ಛಾಯಾಗ್ರಾಹಕ ಜಂಬುಕೇಶ್ವರ ಅಭಿನಂದನ ಗ್ರಂಥ

ಕರ್ನಾಟಕದ ಛಾಯಾಗ್ರಾಹಕರಾದ ಎಸ್. ಎಂ. ಜಂಬುಕೇಶ್ವರ ಅವರ ಕುರಿತಂತೆ ಹೊರತರಲಾದ ಅಭಿನಂದನ ಗ್ರಂಥವಿದು. ಛಾಯಾಗ್ರಹಣ ಮಾತ್ರವಲ್ಲ ಜಂಬುಕೇಶ್ವರ ಕಲಾವಿದರೂ ಕೂಡಾ. ಅವರು ಜಲವರ್ಣ, ತೈಲವರ್ಣದಲ್ಲಿ ಚಿತ್ರಗಳನ್ನು ಬಿಡಿಸುವುದರ ಮೂಲಕ ಸಾಕಷ್ಟು ಸಾಧನೆ ಮಾಡಿದ್ದಾರೆ. ಆದರೆ, ಬಹುಮುಖ್ಯವಾಗಿ ಅವರನ್ನು ಗುರುತಿಸುವುದು ಛಾಯಾಗ್ರಾಹಕರೆಂದೇ.

ಈ ಅಭಿನಂದನ ಗ್ರಂಥದ ಮುಖ್ಯ ಅಂಶ ಜಂಬುಕೇಶ್ವರ ಅವರು ತಮ್ಮ ಬದುಕಿನ ಕುರಿತಂತೆ ವಿವರಗಳನ್ನು ಕೊಡುತ್ತದೆ. ಇದರ ಮುಂದುವರಿಕೆಯಾಗಿ ಅವರ ಪತ್ನಿ, ಮಗ, ಗೆಳೆಯರು, ಆತ್ಮೀಯರು ಬರೆದಿದ್ದಾರೆ. ಇದಲ್ಲದೆ ಜಂಬುಕೇಶ್ವರ ಅವರು ತೆಗೆದ ಅಪರೂಪದ ಛಾಯಾಚಿತ್ರಗಳು ಇವೆ. ಇನ್ನುಳಿದ ಭಾಗಗಳು ಚಿತ್ರಕಲೆ, ಛಾಯಾಚಿತ್ರ, ಪತ್ರಿಕೋದ್ಯಮ ಕುರಿತಂತೆ ಲೇಖನಗಳನ್ನು ಒಳಗೊಂಡಿದೆ. ಇವೆಲ್ಲ ಬರಹಗಳು ಜಂಬುಕೇಶ್ವರ ಅವರ ಆಸಕ್ತಿಯ ಮತ್ತು ಅವರು ಸಾಕಷ್ಟು ಕೆಲಸ ಮಾಡಿದ ಕ್ಷೇತ್ರಗಳಾಗಿವೆ. ಇದರಲ್ಲಿನ ಮುಖ್ಯ ಲೇಖನ `ಛಾಯಾಚಿತ್ರ ಪತ್ರಿಕೋದ್ಯಮ’ (ಟಿ. ಎಸ್. ಸತ್ಯನ್) ಎಂಬುದು. ಇಂಥ ವಿಶೇಷ ಲೇಖನಗಳಿಂದ ಈ ಪುಸ್ತಕ ವ್ಯಕ್ತಿಯೊಬ್ಬನ ಸಾಧನೆಯ ಭಜನೆಯಾಗದೆ ಅರ್ಥಪೂರ್ಣವಾದ ದಾಖಲೆಯಾಗಿದೆ ಎನ್ನಬಹುದು.

ಶೀರ್ಷಿಕೆ: ಬಹುಮುಖಿ (ಎಸ್.ಎಂ.ಜಂಬುಕೇಶ್ವರ ಅಭಿನಂದನಾ ಗ್ರಂಥ) ಪ್ರಧಾನ ಸಂಪಾದಕ: ಜಿ.ಎಸ್.ಭಟ್ಟ ಸಂ:ಎಸ್.ಶಿವಲಿಂಗಪ್ಪ ಪ್ರಕಾಶಕರು: ಅಭಿನಂದನಾ ಸಮಿತಿ, ಸರಸ್ವತಿಪುರಂ, ಮೈಸೂರು ಪುಟಗಳು:323 ಬೆಲೆ:ರೂ.200/-

ಕೃಪೆ : ಪ್ರಜಾವಾಣಿ

ಆ ದಿಶೆಯಲ್ಲಿ ಯೋಚಿಸಿ, ಯೋಜನೆ ರೂಪಿಸಿ, ಕಾರ್ಯಕ್ಕೆ ಇಳಿಯಿರಿ

scan0018-1

ನಮ್ಮ ನಾಡಿನ ಹಿರಿಯ ಮುತ್ಸದ್ದಿ ಸಂಗಾತಿ ಬೇವಿಂಜೆ ವಿಷ್ಣು ಕಕ್ಕಿಲ್ಲಾಯ (ಬಿವಿಕೆ) ಅವರಿಗೆ ಈಗ 90 ವರ್ಷ. ಭಾರತ ಕಮ್ಯೂನಿಸ್ಟ್ ಪಕ್ಷದ ನಾಯಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳುವಳಿಕಾರರಾಗಿ, ರಾಜ್ಯಸಭೆ ಮತ್ತು ಕರ್ನಾಟಕದ ಶಾಸನ ಸಭೆಗಳ ಸದಸ್ಯರಾಗಿ, ರೈತ ಕಾರ್ಮಿಕ ನಾಯಕರಾಗಿ ಇವರು ಸಲ್ಲಿಸಿರುವ ಸೇವೆ ಇತಿಹಾಸದ ಪುಟಗಳಲ್ಲಿ ಸೇರಿಹೋಗಿದೆ. ಬಿವಿಕೆ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿರುವ ವೈಚಾರಿಕ ಸಾಹಿತ್ಯ ಸಂಪದ ಹಲವು ಬಾರಿ ಕನ್ನಡ ಸಾಹಿತ್ಯ ಅಕಾಡಮಿಯ ಗೌರವಕ್ಕೆ, ಓದುಗರ ಆದರಕ್ಕೆ ಪಾತ್ರವಾಗಿದ್ದು, ಅವುಗಳು ಬರುವ ದಿನಗಳಲ್ಲೂ ಪರಿಗಣನೆಗೆ ಬರುವಂಥವು. ನೊಂದವರಿಗೆ ದನಿ ನೀಡಿದ ಈ ಅಜ್ಜನಿಗೆ ನಮ್ಮ ಅಭಿಮಾನಿ ವಿದ್ವಜ್ಜನ ಅರ್ಪಿಸುತ್ತಿರುವ ಮೆಚ್ಚಿಗೆಯ ಕಾಣಿಕೆ ಈ `ನಿರಂತನ

ಬಿವಿಕೆಯವರು ತಮ್ಮ ಬಾಳಿನಲ್ಲಿ ಹಚ್ಚಿಕೊಂಡು, ಕಟಿಬದ್ಧ ಕಲಕಳಿಯಿಂದ ಹೋರಾಡಿದ, ಇಂದಿಗೂ ಪ್ರಸ್ತುತವಾದ ಹಲವು ಜ್ವಲಂತ ಸಮಸ್ಯೆಗಳನ್ನು ಕುರಿತು ನಾಡಿನ ಪ್ರಗತಿಶೀಲ ವಿದ್ವಾಂಸರು ಈ ಗ್ರಂಥಕ್ಕಾಗಿ ಮೌಲಿಕ ಲೇಖನಗಳನ್ನು ನೀಡಿ ನುಡಿ ನಮಾನವನ್ನು ಸಲ್ಲಿಸಿದ್ದಾರೆ. ಬಂಡವಾಳ ವ್ಯವಸ್ಥೆಯ ನಿರಂತರ ಶೋಷಣೆಯ ಬೆಳವಣಿಗೆ, ರಾಷ್ಟ್ರ, ರಾಜ್ಯ ಪರಿಕಲ್ಪನೆಗಳ ಸಂಘರ್ಷ, ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮೂಡಿಬರುವ ಪ್ರತಿರೋಧದ ನೆಲೆಗಳು, ಮಾರ್ಕ್ಸ್ ಮತ್ತು ವಿಜ್ಞಾನ, ಮಹಿಳಾ ಅಭಿವೃದ್ಧಿ ಅಧ್ಯಯನ, ಹಾಲಿ ತಪ್ಪುತ್ತಿರುವ ವಿದೇಶಾಂಗ ನೀತಿ, ಸ್ವಾತಂತ್ರ್ಯ ಸಂಗ್ರಾಮದ ಆಶಯಗಳು. ಮೌಲ್ಯಗಳು ಮತ್ತು ವಾಸ್ತವ, ರೈತ ಕಾರ್ಮಿಕ ಚಳುವಳಿಗಳು, ಕೋಮುವಾದಕ್ಕೆ ತುತ್ತಾದ ಸಮಾಜದಲ್ಲಿ ಧರ್ಮನಿರಪೇಕ್ಷತೆಗೆ ಕುಗ್ಗುತ್ತಿರುವ ಅವಕಾಶಗಳು ಹೀಗೆಲ್ಲ `ನಿರಂತರದ ತುಂಬಾ ಗಂಭೀರವಾದ ಬರಹಗಳು ತುಂಬಿದೆ. `ನಿರಂತರನಮ್ಮ ನಾಡಿನ ಹೆಸರಾಂತ ವಿದ್ವಜ್ಜನರು ನೀಡಿರುವ ಮಹತ್ವದ, ಮೌಲಿಕ ಲೇಖನಗಳನ್ನೇ ಅಲ್ಲದೇ, ಕಕ್ಕಿಲ್ಲಯರ ಅಭಿಮಾನಿಗಳು ಬರೆದ ಅಭಿನಂದನಾ ಬರಹಗಳನ್ನೂ ಒಳಗೊಂಡಿದೆ. ಒಟ್ಟಾರೆ ಸಂಗ್ರಹಯೋಗ್ಯವಾದ ವೈಚಾರಿಕತೆಯ ಖನಿಯಾಗಿ ರೂಪುಗೊಂಡಿದೆ ಈ `ನಿರಂತರ

– ಪುಸ್ತಕದ ಬೆನ್ನುಡಿಯಿಂದ

ಪುಸ್ತಕದ ಆರಂಭದಲ್ಲಿ ಬಿವಿಕೆಯವರ ಕೈಬರಹದಲ್ಲಿ ಇರುವ `ಸಂಗಾತಿಗಳಿಗೆ ಒಂದು ಮನವಿ’ಇಂದಾಗಿ ಈ ಪುಸ್ತಕ ಇನ್ನಷ್ಟು ಆತ್ಮೀಯವಾಗುತ್ತದೆ. ಇದು `ಆ ದಿಶೆಯಲ್ಲಿ ಯೋಚಿಸಿ, ಯೋಜನೆ ರೂಪಿಸಿ, ಕಾರ್ಯಕ್ಕೆ ಇಳಿಯಿರಿ’ ಎಂದು ಕಿರಿಯ ಸಂಗಾತಿಗಳಿಗೆ ಮನವಿ ಮಾಡುತ್ತದೆ.
– ವಿಶಾಲಮತಿ

ಶೀರ್ಷಿಕೆ: ನಿರಂತರ ಸಂಪಾದಕರು: ಕೆ.ಎಸ್.ಪಾರ್ಥಸಾರಥಿ ಪ್ರಕಾಶನ:ಎಮ್.ಎಸ್. ಕೃಷ್ಣನ್ ಸ್ಮರಣ ಸಂಸ್ಥೆ ಪುಟಗಳು:532 ಬೆಲೆ:ರೂ.300/-


ಸಹಯಾನ, ಸ್ಪಂದನ

scan0004-1

ಉತ್ತರ ಕನ್ನಡದ ಎಡ ಪಂಥೀಯ ಚಿಂತಕ, ಸಾಹಿತಿ, ಚಳವಳಿಗಾರ ಆರ್.ವಿ.ಭಂಡಾರಿಯವರ ಕೃತಿಗಳ ಕುರಿತ ಈ ಪುಸ್ತಕ, ಚಳವಳಿಗಳು ಮಾಯವಾಗಿರುವ ಈ ಕಾಲದಲ್ಲಿ ಹಿರಿದಾದ ಒಂದು ಆಶಯ ಹೊಂದಿದೆಯೆಂದೇ ಹೇಳಬೇಕು. ನಾಡಿನ ಸಾಹಿತ್ಯ ಚಿಂತನೆಯ ಮುಖ್ಯ ವಾಹಿನಿಗೆ ಭಂಡಾರಿಯವರ ವಿಚಾರಗಳು ಹರಿದುಬಂದ ಸಮಯವನ್ನು ವಿಮರ್ಶಕ ಕೇಶವ ಶರ್ಮ ಹೀಗೆ ಗುರುತಿಸುತ್ತಾರೆ : `1979ರಲ್ಲಿ ಬಂಡಾಯ ಮತ್ತು ಸಮುದಾಯ ಚಳವಳಿಗಳು ಮುಂಚೂಣಿಗೆ ಬರದೇ ಹೋಗಿದ್ದಲ್ಲಿ ಆರ್.ವಿ. ಯಂಥವರು ಬರೆಯುವ ವಾತಾವರಣ ನಿರ್ಮಾಣವಾಗುತ್ತಿತ್ತೆ ಎಂಬುದು ಕೇಳಿಕೊಳ್ಳಬೇಕಾದ ಪ್ರಶ್ನೆ. ಹೊನ್ನಾವರ ಅರೆ ಅಂಗಡಿಯಂತಹ ಮೂಲೆಯಲ್ಲಿದ್ದುಕೊಂಡು ಯಾವ `ಗಾಡ್ ಫಾದರ್ಸಹಾಯವೂ ಇಲ್ಲದೆ ಅವರು ಏರಿದ ಎತ್ತರ ದೊಡ್ಡದು.ಅವರ ವಿಮರ್ಶಾ ಬರಹಗಳ ಸಂಕಲನವನ್ನು ಪರಿಶೀಲಿಸುತ್ತಾ ಹಿರಿಯ ವಿಮರ್ಶಕ ಸಿ.ಎನ್.ಆರ್. ಈ ಸಂದಿಗ್ಧವನ್ನು ಮುಂದಿಡುತ್ತಾರೆ : ಭಂಡಾರಿಯವರ ಈ ಲೇಖನಗಳು ಸಾಹಿತ್ಯ ಕೃತಿಗಳ ಬಗ್ಗೆ ಎಡ ಪಂಥೀಯರಿಗೆ ಎದುರಾಗುವ ದ್ವಂದ್ವಗಳನ್ನು ದರ್ಶಿಸುತ್ತದೆ. `ಕೆಳ ರಚನೆ – ಮೇಲ್ ರಚನೆಎಂಬ ಮಾರ್ಕ್ಸ್ ನ ರೂಪಕಗಳನ್ನು ಒಂದು `ವೈಜ್ಞಾನಿಕ ಪ್ರಮೇಯದಂತೆ ಕಾಣುವ ಎಡ ಪಂಥೀಯರಿಗೆ ಸಾಹಿತ್ಯವೂ ಸೇರಿದಂತೆ ಕಲೆಗಳು ಒಂದು ಸವಾಲಾಗುತ್ತದೆ. . .ಇದು ಸಾಹಿತ್ಯ ಜಗತ್ತಿನ ಪುರಾತನ ವಾಗ್ವಾದ. ಮರಿ ಮಾರ್ಕ್ಸ್ ವಾದಿಗಳು ಉತ್ತರ ಹುಡುಕುವ ಉತ್ಸಾಹ ತೋರಿಯಾರೆ?

ಭಂಡಾರಿಯವರ ಸಾಹಿತ್ಯವನ್ನು ಅವಲೋಕಿಸುತ್ತಾ ಕವಿ, ಚಿಂತಾಮಣಿ ಕೊಡ್ಲೆಕೆರೆ ಹೀಗೆ ಬರೆದು ಕೆಲವದರಲ್ಲಿ ಸಿದ್ಧಿಸುವ ಕಲಾತ್ಮಕ ಔನತ್ಯವನ್ನು ಪ್ರಶಂಸಿಸುತ್ತಾರೆ: `ಭಂಡಾರಿಯವರು ಈ ಸಮಾಜದ ಒಂದು ಜಾತಿಯ ಕಡೆಯಿಂದ ಪ್ರಯಾಣ ಆರಂಭಿಸುವವರಾದರೆ, ನಾನು ಇನ್ನೊಂದು ಕಡೆಯಿಂದ ಆರಂಭಿಸುವವನು. . . ಮಾನವ ಜೀವನದ ಹಾಗೂ ಸಾಹಿತ್ಯ ಸೃಷ್ಟಿಯ ಅತ್ಯುತ್ತಮ ಕ್ಷಣಗಳೆಲ್ಲವೂ ಎಲ್ಲ ಬಗೆಯ ಕ್ಷುದ್ರ ಗಡಿಗಳನ್ನು ಮೀರುವ ಯತ್ನದಲ್ಲಿದೆ. . . ನಮಗೇ ಅರಿವಿಲ್ಲದಂತೆ, ಅತ್ಯುತ್ತಮ ಸಂಗೀತದ, ಕಾವ್ಯದ, ನಾಟಕ, ಯಕ್ಷಗಾನಗಳ ರಸಾನುಭವದಲ್ಲಿ ನಾವು ಉನ್ನತ ಸ್ಥಿತಿ ತಲುಪುತ್ತೇವೆ.ಅವರ `ಮೀನಪಳ್ದಿಕಥಾಸಂಕಲನದ ಬಹುಪಾಲು ಸಂದರ್ಭದಲ್ಲಿ ಹೆಚ್ಚಿನವರೆಲ್ಲರೂ ಜಾತಿಯ ಹುಳುಗಳು. ಆದರೆ ದಲಿತ ನಿಂಗಪ್ಪ ಮಾಸ್ತರರಂಥವರ ಅಸಹಾಯಕತೆ, ಅತಂತ್ರ ಭಾವ ಹೆಚ್ಚಿಸುವವರಿರುವಂತೆಯೇ ಅವರನ್ನು ಬೆಂಬಲಿಸುವ ರಂಗನಾಥ ಜೋಯ್ಸ ಹೆಸರಿಲ್ಲದ ಒಬ್ಬ ವಿದ್ಯಾರ್ಥಿನಿ ಇರುವುದು ಸಮಾದಾನ. ಮರಾಠಿಯಲ್ಲಿ ಪ್ರಕಟಗೊಂಡ ದಮನಿತರ ಆತ್ಮಕತೆಗಳು ಕನ್ನಡಿಗರ ಭಾವಕೋಶಕ್ಕೆ ಹೊಸದೊಂದು ಆದ್ರ್ರತೆಯನ್ನೇ ನೀಡಿದವು. ಭಂಡಾರಿಯವರ `ಮಂಚನೀಳ್ಗತೆ ಕುರಿತು ಕಿರಿಯ ತಲೆಮಾರಿನ ಯೋಗೀಶ್ ಜಿ ಬರೆಯುವಾಗ ಅಂತಹುದೇ ಒಂದು ಅನುಭವವಾಗುತ್ತದೆ: `ಆರ್.ವಿ.ಯವರ ಕತೆಗಳನ್ನು ಓದುತ್ತ ಬೆಳೆಯುತ್ತಿರುವವನು ನಾನು . . . `ಭಾವನಾಮಾಸಿಕದಲ್ಲಿ ಪ್ರಕಟವಾದ `ಮಂಚದಂತಹ ಕತೆಗಳನ್ನು ಪರೀಕ್ಷೆಗೆ ನಿಗದಿಪಡಿಸಿದ ಪಠ್ಯದಂತೆ ನಿಷ್ಠೆಯಿಂದ ಓದಿದ್ದೆ.

ವಿ.ಎನ್.ವಿ

ಶೀರ್ಷಿಕೆ: ಸಹಯಾನ ಲೇಖಕರು: ಆರ್.ವಿ.ಭಂಡಾರಿ ಪ್ರಕಾಶಕರು: ಚಿಂತನ ಪುಸ್ತಕ ಪುಟಗಳು:125 ಬೆಲೆ:ರೂ.50/-

ಕೃಪೆ : ವಿಜಯ ಕರ್ನಾಟಕ

ಅಪ್ಪನ ಪ್ರೀತಿಗೆ

appa-1

ಶಾಂತರಸರ ಮಗಳು ಎಚ್.ಎಸ್.ಮುಕ್ತಾಯಕ್ಕ, ಅಪ್ಪನ ನೆನಪಿಗೆ ನುಡಿಸ್ಮಾರಕ ಕಟ್ಟಿದ್ದಾರೆ.

ಈಗ 15-20 ವರುಷಗಳ ಹಿಂದಿನ ಮಾತು. ನನಗೆ ನೆನಪಿದ್ದಂತೆ ಹಾ.ಮಾ.ನಾಯಕರು ಅವರ ತಂದೆ ದಿವಂಗತರಾದಾಗ ಒಂದು ಪುಸ್ತಕ ತಂದಿದ್ದರು. ಅದನ್ನು ನೋಡಿ ನಾನು ಅಪ್ಪನಿಗೆ `ಚೆನ್ನಾಗಿದೆ ಅಲ್ಲವೇ? ಎಂದು ಕೇಳಿದ್ದಲ್ಲದೆ, `ನಾನೂ ಈ ತರಹದ ಪುಸ್ತಕ ಮಾಡುವೆ ನಿನ್ನ ಬಗ್ಗೆಎಂದುಬಿಟ್ಟೆ. ಯಾಕೆ ಹಾಗೆಂದೆನೋ? ಆಗ ಅಪ್ಪ `ಮಾಡುವೆಯಾ?’ ಎಂದು ಕೇಳಿದರು. `ಖಂಡಿತಾಅಂದುಬಿಟ್ಟೆ.

ಆ ಮಾತಿನಂತೆ ಎಚ್.ಎಸ್.ಮುಕ್ತಾಯಕ್ಕ, `ಅಪ್ಪನ ಕುರಿತು ಪುಸ್ತಕ ತಂದಿದ್ದಾರೆ. ಅವರನ್ನು ಬಲ್ಲವರು ಬರೆದ ಮೂವತ್ತೈದು ಲೇಖನಗಳು ಇಲ್ಲಿವೆ. ಗೊರುಚ, ವಿದ್ಯಾಶಂಕರ್, ಸನದಿ, ಗೀತಾ ನಾಗಭೂಷಣ, ಚನ್ನಣ್ಣ ವಾಲೀಕಾರ ಮುಂತಾದವರು ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅಭಿನಂದನ ಗ್ರಂಥಕ್ಕೆ ಅರ್ಹ ಆಯ್ಕೆಯಾಗಿದ್ದ ಶಾಂತರಸರಿಗೆ ಮಗಳು ಸಲ್ಲಿಸಿದ ನುಡಿ ಕಾಣಿಕೆ ಇದು.

ಶೀರ್ಷಿಕೆ:ಅಪ್ಪ ಲೇಖಕರು:ಎಚ್.ಎಸ್.ಮುಕ್ತಾಯಕ್ಕ ಪ್ರಕಾಶಕರು:ಡಾ.ಚೆನ್ನಬಸವ ಪಟ್ಟದೇವರು ಪ್ರತಿಷ್ಠಾನ ಪುಟಗಳು:224 ಬೆಲೆ: ರೂ.125/-

ಕೃಪೆ : ಕನ್ನಡ ಪ್ರಭ

ವ್ಯಕ್ತಿ ಚಿತ್ರಣಗಳ ಸಂಗ್ರಹ

ವಿಮರ್ಶಕ ಎಸ.ಆರ್.ವಿಜಯಶಂಕರ ಅವರ `ಒಡನಾಟವ್ಯಕ್ತಿಚಿತ್ರಗಳ ಸಂಗ್ರಹ. `ಕಳೆದ ಇಪ್ಪತ್ತಾರು ವರ್ಷಗಳಲ್ಲಿ ಬರೆದ ವ್ಯಕ್ತಿಚಿತ್ರಗಳ ಸಂಗ್ರಹ. ಇವರಲ್ಲಿ ಅನೇಕರು ಸಾಹಿತ್ಯ, ಸಾಂಸ್ಕೃತಿಕ ಸಂದರ್ಭದ ಗಣ್ಯರು. ಇನ್ನು ಕೆಲವರು ಕೈಗಾರಿಕೆ ಪತ್ರಿಕೋದ್ಯಮಗಳ ಮೂಲಕ ಪರಿಚಿತರಾದವರು. ಮತ್ತೆ ಕೆಲವರು ಬದುಕಲ್ಲಿ ಹೇಗೋ ಬಂದು ನೆನಪಲ್ಲಿ ನಿಂದವರುಎಂದು ಕೃತಿಯ ಸ್ವರೂಪವನ್ನು ಲೇಖಕರು ವಿವರಿಸಿದ್ದಾರೆ.

ದ.ರಾ.ಬೇಂದ್ರೆ, ಬಿ.ಜಿ.ಎಲ್.ಸ್ವಾಮಿ, ಶಿವರಾಮ ಕಾರಂತ, ಕೆ.ವಿ.ಸುಬ್ಬಣ್ಣ, ಕೀರ್ತಿನಾಥ ಕುರ್ತಕೋಟಿ ಅವರಕ ಕುರಿತ ಬರಹಗಳು ಸೇರಿದಂತೆ ಇಪ್ಪತ್ತಾರು ಲೇಖನಗಳು ಕೃತಿಯಲ್ಲಿವೆ. ಈ ಹಿರಿಯರ ಅನನ್ಯ ಸಾಂಸ್ಕೃತಿಕ ವ್ಯಕ್ತಿತ್ವ ಹಾಗೂ ಮಾನವೀಯ ಮುಖಗಳನ್ನು ಅವರೊಂದಿಗಿನ ತಮ್ಮ ಅನುಭವದ ಹಿನ್ನೆಲೆಯಲ್ಲಿ ಲೇಖಕರು ಚಿತ್ರಿಸಿದ್ದಾರೆ. ನೆನಪಿನ ಈ ಸ್ಮರಣೆ ಸಂದುಹೋದ ಸಾಂಸ್ಕೃತಿಕ ಶ್ರೀಮಂತಿಕೆಯ ಪುಟಗಳ ದಾಖಲೆಯೂ ಹೌದು.

`ಸಣ್ಣ ಪ್ರಸಂಗಗಳನ್ನೂ ಅನೂಹ್ಯವಾದ ಎತ್ತರದಲ್ಲಿ ಚಿಂತಿಸಬಲ್ಲಂತೆ ಮಾಡುವ ವಿಶ್ಲೇಷಣೆಯಿಂದಾಗಿ ಒಂದು ಬೌದ್ಧಿಕ ಮತ್ತು ಮಾನವೀಯ ನೆಲೆಗಳು ಇಲ್ಲಿನ ಬರಹಗಳಿಗೆ ತಾನೇ ತಾನಾಗಿ ಒದಗಿಬಂದಿದೆ.ಎಂದು ಡಾ. ಬಸವರಾಜ ಕಲ್ಗುಡಿ ಅವರು ಕೃತಿಯ ವಿಶೇಷವನ್ನು ಬೆನ್ನುಡಿಯಲ್ಲಿ ಪ್ರಶಂಸಿಸಿದ್ದಾರೆ.

ಶೀರ್ಷಿಕೆ : ಒಡನಾಟ ಲೇಖಕರು : ಎಸ್. ಆರ್. ವಿಜಯಶಂಕರ್ ಪ್ರಕಾಶಕರು : ಆನಂದಕಂದ ಗ್ರಂಥಮಾಲೆ ಪುಟಗಳು :244 ಬೆಲೆ:ರೂ.120/-

ಕೃಪೆ : ಪ್ರಜಾವಾಣಿ

ಪ್ರೇಮದ ಹಣತೆ

ನಂದಾದೀಪ, ಮಿಸ್ ಲೀಲಾವತಿ, ಪ್ರೊಫೆಸರ್ ಹುಚ್ಚೂರಾಯ, ನಕ್ಕರದೇ ಸ್ವರ್ಗ, ಹಣ್ಣೆಲೆ ಚಿಗುರಿದಾಗ, ಎರಡು ಮುಖ ಇತ್ಯಾದಿ ವಿಶಿಷ್ಟ ಚಿತ್ರಗಳನ್ನು ನೀಡಿದ ಎಂ.ಆರ್.ವಿಠಲ್ ಅವರ ಜನ್ಮ ಶತಮಾನೋತ್ಸವ ವರ್ಷವಿದು(2007-08). ಈ ಹಿನ್ನೆಲೆಯಲ್ಲಿ ವಿಠಲ್ ಅವರನ್ನು ಒಬ್ಬ ವ್ಯಕ್ತಿಯಾಗಿ, ವೃತ್ತಿಪರನಾಗಿ ಅಧ್ಯಯನ ಮಾಡಿರುವ ವಿಶ್ಲೇಷಣಾತ್ಮಕ ಪರಿಚಯ ಪುಸ್ತಕ ಇದು.

ಈ ಪುಸ್ತಕ ರಚನೆಯ ಹಿಂದೆ ಲೇಖಕರ ಸಾಕಷ್ಟು ಪರಿಶ್ರಮವಿದೆ. ವಿಠಲ್ ಅವರ ನಿಕಟವತರ್ಿಗಳಾಗಿದ್ದ 43 ಜನರನ್ನು ಈ ಪುಸ್ತಕ ರಚನೆಗೆ ಮುಂಚೆ ಸಂದರ್ಶಿಸಲಾಗಿದೆ.

ಚಲನಚಿತ್ರಗಳಿಗೆ ತನ್ನದೇ ಆದ ವ್ಯಾಕರಣವಿದೆ ಎಂದು ಪ್ರತಿಪಾದಿಸಿದ ಚಿಂತಕರಲ್ಲಿ ವಿಠಲ್ ಪ್ರಮುಖರು. ಪಾಶ್ಚಾತ್ಯ ಸಿನಿಮಾ ತಂತ್ರಜ್ಞಾನವನ್ನು ತಲಸ್ಪರ್ಶಿಯಾಗಿ ಅರಿತಿದ್ದ ವಿಠಲ್, ಭಾರತೀಯ ಪರಂಪರೆಯ ನೆಲೆಗಳನ್ನು ಬಲ್ಲವರಾಗಿದ್ದರು. ಹೀಗಾಗಿ ಅವರ ಚಿತ್ರಗಳಲ್ಲಿ `ಚಿತ್ರಗೀತೆಮಾತ್ರವಲ್ಲ, ಸಂಗೀತ ಎಂಬ ಪರಿಕರಕ್ಕೇ ವಿಶೇಷ ಅರ್ಥ ಕೊಟ್ಟರು. `ಹಿನ್ನೆಲೆ ಸಂಗೀತವನ್ನು ಅವರು ಬಳಸಿದ ಕ್ರಮ ವಿಶೇಷ ಅಧ್ಯಯನಕ್ಕೆ ಅರ್ಹವಾಗಿದೆ. ಹಾಗೇ ಕ್ಯಾಮರಾ ಮತ್ತು ಎಡಿಟಿಂಗ್ ಗಳಲ್ಲಿ ಅವರಿಗಿದ್ದ ಪರಿಣತಿಯಿಂದ ಹತ್ತಾರು ಪ್ರಯೋಗಕ್ಕೆ ಮುಂದಾದರು. ಅವೆಲ್ಲವನ್ನು ಚಿತ್ರದ ಒಟ್ಟಂದದಲ್ಲಿ ಸೇರಿಸುವ ಕುಶಲತೆ ತೋರಿದರು‘. ಈ ಅಂಶಗಳಿಗೆ ಈ ಕೃತಿಯಲ್ಲಿ ಮಹತ್ವ ನೀಡಿರುವುದಾಗಿ ಲೇಖಕರು ಹೇಳುತ್ತಾರೆ.

1986 ರಲ್ಲಿ ಹೈದರಾಬಾದ್ನಲ್ಲಿ ನಡೆದ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪಾಲ್ಗೊಂಡು ಭಾರತೀಯ ಚಿತ್ರಗಳನ್ನು ವೀಕ್ಷಿಸಿ ಆತಂಕಗೊಂಡ ವಿಠಲ್ ಅವರು ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರಿಗೆ ಬರೆದಿದ್ದ ಪತ್ರದಲ್ಲಿ ಹೇಳಿದ್ದ ಮಾತುಗಳಿವು: `ಇಂದಿನ ಚಿತ್ರಗಳು ಭಾರತೀಯತೆ ಎಂಬುದನ್ನು ಭಾವುಕ ನೆಲೆಯಲ್ಲಿ ಮಾತ್ರ ನೋಡುತ್ತಿವೆ. ಅದಕ್ಕಿರುವ ಸಾಸ್ಕೃತಿಕ ಸೂಕ್ಷ್ಮಗಳು ಮರೆಯಾಗುತ್ತಿವೆ. ತಾಂತ್ರಿಕತೆಯ ಅಬ್ಬರ ಹೆಚ್ಚಿದಂತೆ ಚಿತ್ರ ಕಸುಬುಗಾರಿಕೆ ಎಂಬುದೇ ಒಂದು ಕಾರ್ಖಾನೆಯಂತಾಗಬಹುದು. ತಾಂತ್ರಿಕತೆ ಚಿತ್ರ ವ್ಯಾಕರಣದೊಳಗೆ ಸೇರುತ್ತಿಲ್ಲ. ಹಾಗಾಗದಿದ್ದರೆ ಆ ಬೆಳವಣಿಗೆಗೆ ಮಾಧ್ಯಮದ ದೃಷ್ಟಿಯಿಂದ ಯಾವ ಅರ್ಥವೂ ಇಲ್ಲ‘.

ವಿಠಲ್ ಅವರು ಈ ಪ್ರಶ್ನೆ ಎತ್ತಿ ಕಾಲು ಶತಮಾನವಾಗಿದೆ. ಅವರ ಆತಂಕಗಳೆಲ್ಲಾ ನಿಜವಾಗಿದೆ. ಇವತ್ತು ಕನ್ನಡ ಚಿತ್ರಗಳಲ್ಲಿ ಭಾಷೆಯ ದೃಷ್ಟಿಯಲ್ಲೂ ಕನ್ನಡ ಉಳಿದಿಲ್ಲ. ಭಾರತೀಯ ಚಿತ್ರರಂಗ ತಾಂತ್ರಿಕ ಚಮತ್ಕಾರಗಳಲ್ಲಿ ಮುಳುಗಿಹೋಗಿದೆ. ವಿಠಲ್ ಜೀವನಚರಿತ್ರೆ ಮುಖ್ಯವಾಗುವುದು ಈ ಕಾರಣಕ್ಕೆ. ಇದು ಅವರ ಜನ್ಮ ಶತಮಾನೋತ್ಸವದ ವರ್ಷ ಎಂಬ ಭಾವುಕತೆಗಿಂತ ಅವರು ಎತ್ತಿದ ಪ್ರಶ್ನೆಗಳು ಹೆಚ್ಚು ಪ್ರಚಲಿತವಾಗಿವೆ ಎಂಬ ತಾತ್ವಿಕತೆ ಈ ಕೃತಿ ರಚಿಸಲು ಪ್ರಧಾನವಾಗಿ ಪ್ರೇರಕ ಎಂದೂ ಲೇಖಕರು ಹೇಳಿಕೊಂಡಿದ್ದಾರೆ. ಅನುಬಂಧದಲ್ಲಿ ವಿಠಲ್ ಜೀವನಪಥ ಹಾಗೂ ಅವರ ಚಿತ್ರಗಳ ಕುರಿತಾಗಿ ಛಾಯಾಚಿತ್ರಗಳ ಸಹಿತ ಪೂರ್ಣ ಮಾಹಿತಿ.

ಲೇಖಕರು : ಎನ್. ಎಸ್. ಶ್ರೀಧರಮೂರ್ತಿ

ಪ್ರಕಾಶಕರು : ವಸಂತ ಪ್ರಕಾಶನ

ಪುಟಗಳು : 152

ಬೆಲೆ: ರೂ.100.00

ಕೃಪೆ : ಸುಧಾ