ಮೈಸೂರು ಹುಲಿ ಟಿಪ್ಪುಸುಲ್ತಾನ್ ನಿಜವಾಗಿಯೂ ಹೀರೋ ಎಂದು ಸಾಬೀತುಪಡಿಸುವ ಲಾವಣಿಗಳ ಪುಸ್ತಕರೂಪದ ಬಿಡುಗಡೆಗೆ ಸ್ವಾಗತ.

ಇತ್ತೀಚೆಗೆ ನಮ್ಮ ಎಳೆವಯಸ್ಸಿನ `Hero’ ಮೈಸೂರು ಹುಲಿ ಟಿಪ್ಪು ಸುಲ್ತಾನನನ್ನು `Zero’ ಮಾಡುವಲ್ಲಿ ಸತತ ಪ್ರಯತ್ನ ನಡೆಯುತ್ತಿದೆ. ಈ ಪ್ರಯತ್ನದಲ್ಲಿ ಅವರು ಸ್ವಲ್ಪ ಮಟ್ಟಿಗೆ ಯಶಸ್ಸೂ ಕಂಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ನಾನು ನಮ್ಮ ಹೀರೋ ಪರವಾಗಿ ಮಾತನಾಡಲು proof ಇರಬೇಕಲ್ಲಾ. ಆ proof ನಮಗೆ ಇಲ್ಲಿ ಸಿಗುತ್ತದೆ.

ನಮ್ಮ ಹೀರೋ ನಿಜವಾಗಿಯೂ ಹೀರೋನೇ ಅಂತ ಸಾಬೀತುಪಡಿಸುವ ಈ ಲಾವಣಿಗಳನ್ನು ಜನಸಾಮಾನ್ಯರ ನಡುವೆ ಪ್ರಚಾರ ಮಾಡುವ ಕರ್ತವ್ಯ ನಮ್ಮದು.

ಈ ಸಂಕಲನವನ್ನು ಪ್ರಕಟಿಸಿ ನಾವು ನಮ್ಮ ಕರ್ತವ್ಯವನ್ನು ಸ್ವಲ್ಪಮಟ್ಟಿಗೆ ನಿರ್ವಹಿಸಿದ್ದೇನೆ. ಇನ್ನು ಈ ವಿಷಯವನ್ನು ಜನರ ಮಧ್ಯೆ ಪ್ರಚಾರ ಪಡಿಸುವ ಕರ್ತವ್ಯದಲ್ಲಿ ನಮ್ಮ ಜತೆಗೆ ಕೈಗೂಡಿಸಿ, ಪುಸ್ತಕವನ್ನು ಕೊಂಡು ಓದಿ ಇತರರಿಂದಲೂ ಓದಿಸಿ ಎಂದು ಕೇಳಿಕೊಳ್ಳುತ್ತಿದ್ದೇವೆ.

ಮೈಸೂರು ಹುಲಿಯ ಮುಖಕ್ಕೆ ಮಸಿ ಬಳಿಯಲು ಪ್ರಯತ್ನಿಸುವವರು ಆಯೋಜಿಸಿರುವ ಹಾವೇರಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿರೋಧ ಒಡ್ಡಲು ಆಯೋಜಿಸಿರುವ ಜನಸಾಹಿತ್ಯ ಸಮ್ಮೇಳನದಲ್ಲಿ ಈ ಪುಸ್ತಕ ಬಿಡುಗಡೆಯಾಗುತ್ತಿದೆ.

-ವಿಶಾಲಮತಿ (ಕ್ರಿಯಾ ಮಾಧ್ಯಮ ಪ್ರೈ.ಲಿ. ಪರವಾಗಿ)

ಶೀರ್ಷಿಕೆ:ಧೀರ ಟಿಪ್ಪುವಿನ ಲಾವಣಿಗಳು ಸಂಪಾದಕರು: ಲಿಂಗದೇವರು ಹಳೆಮನೆ ಪ್ರಕಟಣೆ:ಕ್ರಿಯಾ ಮಾಧ್ಯಮ ಪ್ರೈ.ಲಿ. ಪುಟಗಳು:80 ಬೆಲೆ:ರೂ80/-

ಮೊದಲ ಪ್ರಕಟಣಾ ವರ್ಷ 2003 ಎರಡನೇ ಪ್ರಕಟಣಾ ವರ್ಷ 2023

ಸಮಾಜದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದ್ದು, ಪ್ರಜಾಸತ್ತಾತ್ಮಕ ಆವರಣವು ಕುಗ್ಗುತ್ತಿದೆ

ಇತ್ತೀಚಿನ ವರ್ಷಗಳಲ್ಲಿ, ಭಾರತದಲ್ಲಿ ಮಾನವಹಕ್ಕು ಹೋರಾಟಗಾರರ ಮೇಲೆ ಹಲ್ಲೆಗಳು ಹೆಚ್ಚಾಗುತ್ತಿದ್ದು, ಅವರನ್ನು ಅಪರಾಧಿಗಳಂತೆ ಚಿತ್ರಿಸಲಾಗುತ್ತಿದೆ. ಸಮಾಜದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದ್ದು, ಪ್ರಜಾಸತ್ತಾತ್ಮಕ ಆವರಣವು ಕುಗ್ಗುತ್ತಿದೆ. ಈ ಬಗ್ಗೆ ನಾಗರಿಕರು, ಸಾಮಾಜಿಕ ಸಂಘಟನೆಗಳು ಆತಂಕಗೊಂಡಿವೆ. ಈ ಹಿನ್ನೆಲೆಯಲ್ಲಿ ’ಕುಗ್ಗುತ್ತಿರುವ ಪ್ರಜಾಸತ್ತಾತ್ಮಕ ಆವರಣ ಕುರಿತ ನಾಗರಿಕ ಆಯೋಗ’ (ಪೀಪಲ್ಸ್ ಕಮಿಷನ್ ಆನ್ ಶ್ರಿಂಕಿಂಗ್ ಡಮಾಕ್ರೆಟಿಕ್ ಸ್ಪೇಸ್ – ಪಿಸಿಎಸ್‌ಡಿಎಸ್) ಎಂಬ ರಾಷ್ಟ್ರ ಮಟ್ಟದ ವೇದಿಕೆಯನ್ನು ಸ್ಥಾಪಿಸಲಾಗಿದೆ.

ಸದಸ್ಯತ್ವವನ್ನು ಆಧರಿಸಿದ ಈ ವೇದಿಕೆಯು, ಪ್ರಾದೇಶಿಕ ಹಂತದಲ್ಲಿ ಹಲವಾರು ಚರ್ಚೆ, ಸಭೆ, ಸಂವಾದಗಳನ್ನು ನಡೆಸಿದ ನಂತರ ೨೦೧೬ರ ಮೇ ೨೧ ಮತ್ತು ೨೨ರಂದು ನವದೆಹಲಿಯಲ್ಲಿ ರಾಷ್ಟ್ರೀಯ ಸಮಾವೇಶವನ್ನು ಏರ್ಪಡಿಸಿತ್ತು. ಅಲ್ಲಿ ವೇದಿಕೆಯ ನಿಯಮಾವಳಿಯನ್ನು ಹಾಗೂ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಅದೇ ಸಮ್ಮೇಳನದಲ್ಲಿ, ಎರಡು ವಿಷಯಗಳ ಕುರಿತು ಜನನ್ಯಾಯಮಂಡಳಿಯನ್ನು ಸ್ಥಾಪಿಸಿ ಸಾಕ್ಷ್ಯ ಸಂಗ್ರಹಿಸಿ, ವರದಿ ಮಾಡಬೇಕು ಎಂದೂ ನಿರ್ಧರಿಸಲಾಯಿತು.

ಶೈಕ್ಷಣಿಕ ಸಂಸ್ಥೆಗಳ ಮೇಲೆ ನಡೆಯುತ್ತಿರುವ ಆಕ್ರಮಣ

ನೈಸರ್ಗಿಕ ಸಂಪನ್ಮೂಲದ ರಕ್ಷಣೆಗೆ ಕೆಲಸ ಮಾಡುತ್ತಿರುವ ಮಾನವ ಹಕ್ಕು ಹೋರಾಟಗಾರರ ಮೇಲೆ ನಡೆಯುತ್ತಿರುವ ಹಲ್ಲೆಗಳು.

ಹೀಗೆ ರೂಪುಗೊಂಡ ’ಭಾರತದಲ್ಲಿ ಶೈಕ್ಷಣಿಕ ಸಂಸ್ಥೆಗಳ ಮೇಲೆ ನಡೆಯುತ್ತಿರುವ ಹಲ್ಲೆ ಕುರಿತು ಜನ ನ್ಯಾಯಮಂಡಳಿ’ ಯ ವರದಿಯಲ್ಲಿ  ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಸೇರಿದಂತೆ ೧೩೦ ಜನರ ಹೇಳಿಕೆಗಳು ಮಾತ್ರವಲ್ಲದೆ ತಜ್ಞರ ಹೇಳಿಕೆಗಳು ಹಾಗೂ ಪರಿಣತರ ಅಭಿಪ್ರಾಯಗಳು ಇವೆ.

ಮೇಲೆ ಸೂಚಿಸಿದ ವರದಿಯ ಸಂಕ್ಷಿಪ್ತ ರೂಪ ಈ ಪುಸ್ತಕ.

ಶಿಕ್ಷಣ ಸಂಸ್ಥೆಗಳ ಮೇಲಿನ ಹಲ್ಲೆಗಳು ಅಂದರೆ ಈ ದೇಶದ ಮುಂದಿನ ಜನಾಂಗ ಅಂದರೆ ನಮ್ಮ ಮಕ್ಕಳ ಭವಿಷ್ಯದ ಮೇಲಿನ ದಾಳಿ.

ನಮ್ಮ ದೇಶದ ಭವಿಷ್ಯದ ಕುರಿತಾಗಿ ಕಾಳಜಿ ಇರುವವರೆಲ್ಲರೂ ಓದ ಬೇಕಾದ ಪುಸ್ತಕ ಇದು.

ಶೀರ್ಷಿಕೆ : ಕ್ಯಾಂಪಸ್ ಕಥನಗಳು – ಹಲ್ಲೆಗಳನ್ನು ಮೆಟ್ಟಿನಿಂತ ಪ್ರತಿರೋಧಗಳು ಅನುವಾದ:ಸತ್ಯಾ ಎಸ್, ನಟರಾಜು ಪ್ರಕಾಶಕರು : ಕ್ರಿಯಾ ಮಾಧ್ಯಮ ಪ್ರೈ.ಲಿ. ಪುಟಗಳು : 112 ಬೆಲೆ:ರೂ.80/- ಪ್ರಕಟಣಾ ವರ್ಷ:  2020

 

ರೈತ ಹುತಾತ್ಮ ದಿನವಾದ ಇಂದು ೩೩ ವರ್ಷಗಳ ಹಿಂದೆ ನರಗುಂದ ನವಲಗುಂದ ರೈತಬಂಡಾಯವನ್ನು ಅದರಲ್ಲಿ ಹುತಾತ್ಮರಾದ ರೈತರನ್ನು ಸ್ಮರಿಸಬೇಕಾದ ದಿನ

cp1915

ರೈತ ಕ್ರಾಂತಿಯ ಆರ್ದ್ರ ನೆನಪು – ನಟರಾಜ (ಪ್ರಜಾವಾಣಿಯಲ್ಲಿ ಪುಸ್ತಕ ವಿಮರ್ಶೆ)

ಶಿಕ್ಷಣ, ವಿಜ್ಞಾನ ಹಾಗೂ ಕೃಷಿ- ಈ ಮೂರೂ ಕ್ಷೇತ್ರಗಳಲ್ಲಿ ಬೇರೆಬೇರೆ ರೂಪಗಳಲ್ಲಿ ಕಾರ್ಯ ನಿರ್ವಹಿಸಿರುವ ಉತ್ತರ ಕರ್ನಾಟಕದ ಬಿ.ಎಸ್.ಸೊಪ್ಪಿನ `ಕಟ್ಟುವ ಕೆಲಸ`ದಲ್ಲಿ ತಮ್ಮನ್ನು ಎಲ್ಲೆಡೆ ಗುರ್ತಿಸಿಕೊಂಡವರು. ಅವರ `ಮಲಪ್ರಭೆಯ ಮಡಿಲಿನಿಂದ ಸಿಡಿದೆದ್ದ ರೈತ` ಕೃತಿ ಕೂಡ ಒಂದರ್ಥದಲ್ಲಿ ಕಟ್ಟುವ ಕೆಲಸವೇ. ಅದು ರೈತ ಇತಿಹಾಸವನ್ನು ಪುನರ್ ರಚಿಸುವ ಕೆಲಸ. ಅನೇಕ ಚಳವಳಿಗಳ ಅಬ್ಬರದಲ್ಲಿ ಮಸುಕಾದ ಮಲಪ್ರಭೆ ತಡಿಯ ಮಣ್ಣಿನ ಮಕ್ಕಳ ಬಂಡಾಯದ ಕಥನವನ್ನು ಸೊಪ್ಪಿನ ಪುಸ್ತಕ ರೂಪದಲ್ಲಿ ದಾಖಲಿಸಿದ್ದಾರೆ.

ಅರವತ್ತರ ದಶಕದಲ್ಲಿ ಆರಂಭವಾದ ಮಲಪ್ರಭಾ ಜಲಾನಯನ ಪ್ರದೇಶದ ನೀರಾವರಿ ಯೋಜನೆ, ಒಂದೂವರೆ ದಶಕದ ನಂತರ ರೈತರ ಹೊಲಗಳಿಗೆ ನೀರು ಹರಿಯುವ ಮೂಲಕ ಕಾರ್ಯರೂಪಕ್ಕೆ ಬಂತು. ಆದರೆ, ನೀರು ಹರಿದ ಮಾತ್ರಕ್ಕೆ ರೈತರ ಬದುಕು ಹಸನಾಗಲಿಲ್ಲ. ಸಾಂಪ್ರದಾಯಿಕ ಕೃಷಿಗೆ ಬದಲಾಗಿ ವಾಣಿಜ್ಯ ಬೆಳೆಗಳಿಗೆ ಹೊರಳಿಕೊಂಡ ರೈತರು ಆರಂಭದಲ್ಲಿ ಯಶಸ್ಸು ಕಂಡರಾದರೂ, ನಂತರದ ವರ್ಷಗಳಲ್ಲಿ ಹಲವು ಸಮಸ್ಯೆಗಳ ಸುಳಿಯಲ್ಲಿ ದಿಕ್ಕುಗೆಟ್ಟರು. ಅವರ ಹತಾಶೆಯ ಉರಿಯೇ 1981ರಲ್ಲಿ ರೂಪುಗೊಂಡ ನವಲಗುಂದ ನರಗುಂದದ ಬಂಡಾಯ.

ರೈತರ ಹಕ್ಕುಗಳ ಪ್ರತಿಪಾದನೆಗಾಗಿ ರೂಪುಗೊಂಡ `ಪ್ರಗತಿಪರ ಜನತಂತ್ರ ರಂಗ` ನರಗುಂದದಿಂದ ಬೆಂಗಳೂರಿನವರೆಗೆ ರೈತರ ಕಾಲ್ನಡಿಗೆ ಜಾಥಾ ಸಂಘಟಿಸಿತು. ರೈತರ ಕೆಲವು ನಿರ್ದಿಷ್ಟ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸುವುದು ಈ ಜಾಥಾದ ಉದ್ದೇಶವಾಗಿತ್ತು. 1981ರ ಜನವರಿ 16ರಂದು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ನರಗುಂದದಲ್ಲಿ ಜಾಥಾಕ್ಕೆ ಹಸಿರುನಿಶಾನೆ ತೋರಿಸಿದರು. ದಾರಿಯುದ್ದಕ್ಕೂ ಬೆಳೆಯುತ್ತಲೇ ಹೋದ ಜಾಥಾ, ಫೆ.5ರಂದು ಬೆಂಗಳೂರು ತಲುಪಿತು. ರಾಜಧಾನಿಯಲ್ಲಿ ಎಲ್ಲಿ ನೋಡಿದರೂ ರೈತರು! ಕಬ್ಬನ್ ಉದ್ಯಾನದಲ್ಲಿ ಸೇರಿದ ಸಭೆಯಲ್ಲಿ ಸುಮಾರು 4 ಲಕ್ಷ ರೈತರು ಭಾಗವಹಿಸಿದ್ದರು. ಬೆಂಗಳೂರಿನ ಜನತೆ, ಮುಖ್ಯವಾಗಿ ಕಾರ್ಮಿಕರು, ಚಳವಳಿ ನಿರತ ರೈತರಿಗೆ ಅಭೂತಪೂರ್ವ ಸ್ವಾಗತ ನೀಡಿದರು. ರೈತರಿಗೆ ಊಟದ ಪೊಟ್ಟಣಗಳನ್ನು ನೀಡಿದ ಕಾರ್ಮಿಕರು ಚಳವಳಿಗೆ ಬೆಂಬಲ ವ್ಯಕ್ತಪಡಿಸಿದರು.

ರೈತರ ಚಳವಳಿ ರಾಜ್ಯ ರಾಜಕಾರಣದ ಮೇಲೂ ಪರಿಣಾಮ ಬೀರಿತು. ಮುಂದಿನ ದಿನಗಳಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬರಲು ಈ ಚಳವಳಿ ಒಂದು ನೆಪವಾಗಿ ಪರಿಣಮಿಸಿತು. ಇದೆಲ್ಲದರ ನಂತರ ರೈತರ ಸಮಸ್ಯೆಗಳೂ ತೀರಿದವಾ? ಅದು ಯಕ್ಷಪ್ರಶ್ನೆ! ಈ ನೆಲದ ರೈತರ ಸಮಸ್ಯೆಗಳು ತೀರುವುದೆಂದರೆ ಅದೊಂದು ಆದರ್ಶ ಸಮಾಜದ ಸೃಷ್ಟಿಯೇ ಸರಿ.

`ಮಲಪ್ರಭೆಯ ಮಡಿಲಿನಿಂದ ಸಿಡಿದೆದ್ದ ರೈತ` ಕೃತಿಯಲ್ಲಿ ಲೇಖಕರು ರೈತರ ಹಲವು ಸಮಸ್ಯೆಗಳನ್ನು ಚರ್ಚಿಸುತ್ತಾರೆ. ಅವು ಎಪ್ಪತ್ತು ಎಂಬತ್ತರ ದಶಕಕ್ಕಷ್ಟೇ ಮೀಸಲಾದ ಸಮಸ್ಯೆಗಳಲ್ಲ, ಇವತ್ತಿನ ರೈತರೂ ಅನುಭವಿಸುತ್ತಿರುವ ಸಮಸ್ಯೆಗಳು. ಸೊಪ್ಪಿನ ಅವರ ಬರವಣಿಗೆಯಲ್ಲಿ ರೈತ ಕಾಳಜಿ ಎದ್ದುಕಾಣಿಸಿದರೂ, ಪುಸ್ತಕದುದ್ದಕ್ಕೂ ಅವರು ಸಮತೋಲನ ಬರವಣಿಗೆಯೊಂದನ್ನು ಸಾಧಿಸಿದ್ದಾರೆ. ಅಂಕಿಅಂಶಗಳ ನೆರವಿನಿಂದ ತಮ್ಮ ವಿಚಾರಗಳಿಗೆ ಪುಷ್ಟಿ ನೀಡಿದ್ದಾರೆ. ಚಳವಳಿಯಲ್ಲಿ ಪಾಲ್ಗೊಂಡವರ ಸಂದರ್ಶನಗಳನ್ನು ಕಲೆಹಾಕಿದ್ದಾರೆ. ಮಲಪ್ರಭೆ ನೀರಾವರಿ ಯೋಜನೆ ಸಾಕಾರಗೊಂಡ ಸಂದರ್ಭದಲ್ಲಿ ಬದಲಾದ ಕೃಷಿ ಸ್ವರೂಪವನ್ನು ಅವರು ವಸ್ತುನಿಷ್ಠವಾಗಿ ಕಾಣಿಸಲು ಪ್ರಯತ್ನಿಸಿದ್ದಾರೆ. ಚಳವಳಿಯ ನಂತರದ ದಿನಗಳಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ರೈತ ಸಂಘಟನೆ ಶಕ್ತಿಯುತವಾಗಿ ಬೆಳವಣಿಗೆ ಹೊಂದದ ವಿಪರ್ಯಾಸವನ್ನು ಲೇಖಕರು ದಾಖಲಿಸುತ್ತಾರೆ. ಆ ಕಾರಣದಿಂದಾಗಿಯೇ, ಈ ಪುಸ್ತಕವನ್ನು ಓದುವಾಗ ವ್ಯವಸ್ಥೆಯ ಬಗ್ಗೆ ರೊಚ್ಚು ಉಂಟಾಗುವಂತೆಯೇ ರೈತರ ಅಮಾಯಕತೆಯ ಬಗ್ಗೆ ಖೇದವೂ ಉಂಟಾಗುತ್ತದೆ.

ರೈತ ಚಳವಳಿಯೂ ಸೇರಿದಂತೆ ನಾಡಿನ ಎಲ್ಲ ಚಳವಳಿಗಳೂ ದಿಕ್ಕು ತಪ್ಪಿರುವ ಸಂದರ್ಭವಿದು. ಇಂಥ ಹೊತ್ತಿನಲ್ಲಿ ಪ್ರಕಟಗೊಂಡಿರುವ `ಮಲಪ್ರಭೆಯ ಮಡಿಲಿನಿಂದ ಸಿಡಿದೆದ್ದ ರೈತ` ಕೃತಿ, ಚರಿತ್ರೆಯ ನೆನಪುಗಳೊಂದಿಗೆ ವರ್ತಮಾನದ ನಡಿಗೆಯ ಬಗ್ಗೆ ಒಂದು ತೋರುದೀಪದಂತೆಯೂ ಕಾಣಿಸುತ್ತದೆ.

ಇದನ್ನು ಪುಸ್ತಕದಲ್ಲಿ ಮುನ್ನುಡಿಯಲ್ಲಿ ಡಾ. ಎಂ. ಚಂದ್ರ ಪೂಜಾರಿ ಅವರು ಸರಿಯಾಗಿ ಗುರ್ತಿಸಿದ್ದಾರೆ: `ಪ್ರತಿಭಟನೆ, ಚಳವಳಿ, ಅನ್ಯಾಯದ ವಿರುದ್ಧದ ಹೋರಾಟ ಇತ್ಯಾದಿಗಳೆಲ್ಲ ಮೌಲ್ಯ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಕರ್ನಾಟಕದ ಯಾವುದೋ ಮೂಲೆಯಲ್ಲಿ ಹೇಳಹೆಸರಿಲ್ಲದ ರೈತರು ರಾಜ್ಯ ರಾಜಕೀಯದ ದಿಕ್ಕುದೆಶೆಯನ್ನು ಬದಲಾಯಿಸುವ ಚಳವಳಿಯನ್ನು ಸಂಘಟಿಸಿದ ಕಥನ ಇಂದಿನ ಅನಿವಾರ್ಯತೆ. ಸೊಪ್ಪಿನ ಅವರ ನರಗುಂದ ನವಲಗುಂದ ರೈತ ಬಂಡಾಯದ ಕಥನ ರಾಜ್ಯ ಅಧಿಕಾರಶಾಹಿಯಿಂದ ಹಿಂಸೆ ಅನುಭವಿಸುವ ಬಹುತೇಕರಿಗೆ ಪ್ರತಿರೋಧಗಳನ್ನು ಕಟ್ಟಿಕೊಳ್ಳಲು ಪ್ರೇರಕ ಶಕ್ತಿಯಾಗಬಹುದು…`.

– ನಟರಾಜ (ಪ್ರಜಾವಾಣಿಯಲ್ಲಿ ಪುಸ್ತಕ ವಿಮರ್ಶೆ)

ಶೀರ್ಷಿಕೆ: ಮಲಪ್ರಭೆಯ ಮಡಿಲಿನಿಂದ ಸಿಡಿದೆದ್ದ ರೈತ ಲೇ: ಬಿ.ಎಸ್.ಸೊಪ್ಪಿನ ಪು: 108; ಬೆ: ರೂ. 70 ಪ್ರ: ಚಿಂತನ ಪುಸ್ತಕ,ನಂ. 405, 1ನೇ ಮುಖ್ಯರಸ್ತೆ, ಡಾಲರ್ಸ್‌ ಕಾಲೋನಿ, ಜೆ.ಪಿ.ನಗರ, ಬೆಂಗಳೂರು- 560 078.

ಗಣಿಯಾಳದಲ್ಲಿ ಸಿಕ್ಕಿಹಾಕಿಕೊಂಡ 33 ಕಾರ್ಮಿಕರನ್ನು ಮೇಲಕ್ಕೆತ್ತಿದ ಅಭೂತಪೂರ್ವ ಘಟನೆಯ ದಾಖಲೆ ಕನ್ನಡದಲ್ಲಿ !

. . .
ರಾಷ್ಟಪತಿ ಬಂದರೆಂಬ ಸುದ್ಧಿ ಕೇಳಿ ಎಲ್ಲಾ ಕ್ಯಾಮರಾಗಳೂ ಮಾಧ್ಯಮ ಕೇಂದ್ರಕ್ಕೆ ದೌಡಾಯಸಿದವು.

ಅದುವರೆಗೆ ಸುರಕ್ಷಿತವಾಗಿ ಬಚ್ಚಿಟ್ಟಿದ್ದ ಕೆಂಪಕ್ಷರದ ಚೀಟಿ ಆಂಡ್ರೂ ಸುಗಾರೆಯ ಕೈ ದಾಟಿ ಈಗ ಪಿನೆರೊ ಕೈಗೆ ಬಂತು. ಆಳದಿಂದ ಬಂದ ಆ ಪುಟ್ಟ ಸಂದೇಶವನ್ನು ರಾಷ್ಟ್ರಪತಿ ಎತ್ತಿ ಹಿಡಿದು ಕ್ಯಾಮೆರಾಗಳಿಗೆ ಪ್ರದರ್ಶಿಸಿದರು. `ನಾವು 33 ಜನರೂ ಸುರಕ್ಷಿತವಾಗಿದ್ದೇವೆ’ ಎಂಬರ್ಥದ ಬರಹದ `ಲೋಸ್ 33′ (ಈ 33) ಎಂಬ ಪುಟ್ಟ ಪದ ಇಡೀ ಅಮೆರಿಕಾ ಖಂಡದ ಸಹಸ್ರಾರು ಟಿವಿ ಚಾನೆಲ್ ಗಳಲ್ಲಿ, ಪತ್ರಿಕೆಗಳಲ್ಲಿ ತಲೆಬರಹವಾಗಿ ರಾರಾಜಿಸಿತು.

ಅದೇ ವೇಳೆಗೆ ಡ್ರಿಲ್ಲಿಂಗ್ ಯಂತ್ರದ ತಾಂತ್ರಿಕ ಸಿಬ್ಬಂದಿ ಭಾರೀ ಗಾತ್ರದ ತಂತಿ ಸುರುಳಿಯನ್ನು ಹೊತ್ತು ತಂದಿದ್ದರು. ತಂತಿಯ ತುದಿಯಲ್ಲಿ ಒಂದು ಪುಟ್ಟ ಫೋನ್ ಉಪಕರಣವೊಂದನ್ನು ಕಟ್ಟಿ ಮೆಲ್ಲಗೆ ರಂಧ್ರದ ಮೂಲಕ ಇಳಿ ಬಿಟ್ಟರು. `ಸಹಾಯ ಬರಲಿದೆ, ಗಣಿ ಸಚಿವರು ತುಸು ಹೊತ್ತಿನಲ್ಲೇ ಮಾತಾಡಲಿದ್ದಾರೆ. ನಿಮ್ಮಲ್ಲಿ ಯಾರಾದರೊಬ್ಬರು ರಂಧ್ರದ ಬಳಿ ನಿಂತಿರಿ’ ಎಂಬ ಪುಟ್ಟ ಸಂದೇಶದ ಚೀಟಿಯೊಂದನ್ನು ಫೋನ್ ಜತೆ ಕಟ್ಟಿದ್ದರು. ಅದು ಆ ಮುಷ್ಟಿಯಗಲದ ರಂಧ್ರದಲ್ಲಿ ಮೆಲ್ಲಮೆಲ್ಲನೆ ಇಳಿಯುತ್ತ 680 ಮೀಟರ‍್ ಆಳದಲ್ಲಿದ್ದವರನ್ನು ತಲುಪಿತು. ರೆಕಾರ್ಡಿಂಗ್ ವ್ಯವಸ್ಥೆಯನ್ನೆಲ್ಲ ಮತ್ತೊಮ್ಮೆ ಪರಿಶೀಲಿಸಿದ್ದಾಯಿತು.

ಅರ್ಧ ಗಂಟೆಯಲ್ಲಿ ಪಾತಾಳದಲ್ಲಿ ಫೋನ್ ರಿಂಗಾಯಿತು. ಕಾರ್ಮಿಕ ತಂಡದ ಮುಖ್ಯಸ್ಥ ಲೂಯಿಸ್ ಊರ್ಝುವಾ ಫೋನ್ ಎತ್ತಿಕೊಂಡ.

`ಹೇಗಿದ್ದೀರಾ ಎಲ್ಲ?’ ಸಚಿವರ ಪ್ರಶ್ನೆಗೆ ಕೆಳಿಗಿನಿಂದ ತುಸು ಕ್ಷೀಣವಾದ ಆದರೆ ಸ್ಪಷ್ಟ ಉತ್ತರ ಬಂತು.

`ನಾವೆಲ್ಲಾ ಕ್ಷೇಮವಾಗಿದ್ದೇವೆ. ರಕ್ಷಣೆ ಬರುವುದನ್ನೇ ಕಾಯ್ತಾ ಇದ್ದೇವೆ’ ಉರ್ಝುವಾ ಧ್ವನಿ.

ಗೋಲ್ ಬೋರ್ನ್ ಮುಂದಿನ ಮಾತು ಹೇಳುವ ಮೊದಲೇ ಕೆಳಗಿನಿಂದ ಮಾತು ಕೇಳಿಸಿತು:

`ಸರ‍್, ಒಂದು ಕ್ಷಣ ನಿಲ್ಲಿ. ನಾವೆಲ್ಲ ಇಲ್ಲಿ ಒಟ್ಟಾಗಿ ನಿಂತಿದ್ದೇವೆ’.

ತುಸು ಅವಾಕ್ಕಾದ ಗಣಿಸಚಿವರು ಫೋನನ್ನು ಆಚೆ ಕಿವಿಯಿಂದ ಈಚೆ ಕಿವಿಯತ್ತ ತರುತ್ತಲೇ ಕೆಳಗಿನಿಂದ ತೀರ ಪರಿಚಿತ ವೃಂದಗಾನ ಕೇಳಬಂತು –

`ಪ್ಯೂರೊಚಿಲೀ ಎಸ್ತೂಸಿಲೋ ಅಜುವಾಲ್ಡೊ. . .’

ಗೋಲ್ ಬೋರ್ನ್ ಹಠಾತ್ತನೆ ಸೆಟೆದು ನಿಂತರು. ಸಚಿವರ ಸುತ್ತ ನಿಂತವರಿಗೆ ತುಸು ಗಾಬರಿ. ಏನಾಗಿರಬಹುದು?

ಎರಡು ನಿಮಿಷ ಮೌನವಾಗಿ ಸೆಟೆದೇ ನಿಂತಿದ್ದ ಸಚಿವರು,

`ಓ ಎಲ್ ಸಿಲೋ…. ಓ ಎಲ್ ಸಿಲೊ …. ಕೊಂತ್ರಾಲಾ ಒಪ್ರೆಸೆನ್ ….’ ಎಂದು ರಾಗವಾಗಿ ಹೇಳಿದಾಗ ಎಲ್ಲರಿಗೂ ಅರ್ಥವಾಯಿತು.

ಪಾತಾಳದಲ್ಲಿದ್ದ ಎಲ್ಲ 33 ಜನರೂ ಒಟ್ಟಾಗಿ ಚಿಲಿಯ ರಾಷ್ಟಗೀತೆಯನ್ನು ಹಾಡುತ್ತಿದ್ದರು!

ನೆರೆದಿದ್ದವರ ಕಣ್ಣು ಮಂಜಾಗಿತ್ತು.
….

– ಪುಸ್ತಕದೊಳಗಿನಿಂದ (ಪುಟ : 39-40)

ಏಳುನೂರು ಮೀಟರ‍್ ಆಳದಲ್ಲಿ 33 ಗಣಿಗಾರರು ಸಿಕ್ಕಿಹಾಕಿಕೊಂಡಿದ್ದಾರೆ. ಹದಿನೇಳು ದಿನ ಶ್ರಮಿಸಿ 3 ಅಂಗುಲ ಬೋರ‍್ ರಂಧ್ರ ಕೊರೆದು ನೋಡಿದರೆ ಅವರೆಲ್ಲ ಬದುಕಿರುವುದು ಗೊತ್ತಾಗಿದೆ. ಇನ್ನೂ ದೊಡ್ಡ ರಂಧ್ರ ಕೊರೆದು ಅವರನ್ನು ಮೇಲಕ್ಕೆತ್ತಲು ನಾಲ್ಕು ತಿಂಗಳೇ ಬೇಕು. ಅದುವರೆಗೆ ಆ ಮುಷ್ಟಿಗಾತ್ರದ ರಂಧ್ರದ ಮೂಲಕ ಅವರಿಗೆ ಆಹಾರ-ಔಷಧ ರವಾನಿಸಬೇಕು; ಅವರನ್ನು ಮೇಲಕ್ಕೆತ್ತಲು ರಾಕೆಟ್ ಮಾದರಿಯ ಲಿಫ್ಟ್ ನಿರ್ಮಿಸಬೇಕು.,

2010ರ ಅಕ್ಟೋಬರ‍್ ನಲ್ಲಿ ಚಿಲಿ ಎಂಬ ಪುಟ್ಟ ದೇಶ ಎಲ್ಲರನ್ನೂ ಸುರಕ್ಷಿತ ಮೇಲೆತ್ತಿದಾಗ ಆ ಮಹಾಸಾಹಸದ ವೀಕ್ಷಣೆಗೆ 3000 ವರದಿಗಾರರು ಸೇರಿದ್ದರು. ನೂರು ಕೋಟಿಗೂ ಹೆಚ್ಚು ಜನರು ನೇರ ಪ್ರಸಾರದಲ್ಲಿ ಅದನ್ನು ಕಣ್ಣಾರೆ ನೋಡಿದರು. ಸಾಮಾನ್ಯ ಪ್ರಜೆಗಳ ಈ ಅಸಾಮಾನ್ಯ ಸಾಧನೆ `ಮನುಕುಲಕ್ಕೇ ಸ್ಫೂರ್ತಿದಾಯಕ ಸಾಧನೆ’ ಎಂಬ ಶ್ಲಾಘನೆಗೆ ಪಾತ್ರವಾಯಿತು.

ಕಲ್ಪನೆಗೂ ಮೀರಿದ ಈ ನೈಜಕತೆಯನ್ನು ಥ್ರಿಲ್ಲರ‍್ ಶೈಲಿಯಲ್ಲಿ ಬರೆದ ಸರೋಜಾ ಪ್ರಕಾಶ್ ಭೌತವಿಜ್ಞಾನದ ಉಪನ್ಯಾಸಕಿಯಾಗಿದ್ದವರು. ವಿಜ್ಞಾನವನ್ನು ಎಲ್ಲರಿಗೂ ಅರ್ಥವಾಗುವಂತೆ ಬರೆಯುವ ಇವರು ಚಿಲಿ ಸಾಹಸದ ಕಥೆಯನ್ನು ಎಲ್ಲರಿಗೂ ಇಷ್ಟವಾಗುವಂತೆ ಬರೆದಿದ್ದಾರೆ. ಈ ಅಪೂರ್ವ ಘಟನೆ ಇಂಗ್ಲೀಷ್ ನಲ್ಲಿ ಕಾದಂಬರಿಯಾಗಿಯೋ, ಸಿನೆಮಾ ಆಗಿಯೋ ಬರುವ ಮೊದಲೇ ಕನ್ನಡ ಸಾಹಿತ್ಯಕ್ಕೆ ಸೇರ್ಪಡೆಯಾಗುತ್ತಿದೆ. ಅದು ಹೆಮ್ಮೆಯ ದಾಖಲೆ.

– ನಾಗೇಶ ಹೆಗಡೆ
(ಪುಸ್ತಕದ ಬೆನ್ನುಡಿಯಿಂದ )

ಶೀರ್ಷಿಕೆ: ಚಿಲಿಯ ಕಲಿಗಳು – ಗಣಿ ಪಾತಾಳದಲ್ಲಿ 33 ಜನ 69 ದಿನ ಲೇಖಕರು:ಸರೋಜಾ ಪ್ರಕಾಶ ಪ್ರಕಾಶಕರು: ಭೂಮಿ ಬುಕ್ಸ್ ಪುಟಗಳು:156+8 ಬೆಲೆ:ರೂ.110/-

ಮೇ ದಿನ ಚಿರಾಯುವಾಗಲಿ

ಎಂಟು ಗಂಟೆಯ ದುಡಿಯುವ ದಿನದ ಬೇಡಿಕೆಯಿಟ್ಟು ಹೋರಾಟ ಬಲಿದಾನಗಳಿಂದ ಸಾಧಿಸಿದ ಗೆಲವಿನ ದಿನವೇ ಮೇದಿನ.
“ಎಂಟು ಗಂಟೆಯ ದುಡಿಯುವ ದಿನದ ಬೇಡಿಕೆ ಎಲ್ಲಾ ಕಾರ್ಮಿಕ ವರ್ಗದ ಬೇಡಿಕೆ. ಇದು ಕೆಲವು ಮಾಲಿಕರೆದುರು ಕೆಲವು ಕಾರ್ಮಿಕರು ಇಟ್ಟಿರುವ ಬೇಡಿಕೆಯಲ್ಲ. ಸದ್ಯದ ಸಮಸ್ತ ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆಯ ಪ್ರತಿನಿಧಿಗಳಾದ ಪ್ರಭುತ್ವದ ಅಧಿಕಾರಿಗಳ ಸಮಸ್ತ ಬಂಡವಾಳಶಾಹಿವರ್ಗದ ಉತ್ಪಾದನಾ ಸಾಧನಗಳ ಒಡೆಯರ ಎದುರಿಗೆ ಇಟ್ಟಿರುವ ಬೇಡಿಕೆ ಇದು.. . .”

-ಲೆನಿನ್

ಮಕ್ಕಳನ್ನು ಓದಿಸಿ ಇಂಜಿನಿಯರ‍್ ಮಾಡಿಸುವ ಕನಸು ಕಾಣದ ಹೆತ್ತವರು ಯಾರು? ಈಗಂತೂ ಸಾಫ್ಟವೇರ‍್ ಇಂಜಿನಿಯರ‍್ ಆದರೆ ನಾವು ಮಕ್ಕಳಿಗಾಗಿ ಪಟ್ಟ ಕಷ್ಟ ಸಾರ್ಥಕ ಎನ್ನುವ ತಂದೆ ತಾಯಂದಿರಿಗೆ ಈಗ ಹೊಸ ಸಮಸ್ಯೆ ಎದುರಾಗಿದೆ. ರಾತ್ರಿ ಹಗಲೆನ್ನದೆ ಓದಿ ಸಂಪಾದನೆ ಪ್ರಾರಂಭ ಮಾಡಿದ್ದರೂ ಮಗ/ಮಗಳೊಂದಿಗೆ ನೆಮ್ಮದಿಯಾಗಿ ದಿನದಲ್ಲಿ ಒಂದರ್ಧ ಗಂಟೆಯಾದರೂ ಮಾತುಕತೆಯಾಡುತ್ತಾ ಕಾಲ ಕಳೆಯುವ ಸುಖವಿಲ್ಲವಾಗಿದೆ.

ಎಂಟು ಗಂಟೆಯ ಕಾಲದ ಕೆಲಸಎಂಬ ಕಾನೂನನ್ನು ಗಾಳಿಗೆ ತೂರಿ ಈಗ ಎಲ್ಲಾ ಕಂಪನಿಗಳೂ ಕೆಲಸಕ್ಕೆ ಸೇರಿಕೊಳ್ಳುವ ಸಮಯದಲ್ಲೆ ೧೦ ಗಂಟೆಗಳ ಕೆಲಸವನ್ನು ನಿಗದಿಮಾಡಿರುವ ಈ ದಿನಗಳಲ್ಲಿ ಮಗ, ಸೊಸೆ, ಮಗಳು, ಅಳಿಯ ಎಲ್ಲರೂ ಒತ್ತಡದ ಜೀವನವನ್ನು ನಡೆಸುತ್ತಿರುವಾಗ ಅಪ್ಪ ಅಮ್ಮ ನೆಮ್ಮದಿಯಿಂದಿರುವುದಾದರೂ ಹೇಗೆ. ಇದೇ ಒತ್ತಡದಿಂದಾಗಿ ಮೊಮ್ಮಕ್ಕಳನ್ನು ಕಾಣುವ ಆಸೆಯನ್ನೂ ಬಿಟ್ಟುಕೊಡುವ ಹಂತಕ್ಕೆ ಈಗ ಹೆತ್ತವರು ಬಂದಿದ್ದಾರೆ.

“ನಮ್ಮ ಹೊಟ್ಟೆಯನ್ನು ಹೊರೆಯುವುದಕ್ಕಾಗಿ ಒಟ್ಟು 8 ಗಂಟೆಯ ಕೆಲಸ ಸಾಕು. ಇನ್ನುಳಿದ ಸಮಯ ವಿಶ್ರಾಂತಿಗೆ, ನಮ್ಮ ಅರಿವಿನ ಪ್ರಜ್ಞೆಯ ಬೆಳವಣಿಗೆಗೆ, ಅಪ್ಪ ಅಮ್ಮ ನಿಗೆ ಮಕ್ಕಳಾಗಿ, ಮಕ್ಕಳಿಗೆ ಹೆತ್ತವರಾಗಿ, ನಾಡಿಗೆ ನಾಗರೀಕರಾಗಿ ನಾವು ಮಾಡಬೇಕಾದ ಕರ್ತವ್ಯ ನಿರ್ವಹಣೆಗಾಗಿ ಮೀಸಲಾಗಿಡಬೇಕಾಗಿದೆಎಂದು ಘೋಷಿಸಿ 120 ವರ್ಷಗಳಾದ ನಂತರ ನಾವು ಹಿಂದಿನ ಕಾಲಕ್ಕೆ ನೂಕಲ್ಪಟ್ಟಿದ್ದೇವೆ. ಈ ಸಂದರ್ಭದಲ್ಲಿ `ಮೇ ದಿನದ ಮಹತ್ವವೇನು ಎಂದು ತಿಳಿಯಲು ಹೊರಟವರಿಗೆ ನೆರವು ನೀಡಲು ಮುಂದೆ ಬಂದ ಪುಸ್ತಕ `ನೂರಾರು ಮೇ ದಿನಗಳು‘.

ಶೀರ್ಷಿಕೆ: ನೂರಾರು ಮೇ ದಿನಗಳು ಲೇಖಕರು: ವಿ.ಜೆ.ಕೆ. ನಾಯರ‍್ ಪ್ರಕಾಶಕರು:ಚಿಂತನ ಉತ್ತರಕನ್ನಡ ಪುಟಗಳು:16 ಬೆಲೆ:

 

ಈ ಪರಿಸ್ಥಿತಿಯಲ್ಲಿ 120 ವರ್ಷಗಳ ಹಿಂದೆ ನಮ್ಮ ಹಿರಿಯರು ನಮಗಾಗಿ ಹೋರಾಡಿ ಗಳಿಸಿಕೊಟ್ಟ `ಎಂಟು ಗಂಟೆಗಳ ಕಾಲದ ಕೆಲಸ ದ ಹಕ್ಕನ್ನು ಕಳೆದುಕೊಂಡಿರುವ ನಾವು ಅದನ್ನು ಮತ್ತೆ ಪಡೆಯಲು ಮತ್ತೊಂದು ಹೋರಾಟ ನಡೆಸಬೇಕಾಗಬಹುದೇನೋ ಎಂಬಂತಿದೆ.

 

ಮಾಜಿ ದೊರೆ ಹಾಗೂ ಹಾಲಿ ಅಧಿಕಾರದಲ್ಲಿದ್ದ ಮಂತ್ರಿಯ ವಿರುದ್ಧ ಸಂಘಟನೆಗೊಂಡ ಚಳವಳಿ

scan0048

ಕೋಟ್ಯಂತರ ಬೆಲೆ ಬಾಳುವ ಕಬ್ಬಿಣದ ಅದಿರು, ದಟ್ಟವಾದ ಕಾಡು, ಫಲವತ್ತಾದ ಜಮೀನನ್ನು ಹೊಂದಿದ ಸೊಂಡೂರು ಪ್ರದೇಶದ ಭೂಹೋರಾಟ ವಿಶಿಷ್ಟವಾದುದು. ಯಾಕೆಂದರೆ ಇದು ಒಬ್ಬ ಭೂಮಾಲಿಕನ ವಿರುದ್ಧ ಮಾತ್ರವಲ್ಲ. ಮಾಜಿ ದೊರೆ ಹಾಗೂ ಹಾಲಿ ಅಧಿಕಾರದಲ್ಲಿದ್ದ ಮಂತ್ರಿಯ ವಿರುದ್ಧ ಸಂಘಟನೆಗೊಂಡ ಚಳವಳಿ ಆಗಿತ್ತು. ಸ್ವತಂತ್ರ ಪ್ರಾಂತ್ಯವಾಗಿದ್ದ ಸೊಂಡೂರು ಬ್ರಿಟೀಷರು ಭಾರತ ಬಿಟ್ಟುಕೊಟ್ಟ ಬಳಿಕ ಭಾರತದೊಂದಿಗೆ ವಿಲೀನಗೊಳ್ಳಲು ನಿರಾಕರಿಸಿದ ಪ್ರಾಂತ್ಯವೂ ಹೌದು. ಸೊಂಡೂರು ರಾಜಮನೆತನ ಕಾಂಗ್ರೇಸ್ ಚಳವಳಿಯನ್ನು ನಿಷೇಧಿಸಿತ್ತು. ಮುಂದೆ ಇದೇ ವಂಶದವರು ಅರಸು ಮಂತ್ರಿ ಮಂಡಲದಲ್ಲಿ ದೀರ್ಘಕಾಲ ಅರ್ಥ ಸಚಿವರೂ ಆಗಿದ್ದರು!

ಕರ್ನಾಟಕದ ಸಮಾಜವಾದಿ ಚಳವಳಿಗಳ ಅಧ್ಯಯನಕ್ಕೆ ಕನ್ನಡ ವಿವಿಯಲ್ಲಿ ಸ್ಥಾಪಿಸಲಾಗಿರುವ ರಾಮಮನೋಹರ ಲೋಹಿಯಾ ಅಧ್ಯಯನ ಪೀಠದ ಸಂಚಾಲಕ ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಅರುಣ್ ಅವರು ಅನೇಕ ಹಳ್ಳಿಗಳನ್ನು ತಿರುಗಾಡಿ, ಹೋರಾಟದಲ್ಲಿ ಪಾಲುಗೊಂಡ ಜನರನ್ನು, ಹಲವು ನಾಯಕರನ್ನು ಭೇಟಿ ಮಾಡಿ ಪೋಲೀಸ್ ಇಲಾಖೆ ದಾಖಲೆಗಳು, ವಿಧಾನಸಭೆಯ ಕಲಾಪಗಳನ್ನು ಪರಿಶೀಲಿಸಿ ಈ ಪುಸ್ತಕವನ್ನು ಸಿದ್ಧಪಡಿಸಿದ್ದಾರೆ. ಪ್ರಸಾರಾಂಗ ಪ್ರಕಟಿಸಿದ ಹಲವು ದಪ್ಪ ಗಾತ್ರದ ಪುಸ್ತಕಗಳು ಇತ್ತೀಚೆಗೆ ವಿವಾದಕ್ಕೆ ಒಳಗಾಗಿದ್ದವು. ಇಂತಹ ಆರೋಪಗಳಿಗೆ ಈ ಪುಸ್ತಕ ಸ್ವಲ್ಪ ಮಟ್ಟಿಗೆ ಹೊರತಾಗಿದೆ. ಕೆ.ಕೆ.ಮಕಾಳಿಯವರ ಮುಖಪುಟ ವಿನ್ಯಾಸ, ಸರಳ-ಅರ್ಥಪೂರ್ಣವಾಗಿದೆ. ಭಾರಿ ಪ್ರಮಾಣದ ಗಣಿಗಾರಿಕೆಯಿಂದ ಬಳ್ಳಾರಿ ಜಿಲ್ಲೆಯ ಕೃಷಿಯೇ ಇಂದು ನಾಶವಾಗಿ ಹೋಗಿದೆ. ಪ್ರಸ್ತುತತೆಗಿಂತ ಹೆಚ್ಚಾಗಿ ಹಿಂದೆ ಹೀಗಿತ್ತು ಎಂಬ ಇತಿಹಾಸದ ಅಧ್ಯಯನಕ್ಕೆ ಪುಸ್ತಕ ಸಹಕಾರಿಯಾಗಬಲ್ಲದು.

ಶೀರ್ಷಿಕೆ: ಸೊಂಡೂರು ಭೂ ಹೋರಾಟ ಲೇಖಕರು: ಅರುಣ್ ಜೋಳದ ಕೂಡ್ಲಿಗಿ ಪ್ರಕಾಶಕರು: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ಪುಟಗಳು :174 ಬೆಲೆ:ರೂ.80/-

ಕೃಪೆ : ಸುಧಾ

ಸಮಕಾಲೀನ ಸಾಹಿತ್ಯ ಚರಿತ್ರೆ

ಹಿರಿಯ ಕವಿ, ವಿಮರ್ಶಕ ಸುಮತೀಂದ್ರ ನಾಡಿಗರು ಬರೆದಿರುವ ಈ ಸಮಕಾಲೀನ ಸಾಹಿತ್ಯ ಚರಿತ್ರೆ, ಇವತ್ತಿನ ಸಂದರ್ಭಕ್ಕೆ ತುಂಬಾ ಅಗತ್ಯವಾಗಿತ್ತು. ಸಾಹಿತ್ಯ ಚರಿತ್ರೆ ಅಂದರೆ ನವೋದಯ, ಪ್ರತಿಶೀಲ, ನವ್ಯ, ನವ್ಯೋತ್ತರ ಸಾಹಿತ್ಯ ಚಳವಳಿಗಳ ದಾಖಲೆ ಎಂತಾಗಿಬಿಟ್ಟು ಎಲ್ಲಿ ನೋಡಿದರೂ ಅವೇ, ಎಷ್ಟು ಓದಿದರೂ ಅವೇ ಅಂತಾಗಿಬಿಟ್ಟಿದ್ದಾಗ ಹೀಗೊಂದು ಕಾಂಟೆಂಪೊರೆರಿ ದಾಖಲೆ ಸೆಳೆಯುತ್ತದೆ.

ಇದರ ಸ್ವರೂಪವೂ ಭಿನ್ನವಾಗಿರಬೇಕೆಂದು ಬಯಸುತ್ತಾ ಕಳೆದ 50-60 ವರುಷಗಳಲ್ಲಿ ಯಾವ ಸಾಹಿತಿಗಳು ಯಾವ ಸಾಹಿತಿಗಳನ್ನು ಭೇಟಿಯಾದರು, ಅವರ ಸಂಬಂಧ ಹೇಗಿತ್ತು, ಅವರು ಸಾಹಿತ್ಯಕ್ಕೆ ಸಂಬಂಧಿಸಿದ ಎಂತಹ ಮಾತುಗಳನ್ನಾಡುತ್ತಿದ್ದರು, ಯಾವ ಪುಸ್ತಕಗಳನ್ನು ಓದುತ್ತಿದ್ದರು ಮುಂತಾದವುಗಳನ್ನಿಲ್ಲಿ ಆಯಾ ಲೇಖಕರ ಒಡನಾಡಿಯಾಗಿ, ಸಾಕ್ಷಿಪ್ರಜ್ಞೆಯಾಗಿ ಬರೆದಿರುವುದಾಗಿ ಲೇಖಕರು ಹೇಳಿಕೊಂಡಿದ್ದಾರೆ

ಶೀರ್ಷಿಕೆ : 5 ನೆಯ ಸಾಹಿತ್ಯ ಚರಿತ್ರೆ ಲೇಖಕರು : ಸುಮತೀಂದ್ರ ನಾಡಿಗ ಪ್ರಕಾಶಕರು : ಸಪ್ನ ಬುಕ್ ಹೌಸ್ ಪುಟಗಳು : 260 ಬೆಲೆ: ರೂ.120/-

ಕೃಪೆ : ವಿಜಯ ಕರ್ನಾಟಕ