ನಿಮ್ಮ ಮಾತುಕತೆಗಳಲ್ಲಿ ಹುದುಗಿದ ಬೆಕ್ಕು
ಸಂಶಯದ ಪಂಜವೆತ್ತಿ
ನನ್ನ ನಂಬಿಕೆಯ ನೀಯತ್ತು ಹಕ್ಕು
ಕೊನೆಗೆ ಸಾಚಾತನವನ್ನು ಪರಚಿ, ಒತ್ತಿ
ನೋವಿಗೆ ಕಣ್ಣು ತುಂಬಿದ್ದರೂ
ಚೆಲ್ಲಿದ ರಕ್ತದಲ್ಲಿ ರಾಷ್ಟ್ರೀಯತೆಯ ಧಾತುಗಳ
ನನ್ನೆದುರಿನಲ್ಲೇ ತನಿಖೆ ಮಾಡುವುದನ್ನು
ಹುಸಿನಗುತ್ತಾ ಎದುರಿಸುವುದಿದೆಯಲ್ಲಾ
ಅದು ಬಲು ಕಷ್ಟದ ಕೆಲಸ
– ಕೆ ಎಸ್ ನಿಸಾರ್ ಅಹ್ಮದ್
ಸಾವಿರಾರು ನೂರಾರು ವರ್ಷಗಳಿಂದ ಬಾಳಿ ಬದುಕಿ ಬಹುತ್ವದ ಭಾರತ ಕಟ್ಟಿದವರಿಗೆ, ಇಲ್ಲಿನ ಮಣ್ಣಿನ ಕಣಕಣದಲ್ಲೂ ರಕ್ತವನ್ನೇ ಬೆವರಾಗಿಸಿದವರಿಗೆ, ಈ ನೆಲದೊಂದಿಗಿನ ಸಂಬಂಧದ ದಾಖಲೆ ಒದಗಿಸಿ ಎಂದು ಕೇಳುವುದೇ ಮೂರ್ಖತನ. ಇಂತಹ ಮೂರ್ಖತನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜಾತಿ, ಧರ್ಮ, ಭಾಷೆ, ಪ್ರದೇಶ, ಲಿಂಗ ಬೇಧಗಳನ್ನು ಮೀರಿ ದೇಶದಾದ್ಯಂತ ಪ್ರತಿಭಟನೆಯ ಕಿಚ್ಚು ಹಬ್ಬಿದೆ. ಸ್ವಾತಂತ್ರ್ಯ ಚಳುವಳಿಯನ್ನು ನೆನಪಿಸುವಂತೆ ಸಾಗರದ ಅಲೆಗಳಂತೆ ಜನ ಮುನ್ನುಗ್ಗುತ್ತಿದ್ದಾರೆ.
ಈ ಶತಮಾನದ ’ಅವಮಾನಿತ ಕಾಲ’ ಎಂದೇ ವ್ಯಾಖ್ಯಾನಿಸಬಹುದಾದ ಈ ಕಾಲದಲ್ಲಿ ಕಾವ್ಯ ಬೀದಿಗೆ ಬರದಿರಲು ಸಾಧ್ಯವೇ ಇಲ್ಲ.
ಕೊಪ್ಪಳದ ಕವಿ ಹಾಗೂ ಪತ್ರಕರ್ತ ಸಿರಾಜ್ ಬಿಸರಳ್ಳಿಯವರು ಇತ್ತೀಚೆಗೆ ನಡೆದ ಆನೆಗೊಂದಿ ಉತ್ಸವದಲ್ಲಿ ತಾವು ರಚಿಸಿದ್ದ ’ನಿನ್ನ ದಾಖಲೆ ಯಾವಾಗ ನೀಡುತ್ತಿ?’ ಎಂ ಕವಿತೆಯೊಂದನ್ನು ಓದಿದರು. ಪ್ರಭುತ್ವದ ಭಕ್ತರು ನೀಡಿದ ದೂರಿನ ಮೇರೆಗೆ ಪೊಲೀಸರು ಕವಿಯ ಮೇಲೆ ಎಫ್ ಐ ಆರ್ ಹಾಕಿದ್ದಾರೆ. ಕವಿಗಳನ್ನು ದೇಶದ್ರೋಹಿಗಳೆಂದು, ಕವಿತೆಗಳನ್ನು ದೇಶದ್ರೋಹದ, ಧರ್ಮದ್ರೋಹದ ಕೃತ್ಯಗಳು ಎಂದು ಪರಿಗಣಿಸುವ ಪರಿಪಾಠ ಇಂದು ನೆನ್ನೆಯದೇನೂ ಅಲ್ಲ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ’ನರಬಲಿ’ ಎಂಬ ಕವಿತೆ ಬರೆದ ದ.ರಾ.ಬೇಂದ್ರೆಯವರನ್ನೂ ಜೈಲಿಗೆ ತಳ್ಳಿತ್ತು ಅಂದಿನ ಬ್ರಿಟಿಶ್ ಸರ್ಕಾರ. ಆ ಮೆಲೆಯೂ ಇಂತ ಪ್ರಕರಣಗಳು ಆಗಾಗ ನಡೆದದ್ದಿದೆ. ಆದರೆ ಪ್ರತಿರೋಧದ ದನಿಗೆ ಮುಖಾಮುಖಿಯಾಗಲು ಬೆದರಿದ ಪ್ರಭುತ್ವ ಇಂದು ಈ ದಾಳಿಯನ್ನು ತೀವ್ರಗೊಳಿಸಿದೆ.
ಒಂದು ಕವಿತೆಯ ಮೇಲೆ ಎಫ್ ಐ ಆರ್ ದಾಖಲಿಸಿದ್ದನ್ನು ಪ್ರತಿಭಟಿಸಿ, ಸಿ.ಎ.ಎ-ಎನ್.ಆರ್.ಸಿ-ಎನ್.ಪಿ.ಆರ್ ಗಳನ್ನು ಪ್ರಶ್ನಿಸುವ, ಪ್ರಭುತ್ವಕ್ಕೆ ಸೆಡ್ಡು ಹೊಡೆಯುವ ಸಾಲು ಸಾಲು ಕವಿತೆಗಳು ಬಂದಿವೆ. ಅಕ್ಷರ ಲೋಕದ ಈ ಸಾತ್ವಿಕ ಪ್ರತಿರೋಧ ಹೇಗಿದೆ ಎಂದರೆ ಸಿರಾಜ್ ಬಿಸರಳ್ಳಿಯವರ ಪದ್ಯ ಕೇವಲ ಎರಡು ದಿನಗಳಲ್ಲಿ ೧೧ ಭಾಷೆಗಳಿಗೆ ಅನುವಾದವಾಗಿ ’ವೈರಲ್ ಆಗಿದೆ. ಈಗಾಗಲೇ ಎನ್‌ಆರ್‌ಸಿ-ಪ್ರತಿರೋಧದ ಸಭೆ, ರ‍್ಯಾಲಿ, ಮೆರವಣಿಗೆಗಳಲ್ಲಿ ಕವಿತೆ ವಾಚನ ಸಾಮಾನ್ಯವಾಗಿದೆ. ಅತ್ಯಂತ ಸೃಜನಶೀಲ ಪೋಸ್ಟರುಗಳು, ಬ್ಯಾನರುಗಳು, ಕಲಾಕೃತಿಗಳು ದೇಶದಾದ್ಯಂತ ಪ್ರತಿರೋಧದ ಭಾಗವಾಗಿ ಬಂದಿವೆ. ಒಟ್ಟಾರೆಯಾಗಿ ಇದನ್ನು ’ಎನ್‌ಆರ್‌ಸಿ ವಿರುದ್ಧ ಕಲಾ ಪ್ರತಿರೋಧ’ ಎಂದು ಕರೆಯಬಹುದಾದಷ್ಟು ನಿಚ್ಚಳವಾದ ಟ್ರೆಂಡ್ ಆಗಿದೆ.
’ನಿನ್ನ ದಾಖಲೆ ಯಾವಾಗ ನೀಡುತ್ತಿ?’ ಇಂತಹ ಕಲಾ ಪ್ರತಿರೋಧದ ಕವಿತೆಗಳ ಸಂಕಲನ. ಇಲ್ಲಿ ಕನ್ನಡದಲ್ಲಿ ಪ್ರಮುಖವಾಗಿ ಎನ್‌ಆರ್‌ಸಿ ಗೆ ಪ್ರತಿರೋಧದ ಹಿನ್ನೆಲೆಯಲ್ಲಿ ಬಂದ ಕವಿತೆಗಳಿವೆ. ಇವಲ್ಲದೆ ಚಳುವಳಿಯ ’ಅಧಿಕೃತ ಗೀತೆ’ಯೇ ಆಗಿರುವ ವರುಣ್ ಗ್ರೋವರ್ ಅವರ ’ಹಮ್ ಕಾಗಜ್ ನಹೀ ದಿಖಾಯೆಂಗೆ’ ಸೇರಿದಂತೆ ಹಿಂದಿ, ಇಂಗ್ಲೀಷ್ ಮತ್ತಿತರ ಭಾಷೆಗಳಲ್ಲಿ ಎನ್.ಆರ್.ಸಿ ಗೆ ಪ್ರತಿರೋಧ ಚಳುವಳಿಯ ಭಾಗವಾಗಿ ಬಂದ ಕೆಲವು ಪ್ರಮುಖ ಕವಿತೆಗಳ ಅನುವಾದಗಳೂ ಇವೆ. ಇಲ್ಲಿರುವ ಕವಿತೆಗಳಲ್ಲಿ ’ನನ್ನ ದಾಖಲೆ ಕೇಳುವ ಮೊದಲು ನಿಮ್ಮ ದಾಖಲೆ ತೋರಿಸಿ’ ಎಂದು ಸವಾಲು ಹಾಕುವ ’ಅವರ’ ಕೆಟ್ಟ ಭೀಕರ ದಾಖಲೆಗಳನ್ನು ಬಯಲಿಗೆಳೆಯುವ ಕವಿತೆಗಳು ಒಂದು ವಿಧ. ನಮ್ಮ ಗುರುತು ದಾಖಲೆಗಳಲ್ಲಿ ಅಲ್ಲ, ನೆಲದಲ್ಲಿ ಹಾಸುಹೊಕ್ಕಾಗಿರುವ ನಮ್ಮ ಬದುಕಿನ ವಿವಿಧ ಆಯಾಮಗಳಲ್ಲಿ ಇದೆ ಎಂದು ದೃಢವಾಗಿ ತಿಳಿಹೇಳುವ ಕವಿತೆಗಳು ಇನ್ನೊಂದು ವಿಧ. ಕವಿತೆಗೆ ಬೆದರಿ ಕೇಸು ಹಾಕುವುದನ್ನು ಮತ್ತಿತರ ದಮನ ಕ್ರಮಗಳನ್ನು ಎದುರಿಸುವ, ಲೇವಡಿ ಮಾಡುವ, ಜನರ ದನಿಯಾಗಬಲ್ಲ ಕಾವ್ಯದ ಶಕ್ತಿಯನ್ನು ಎತ್ತಿ ಹಿಡಿಯುವ ಕವಿತೆಗಳು ಮಗದೊಂದು ವಿಧ. ಇವಲ್ಲದೆ ಹಿಟ್ಟರನ ನಾಜಿವಾದ ಅವನೊಂದಿಗೆ ಸತ್ತಿಲ್ಲ ಎಂಬುದರ ಕುರಿತು ಬರೆದ ಆಡೆನ್ ಅವರ ಚಾರಿತ್ರಿಕ ಕವಿತೆಯ ಅನುವಾದವೂ ಇಲ್ಲಿದೆ. ಸರ್ವಾಧಿಕಾರಿ, ಅದರಲ್ಲೂ ಧರ್ಮದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುವ, ಪ್ರಭುತ್ವಗಳ ದಮನದ ವಿರುದ್ಧ ಚಳುವಳಿಗಳ ಪ್ರತಿರೋಧದ ಗೀತೆಯಾಗಿದ್ದು, ಎನ್‌ಆರ್‌ಸಿ ವಿರುದ್ಧ ಚಳುವಳಿಯಲ್ಲೂ ವ್ಯಾಪಕವಾಗಿ ಕೇಳಿ ಬಂದಿರುವ ಫೈಜ್ ಅಹ್ಮದ್ ಫೈಜ್ ಅವರ ’ಹಮ್ ದೇಖೇಂಗೆ’ಯ ಅನುವಾದವೂ ಇದೆ. ಇವಲ್ಲದೆ ಪ್ರತಿರೋಧದ ಭಾಗವಾಗಿ ಬಂದ ಪೋಸ್ಟರುಗಳು, ಕಲಾಕೃತಿಗಳು ಇಲ್ಲಿವೆ.
ಶೀರ್ಷಿಕೆ: ನಿನ್ನ ದಾಖಲೆ ಯಾವಾಗ ನೀಡುತ್ತೀ? ಎನ್ ಆರ್ ಸಿ ಗೆ ಕಲಾ ಪ್ರತಿರೋಧ ಸಂಪಾದಕರು ಯಮುನಾ ಗಾಂವ್ಕರ್ ಪ್ರಕಾಶಕರು ಕ್ರಿಯಾ ಮಾಧ್ಯಮ ಪ್ರೈ.ಲಿ. ಪುಟಗಳು:64 ಬೆಲೆ: ರೂ.50/- ಪ್ರಕಟಣಾ ವರ್ಷ:2020
Filed under: ಕಲೆ, ಕಾವ್ಯ-ಕವನ | Tagged: ಕೆ.ಎಸ್.ನಿಸಾರ್ ಅಹ್ಮದ್, ಸಿರಾಜ್ ಬಿಸರಳ್ಳಿ, ಹಮ್ ದೇಖೇಂಗೆ | Leave a comment »