ಏಂಗೆಲ್ಸ್ ಚಿಂತನೆಯ ಬೆಳಕಿನಲ್ಲಿ ಮಹಿಳಾ ವಿಮೋಚನೆ ಚರ್ಚಾಗೋಷ್ಟಿಯಲ್ಲಿ ಪುಸ್ತಕ ಬಿಡುಗಡೆ ಏಂಗೆಲ್ಸ್ 200 ಪುಸ್ತಕ ಸರಣಿಯ ಪುಸ್ತಕ ಕುಟುಂಬ ಖಾಸಗಿ ಆಸ್ತಿ ಮತ್ತು ಪ್ರಭುತ್ವ ಇವುಗಳ ಉಗಮ

ಬಿಎಂಶ್ರೀ ಪ್ರತಿಷ್ಠಾನದಲ್ಲಿ ನಡೆಯುವ ಚರ್ಚಾಗೋಷ್ಟಿಯಲ್ಲಿ (zoom link ಮೂಲಕವಾದರೂ)

ಭಾಗವಹಿಸಿ

ಈ ಪುಸ್ತಕದ ಬಗ್ಗೆ ಮಹಿಳಾ ಹೋರಾಟಗಾರ್ತಿ, ಲೇಖಕಿ, ಚಿಂತಕಿ ಡಾ. ಎನ್. ಗಾಯತ್ರಿ ಅವರ ಅಭಿಪ್ರಾಯ ಇದು.

ಜಗತ್ತು ಸ್ವೀಕರಿಸಿದ ಮಾರ್ಕ್ಸ್ ವಾದವೆಂಬ ವಿಶಿಷ್ಟ ಲೋಕದೃಷ್ಟಿಗೆ ಕಾರಣಕರ್ತರಾದ ಜೋಡಿ ಪ್ರತಿಭೆಗಳು ಮಾರ್ಕ್ಸ್ ಮತ್ತು ಏಂಗೆಲ್ಸ್. ಇವರಲ್ಲಿ ಏಂಗೆಲ್ಸ್ ಬರೆದ ಕುಟುಂಬ, ಖಾಸಗಿ ಆಸ್ತಿ ಮತ್ತು ಪ್ರಭುತ್ವಗಳ ಉಗಮ – ಇಡೀ ವಿಶ್ವದ ಮೇಲೆ ಬಹುಮುಖ್ಯ ಪ್ರಭಾವ ಮತ್ತು ಪರಿಣಾಮವನ್ನು ಬೀರಿದ ಕೃತಿ. ಈ ಕೃತಿ ಪ್ರಕಟವಾದಂದಿನಿಂದ ಇಲ್ಲಿಯವರೆಗೆ ಜಗತ್ತಿನ ಜ್ಞಾನ ಪ್ರಪಂಚಕ್ಕೆ ವಿಸ್ತಾರವನ್ನು, ವೈಶಾಲ್ಯತೆಯನ್ನು ನೀಡುತ್ತಲೇ ಬಂದಿದೆ. 1884ರಲ್ಲಿ ಏಂಗೆಲ್ಸ್ ತಮ್ಮ ಮೌಲಿಕ ಕೃತಿಯಾದ `ಕುಟುಂಬ, ಖಾಸಗಿ ಆಸ್ತಿ ಮತ್ತು ಪ್ರಭುತ್ವಗಳ ಉಗಮ’ ಕೃತಿಯನ್ನು ರಚಿಸಿದರು. ಮಾನವ ಜನಾಂಗದ ಪ್ರಾಗೈತಿಹಾಸಿಕ ಕಾಲದ ಜೀವನ ವಿಧಾನವನ್ನು ತೆರೆದಿಡುವ ಈ ಗ್ರಂಥವು ಗ್ರೀಸ್, ಐರ್ಲೆಂಡ್ ಮತ್ತು ಜರ್ಮನಿಯ ಪ್ರಾಚೀನ ಸಮಾಜಗಳ ಪರಿಚಯ ಮಾಡಿಕೊಡುತ್ತದೆ. ಆರಂಭಿಕ ಹಂತದ ಸಾಮ್ಯತೆಯ ಸಮಾಜ, ಇವುಗಳ ನಿರ್ದಿಷ್ಟ ಸ್ವರೂಪವನ್ನು ಚರ್ಚಿಸುತ್ತಾ ಕುಟುಂಬದ ಉಗಮವನ್ನು ಏಂಗೆಲ್ಸ್ ಗುರುತಿಸುತ್ತಾರೆ. ಕ್ರಮೇಣ ಬೆಳೆದು ಬಂದ ಸಾಮಾಜಿಕ-ಆರ್ಥಿಕ ಸಂರಚನೆಗಳು ಸಮಾಜವನ್ನು ಒಂದು ಹಂತದಿಂದ ಇನ್ನೊಂದಕ್ಕೆ ಕೊಂಡೊಯ್ಯುತ್ತಿದ್ದಂತೆ ಕುಟುಂಬ, ಖಾಸಗಿ ಆಸ್ತಿಯನ್ನು ಆಧರಿಸಿದ ವರ್ಗ ಸಮಾಜ ಮತ್ತು ಪ್ರಭುತ್ವ ಹುಟ್ಟಿಕೊಳ್ಳುತ್ತವೆ. ಈ ಮೂರು ಘಟಕಗಳಿಗೂ ಇರುವ ಪರಸ್ಪರ ಸಂಬಂಧಗಳನ್ನು ಅರ್ಥಮಾಡಿಕೊಂಡರಷ್ಟೇ ದಮನದ ಸ್ವರೂಪ ಮತ್ತು ಕಾರಣಗಳು ಸ್ಪಷ್ಟವಾಗುತ್ತವೆ.


ಕಾಡು ಮನುಷ್ಯನ ಕಾಲದಿಂದ ನಾಗರಿಕ ಪೂರ್ವ, ನಾಗರಿಕ ಹಂತದ ಕಾಲದವರೆಗೆ ಸಾಗಿರುವ ಮನುಷ್ಯನ ವಿಕಾಸವನ್ನು ಚರ್ಚಿಸುತ್ತ ಮಾನವ ಸಂಸ್ಕೃತಿಯ ಇತಿಹಾಸವನ್ನು ಈ ಕೃತಿ ಬಿಚ್ಚಿಡುತ್ತದೆ. ಸಮಾಜದಲ್ಲಿ ಗಂಡು-ಹೆಣ್ಣಿನ ನಡುವಿನ ಲೈಂಗಿಕ ಸಂಬಂಧಗಳಲ್ಲಿ ಉಂಟಾದ ಬದಲಾವಣೆ ಈ ಚರಿತ್ರೆಯ ಭಾಗವಾಗಿದೆ. ವಿಶ್ವದ ಹಲವಾರು ಸಮಾಜಗಳಲ್ಲಿ ಕಂಡು ಬಂದ ಬಹುಪತ್ನಿತ್ವ, ಬಹುಪತಿತ್ವದಿಂದ ಏಕಪತಿ-ಪತ್ನಿತ್ವದವರೆಗೆ ಸಾಗಿದ ಸಮಾಜದಲ್ಲಿ ಯಾರು ಯಾರನ್ನು ಮದುವೆಯಾಗುತ್ತಿದ್ದರು, ಎನ್ನುವ ವಿವರಗಳು, ಗೋತ್ರ ವ್ಯವಸ್ಥೆ ಬೆಳೆದು ಬಂದ ರೀತಿ ಮುಂತಾದ ವಿಷಯಗಳನ್ನು ಈ ಕೃತಿ ಸುದೀರ್ಘವಾಗಿ ಚರ್ಚಿಸುತ್ತದೆ. ಗಂಡು-ಹೆಣ್ಣು ಇಬ್ಬರೂ ಸೇರಿ ಕೂಡಿಸುತ್ತಿದ್ದ ಕುಟುಂಬದ ಸಂಪತ್ತು ಗಂಡಸಿನ ಪಾಲಾದದ್ದು ಹೇಗೆ, ವಂಶಾವಳಿಯು ತಾಯಿ ಮತ್ತು ತಂದೆಯ ಮೂಲಕ ಹರಿದು ಬಂದ ವಿನ್ಯಾಸವನ್ನು ಕೂಡ ಚರ್ಚಿಸಲಾಗಿದೆ. ಉತ್ಪಾದನಾ ಶಕ್ತಿಯಲ್ಲಾದ ಬದಲಾವಣೆ ಶ್ರಮ ವಿಭಜನೆಯನ್ನು ಹುಟ್ಟಿ ಹಾಕಿದ್ದು ಮತ್ತು ಅದರಿಂದ ಉಂಟಾದ ವರ್ಗಗಳ ವಿಭಜನೆಯಲ್ಲಿ ಮಹಿಳೆ ಬಹುಮುಖ್ಯ ಶೋಷಿತಳಾದಳು, ಎನ್ನುವುದನ್ನು ಇಲ್ಲಿ ನೋಡಬಹುದು. ಇಂದು ನಾವು ಕಾಣುವ ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗ, ಪೊಲೀಸ್, ಸೈನಿಕರು – ಎಲ್ಲವುಗಳ ಆವಿರ್ಭಾವಕ್ಕೂ ಒಂದು ಚರಿತ್ರೆಯಿದೆಯೆಂಬುದರ ಪ್ರಾಥಮಿಕ ತಿಳುವಳಿಕೆಯನ್ನು ಮತ್ತು ಅದರ ಬದಲಾವಣೆಯ ಪ್ರಕ್ರಿಯೆಯನ್ನು ಈ ಕೃತಿ ಸಾದರಪಡಿಸುತ್ತದೆ.

ಇಂದು ನಮ್ಮೆಲ್ಲರ ಬದುಕು ಸಂಕಷ್ಟದಲ್ಲಿದೆ. ಸಮಷ್ಠಿ ಹಿತವು ಗೌಣವಾಗಿ, ವ್ಯಕ್ತಿಹಿತವು ಮೇಲುಗೈಯ್ಯಾಗಿ, ಹಿರಿದು ತಿನ್ನುವುದೇ ಈ ಯುಗದ ಮೌಲ್ಯವಾಗಿರುವ ಸಂದರ್ಭದಲ್ಲಿ ‘ಹೆಣ್ಣು’ ತನ್ನ ಅಸ್ಮಿತೆಯನ್ನು ಕಳೆದುಕೊಂಡು ಭೋಗದ ವಸ್ತುವಾಗಿದ್ದಾಳೆ; ಪುರುಷನ ಆಸ್ತಿಯಾಗಿ, ಕೌಟುಂಬಿಕ ದೌರ್ಜನ್ಯದ ಸುಳಿಯಲ್ಲಿ ಸಿಕ್ಕಿಕೊಂಡಿದ್ದಾಳೆ. ಕುಟುಂಬದೊಳಗಿನ ಅಧಿಕಾರದ ಅಸಮತೋಲನ ಸಂಬಂಧಗಳು, ಆಸ್ತಿರಹಿತ ಹೆಣ್ಣಿನ ನೋವಿಗೆ ಕಾರಣವಾಗಿವೆ. ವಿವಾಹದ ಚೌಕಟ್ಟು ವಿಸ್ತರಿಸಿದೆ. ವಿಭಿನ್ನ ಲಿಂಗಗಳ ಪರಿಕಲ್ಪನೆ ಬದಲಾಗಿದೆ. ಸಲಿಂಗಿಗಳು ಮತ್ತು ತೃತೀಯ ಲಿಂಗಿಗಳ ಜೀವನ ವಿನ್ಯಾಸಗಳು ನಮ್ಮ ಕಣ್ಣ ಮುಂದಿದೆ. ಈ ಎಲ್ಲ ಅಂಶಗಳನ್ನು ಪ್ರತಿಫಲಿಸುವ ಮತ್ತು ನಿಯಂತ್ರಿಸುವ ಪುರುಷಾಧಿಪತ್ಯದ ಪ್ರಭುತ್ವ, ಸಮಾನತೆಯ ಮಾನವೀಯ ಸಮಾಜವನ್ನು ಕನಸಿನ ಗಂಟಾಗಿಸಿದೆ. ಏಕ ಸಂಸ್ಕೃತಿಯ ದಂಡವನ್ನು ಬಹುಜನರ ಮೇಲೆ ಹೇರಲಾಗುತ್ತಿರುವ ಇಂದಿನ ಭಾರತದ ಸಂದರ್ಭದಲ್ಲಿಯಂತೂ ‘ಸಂಸ್ಕೃತಿ’ಯ ಅಪವ್ಯಾಖ್ಯಾನ ಅಮಾನುಷವಾಗಿ ನಡೆದಿದೆ. ಸಂಸ್ಕೃತಿಯೆಂಬುದು ನಿಂತ ನೀರಲ್ಲ, ಅದು ಕಾಲದ ಪ್ರವಾಹದಲ್ಲಿ ಹಲವಾರು ಸ್ಥಿತ್ಯಂತರ ಹೊಂದಿ ಬದಲಾಗಿದೆ ಮತ್ತು ಅದನ್ನು ಗಮನಿಸಿ, ಗುರುತಿಸಿದಾಗ ಮಾತ್ರ ಸಮಾಜದ ಅನಿಷ್ಟಗಳ ವಿರುದ್ಧ ಹೋರಾಡಲು ಸಾಧ್ಯ, ಎಂಬ ತಿಳುವಳಿಕೆಯ ಅಗತ್ಯ ಜರೂರಾಗಿ ಬೇಕಿದೆ. ಇಂತಹ ಅರಿವನ್ನು ಉಂಟು ಮಾಡುವ ಏಂಗೆಲ್ಸ್ ರ `ಕುಟುಂಬ, ಖಾಸಗಿ ಆಸ್ತಿ ಮತ್ತು ಪ್ರಭುತ್ವ’ ಕೃತಿಯ ಓದು ಇಂದಿನ ವರ್ತಮಾನದ ಅಗತ್ಯವೂ ಹೌದು.


ಕುಟುಂಬ ಸಮಾಜದ ಅತಿ ಮುಖ್ಯ ಘಟಕ. ಅದು ಹೆಣ್ಣಿನ ವಿಷಯದಲ್ಲಿ ಬಹು ಮುಖ್ಯ ಶೋಷಕ ಯಂತ್ರವಾಗಿದೆ. ಹೆಣ್ಣು ತನ್ನ ಶೋಷಣೆಯ ವಿರುದ್ಧ ಹೋರಾಡಲು ಅದರ ಚರಿತ್ರೆಯನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಶೋಷಣೆಯ ಚರಿತ್ರೆಯನ್ನು ವಿವರಿಸುವ ಈ ಕೃತಿ ತಮ್ಮ ದಮನದ ವಿರುದ್ಧ ಹೋರಾಟದಲ್ಲಿ ತೊಡಗಿರುವ ಎಲ್ಲರಿಗೂ ಕೈ ದೀವಿಗೆಯಾಗಿದೆ.


ಇದರ ಕನ್ನಡ ಅನುವಾದಗಳು ಈಗಾಗಲೇ ಒಂದೆರಡು ಬಂದಿದ್ದರೂ, ಈ ಅನುವಾದ ಅತ್ಯಂತ ಸರಳವಾದ ಭಾಷೆಯಲ್ಲಿ ಓದಲು ಮತ್ತು ತಿಳಿಯಲು ಅನುಕೂಲಕರವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪುಸ್ತಕದ ಮೊದಲಿಗೆ, ಅನುವಾದಕಿಯು ಬರೆದಿರುವ ದೀರ್ಘ ಮುನ್ನುಡಿಯು ಪುಸ್ತಕದ ಸಾರ ಸರ್ವಸ್ವವನ್ನು ಒಂದೆಡೆ ಹಿಡಿದಿಟ್ಟಿದೆ. ನಾಲ್ಕು ದಶಕಗಳಿಂದ ಕರ್ನಾಟಕದ ಮಹಿಳಾ ಚಳುವಳಿಯಲ್ಲಿ ತೊಡಗಿಕೊಂಡಿರುವ ಜಯಲಕ್ಷ್ಮಿಯವರು ಈ ಕೃತಿಯ ಪ್ರಸ್ತುತತೆಯನ್ನು ಇಂದಿನ ನಮ್ಮ ದೇಶದ ಪರಿಸ್ಥಿತಿಯ ಹಿನ್ನೆಲೆಯಲ್ಲಿಟ್ಟು ವಿವರಿಸಿದ್ದಾರೆ. ಅದಕ್ಕಾಗಿ ಅನುವಾದಕಿಯು ಅಭಿನಂದನಾರ್ಹರು. ಇಂತಹ ಅಗತ್ಯವಾದ ಪುಸ್ತಕದ ಯೋಜನೆಯನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿರಿಸಿರುವ ನವಕರ್ನಾಟಕ ಪ್ರಕಾಶನ ಮತ್ತು ಕ್ರಿಯಾ ಮಾಧ್ಯಮದವರಿಗೆ ಮನಃಪೂರ್ವಕ ವಂದನೆಗಳು.

ಡಾ. ಎನ್. ಗಾಯತ್ರಿ