ಪುಸ್ತಕ ಪುರಸ್ಕಾರ ಪ್ರಧಾನ ಸಮಾರಂಭಕ್ಕೆ ಆಹ್ವಾನ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2015ನೇ ಸಾಲಿನ ಗೌರವ ಪ್ರಶಸ್ತಿ ಪಡೆದಿರುವ ಪ್ರತಿಷ್ಟಿತ ಅನುವಾದಕರಿಗೆ ಹಾಗೂ 2014ನೇ ಸಾಲಿನ ಶ್ರೇಷ್ಟ ಅನುವಾದಕ್ಕಾಗಿ ಪುರಸ್ಕೃತರಾದವರಿಗೆ ಅಭಿನಂದನೆಗಳು.

20160314_161800

ಪುಸ್ತಕಪ್ರೀತಿ ತಿಂಗಳ ಮಾತುಕತೆ-5 ಕ್ಕೆ ಬನ್ನಿ !!

ಸರ್ಕಾರಿ ವಿಜ್ಞಾನ ಕಾಲೇಜು ಸಭಾಂಗಣದಲ್ಲಿ ಫೆಬ್ರುವರಿ 11 ರಂದು ಪೆರುಮಾಳ್ ಮುರುಗನ್ ಅವರ ‘ಒನ್ ಪಾರ್ಟ್ ವುಮನ್’ ಪುಸ್ತಕದ ಬಗ್ಗೆ ಈ ತಿಂಗಳ ಪುಸ್ತಕಪ್ರೀತಿ ಮಾತುಕತೆ ಹಮ್ಮಿಕೊಳ್ಳಲಾಗಿದೆ.

ಬನ್ನಿ! ಪುಸ್ತಕ ಓದೋಣ !! ಪುಸ್ತಕ ಚರ್ಚಿಸೋಣ!! ಪುಸ್ತಕ ಪ್ರೀತಿಸೋಣ !!

PP Mathukate - 5 invite kannadaPP Mathukate - 5 invite english

ದೇಶಕ್ಕೆ ಸ್ವಾತಂತ್ರ್ಯ ಬಂದರೂ ಕವಡೇಪುರಕ್ಕೆ ಸ್ವಾತಂತ್ರ್ಯ ಬಂದಿಲ್ಲರೀ

ಶೀರ್ಷಿಕೆ:ಕವಡೆಪುರದ ಕೌರವರು ಲೇಖಕರು: ವೈ.ಎಸ್. ಹರಗಿ ಪ್ರಕಾಶಕರು: ಶ್ರೀನಿವಾಸ ಪುಸ್ತಕ ಪ್ರಕಾಶನ ಪುಟ: 344 ಬೆಲೆ:ರೂ.170/-

ವಸ್ತು ನಿಷ್ಟ ನಿಲುವಿನ ಬರವಣಿಗೆ

ಶೀರ್ಷಿಕೆ: ಹಳ್ಳ ಬಂತು ಹಳ್ಳ       ಲೇಖಕರು:ಶ್ರೀನಿವಾಸ ವೈದ್ಯ     ಪ್ರಕಾಶಕರು:ಮನೋಹರ ಗ್ರಂಥಮಾಲಾ ಪುಟಗಳು:281  ಬೆಲೆ:ರೂ.200/-

ಕೃಪೆ: ದೇಶ ಕಾಲ ವಿಶೇಷ

ನಿರಂಜನರ ಮೂಲಕ ಕಯ್ಯೂರು ಕಲಿಗಳು, ಕಯ್ಯೂರು ಕಲಿಗಳ ಮೂಲಕ ನಿರಂಜನರು ಚಿರಸ್ಮರಣೀಯರು.

ನಿರಂಜನರ ಮೂಲಕ ಕಯ್ಯೂರು ಕಲಿಗಳು, ಕಯ್ಯೂರು ಕಲಿಗಳ ಮೂಲಕ ನಿರಂಜನರು ಚಿರಸ್ಮರಣೀಯರು.
ಕಯ್ಯೂರು ಹೋರಾಟಕ್ಕೆ ಸಂಬಂಧಿಸಿದಂತೆ 60 ಜನರನ್ನು ಬಂಧಿಸಿ ಮಂಗಳೂರಿಗೆ ತಂದಿದ್ದರು ವಿಚಾರಣೆಗಾಗಿ…… ಸೆರೆಮನೆಯಲ್ಲಿ ಆ ಕೈದಿಗಳನ್ನು ಭೇಟಿಯಾದೆ. ಧೀರ್ಘ ವಿಚಾರಣೆಯ ವೇಳೆ ವರದಿಗಾರನಾಗಿ ಪ್ರತಿ ದಿನವೂ ಅವರ ಸಾಮಿಪ್ಯದ ಸವಿಯುಂಡೆ.
ಆ ವಿಚಾರಣೆ ಭಾರೀ ನಾಟಕ. ಅದರ ಭೀಕರತೆ ಸ್ಪಷ್ಟವಾದದ್ದು ನ್ಯಾಯಮೂರ್ತಿ ತೀರ್ಪು ನೀಡಿದ ದಿನ. ನಾಲ್ವರಿಗೆ ಮರಣದಂಡನೆ.
ನಾನು ನೋಡನೋಡುತ್ತಿದ್ದಂತೆಯೇ ಕಯ್ಯೂರಿನ ಶೋಷಿತರು ಇತಿಹಾಸ ರಚಿಸಿದ್ದರು, ಕಥೆಯಾಗಿದ್ದರು, ದಂತಕಥೆಯಾಗಿದ್ದರು.
`ಚಿರಸ್ಮರಣೆ’ ಒಂದು ಕಾದಂಬರಿ, ಚರಿತ್ರೆಯಲ್ಲ. ಈ ಕೃತಿಯಲ್ಲಿ ನಾನು ಮಾಡಿರುವುದು, ಕಯ್ಯೂರಿನ ಹೋರಾಟದ ಅಂತಸ್ಸತ್ವವನ್ನು – ಆ ಕಾಲಾವಧಿಯ ಚೇತನವನ್ನು – ಕಲೆಯಲ್ಲಿ ಸೆರೆಹಿಡಿಯುವ ಯತ್ನ.
`ಚಿರಸ್ಮರಣೆ’ಯ ಅನೇಕ ಪಾತ್ರಗಳು ನಿಜಜೀವನದಿಂದಲೇ ಕಾದಂಬರಿಯ ಪುಟಗಳಿಗೆ ನಡೆದುಬಂದಿವೆ. ಆದರೆ ಇಲ್ಲಿನ ಪಾತ್ರ ನಿರ್ವಹಣೆಗಾಗಿ ರಂಗ ಸಜ್ಜಿಕೆಯ ವೇಷಭೂಷಣಗಳನ್ನು ಅವು ನಿರಾಕರಿಸಿಲ್ಲ. ಇನ್ನು ಕೆಲ ಪಾತ್ರಗಳನ್ನು ನಾನು ಕಡೆದದ್ದು ನನ್ನ ಕಲ್ಪನೆಯ ಮೂಸೆಯಲ್ಲಿ.
-ನಿರಂಜನ
(ಪುಸ್ತಕದ ಬೆನ್ನುಡಿಯಿಂದ)

ಶೀರ್ಷಿಕೆ: ಚಿರಸ್ಮರಣೆ ಲೇಖಕರು:ನಿರಂಜನ ಪ್ರಕಾಶಕರು:ಡಿ.ವಿ.ಕೆ. ಮೂರ್ತಿ ಪುಟ:281 ಬೆಲೆ:ರೂ.45/-


ರಚಿತವಾಗಿ ಇಪ್ಪತ್ತು ವರ್ಷಗಳಾದಮೇಲೆ `ಚಿರಸ್ಮರಣೆ’ ಮಲಯಾಳಂ ಭಾಷೆಯಲ್ಲಿ ಮರುಹುಟ್ಟು ಪಡೆಯಿತು. ಕೇರಳದಲ್ಲಿ ಅದಕ್ಕೆ ದೊರೆತ ಸ್ವಾಗತದ ವಿವರ ತಿಳಿದಾಗ `ಧನ್ಯನಾದೆ’ ಎನಿಸಿತು. ಸ್ವಲ್ಪ ಸಮಯದ ಅನಂತರ ಕನ್ನಡದಲ್ಲಿ ಎರಡನೆಯ ಮುದ್ರಣ ಬಂತು. ಮುಂದೆ ತಮಿಳು, ತೆಲುಗು, ಮರಾಠಿ, ಬಂಗಾಳಿ, ತುಳು ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಅನುವಾದ ಬರತೊಡಗಿದವು.
ಚಿತ್ರೀಕರಣದ ಹಕ್ಕು ಪಡೆಯಲು ಬಂದವರು ಪ್ರಶ್ನೆ ಕೇಳಿದರು:
“ನಿಮ್ಮ ಕಾದಂಬರಿಯ ನಂಬೂದಿರಿ-ನಂಬಿಯಾರ‍್ ಯಾರು?”
ಉತ್ತರ:”ಪಾಳೆಗಾರಿಕೆಯ ಪ್ರತಿನಿಧಿಗಳು”
ಪ್ರಶ್ನೆ: “ದೇವಕಿ ಎಲ್ಲಿದ್ದಾಳೆ?”
ಉತ್ತರ:”ನನ್ನ ಕಾದಂಬರಿಯಲ್ಲಿ”
ಪ್ರಶ್ನೆ: “ಕಣ್ಣ…..”
ಉತ್ತರ: “ಜನತೆಯ ಚಳವಳಿಯಲ್ಲಿ ಸಿರಿಕಂಠದ ಹಾಡುಗಾರ ಇರಲೇಬೇಕು, ಅಲ್ಲ?
ಸಾಕ್ಷ್ಯಚಿತ್ರವೋ? ಕಥಾ ಚಿತ್ರವೋ?
ಚರಿತ್ರೆಯೋ? ಕಾದಂಬರಿಯೋ?
ಅವರು ಗೊಂದಲಕ್ಕೀಡಾಗಿದ್ದರು. ನಾನು ತಲೆಕೆಡಿಸಿಕೊಳ್ಳಲಿಲ್ಲ.
1925ರಲ್ಲಿ ಸೋವಿಯತ್ ಚಲಚ್ಚಿತ್ರ ನಿರ್ದೇಶಕ ಐಸೆನ್ ಸ್ಟೀನ್ `ಯುದ್ಧ ನೌಕೆ ಪೊಟೆಮ್ ಕಿನ್’ ಎಂಬ ಕಥಾಚಿತ್ರವನ್ನು ನಿರ್ಮಿಸಿದರು. ಅದು ಅಪಾರ ಮೆಚ್ಚುಗೆ ಗಳಿಸಿತು. ಆದರೆ ನಿಂದಕರೂ ಕೆಲವರಿದ್ದರು. ಅವರೆಂದರು:”ಇದು ಇತಿಹಾಸದ ಯತಾವತ್ ಚಿತ್ರಣವಲ್ಲ.”
ಆ `ಟೀಕೆ’ಗೆ ಉತ್ತರವಾಯಿತು, ಅದಕ್ಕೂ 150 ವರ್ಷ ಹಿಂದೆ ಜರ್ಮನ್ ಮಹಾಕವಿ ಗಯಟೆ ಹೇಳಿದ್ದ ಒಂದು ಮಾತು: `ಸಮ್ಯಕ್ ಸತ್ಯದ ದರ್ಶನಕ್ಕಾಗಿ ಸಣ್ಣ ಪುಟ್ಟ ಸತ್ಯಾಂಶಗಳು ಅಮುಖ್ಯವಾಗುತ್ತದೆ.’ ಅದೇ ಮಾತನ್ನು `ಚಿರಸ್ಮರಣೆ’ ಕಾದಂಬರಿಗೆ ಸಂಬಂಧಿಸಿ ನಾನು ಆಡಿದರೆ ತಪ್ಪಾದೀತೇ?
-ನಿರಂಜನ
(ಮೂಲ ಕನ್ನಡ ಕಾದಂಬರಿ `ಚಿರಸ್ಮರಣೆ’ಯ ಮುನ್ನುಡಿಯಿಂದ)
ಶೀರ್ಷಿಕೆ: ಸಾಶ್ವಿಲೊ ಉಗ್ಡಾಸ್ ಭಾಷೆ: ಕೊಂಕಣಿ ಲೇಖಕರು:ವಿತ್ತಿ, ಬೆಂಗ್ಳುರ‍್ ಪ್ರಕಾಶಕರು:ಕರ್ನಾಟಕ ಕೊಂಕಣಿ ಸಾಹಿತ್ ಅಕಾಡೆಮಿ ಪುಟ:280 ಬೆಲೆ:ರೂ.50/-

ಅವಳಿಗೆ ಸಿಕ್ಕಂಥ ಶಾಲೆ ನಮಗೇಕೆ ಸಿಗಲಿಲ್ಲ?!

ಇವಳು `ತುಂಗಾ’ ಅಲ್ಲ ಗಾಯತ್ರಿ. . .
ಜಪಾನಿನ ಟೆಲಿವಿಷನ್ ಕ್ಷೇತ್ರದ ದೊಡ್ಡ ಹೆಸರು ತೆತ್ಸುಕೋ ಕುರೋಯಾನಾಗಿ. `ಸರಿಯಾದ’ ಶಾಲೆ ಪಡೆಯಲು ಆಕೆ (ಆಕೆಯ ತಾಯಿ) ಪಟ್ಟ ಬವಣೆಯೇ `ತೊತ್ತೋಚಾನ್’ ಕಾದಂಬರಿಯಾಗಿ ಮೂಡಿ ಬಂದಿದೆ. ಇಡೀ ಜಗತ್ತನ್ನು ಇನ್ನಿಲ್ಲದಂತೆ ಕಾಡಿದ ಕೃತಿ ಇದು. ಈ ಕೃತಿಯನ್ನು ಕನ್ನಡಕ್ಕೆ ತಂದದ್ದು ವಿ. ಗಾಯತ್ರಿ. ಈಗ ಅದೇ `ತೊತ್ತೋಚಾನ್’ ನಿಂದ ಪ್ರೇರಣೆ ಪಡೆದ, ಅದೇ ಎಳೆ ಹೊಂದಿರುವ

`ತುಂಗಾ’ವನ್ನು ನಮ್ಮೆದುರು ಇಡುತ್ತಿದ್ದಾರೆ. ಒಂದು ಘಟ್ಟದವರೆಗೆ ಆತ್ಮ ಕಥಾನಕ ಎನಿಸುವ ಈ ಕೃತಿ ಈ ನೆಲದ ಗುಣವನ್ನು ತುಂಬಿಕೊಂಡಿದೆ. ಕೃತಿ ರೂಪಿತವಾದ ಪ್ರತಿ ಹಂತದಲ್ಲೂ ಹತ್ತಿರವಿದ್ದ ನನಗೆ ಇದರ ಪ್ರಕಟಣೆಯ ಕ್ಷಣ ಅಮೃತಘಳಿಗೆ.
ಗಾಯತ್ರಿ ನಾನು ತುಂಬಾ ಪ್ರೀತಿಸುವ ಗೆಳತಿ. ಆಕೆಯ ಮುನ್ನೋಟವೇ ಅಚ್ಚರಿ ತರುವಂತಹದ್ದು. ಅತ್ಯಂತ ನಿಷ್ಟುರ, ದಿಟ್ಟ ನುಡಿಗಳ ಗಾಯತ್ರಿ ಎಂದೂ ಉಡಾಫೆ ಮಾಡಿದವರಲ್ಲ. ಎಲ್ಲಾ ಮಾತಿನ ಹಿಂದೆಯೂ ಆಳವಾದ ಚಿಂತನೆ, ವಿವೇಚನೆ ಇರುತ್ತದೆ. ತಣ್ಣಗಿದ್ದು, ದೊಡ್ಡ ಕೆಲಸ ಮಾಡುವ ಗಾಯತ್ರಿ ನನಗೆ ಮೆಚ್ಚು.
ಡಾ. ವಿಜಯಾ
– ಬೆನ್ನುಡಿಯಿಂದ
ಶೀರ್ಷಿಕೆ:     ತುಂಗಾ : ಅವಳಿಗೆ ಸಿಕ್ಕಂಥ ಶಾಲೆ ನಮಗೇಕೆ ಸಿಗಲಿಲ್ಲ?!         ಲೇಖಕರು:ವಿ. ಗಾಯತ್ರಿ         ಪ್ರಕಾಶನ: ಮೇಫ್ಲವರ‍್        ಪುಟಗಳು:176       ಬೆಲೆ:ರೂ.120/-

ಹನ್ನೆರಡರ ಹುಡುಗ

scan0009(2)
ಇಟೆಲಿಯ ಪತ್ರಕರ್ತ, ಬರಹಗಾರ ಇಟಾಲೋ ಕಾಲ್ವಿನೋನ ‘ಬ್ಯಾರನ್ ಇನ್ ದಿ ಟ್ರೀಸ್’ ಕಾದಂಬರಿಯನ್ನು ಕೆ.ಪಿ.ಸುರೇಶ ಕನ್ನಡಕ್ಕೆ ತಂದಿದ್ದಾರೆ. ಹನ್ನೆರಡು ವರುಷದ ಹುಡುಗನೊಬ್ಬನ ಸಾಕ್ಷೀ ಪ್ರಜ್ಞೆಯಲ್ಲಿ ನಿರೂಪಿತವಾಗಿರುವ ಕತೆ ಇದು.
‘ಕಾಡು ಮತ್ತು ನಾಡುಗಳ ಮಧ್ಯೆ ಚಲಿಸುತ್ತಾ ಎರಡರಿಂದಲೂ ಬೆಳೆಯುತ್ತಿರುವ ಕನ್ನಡ ಕವಿ’ ಕೆ.ಪಿ.ಸುರೇಶ್ ಅನುವಾದವನ್ನು ಎಚ್.ಎಸ್. ರಾಘವೇಂದ್ರರಾವ್ ಅತಿಯಾಗಿ ಮೆಚ್ಚಿಕೊಂಡಿದ್ದಾರೆ. ‘ಕನ್ನಡ ಕಾದಂಬರಿಗಳ ಈಚಿನ ಚಪಲಗಳನ್ನು ಮೀರಿ, ಬರವಣಿಗೆಯ ಹೊಸ ಸಾಧ್ಯತೆಗಳನ್ನು ಶೋಧಿಸುವ ಈ ಅನುವಾದ ನನಗೆ ಖುಷಿ ಕೊಟ್ಟದೆ‘ ಎಂದಿದ್ದಾರೆ. ಈಚಿನ ಚಪಲಗಳ ಬಗ್ಗೆ ಅವರೊಂದಷ್ಟು ವಿವರವಾಗಿ ಹೇಳಬಹುದಿತ್ತೇನೋ?
ಕಾಲ್ವಿನೋನ ತ್ರಿವಳಿ ಕಾದಂಬರಿಗಳಲ್ಲಿ ಅತ್ಯಂತ ಜನಪ್ರಿಯವಾದ ‘ಬ್ಯಾರನ್ ಇನ್ ದಿ ಟ್ರೀಸ್‘ಕಾದಂಬರಿ ಈಗ ಕನ್ನಡದಲ್ಲಿ ಲಭ್ಯ.

ಶೀರ್ಷಿಕೆ: ಕೊಸಿಮೊ  ಅನುವಾದ:ಕೆ.ಪಿ.ಸುರೇಶ್  ಪ್ರಕಾಶಕರು: ಅಭಿನವ ಪುಟ:216, ಬೆಲೆ:ರೂ.100/-

ಕೃಪೆ : ಕನ್ನಡ ಪ್ರಭ

ವೇಣು ನಿನಾದ

scan0008(2)
1981 ರಲ್ಲಿ ಪ್ರಕಟವಾದ ‘ಗಂಡುಗಲಿ ಮದಕರಿನಾಯಕ‘ ಕಾದಂಬರಿಯನ್ನು ಚಿತ್ರದುರ್ಗ ಸಾಹಿತ್ಯ ಸಮ್ಮೇಳನದ ನಿಮಿತ್ತ, ಮರುಮುದ್ರಣ ಮಾಡಿದ್ದಾರೆ. ಇದು ನಾಲ್ಕನೆಯ ಮುದ್ರಣ. ಸಾಹಿತ್ಯ ಸಮ್ಮೇಳನದಲ್ಲಿ ಈ ಕಾದಂಬರಿಯ 748 ಪ್ರತಿಗಳು ಮಾರಾಟವಾಗಿವೆ ಎನ್ನುತ್ತಾರೆ ಪ್ರಕಾಶಕರು.
ದಲಿತ, ಬಂಡಾಯ, ಸಸ್ಪೆನ್ಸ್, ಪಾಲಿಟಿಕ್ಸ್, ಡೀಪ್ ಲವ್, ಐತಿಹಾಸಿಕ, ಕೌಟುಂಬಿಕ, ಸಂಗೀತ, ನೃತ್ಯ- ಯಾವ ಪ್ರಕಾರವನ್ನೇ ಆರಿಸಿಕೊಂಡರೂ ಅಧ್ಯಯನ ಮಾಡಿ ವಸ್ತುನಿಷ್ಟವಾಗಿಯೂ ಬರೆವ ವೇಣು ಯಾವುದೇ ಲೇಬಲ್ ಅಂಟಿಸಿಕೊಳ್ಳದ ಸೃಜನಶೀಲ ಬರಹಗಾರರು. ಐತಿಹಾಸಿಕ ಕಾದಂಬರಿಗಳ ಅವನತಿಯ ಕಾಲದಲ್ಲಿ ಓಯಸ್ಸಿಸ್ ನಂತೆ ದುರ್ಗದ ಇತಿಹಾಸ ಕುರಿತಂತೆ ಕೃತಿ ರಚನೆಗಿಳಿದು ‘ಜನಪ್ರಿಯತೆ ಮತ್ತು ಮೌಲ್ವಿಕತೆ ಬೇರೆ ಬೇರೆ ಎಂಬ ಅಭಿಪ್ರಾಯವನ್ನು ಹುಸಿಯಾಗಿಸಿ ಬೆಳೆದ ಲೇಖಕ‘ ಎಂಬ ಮೆಚ್ಚುಗೆಯ ಸಾಲುಗಳು ಈ ಲೇಖಕನ ಬಗ್ಗೆ ಮುನ್ನುಡಿಯಲ್ಲಿವೆ.
ಈ ಕಾದಂಬರಿಯನ್ನು ಓದಬೇಕೆಂಬ ಆಸೆ ಹುಟ್ಟಿಸುವುದಕ್ಕೆ ಇಷ್ಟು ವಿವರಗಳು ಸಾಕಲ್ಲವೇ?

ಶೀರ್ಷಿಕೆ: ಗಂಡುಗಲಿ ಮದಕರಿನಾಯಕ  ಲೇಖಕರು:ಬಿ.ಎಲ್.ವೇಣು  ಪ್ರಕಾಶಕರು: ಗೀತಾಂಜಲಿ, ಶಿವಮೊಗ್ಗ ಪುಟ:236, ಬೆಲೆ:ರೂ.195/-

ಕೃಪೆ : ಕನ್ನಡ ಪ್ರಭ

ಈ ಶಾಲೆ ನನಗೆ ಇಷ್ಟವಾಯಿತು

scan0015

“ಈಗ ನೀನು ಈ ಶಾಲೆಯ ವಿದ್ಯಾರ್ಥಿನಿ” ಎಂದು ಮುಖ್ಯೋಪಧ್ಯಾಯರು ಹೇಳಿದ ಮೇಲೆ ತೊತ್ತೊ-ಚಾನ್ ನಾಳೆ ಬೆಳಗಾಗುವುದನ್ನೇ ಕಾಯ್ದಳು. ಈ ಮೊದಲು ಆಕೆ ಎಂದೂ ಹಾಗೆ ಕಾಯ್ದಿರಲಿಲ್ಲ.

ಪುಟ್ಟ ತೊತ್ತೊ-ಚಾನ್ ತೊಮೊಯೆ ಗಾಕುಯೆನ್ ಶಾಲೆಯ ವಾತಾವರಣ ತಾನು ಹಾಗೂ ತನ್ನ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಇಷ್ಟವಾಗಬೇಕು ಹಾಗೂ ಸಮವಸ್ತ್ರ ಮತ್ತು ಪಠ್ಯಕ್ರಮಕ್ಕಿಂತ ಮಕ್ಕಳಿಗೆ ಬೇಕಾದ ಸ್ವಾದಿಷ್ಟ ಊಟದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಮುಖ್ಯೋಪದ್ಯಾಯರು ಇರಬೇಕು ಎಂದು ಆಶಿಸಿದ್ದಳು. ಅಲ್ಲಿ ಎಲ್ಲ ಮಕ್ಕಳು ಸಂಗೀತ ಕಲಿಯುತ್ತಿದ್ದರು, ಆಟವಾಡುತ್ತಿದ್ದರು, ಬೇಸಿಗೆಯಲ್ಲಿ ಹೊರಗೆ ಕ್ಯಾಂಪು ಹಾಕುತ್ತಿದ್ದರು, ಬಿಸಿನೀರಿನ ಬುಗ್ಗೆಯಲ್ಲಿ ನಡೆದಾಡುತ್ತಿದ್ದರು, ನಾಟಕ ಆಡುತ್ತಿದ್ದರು ಹಾಗೂ ಬಯಲಿನಲ್ಲಿ ಅಡುಗೆ ಮಾಡುವ ಆನಂದ ಅನುಭವಿಸುತ್ತಿದ್ದರು. ಆ ಮಕ್ಕಳಲ್ಲಿ ಕೆಲವರು ಹಾಡುಗಾರರಿದ್ದರು, ಆಟಗಾರರಿದ್ದರು ಹಾಗೂ ಒಬ್ಬ ಭಾವೀ ಡಾಕ್ಟರ‍್ ಕೂಡಾ ಇದ್ದ.

ಇದೆಲ್ಲವೂ ಸ್ನೇಹಶೀಲ ಹಾಗೂ ಕಲ್ಪನಾಶೀಲ ಮುಖ್ಯೋಪಧ್ಯಾಯ ಶ್ರೀ ಕೊಬಾಯಾಶಿ ಅವರಿಂದ ಸಾಧ್ಯವಾಯಿತು. ಅವರು ತೊತ್ತೊ-ಚಾನ್ ಗೆ ಯಾವಾಗಲೂ ಹೇಳುತ್ತಿದ್ದರು. “ನೀನು ಖಂಡಿತಾ ಒಳ್ಳೆಯ ಹುಡುಗಿ!”. ನಿಸ್ಸಂದೇಹವಾಗಿ ಅವರು ಇದೇ ಪ್ರೋತ್ಸಾಹಕ ಮಾತನ್ನು ಇತರ ಮಕ್ಕಳಿಗೂ ಹೇಳುತ್ತಿದ್ದಿರಬೇಕು. ಮಕ್ಕಳನ್ನು ಉಲ್ಲಾಸದಿಂದಿಡುವ ಕಡೆಗೆ ಅವರು ಹೆಚ್ಚಿನ ಗಮನ ಹರಿಸುತ್ತಿದ್ದರು. ಅವಳ ಶಾಲೆ ಮಕ್ಕಳಿಗೆ ಮನೆಯಿಂದ ದೂರವಿರುವ ಮತ್ತೊಂದು ಮನೆಯಂತಿತ್ತು. ಆಗಿನ ಪುಟ್ಟ ಹುಡುಗಿ ತೊತ್ತೊ-ಚಾನ್ ಈಗ ದೊಡ್ಡವಳಾಗಿ ತೆತ್ಸುಕೋ ಕುರೋಯಾನಾಗಿ ಎಂಬ ಹೆಸರಿನಲ್ಲಿ ಜಪಾನಿನಾದ್ಯಂತ ಪ್ರಸಿದ್ಧಿ ಪಡೆದ ಯಶಸ್ವೀ ಟೆಲಿವಿಷನ್ ಕಲಾವಿದೆ. ಜಪಾನಿನಿಂದ ಯುನಿಸೆಫ್ ನ ಸದ್ಭಾವನಾ ರಾಯಬಾರಿಯಾಗಿ ನೇಮಕಗೊಂಡಿರುವ ಅವರಿಂದ ಮಕ್ಕಳು, ಹಾಗೆಯೇ ಮಕ್ಕಳ ಜೊತೆಯೇ ಒಂದಲ್ಲ ಒಂದು ರೀತಿಯ ಸಂಬಂಧವನ್ನು ಹೊಂದಿರುವ ಶಿಕ್ಷಕರು, ತಂದೆ-ತಾಯಿಯರು, ಅಜ್ಜ-ಅಜ್ಜಿಯರು ತಿಳಿದುಕೊಳ್ಳುವುದು ಬಹಳಷ್ಟಿದೆ. ಜಪಾನಿನ ಈ ಜನಪ್ರಿಯ ಪುಸ್ತಕ ತನ್ನ ಪ್ರಭಾವಶಾಲಿ ಸಂದೇಶ ಸಾರುತ್ತಿದೆ:

ಅರಳಲಿ ಹೂಗಳು ನೂರಾರು

ನಡೆಯಲಿ ವಿಚಾರ ಸಂಘರ್ಷಗಳು ಸಾವಿರಾರು.

– ಪುಸ್ತಕದ ಬೆನ್ನುಡಿಯಿಂದ

ಮಕ್ಕಳ ಕುರಿತು ಮಕ್ಕಳೇ ಪ್ರಧಾನ ಪಾತ್ರದಲ್ಲಿರುವ ಒಂದು ಕಾದಂಬರಿ ತೊತ್ತೊ-ಚಾನ್ . ‘ತೊತ್ತೊ-ಚಾನ್’ ಅತ್ಯಂತ ಹೆಚ್ಚು ಬಾಷೆಗಳಿಗೆ ಅನುವಾದಗೊಂಡ ಅತ್ಯಂತ ಹೆಚ್ಚು ಮಾರಾಟ ಕಂಡ ಕೃತಿ. ಈ ಬೇಸಿಗೆ ರಜೆಯಲ್ಲಿ ನಿಮ್ಮ ಮಕ್ಕಳಿಗೆ ಓದಿಸಿ ನೀವೂ ಓದಿ ಎಂಬ ಆಶಯ ‘ಕನ್ನಡ ಪ್ರಭ’ ದ್ದು.

ಶೀರ್ಷಿಕೆ: ತೊತ್ತೊ-ಚಾನ್ ಲೇಖಕರು:ತೆತ್ಸುಕೊ ಕುರೋಯಾನಾಗಿ ಅನುವಾದ:ವಿ.ಗಾಯತ್ರಿ  ಪ್ರಕಾಶಕರು:ನ್ಯಾಷನಲ್ ಬುಕ್ ಟ್ರಸ್ಟ್  ಪುಟಗಳು:೧೫೩ ಬೆಲೆ:ರೂ೪೦/-

ಶಿಕ್ಷಣದ ಮೂಲಕ ಬದಲಾವಣೆ

leriyonka

ಹೊಸ ಪೀಳಿಗೆಯಲ್ಲಿ ಕಾಲೇಜು, ವಿಶ್ವವಿದ್ಯಾಲಯಗಳ ಶಿಕ್ಷಕ ವೃತ್ತಿಗೆ ಹೊರತಾದ ವಿಭಿನ್ನ ಕ್ಷೇತ್ರಗಳಲ್ಲಿದ್ದು ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಂಡಿರುವ ಯುವಕರ ಬರವಣಿಗೆಗಳನ್ನು ಐದು ವರ್ಷಗಳಿಂದ ಪ್ರಕಟಿಸುತ್ತಿರುವ ಛಂದ ಪುಸ್ತಕ ಹೊರತಂದ ಕೃತಿ ಇದು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಹುದ್ದೆಯಲ್ಲಿದ್ದು ಸದ್ಯ ಪೂರ್ವ ಆಫ್ರಿಕಾದ ತಾಂಜಾನಿಯದಲ್ಲಿ ವಾಸವಿರುವ ಪ್ರಶಾಂತ್ ಬೀರೂರು ಚಿಕ್ಕಣ್ಣ ದೇವರು (ಪ್ರಶಾಂತ್ ಬೀಚಿ) ಅವರು ಈ ಕೃತಿಯನ್ನು ಅನುವಾದಿಸಿದ್ದಾರೆ. ಮೂಲ ಲೇಖಕ ಹೆನ್ರಿ ಆರ್. ಓಲೆ ಕುಲೆಟ್ ಕೀನ್ಯಾ ದೇಶದ ಜನಪ್ರಿಯ ಕಾದಂಬರಿಕಾರ. ಆಫ್ರಿಕಾದ ಬುಡಕಟ್ಟುಗಳಲ್ಲಿ ಒಂದಾದ ಮಾಸಯಿ ಬುಡಕಟ್ಟಿನ ಬಾಲಕನೊಬ್ಬ ಶಾಲಾ ಶಿಕ್ಷಣ ಪಡೆಯಲು ನಗರಕ್ಕೆ ಹೋಗುವ ಮತ್ತು ನಗರದಲ್ಲಿ ಕೆಲವು ವರ್ಷ ಪಡೆಯುವ ಅನುಭವಗಳನ್ನು ಈ ಕಾದಂಬರಿ ಒಳಗೊಂಡಿದೆ.

ಶಿಕ್ಷಣವೆಂಬ ಪ್ರಪಂಚಕ್ಕೆ ಪ್ರವೇಶವೇ ಇಲ್ಲದ ತಳವರ್ಗದ ನೂರಾರು ಸಮುದಾಯಗಳು ಇತ್ತೀಚಿನವರೆಗೂ ಭಾರತದಲ್ಲಿ ಇದ್ದ ಹಿನ್ನೆಲೆಯಲ್ಲಿ ಆಫ್ರಿಕದ ಬುಡಕಟ್ಟಿನ ಈ ಕಥಾನಕ ಕನ್ನಡ ಓದುಗರಿಗೆ ಪ್ರಸ್ತುತವೆನಿಸುತ್ತದೆ. ಹೆನ್ರಿ ಕುಲೆಟ್ ಅವರ ಮೊದಲ ಕಾದಂಬರಿ `ಈಸ್ ಇಟ್ ಪಾಸಿಬಲ್ದ (1971) ಅನುವಾದವಿದು. ಇದು ಯೂರೋಪಿನ ಆಧುನಿಕತೆಯ ಎದುರು ಆಫ್ರಿಕಾದ ಸ್ಥಳೀಯ ಸಮುದಾಯಗಳು ಶಿಕ್ಷಣದ ಮೂಲಕ ಮುಖಾಮುಖಿ ಆದಾಗ ಉಂಟಾಗುವ ಸಮಸ್ತ ತಲ್ಲಣದ ಚಿತ್ರಣವೆಂದು ಬೆನ್ನುಡಿಯಲ್ಲಿ ವಿಮರ್ಶಕ ರಹಮತ್ ತರೀಕೆರೆ ಬಣ್ಣಿಸಿದ್ದಾರೆ. ಶಿಕ್ಷಣದ ಮೂಲಕ ಹೊಸ ಪ್ರಪಂಚವೊಂದನ್ನು ಕಂಡುಕೊಳ್ಳುವ ಬೆರಗು ಕ್ರಮೇಣ ಜಾಗೃತಿಯನ್ನು ಮೂಡಿಸಿ ಸ್ವತಂತ್ರ ಅಸ್ತಿತ್ವಕ್ಕಾಗಿ ತಹತಹಿಸುವ ಸ್ಥಿತಿಯನ್ನು ಮುಟ್ಟಿಸುವುದರ ಪರಿವರ್ತನೆಯ ಚಿತ್ರಣವೂ ಇಲ್ಲಿದೆ.

ದನ ಕರುಗಳ ಪೋಷಣೆಯ ಮೂಲಕವೇ ಬದುಕನ್ನು ರೂಪಿಸಿಕೊಂಡು ತಮ್ಮಷ್ಟಕ್ಕೆ ಸಂತೃಪ್ತಿಯಿಂದಿದ್ದ ಬುಡಕಟ್ಟು ಸಮುದಾಯಕ್ಕೆ ಆಧುನಿಕ ಶಿಕ್ಷಣ ಕೊಡುವ ಮೂಲಕ ಆಧುನಿಕತೆಯನ್ನು ಪರಿಚಯಿಸುವ ಪ್ರಯತ್ನ ಅವರಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆಯನ್ನೂ, ತಮ್ಮ ಮೇಲೆ ಹೇರಲಾಗಿರುವ ಹೊರಗಿನವರ ಆಳ್ವಿಕೆಯನ್ನು ಪ್ರತಿಭಟಿಸುವ ಧೈರ್ಯವನ್ನೂ ನೀಡುವುದು ಭಾರತದ ಮಟ್ಟಿಗೂ ನಿಜವಾದ ಸಂಗತಿ. ಲೇರಿಯೋಂಕನೆಂಬ ಮಾಸುಯಿ ಬುಡಕಟ್ಟಿನ ಹುಡುಗನ ಆತ್ಮಕತೆಯಂತೆ ಸಾಗುವ ಈ ಬದುಕಿನ ಪಯಣ ಕೀನ್ಯಾ, ನೈರೋಬಿಯಂಥ ನಗರಗಳವರೆಗೆ, ಬಹುಕಾಲದಿಂದ ಪರಕೀಯರ ಆಡಳಿತದಲ್ಲಿದ್ದವರು ತಮ್ಮನ್ನು ತಾವೇ ನೋಡಿಕೊಳ್ಳುವ ಸಾಮರ್ಥ್ಯ ಪಡೆದಿರುವುದಾಗಿ ಹೇಳಿಕೊಳ್ಳುವವರೆಗೆ ಮುಂದುವರೆದಿದೆ. ಕಾಡಿನ ಹುಡುಗನ ಓದಿನ ಹಾದಿಯ ಮೂಲಕ ಒಂದು ಪ್ರಾದೇಶಿಕ ಸಮುದಾಯ ಪರಕೀಯರ ಆಡಳಿತ ಎದುರು ಸ್ವಾತಂತ್ರ್ಯಕ್ಕಾಗಿ ಎಚ್ಚೆತ್ತುಕೊಳ್ಳುವ ಪರಿಯನ್ನೂ ಇಲ್ಲಿ ಗಮನಿಸಬಹುದಾಗಿದೆ.

ರಸ್ತೆ ಸೌಲಭ್ಯ, ವಾಹನ ಸಂಚಾರಗಳ ಅರಿವು ಇರುವವರಿಗೆ ಇಡೀ ದಿನ ಮತ್ತು ರಾತ್ರಿಯೆಲ್ಲ ನಡೆಯುತ್ತಲೇ ಹಿಂದೆಂದೂ ನೋಡದ ಊರನ್ನು ಪತ್ತೆ ಮಾಡುವ ಲೇರಿಯೋಂಕನ ಸಾಹಸ ನಮ್ಮ ಜಾನಪದ ಕಥೆಗಳ ಸಾಹಸಿ ರಾಜಕುಮಾರರ ಕಥೆಗಳನ್ನು ನೆನಪಿಸಬಲ್ಲದು. ಒಂದು ಕೈಯಲ್ಲಿ ಭರ್ಜಿಯನ್ನೂ ಇನ್ನೊಂದು ಕೈಯಲ್ಲಿ ಪುಸ್ತಕವನ್ನೂ ಹಿಡಿದುಕೊಂಡು ಸಮತೋಲನ ಕಾಯ್ದುಕೊಳ್ಳುವುದು ಸಾಧ್ಯ ಎಂಬುದು ಲೇರಿಯೋಂಕ ಮತ್ತು ಲಿವಿಂಗ್ಸ್ಟೋನ್ ಪಾತ್ರಗಳ ಮೂಲಕ ಪ್ರತಿಪಾದಿಸಲಾಗಿದ್ದರೂ ಈ ಕಥಾನಕ ಅದಕ್ಕಿಂತಲೂ ಮುಂದೆ ಸಾಗಿ ತಳ ಸಮುದಾಯ ಶಿಕ್ಷಣದ ಮೂಲಕ ಬದಲಾವಣೆಗೆ ಸ್ಪಂದಿಸಲು ಸಿದ್ಧವಾಗುವ ಪರಿಯನ್ನು ಬಿಚ್ಚಿಡುತ್ತದೆ.

ವಿಷದ ಹಾವಿನಿಂದ ಕಚ್ಚಿಸಿಕೊಂಡು ಗಿಡಮೂಲಿಕೆ ಮದ್ದಿನಿಂದ ಗುಣವಾಗುವ, ಹೆಬ್ಬಾವಿನ ಹೊಟ್ಟೆ ಸೇರುವ ಸ್ಥಿತಿಯಲ್ಲಿದ್ದ ವ್ಯಕ್ತಿ ಬಚಾವಾಗಿ ಆಸ್ಪತ್ರೆ ಸೇರಿಕೊಳ್ಳುವಂತಹ ರೋಚಕ ಸನ್ನಿವೇಶಗಳೂ ಇಲ್ಲಿವೆ. ಮಾಸುಯಿ ಬುಡಕಟ್ಟು ಮಾತ್ರವಲ್ಲದೆ ಆಫ್ರಿಕದ ಮೂಲನಿವಾಸಿಗಳ ಆಚರಣೆ, ನಂಬಿಕೆ, ನಡವಳಿಕೆ, ಸಂಪ್ರದಾಯ, ಕುಟುಂಬ ವ್ಯವಸ್ಥೆ, ಜೀವನ ವಿಧಾನದ ಬಗೆಗೂ ಇಲ್ಲಿ ವಿವರಗಳಿವೆ. ಆಫ್ರಿಕಾದ ಕಾಡುಗಳಲ್ಲಿ ನಡೆದಿರುವ ಈ ಕಥಾನಕ ಅನೇಕ ವಿವರಗಳಲ್ಲಿ ಮಲೆನಾಡಿನ ಚಿತ್ರಗಳನ್ನೂ ಕಟ್ಟಿಕೊಡುತ್ತದೆ.

ಲಕ್ಷ್ಮಣ ಕೊಡಸೆ

ಶೀರ್ಷಿಕೆ: ಲೇರಿಯೋಂಕ ಲೇಖಕರು: ಮೂಲ: ಕೀನ್ಯಾ ಕಾದಂಬರಿಕಾರ ಹೆನ್ರಿ ಆರ್. ಓಲೆ ಕುಲೆಟ್ ಕನ್ನಡಕ್ಕೆ: ಪ್ರಶಾಂತ್ ಬೀಚಿ ಪ್ರಕಾಶಕರು: ಛಂದ ಪುಸ್ತಕ ಪುಟಗಳು:250 ಬೆಲೆ:ರೂ.100/-

ಕೃಪೆ : ಪ್ರಜಾವಾಣಿ