
ಕನ್ನಡದ ಮುಖ್ಯ ವಿಮರ್ಶಕರಾದ ಡಾ.ಎಚ್.ಎಸ್.ರಾಘವೇಂದ್ರ ರಾವ್ ಅವರು ತಮ್ಮ `ತರು ತಳೆದ ಪುಷ್ಪ’ ವಿಮರ್ಶಾ ಕೃತಿಗೆ ವರ್ಧಮಾನ ಪ್ರಶಸ್ತಿ ಪಡೆದಿದ್ದಾರೆ. ಹಾಗೂ ಉದಯೋನ್ಮುಖ ಲೇಖಕ ವಸುದೇಂದ್ರ ತಮ್ಮ `ಯುಗಾದಿ’ ಕಥಾ ಸಂಕಲನಕ್ಕೆ ಉದಯೋನ್ಮುಖ ವರ್ಧಮಾನ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರಿಬ್ಬರಿಗೂ ನಮ್ಮ ಪ್ರೀತಿಪೂರ್ವಕ, ಗೌರವಪೂರ್ವಕ ಅಭಿನಂದನೆಗಳು.
`ನನಗೆ ಭಾವನೆಗಳಿಲ್ಲದ ಲೋಕದಲ್ಲಿ ನಂಬಿಗೆಯಿಲ್ಲ, ನಾವು ದ್ವೀಪಗಳಾಗುವುದು ಬೇಡ, ಗೋಡೆ ಕಟ್ಟುವುದು ಬೇಡ, ನಾವು ಸೇತುವೆ ಕಟ್ಠೋಣ ದೀಪ ಹಚ್ಚೋಣ. ‘ ಇದು ಖ್ಯಾತ ವಿಮರ್ಶಕ ಡಾ.ಎಚ್.ಎಸ್.ರಾಘವೇಂದ್ರ ರಾವ್ ಅವರು ಮೂಡುಬಿದಿರೆಯ ರಮಾರಾಣಿ ಸಂಶೋಧನೆ ಕೇಂದ್ರದಲ್ಲಿ ಭಾನುವಾರ ನಡೆದ ವರ್ಧಮಾನ ಪ್ರಶಸ್ತಿ ಪೀಠದ ವರ್ಧಮಾನ ಪ್ರಶಸ್ತಿ ಸ್ವೀಕರಿಸಿ ಹೇಳಿದ ಮಾತು.
`ಕತೆಗಾರರು ಕಡಿಮೆ ಮಾ ತಾಡಿದ್ರೆ ಒಳ್ಳೆಯದು. ಅವರು ಹೇಳುವುದನ್ನು ಕತೆಯಲ್ಲಿ ಹೇಳುತ್ತಾನೆ. ನನಗೆ ಮನುಷ್ಯನೇ ನನಗೇ ಶ್ರೇಷ್ಠ ಧರ್ಮ.’ ಇದು ವರ್ಧಮಾನ ಉದಯೋನ್ಮುಖ ಪ್ರಶಸ್ತಿ ಸ್ವೀಕರಿಸಿದ ವಸುದೇಂದ್ರ ಅವರ ಅಭಿಪ್ರಾಯ.
ಕೃಪೆ: http://www.gulfkannadiga.com/news-30693.html
http://www.daijiworld.com/news/news_disp.asp?n_id=84900&n_tit=Moodbidri%3A+Let%92s+Not+Turn+Into+Islands%2C+but+Build+Bridges+%96+Dr+HSR+
ವರ್ಧಮಾನ ಪ್ರಶಸ್ತಿ ಪಡೆದ ಕೃತಿ
ಈ ಪುಸ್ತಕವು ನಾನು ಪತ್ರಿಕೆಗಳಿಗೆಂದು ಬರೆದ ಹಲವು ಅಂಕಣಗಳು ಮತ್ತು ಕೆಲವು ಬಿಡಿ ಬರಹಗಳ ಸಂಕಲನ. ಮೊದಲ ಮೂವತ್ಮೂರು ಬರಹಗಳು `ಜನವಾಹಿನಿ’ ದಿನಪತ್ರಿಕೆಯ ಭಾನುವಾರದ ಪುರವಣಿಯಲ್ಲಿ 08-03-2001 ರಿಂದ 28-10-2001 ರ ಅವಧಿಯಲ್ಲಿ ನಿರಂತರವಾಗಿ ಪ್ರಕಟವಾದವು. ಆ ಅಂಕಣಕ್ಕೂ `ತರು ತಳೆದ ಪುಷ್ಪ’ ಎಂಬ ಶೀರ್ಷಿಕೆಯೇ ಇತ್ತು. ಉಳಿದವು ಬೇರೆ ಕಡೆ ಪ್ರಕಟವಾದರೂ ಆಶಯಗಳ ಸಾಮ್ಯದಿಂದ ಇಲ್ಲಿ ಜಾಗ ಪಡೆದಿವೆ.
ಹಲವು ವರ್ಷಗಳಿಂದ, ಪತ್ರಿಕೆಗಳಿಗೆ ಬರೆಯುವುದನ್ನು ತಪ್ಪಿಸಿಕೊಳ್ಳುತ್ತಾ ಬಂದ ನನಗೆ ಈ ಬಗೆಯ ಬರವಣಿಗೆ ಕೊಂಚ ಹೊಸದು. ಸಾಹಿತ್ಯಕ ಪತ್ರಿಕೆಗಳಲ್ಲಿ ಬರೆಯುವುದಕ್ಕೂ ಸಾಕಷ್ಟು ದೊಡ್ಡ ಓದುಗ ಸಮುದಾಯವನ್ನು ತಲುಪುವ ಪತ್ರಿಕೆಗಳಲ್ಲಿ ಬರೆಯುವುದಕ್ಕೂ ವ್ಯತ್ಯಾಸವಿದೆ. ಸಂವಹನಶೀಲತೆ ಮತ್ತು ಸಂಕೀರ್ಣತೆಗಳ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳುವುದು ಕಷ್ಟ. ಹಾಗೆಂದು ಸರಳವಾದ ವಿವರಣೆಗಳನ್ನು ನೀಡೋಣವೆಂದರೆ ಪುಟಮಿತಿ, ಪದಮಿತಿಗಳು ಅಡ್ಡಬರುತ್ತವೆ. ಇದು ಪತ್ರಿಕೆಗಳನ್ನು ಓದುವವರ ಬೌದ್ಧಿಕ ಸಾಮರ್ಥ್ಯವನ್ನು ಶಂಕಿಸುವ ಹುಂಬ ಕೆಲಸ ಅಲ್ಲ. ವಿಮರ್ಶೆಗೆ ಸಹಜವಾದ ಪರಿಭಾಷೆಯನ್ನು ಎಷ್ಟು ಹೇಗೆ ಬಳಸಬಹುದು ಎನ್ನುವುದು ಇಲ್ಲಿನ ಪ್ರಶ್ನೆ. ಹೆಚ್ಚು ರಾಜಿಗಳನ್ನು ಮಾಡಿಕೊಳ್ಳದೆ ಬರೆದರೆ, ಇಂಥ ಬರವಣಿಗೆಯು ಕಲಿಯುವ, ಕಲಿಸುವ ಕೆಲಸವೂ ಆಗಬಹುದು. ಪತ್ರಿಕೆಗಳನ್ನು ಓದುವವರೆಲ್ಲರೂ ಇಂಥ ಅಂಕಣಗಳನ್ನು ಓದುವುದಿಲ್ಲವೆಂಬ ವಾಸ್ತವಜ್ಞಾನವು ಇಲ್ಲಿನ ನನ್ನ ಧೋರಣೆಯನ್ನು ರೂಪಿಸಿದೆ.
ನನ್ನ ಆಯ್ಕೆಯ ಪುಸ್ತಕಗಳ ಬಗ್ಗೆ ಬರೆಯುವ ಸ್ವಾತಂತ್ರವು ನನಗೆ ಸಿಕ್ಕಿತ್ತು. ಸಂಪಾದಕರ ಸೆನ್ಸಾರ‍್ ಇರಲಿಲ್ಲ. ನಮ್ಮ ಸಂಸ್ಕೃತಿಗೆ ಮುಖ್ಯವೆಂದು ತೋರಿದ, ನನಗೆ ಸಂತೋಷಕೊಟ್ಟ ಕೃತಿಗಳನ್ನು ನಾನು ಆರಿಸಿಕೊಂಡಿದ್ದೇನೆ. ಸಾಂಸ್ಕೃತಿಕ ಹಾಗೂ ಸಾಮಾಜಿಕ ಸನ್ನಿವೇಶಗಳ ಬಗ್ಗೆ ಕಾಳಜಿಯಿಟ್ಟುಕೊಂಡೇ ಕೃತಿ ಕೇಂದ್ರಿತವಾದ ಸಾಹಿತ್ಯಕ ವಿಧಾನಗಳನ್ನು ಬಳಸುವುದು ಇಲ್ಲಿ ನನ್ನ ಆಯ್ಕೆಯಾಗಿದೆ. ಕಾಲಮಿತಿ ಹಾಗೂ ಪದಮಿತಿಗಳಲ್ಲಿ ಬರೆಯುವುದು ಅನಿವಾರ್ಯವಾದ ಈ ಕೆಲಸವು ನನಗೆ ಕೆಲವು ಪಾಠಗಳನ್ನು ಕಲಿಸಿದೆ. ಬರೆದುದನ್ನು ಮತ್ತೆ ಓದುವುದರಿಂದ ಹಿಡಿದು ಸೂಕ್ತ ಪದಗಳ ಆಯ್ಕೆ ಮತ್ತು ವಾಕ್ಯರಚನೆಗಳವರೆಗೆ ಈ ಕಲಿಕೆಯ ಹರಹಿದೆ.
-ಪುಸ್ತಕದ ಲೇಖಕರ ಮಾತಿನಿಂದ
ಶೀರ್ಷಿಕೆ: ತರು ತಳೆದ ಪುಷ್ಪ ಲೇಖಕರು:ಎಚ್ ಎಸ್ ರಾಘವೇಂದ್ರ ರಾವ್ ಪ್ರಕಾಶನ:ಕ್ರೈಸ್ಟ್ ಕಾಲೇಜು ಕನ್ನಡ ಸಂಘ ಪುಟ:200 ಬೆಲೆ:
ವರ್ಧಮಾನ ಉದಯೋನ್ಮುಖ ಪ್ರಶಸ್ತಿ ಪಡೆದ ಕೃತಿ

`ಯುಗಾದಿ’ ಕತೆಯಲ್ಲಿ ಹೊಸ ತಲೆಮಾರಿನ ಜೀವನ ಕ್ರಮವೊಂದನ್ನು ಹಳೆಯ ತಲೆಮಾರಿನ ಕಣ್ಣುಗಳಿಂದ ಕಾಣುವ ಪ್ರಯತ್ನವಿದೆ. ತಾವು ಬದುಕಿ ಬಂದ ರೀತಿಗೆ ತಮ್ಮ ಮಗ ಬದುಕುತ್ತಿರುವ ರೀತಿಯನ್ನು ಹೋಲಿಸುತ್ತಾ ಅದನ್ನು ತಮ್ಮ ಗ್ರಹಿಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವ ಗೋಪಣ್ಣ ಮಾಸ್ತರರಿಗೆ ಆಗುವ ಗಲಿಬಿಲಿಗಳು ಮನನೀಯವಾಗಿವೆ. ಮುಖ್ಯವಾದ ಸಂಗತಿ ಎಂದರೆ ತಮ್ಮ ಮಗನ ಜೀವನದ ಇತಿಮಿತಿಗಳು ಗೋಚರಿಸುವಂತೆ ಹೊಸ ತಲೆಮಾರಿನ ಪ್ರಚಂಡ ಶಕ್ತಿಯ ಅರಿವೂ ಅವರಿಗೆ ಆಗುವುದು; ತಮಗೆ ಅಸಾಧ್ಯವಾಗಿದ್ದು, ಕಷ್ಟಸಾಧ್ಯವಾಗಿದ್ದು ತನ್ನ ಮಗನಿಗೆ ಸುಲಭವಾಗಿ, ಸರಳವಾಗಿ ಸಾಧ್ಯವಾಗುತ್ತಿರುವುದು. ಈ ಕತೆ ಗುರುತಿಸುವ ಮತ್ತೊಂದು ಮಹತ್ವದ ಸಂಗತಿ ಎಂದರೆ ಗೋಪಣ್ಣ ಮಾಸ್ತರರಿಗೆ ತಮ್ಮ ಮಗನ ಜೀವನಕ್ರಮ, ಅವನ ಆದ್ಯತೆಗಳು, ಮೌಲ್ಯಗಳು ಇನ್ನೂ ಅರ್ಥವಾಗದ ನಿಗೂಢ, ಅರ್ಥೈಸಿಕೊಳ್ಳಲಾಗದ ಗೋಜಲು; ಆದರೆ ಪ್ರಹ್ಲಾದನಿಗೆ ತನ್ನ ಅಪ್ಪ ಹಾಗೆ ಒಂದು ಸಮಸ್ಯೆ ಏನಲ್ಲ. ಅಂದರೆ ಹೊಸ ತಲೆಮಾರನ್ನು ಹಳೆಯ ತಲೆಮಾರು ಅರ್ಥ ಮಾಡಿಕೊಳ್ಳುವ ಜಟಿಲ ಪ್ರಕ್ರಿಯೆಯೊಂದರ ಕಥನವಾಗಿ `ಯುಗಾದಿ’ ಯನ್ನು ಓದಬಹುದಾಗಿದೆ. `ಬೆಟ್ಟದ ಜೀವ’ದ ಗೋಪಾಲಯ್ಯನಿಗೆ ತನ್ನ ಮಗ ಶಂಭುವಿನ ಜೀವನಕ್ರಮದ ಭೌತಿಕ ಸ್ವರೂಪ ಅದರ ಅಧಿಕೃತ ವಿವರಗಳಲ್ಲಿ ಅರಿವಿಗೇ ಬರುವುದಿಲ್ಲ.ಅವರಿಬ್ಬರ ಜಗತ್ತುಗಳು ನಿಜವಾಗಿ ಸಂಧಿಸುವುದೇ ಇಲ್ಲ.
ಅಡಿಗರ `ವರ್ಧಮಾನ’, ಅನಂತಮೂರ್ತಿಯವರ `ಸೂರ್ಯನಕುದುರೆ’ ಮುಂತಾದ ಕೃತಿಗಳಲ್ಲಿ ಹೊಸ ತಲೆಮಾರಿನಲ್ಲಿ ಸುಪ್ತವಾಗಿರುವ ವಿಕಾಸದ ಸಾಧ್ಯತೆಗಳು ಅಸ್ಪಷ್ಟವಾಗಿಯಾದರೂ ಗೋಚರಿಸುತ್ತವೆ. ವಸುಧೇಂದ್ರರ , `ಯುಗಾದಿ’ಯಲ್ಲಿ ಎರಡೂ ಜಗತ್ತುಗಳು ಭೌತಿಕವಾಗಿ ಸಂಧಿಸುವುದಷ್ಟೇ ಅಲ್ಲ ಹೆಚ್ಚಿನ ಸಹಾನುಭೂತಿಯಲ್ಲಿ ಅರ್ಥಪೂರ್ಣವಾದ ಅನುಸಂಧಾನಕ್ಕಾಗಿ ಪ್ರಯತ್ನಿಸುವ ವಿನ್ಯಾಸವೊಂದು ಸೂಚಿತವಾಗುತ್ತದೆ.
– ಟಿ.ಪಿ. ಅಶೋಕ
ಶೀರ್ಷಿಕೆ:ಯುಗಾದಿ ಲೇಖಕರು:ವಸುದೇಂದ್ರ ಪ್ರಕಾಶನ:ಛಂದ ಪ್ರಕಾಶನ ಪುಟ:206 ಬೆಲೆ:ರೂ.95
Filed under: ಕಥಾ ಸಂಕಲನ, ವಿಮರ್ಶೆ | Tagged: ಕ್ರೈಸ್ಟ್ ಕಾಲೇಜು ಕನ್, ಛಂದ ಪ್ರಕಾಶನ, ಟಿ.ಪಿ. ಅಶೋಕ, ಡಾ.ಎಚ್.ಎಸ್.ರಾಘವೇಂದ್ರ ರಾವ್, ತರು ತಳೆದ ಪುಷ್ಪ, ಯುಗಾದಿ, ವರ್ಧಮಾನ ಉದಯೋನ್ಮುಖ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ವಸುದೇಂದ್ರ | Leave a comment »