ಹಿಡಿದರೆ ಹಿಡಿ ತುಂಬ ಬಿಟ್ಟರೆ ಜಗತುಂಬಾ

ನಟನೆಯ ಕೈಪಿಡಿ
ಅಂಗೈ ನೆಲ್ಲಿ ಕಾಯಿಯಂತೆ ಖುಷಿ ಕೊಟ್ಟಿತು
ಹಿಡಿದರೆ ಹಿಡಿ ತುಂಬ
ಬಿಟ್ಟರೆ ಜಗವೆಲ್ಲ ಎನ್ನುವಂತ
ಕೈ ಪಿಡಿ
ಮುರಳೀಧರ ಉಪಾಧ್ಯ ಹಿರಿಯಡ್ಕ

ಶ್ರೀಪಾದ ಮೂಲತಃ ಒಬ್ಬ ಪ್ರತಿಭಾವಂತ ನಟ. ಬಾಲ್ಯದಿಂದಲೇ ಯಕ್ಷಗಾನ ಹಳ್ಳಿ ನಾಟಕಗಳ ನಿರಂತರ ಸಾಂಗತ್ಯ ಅವನಲ್ಲಿಯ ನಟನನ್ನ ಬೆಳೆಸಿದ್ದು .ನಟಿಸುತ್ತಲೇ ನಟಿಸುತ್ತಲೇ ನಿರ್ದೇಶನಕ್ಕಿಳಿದವನು. ಅವನು ನಾಟಕ ಕಲಿಸುವ ರೀತಿಯೂ ಹಾಗೇ. ನಟನೆಯ ಜೊತೆಗೇ ಕಟ್ಟಲ್ಪಡುವ ಮಾದರಿಯಂತವು ಅವು.
ಹೀಗಿರುವಾಗ ಮೂರು ದಶಕಗಳ ನಿರಂತರ ರಂಗಾನುಭವದ ಮೂಸೆಯಿಂದ ನಟನೆಯ ಅನುಭವಗಳನ್ನ ಹೆಕ್ಕಿ ತೆಗೆದು ಇಲ್ಲಿ ನಟನಾಗುವ ಹಂಬಲದ ಹೊಸ ಹುಡುಗರ ಕೈಗಿತ್ತಿದ್ದಾನೆ.
ಪುಸ್ತಕದ ಆರಂಭದಲ್ಲಿ ಬಿ. ಸುರೇಶ್ ಹೇಳುವಂತೆ `ಕನ್ನಡದಲ್ಲಿ ನಟನೆಯ ಕುರಿತಂತೆ ಈಗಾಗಲೇ ಹಲವು ಪುಸ್ತಕಗಳು ಬಂದಿವೆ. ಅವು ಹಲವು ಸಿದ್ಧಾಂತಗಳ ಮೂಲಕ ನಟನೆ ಎಂಬ ಕೌಶಲ ಹಾಗೂ ಕಲೆಯನ್ನು ದಾಟಿಸುವ ಪ್ರಯತ್ನ ಮಾಡುತ್ತವೆ.
ಶ್ರೀಪಾದ ನ ಈ ಕೈ- ಪಿಡಿ ಸಿದ್ಧಾಂತಗಳ ಹಂಗಿಲ್ಲದೇ ಸರಳವಾಗಿ ನಟನೆಯ ಕುರಿತು ಹೇಳುತ್ತ ಹೋಗುತ್ತದೆ. ಇಷ್ಟು ಸರಳವಾಗಿ ಹೇಳಬಹುದೇ ಎಂದು ಬೆರಗುಗೊಳಿಸುವಷ್ಟು.
ಪುಸ್ತಕದಲ್ಲಿ ಎರಡು ವಿಭಾಗಗಳಿವೆ. ಮೊದಲನೆಯದು ಜ್ಞಾನರಂಗ, ಇನ್ನೊಂದು ಕ್ರಿಯಾರಂಗ. ಮೊದಲನೆಯ ಭಾಗದಲ್ಲಿ ತಾತ್ವಿಕ ಗ್ರಹಿಕೆಗಳಿದ್ದರೆ ಎರಡನೇ ಭಾಗ ಚಟುವಟಿಕೆಗಳಿಗೆ ಸಂಬಂಧಿಸಿದ್ದು. ಕಾವ್ಯಮಯವಾಗಿರುವ ‘ಜ್ಞಾನರಂಗ’ ಪಠ್ಯವನ್ನೆತ್ತಿಕೊಂಡು ಕ್ರಿಯೆಗಳೊಂದಿಗೆ ‘ನಾಟಕ’ ವಾಗುವ ಪರಿಯೇ ಅದ್ಭುತ.
ಪುಸ್ತಕದ ಕುರಿತಂತೆ ಪ್ರಸನ್ನ, ಬಿ.ಸುರೇಶ, ಕೆ.ರಾಮಯ್ಯ, ದು‌ಸರಸ್ವತಿ ಐ.ಕೆ.ಬೊಳುವಾರು, ಸುಧಾ ಆಡುಕಳ ರ ಅಭಿಪ್ರಾಯಗಳಿವೆ.
ನಭಾ ಒಕ್ಕುಂದ ಪುಸ್ತಕಕ್ಕೆ ಚಂದದ ಮುಖಚಿತ್ರ ಬರೆದಿದ್ದಾರೆ. ಗಿರಿಧರ ಕಾರ್ಕಳ ರ ಸೊಗಸಾದ ರೇಖಾಚಿತ್ರಗಳು ಕೈಪಿಡಿಯ ಅಂದ ಹೆಚ್ಚಿಸಿವೆ.

ಶೀರ್ಷಿಕೆ : ನಟನೆಯ ಕೈಪಿಡಿ; ಲೇಖಕರು : ಶ್ರೀಪಾದ ಭಟ್; ಪ್ರಕಾಶಕರು : ಚಿಂತನ ಪುಸ್ತಕ; ಪ್ರಕಟಣಾ ವರ್ಷ: 2021; ಪುಸ್ತಕ ಅಳತೆ : ಡೆಮಿ 1/12, ಪುಟಗಳು:72 ಬೆಲೆ:ರೂ.65/-