ಸುವರ್ಣ ಕರ್ನಾಟಕ ವಿಜ್ಞಾನ ಬಾಗಿನ

ಜೀವದ ಹುಟ್ಟಿನ ನಿಜಸ್ಥಿತಿಯನ್ನು ವಿವರಿಸಿ, ನಿಮಗೆ ತಾಜಾ ಮಾಹಿತಿಯನ್ನೊದಗಿಸುತ್ತದೆ ಈ ಕಿರು ಪುಸ್ತಕ. ಸರಳವಾದ ಭಾಷೆ, ಕುತೂಹಲ ಕೆರಳಿಸುವ ಘಟನೆಗಳು ಹಾಗೂ ಸನ್ನಿವೇಶಗಳು, ನಿಮ್ಮ ಚಿಂತನೆಯನ್ನು ಕೆದಕುವಂತಹ ಮಂಡನೆ, ರೋಮಾಂಚಕಾರೀ ವೈಜ್ಞಾನಿಕ ಪತ್ತೇದಾರಿಯ ಸ್ವಾರಸ್ಯಮಯ ನಿರೂಪಣೆ, ವಿಜ್ಞಾನಿಗಳು ಅನುಭವಿಸಿದ ಕಷ್ಟ ನಷ್ಟಗಳು, ಅವರು ಪಟ್ಟ ಅವಮಾನ, ಅವರು ಎದುರಿಸಿದ ಘೋರ ಘರ್ಷಣೆಗಳು, ಕಾಲಾನುಕಾಲಕ್ಕೆ ಹೇಗೆ ಹೊಸ ಹೊಸ ವಿಜ್ಞಾನಿಗಳು ಅವತರಿಸಿ, ಕೆಚ್ಚಿನಿಂದ, ಕಿಚ್ಚಿನಿಂದ, ಈ ಚಕ್ರವ್ಯೂಹವನ್ನು ಭೇದಿಸಿ, ಮುನ್ನುಗ್ಗಿ, ಮೂಡನಂಬಿಕೆಗಳನ್ನು ಸಾರಾಸಗಟಾಗಿ ತರಿದು, ವೈಜ್ಞಾನಿಕ ಮನೋಭಾವವನ್ನು ಬೆಳೆಸಿದರು ಎಂಬುದೇ ಈ ಪತ್ತೇದಾರಿ ಕಾದಂಬರಿಯ ಸಾರಾಂಶ.

ಹದಿನೈದು ಹರೆಯದ ಕಿಶೋರರಿಂದ ವಯೋವೃದ್ಧರವರೆಗೆ, ಎಲ್ಲರೂ ಓದಿ, ಖುಷಿ ಪಡಬಹುದಾದ, ಸಾಮಾನ್ಯ ಜ್ಞಾನ ಹೆಚ್ಚಿಸುವ, ಅಜ್ಞಾನವನ್ನು ಅಳಿಸುವ ವೈಜ್ಞಾನಿಕ ಕಾದಂಬರಿ ಇದು. ಓದಿದಷ್ಟೂ, ಮುಂದೇನಾಯಿತು ಎಂದು ತಿಳಿಯುವ ಕಾತರ, ಇನ್ನೂ ಓದಬೇಕೆಂಬ ಆತುರ, ಇವೇ ಈ ಪುಸ್ತಕದ ಕೆಲವು ವೈಶಿಷ್ಟ್ಯಗಳು.

-ಪುಸ್ತಕದ ಬೆನ್ನುಡಿಯಿಂದ

ಶೀರ್ಷಿಕೆ: ಜೀವ ಹೇಗೆ ಹುಟ್ಟಿದರೇನಂತೆ? ಲೇಖಕರು:ಪ್ರೊ. ಎಂ.ಜೆ.ಸುಂದರ‍್ ರಾಮ್ ಪ್ರಕಾಶಕರು:ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಪುಟ:108 ಬೆಲೆ:ರೂ.೪೦/-

ಇವು ಕತೆಗಳಲ್ಲ, ವಾಸ್ತವ ಘಟನೆಗಳು

ಇವು ಕಥೆಗಳಲ್ಲ. ವಾಸ್ತವ ಘಟನೆಗಳು ಎಂದು ಲೇಖಕರು ನೆನಪಿಸಿದ್ದಾರೆ. ಕಳೆದ 26 ವರ್ಷಗಳ ಕಾಲ ಪೋಲೀಸ್ ಅಧಿಕಾರಿಯಾಗಿ ಕೈಗೊಂಡ ತನಿಖೆಗಳಲ್ಲಿ ಯಶಸ್ವಿಯಾದವುಗಳನ್ನು ಸ್ವಾರಸ್ಯಕರವಾಗಿ ಪಾಲಾಕ್ಷಯ್ಯ ಇಲ್ಲಿ ಹೇಳಿಕೊಂಡು ಹೋಗಿದ್ದಾರೆ. ಹಾಗಾಗಿ ಇವು ಕತೆಯ ಸ್ವರೂಪವನ್ನೂ ಪಡೆದಿವೆ.

ಪೋಲೀಸರಿಗೆ ಗೊತ್ತಾಗದಿದ್ದ ಕೊಲೆ, ಪತ್ತೆ ಮಾಡಲು ಸಾಧ್ಯವೇ ಇಲ್ಲವೆಂದು ಫೈಲು ಮುಚ್ಚಿ ಹಾಕಿದ್ದ ಕೊಲೆ, ಸತ್ತ ವ್ಯಕ್ತಿ ಯಾರೆಂದು ಗೊತ್ತೇ ಆಗದೆ ದಿಕ್ಕು ತಪ್ಪಿಸಿದ ಪ್ರಕರಣ – ಇನ್ನೂ ಇಂತಹದೇ ಅತಿ ಕ್ಲಿಷ್ಟಕರವಾದ 9 ಕೊಲೆ ಪ್ರಕರಣಗಳನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಜೈಲಿಗೆ ಕಳುಹಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ತಮ್ಮ ವೃತ್ತಿಯಲ್ಲಿ ದಕ್ಕಿದ ಅನುಭವಗಳನ್ನು ಹೇಳಬಲ್ಲ ಬರಹಗಾರ ಅವರೊಳಗಿದ್ದಾನೆ.

ಇಲ್ಲಿನ ಬಹುತೇಕ ಎಲ್ಲಾ ಕತೆಗಳೂ ಉದಯ ಟಿವಿ ಕ್ರೈಂ ಸ್ತೋರಿ ಧಾರಾವಾಹಿಯಲ್ಲಿ ಪ್ರಸಾರವಾಗಿ ಜನಪ್ರಿಯತೆ ಗಳಿಸಿವೆ. ಹೀಗೆ ಬೇರೆ ವೃತ್ತಿಯಲ್ಲಿ ನೈಪುಣ್ಯತೆ ಹೊಂದಿದವರು ತಮ್ಮ ಅನುಭವಗಳನ್ನು ಪರಿಣಾಮಕಾರಿಯಾಗಿ ಹೇಳಿಕೊಂಡಲ್ಲಿ ಕನ್ನಡ ಸಾಹಿತ್ಯದ ವೈವಿಧ್ಯತೆಯನ್ನು ಹೆಚ್ಚಿಸುತ್ತದೆ. ಬಯಲಾಟದ ಕಲಾವಿದರೂ ಆಗಿರುವ ಪಾಲಾಕ್ಷಯ್ಯ ಅವರ ಸಾಂಸ್ಕೃತಿಕ ಸೂಕ್ಷ್ಮ ಸಂವೇದನೆ ಅವರ ವೃತ್ತಿ ಕೌಶಲ್ಯವನ್ನೂ ಹೆಚ್ಚಿಸಿರುವುದು ಕುತೂಹಲಕಾರಿ ಬೆಳವಣಿಗೆ.

ಶೀರ್ಷಿಕೆ: ಶಬ್ದ ದೊಳಗಣ ನಿಶ್ಯಬ್ದ ಲೇಖಕರು: ಡಿ. ಪಾಲಾಕ್ಷಯ್ಯ ಪ್ರಕಾಶಕರು : ನೀಲಾ ಪ್ರಕಾಶನ ಪುಟಗಳು : 179 ಬೆಲೆ:ರೂ.100/-

ಕೃಪೆ : ಸುಧಾ