ಗಾಂಧಿಯೊಬ್ಬ ಮನುಷ್ಯನೇ ?!.

ಹಿಂದೊಂದು ಕಾಲದಲಿ ಮುದಿಸಿಂಹ ಮುನಿದಿತ್ತು; 

ಗಾಂಧಿಯೊಬ್ಬ ಮನುಷ್ಯನೇ?

ಭಾರತದ ಬಿಡುಗಡೆಯೆ   ಬೆರಗಾಗಿ ನುಡಿದಿತ್ತು:

ಗಾಂಧಿಯೊಬ್ಬ ಮನುಷ್ಯನೇ!

ಹುಟ್ಟು ಸಾವುಗಳಾಚೆ ಭರವಸೆಯ ನೆರಳಿತ್ತು:

ಗಾಂಧಿಯೊಬ್ಬ ಮನುಷ್ಯನೇ.

 • ಕೆ.ಎಸ್.ನರಸಿಂಹಸ್ವಾಮಿ
ಶೀರ್ಷಿಕೆ: ಮಹಾತ್ಮ ಮತ್ತು ಗುರುದೇವ ಸಂವಾದ – ದೇಶ ಕಟ್ಟುವ ಕನಸು ಕಾಣ್ಕೆಗಳು ಸಂಪಾದಕರು:ಎಸ್. ಶಿವಾನಂದ ಪುಟ:304 ಬೆಲೆ:ರೂ.225/- ಪ್ರಕಟಣಾ ವರ್ಷ:2011

ಶೀರ್ಷಿಕೆ: ಮಹಾತ್ಮ ಮತ್ತು ಗುರುದೇವ ಸಂವಾದ – ದೇಶ ಕಟ್ಟುವ ಕನಸು ಕಾಣ್ಕೆಗಳು ಸಂಪಾದಕರು:ಎಸ್. ಶಿವಾನಂದ ಪುಟ:304 ಬೆಲೆ:ರೂ.225/-

ಮಹಾತ್ಮ ಮತ್ತು ಗುರುದೇವ ಸಂವಾದ

ದೇಶ ಕಟ್ಟುವ ಕನಸು ಕಾಣ್ಕೆಗಳು

ಭಾಗ-1 ಗಾಂಧೀಜಿ-ಟಾಗೋರ್ ಸಂವಾದದ ದಾಖಲೆಗಳು

 1. ಸ್ವರಾಜ್ಯ ಮತ್ತು ಅಸಹಕಾರ ಚಳುವಳಿ
 2. ಚರಕಾಂದೋಲನ
 3. ಉಪವಾಸ ಸತ್ಯಾಗ್ರಹ
 4. ನಂಬಿಕೆ-ಮೂಢನಂಬಿಕೆ
 5. ಪ್ರಾರ್ಥನಾ ಮಂದಿರ, ಮತಾಂತರ ಇತ್ಯಾದಿ

ಭಾಗ-2 ಗಾಂಧೀಜಿ-ಟಾಗೋರ್ ಸಂವಾದದ ವಿಶ್ಲೇಷಣೆ

 1. ಮಹಾತ್ಮ ಮತ್ತು ಕವಿ : ಸಂವಾದ (1915-1941) – ಪ್ರೊ. ಸಬ್ಯಸಾಚಿ ಭಟ್ಟಾಚಾರ್ಯ
 2. ಟಾಗೋರ್ ಮತ್ತು ಅವರ ಭಾರತ – ಪ್ರೊ. ಅಮಾರ್ತ್ಯ ಸೇನ್
 3. ರಾಜಕಾರಣ ಮತ್ತು ಜನತೆ: ಸ್ವರಾಜ್ಯ ಮತ್ತು ಅಸಹಕಾರ ಕುರಿತು ರವೀಂದ್ರನಾಥರ ವಿಮರ್ಶೆ (1915-1922)  – ಪ್ರೊ. ಮಾಲಿನಿ ಭಟ್ಟಾಚಾರ್ಯ
 4. ಗಾಂಧೀಜಿ-ಟಾಗೋರ್ ವಾಗ್ವಾದ : ತಾತ್ವಿಕ ಭೂಮಿಕೆಗಳು  – ಪ್ರೊ. ಬಸವರಾಜ ಕಲ್ಗುಡಿ
 5. ಮಹಾತ್ಮ, ಗುರುದೇವ ಮತ್ತು ನಾವು  – ವಸಂತರಾಜ ಎನ್.ಕೆ.
 6. ಟಾಗೋರರ ಸಹಕಾರ ಚಳುವಳಿ  – ಶೂದ್ರ ಶ್ರೀನಿವಾಸ್
 7. ವಿಶ್ವ ಭಾರತಿ-ಸ್ವತಂತ್ರ ಭಾರತದ ಬಗ್ಗೆ ರವೀಂದ್ರರ ಕನಸಿನ ಬೀಜರೂಪ  – ಜಿ.ಎನ್.ನಾಗರಾಜ್

ರವೀಂದ್ರನಾಥ ಟಾಗೋರರ 150ನೇ ಜನ್ಮ ವರ್ಷಾಚರಣೆ ನೆನಪಿನಲ್ಲಿ ಅವರ ಬಗ್ಗೆ ಅರ್ಥಪೂಣವಾದ ಒಂದು ಕೆಲಸ ಮಾಡಬೇಕೆಂದು ಗೆಳೆಯ ವಸಂತರಾಜ್ ಅವರು ಸಬ್ಯಸಾಚಿ ಭಟ್ಟಾಚಾರ್ಯ ಸಂಪಾದಿಸಿದ “ದಿ ಮಹಾತ್ಮ ಅಂಡ್ ದಿ ಪೊಯೆಟ್” [ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ: 1997] ಪುಸ್ತಕವನ್ನು ಕೈಗಿತ್ತು, ಅದರ ಅನುವಾದದ ಜತೆಗೆ ಟಾಗೋರ್ ಮತ್ತು ಗಾಂಧೀಜಿ ಕುರಿತ ಇತರರ ಲೇಖನಗಳನ್ನು ಕೂಡಿಸಿ. ಒಂದು ಸಂಕಲನ ತರೋಣವೆಂದು ಸಲಹೆ ಮಾಡಿದರು. ಅವರ ಒತ್ತಾಯವಿಲ್ಲದಿದ್ದರೆ ಈ ಪುಸ್ತಕ ರೂಪುಗೊಳ್ಳುತ್ತಲೇ ಇರಲಿಲ್ಲ.

ಈ ಪುಸ್ತಕದಲ್ಲಿ ಎರಡು ಭಾಗಗಳನ್ನು ಮಾಡಲಾಗಿದೆ. ಮೊದಲ ಭಾಗದಲ್ಲಿ ಟಾಗೋರ್ ಮತ್ತು ಗಾಂಧೀಜಿ ನಡುವೆ ನಡೆದ ಸಂವಾದದ ಪತ್ರಗಳು ಹಾಗೂ ಲೇಖನಗಳನ್ನು ನೀಡಲಾಗಿದೆ. ಸಬ್ಯಸಾಚಿ ಭಟ್ಟಾಚಾರ್ಯರು ತಮ್ಮ ಪುಸ್ತಕದಲ್ಲಿ ಈ ಸಂವಾದವನ್ನು ಕಾಲಾನುಕ್ರಮಣಿಕೆಯಲ್ಲಿ ನೀಡಿದ್ದಾರೆ. ಇದರ ಬದಲಾಗಿ ನಮ್ಮ ಪುಸ್ತಕದಲ್ಲಿ ವಿಷಯವಾರು ವಿಂಗಡಣೆಯನ್ನು ಮಾಡಲಾಗಿದೆ. ಅಸಹಕಾರ, ಚರಕ ಮತ್ತು ಸ್ವರಾಜ್ಯ, ಉಪವಾಸ ಸತ್ಯಾಗ್ರಹ ಮುಂತಾಗಿ ವರ್ಗೀಕರಿಸಲಾಗಿದೆ. ಇದರಿಂದ ಅವರಿಬ್ಬರ ನಡುವಿನ ಸಂವಾದದ ಸ್ಥೂಲ ಚೌಕಟ್ಟುಗಳು ಓದುಗರಿಗೆ ದೊರಕಲು ಸಹಾಯಕವಾಗುತ್ತದೆ ಎಂದು ಭಾವಿಸಲಾಗಿದೆ.

ಎರಡನೆಯ ಭಾಗದಲ್ಲಿ ವಿಶೇಷ ಲೇಖನಗಳನ್ನು ಸಂಗ್ರಹಿಸಲಾಗಿದೆ. ಮೊದಲಿನ ಮೂರು ಲೇಖನಗಳನ್ನು ಬರೆದವರು ಬಂಗಾಳದವರೇ ಆಗಿದ್ದರೂ, ಟಾಗೋರರ ಬಗ್ಗೆ ಅನಗತ್ಯ ಆರಾಧನಾ ಭಾವವನ್ನು ಹೊಂದದೆ ಟಾಗೋರರ ಚಿಂತನಾಕ್ರಮವನ್ನು ಹಾಗೂ ಅದರ ಮಹತ್ವವನ್ನು ನಿರ್ಭಾವುಕವಾಗಿ ವಿಶ್ಲೇಷಣೆಗೆ ಒಳಪಡಿಸಿದ್ದಾರೆ. “ಮಹಾತ್ಮ ಮತ್ತು ಕವಿ: ಸಂವಾದಗಳು 1915-1941” ಇದು ಸಬ್ಯಸಾಚಿ ಭಟ್ಟಾಚಾರ್ಯ ತಮ್ಮ ಪುಸ್ತಕಕ್ಕೆ ಬರೆದ ದೀರ್ಘ ಪ್ರಸ್ತಾವನೆ. ಟಾಗೋರ್ ಮತ್ತು ಗಾಂಧೀಜಿ ಸಂವಾದದ ಚಾರಿತ್ರಿಕ ಸಂದರ್ಭದೊಂದಿಗೆ ಇಬ್ಬರ ಸಂಕಥನಗಳನ್ನು ಕಟ್ಟಿಕೊಡುತ್ತಾರೆ. ಸಬ್ಯಸಾಚಿಯವರ ಇಲ್ಲಿನ ಧಾಟಿಯ ಬಗ್ಗೆ ಒಂದು ಮಾತು ಹೇಳಬೇಕು. ಗಾಂಧೀಜಿ ಮತ್ತು ಟಾಗೋರ್ ಇಬ್ಬರಲ್ಲಿ ಯಾರೊಬ್ಬರ ಪರ ವಹಿಸದೆ, ಇಬ್ಬರ ಬಗ್ಗೆಯೂ ನಮ್ಮಲ್ಲಿ ಸಮತೋಲ ದೃಷ್ಟಿ ಮೂಡುವಂತೆ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಬಂಗಾಳಕ್ಕೆ ಮತ್ತು ಭಾರತಕ್ಕೆ ಮತ್ತೊಂದು ನೊಬೆಲ್ ಪ್ರಶಸ್ತಿ ತಂದುಕೊಟ್ಟ ಅಮಾರ್ತ್ಯ ಸೇನ್ ಅವರ “ಟಾಗೋರ್ ಮತ್ತು ಅವರ ಭಾರತ” ಲೇಖನ [1997] ಅವರ ವ್ಯಾಪಕ ಓದಿನ ಹರಹನ್ನು ಒಳಗೊಂಡಿದೆ. ಒಬ್ಬ ಪ್ರಖ್ಯಾತ ಅರ್ಥಶಾಸ್ತ್ರಜ್ಞರಾಗಿದ್ದೂ, ಟಾಗೋರರ ಸಾಹಿತ್ಯಕ, ಸಾಂಸ್ಕೃತಿಕ, ರಾಜಕೀಯ ನಿಲುವುಗಳಲ್ಲಿನ ಸೂಕ್ಷ್ಮತೆಗಳನ್ನು ಹಾಗೂ ಬಹುಮುಖೀ ಚಿಂತನೆಗಳನ್ನು ಪ್ರಸ್ತುತಗೊಳಿಸುತ್ತಾರೆ. ಟಾಗೋರರು `ಅನುಭಾವಿ ಕವಿ’ ಎಂಬ ಚೌಕಟ್ಟನ್ನು ಪಾಶ್ಚಾತ್ಯರು ತಮ್ಮ ಆಧ್ಯಾತ್ಮಿಕ ಅಭಾವದಲ್ಲಿ ಕಟ್ಟಿಕೊಂಡ ಓರಿಯಂಟಲ್ ರಚನೆಯಾಗಿದ್ದು, ಅದು ಪಶ್ಚಿಮಕ್ಕೆ `ಮಾರುವ’ ಒಂದು ವಸ್ತುವಾಗಿತ್ತು ಎಂಬುದನ್ನು ಸೇನ್ ಅವರು ಬಯಲು ಮಾಡುತ್ತಾರೆ. `ಬ್ರಹ್ಮಚರ್ಯ ಮತ್ತು ವೈಯಕ್ತಿಕ ಬದುಕು’ ಎಂಬಲ್ಲಿ ಗಾಂಧೀಜಿ ಮತ್ತು ಟಾಗೋರರ ಲೈಂಗಿಕ ಬದುಕನ್ನು ಕುರಿತ ಕುತೂಹಲಕರ ಒಳನೋಟಗಳನ್ನು ನೀಡಿದ್ದಾರೆ.

ಜಾಧವಪುರ ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕಿ ಮತ್ತು ಪಶ್ಚಿಮ ಬಂಗಾಳ ಮಹಿಳಾ ಆಯೋಗದ ಅಧ್ಯಕ್ಷೆ ಪ್ರೊ. ಮಾಲಿನಿ ಭಟ್ಟಾಚಾರ್ಯ ಅವರ “ರಾಜಕಾರಣ ಮತ್ತು ಜನತೆ: ಸ್ವರಾಜ್ಯ ಮತ್ತು ಅಸಹಕಾರ ಕುರಿತು ರವೀಂದ್ರನಾಥರ ವಿಮರ್ಶೆ” ಅತ್ಯಂತ ಗಂಭೀರವಾದ ಅಧ್ಯಯನದಿಂದ ಕೂಡಿದ ಲೇಖನ. 1915-1922ರ ಕಾಲಘಟ್ಟದಲ್ಲಿ ಗಾಂಧಿ ಮತ್ತು ಟಾಗೋರರ ನಡುವೆ ಮೂಡಿದ ಭಿನ್ನಾಭಿಪ್ರಾಯಗಳ ಹಿಂದೆ ಇದ್ದ ಭಿನ್ನಚಿಂತನೆಗಳ ನೆಲೆಗಳನ್ನು ಅನ್ವೇಷಿಸುತ್ತಾರೆ. ಇಲ್ಲಿ ಮುಖ್ಯವಾಗಿ ಇಬ್ಬರ ಚಿಂತನೆಗಳೂ `ದೇಶೀ ಆಧುನಿಕತೆಯ ಹುಡುಕಾಟ’ದಲ್ಲಿ ತೊಡಗಿದ್ದವು ಎನ್ನುತ್ತಾರೆ. ಇದನ್ನು ಟಾಗೋರರ ಪ್ರಮುಖ ಕೃತಿಗಳ ವಿಶ್ಲೇಷಣೆಯ ಮೂಲಕ ಶೋಧಿಸಿದ್ದಾರೆ.

ಬಸವರಾಜ ಕಲ್ಗುಡಿ ಅವರು ನಮ್ಮ ನಡುವಿನ ಬಹುಮುಖ್ಯ ವಿಮರ್ಶಕರಲ್ಲಿ ಒಬ್ಬರು. “ಗಾಂಧೀಜಿ ಮತ್ತು ಠಾಗೂರ್ ವಾಗ್ವಾದ: ತಾತ್ವಿಕ ಭೂಮಿಕೆಗಳು” ಲೇಖನದಲ್ಲಿ ಆಧುನಿಕ ಭಾರತವನ್ನು ಕಟ್ಟುವ ಪ್ರಕ್ರಿಯೆಯಲ್ಲಿ ಎರಡು ವಿಭಿನ್ನ ಮನೋಧರ್ಮಗಳ ಮುಖಾಮುಖಿಯಾಗಿ ಗಾಂಧೀಜಿ ಮತ್ತು ರವೀಂದ್ರನಾಥರ ವಾಗ್ವಾದಗಳನ್ನು ಗುರುತಿಸುತ್ತಾರೆ. ಗಾಂಧೀಜಿಯ ಆರ್ಥಿಕ, ಭಾಷಿಕ ಚಿಂತನೆಗಳೂ ಮತ್ತು ರವೀಂದ್ರರ ತಾತ್ವಿಕ ನೆಲೆಯೂ ಪರಸ್ಪರ ವಿರೋಧಿ ಚಿಂತನೆಗಳಲ್ಲ; ಅವು ಸಂಧಿಸುವ ಅನಿವಾರ್ಯತೆ ಇದೆ ಎಂಬ ನಿಲುವನ್ನು ನಮ್ಮ ಮುಂದಿಟ್ಟಿದ್ದಾರೆ.

ವಸಂತರಾಜ್ ಎನ್.ಕೆ. ಎಡಪಂಥೀಯ ಚಿಂತಕರು. “ಗುರುದೇವ, ಮಹಾತ್ಮ ಮತ್ತು ನಾವು” ಲೇಖನ ವಿಶಿಷ್ಟವಾದದ್ದು. ವಿಶಿಷ್ಟ ಯಾಕೆಂದರೆ ಇತರ ಚಿಂತಕರು ಟಾಗೋರ್ ಮತ್ತು ಗಾಂಧೀಜಿ ನಡುವಿನ ಸಂಕಥನಗಳಲ್ಲಿ ಚಾರಿತ್ರಿಕ ಮಹತ್ವದ ಜತೆಯಲ್ಲಿ ತಾತ್ವಿಕ ಅರೆಕೊರೆಗಳನ್ನು ಗುರುತಿಸುವಲ್ಲಿಗೆ ನಿಂತರೆ, ವಸಂತರಾಜ್ ಅವರು ಈ ಮಜಲಿನಿಂದ ಮುಂದಕ್ಕೆ ಹೋಗುತ್ತಾರೆ. ಇಂದಿನ ಜಾಗತೀಕರಣ ಮತ್ತು ಮತೀಯವಾದದ ಧಾರೆಗಳಿಗೆ ಎದುರಾಗಿ ಮೂರನೆಯ ಶಕ್ತಿಯನ್ನು ರೂಪಿಸಬೇಕಾದ ಇವತ್ತಿನ ಸಂದರ್ಭದಲ್ಲಿ ಗಾಂಧಿ-ಟಾಗೋರ್ ಸಂಕಥನಗಳನ್ನು ಮರುಶೋಧಿಸಿಕೊಳ್ಳುವ ಸಾಧ್ಯತೆಯನ್ನು ಮುಂದಿಟ್ಟಿದ್ದಾರೆ. ಚರಿತ್ರೆಯನ್ನು ವರ್ತಮಾನಕ್ಕೆ ರಚನಾತ್ಮಕವಾಗಿ ರೂಪಾಂತರಿಸಿಕೊಳ್ಳುವ ವಿಧಾನ ಇದು.

ಶೂದ್ರ ಶ್ರೀನಿವಾಸ್ `ಶೂದ್ರ’ ಪತ್ರಿಕೆಯ ಸಂಪಾದಕರು. `ಟಾಗೋರರ ಸಹಕಾರ ಚಳುವಳಿ’ ಲೇಖನದಲ್ಲಿ ಅವರು ನಮಗೆ ಗೊತ್ತಿರದ ಟಾಗೋರರ ಮತ್ತೊಂದು ವಿಶಿಷ್ಟವಾದ ಲೋಕವನ್ನು ಪರಿಚಯಿಸಿದ್ದಾರೆ. ಟಾಗೋರರು ತಮ್ಮ ನಂಬಿಕೆ ಹಾಗೂ ಆದರ್ಶಗಳನ್ನು ವಾಸ್ತವಕ್ಕೆ ತಂದು ಪ್ರಯೋಗಿಸುವ ಛಲವನ್ನು ಹೊಂದಿದ್ದರು. ಪಾಶ್ಚಾತ್ಯ ಶಿಕ್ಷಣ ಪದ್ಧತಿಗೆ ಪರ‍್ಯಾಯವಾಗಿ 1901ರಲ್ಲಿ `ಶಾಂತಿನಿಕೇತನ’ವನ್ನು ಕಟ್ಟಿದರೆ, ಬಡರೈತಾಪಿ ಜನರ ಆರ್ಥಿಕ ಬವಣೆಗಳನ್ನು ನೀಗಲು 1921ರಲ್ಲಿ `ಶ್ರೀನಿಕೇತನ’ ಎಂಬ ಸಂಸ್ಥೆಯನ್ನು ಕಟ್ಟುತ್ತಾರೆ. ಇದರ ಮೂಲಕ ಸಹಕಾರ ಚಳುವಳಿಯನ್ನು ಮತ್ತು ಗ್ರಾಮಸ್ವರಾಜ್ಯದ ಕಲ್ಪನೆಯನ್ನು ಟಾಗೋರರು ಬಿತ್ತಿ ಬೆಳೆದ ಬಗೆಯನ್ನು ಶ್ರೀನಿವಾಸರು ಕಟ್ಟಿಕೊಟ್ಟಿದ್ದಾರೆ.

ಜಿ.ಎನ್. ನಾಗರಾಜ್ ಮಾರ್ಕ್ಸ್ವಾದೀ ಚಿಂತಕರು. ‘ವಿಶ್ವಭಾರತಿ-ರವೀಂದ್ರರ ಕನಸಿನ ಬೀಜರೂಪ’ ಲೇಖನದಲ್ಲಿ ವಸಾಹತುಶಾಹಿ ಶಿಕ್ಷಣ ಪದ್ಧತಿಗೆ ಪರ್ಯಾಯವಾಗಿ ರವೀಂದ್ರರು ಆಧುನಿಕ ಭಾರತದ ಮಕ್ಕಳ ಭವಿಷ್ಯವನ್ನು ರೂಪಿಸಿದ ಶೈಕ್ಷಣಿಕ-ಸಾಂಸ್ಕೃತಿಕ ಕಣ್ಣೋಟವನ್ನು ನಾಗರಾಜ್ ವಿಶ್ಲೇಷಿಸಿದ್ದಾರೆ. ಶಿಕ್ಷಣ ಮತ್ತು ಗ್ರಾಮೀಣ ಪುನರ್ನಿರ್ಮಾಣಗಳು ಟಾಗೋರರಲ್ಲಿ ಪ್ರತ್ಯೇಕ ಶಿಸ್ತುಗಳಾಗದೆ ಅವು ಒಂದಕ್ಕೊಂದು ಪೂರಕವಾಗಿ ಬೆಳೆದಿದ್ದನ್ನು ಇಲ್ಲಿ ನಿರೂಪಿಸಿದ್ದಾರೆ.

ಈ ಸಂಕಲನದ ಮತ್ತೊಂದು ವಿಶೇಷ ಎಂದರೆ ಗಾಂಧೀಜಿ ಮತ್ತು ಟಾಗೋರ್ ಕುರಿತು ನಮ್ಮ ಕನ್ನಡ ಕಾವ್ಯಲೋಕ ಸ್ಪಂದಿಸುತ್ತಾ ಬಂದಿರುವುದನ್ನು ಗಮನಿಸಲು ಗೋವಿಂದ ಪೈ, ಕುವೆಂಪು, ಬೇಂದ್ರೆ, ಅಡಿಗ, ಜಿ.ಎಸ್.ಎಸ್, ಅಲ್ಲಮಪ್ರಭು ಬೆಟ್ಟದೂರು, ಸತ್ಯಾನಂದ ಪಾತ್ರೋಟ ಮೂಡ್ನಾಕೂಡು ಚಿನ್ನಸ್ವಾಮಿ ಇವರ ಕವನಗಳ ಆಯ್ದ ಭಾಗಗಳನ್ನು ಇಲ್ಲಿ ನೀಡಲಾಗಿದೆ. ಜೊತೆಗೆ ಇವತ್ತಿನ ಹೊಸ ತಲೆಮಾರಿನ ಕವಿಗಳು ಟಾಗೋರರ ವ್ಯಕ್ತಿತ್ವಕ್ಕೆ ಸ್ಪಂದಿಸುವ ಪರಿಯನ್ನು ರವಿಕುಮಾರ್ ಬಾಗಿ, ದೇವರಾಜ್. ಹುಲಿಕುಂಟೆ ಮೂರ್ತಿ, ಗಂಗಪ್ಪ ತಳವಾರ್, ಎಸ್. ಮಂಜುನಾಥ್ ಅವರ ಕವಿತೆಗಳಲ್ಲಿ ನೋಡಬಹುದಾಗಿದೆ ಹಿರಿಯರಾದ ಡಾ.ಯು.ಆರ್. ಅನಂತಮೂರ್ತಿಯವರು ಗಾಂಧಿ-ಟಾಗೋರ್ ಸಂವಾದದ ಪ್ರಸ್ತುತತೆ ಕುರಿತಂತೆ ಅರ್ಥಪೂರ್ಣವಾದ ಎರಡು ಮಾತು ಬರೆದುಕೊಟ್ಟಿದ್ದಾರೆ.

– ಪುಸ್ತಕದ ಕುರಿತು ಸಂಪಾದಕರ ಮಾತಿನಿಂದ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: