
ಬಿಡುಗಡೆ : ಪ್ರೊ.ಸಿ.ಎನ್.ರಾಮಚಂದ್ರನ್ ಸಂವಾದದಲ್ಲಿ : ಪ್ರೊ.ಗಣೇಶ ದೇವಿ, ಡಾ.ಎಂ.ಜಿ.ಹೆಗಡೆ
ಸ್ಥಳ : ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್.ಕಾಲೊನಿ 3ನೆಯ ಮುಖ್ಯ ರಸ್ತೆ, ಬೆಂಗಳೂರು
ದಿನ/ಸಮಯ : ಮಾರ್ಚ್ 19, 2022 ಶನಿವಾರ ಸಂಜೆ 4.30

ಮಹಾಭಾರತದ ಕತೆಗಳು, ಪಾತ್ರಗಳು ಮತ್ತು ಸನ್ನಿವೇಶಗಳು ಭಾರತೀಯರ ಜೀವನದ ಅವಿಭಾಜ್ಯ ಅಂಗ. ಭೀಷ್ಮನ ಪ್ರತಿಜ್ಞೆ, ಕರ್ಣ-ದುರ್ಯೋಧನರ ಸ್ನೇಹ, ಏಕಲವ್ಯನ ಗುರುದಕ್ಷಿಣೆ, ಉತ್ತರ ಕುಮಾರನ ಹೇಡಿತನ, ದ್ರೌಪದಿಯ ಛಲ ಇತ್ಯಾದಿ – ನಮ್ಮ ಬದುಕಿಕ ಹಲವು ಸನ್ನಿವೇಶಗಳಿಗೆ, ವ್ಯಕ್ತಿಗಳಿಗೆ, ಅವರ ವರ್ತನೆಗಳಿಗೆ ಪ್ರತಿಮೆಗಳಾಗಿ ಬಿಟ್ಟಿವೆ. ನಮ್ಮ ದಿನ ನಿತ್ಯದ ಮಾತುಗಳಲ್ಲಿ ಮೂಡಿ ಬರುತ್ತವೆ. ಕಾವ್ಯ, ಕತೆ-ಕಾದಂಬರಿ, ನೃತ್ಯ, ನೃತ್ಯನಾಟಕ, ಸಿನೆಮಾ, ಟಿವಿ, ಕಾಮಿಕ್ಸ್ ಹೀಗೆ ಎಲ್ಲಾ ಪ್ರಕಾರಗಳಲ್ಲೂ ಅವು ಮರು ಹುಟ್ಟು ಪಡೆಯುತ್ತಲೇ ಇವೆ. ಜಾತಿ, ಬುಡಕಟ್ಟು, ಭಾಷೆ, ಮತಧರ್ಮ, ಸಂಸ್ಕೃತಿ, ತಾತ್ವಿಕತೆ ಗಳ ಅಗಾಧ ವೈವಿಧ್ಯತೆಗಳೂ ಕಂದಕಗಳೂ ಇರುವ ಭಾರತದ ಜನರಲ್ಲಿ ಮಹಾಭಾರತದ ಇಂತಹ ಸರ್ವವ್ಯಾಪಿ ಕಾಲಾತೀತ ಜನಪ್ರಿಯತೆಗೆ ಕಾರಣವೇನು? ಮಹಾಭಾರತ ಎಂದಿಗೂ ಇಂದಿಗೂ ಎಲ್ಲರಿಗೂ ಸಲ್ಲುವುದು ಏಕೆ? ಎಂಬ ಸರಳ ಪ್ರಶ್ನೆಗಳಿಗೆ ಉತ್ತರ ಮಾತ್ರ ಬಹಳ ಸಂಕೀರ್ಣವಾದುದು. ಇಂತಹ ಪ್ರಶ್ನೆಗಳನ್ನು ಉತ್ತರಿಸಲು ಸಾಹಿತ್ಯ, ಭಾಷಾಶಾಸ್ತ್ರ, ಇತಿಹಾಸ, ರಾಜಕಾರಣ, ಸಮಾಜಶಾಸ್ತ್ರ, ಸಂಸ್ಕೃತಿ ಗಳ ಆಳವಾದ ಅರಿವು ಬೇಕು. ಮಹಾಭಾರತದ ಕುರಿತು ಬಂದ ಅಸಂಖ್ಯ ಅರ್ಥೈಸುವಿಕೆ, ಭಾಷ್ಯಗಳ ಅಧ್ಯಯನವೂ ಬೇಕು.
ಇವೆಲ್ಲವೂ ಇರುವ ದೇಶದ ಪ್ರಸಿದ್ಧ ಚಿಂತಕ ಪ್ರೊ. ಗಣೇಶ ದೇವಿ ಅವರು ಈ ಅತ್ಯಂತ ಪ್ರಸ್ತುತವಾದ ಪ್ರಶ್ನೆಗಳನ್ನು ಎತ್ತಿಕೊಂಡು ಇತ್ತೀಚೆಗೆ ‘ಮಹಾಭಾರತ – ದಿ ಎಪಿಕ್ ಎಂಡ್ ನೇಶನ್’ ಎಂಬ ಪುಸ್ತಕವನ್ನು ಬರೆದು ಕಳೆದ ತಿಂಗಳಲ್ಲಷ್ಟೇ ಪ್ರಕಟವಾಗಿದೆ. ಸಮಗ್ರ ಮಹಾಭಾರತವನ್ನು ಅಖಂಡವಾಗಿ ಗ್ರಹಿಸಿದ ರಾಜಶೇಖರ, ಅಭಿನವಗುಪ್ತ, ಅರವಿಂದರು ಮೊದಲಾದವರಿರುವ ಪೌರ್ವಾತ್ಯ ಮಹಾಭಾರತ ವ್ಯಾಖ್ಯಾನ ಪರಂಪರೆಯನ್ನು ಗಣೇಶ ದೇವಿ ಅವರು ಮತ್ತೆ ಮತ್ತೆ ಆವಾಹಿಸುತ್ತಾರೆಯಷ್ಟೇ ಅಲ್ಲ, ಅದರ ತೀರ್ಮಾನಗಳನ್ನು ಸ್ವೀಕರಿಸುತ್ತಾರೆ; ಆ ಚಿಂತನ ಕ್ರಮದಲ್ಲೇ ಮತ್ತಷ್ಟು ಮುಂದೆ ಸಾಗಿ ಸಮಕಾಲೀನ ಭಾರತಕ್ಕೆ ಪ್ರಸ್ತುತವಾದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಹವಣಿಸುತ್ತಾರೆ.
ವಸಾಹತುಶಾಹಿಯ ಪರಿಣಾಮವಾಗಿ ಭಾರತೀಯ ಸಮಾಜದಲ್ಲಿ ಸಾಂಸ್ಕೃತಿಕ ವಿಸ್ಮೃತಿ, ಪ್ರಾಚೀನ ಭವ್ಯತೆಯ ಭ್ರಮೆಗೂ ದೇಶೀ ಪರಂಪರೆಗಳ ಯಥಾರ್ಥ ಅರಿವಿನ ಕೊರತೆಗೂ ಕಾರಣವಾಗಿದೆ. ಸದ್ಯ ಮುನ್ನೆಲೆಗೆ ಬರಲು ಹಪಹಪಿಸುತ್ತಿರುವ ಮತ್ತು ಅಧಿಕೃತಗೊಳ್ಳಲು ಎಲ್ಲಾ ಉಪಕರಣಗಳನ್ನೂ ಬಳಸುತ್ತಿರುವ ರಾಷ್ಟ್ರ, ಚರಿತ್ರೆ ಮತ್ತು ಸಮಾಜದ ಕಲ್ಪನೆಗಳು ರಾಷ್ಟ್ರೀಯ ಕಾವ್ಯವೆಂದು ಮನ್ನಣೆ ಪಡೆದಿರುವ ಮಹಾಭಾರತಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ ಎನ್ನುವುದು ದೇವಿಯವರ ಮಹಾಭಾರತ ವ್ಯಾಖಾನದ ಕೇಂದ್ರ ಗ್ರಹೀತಗಳಲ್ಲೊಂದು. ಅಂದರೆ ವಸಾಹತುಶಾಹಿ ವಿಕಲ್ಪಗಳಿಗೆ ನೇತುಬಿದ್ದಿರುವ ವರ್ತಮಾನದ ರಾಜಕೀಯಕ್ಕೆ ಪರಂಪರೆಯ ವಿವೇಕವನ್ನು ನೆನಪಿಸುವ ಉದ್ದೇಶದ ಕೃತಿಯಿದು.

ಇಂಗ್ಲಿಷ್ ಮೂಲದ ಜತೆಗೆ ಭಾರತದ ಎಲ್ಲ ಭಾಷೆಗಳಲ್ಲಿ ಈ ಪುಸ್ತಕ ಬೇಗನೇ ಬರಬೇಕು ಎಂಬುದು ದೇವಿ ಅವರ ಕನಸಾಗಿತ್ತು. ಅವರ ಆಯ್ದ ಬರಹಗಳ (ಪ್ರೊ. ರಾಜೇಂದ್ರ ಚೆನ್ನಿ ಅವರ ಮಾತುಗಳಲ್ಲಿ) ‘ಮಾಂತ್ರಿಕ ಅನುವಾದ’ ಮಾಡಿದ ಡಾ.ಎಂ.ಜಿ ಹೆಗಡೆ ಅದನ್ನು “ಮಹಾಭಾರತ : ಭೂಮಕಾವ್ಯ ಮತ್ತು ಭಾರತರಾಷ್ಟç” ಎಂಬ ಅಪ್ಪಟ ಕನ್ನಡದ ಕೃತಿಯಾಗಿಸಿದ್ದಾರೆ. ಈ ಪುಸ್ತಕವನ್ನು ಕ್ರಿಯಾ ಮಾಧ್ಯಮ ಪ್ರಕಟಿಸಿದೆ.
ಈ ಪುಸ್ತಕವನ್ನು ಖ್ಯಾತ ವಿಮರ್ಶಕ. ಚಿಂತಕ ಪ್ರೊ.ಸಿ.ಎನ್.ರಾಮಚಂದ್ರನ್ ಅವರು ಇದೇ ಶನಿವಾರ ಮಾರ್ಚ್ 19ರಂದು ಬಿಡುಗಡೆ ಮಾಡಿ, ಅದರ ವಿಮರ್ಶಾತ್ಮಕ ಪರಿಚಯ ಮಾಡಿಕೊಡಲಿದ್ದಾರೆ.
ಈ ಸಮಾರಂಭ ಬೆಂಗಳೂರಿನ ಎನ್.ಆರ್.ಕಾಲೊನಿಯ 3ನೆಯ ಮುಖ್ಯ ರಸ್ತೆಯಲ್ಲಿರುವ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಸಂಜೆ 4.30ಕ್ಕೆ ನಡೆಯಲಿದೆ. ಅಂದು ಪುಸ್ತಕ ವಿಶೇಷ ರಿಯಾಯಿತಿಯಲ್ಲಿ ಲಭ್ಯವಿರುತ್ತದೆ. ಪ್ರೊ. ಗಣೇಶ ದೇವಿ, ಡಾ.ಎಂ.ಜಿ ಹೆಗಡೆ ಯವರು ಉಪಸ್ಥಿತರಿದ್ದು ಸಂವಾದದಲ್ಲಿ ಭಾಗವಹಿಸುತ್ತಾರೆ.
ಮರುದಿನ (ಮಾರ್ಚ್ 20, 11.30 ಬೆಳಿಗ್ಗೆ) ರಂಗಶಂಕರದಲ್ಲಿ Celebrating Books ಕಾರ್ಯಕ್ರಮದ ಭಾಗವಾಗಿ ಈ ಪುಸ್ತಕದ ಕುರಿತು ಸಂವಾದವಿರುತ್ತದೆ. ಅಲ್ಲೂ ಈ ಪುಸ್ತಕ ವಿಶೇಷ ರಿಯಾಯಿತಿಯಲ್ಲಿ ಲಭ್ಯವಿರುತ್ತದೆ.
Filed under: Uncategorized | Tagged: ಭೂಮಕಾವ್ಯ, ಮಹಾಭಾರತ | 2 Comments »