ಪ್ರವಾಸ ಕಥನ ತ್ರಿವಳಿ

ಸುಭಗ ಶೈಲಿಯ ನಾಗತಿಹಳ್ಳಿ ತಮ್ಮ `ಅಲೆಮಾರಿ ಬರವಣಿಗೆಸ್ಥಿರ ಶೀರ್ಷಿಕಯಡಿ ಕನ್ನಡಿಗರಿಗಾಗಿ ಸಿದ್ಧಪಡಿಸಿಕೊಟ್ಟಿರುವ ಪ್ರವಾಸ ಕಥನಗಳ ತ್ರಿವಳಿ ಇದು. ಇವುಗಳಲ್ಲಿ ಫ್ರಾನ್ಸ್ ಪ್ರವಾಸ ಕಥನ `ಅಯನಹಾಗೂ `ಅಮೆರಿಕಾ, ಅಮೆರಿಕಾಗಳು ಮರುಮುದ್ರಣಗಳಾದರೆ, ಈಜಿಪ್ಟ್ ಪ್ರವಾಸ ಕಥನ `ಹೊಳೆದಂಡೆಹೊಸ ಪುಸ್ತಕ. ನೈಲ್ ಎಂಬ ಮಹಾನ್ ದಂಡೆಯ ಮೇಲಿರುವ, ಕಣ್ಣು ಬಿಟ್ಟ ಕಡೆ ಮರಳುಗಾಡು ನಡುವೆ ಒಡಲು ಸೀಳುವ ನದಿ, ಸಾವಿರಾರು ವರ್ಷಗಳ ಚರಿತ್ರೆಯ ಪಿರಮಿಡ್ಡುಗಳಿರುವ ಈಜಿಪ್ಟ್ ತನ್ನ ಅನೂಹ್ಯತೆಯಿಂದಲೇ ಪ್ರವಾಸಿಗನನ್ನು ಪ್ರವಾಸ ಹೋಗಲಾರದ ಓದುಗನನ್ನು ಸೆಳೆಯುವ ಪ್ರದೇಶ. ಕಣ್ಣು, ಕಿವಿ, ಮನಸ್ಸುಗಳನ್ನೆಲ್ಲ ತೆರೆದಿಟ್ಟುಕೊಂಡಿರುವ ಪ್ರವಾಸಿಯಾಗಿ ನಾಗ್ತಿ ಅದಕ್ಕೆ ನ್ಯಾಯ ಒದಗಿಸಿದ್ದಾರೆ.

ನಡುನಡುವೆ ಅವರೊಳಗಿನ ಕವಿಯೂ ಪ್ರಕಟ:`… ಸೂರ್ಯನ ಬೆಳಗಿನ ಕಿತ್ತಲೆ ಕಿರಣಗಳು ನೈಲ್ ಮೇಲೆ ವಿಸ್ಮಯಕರ ಚಿತ್ತಾರದ ರಂಗೋಲಿ ಬಿಡಿಸುತ್ತಿದ್ದವು. ನಾವೆಗಳು ತೇಲಲು ಅಣಿಯಾಗುತ್ತಿದ್ದವು. ಆಸ್ವಾನ್ ನಗರದ ಚುಮುಚುಮು ಮುಂಜಾನೆ, ಧೀರ ಗಂಭೀರವಾಗಿ, ಮಂದಗಮನೆಯಾಗಿ, ಸಾವಿರಾರು ಗುಟ್ಟು ಬಲ್ಲ ಕಾಲ ಶಕ್ತಿಯಂತೆ ಹರಿಯುವ ನೈಲ್ ನೋಡುವ ಅನುಭವ ಎಂಥ ಬರಡು ಎದೆಯಲ್ಲೂ ಬೆರಗು ಹುಟ್ಟಿಸಬಲ್ಲದು. ಇಂಥದೊಂದು ಬೆರಗು ನನಗೆ ಅಸ್ಸಾಂನಲ್ಲಿ ಹರಿಯುವ ಗಂಡು ನದಿ ಬ್ರಹ್ಮಪುತ್ರಾ ಎದುರು ನಿಂತಾಗಲೂ ಆಗಿತ್ತು…

ಮೇಲಿನ ಮೂರು ಪುಸ್ತಕಗಳೊಂದಿಗೆ ಅವರ `ವಲಸೆ ಹಕ್ಕಿಯ ಹಾಡುಪುಸ್ತಕವೂ (ಮರು ಮುದ್ರಣ) ಹೊರಬಂದಿದೆ. ಅವರ ಹುಟ್ಟೂರು ನಾಗತಿಹಳ್ಲಿಯ ವಿಲಕ್ಷಣ ಘಟನೆಗಳು, ವಿಚಿತ್ರ ಜನಗಳು, ಸುತ್ತಲ ಹಳ್ಳಿಗಳಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರರ ಕತೆಗಳು ಮುಂತಾದ ವಾಸ್ತವ ಘಟನೆಗಳನ್ನಾಧರಿಸಿದ ಕಾಲ್ಪನಿಕ ಬರಹವಾಗಿ ಇದು ತೆರೆದುಕೊಳ್ಳುತ್ತದೆ.

ಶೀರ್ಷಿಕೆ: ಹೊಳೆದಂಡೆ ಲೇಖಕರು: ನಾಗತಿಹಳ್ಳಿ ಚಂದ್ರಶೇಖರ ಪ್ರಕಾಶಕರು : ಅಭಿವ್ಯಕ್ತಿ ಒಂದು ಸಾಂಸ್ಕೃತಿಕ ವೇದಿಕೆ ಪುಟಗಳು : 74 ಬೆಲೆ:ರೂ.50/-

ಶೀರ್ಷಿಕೆ: ಅಯನ ಲೇಖಕರು: ನಾಗತಿಹಳ್ಳಿ ಚಂದ್ರಶೇಖರ ಪ್ರಕಾಶಕರು : ಅಭಿವ್ಯಕ್ತಿ ಒಂದು ಸಾಂಸ್ಕೃತಿಕ ವೇದಿಕೆ ಪುಟಗಳು : 174 ಬೆಲೆ:ರೂ.100/-

ಶೀರ್ಷಿಕೆ: ಅಮೆರಿಕ ಅಮೆರಿಕ ಲೇಖಕರು: ನಾಗತಿಹಳ್ಳಿ ಚಂದ್ರಶೇಖರ ಪ್ರಕಾಶಕರು : ಅಭಿವ್ಯಕ್ತಿ ಒಂದು ಸಾಂಸ್ಕೃತಿಕ ವೇದಿಕೆ ಪುಟಗಳು : 178 ಬೆಲೆ:ರೂ.100/-

ಶೀರ್ಷಿಕೆ: ವಲಸೆ ಹಕ್ಕಿಯ ಹಾಡು ಲೇಖಕರು: ನಾಗತಿಹಳ್ಳಿ ಚಂದ್ರಶೇಖರ ಪ್ರಕಾಶಕರು :ಅಭಿವ್ಯಕ್ತಿ ಒಂದು ಸಾಂಸ್ಕೃತಿಕ ವೇದಿಕೆ ಪುಟಗಳು :102 ಬೆಲೆ:ರೂ.60/-

ಕೃಪೆ : ವಿಜಯ ಕರ್ನಾಟಕ

ಪ್ರವಾಸಿ ಕಂಡ ಇಂಡಿಯಾ (ಸಂಪುಟ 3)

ದಿವಂಗತ ಎಚ್. ಎಲ್. ನಾಗೇಗೌಡರು ಸಂಪಾದಿಸಿದ ಪ್ರವಾಸಿಗರ ಲೇಖನಮಾಲೆಯ ಬೃಹತ್ ಸಂಪುಟವಿದು. 1963 ರಲ್ಲಿ ಮುದ್ರಣಗೊಂಡ ಈ ಕೃತಿ ಈಗ ಮರುಮುದ್ರಣಗೊಂಡಿದೆ. ಕ್ರಿಸ್ತಪೂರ್ವ ಐದನೆಯ ಶತಮಾನದಿಂದ ಕ್ರಿಸ್ತಶಕ 18ನೆಯ ಶತಮಾನದ ಅವಧಿಯಲ್ಲಿ ಭಾರತಕ್ಕೆ ಬಂದು, ಇಲ್ಲಿನ ವ್ಯಾಪಾರ, ಸಾಂಸ್ಕೃತಿಕ, ಸಾಮಾಜಿಕ ಜೀವನವನ್ನು ಕಂಡು ಹೋದ ವಿದೇಶೀ ಪ್ರವಾಸಿಗರು ಬರೆದ ಅನುಭವಗಳ ಸಾರಸಂಗ್ರಹ ಇಲ್ಲಿದೆ. ಫಾದರ್ ಥಾಮಸ್ ಸ್ಟೀವೆನ್ಸ್, ಫಾದರ್ ಅಂತೋಣಿ ಮೊನ್ಸೆರೆಟ್, ಸರ್ ಥಾಮಸ್ ರೋ ಸೇರಿದಂತೆ 16 ಪ್ರವಾಸಿಗರ ಅನುಭವಗಳನ್ನು ಅನುವಾದಿಸಿ ಉಣ ಬಡಿಸಿದ್ದಾರೆ. ಅಲ್ಲಲ್ಲಿ ರೇಖಾ ಚಿತ್ರಗಳಿವೆ. ವಿದೇಶಿ ಪ್ರವಾಸಿಗರ ಅನುಭವಗಳನ್ನು ಓದುವಾಗ ಭಾರತದ ಇತಿಹಾಸ, ಸಂಸ್ಕೃತಿ, ಕಲೆ, ಸಾಮಾಜಿಕ, ಆರ್ಥಿಕ ಪರಿಸ್ಥಿತಿಯ ಪರಿಚಯವಾಗುತ್ತದೆ. ಆಯಾ ಕಾಲಘಟ್ಟದ ನೈಜ ಚಿತ್ರಣ ದೊರೆಯುತ್ತದೆ.

ಕೃಪೆ : ಸಂಯುಕ್ತ ಕರ್ನಾಟಕ