ಸಫ್ದರ್ ಹಾಶ್ಮಿಯ ಸಾವು ಮತ್ತು ಬದುಕಿನ ಕುರಿತಾದ ‘ಹಲ್ಲಾಬೋಲ್’ ಪುಸ್ತಕವು ಅಕ್ಟೋಬರ್ 30 ರಂದು ಸಂಜೆ 5 ಗಂಟೆಗೆ ಬಿಡುಗಡೆಯಾಗುತ್ತಿದೆ. ಸುಧನ್ವ ದೇಶಪಾಂಡೆಯವರ ಮೂಲಕೃತಿಯನ್ನು ಕನ್ನಡಕ್ಕೆ ಎಂ.ಜಿ.ವೆಂಕಟೇಶ್ ಅನುವಾದಿಸಿದ್ದಾರೆ. ಕ್ರಿಯಾ ಮಾಧ್ಯಮ ಪುಸ್ತಕವನ್ನು ಹೊರತರುತ್ತಿದೆ. ಖ್ಯಾತ ಚಲನಚಿತ್ರ ನಟ ನಸೀರುದ್ದೀನ್ ಶಾ ಬಿಡುಗಡೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಪುಸ್ತಕದ ಕುರಿತು ಹೊಳಹು ನೀಡುವ ಖ್ಯಾತ ಲೇಖಕ ಬೊಳುವಾರು ಮಹ್ಮದ್ ಕುಂಞ ಪುಸ್ತಕಕ್ಕೆ ಬರೆದ ಮುನ್ನುಡಿ
ಚಂದವನ್ನು ಕೊಂದ ಬಳಿಕ…
`ನಾವು ಪಯಣಿಸಬೇಕಾಗಿರುವ ಬಸ್ಸು,
ಒಂದಲ್ಲ ಒಂದು ದಿನ, ಸಮಯಕ್ಕೆ ಸರಿಯಾಗಿ ಬಂದೇ ಬರಲಿದೆ’
`ನಿಮ್ಮ ಒಬ್ಬರು ಆ ರಸ್ತೆಯಲ್ಲಿ ಸಾಯುತ್ತಿದ್ದಾರೆ. ಅಲ್ಲಿ ಎಲ್ಲ ಕಡೆಗಳಲ್ಲೂ ಹೆಣಗಳು ಬಿದ್ದಿವೆ. ಐದು ಹೆಣಗಳು..!’ ಹೆಣ್ಣು ಮಗಳೊಬ್ಬಳು, ನಾವು ಬೀದಿನಾಟಕ ಪ್ರದರ್ಶಿಸಿದ್ದ ಜಾಗದತ್ತ ಕೈ ತೋರಿಸುತ್ತಾ ಆತಂಕದಿAದ ಹೇಳಿದ್ದಳು. ಸಿ.ಐ.ಟಿ.ಯು. ಕಚೇರಿಯನ್ನು `ಅವರು’ ಧ್ವಂಸ ಮಾಡುತ್ತಿರುವುದನ್ನು ಕಣ್ಣಾರೆ ಕಂಡಿದ್ದರೂ, ಕೊಂದಿದ್ದಾರೆ ಎಂಬುದನ್ನು ನಂಬಲು ಸಾಧ್ಯವಾಗಿದ್ದಿರಲಿಲ್ಲ. ಅದೂ ಐದು ಹೆಣಗಳು! ಯಾಕೋ ಉತ್ಪ್ರೇಕ್ಷೆ ಅನ್ನಿಸಿತ್ತು. ಅಲ್ಲಿಗೆ ಹೋಗಿ ನೋಡಲು ನಿರ್ಧರಿಸಿದೆವು. ಬ್ರಿಜೇಶ್ ಮುಂದೆ ಹೊರಟ. ಅವನ ಹಿಂದೆ ನಾನು, ನನ್ನ ಹಿಂದೆ ಬಿಸ್ವಜೀತ್. ಬ್ರಿಜೇಶನಿಗೆ ಅಲ್ಲೇನೋ ಕಂಡಿರಬೇಕು. ಬಾಣದಂತೆ ಚಿಮ್ಮಿದ. ಅವನೇಕೆ ಹಾಗೆ ಓಡಿದನೆಂಬುದು ಅರ್ಥವಾಗದೆ, ನಾನೂ ಅತ್ತ ಧಾವಿಸಿದೆ. ಅವನು ಮೂಲೆಯಲ್ಲಿ ತಿರುಗಿದ. ನಾನೂ ತಿರುಗಿದೆ. ಅವನು ನೆಲದಲ್ಲಿ ಬಿದ್ದಿದ್ದ ಮನುಷ್ಯನೊಬ್ಬನ ಬಳಿ ನಿಂತುಬಿಟ್ಟಿದ್ದ. ಬಿದ್ದಿದ್ದವನು ನಮ್ಮ ಕಲಾವಿದರಲ್ಲಿ ಒಬ್ಬನಾದ ವಿನೋದ್’ನಂತೆ ಕಾಣಿಸಿದ್ದ ಒಂದು ಕ್ಷಣ; ಅಲ್ಲ. ಆನಂತರ ಕಾಣಿಸಿದ್ದು ಆ ಹಸಿರು ಸ್ವೆಟರ್. ಚಂದದ ಸಫ್ದರ್.’
*******
ಸುಮಾರು ನಾಲ್ಕು ದಶಕಗಳ ಹಿಂದಿನ ಒಂದು ಮಧ್ಯಾಹ್ನದ ಹೊತ್ತು. ಚರಣ ಸಿಂಗರ ಪ್ರಧಾನಿತ್ವದ ಸುಡುವ ತಿಂಗಳು ಎಂಬ ನೆನಪು. ದೆಹಲಿಯ ಆರ್.ಕೆ. ಪುರಂ’ನಲ್ಲಿರುವ ಕರ್ನಾಟಕ ಸಂಘದ ಬಳಿಯಿದ್ದ ಬಸ್ ನಿಲ್ದಾಣದಲ್ಲಿ ನಿಂತಿದ್ದೆ. ನನ್ನ ಎಡಬಲಗಳಲ್ಲಿ ಸುಮಾರು ಒಂದು ಹತ್ತು ಮಂದಿ, ಕತ್ತುಗಳನ್ನೆತ್ತಿ ಅತ್ತಿತ್ತ ನೋಡುತ್ತಾ, `ಇಸ್ಕಿ ಮಾ.., ಯೇ ದೇಶ್ ಕಭೀಭೀ ಸುಧರ್ನೇವಾಲೀ ನಹೀ..’ ಎಂದೆಲ್ಲ ಗೊಣಗುತ್ತಾ, ಬಾರದ ಬಸ್ಸುಗಳಿಗೆ ಶಾಪ ಹಾಕುತ್ತಿದ್ದರು. ಅಷ್ಟರಲ್ಲಿ ವಿದ್ಯಾರ್ಥಿಗಳಂತೆ ಕಾಣಿಸುತ್ತಿದ್ದ ಒಂದಷ್ಟು ಹುಡುಗ ಹುಡುಗಿಯರು ಆಕಾಶದಿಂದ ಉದುರಿ ಬಿದ್ದವರಂತೆ ನಮ್ಮೆದುರು ಕಾಣಿಸಿಕೊಂಡಾಗ, ಪಕ್ಕದಲ್ಲಿ ನಿಂತಿದ್ದ ವಯಸ್ಸಾದ ಮಹಿಳೆಯೊಬ್ಬಳು, `ಓಹ್..! ಖುದುರತ್ಕೇ ಫರಿಸ್ತೇ ಯಹಾಂ ಭೀ ಆಗಯೇ..’ ಎಂದು ಉದ್ಗರಿಸಿದ್ದಳು! ನಾನು ಅಚ್ಚರಿಯಿಂದ ಆಕೆಯತ್ತ ಪ್ರಶ್ನೆಯಂತೆ ಬಾಗಿದಾಗ, `ತುಮ್ ದೇಖ್ತೇ ರಹೋ.., ಯೇ ಬಚ್ಚೋಂಕೋ ಜಾದಾ ಉಮರ್ ದೇನೇಕೇ ಲಿಯೇ ಈಶ್ವರ್ ಸೇ ದುವಾ ಕರೋ..’ ಎಂದಿದ್ದಳು.
`ನಾವು ನಿಮ್ಮೆದುರು ಒಂದು ನಾಟಕ ಆಡಿ ತೋರಿಸಲಿದ್ದೇವೆ. ದಯವಿಟ್ಟು ನೀವೆಲ್ಲ ಸಹಕರಿಸಬೇಕು..’ ಎತ್ತರದ ಸಣಕಲು ಯುವಕನೊಬ್ಬ ಗಟ್ಟಿಯಾಗಿ ಹೇಳುತ್ತಿದ್ದಂತೆಯೇ ಮತ್ತಿಬ್ಬರು ಹುಡುಗರು, `ಜನನಾಟ್ಯ ಮಂಚ್’ ಎಂದು ಹಿಂದಿಯಲ್ಲಿ ಬರೆದಿದ್ದ ಎರಡು ಮಾರು ಅಗಲದ ಬ್ಯಾನರ್ ಹಿಡಿದುಕೊಂಡು ಬಂದರು. ಹುಡುಗಿಯೊಬ್ಬಳು ಡಿಟಿಸಿ (ದೆಹಲಿ ಸಾರಿಗೆ..?) ಎಂದು ಬರೆದಿದ್ದ ಫಲಕವೊಂದನ್ನು ಹಿಡಿದು ನಿಂತಳು. ಅವಳ ಎಡಬಲದಲ್ಲಿ ಬಂದು ನಿಂತ ಐದಾರು ಹುಡುಗರು. `ನಾವು ಪಯಣಿಸಬೇಕಾಗಿರುವ ಬಸ್ ಒಂದಲ್ಲ ಒಂದು ದಿನ ಸಮಯಕ್ಕೆ ಸರಿಯಾಗಿ ಬಂದೇ ಬರಲಿದೆ.’ ಎಂದು ಗಟ್ಟಿಯಾಗಿ ಹೇಳಿದಾಗ, ತಮ್ಮ ತಮ್ಮ ಬಸ್ಸುಗಳಿಗಾಗಿ ಕಾತರಿಸುತ್ತಿದ್ದ ನನ್ನಂತಹ ಪ್ರಯಾಣಿಕರೆಲ್ಲ, ಎಲ್ಲವನ್ನೂ ಮರೆತು `ಡೀಟೀಸೀ ಕಾ ದಾಂದಲೀ’ ನಾಟಕದ ಪಾತ್ರಗಳಾಗಿ ಬಿಟ್ಟಿದ್ದೆವು.
*********
ನಲುವತ್ತು ವರ್ಷಗಳ ಹಿಂದೆ (1979) ದೆಹಲಿಯ `ಜನನಾಟ್ಯ ಮಂಚ’ವನ್ನು ಕನ್ನಡ ನಾಡಿಗೆ ಪರಿಚಯಿಸಿದವರು, `ಸಮುದಾಯ’ ಸಂಘಟನೆಯ ರೂವಾರಿಗಳಲ್ಲೊಬ್ಬರಾಗಿದ್ದ ಎಸ್. ಮಾಲತಿಯವರು. ಇಂದಿನ ದಿನಗಳಲ್ಲಿ ಕೆಲವರಿಗೆ ಬಿಸಿತುಪ್ಪದಂತಾಗಿರುವ, ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಹುಡುಗ ಹುಡುಗಿಯರನ್ನು, ತಾವು ಸಂಪಾದಿಸುತ್ತಿದ್ದ `ಸಮುದಾಯ ವಾರ್ತಾಪತ್ರ’ದ `ಮಂಚ’ದಲ್ಲಿರಿಸಿ ಜೋಗುಳ ಹಾಡಿದ್ದ ತಾಯಿ ಅವರು.
ಮಾತುಗಳಿಂದಲೇ ಮಂಟಪ ಕಟ್ಟುವ ಬೀದಿ ನಾಟಕದ ಮಾತುಗಳಿಗೆ ವ್ಯಾಕರಣದ ಹಂಗಿಲ್ಲ. ಮಾತುಗಳು ನಾಟಕವಾಗಿ ಬೆಳೆಯುವುದು ಅಭಿನಯಿಸುವವರ ಬದುಕಿನ ಅನುಭವಗಳಿಂದ. ಅದೊಂದು ಸಮರಶೀಲ ರಾಜಕೀಯದ `ಪ್ರತಿಭಟನಾ ರಂಗಭೂಮಿ’. ರಾಜಕೀಯ ಅಥವಾ ಪ್ರತಿಭಟನೆ ಎಂದ ಕೂಡಲೇ ಮೂಗು ಮುರಿಯಬೇಕಾಗಿಲ್ಲ. ಪ್ರಜಾಪ್ರಭುತ್ವ ಉಳಿಯುವುದು ಮತ್ತು ಬೆಳೆಯುವುದು ಪ್ರಜೆಪರವಾಗಿರುವ ರಾಜಕೀಯ ಪ್ರತಿಭಟನೆಗಳಿಂದಲೇ. ಸಫ್ದರ್ ಹೇಳುವಂತೆ, `ಪರಿಚಿತ ವಸ್ತುಗಳಿಂದಲೇ ಭೀತಿಗೊಳಿಸುವ ಬೀದಿ ನಾಟಕಗಳು ಸಾಕ್ಷ್ಯಚಿತ್ರಗಳಂತೆ ಸಂಕ್ಷಿಪ್ತ.’ ಅವುಗಳ ಪರಿಣಾಮಗಳು ಹೊರನೋಟದಲ್ಲಿ ಭಾವನಾತ್ಮಕವಾಗಿ ಕಾಣಿಸಿದರೂ ಅವು ತರ್ಕಬದ್ಧ. ಸೂಕ್ಷ್ಮವಾದ ಅಥವಾ ಆಳವಾದ ವಿಶ್ಲೇಷಣೆಗಳು ಬೀದಿನಾಟಕಗಳಲ್ಲಿ ಇರಲೇಬೇಕೆಂದಿಲ್ಲ. ಆದ್ದರಿಂದಲೇ ಅವು ಸಾಮಾನ್ಯ ಪ್ರೇಕ್ಷಕರ ಮನಸ್ಸುಗಳೊಳಗೆ ನೇರವಾಗಿ ನುಗ್ಗುತ್ತವೆ ಮತ್ತು ಬಹಳ ಕಾಲ ಕಾಡುತ್ತವೆ. ತಮ್ಮ ಸುತ್ತಮುತ್ತ ಘಟಿಸುತ್ತಿರುವ ಸಮಕಾಲೀನ ಸಂಗತಿಗಳಿಗೆ ಪ್ರೇಕ್ಷಕರ ನಿಲುವುಗಳನ್ನು ರೂಪಿಸುತ್ತವೆ. ಸಾಂಸ್ಕೃತಿಕ ಹಸಿವುನಿಂದ ಕೂಡಿರುವ ಜನತೆಗೆ ಆರೋಗ್ಯಕರ ಮನರಂಜನೆಯನ್ನೂ ಒದಗಿಸುತ್ತವೆ. ಅಧ್ಬುತ ಮತ್ತು ತಮಾಷೆಗಳು ಸಕಾಲಿಕವಾಗಿ ಪ್ರಕಟಗೊಳ್ಳುವುದೇ ಬೀದಿ ನಾಟಕಗಳ ಹೆಗ್ಗಳಿಕೆ.
ಬೇರೆ ಪ್ರದರ್ಶನ ಪ್ರಕಾರಗಳಿಗೆ ತೀರಾ ಅನಿವಾರ್ಯವೇನೂ ಆಗಿರದ ಶಿಸ್ತನ್ನು ಬೀದಿನಾಟಕಗಳು ಹೆಚ್ಚಾಗಿ ಬಯಸುವುದರಿಂದಲೇ ಇರಬೇಕು, ಅವು ಯಾವನೇ `ಸ್ಟಾರ್’ಗೂ ಮೇಲೇರುವ ಏಣಿಯಾಗಲಿಲ್ಲ. ಹಾಗೆಂದು ಬೀದಿನಾಟಕಗಳು ಪ್ರೊಸೇನಿಯಮ್ ನಾಟಕಗಳ ವಿರುದ್ಧದ ಬಂಡಾಯವೆಂಬಂತೆಯೂ ಕಾಣಿಸಿಕೊಳ್ಳಲಿಲ್ಲ. ಹಾಗಾಗಿರುತ್ತಿದ್ದರೆ, ಕನ್ನಡ ನಾಟಕಗಳಿಗೆ ಹೊಸದಿಕ್ಕು ಕೊಟ್ಟ `ಸಮುದಾಯ’ದ ಯಶಸ್ವೀ ನಾಟಕಗಳಾದ ಹುತ್ತವ ಬಡಿದರೆ, ತಾಯಿ, ಗೆಲಿಲಿಯೋ’ಗಳ ಜೊತೆಯಲ್ಲೇ `ಬೆಲ್ಚಿ’ ಬೀದಿ ನಾಟಕವು 2500 ಪ್ರದರ್ಶನಗಳನ್ನು ಕಾಣಲು ಸಾಧ್ಯವಾಗುತ್ತಿರಲಿಲ್ಲ. ಈ ಎಲ್ಲ ಕಾರಣಗಳಿಂದಾಗಿಯೇ ಕನ್ನಡದ ರಂಗ ಚಟುವಟಿಕೆಗಳು `ಜನಪರ ಚಳುವಳಿ’ಗಳತ್ತ ಹೊರಳಿಕೊಂಡವು. ಬಾದಲ್ ಸರ್ಕಾರ್ ಅವರ ಮುಕ್ತ ರಂಗಭೂಮಿ ಕನ್ನಡ ನೆಲಕ್ಕೆ ಕಾಲಿಟ್ಟದ್ದು ಆಗ. ಸಾವಿರಾರು ಪ್ರದರ್ಶನಗಳನ್ನು ಕಂಡ ಬೀದಿನಾಟಕಗಳಾದ ಬೆಲ್ಚಿ, ಪತ್ರೆ ಸಂಗಪ್ಪನ ಕೊಲೆ, ಮೆಶೀನ್, ಆಲಿಘರ್, ಹತ್ಯಾರೇ’ಗಳು ಕನ್ನಡ ನಾಡಿನ ಮನೆಯಂಗಳದ ಮಾತುಗಳಾದದ್ದು ಆಗ. ಈ ಎಲ್ಲದರ ಬೆನ್ನ ಹಿಂದೆಯೂ, `ಸತ್ಯವನ್ನಷ್ಟೇ ಹೇಳುವೆ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ’ ಎಂದು ನಡುಬೀದಿಯ ನ್ಯಾಯಾಲಯದಲ್ಲಿ ಪ್ರಮಾಣ ಮಾಡುತ್ತಿದ್ದ ಮಾತ್ರವಲ್ಲ, ಪ್ರೇಕ್ಷಕರಿಂದಲೂ ಪ್ರಮಾಣ ಮಾಡಿಸುತ್ತಿದ್ದ `ಸಫ್ದರ್’ ಎಂಬ ಚಂದದ ಹುಡುಗನ `ಹಲ್ಲಾ ಬೋಲ್’ ಪ್ರಭಾವ ಎದ್ದು ಕಾಣಿಸುತ್ತದೆ.
ಸುಧನ್ವ ದೇಶಪಾಂಡೆಯವರು, ತಮ್ಮ `ಹಲ್ಲಾ ಬೋಲ್’ ಕೃತಿರಚನೆಗಾಗಿ ಗೆಳೆಯ ಸಫ್ದರ್ ಹಾಶ್ಮಿಯ ಜೊತೆಗಿದ್ದ, ಕನ್ನಡ ನಾಟಕಾಸಕ್ತರಲ್ಲಿ ಕೆಲವರಿಗಾದರೂ ಪರಿಚಯವಿರಬಹುದಾದ, ಆದಿತ್ಯ ನಿಗಮ್, ಬಿಜೇಂದರ್ ಸಿಂಗ್, ಬೃಂದಾ ಕಾರೆಟ್, ಕಾಜಲ್ ಘೋಷ್, ಮಲಯಶ್ರೀ ಹಾಶ್ಮಿ, ಸುಭೋದ್ ವರ್ಮಾ, ಕಮಲಾ ಭಾಸಿನ್, ಸೀತಾರಾಮ್ ಯೆಚೂರಿ.. ಹೀಗೆ ಹಲವರ ನೆನಪುಗಳನ್ನೂ ಬಳಸಿಕೊಂಡಿದ್ದಾರೆ. ದೆಹಲಿಯ `ವೈಕಿಂಗ್’ ನವರು, `ಫಿಫ್ತ್ ಪ್ಲೇಮ್’ ಎಂಬ ಹೆಸರಲ್ಲಿ ಪ್ರಕಟಿಸಿದ್ದ, ಸಫ್ದರ್ ತಾಯಿ ಖಮರ್ ಅಜಾದ್ ಹಾಶ್ಮಿಯವರ `ಪಾಂಚ್ವಾ ಚಿರಾಗ್’ ಹಾಗೂ ಹಬೀಬ್ ತನ್ವೀರ್ ಅವರ `ಸಫ್ದರ್ ನೆನಪುಗಳು’ ಕೃತಿಗಳ ಮಾಹಿತಿಗಳೂ ಇವೆ. `ನಮಗೆ ತಿಳಿದಿರುವುದನ್ನಷ್ಟೇ ನಮ್ಮಿಂದ ಊಹಿಸಿಕೊಳ್ಳಲು ಸಾಧ್ಯ’ ಎಂಬ ಶೆಲ್ಲಿಯ ಮಾತುಗಳೂ ಇಲ್ಲಿ ಪ್ರಸ್ತುತ. ಪುಸ್ತಕವೊಂದು ಕವರ್ ಪೇಜ್’ನಲ್ಲಿರುವ ಲೇಖಕರ ಹೆಸರನ್ನು ಅದೆಷ್ಟೇ `ಟಾಂ ಟಾಂ’ ಮಾಡಿದರೂ, ಅದೊಂದು ಸಾಮೂಹಿಕ ಸೃಷ್ಟಿಯೇ ಆಗಿರುತ್ತದೆ. ರಂಗಭೂಮಿಯಂತೂ ಒಬ್ಬನ ಖಾಸಗಿ ಸೊತ್ತಾಗಲು ಸಾಧ್ಯವೇ ಇಲ್ಲ. . `ಜನನಾಟ್ಯ ಮಂಚ’ ಇಲ್ಲದಿರುತ್ತಿದ್ದರೆ ಅಥವಾ `ಜನಮ್’ ಇಲ್ಲದಿರುತ್ತಿದ್ದರೆ `ಸಫ್ದರ್’ ಇರುತ್ತಿರಲಿಲ್ಲ.
ಈ ದೇಶದ ನಡುಬೀದಿಯಲ್ಲಿ ಕೊಲೆಯಾದ ಕಲೆಗಾರನೊಬ್ಬನ ಸಾವು ಮತ್ತು ಬದುಕಿನ ಕತೆಯನ್ನು (ಗಮನಿಸಬೇಕು – ಬದುಕು ಮತ್ತು ಸಾವಿನ ಕತೆಯಲ್ಲ), ಕಣ್ಣಿಗೆ ಕಟ್ಟುವಂತೆ ದಾಖಲಿಸಿದ್ದ ಸುಧನ್ವ ದೇಶಪಾಂಡೆಯವರ ಆಂಗ್ಲ ಭಾಷೆಯ `ಹಲ್ಲಾ ಬೋಲ್’ ಕೃತಿಯ ಕನ್ನಡ ರೂಪ ಇದು. ಇದರಲ್ಲಿ, ಸಫ್ದರ್ ಹಾಶ್ಮಿಯವರ ಸಾವಿನ ಕತೆಯನ್ನು, ಅವರ ಬದುಕಿನ ಕತೆಗಳ ಜೊತೆಗೆ ಹೆಣೆಯಲಾಗಿದೆ. ಬೀದಿ ನಾಟಕಗಳಂತೆಯೇ ಪದ-ವ್ಯಾಕರಣಗಳ ಹಂಗಿಲ್ಲದೆ, ನೆನಪುಗಳ ಬುಟ್ಟಿಗಳನ್ನು ರಸ್ತೆಬದಿಯ ಅಂಗಡಿಗಳಲ್ಲಿ ತೆರೆದಿರಿಸುವ ಪರಿಯಲ್ಲಿ ಜೋಡಿಸಿಕೊಂಡ ಮಾತುಗಳನ್ನು ಮತ್ತೊಂದು ಭಾಷೆಯಲ್ಲಿ ಕಟ್ಟಿಕೊಡುವುದು ಬಲು ಕಷ್ಟದ ಕೆಲಸ. ಕಳೆದ ನಾಲ್ಕೈದು ದಶಕಗಳಿಂದ `ಸಮುದಾಯ’ ಸಂಘಟನೆಯ ಭಾಗವೇ ಆಗಿರುವ ಕಾರಣಕ್ಕೋ ಏನೋ, ಯಾವುದೇ ತಡವರಿಕೆಯಿಲ್ಲದೆ ಅವುಗಳನ್ನೆಲ್ಲ `ಹಲ್ಲಾ ಬೋಲ್’ ಎಂದು ಕನ್ನಡದಲ್ಲಿ ಹೆಣೆದಿರುವ ಸಂಗಾತಿಯ ಸಾಹಸಕ್ಕೆ `ಭಳಿರೇ’ ಎನ್ನುವೆ.
`ಸಫ್ದರ್’ ಎಂಬ ಹೆಸರಲ್ಲಿ ಓಡಾಡುತ್ತಿದ್ದ, ರಸ್ತೆ ಬದಿಯ ಗಾಡಿಗಳೆದುರು ಚಹ ಹೀರುತ್ತಿದ್ದ, ಪಕ್ಕದ ಗಲ್ಲಿಯಲ್ಲಿ ಕಾಣಿಸಿದ್ದವರನ್ನು ಗಟ್ಟಿಧ್ವನಿಯಲ್ಲಿ ಮುಟ್ಟಿ ಮಾತಾಡಿಸುತ್ತಿದ್ದ ಮನುಷ್ಯನೊಬ್ಬನ ಕೆಂಪು ರಕ್ತವನ್ನು ನಡುಬೀದಿಯಲ್ಲಿ ಚೆಲ್ಲಿದ ದೇಶ ನಮ್ಮದು. ಆದರೆ, ದೇಹದೊಂದಿಗೆ ಸಫ್ದರ್ ಕೂಡಾ ಸತ್ತುಹೋಗಬಹುದು ಎಂದು ನಂಬಿದ್ದ ಕೊಲೆಗಾರರಿಗೆ ಸಹಜವಾಗಿ ನಿರಾಸೆಯಾಗಿದೆ. ಸಿಟ್ಟೂ ಬಂದಿದೆ. `ಸಫ್ದರ್ ಚಿಂತನೆ’ಗಳನ್ನು ಮತ್ತೊಮ್ಮೆ ಕೊಲ್ಲುವ ಸಲುವಾಗಿ ಸುಳ್ಳು ಸುಳ್ಳು ಕಾರಣಗಳನ್ನು ಸೃಷ್ಟಿಸಲಾಗುತ್ತಿದೆ. ಇಂತಹ ಹೊತ್ತಲ್ಲಿ, ಒಂದಷ್ಟು ಹೊತ್ತಾದರೂ ಮನುಷ್ಯರಾಗುವಂತೆ ನಮ್ಮನ್ನು ಒತ್ತಾಯಿಸುವ ಈ ನೋವಿನ ಕೃತಿಯನ್ನು ಕನ್ನಡಕ್ಕೆ ಪರಿಚಯಿಸುತ್ತಿರುವ `ಸಮುದಾಯ’ದ ಎಂ.ಜಿ. ವೆಂಕಟೇಶ್ ಅವರ ಹತ್ತಿರದ ಸಂಗಾತಿಗಳಲ್ಲಿ ನಾನೂ ಒಬ್ಬ ಎಂಬುದು ನನಗೂ ಹೆಮ್ಮೆಯ ಸಂಗತಿ.
ಬೊಳುವಾರು ಮಹಮದ್ ಕುಂಞ
ಮೇ 1, 2020
ಹಲ್ಲಾಬೋಲ್ – ಸಫ್ದರ್ ಹಾಶ್ಮಿಯ ಸಾವು ಮತ್ತು ಬದುಕು
ಮೂಲ :ಸುಧನ್ವ ದೇಶಪಾಂಡೆ ಅನುವಾದ : ಎಂ.ಜಿ.ವೆಂಕಟೇಶ್
ಕ್ರಿಯಾ ಮಾಧ್ಯಮ ಪ್ರೈ.ಲಿ. ಪುಟಗಳು:280 ಬೆಲೆ ರೂ.200
ಪ್ರತಿಗಳಿಗಾಗಿ ಸಂಪರ್ಕಿಸಿ 90360 82005, 080-23494488, 9916595916
Filed under: ಜೀವನ-ಚರಿತ್ರೆ/ಕಥನ, ಬಿಡುಗಡೆ | Leave a comment »