ವಿಚಾರಸಂಕಿರಣ ಮತ್ತು `ನೇತ್ರಾವತಿಯಲ್ಲಿ ನೆತ್ತರು’ ಪುಸ್ತಕ ಬಿಡುಗಡೆಗೆ ಆಹ್ವಾನ

ಹೆಸರಾಂತ ಸಾಹಿತಿ ಕೆ. ಮರುಳಸಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ `ಕರಾವಳಿಯ ಕೋಮುಹಿಂಸೆಯ ಹಿಂದಿರುವ ನೈಜ ಕೈಗಳ ಅನಾವರಣ' ಎಂಬ ಶೀರ್ಷಿಕೆಯಡಿಯಲ್ಲಿ ನಡೆಯಲಿರುವ ವಿಚಾರಸಂಕಿರಣದಲ್ಲಿ,

ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು `ಕೋಮು ಹಿಂಸೆಯ ಹಿಂದಿನ ರಾಜಕಾರಣ' ಎಂಬ ವಿಷಯದ ಮೇಲೆ ತಮ್ಮ ವಿಚಾರ ಮಂಡನೆ ಮಾಡಿದರೆ ನಿವೃತ್ತ ಸಹಾಯಕ ಪೋಲಿಸ್ ಕಮಿಷನರ್ ಬಿ.ಕೆ.ಶಿವರಾಂ ಅವರು `ಮತೀಯವಾದ ಮತ್ತು ಪ್ರಭುತ್ವ’ ಎಂಬ ವಿಷಯದ ಮೇಲೆ ತಮ್ಮ ವಿಚಾರವನ್ನು ಮಂಡನೆ ಮಾಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ದಿಟ್ಟ ಪತ್ರಕರ್ತ ನವೀನ್ ಸೂರಿಂಜೆ ಬರೆದಿರುವ `ನೇತ್ರಾವತಿಯಲ್ಲಿ ನೆತ್ತರು – ಕರಾವಳಿಯ ಕೋಮು ಹಿಂಸೆಯ ನೈಜ ಪ್ರಕರಣಗಳು’ ಪುಸ್ತಕ ಬಿಡುಗಡೆಗೊಳ್ಳುತ್ತಿದೆ. ಕೋಮು ಹಿಂಸಾಚಾರದಲ್ಲಿ ತಂದೆಯನ್ನು ಕಳೆದುಕೊಂಡ ಮಹಮ್ಮದ್ ಶಹೀದ್ ಅವರು ಪುಸ್ತಕವನ್ನು ಬಿಡುಗಡೆ ಮಾಡುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಮತ್ತು ಚಿಂತಕರಾದ ಕೆ. ಷರೀಫಾ, ಹಿರಿಯ ಹೋರಾಟಗಾರರೂ ಚಿಂತಕರೂ ಆಗಿರುವ ಮಾವಳ್ಳಿ ಶಂಕರ್ ಹಾಗೂ ಲೇಖಕ ನವೀನ್ ಸೂರಿಂಜೆ ಭಾಗವಹಿಸಲಿದ್ದಾರೆ.

ಕಾರ್ಯಕ್ರಮವನ್ನು ದಿನಾಂಕ 19.06.2022 ಭಾನುವಾರದಂದು ಬೆಳಿಗ್ಗೆ 10:30ಕ್ಕೆ ಬಾಪೂ ಸಂಭಾಂಗಣ, ಗಾಂಧೀಭವನ, ಕುಮಾರಕೃಪಾ ರಸ್ತೆ, ಬೆಂಗಳೂರು ಇಲ್ಲಿ ಆಯೋಜಿಸಲಾಗಿದೆ.

ತಾವೆಲ್ಲರೂ ಈ ವಿಚಾರ ಸಂಕಿರಣಕ್ಕೆ ಬಂದು `ನೇತ್ರಾವತಿಯಲ್ಲಿ ನೆತ್ತರು’ ಪುಸ್ತಕವನ್ನು ಖರೀದಿಸಿ ಓದಿ ಅಭಿಪ್ರಾಯ ತಿಳಿಸಿರಿ.

ಹಿಂದುತ್ವ ರಾಜಕೀಯಕ್ಕೆ ಮನಸ್ಸು ಕೊಟ್ಟವರೂ ಸೇರಿದಂತೆ ಎಲ್ಲಾ ನಾಗರಿಕರೂ ಓದಬೇಕಾದ ಪುಸ್ತಕ ನೇತ್ರಾವತಿಯಲ್ಲಿ ನೆತ್ತರು

ಶೀರ್ಷಿಕೆ : ನೇತ್ರಾವತಿಯಲ್ಲಿ ನೆತ್ತರು ಲೇಖಕರು:ನವೀನ್ ಸೂರಿಂಜೆ ಪ್ರಕಾಶಕರು: ಕ್ರಿಯಾ ಮಾಧ್ಯಮ ಪ್ರೈ.ಲಿ. ಪುಟಗಳು:184 ಬೆಲೆ:ರೂ.185 ಪ್ರಕಟಣಾ ವರ್ಷ:2022

ಪತ್ರಕರ್ತ ನವೀನ್ ಸೂರಿಂಜೆ ಯವರ “ನೇತ್ರಾವತಿಯಲ್ಲಿ ನೆತ್ತರು” ಪುಸ್ತಕದ ಕುರಿತು ಹಿರಿಯ ಚಿಂತಕ ಕೆ ಫಣಿರಾಜ್ ಬರೆಯುತ್ತಾರೆ…

ಹಿಂದುತ್ವವಾದಿ ಫ್ಯಾಸಿಸ್ಟ್ ರಾಜಕೀಯವನ್ನು ವಿರೋಧಿಸಲು, ನಾವು ನಮ್ಮ ಬದುಕಿನ ವಿವೇಕ ವಿವೇಚನೆಗಳನ್ನು ಎಚ್ಚರದಲ್ಲಿ ಇಟ್ಟುಕೊಳ್ಳುವುದು ಎಷ್ಟು ಮುಖ್ಯವೋ, ಅಷ್ಟೇ ಫ್ಯಾಸಿಸ್ಟ್ ಹಿಂಸಾ ಕೃತ್ಯಗಳ ಸ್ವರೂಪವನ್ನು ಅರಿಸುವ ವಾಸ್ತವಿಕ ವಿದ್ಯಮಾನಗಳ ನಿರೂಪಣೆಗಳೂ ಅಗತ್ಯ.
ಯುವ ಮಾಧ್ಯಮ ವರದಿಗಾರರಾಗಿ ಕರಾವಳಿಯಲ್ಲಿ ಧೀರ್ಘ ಕಾಲ ಚುರುಕಿನ ತನಿಖ ವರದಿಗಳನ್ನು ಪ್ರಕಟಿಸಿದ ನವೀನ್ ಸೂರಿಂಜೆಯವರು ತಮ್ಮ ವೃತ್ತಿ ಅನುಭವವನ್ನು ಕಡೆದು ಕಟ್ಟಿರುವ ಬರಹಗಳ ಸಂಕಲನವಿದು. ಸರಳವೂ ತೀಷ್ಣವೂ ಆದ ಈ ಬರಹಗಳನ್ನು ಅಗತ್ಯವಾಗಿ (ಹಿಂದುತ್ವ ರಾಜಕೀಯಕ್ಕೆ ಮನಸ್ಸು ಕೊಟ್ಟವರೂ ಸೇರಿದಂತೆ) ಎಲ್ಲಾ ನಾಗರಿಕರೂ ಓದಬೇಕಾದ ಬರಹಗಳಿವು.
ಹಿಂದುತ್ವ ಮತೀಯವಾದ ಕಾರ್ಯಚರಣೆಯ ವಿಧಾನಗಳ ಬಗ್ಗೆ ಬೆಳಕು ಚೆಲ್ಲುವುದು ಮಾತ್ರವಲ್ಲದೆ, ಬಡತನದ ಬವಣೆಗಳನ್ನೂ, (ಆರೋಪಕ್ಕೆ ತುತ್ತಾಗಿ ಸ್ವತಃ ಜೈಲುವಾಸ ಅನುಭಿವಿಸಿರುವವರಾಗಿ) ಮಂಗಳೂರು ಜೈಲೊಳಗಿನ ಮಾನವ ಗತಿಯ ಕಥನಗಳನ್ನು ಬಹಳ ಅಂತಃಕರಣದಲ್ಲಿ ನವೀನ್ ನಿರೂಪಿಸಿರುವರು. ಪುಸ್ತಕವನ್ನು ಕ್ರಿಯಾ ಮಾಧ್ಯಮ ಪ್ರಕಟಿಸಿದೆ.

ಕೊಂಡು, ಓದಿ.

  • ಕೆ.ಫಣಿರಾಜ್
    ಹಿರಿಯ ಚಿಂತಕ