..’ ಎಂದೆಲ್ಲ ಗೊಣಗುತ್ತಾ, ಬಾರದ ಬಸ್ಸುಗಳಿಗೆ ಶಾಪ ಹಾಕುತ್ತಿದ್ದರು. ಅಷ್ಟರಲ್ಲಿ ವಿದ್ಯಾರ್ಥಿಗಳಂತೆ ಕಾಣಿಸುತ್ತಿದ್ದ ಒಂದಷ್ಟು ಹುಡುಗ ಹುಡುಗಿಯರು ಆಕಾಶದಿಂದ ಉದುರಿ ಬಿದ್ದವರಂತೆ ನಮ್ಮೆದುರು ಕಾಣಿಸಿಕೊಂಡಾಗ, ಪಕ್ಕದಲ್ಲಿ ನಿಂತಿದ್ದ ವಯಸ್ಸಾದ ಮಹಿಳೆಯೊಬ್ಬಳು, `ಓಹ್..! ಖುದುರತ್ಕೇ ಫರಿಸ್ತೇ ಯಹಾಂ ಭೀ ಆಗಯೇ..’ ಎಂದು ಉದ್ಗರಿಸಿದ್ದಳು! ನಾನು ಅಚ್ಚರಿಯಿಂದ ಆಕೆಯತ್ತ ಪ್ರಶ್ನೆಯಂತೆ ಬಾಗಿದಾಗ, `ತುಮ್ ದೇಖ್ತೇ ರಹೋ.., ಯೇ ಬಚ್ಚೋಂಕೋ ಜಾದಾ ಉಮರ್ ದೇನೇಕೇ ಲಿಯೇ ಈಶ್ವರ್ ಸೇ ದುವಾ ಕರೋ..’ ಎಂದಿದ್ದಳು.

          `ನಾವು  ನಿಮ್ಮೆದುರು ಒಂದು ನಾಟಕ ಆಡಿ ತೋರಿಸಲಿದ್ದೇವೆ. ದಯವಿಟ್ಟು ನೀವೆಲ್ಲ ಸಹಕರಿಸಬೇಕು..’ ಎತ್ತರದ ಸಣಕಲು ಯುವಕನೊಬ್ಬ ಗಟ್ಟಿಯಾಗಿ ಹೇಳುತ್ತಿದ್ದಂತೆಯೇ ಮತ್ತಿಬ್ಬರು ಹುಡುಗರು, `ಜನನಾಟ್ಯ ಮಂಚ್’ ಎಂದು ಹಿಂದಿಯಲ್ಲಿ ಬರೆದಿದ್ದ ಎರಡು ಮಾರು ಅಗಲದ ಬ್ಯಾನರ್ ಹಿಡಿದುಕೊಂಡು ಬಂದರು. ಹುಡುಗಿಯೊಬ್ಬಳು ಡಿಟಿಸಿ (ದೆಹಲಿ ಸಾರಿಗೆ..?) ಎಂದು ಬರೆದಿದ್ದ ಫಲಕವೊಂದನ್ನು ಹಿಡಿದು ನಿಂತಳು. ಅವಳ ಎಡಬಲದಲ್ಲಿ ಬಂದು ನಿಂತ ಐದಾರು ಹುಡುಗರು. `ನಾವು ಪಯಣಿಸಬೇಕಾಗಿರುವ ಬಸ್ ಒಂದಲ್ಲ ಒಂದು ದಿನ ಸಮಯಕ್ಕೆ ಸರಿಯಾಗಿ ಬಂದೇ ಬರಲಿದೆ.’ ಎಂದು ಗಟ್ಟಿಯಾಗಿ ಹೇಳಿದಾಗ, ತಮ್ಮ ತಮ್ಮ ಬಸ್ಸುಗಳಿಗಾಗಿ ಕಾತರಿಸುತ್ತಿದ್ದ ನನ್ನಂತಹ ಪ್ರಯಾಣಿಕರೆಲ್ಲ, ಎಲ್ಲವನ್ನೂ ಮರೆತು `ಡೀಟೀಸೀ ಕಾ ದಾಂದಲೀ’ ನಾಟಕದ ಪಾತ್ರಗಳಾಗಿ ಬಿಟ್ಟಿದ್ದೆವು.

*********

          ನಲುವತ್ತು ವರ್ಷಗಳ ಹಿಂದೆ (1979) ದೆಹಲಿಯ `ಜನನಾಟ್ಯ ಮಂಚ’ವನ್ನು ಕನ್ನಡ ನಾಡಿಗೆ ಪರಿಚಯಿಸಿದವರು, `ಸಮುದಾಯ’ ಸಂಘಟನೆಯ ರೂವಾರಿಗಳಲ್ಲೊಬ್ಬರಾಗಿದ್ದ ಎಸ್. ಮಾಲತಿಯವರು. ಇಂದಿನ ದಿನಗಳಲ್ಲಿ ಕೆಲವರಿಗೆ ಬಿಸಿತುಪ್ಪದಂತಾಗಿರುವ, ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಹುಡುಗ ಹುಡುಗಿಯರನ್ನು, ತಾವು ಸಂಪಾದಿಸುತ್ತಿದ್ದ `ಸಮುದಾಯ ವಾರ್ತಾಪತ್ರ’ದ `ಮಂಚ’ದಲ್ಲಿರಿಸಿ ಜೋಗುಳ ಹಾಡಿದ್ದ ತಾಯಿ ಅವರು. 

          ಮಾತುಗಳಿಂದಲೇ ಮಂಟಪ ಕಟ್ಟುವ ಬೀದಿ ನಾಟಕದ ಮಾತುಗಳಿಗೆ ವ್ಯಾಕರಣದ ಹಂಗಿಲ್ಲ. ಮಾತುಗಳು ನಾಟಕವಾಗಿ ಬೆಳೆಯುವುದು ಅಭಿನಯಿಸುವವರ ಬದುಕಿನ ಅನುಭವಗಳಿಂದ. ಅದೊಂದು ಸಮರಶೀಲ ರಾಜಕೀಯದ `ಪ್ರತಿಭಟನಾ ರಂಗಭೂಮಿ’. ರಾಜಕೀಯ ಅಥವಾ ಪ್ರತಿಭಟನೆ ಎಂದ ಕೂಡಲೇ ಮೂಗು ಮುರಿಯಬೇಕಾಗಿಲ್ಲ. ಪ್ರಜಾಪ್ರಭುತ್ವ ಉಳಿಯುವುದು ಮತ್ತು ಬೆಳೆಯುವುದು ಪ್ರಜೆಪರವಾಗಿರುವ ರಾಜಕೀಯ ಪ್ರತಿಭಟನೆಗಳಿಂದಲೇ. ಸಫ್ದರ್ ಹೇಳುವಂತೆ, `ಪರಿಚಿತ ವಸ್ತುಗಳಿಂದಲೇ ಭೀತಿಗೊಳಿಸುವ ಬೀದಿ ನಾಟಕಗಳು ಸಾಕ್ಷ್ಯಚಿತ್ರಗಳಂತೆ ಸಂಕ್ಷಿಪ್ತ.’ ಅವುಗಳ ಪರಿಣಾಮಗಳು ಹೊರನೋಟದಲ್ಲಿ ಭಾವನಾತ್ಮಕವಾಗಿ ಕಾಣಿಸಿದರೂ ಅವು ತರ್ಕಬದ್ಧ. ಸೂಕ್ಷ್ಮವಾದ ಅಥವಾ ಆಳವಾದ ವಿಶ್ಲೇಷಣೆಗಳು ಬೀದಿನಾಟಕಗಳಲ್ಲಿ ಇರಲೇಬೇಕೆಂದಿಲ್ಲ.  ಆದ್ದರಿಂದಲೇ ಅವು ಸಾಮಾನ್ಯ ಪ್ರೇಕ್ಷಕರ ಮನಸ್ಸುಗಳೊಳಗೆ  ನೇರವಾಗಿ ನುಗ್ಗುತ್ತವೆ ಮತ್ತು ಬಹಳ  ಕಾಲ ಕಾಡುತ್ತವೆ. ತಮ್ಮ ಸುತ್ತಮುತ್ತ ಘಟಿಸುತ್ತಿರುವ ಸಮಕಾಲೀನ ಸಂಗತಿಗಳಿಗೆ ಪ್ರೇಕ್ಷಕರ ನಿಲುವುಗಳನ್ನು ರೂಪಿಸುತ್ತವೆ. ಸಾಂಸ್ಕೃತಿಕ ಹಸಿವುನಿಂದ ಕೂಡಿರುವ ಜನತೆಗೆ ಆರೋಗ್ಯಕರ ಮನರಂಜನೆಯನ್ನೂ ಒದಗಿಸುತ್ತವೆ. ಅಧ್ಬುತ ಮತ್ತು ತಮಾಷೆಗಳು ಸಕಾಲಿಕವಾಗಿ ಪ್ರಕಟಗೊಳ್ಳುವುದೇ ಬೀದಿ ನಾಟಕಗಳ ಹೆಗ್ಗಳಿಕೆ.

          ಬೇರೆ ಪ್ರದರ್ಶನ ಪ್ರಕಾರಗಳಿಗೆ ತೀರಾ ಅನಿವಾರ್ಯವೇನೂ ಆಗಿರದ ಶಿಸ್ತನ್ನು  ಬೀದಿನಾಟಕಗಳು ಹೆಚ್ಚಾಗಿ ಬಯಸುವುದರಿಂದಲೇ ಇರಬೇಕು, ಅವು ಯಾವನೇ `ಸ್ಟಾರ್’ಗೂ ಮೇಲೇರುವ ಏಣಿಯಾಗಲಿಲ್ಲ. ಹಾಗೆಂದು ಬೀದಿನಾಟಕಗಳು ಪ್ರೊಸೇನಿಯಮ್ ನಾಟಕಗಳ ವಿರುದ್ಧದ ಬಂಡಾಯವೆಂಬಂತೆಯೂ ಕಾಣಿಸಿಕೊಳ್ಳಲಿಲ್ಲ. ಹಾಗಾಗಿರುತ್ತಿದ್ದರೆ, ಕನ್ನಡ ನಾಟಕಗಳಿಗೆ ಹೊಸದಿಕ್ಕು ಕೊಟ್ಟ `ಸಮುದಾಯ’ದ  ಯಶಸ್ವೀ ನಾಟಕಗಳಾದ ಹುತ್ತವ ಬಡಿದರೆ, ತಾಯಿ, ಗೆಲಿಲಿಯೋ’ಗಳ ಜೊತೆಯಲ್ಲೇ `ಬೆಲ್ಚಿ’ ಬೀದಿ ನಾಟಕವು 2500 ಪ್ರದರ್ಶನಗಳನ್ನು ಕಾಣಲು ಸಾಧ್ಯವಾಗುತ್ತಿರಲಿಲ್ಲ. ಈ ಎಲ್ಲ ಕಾರಣಗಳಿಂದಾಗಿಯೇ ಕನ್ನಡದ ರಂಗ ಚಟುವಟಿಕೆಗಳು `ಜನಪರ ಚಳುವಳಿ’ಗಳತ್ತ ಹೊರಳಿಕೊಂಡವು.  ಬಾದಲ್ ಸರ್ಕಾರ್ ಅವರ ಮುಕ್ತ ರಂಗಭೂಮಿ ಕನ್ನಡ ನೆಲಕ್ಕೆ ಕಾಲಿಟ್ಟದ್ದು ಆಗ. ಸಾವಿರಾರು ಪ್ರದರ್ಶನಗಳನ್ನು ಕಂಡ ಬೀದಿನಾಟಕಗಳಾದ ಬೆಲ್ಚಿ, ಪತ್ರೆ ಸಂಗಪ್ಪನ ಕೊಲೆ, ಮೆಶೀನ್, ಆಲಿಘರ್, ಹತ್ಯಾರೇ’ಗಳು ಕನ್ನಡ ನಾಡಿನ ಮನೆಯಂಗಳದ ಮಾತುಗಳಾದದ್ದು ಆಗ. ಈ ಎಲ್ಲದರ ಬೆನ್ನ ಹಿಂದೆಯೂ, `ಸತ್ಯವನ್ನಷ್ಟೇ ಹೇಳುವೆ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ’ ಎಂದು ನಡುಬೀದಿಯ ನ್ಯಾಯಾಲಯದಲ್ಲಿ ಪ್ರಮಾಣ ಮಾಡುತ್ತಿದ್ದ ಮಾತ್ರವಲ್ಲ, ಪ್ರೇಕ್ಷಕರಿಂದಲೂ ಪ್ರಮಾಣ ಮಾಡಿಸುತ್ತಿದ್ದ `ಸಫ್ದರ್’  ಎಂಬ  ಚಂದದ ಹುಡುಗನ `ಹಲ್ಲಾ ಬೋಲ್’ ಪ್ರಭಾವ ಎದ್ದು ಕಾಣಿಸುತ್ತದೆ. 

          ಸುಧನ್ವ ದೇಶಪಾಂಡೆಯವರು, ತಮ್ಮ `ಹಲ್ಲಾ ಬೋಲ್’ ಕೃತಿರಚನೆಗಾಗಿ ಗೆಳೆಯ ಸಫ್ದರ್ ಹಾಶ್ಮಿಯ ಜೊತೆಗಿದ್ದ, ಕನ್ನಡ ನಾಟಕಾಸಕ್ತರಲ್ಲಿ ಕೆಲವರಿಗಾದರೂ ಪರಿಚಯವಿರಬಹುದಾದ, ಆದಿತ್ಯ ನಿಗಮ್, ಬಿಜೇಂದರ್ ಸಿಂಗ್, ಬೃಂದಾ ಕಾರೆಟ್, ಕಾಜಲ್ ಘೋಷ್, ಮಲಯಶ್ರೀ ಹಾಶ್ಮಿ, ಸುಭೋದ್ ವರ್ಮಾ, ಕಮಲಾ ಭಾಸಿನ್, ಸೀತಾರಾಮ್ ಯೆಚೂರಿ.. ಹೀಗೆ ಹಲವರ ನೆನಪುಗಳನ್ನೂ ಬಳಸಿಕೊಂಡಿದ್ದಾರೆ. ದೆಹಲಿಯ `ವೈಕಿಂಗ್’ ನವರು, `ಫಿಫ್ತ್ ಪ್ಲೇಮ್’ ಎಂಬ ಹೆಸರಲ್ಲಿ ಪ್ರಕಟಿಸಿದ್ದ, ಸಫ್ದರ್ ತಾಯಿ ಖಮರ್ ಅಜಾದ್ ಹಾಶ್ಮಿಯವರ `ಪಾಂಚ್ವಾ ಚಿರಾಗ್’ ಹಾಗೂ ಹಬೀಬ್ ತನ್ವೀರ್ ಅವರ `ಸಫ್ದರ್ ನೆನಪುಗಳು’ ಕೃತಿಗಳ ಮಾಹಿತಿಗಳೂ ಇವೆ. `ನಮಗೆ ತಿಳಿದಿರುವುದನ್ನಷ್ಟೇ ನಮ್ಮಿಂದ ಊಹಿಸಿಕೊಳ್ಳಲು ಸಾಧ್ಯ’ ಎಂಬ ಶೆಲ್ಲಿಯ ಮಾತುಗಳೂ ಇಲ್ಲಿ ಪ್ರಸ್ತುತ. ಪುಸ್ತಕವೊಂದು ಕವರ್ ಪೇಜ್’ನಲ್ಲಿರುವ ಲೇಖಕರ ಹೆಸರನ್ನು ಅದೆಷ್ಟೇ `ಟಾಂ ಟಾಂ’ ಮಾಡಿದರೂ, ಅದೊಂದು ಸಾಮೂಹಿಕ ಸೃಷ್ಟಿಯೇ ಆಗಿರುತ್ತದೆ. ರಂಗಭೂಮಿಯಂತೂ ಒಬ್ಬನ ಖಾಸಗಿ ಸೊತ್ತಾಗಲು ಸಾಧ್ಯವೇ ಇಲ್ಲ. . `ಜನನಾಟ್ಯ ಮಂಚ’ ಇಲ್ಲದಿರುತ್ತಿದ್ದರೆ ಅಥವಾ `ಜನಮ್’ ಇಲ್ಲದಿರುತ್ತಿದ್ದರೆ `ಸಫ್ದರ್’ ಇರುತ್ತಿರಲಿಲ್ಲ.

          ಈ ದೇಶದ ನಡುಬೀದಿಯಲ್ಲಿ ಕೊಲೆಯಾದ ಕಲೆಗಾರನೊಬ್ಬನ ಸಾವು ಮತ್ತು ಬದುಕಿನ ಕತೆಯನ್ನು (ಗಮನಿಸಬೇಕು – ಬದುಕು ಮತ್ತು ಸಾವಿನ ಕತೆಯಲ್ಲ), ಕಣ್ಣಿಗೆ ಕಟ್ಟುವಂತೆ ದಾಖಲಿಸಿದ್ದ ಸುಧನ್ವ ದೇಶಪಾಂಡೆಯವರ ಆಂಗ್ಲ  ಭಾಷೆಯ  `ಹಲ್ಲಾ ಬೋಲ್’ ಕೃತಿಯ ಕನ್ನಡ ರೂಪ ಇದು. ಇದರಲ್ಲಿ, ಸಫ್ದರ್ ಹಾಶ್ಮಿಯವರ ಸಾವಿನ ಕತೆಯನ್ನು, ಅವರ ಬದುಕಿನ ಕತೆಗಳ ಜೊತೆಗೆ ಹೆಣೆಯಲಾಗಿದೆ. ಬೀದಿ ನಾಟಕಗಳಂತೆಯೇ ಪದ-ವ್ಯಾಕರಣಗಳ ಹಂಗಿಲ್ಲದೆ, ನೆನಪುಗಳ ಬುಟ್ಟಿಗಳನ್ನು ರಸ್ತೆಬದಿಯ ಅಂಗಡಿಗಳಲ್ಲಿ ತೆರೆದಿರಿಸುವ ಪರಿಯಲ್ಲಿ ಜೋಡಿಸಿಕೊಂಡ ಮಾತುಗಳನ್ನು ಮತ್ತೊಂದು ಭಾಷೆಯಲ್ಲಿ ಕಟ್ಟಿಕೊಡುವುದು ಬಲು ಕಷ್ಟದ ಕೆಲಸ. ಕಳೆದ ನಾಲ್ಕೈದು ದಶಕಗಳಿಂದ `ಸಮುದಾಯ’ ಸಂಘಟನೆಯ ಭಾಗವೇ ಆಗಿರುವ ಕಾರಣಕ್ಕೋ ಏನೋ, ಯಾವುದೇ ತಡವರಿಕೆಯಿಲ್ಲದೆ ಅವುಗಳನ್ನೆಲ್ಲ `ಹಲ್ಲಾ ಬೋಲ್’ ಎಂದು ಕನ್ನಡದಲ್ಲಿ ಹೆಣೆದಿರುವ ಸಂಗಾತಿಯ ಸಾಹಸಕ್ಕೆ `ಭಳಿರೇ’ ಎನ್ನುವೆ.

          `ಸಫ್ದರ್’ ಎಂಬ ಹೆಸರಲ್ಲಿ ಓಡಾಡುತ್ತಿದ್ದ, ರಸ್ತೆ ಬದಿಯ ಗಾಡಿಗಳೆದುರು ಚಹ ಹೀರುತ್ತಿದ್ದ, ಪಕ್ಕದ ಗಲ್ಲಿಯಲ್ಲಿ ಕಾಣಿಸಿದ್ದವರನ್ನು ಗಟ್ಟಿಧ್ವನಿಯಲ್ಲಿ ಮುಟ್ಟಿ ಮಾತಾಡಿಸುತ್ತಿದ್ದ ಮನುಷ್ಯನೊಬ್ಬನ ಕೆಂಪು ರಕ್ತವನ್ನು ನಡುಬೀದಿಯಲ್ಲಿ ಚೆಲ್ಲಿದ ದೇಶ ನಮ್ಮದು. ಆದರೆ, ದೇಹದೊಂದಿಗೆ ಸಫ್ದರ್ ಕೂಡಾ ಸತ್ತುಹೋಗಬಹುದು ಎಂದು ನಂಬಿದ್ದ ಕೊಲೆಗಾರರಿಗೆ ಸಹಜವಾಗಿ ನಿರಾಸೆಯಾಗಿದೆ. ಸಿಟ್ಟೂ ಬಂದಿದೆ. `ಸಫ್ದರ್ ಚಿಂತನೆ’ಗಳನ್ನು ಮತ್ತೊಮ್ಮೆ ಕೊಲ್ಲುವ ಸಲುವಾಗಿ ಸುಳ್ಳು ಸುಳ್ಳು ಕಾರಣಗಳನ್ನು ಸೃಷ್ಟಿಸಲಾಗುತ್ತಿದೆ. ಇಂತಹ ಹೊತ್ತಲ್ಲಿ, ಒಂದಷ್ಟು ಹೊತ್ತಾದರೂ ಮನುಷ್ಯರಾಗುವಂತೆ ನಮ್ಮನ್ನು ಒತ್ತಾಯಿಸುವ ಈ ನೋವಿನ ಕೃತಿಯನ್ನು ಕನ್ನಡಕ್ಕೆ ಪರಿಚಯಿಸುತ್ತಿರುವ `ಸಮುದಾಯ’ದ ಎಂ.ಜಿ. ವೆಂಕಟೇಶ್  ಅವರ ಹತ್ತಿರದ ಸಂಗಾತಿಗಳಲ್ಲಿ ನಾನೂ ಒಬ್ಬ ಎಂಬುದು ನನಗೂ ಹೆಮ್ಮೆಯ ಸಂಗತಿ.

ಬೊಳುವಾರು ಮಹಮದ್ ಕುಂಞ

ಮೇ 1, 2020


ಹಲ್ಲಾಬೋಲ್ ಸಫ್ದರ್ ಹಾಶ್ಮಿಯ ಸಾವು ಮತ್ತು ಬದುಕು

ಮೂಲ :ಸುಧನ್ವ ದೇಶಪಾಂಡೆ   ಅನುವಾದ : ಎಂ.ಜಿ.ವೆಂಕಟೇಶ್ 

ಕ್ರಿಯಾ ಮಾಧ್ಯಮ ಪ್ರೈ.ಲಿ. ಪುಟಗಳು:280 ಬೆಲೆ  ರೂ.200 

ಪ್ರತಿಗಳಿಗಾಗಿ ಸಂಪರ್ಕಿಸಿ 90360 82005, 080-23494488, 9916595916

ಸಫ್ದರ್ ‘ಹಲ್ಲಾಬೋಲ್’ – ಕತ್ತಲ ಕಾಲದ ಹಾಡು

ಸಫ್ದರ್ ಹಾಶ್ಮಿಯ ಸಾವು ಮತ್ತು ಬದುಕಿನ ಕುರಿತಾದ ‘ಹಲ್ಲಾಬೋಲ್’ ಪುಸ್ತಕವು ಅಕ್ಟೋಬರ್ 30 ರಂದು ಸಂಜೆ  5 ಗಂಟೆಗೆ ಬಿಡುಗಡೆಯಾಗುತ್ತಿದೆ. ಸುಧನ್ವ ದೇಶಪಾಂಡೆಯವರ ಮೂಲಕೃತಿಯನ್ನು  ಕನ್ನಡಕ್ಕೆ ಎಂ.ಜಿ.ವೆಂಕಟೇಶ್ ಅನುವಾದಿಸಿದ್ದಾರೆ.  ಕ್ರಿಯಾ ಮಾಧ್ಯಮ ಪುಸ್ತಕವನ್ನು ಹೊರತರುತ್ತಿದೆ.

ಹಲ್ಲಾ ಬೋಲ್ ಕೃತಿಯನ್ನು ಖ್ಯಾತ ಚಲನಚಿತ್ರ ನಟ ನಸೀರುದ್ದೀನ್ ಶಾ ಬಿಡುಗಡೆ ಮಾಡಲಿದ್ದಾರೆ.  ಕೃತಿಯ ಮೂಲ ಲೇಖಕ ಸುಧನ್ವ ದೇಶಪಾಂಡೆ, ಸಿನಿಮಾ ನಟ ಅಚ್ಯತ್ ಕುಮಾರ್, ಅನುವಾದಕ ಎಂ.ಜಿ.ವೆಂಕಟೇಶ್, ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ. ಕಲಾವಿದರಾದ ಗಿರಿಜಾ ಪಿ ಸಿದ್ದಿ, ಪುಸ್ತಕದ ಆಯ್ದ ಭಾಗವನ್ನು ಓದಲಿದ್ದಾರೆ. ಮಲಯಶ್ರೀ ಹಶ್ಮಿ ಶುಭ ಕೋರಲಿದ್ದಾರೆ. ಬೋಳವಾರು ಮಹಮ್ಮದ್ ಕುಂಞ ಸಮಾರೋಪದ ಮಾತುಗಳನ್ನು ಆಡಲಿದ್ದಾರೆ.

ಈ ಪುಸ್ತಕ ಬಿಡುಗಡೆ ಕಾರ್ಯಕ್ರಮ ಸಫ್ದರ್ಕೊಲೆಯಾದಜನವರಿ 2ರ ವರೆಗೆನಡೆಯಲಿರುವ “ಸಫ್ದರ್  ‘ಹಲ್ಲಾಬೋಲ್’ – ಕತ್ತಲ ಕಾಲದ ಹಾಡು” ಎಂಬ ಸರಣಿ ಕಾರ್ಯಕ್ರಮದ ಆರಂಭ. ಇದನ್ನು ಕ್ರಿಯಾ ಮಾಧ್ಯಮ ಮತ್ತು ಸಮುದಾಯ ಕರ್ನಾಟಕ ಜಂಟಿಯಾಗಿ ಹಮ್ಮಿಕೊಂಡಿವೆ. ಈ ಸರಣಿ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ (ಅಕ್ಟೋಬರ್ 30) ಅಲ್ಲದೆ, ‘ಕಲೆಯ ನಡಿಗೆ ಬೀದಿಯ ಕಡೆಗೆ’ ಎಂಬ ವೆಬಿನಾರ್ (ಅಕ್ಟೋಬರ್ 31), ಸಫ್ದರ್ ಹಶ್ಮಿ ಅವರ ಪ್ರಮುಖ ನಾಟಕಗಳ ಕನ್ನಡದಲ್ಲಿ ಓದು (ನವೆಂಬರ್ 2ನೇ ವಾರ) ನಡೆಯಲಿವೆ. ಇವಲ್ಲದೆ ನವೆಂಬರ್ – ಡಿಸೆಂಬರ್  ಗಳಲ್ಲಿ “ರಂಗಬೀದಿ (ರಂಗಭೂಮಿ ಮತ್ತು ಬೀದಿಪ್ರಜ್ಞೆ)”, “ಹಾದಿಬದಿಯ ಹಾಡು (ಸಂಗೀತ ಮತ್ತು ಬೀದಿಪ್ರಜ್ಞೆ)” ಮತ್ತು “ಬೆಳ್ಳಿತೆರೆಯಲ್ಲಿ ಬೀದಿಯ ಬೆಳಕು (ಸಿನಿಮಾ ಮತ್ತು ಬೀದಿಪ್ರಜ್ಞೆ)” ಮುಂತಾದ ಕಾರ್ಯಕ್ರಮಗಳು ನಡೆಯಲಿವೆ.

ಪುಸ್ತಕ ಬಿಡುಗಡೆ ಮತ್ತು ವೆಬಿನಾರುಗಳನ್ನು ಈ ಸರಣಿ ಕಾರ್ಯಕ್ರಮಕ್ಕೆ ಮಾಧ್ಯಮ ಸಹಯೋಗ ನೀಡುತ್ತಿರುವ ಜನಶಕ್ತಿ ಮೀಡಿಯಾ ಫೇಸ್ ಬುಕ್ ಮತ್ತು ಯೂಟ್ಯೂಬ್ ಲೈವ್ ಮೂಲಕ ಪ್ರಸಾರ ಮಾಡಲಿದೆ.

ಹಲ್ಲಾಬೋಲ್ ಸಫ್ದರ್ ಹಾಶ್ಮಿಯ ಸಾವು ಮತ್ತು ಬದುಕು

ಮೂಲ :ಸುಧನ್ವ ದೇಶಪಾಂಡೆ   ಅನುವಾದ : ಎಂ.ಜಿ.ವೆಂಕಟೇಶ್ ,

ಕ್ರಿಯಾ ಮಾಧ್ಯಮ ಪ್ರೈ.ಲಿ. ಪುಟಗಳು:280 ಬೆಲೆ  ರೂ.200 

ಪ್ರತಿಗಳಿಗಾಗಿ ಸಂಪರ್ಕಿಸಿ 90360 82005, 080-23494488, 9916595916

ಇಂದು `ಚೆ’ ಹತ್ಯೆಗೀಡಾದ ದಿನ

`ಚೆ’ ಯನ್ನು ನೆನಪಿಸಿಕೊಳ್ಳುವ ನಿಟ್ಟಿನಲ್ಲಿ ಅವರ `SOCIALISM AND MAN IN CUBA’ ಪುಸ್ತಕದ ಕೆಲವು ವಾಕ್ಯಗಳು ಇಲ್ಲಿವೆ

In order to develop a new culture, work must acquire a new status.14 Human beings-as-commodities cease to exist, and a system is installed that establishes a quota for the fulfillment of one’s social duty. The means of production belong to society, and the machine is merely the trench where duty is performed.
A person begins to become free from thinking of the annoying fact that one needs to work to satisfy one’s animal needs. Individuals start to see themselves reflected in their work and to understand their full stature as human beings through the object created, through the work accomplished. Work no longer entails surrendering a part of one’s being in the form of labor power sold, which no longer belongs to the individual, but becomes an expression of oneself, a contribution to the common life in which one is reflected, the fulfillment of one’s social duty.
We are doing everything possible to give work this new status as a social duty and to link it on the one hand with the development of technology, which will create the conditions for greater freedom, and on the other hand with voluntary work based on the Marxist appreciation that one truly reaches a full human condition when no longer compelled to produce by the physical necessity to sell oneself as a commodity.
Of course, there are still coercive aspects to work, even when it is voluntary. We have not transformed all the coercion that surrounds us into conditioned reflexes of a social character and, in many cases, is still produced under the pressures of one’s environment. (Fidel calls this moral compulsion.) There is still a need to undergo a complete spiritual rebirth in one’s attitude toward one’s own work, freed from the direct pressure of the social environment, though linked to it by new habits. That will be communism.
The change in consciousness does not take place automatically, just as change in the economy does not take place automatically. The alterations are slow and not rhythmic; there are periods of acceleration, periods that are slower, and even retrogressions.

ಹೊಸದೊಂದು ಸಂಸ್ಕೃತಿಯನ್ನು ಹುಟ್ಟು ಹಾಕಲು ಕೆಲಸಕ್ಕೆ ಒಂದು ಹೊಸ ಸ್ಥಾನಮಾನ ದೊರೆಯಬೇಕು. ಮಾನವ ಒಂದು ಸರಕಾಗಿ ಉಳಿಯುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಭಾಗದ ಸಾಮಾಜಿಕ ಕರ್ತವ್ಯ ಪೂರೈಸುವಂತಹ ವ್ಯವಸ್ಥೆಯೊಂದನ್ನು ಸ್ಥಾಪಿಸಲಾಗುತ್ತದೆ. ಉತ್ಪಾದನೆಯ ಸಾಧನಗಳೆಲ್ಲವೂ ಇಡೀ ಸಮಾಜಕ್ಕೆ ಸೇರಿದವಾಗಿರುತ್ತವೆ. ಮತ್ತು ಯಂತ್ರೋಪಕರಣಗಳು ಕೇವಲ ಕರ್ತವ್ಯ ನಿರ್ವಹಿಸುವ ಕಂದಕಗಳಾಗಿರುತ್ತವೆ. ಒಬ್ಬ ಮಾನವ ತಾನು ತನ್ನ ಮೃಗೀಯ ಅಗತ್ಯಗಳನ್ನು ಪೂರೈಸಿಕೊಳ್ಳಲು ಕೆಲಸ ಮಾಡಬೇಕೆಂಬ ಜಿಗುಪ್ಸೆ ತರುವ ಆಲೋಚನೆಯಿಂದ ಮುಕ್ತನಾಗತೊಡಗುತ್ತಾನೆ. ಅವನು ತನ್ನ ಕೆಲಸದಲ್ಲಿ ತನ್ನ ಪ್ರತಿಫಲನವಾಗುವುದನ್ನು ಕಾಣತೊಡಗುತ್ತಾನೆ ಮತ್ತು ತಾನು ರಚಿಸಿದ ವಸ್ತುಗಳು ಮತ್ತು ಸಾಧಿಸಿದ ಕೆಲಸಗಳ ಮೂಲಕ ಮಾನವನಾಗಿ ತನ್ನ ಔನ್ನತ್ಯವನ್ನು ಅರಿಯತೊಡಗುತ್ತಾನೆ. ಕೆಲಸವೆಂದರೆ ತನ್ನ ಶ್ರಮ ಶಕ್ತಿಯ ಸ್ವರೂಪದಲ್ಲಿ ತನ್ನ ಅಸ್ತಿತ್ವದ ಒಂದು ಭಾಗವನ್ನು ಮಾರುವ ಕ್ರಿಯೆಯಾಗಿ ಉಳಿಯುವುದಿಲ್ಲ, ಅದು ಕೇವಲ ವ್ಯಕ್ತಿಗೆ ಸೇರಿದ್ದಾಗಿ ಉಳಿಯದೆ ಸ್ವಂತದ ಒಂದು ಅಭಿವ್ಯಕ್ತಿಯಾಗುತ್ತದೆ, ಸಮುದಾಯಿಕ ಬದುಕಿಗೆ ಒಂದು ಕಾಣಿಕೆಯಾಗುತ್ತದೆ, ಅದರಲ್ಲಿ ತನ್ನ ಪ್ರತಿಫಲನವನ್ನು, ತನ್ನ ಸಾಮಾಜಿಕ ಕರ್ತವ್ಯದ ಈಡೇರಿಕೆಯನ್ನು ಕಾಣುತ್ತಾನೆ.
ಕೆಲಸಕ್ಕೆ ಒಂದು ಸಾಮಾಜಿಕ ಕರ್ತವ್ಯದ ಹೊಸ ಸ್ಥಾನಮಾನ ನೀಡಲು ನಾವು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ. ಒಂದೆಡೆ ಅದನ್ನು ಹೆಚ್ಚಿನ ಸ್ವಾತಂತ್ರ್ಯ ನೀಡಬಹುದಾದ ತಂತ್ರಜ್ಞಾನದೊಂದಿಗೆ ಮತ್ತು ಇನ್ನೊಂದೆಡೆ ಮಾನವ ತನ್ನನ್ನು ತಾನು ಒಂದು ಸರಕಾಗಿ ಮಾರಿಕೊಳ್ಳುವ ಭೌತಿಕ ಒತ್ತಾಯವಿಲ್ಲದೆ ಸಂಪೂರ್ಣ ಮಾನವೀಯ ಹಂತ ತಲುಪುತ್ತಾನೆ ಎಂಬ ಮಾಕ್ಸ್ ವಾದಿ ಪರಿಜ್ಞಾನವನ್ನು ಆಧರಿಸಿದ ಸ್ವಯಂಸೇವಾ ಕೆಲಸದೊಂದಿಗೆ ಬೆಸೆಯುವ ಪ್ರಯತ್ನ ನಡೆಸಿದ್ದೇವೆ. ನಿಜ, ಆಗಲೂ ಕೆಲಸ ಸ್ವಯಂಪ್ರೇರಿತವಾಗಿದ್ದಾಗಲೂ ಅದರಲ್ಲಿ ಬಲಪ್ರಯೋಗದ ಅಂಶಗಳು ಇನ್ನೂ ಇರುತ್ತವೆ. ಮಾನವ ಇನ್ನೂ ತನ್ನ ಸುತ್ತಲಿರುವ ಇಂತಹ ಎಲ್ಲಾ ಬಲವಂತವನ್ನು ಒಂದು ಸಾಮಾಜಿಕ ಸ್ವರೂಪದ ಪ್ರತಿಬಿಂಬಗಳಾಗಿ ಪರಿವರ್ತಿಸಿಲ್ಲ. ಎಷ್ಟೋ ಬಾರಿ ತನ್ನ ಪರಿಸರದ ಒತ್ತಡದಿಂದ ಕೆಲಸ ಮಾಡುತ್ತಾನೆ (ಫಿಡೆಲ್ ಇದನ್ನು ನೈತಿಕ ಅನಿವಾರ್ಯತೆಯೆಂದು ಕರೆಯುತ್ತಾರೆ). ತನ್ನ ಸ್ವಂತ ಕೆಲಸದ ವಿಚಾರವಾಗಿ ನೇರ ಒತ್ತಡಗಳು ಮತ್ತು ಸಾಮಾಜಿಕ ವಾತಾವರಣದಿಂದ ಮುಕ್ತವಾಗಿ, ಆದರೆ ಅದೇ ವೇಳೆಗೆ ಹೊಸ ರೂಢಿಗಳಿಗೆ ಬೆಸೆದುಕೊಂಡಂತೆ ಒಂದು ಸಂಪೂರ್ಣ ಆಧ್ಯಾತ್ಮಿಕ ಮರುಹುಟ್ಟನ್ನು ಪಡೆಯುವ ಅಗತ್ಯ ಈಗಲೂ ಇದೆ. ಅದೇ ಕಮ್ಯುನಿಸಂ ಆಗಿರುತ್ತದೆ.
ಆರ್ಥಿಕತೆಯಲ್ಲಿ ಬದಲಾವಣೆ ಹೇಗೆ ತನ್ನಿಂದ ತಾನೆ ಉಂಟಾಗುವುದಿಲ್ಲವೋ ಹಾಗೆಯೇ ಪ್ರಜ್ಞಾಮಟ್ಟದಲ್ಲೂ ಬದಲಾವಣೆ ತನ್ನಿಂದ ತಾನೆ ಉಂಟಾಗುವುದಿಲ್ಲ. ಬದಲಾವಣೆ ನಿಧಾನಗತಿಯಲ್ಲಿರುತ್ತದೆ, ತಾಳಬದ್ಧವಾಗಿರುವುದಿಲ್ಲ. ಇದರಲ್ಲಿ ತೀವ್ರಗತಿಯ ಅವಧಿಗಳಿರುತ್ತವೆ, ಮಂದಗತಿಯ ಅವಧಿಗಳಿರುತ್ತವೆ, ಹಿನ್ನಡೆಯ ಅವಧಿಗಳೂ ಇರುತ್ತವೆ.

ಹಲ್ಲಾ ಬೋಲ್ ಎಂಬ ಶಬ್ದಗಳನ್ನು ಕೇಳಿದೊಡನೆ ನೆನಪಾಗುವುದು ಸಫ್ದರ್ ಹಾಶ್ಮಿ

ಶೀರ್ಷಿಕೆ : ಹಲ್ಲಾಬೋಲ್ – ಸಫ್ದರ್ ಹಾಶ್ಮಿಯ ಸಾವು ಮತ್ತು ಬದುಕು ಮೂಲ :ಸುಧನ್ವ ದೇಶಪಾಂಡೆ ಅನುವಾದ ಎಂ.ಜಿ.ವೆಂಕಟೇಶ್ ಪ್ರಕಾಶನ : ಕ್ರಿಯಾ ಮಾಧ್ಯಮ ಪ್ರೈ.ಲಿ. ಪುಟಗಳು:280 ಬೆಲೆ ರೂ.200 ಪ್ರಕಟಣಾ ವರ್ಷ:2020

ಪೋಸ್ಟ್ ಮಾರ್ಟ್‍ಂ ವರದಿ ಸಹ, ನಾವು ಎತ್ತಿಕೊಂಡು ಆಸ್ಪತ್ರೆಗೆ ಹೋದಾಗ ಅವನ ಕಿವಿ, ಮೂಗು ಮತ್ತು ಗಂಟಲಿನಿಂದ ರಕ್ತ ಸ್ರಾವವಾಗುತ್ತಿದ್ದದ್ದನ್ನು ಗುರುತಿಸಿತ್ತು. ವರದಿಯಲ್ಲಿ ಮೆದುಳು ಚಿಪ್ಪು ಮತ್ತು ಹಣೆಗೆ ಆಳವಾದ ಸೀಳು ಗಾಯದ ಬಗ್ಗೆ ವಿವರಣೆಯಿತ್ತು. ಅವನ ತಲೆಗೆ ಕನಿಷ್ಟ ಇಪ್ಪತ್ತು ಬಾರಿಯಾದರೂ ಕಬ್ಬಿಣ ರಾಡಿನಿಂದ ಹೊಡೆದಿರಬಹುದು ಎಂದು ಅದರಲ್ಲಿ ಬರೆದಿತ್ತು. – ಈ ಪುಸ್ತಕದಿಂದ

೧೯೮೦ರ ದಶಕದ ಮಧ್ಯಾವಧಿ. ಕೋಮು ಸೌಹಾರ್ದತಾ ಸಮಿತಿ

ಪ್ರಧಾನಮಂತ್ರಿ ಇಂದಿರಾಗಾಂಧಿ ಅವರು ಅಕ್ಟೋಬರ್ ೩೧, ೧೯೮೪ರಂದು ತಮ್ಮ ಸಿಖ್ ಅಂಗರಕ್ಷಕರಿಂದ ಹತ್ಯೆಗೀಡಾದರು. ಆ ನಂತರ ಸಿಖ್ ವಿರೋಧಿ ಹತ್ಯಾಕಾಂಡ ಪ್ರಾರಂಭವಾಗಿ ಸುಮಾರು ಮೂರು ಸಾವಿರ ಜೀವಗಳನ್ನು ಬಲಿತೆಗೆದುಕೊಳ್ಳುವುದು ಅಲ್ಲದೇ ನಮ್ಮ ಸಮಾಜ, ಹಿಂದೂ-ಸಿಖ್ ಬಾಂಧವ್ಯ, ದೆಹಲಿ ನಗರದ ಬಗ್ಗೆ ಮತ್ತು ಕಾಂಗ್ರೆಸ್ ಪಕ್ಷದ ಬಗ್ಗೆ ಬಹಳ ಕಾಲದಿಂದ ಇದ್ದ ನಂಬಿಕೆಗಳು ನುಚ್ಚುನೂರಾದವು. ಈ ಮಾರಣ ಹೋಮಕ್ಕೆ ತತ್ತರಿಸಿದ ಸಾವಿರಾರು ಸಿಖ್ಖರು ನಗರದ ತಮ್ಮ ಪ್ರೀತಿಯ ಬಂಧುಗಳನ್ನು, ಮನೆ, ವ್ಯವಹಾರಗಳನ್ನು ಕಳೆದುಕೊಂಡು ನಗರದ ವಿವಿಧ ಕಡೆಗಳಲ್ಲಿ ರಚಿಸಲಾದ ಕ್ಯಾಂಪ್‌ಗಳಿಗೆ ಹೋಗಬೇಕಾಯಿತು. ದೆಹಲಿ ವಿಶ್ವವಿದ್ಯಾನಿಲಯದ ಉತ್ತರ ಕ್ಯಾಂಪಸ್ಸಿನಲ್ಲಿ ಮೊದಲು ಶಾಂತಿ ಮೆರವಣಿಗೆ ನಡೆದಾಗ ಉರಿದಿದ್ದ ಕೆಂಡ ಹೊಗೆಯಾಡುತ್ತಲೇ ಇತ್ತು. ಗಾಯ ಹಸಿಯಾಗಿಯೇ ಇತ್ತು. ಶಾಂತಿ ಮೆರವಣಿಗೆ ಕ್ಯಾಂಪಸ್‌ನ ಎಲ್ಲ ಕಾಲೇಜುಗಳನ್ನು ಮತ್ತು ಮುಖ್ಯ ವಿಭಾಗಗಳನ್ನು ಮುಟ್ಟುತ್ತಲೇ ಸಾಗಿತು. ಶಾಲಾ ಕಾಲೇಜಿನಲ್ಲಿ ಮೆರವಣಿಗೆ ಕೊನೆಗೊಂಡು ಸಾರ್ವಜನಿಕ ಸಭೆ ನಡೆಯಿತು. ಕೆಲವು ಭಾಷಣಕಾರರು ಸಭೆಯನ್ನು ಉದ್ದೇಶಿಸಿ ಮಾತನಾಡುವವರಿದ್ದು ಆ ವೇಳೆಗೆ ಅತಿಥೇಯ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನ ಸೇರಿದ್ದರು.

ಅವರಲ್ಲಿ ಬಹುತೇಕರು ಯುವಜನರು. ಅವರು ಕೋಪಗೊಂಡಿದ್ದು ಪ್ರತಿಕಾರಕ್ಕಾಗಿ ಕುದಿಯುತ್ತಿದ್ದರು. ಅವರ ಕಣ್ಣುಗಳು ನೋವಿನಿಂದ ಉರಿಯುತ್ತಿದ್ದು, ದ್ವೇಷ ಮತ್ತು ದುಃಖಭರಿತವಾಗಿದ್ದವು. ಪ್ರತೀಕಾರದ ವಾತಾವರಣವಿತ್ತು.

ಭಾಷಣಗಳ ಮೊದಲು ‘ಪರ್ಚಮ್’ ಗುಂಪಿನಿಂದ ಹಾಡುಗಳ ಕಾರ್ಯಕ್ರಮವಿತ್ತು. ಹಾಡುವುದು ಅಸಾಧ್ಯವಾಗಿತ್ತು. ಅವರ ಬಹಳಷ್ಟು ಕೋಪ ಅಲ್ಲಿ ಬಹುಸಂಖ್ಯೆಯಲ್ಲಿ ನೆರೆದಿದ್ದ ಪೋಲಿಸರ ವಿರುದ್ಧವಿತ್ತು. ವಿದ್ಯಾರ್ಥಿಗಳು ಉದ್ರಿಕ್ತರಾಗಿದ್ದರು. ಹಿಂದಿನ ದಿನಗಳಲ್ಲಿ ನಡೆದ ಆಸ್ತಿಹಾನಿಯಲ್ಲಿ ರಕ್ತ ಹರಿಯುತ್ತಿದ್ದಾಗ ದುಷ್ಕೃತ್ಯದಲ್ಲಿ ಪೊಲೀಸರು ಶಾಮೀಲಾಗಿದ್ದರು. ಒಂದು ಅಪಾಯಕಾರಿ ಸನ್ನಿವೇಶ ಪ್ರಾರಂಭವಾಗುತ್ತಿತ್ತು. ಶಾಂತಿ ಮೆರವಣಿಗೆ ಸಂಘಟಕರಿಗೆ ಮುಂದಿನ ಆಗುಹೋಗುಗಳ ಬಗ್ಗೆ ಆತಂಕವಿತ್ತು.

ಸಫ್ದರ್ ‘ಪರ್ಚಮ್’ನ ಅತ್ಯಂತ ಕಿರಿಯ ಸದಸ್ಯಳಾದ, ತೆಳ್ಳಗಿನ ಪದವಿಪೂರ್ವ ವಿದ್ಯಾರ್ಥಿನಿ ಸುಮಂಗಲಾ ದಾಮೋದರನ್  (ಇಎಂಎಸ್ ಅವರ ಮೊಮ್ಮಗಳು) ಕಡೆಗೆ ತಿರುಗಿದನು. ಅವನು ಮೈಕ್ ಕೈಗೆತ್ತಿಕೊಂಡು ‘ಜಾನೆವಾಲೇ ಸಿಪಾಯಿ’ ಹಾಡನ್ನು ಹಾಡಲು ಹೇಳಿದ. ೧೯೪೦ರಲ್ಲಿ ಈ ಯುದ್ಧ ವಿರೋಧಿ-ಗೀತೆಯನ್ನು ರಚಿಸಿದ್ದು ಹೈದರಾಬಾದ್‌ನ ಕಮ್ಯೂನಿಸ್ಟ್ ಕವಿ ಮಕ್ದೂಮ್ ಮೋಹಿಯುದ್ದೀನ್. ಅದನ್ನು ಸಲೀಲ್ ಚೌಧರಿ ೧೯೬೦ರಲ್ಲಿ ’ಉಸ್ನೇ ಕಹಾ ಥಾ’ ಚಿತ್ರಕ್ಕೆ ಅಳವಡಿಸಿ ಸಂಗೀತ ನೀಡಿದ್ದರು. ಅಲ್ಲಿವರೆಗೆ ‘ಪರ್ಚಮ್’ ಯಾವಾಗಲೂ ಗುಂಪು ಗಾಯನ ಮಾಡುತ್ತಿದ್ದರು. ತಂಡದಿಂದ ಒಬ್ಬರೇ ಹಾಡಿದ ಮೊದಲ ಗೀತೆ ಇದಾಗಿತ್ತು. ಅದನ್ನು ಅವರು ಹಿಂದೆ ಎಂದೂ ಹಾಡಿರಲಿಲ್ಲ. ಯುವ ಗಾಯಕಿ ತಬ್ಬಲಿಯಂತೆ ಭಯಭೀತಳಾಗಿದ್ದಳು.

‘ಹಾಡು, ಹೆದರಬೇಡ ಹಾಡು’

ಸಫ್ದರ್ ಉತ್ತೇಜಿಸಿದನು. ಸುಮಂಗಲ ಹಿಂಜರಿಯುತ್ತಿದ್ದಳು. ಸಫ್ದರ್ ಅವಳ ಹಿಂದೆಯೇ ಇದ್ದ. ಅವಳು ಮತ್ತೆ ಹಾಡಲು ಪ್ರಾರಂಭಿಸಿದಳು. ಅವಳ ಮಧುರ ಧ್ವನಿ ಇದ್ದಕ್ಕಿದಂತೆ ಶಕ್ತಿಶಾಲಿಯಾಯಿತು. ಅವಳ ಅಂತರಂಗದ ಆಳದಿಂದ ಹೊರಟ ಆ ಪೂರ್ಣಧ್ವನಿ ಅವಳ ಸಣ್ಣ ಆಕಾರವನ್ನು ಮುಚ್ಚಿತ್ತು. ಅದು ಅಲ್ಲಿದ್ದ ಎಲ್ಲರನ್ನೂ ತಲುಪಿ ಶಾಂತವಾಗಿಸಿತು. ಹಾಡು ಮುಂದುವರೆದಂತೆ ಯುವಕ ಯುವತಿಯರು ಸ್ತಂಭಿತರಾಗಿದ್ದರು. ಸಿಪಾಯಿ ಯುದ್ಧಕ್ಕೆ ಹೊರಡುವಾಗ ಅವನ ದುಃಖಿತ ಹೆಂಡತಿ ಮತ್ತು ಹಸಿದ ಮಕ್ಕಳ ಕುರಿತಾದ ಹಾಡು, ಸುಡುತ್ತಿದ್ದ ಹೆಣಗಳ ವಾಸನೆ – ಎಲ್ಲಾ ಕಡೆಯಿಂದ ಎದ್ದು ಬದುಕೇ ಅಳುತ್ತಿರುವಂತೆ ಭಾಸವಾಗುತ್ತಿತ್ತು.

ಪ್ರೇಕ್ಷಕರಲ್ಲಿ ಯಾರೋ ಒಬ್ಬರು ಅಳತೊಡಗಿದರು. ಮುಂದಿನ ಕೆಲವು ನಿಮಿಷಗಳಲ್ಲಿ ಸುಮಾರು ಜನ ಅಳುತ್ತಿದ್ದರು. ಅಳದಿದ್ದವರೂ ಉಕ್ಕಿಬರುತ್ತಿದ್ದ ಭಾವನೆಯನ್ನು ತಡೆಯಲು ಯತ್ನಿಸುತ್ತಿದ್ದರು. ಅಲ್ಲಿ ಒದ್ದೆಯಾಗದಿದ್ದ ಕಣ್ಣುಗಳೇ ಇರಲಿಲ್ಲ. ಸಂಪೂರ್ಣವಾಗಿ ಕಾರ್ಯಾಚರಣೆಗಾಗಿ ಸಿದ್ಧರಾಗಿದ್ದ ಪೋಲಿಸರು, ಅಲ್ಲಿ ಬದಲಾದ ಮನಸ್ಥಿತಿಯನ್ನು ನೋಡಿ ಆಶ್ಚರ್ಯಚಕಿತರಾದರು.

ಅಸಾಧ್ಯವೆನಿಸಿದ್ದು ನಡೆದಿತ್ತು. ೧೯೪೦ರಲ್ಲಿ ಮುಸ್ಲಿಂ ಹೆಸರಿನ ಹೈದರಾಬಾದಿ ಕಮ್ಯುನಿಸ್ಟ್ ಕವಿಯಿಂದ ರಚಿತವಾದ ಒಂದು ಹಾಡು, ೧೯೬೦ರ ಒಂದು ಚಲನಚಿತ್ರಕ್ಕೆ ಒಬ್ಬ ಬಂಗಾಳಿ ಅಳವಡಿಸಿದ್ದ, ಪದವಿಪೂರ್ವ ತರಗತಿಯ ಹಿಂದು ಹೆಸರಿನ ಮಲೆಯಾಳಿ ಯುವತಿ ಹಾಡಿದ ಹಾಡು, ಹತ್ಯಾಕಾಂಡದಿಂದ ಕುದಿಯುತ್ತಿದ್ದ ಕೋಪೋದ್ರಿಕ್ತರಾಗಿದ್ದ ನೂರಾರು ಸಿಖ್ ಯುವಕರಲ್ಲಿ ಬದಲಾವಣೆ ತಂದಿತ್ತು. ಇಲ್ಲಿ ಹೋಲಿಸಬಹುದಾದ್ದು, ಹೊಂದಿಕೆಯಾಗಬಹುದಾದ್ದು ಏನೂ ಇಲ್ಲ. ಆದರೂ ಈ ಹಾಡು, ಭಾವಪೂರ್ಣ ಮತ್ತು ಮನಕಲಕುವ ಹಾಡು-ನೊಂದವರ ಎರಡು ಗುಂಪುಗಳನ್ನು, ಪೀಳಿಗೆಗಳು, ಭೂಗೋಳ ಮತ್ತು ಹಿಂಸಾಚಾರದ ಎಲ್ಲೆಗಳನ್ನೂ ಮೀರಿ ಜೋಡಿಸಿತ್ತು.

-ಪುಸ್ತಕದಿಂದ