ನಗುವು ಸಹಜದ ಧರ್ಮ

ಶೀರ್ಷಿಕೆ:ಜಗವೆಲ್ಲ ನಗುತಿರಲಿ ಲೇಖಕರು:ಶೈಲಾ ಛಬ್ಬಿ ಸಂಪಾದಕರು:ಅವನಿ ರಸಿಕರ ರಂಗ ಪ್ರಕಾಶನ ಪುಟ:126 ಬೆಲೆ:80 ಪ್ರಕಟಣೆ:2010

ಬೇರೆ ಬೇರೆ ದೃಷ್ಟಿಯಲ್ಲಿ ಬದುಕಿನ ಪುಟ್ಟ ಪುಟ್ಟ ಸಂಗತಿಗಳು

ಇದು ಲಲಿತ ಪ್ರಬಂಧಗಳ ಸಂಕಲನ.  ಬದುಕಿನಲ್ಲ ಕಾಣಿಸುವ ಪುಟ್ಟ ಸಂಗತಿಗಳ ಬಗ್ಗೆ ವಿವಿಧ ದೃಷ್ಟಿಕೋನಗಳಲ್ಲಿ ನೋಡಲು ಪ್ರಯತ್ನಿಸಿ ಬರೆದ ಲೇಖನಗಳ ಸರಮಾಲೆ.
ಈ ಪುಸ್ತಕ ಕರ್ನಾಟಕದ ಎಲ್ಲಾ ನವಕರ್ನಾಟಕ ಪುಸ್ತಕ ಮಳಿಗೆಗಳು, ಸ್ವಪ್ನ ಪುಸ್ತಕ ಮಳಿಗೆ, ಅಂಕಿತ ಪುಸ್ತಕ ಮಳಿಗೆ, ಜಯನಗರದ “ಟೋಟಲ್ ಕನ್ನಡ.ಕಾಂ ಪುಸ್ತಕ ಮಳಿಗೆಗಳಲ್ಲಿ ದೊರೆಯುತ್ತದೆ.
ಶೀರ್ಷಿಕೆ:ಗುಬ್ಬಿ ಎಂಜಲು ಲೇಖಕರು:ಶಿವು ಕೆ. ಪ್ರಕಾಶಕರು:ತುಂತುರು ಪ್ರಕಾಶನ ಪುಟಗಳು:   ಬೆಲೆ:ರೂ.

ದಿನಪತ್ರಿಕೆ ಹಂಚುವವರ ಜೀವನ ಜೋಕಾಲಿ

ಈ ಪುಸ್ತಕದ ವಿಚಾರವೇ ಹೊಸತು.  ಮುಂಜಾನೆ ಚುಮುಚುಮು ಬೆಳಕಿನಲ್ಲಿ ನಡೆಯುವ ದಿನಪತ್ರಿಕೆ ವಿತರಣೆ ಎನ್ನುವ ಸಂತೆಯೊಳಗೆ ನಡೆಯುವ ವೈವಿಧ್ಯತೆಗಳನ್ನು ಪರಿಚಯಿಸುವಲ್ಲಿ ಒಂದು ಪ್ರಯತ್ನ. ಈ ಪುಸ್ತಕ ಮೊದಲ ಮುದ್ರಣ ಪ್ರತಿಗಳೆಲ್ಲ ಮುಗಿದು ಎರಡನೇ ಮುದ್ರಣವಾಗಿದೆ.
ಈ ಪುಸ್ತಕ ಕರ್ನಾಟಕದ ಎಲ್ಲಾ ನವಕರ್ನಾಟಕ ಪುಸ್ತಕ ಮಳಿಗೆಗಳು, ಸ್ವಪ್ನ ಪುಸ್ತಕ ಮಳಿಗೆ, ಸ್ವಪ್ನ ಪುಸ್ತಕ ಮಳಿಗೆ, ಜಯನಗರದ “ಟೋಟಲ್ ಕನ್ನಡ.ಕಾಂ ಪುಸ್ತಕ ಮಳಿಗೆಗಳಲ್ಲಿ ದೊರೆಯುತ್ತದೆ.

ಶೀರ್ಷಿಕೆ:ವೆಂಡರ್ ಕಣ್ಣು ಲೇಖಕರು:ಶಿವು ಕೆ. ಪ್ರಕಾಶಕರು:                    ಪುಟಗಳು:   ಬೆಲೆ:ರೂ.

ತಬ್ಬಿಬ್ಬು ಮಾಡುವ ವಿಪರ್ಯಾಸಗಳನ್ನು ಓದಿಯೇ ಸವಿಯಬೇಕು


ಶೀರ್ಷಿಕೆ:ಹಿಡಿಯದ ಹಾದಿ ಲೇಖಕರು:ಗಿರಡ್ಡಿ ಗೋವಿಂದರಾಜ ಪ್ರಕಾಶಕರು:ಮನೋಹರ ಗ್ರಂಥಮಾಲೆ ಪುಟಗಳು:160 ಬೆಲೆ:ರೂ.70/-

ಕೃಪೆ: ದೇಶ ಕಾಲ ವಿಶೇಷ

ಪ್ರಶಸ್ತಿಗಾಗಿ ಕಂಗ್ರಾಜುಲೇಶನ್ಸ್ !!!

ಕರ್ನಾಟಕ ಸಾಹಿತ್ಯ ಅಕಾಡೆಮಿಯ 2008ನೇ ಸಾಲಿನ ಲಲಿತ ಪ್ರಬಂಧ ವಿಭಾಗದಲ್ಲಿ ಪುಸ್ತಕ ಪ್ರಶಸ್ತಿ ಪಡೆದ ಕೃತಿ.

ಒಳ್ಳೆಯ ಕತೆ ಬರೆಯುವವರೆಲ್ಲರೂ ಒಳ್ಳೆಯ ಪ್ರಬಂಧಗಳನ್ನು ಬರೆಯುತ್ತಾರೆಂದು ಹೇಳುವುದಕ್ಕೆ ಸಾಧ್ಯವಿಲ್ಲ. “ಹೊರಗೂ ಮಳೆ ಒಳಗೂ ಮಳೆ” ಎಂಬ ಅತ್ಯುತ್ತಮ ಕಥಾಸಂಕಲನ ಕೊಟ್ಟ ನಮ್ಮ ನಡುವಿನ ಪ್ರತಿಭಾಶಾಲಿ ಕತೆಗಾರ ಚ.ಹ. ರಘುನಾಥ ಒಳ್ಳೆಯ ಪ್ರಬಂಧಗಳನ್ನು ಬರೆದಿದ್ದಾರೆನ್ನುವುದಕ್ಕೆ ಈ ಪ್ರಬಂಧಗಳು ಸಾಕ್ಷಿ. ಇಲ್ಲಿಯ `ರಾಗಿಮುದ್ದೆ’, `ಅಧರಂ ಮಧುರಂ’, `ಮಳೆಯ ಮೂರು ಹನಿ’, `ಜಾತ್ರೆಯೆಂಬ ಕಾಮನಬಿಲ್ಲು’ ಇತ್ಯಾದಿ ಪ್ರಬಂಧಗಳು ತಮ್ಮ ಕ್ಲಾಸಿಕ್ ಲಕ್ಷಣಗಳಿಂದ ಬೆರಗುಗೊಳಿಸುತ್ತವೆ. ಕಾವ್ಯದ ಭಾಷೆಯನ್ನು ಪಡೆದು ಆಕರ್ಷಣೀಯವಾಗಿವೆ. ಸ್ವಾನುಭವಜನ್ಯ ವಿಷಯಗಳನ್ನು ಒಳಗೊಂಡರೂ ಸ್ವಪ್ರತಿಷ್ಠೆಯನ್ನು ಮೆರೆಸುವುದಿಲ್ಲ. ಬಡತನದ ಬಾಲ್ಯದ ನೆನಪುಗಳಂತೆ ಕಂಡರೂ ಇಲ್ಲಿ ಆಕ್ರೋಶವಿಲ್ಲ. ಸಾಮಾಜಿಕ ಸ್ಥಿತಿಗತಿಗಳಿಗೆ ಸ್ಪಂದಿಸುವ ಸಂವೇದನಾಶೀಲ ಲೇಖಕನೊಬ್ಬನ ಮನಸ್ಸಿಗೆ ಹಿಡಿದ ಕನ್ನಡಿಯಾಗಿವೆ. ತನ್ನ ಪಾಡಿಗೆ ತಾನು ಮೌನವಾಗಿ ಅಧ್ಯಯನದಲ್ಲಿ ತೊಡಗಿರುವ ನನಗೆ ಗೊತ್ತಿರುವ ಈ ಲೇಖಕ ತನ್ನ ಸ್ವಂತ ದನಿಯಲ್ಲಿ ಮಾತನಾಡುತ್ತಿದ್ದಾನೆನ್ನುವುದು ವಿಶೇಷ.

ಚ. ಹ. ರಘುನಾಥರು ವೃತ್ತಿಯಲ್ಲಿ ಪತ್ರಕರ್ತರಾಗಿದ್ದರೂ ಜರ್ನಲಿಸ್ಟಿಕ್ ಭಾಷೆಗೆ ಒಳಗಾಗುವುದಿಲ್ಲವಾದುದರಿಂದ ಇಲ್ಲಿಯ ಪ್ರಬಂಧಗಳೆಲ್ಲ ಶುದ್ಧ ರೂಪದ `ಎಸ್ಸೇ’ಗಳಾಗಿ ಸಾರ್ಥಕವಾಗಿವೆ.

– ಗೋಪಾಲಕೃಷ್ಣ ಪೈ (ಪುಸ್ತಕದ ಬೆನ್ನುಡಿಯಿಂದ)

ಶೀರ್ಷಿಕೆ: ರಾಗಿಮುದ್ದೆ ಲೇಖಕರು:ರಘುನಾಥ ಚ. ಹ. ಪ್ರಕಾಶಕರು:ಛಂದ ಪುಸ್ತಕ ಫುಟಗಳು:88 ಬೆಲೆ:ರೂ.40/-

ಪ್ರಾಚೀನ ಕರ್ನಾಟಕದಲ್ಲಿ ಉದ್ಯೋಗಸ್ಥ ಮಹಿಳೆ

scan0002

ಹಿರಿಯ ಲೇಖಕಿ ಎಚ್.ಎಸ್.ಪಾರ್ವತಿಯವರು ಬರೆದ ೧೯ ಲೇಖನಗಳ ಸಂಗ್ರಹವಿದು. ಲೇಖಕಿ ಬೇರೆ ಬೇರೆ ಪುಸ್ತಕಗಳ ಮೇಲೆ ಬರೆದ ಲೇಖನಗಳನ್ನು ಒಂದೆಡೆ ತಂದಿದ್ದಾರೆ. ಇವುಗಳಲ್ಲಿ ಬಹಳಷ್ಟು ಸಂಭಾವನಾ ಗ್ರಂಥಗಳಿಗೆ ಬರೆದವು ಎಂಬುದು ವಿಶೇಷ.
ನಾ.ಡಿಸೋಜಾ ಅವರ ‘ಕುಂಜಾಲು ಕಣಿವೆಯ ಕೆಂಪು ಹೂ’, ‘ಪಟ್ಟ ಮಹಾದೇವಿ ಶಾಂತಲಾ ಬಗ್ಗೆ ಪ್ರಕಟವಾಗಿರುವ ಕಾದಂಬರಿಗಳು’,‘ಅನಕೃ ಅವರ ಕಥಾ ಸಾಹಿತ್ಯ’, ‘ನವೋದಯ ಕಥೆಗಳು’ ಇಂಥ ಲೇಖನಗಳಲ್ಲೆಲ್ಲ ಲೇಖಕಿಯ ತಲಸ್ಪರ್ಶಿಯಾದ ಅಧ್ಯಯನ ಇರುವುದು ಕಾಣುತ್ತದೆ. ನಾ.ಡಿಸೋಜಾ ಅವರ ಕಾದಂಬರಿಯ ಬಗ್ಗೆ ಬರೆದುದನ್ನು ಬಿಟ್ಟರೆ ಲೇಖಕಿ ಆಧುನಿಕ ಲೇಖಕರ ಸಾಹಿತ್ಯದ ಬಗ್ಗೆ ಬರೆದಿಲ್ಲದಿರುವುದು ಕುತೂಹಲ ಹುಟ್ಟಿಸುತ್ತದೆ. ಇವುಗಳ ಜೊತೆಗೆ ಜಿ.ಎಸ್.ಶಿವರುದ್ರಪ್ಪನವರ ಬಗ್ಗೆ ಬರೆದ ಆತ್ಮೀಯ ಚಿತ್ರಣವೊಂದು ಇಲ್ಲಿದೆ.
ಇವೆಲ್ಲ ಲೇಖನಗಳು ಅಕಾಡೆಮಿಕ್ ಅಧ್ಯಯನದ ಫಲವಾಗಿದೆ. ಸಾಹಿತ್ಯದ ಕೆಲವು ವಿವರಗಳಿಗಾಗಿ, ಮಾಹಿತಿಗಳಿಗಾಗಿ ಈ ಪುಸ್ತಕವನ್ನು ನೋಡಬಹುದು. ಇವುಗಳಲ್ಲಿ ‘ಸ್ವಾತಂತ್ರ‍್ಯ ಪೂರ್ವದ ಕನ್ನಡ ಲೇಖಕಿಯರು’, ‘ಪ್ರಾಚೀನ ಕರ್ನಾಟಕದಲ್ಲಿ ಉದ್ಯೋಗಸ್ಥ ಮಹಿಳೆ’,‘ಕರ್ನಾಟಕದರಸು ಮನೆತನಗಳು ಮತ್ತು ಕಲೆ’ ಇಂಥಹ ಲೇಖನಗಳಾಗಿವೆ.

ಶೀರ್ಷಿಕೆ: ಸಾಹಿತ್ಯ ಲಹರಿ ಲೇಖಕರು: ಎಚ್.ಎಸ್.ಪಾರ್ವತಿ ಪ್ರಕಾಶಕರು:ಕಿರಣ್ ಬುಕ್ ಡಿಸ್‌ಟ್ರಿಬ್ಯುಟರ್ಸ್ ಪುಟ:204  ಬೆಲೆ:ರೂ.100


ಜಾಗತೀಕರಣ ಮತ್ತು ಗ್ರಾಮ ಭಾರತ

scan0014-1

ಹಂಪಿ ಕನ್ನಡ ವಿಶ್ವ ವಿದ್ಯಾಲಯಕ್ಕೆ ಲೇಖಕರು ಡಾಕ್ಟರೇಟ್ ಪದವಿಗಾಗಿ ಸಲ್ಲಿಸಿದ ಪ್ರೌಢ ಪ್ರಬಂಧ ಈಗ ಪುಸ್ತಕ ರೂಪದಲ್ಲಿ ಹೊರಬಂದಿದೆ. ಇಲ್ಲಿನ ಕೆಲವು ಲೇಖನಗಳು ಈ ಹಿಂದೆ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಜಾಗತೀಕರಣದ ಹಲವು ಮಗ್ಗಲುಗಳನ್ನು ಇಲ್ಲಿ ದಾಖಲಿಸಿದ್ದಾರೆ. ಗ್ರಾಮ ಭಾರತದ ಮೇಲೆ ಜಾಗತೀಕರಣದ ಪ್ರಭಾವ ಕುರಿತು ಚರ್ಚಿಸಿದ್ದಾರೆ.

ದೇಶದ ಬೃಹತ್ ಮಾನವ ಸಂಪನ್ಮೂಲವನ್ನು ಶಿಕ್ಷಣ, ಆರೋಗ್ಯ, ನೀಡಿ ಸದುಪಯೋಗಪಡಿಸಿಕೊಂಡರೆ ಮಾತ್ರ ಜಾಗತೀಕರಣದ ಲಾಭ ಭಾರತಕ್ಕೆ ಆಗಬಹುದು. ಈ ಪ್ರಕ್ರಿಯೆಯಲ್ಲಿ ಭಾರತ ಎಚ್ಚರದಿಂದ ಹೆಜ್ಜೆ ಇಡಬೇಕಾಗುವುದು ಎಂದು ಲೇಖಕರು ಅಭಿಪ್ರಾಯ ಪಡುತ್ತಾರೆ.

ಯುವಶಕ್ತಿಯ ಸದ್ಬಳಕೆ, ಪ್ರಾಕೃತಿಕ ಸಂಪತ್ತಿನ ಮಿತಬಳಕೆ, ಆಡಳಿತದಲ್ಲಿ ಶಿಸ್ತು, ಪಾರದರ್ಶಕತೆ, ರಾಜಕೀಯ ಸ್ಥಿರತೆಯನ್ನು ಹೊಂದಿ ಮೇಲಿನ ಅಂಶಗಳನ್ನು ಬಳಸಿಕೊಂಡು ಜಾಗತೀಕರಣವನ್ನು ಸ್ವಾಗತಿಸಬೇಕೆಂದು ಲೇಖಕರ ಅನಿಸಿಕೆಯಾಗಿದೆ.

ಧೀರ್ಘ ಪ್ರಸ್ತಾವನೆ, ಮುನ್ನುಡಿಯೊಂದಿಗೆ ಪುಸ್ತಕ ಬಹಳಷ್ಟು ಸಾಧ್ಯತೆಗಳನ್ನು ಮುಂದಿಡುತ್ತದೆ.

ಶೀರ್ಷಿಕೆ:ಜಾಗತೀಕರಣ ಮತ್ತು ಗ್ರಾಮ ಭಾರತ ಲೇಖಕರು:ಡಾ.ಎನ್.ಜಗದೀಶಕೊಪ್ಪ ಪ್ರಕಾಶಕರು:ಸಿಂಚನ ಗ್ರಂಥಮಾಲೆ ಹಾವೇರಿ ಪುಟ:312 ಬೆಲೆ:ರೂ.160/-

ಕೃಪೆ : ಸಂಯುಕ್ತ ಕರ್ನಾಟಕ

ಚೆಲುವಿನ ಚಿತ್ತಾಲ

scan0031-1

ಮುಂಬಯಿ ಮತ್ತು ಹನೇಹಳ್ಳಿಗಳ ನಡುವೆ ಸುಳಿವ ಆತ್ಮಗಳನ್ನು ಪಾತ್ರ ಮಾಡುವ ಕತೆಗಾರ ಯಶವಂತ ಚಿತ್ತಾಲ. ಕತೆಗಾರರಾಗಿ ಹೆಸರಾದರೂ ಅವರು ಕತೆಗಳ ಬಗ್ಗೆ ಅತ್ಯುತ್ತಮವಾಗಿ ಮಾತಾಡಬಲ್ಲರು, ಬರೆಯಬಲ್ಲವರು. ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಸಮಾರಂಭವೊಂದಕ್ಕೆ ಬಂದಿದ್ದಾಗ ಅವರು ಮಾಡಿದ ಭಾಷಣವನ್ನು ಸಾಹಿತ್ಯಾಸಕ್ತರು ಮರೆತಿಲ್ಲ.

ಆ ಭಾಷಣದ ಪೂರ್ಣಪಾಠವೂ ಸೇರಿದಂತೆ ಚಿತ್ತಾಲರು ಬರೆದ ಅನೇಕ ಲೇಖನಗಳನ್ನು ಸಂಕಲಿಸಿ, `ಅಂತಃಕರಣವನ್ನು ಇದೀಗ ಹೊರತರಲಾಗಿದೆ. ಇದರಲ್ಲಿ ಚಿತ್ತಾಲರು ಅನೇಕ ಕಡೆ ಮಾಡಿದ ಭಾಷಣಗಳಿವೆ. `ಓದುವ ಕೋಣೆಯಲ್ಲಿವಿಭಾಗದಲ್ಲಿ ಅವರನ್ನು ಪ್ರಭಾವಿಸಿದ ಲೇಖಕರ, ಗೆಳೆಯರ, ನೆಂಟರ ಬಗೆಗೆ ನುಡಿ ಬರಹಗಳಿವೆ. ಅವರ ಕತೆಗಳ ಪ್ರಪಂಚವಾದ ಹನೇಹಳ್ಳಿ ಕಥೇತರ ಬರಹಕ್ಕೂ ಹಬ್ಬಿಕೊಂಡಿರುತ್ತದೆ ಎನ್ನುವುದಕ್ಕೆ ಈ ಸಂಕಲನ ಸಾಕ್ಷಿ. ವಾಸ್ತವ ಮತ್ತು ಕಥಾ ಪರಿಸರವೆರಡೂ ಆಗಿರುವ ಹನೇಹಳ್ಳಿ ಇಲ್ಲೂ ನಿಮ್ಮನ್ನು ಕಾಡುತ್ತದೆ.

ಶೀರ್ಷಿಕೆ: ಅಂತಃಕರಣ ಲೇಖಕರು: ಯಶವಂತ ಚಿತ್ತಾಲ ಪ್ರಕಾಶಕರು: ಕ್ರಿಸ್ಟ್ ಯೂನಿವರ್ಸಿಟಿ, ಕನ್ನಡ ಸಂಘ ಪುಟಗಳು: 156 ಬೆಲೆ:ರೂ.110/-

ಕೃಪೆ : ಕನ್ನಡ ಪ್ರಭ

ಗಂಟೆಯ ನೆಂಟನೆ ಓ ಗಡಿಯಾರ..

aagomme-eegommeಗಿರೀಶ ಕಾರ್ನಾಡರು ಆಗೊಮ್ಮೆ ಈಗೊಮ್ಮೆ ಗೀಚಿದ ಲೇಖನಗಳನ್ನು, ಟಿಪ್ಪಣಿಗಳನ್ನು, ಭಾಷಣಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಪರಿವಿಡಿಯಲ್ಲಿರುವ ವೈವಿಧ್ಯ ಬೆಪ್ಪು ಹಿಡಿಸುತ್ತದೆ : ಶಿವರಾಮ ಕಾರಂತರ `ಅಳಿದ ಮೇಲೆಕಾದಂಬರಿ ಕುರಿತು ಬರದದ್ದು, ಕನ್ನಡ ಸಿನೇರಂಗದಲ್ಲಿ ಜಾತಿ ಸಂಘರ್ಷ, ನಾಗರಿಕ / ಸೈನಿಕ ಮುಂತಾದ ತಲೆ ಬರಹಗಳ ಅರ್ಥಾರ್ಥ ಸಂಬಂಧವಿಲ್ಲದ ಲೇಖಗಳು ಇಲ್ಲಿ ಒಟ್ಟುಗೂಡಿವೆ. ಕಾರ್ನಾಡರದು ಎಂಬ ಕಾರಣಕ್ಕಾಗಿ. ಒಂದು ವಿಧದಲ್ಲಿ ಒಳ್ಳೆಯದೇ. ಏಕೆಂದರೆ ಕಾರ್ನಾಡರ ವಿಶಿಷ್ಟ ಕನ್ನಡ, ತೊಡಕಿನ ವಾಕ್ಯಗಳು, ಒಗಚು ಶೈಲಿ (ಅವರ ನಾಟಕಗಳಲ್ಲಿ ಸಿಗುವುದಕ್ಕಿಂತ ಭಿನ್ನವಾಗಿರುವ) ಹೊಸ ಓದುಗರಿಗೆ ತುಸು ಫೆಮೀಲಿಯರ್ ಆದೀತು. ದಶಕಗಳ ಹಿಂದೆ ಬರೆದ ಕೆಲವಂತೂ ಉದಾಹರಣೆಗೆ `ನಾಟಕ ಮತ್ತು ವೈಚಾರಿಕತೆಹೊಳಪು ಕಳೆದುಕೊಂಡು `ಇಲ್ಲಿ, ಇವು, ಈಗ, ಬೇಕಿತ್ತೆ?’ ಎಂಬ ಕಸಿವಿಸಿ ಹುಟ್ಟಿಸುತ್ತವೆ. ಕೆಲ ಸಮಯದಿಂದ ಕಾರ್ನಾಡರು ತಮ್ಮ ನೆಚ್ಚಿನ ವಸ್ತು, ವಿಷಯ, ಮನೋವೈಜ್ಞಾನಿಕ, ಸಾಹಿತ್ಯಕ ಸಿದ್ಧಾಂತಗಳಿಂದ ಆಚೆ ಸರಿದೇ ಇಲ್ಲವೇನೋ ಎಂಬ ಭ್ರಮೆಯನ್ನೂ ಅವು ಮೂಡಿಸುತ್ತವೆ.

ಈ ಪುಸ್ತಕದ ಬಗ್ಗೆ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ವಿಮರ್ಶೆ ಹೀಗಿದ್ದರೆ ಕನ್ನಡ ಪ್ರಭ ಹೀಗನ್ನುತ್ತದೆ.

ಗಿರೀಶ ಕಾರ್ನಾಡರು ನಾಟಕ ಬಿಟ್ಟು ಬೇರೇನೂ ಬರೆದಿಲ್ಲ ಎಂದು ಬಾಜಿ ಕಟ್ಟಿದರೆ ನೀವು ಸೋಲುತ್ತೀರಿ. ಅವರ ಇತರ ಬರಹಗಳ ಸಂಗ್ರಹ `ಆಗೊಮ್ಮೆ ಈಗೊಮ್ಮೆಹೊರಬಂದಿದೆ. ಇದರಲ್ಲಿ ಕತೆ, ಭಾಷಣ, ವಿಮರ್ಶೆ, ವ್ಯಕ್ತಿಚಿತ್ರ ಎಲ್ಲವೂ ಇರುವುದರಿಂದ ಇದನ್ನೂ ಕಲಬೆರಕೆ ಎನ್ನಬಹುದು. ಕಾರ್ನಾಡರ ಕೃತಿ ಪ್ರಕಾಶನದ ಗುತ್ತಿಗೆ ಹಿಡಿದಿರುವ ಮನೋಹರ ಗ್ರಂಥಮಾಲೆ ಇದನ್ನೂ ಪ್ರಕಟಿಸಿದೆ.

ದಿನಕರ ದೇಸಾಯರ `ಗಂಟೆಯ ನೆಂಟನೆ ಓ ಗಡಿಯಾರಕವಿತೆಯನ್ನು ಕಾರ್ನಾಡರು ವಿಶ್ಲೇಷಿಸಿರುವ ಕ್ರಮ ಅವರ ಹಾಸ್ಯಪ್ರಜ್ಞೆಯನ್ನು ತೋರುವ ಹೊತ್ತಿಗೇ, ವಿಮರ್ಶಕರಿಗೂ ಮಾರ್ಗದರ್ಶಿ ಆಗಬಲ್ಲದು:

`ಗಂಟೆಯ ನೆಂಟನೆ ಓ ಗಡಿಯಾರ.. ಇಲ್ಲಿರುವ ಮೂರನೆಯ ಶಬ್ದ `ಸಂಬೋಧನೆಗಾಗಿ ಬಳಸಲ್ಪಟ್ಟಿದೆ. ಓ ಗಡಿಯಾರವೇ ಎಂದು ಕವಿ ಗಡಿಯಾರವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾನೆ ಎಂದು ಸ್ಪಷ್ಟವಾಗುತ್ತದೆ. ಈ `ಕ್ಕೆ ಇನ್ನೊಂದು ಪ್ರಯೋಜನವಿದೆ. ನಮ್ಮ ಹೆಸರನ್ನು ಕೂಗಿ ಕರೆದಾಗ ನಾವು ಓ ಅನ್ನುತ್ತೇವೆ. ಗಂಟೆಯ ನೆಂಟನೆ ಎಂದು ಕವಿ ಕರೆದಾಗ ಗಡಿಯಾರ ಕೊಟ್ಟ ಉತ್ತರ `‘. `ಕ್ಕೆ ಇನ್ನೊಂದು ಮಹತ್ವದ ಪ್ರಯೋಜನವೂ ಇದೆ.

ಎರಡನೆಯ ಸಾಲಲ್ಲಿ ಬರುವ ಗೋಲಾಕಾರ ಶಬ್ದದಿಂದಾಗಿ ಈ `ಕೇವಲ ಕನ್ನಡ ಪದವಾಗಿರದೆ ಇಂಗ್ಲೀಷ್ `O’ ಆಗಿದೆ. ಇದು ಶೂನ್ಯವನ್ನು ಧ್ವನಿಸುತ್ತದೆ. ಅಚ್ಚಗನ್ನಡ ಪರಂಪರೆಯಾದ ವೀರಶೈವ ಸಿದ್ಧಾಂತವು ಶೂನ್ಯದಲ್ಲಿ ನಿರವಯಲನ್ನು ಕಾಣುತ್ತದೆ.

ವೇಳೆಯ ತಿಳಿಯಲು ನೀನಾಧಾರ. ಇಲ್ಲಿ ತಿಳಿ ಕ್ರಿಯಾಪದವನ್ನು ಮೂರ್ಛೆ ತಿಳಿದೇಳು, ನಿದ್ದೆ ತಿಳಿದೇಳು ಎಂದು ಅರ್ಥೈಸಿದಾಗ…

ಇದನ್ನು ಸಮಕಾಲೀನ ವಿಮರ್ಶಕರು ಮಕ್ಕಳ ಕವಿತೆ ಎಂದು ಅಲಕ್ಷಿಸಿದ್ದರು. ಹೊಸ ವಿಮರ್ಶೆಯ ಸಂದರ್ಭದಲ್ಲೂ ಇದೇ ಅಲಕ್ಷ್ಯ ಮುಂದುವರೆದಿದೆ ಅನ್ನೋದು ಕಾರ್ನಾಡರ ಆಕ್ಷೇಪ.

ಇದನ್ನು ಅವರು ಬರೆದ ವರ್ಷ ಲೇಖನದ ಕೊನೆಗಿಲ್ಲ. ಹೀಗಾಗಿ ಸಮಕಾಲೀನ ಮತ್ತು ಹೊಸ ವಿಮರ್ಶೆ ಎಂದು ಅವರು ಯಾವುದನ್ನು ಕರೆಯುತ್ತಾರೆ ಎಂದು ಸ್ಪಷ್ಟವಾಗುವುದಿಲ್ಲ.

ಶೀರ್ಷಿಕೆ: ಆಗೊಮ್ಮೆ ಈಗೊಮ್ಮೆ ಲೇಖಕರು: ಗಿರೀಶ ಕಾರ್ನಾಡ ಪ್ರಕಾಶಕರು: ಮನೋಹರ ಗ್ರಂಥಮಾಲಾ ಪುಟಗಳು: 226 ಬೆಲೆ:ರೂ. 150/-

ಕೃಪೆ : ವಿಜಯ ಕರ್ನಾಟಕ, ಕನ್ನಡ ಪ್ರಭ

ನಾಗಪ್ಪ ಐತಾಳ ಅಮೆರಿಕಾಕ್ಕೆ ಹೋಗಿ ನಾಗ ಐತಾಳ, ಅಹಿತಾನಲ ಆದ ಮೇಲೆ . .

kalaberake

ಅಮೆರಿಕನ್ನಡಿಗರು ಕಳೆದ ಕೆಲವು ವರುಷಗಳಿಂದ ಕನ್ನಡ ಸಾಹಿತ್ಯಕ್ಕೆ ಸಾಕಷ್ಟು ಮೌಲಿಕ ಕೊಡುಗೆ ನೀಡುತ್ತಾ ಬಂದಿದ್ದಾರೆ. ಗುರುಪ್ರಸಾದ್ ಕಾಗಿನೆಲೆ, ಶ್ರೀವತ್ಸ ಜೋಶಿ, ಜ್ಯೋತಿ ಮಹಾದೇವ್, ತ್ರಿವೇಣಿ ಶ್ರೀನಿವಾಸ್, ಮೋಹನ್ ಮುಂತಾದವರ ಕೃತಿಗಳು ಈಗಾಗಲೇ ಬಂದಿವೆ. ಅಹಿತಾನಲ ಕೂಡ ಈ ಹಿಂದೆ ಕನ್ನಡ ಸಾಹಿತ್ಯದ ಕುರಿತು ಬರೆದಿದ್ದಾರೆ.

ಅಹಿತಾನಲ ಗಂಭೀರ ಸಾಹಿತ್ಯಾಸಕ್ತಿಯವರು. ಅವರು ಒಂದು ಲಹರಿಯಲ್ಲಿ ಬರೆದ ಪ್ರಬಂಧಗಳ ಸಂಕಲನ `ಕಲಬೆರಕೆ‘. ಇಲ್ಲಿರುವ ಹದಿಮೂರು ಪ್ರಬಂಧಗಳೂ ಸಂಕಲನ `ಕಲಬೆರಕೆ‘, ಇಲ್ಲಿರುವ ಹದಿಮೂರು ಪ್ರಬಂಧಗಳೂ ಕಲಬೆರಕೆ ಹೆಸರನ್ನ ಸಮರ್ಥಿಸುತ್ತವೆ.

`ಶಿವರುದ್ರಪ್ಪನವರೊಂದಿಗೆ ರಸನಿಮಿಷಗಳುಪ್ರಬಂಧದಲ್ಲಿ ಕವಿಯೊಂದಿಗೆ ಕಳೆದ ಕ್ಷಣಗಳು ಅಹಿತಾನಲ ನೆನಪಿಸಿಕೊಳ್ಳುತ್ತಾರೆ. ಅದು ಅಲ್ಲಲ್ಲಿ ಸಂದರ್ಶನವೂ ಅಲ್ಲಲ್ಲಿ ಅಹಿತಾನಲರ ವಿಶ್ಲೇಷಣೆಯೂ ಕೆಲವೊಮ್ಮೆ ಜಿ.ಎಸ್.ಎಸ್. ವ್ಯಕ್ತಿತ್ವದ ಒಂದು ತುಣುಕನ್ನು ಪರಿಚಯಿಸುವ ಬರಹವೂ ಆಗಿ ಓದಿಸಿಕೊಂಡು ಹೋಗುತ್ತದೆ.

ರಷ್ಯನ್ ಚಾಲಕನ ಬೇಟಿ, ಕೋಟದ ನೆನಪು, ಹೆಸರಿನ ಕುರಿತ ಲಲಿತ ಪ್ರಬಂಧ, ಗೋವಿನ ಹಾಡು ವಿಶ್ಲೇಷಣೆ – ಹೀಗೆ ಅವರ ವೈವಿಧ್ಯಮಯ ಆಸಕ್ತಿಗೂ ಇದು ಸಾಕ್ಷಿಯಾಗುತ್ತದೆ.

ನಾಗಪ್ಪ ಐತಾಳ ಅಮೆರಿಕಾಕ್ಕೆ ಹೋಗಿ ನಾಗ ಐತಾಳ, ಅಹಿತಾನಲ ಆದ ಪ್ರಸಂಗದ ಜೊತೆಗೇ ಹೆಸರಿನ ಮಹಾತ್ಮೆಯೇ ಇದೆ.

ಶೀರ್ಷಿಕೆ: ಕಲಬೆರಕೆ ಲೇಖಕರು: ಅಹಿತಾನಲ ಪ್ರಕಾಶಕರು: ಮನೋಹರ ಗ್ರಂಥಮಾಲಾ ಪುಟಗಳು:160 ಬೆಲೆ:ರೂ.100/-

ಕೃಪೆ : ಕನ್ನಡ ಪ್ರಭ