ನೀವು ಪುಸ್ತಕ ಪ್ರೀತಿಸುತ್ತೀರಾ?
ಪುಸ್ತಕ ಮತ್ತು ಅದರ ಪ್ರೀತಿಯನ್ನು ಹಂಚುವ ಆಸೆ ಹೊತ್ತವರ ‘ಒನ್ ಸ್ಟಾಪ್ ಶಾಪ್‘ ಇದು.
ಇತ್ತೀಚಿಗೆ ಪ್ರಕಟವಾದ, ಪುಸ್ತಕಗಳ ಪರಿಚಯ, ವಿಮರ್ಶೆ ಇಲ್ಲಿ ಸಿಗುವಂತೆ ಮಾಡುವುದು ನಮ್ಮ ಆಶಯ. ಇದು, ನಮ್ಮ ಪತ್ರಿಕೆಗಳಲ್ಲಿ ಬರುವ ಪುಸ್ತಕ ಪರಿಚಯ-ವಿಮರ್ಶೆ ಯ ಡೈಜೆಸ್ಟ್ ಸಹ.
ನೀವು ಓದಿದ, ಮೆಚ್ಚಿದ, ಎಲ್ಲರೂ ಓದಲೇಬೇಕೆಂದು ನೀವು ಬಯಸುವ ಪುಸ್ತಕದ ಬಗ್ಗೆ ಬರೆಯಿರಿ.
ನಿಮಗೆ ಸಿಗದ ಪುಸ್ತಕ ಎಲ್ಲಿ ಸಿಗಬಹುದು ಎಂಬ ಬಗ್ಗೆ ಪ್ರಶ್ನೆ ಕೇಳಿ.
ನೀವು ಲೇಖಕರು ಅಥವಾ ಪ್ರಕಾಶಕರಾಗಿದ್ದರೆ ನಿಮ್ಮ ಪುಸ್ತಕಗಳ ಮಾಹಿತಿ ಕಳಿಸಿ.
ಪುಸ್ತಕದ ಎಲ್ಲಾ ಮಗ್ಗುಲುಗಳನ್ನು ಮುಟ್ಟುವ ನಮ್ಮ ಆಶಯದಲ್ಲಿ ಕೈಜೋಡಿಸಿ.
ಇತ್ತೀಚೆಗೆ ನಮ್ಮ ಎಳೆವಯಸ್ಸಿನ `Hero’ ಮೈಸೂರು ಹುಲಿ ಟಿಪ್ಪು ಸುಲ್ತಾನನನ್ನು `Zero’ ಮಾಡುವಲ್ಲಿ ಸತತ ಪ್ರಯತ್ನ ನಡೆಯುತ್ತಿದೆ. ಈ ಪ್ರಯತ್ನದಲ್ಲಿ ಅವರು ಸ್ವಲ್ಪ ಮಟ್ಟಿಗೆ ಯಶಸ್ಸೂ ಕಂಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ನಾನು ನಮ್ಮ ಹೀರೋ ಪರವಾಗಿ ಮಾತನಾಡಲು proof ಇರಬೇಕಲ್ಲಾ. ಆ proof ನಮಗೆ ಇಲ್ಲಿ ಸಿಗುತ್ತದೆ.
ನಮ್ಮ ಹೀರೋ ನಿಜವಾಗಿಯೂ ಹೀರೋನೇ ಅಂತ ಸಾಬೀತುಪಡಿಸುವ ಈ ಲಾವಣಿಗಳನ್ನು ಜನಸಾಮಾನ್ಯರ ನಡುವೆ ಪ್ರಚಾರ ಮಾಡುವ ಕರ್ತವ್ಯ ನಮ್ಮದು.
ಈ ಸಂಕಲನವನ್ನು ಪ್ರಕಟಿಸಿ ನಾವು ನಮ್ಮ ಕರ್ತವ್ಯವನ್ನು ಸ್ವಲ್ಪಮಟ್ಟಿಗೆ ನಿರ್ವಹಿಸಿದ್ದೇನೆ. ಇನ್ನು ಈ ವಿಷಯವನ್ನು ಜನರ ಮಧ್ಯೆ ಪ್ರಚಾರ ಪಡಿಸುವ ಕರ್ತವ್ಯದಲ್ಲಿ ನಮ್ಮ ಜತೆಗೆ ಕೈಗೂಡಿಸಿ, ಪುಸ್ತಕವನ್ನು ಕೊಂಡು ಓದಿ ಇತರರಿಂದಲೂ ಓದಿಸಿ ಎಂದು ಕೇಳಿಕೊಳ್ಳುತ್ತಿದ್ದೇವೆ.
ಮೈಸೂರು ಹುಲಿಯ ಮುಖಕ್ಕೆ ಮಸಿ ಬಳಿಯಲು ಪ್ರಯತ್ನಿಸುವವರು ಆಯೋಜಿಸಿರುವ ಹಾವೇರಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿರೋಧ ಒಡ್ಡಲು ಆಯೋಜಿಸಿರುವ ಜನಸಾಹಿತ್ಯ ಸಮ್ಮೇಳನದಲ್ಲಿ ಈ ಪುಸ್ತಕ ಬಿಡುಗಡೆಯಾಗುತ್ತಿದೆ.
ಬಿಎಂಶ್ರೀ ಪ್ರತಿಷ್ಠಾನದಲ್ಲಿ ನಡೆಯುವ ಚರ್ಚಾಗೋಷ್ಟಿಯಲ್ಲಿ (zoom link ಮೂಲಕವಾದರೂ)
ಭಾಗವಹಿಸಿ
ಈ ಪುಸ್ತಕದ ಬಗ್ಗೆ ಮಹಿಳಾ ಹೋರಾಟಗಾರ್ತಿ, ಲೇಖಕಿ, ಚಿಂತಕಿ ಡಾ. ಎನ್. ಗಾಯತ್ರಿ ಅವರ ಅಭಿಪ್ರಾಯ ಇದು.
ಜಗತ್ತು ಸ್ವೀಕರಿಸಿದ ಮಾರ್ಕ್ಸ್ ವಾದವೆಂಬ ವಿಶಿಷ್ಟ ಲೋಕದೃಷ್ಟಿಗೆ ಕಾರಣಕರ್ತರಾದ ಜೋಡಿ ಪ್ರತಿಭೆಗಳು ಮಾರ್ಕ್ಸ್ ಮತ್ತು ಏಂಗೆಲ್ಸ್. ಇವರಲ್ಲಿ ಏಂಗೆಲ್ಸ್ ಬರೆದ ಕುಟುಂಬ, ಖಾಸಗಿ ಆಸ್ತಿ ಮತ್ತು ಪ್ರಭುತ್ವಗಳ ಉಗಮ – ಇಡೀ ವಿಶ್ವದ ಮೇಲೆ ಬಹುಮುಖ್ಯ ಪ್ರಭಾವ ಮತ್ತು ಪರಿಣಾಮವನ್ನು ಬೀರಿದ ಕೃತಿ. ಈ ಕೃತಿ ಪ್ರಕಟವಾದಂದಿನಿಂದ ಇಲ್ಲಿಯವರೆಗೆ ಜಗತ್ತಿನ ಜ್ಞಾನ ಪ್ರಪಂಚಕ್ಕೆ ವಿಸ್ತಾರವನ್ನು, ವೈಶಾಲ್ಯತೆಯನ್ನು ನೀಡುತ್ತಲೇ ಬಂದಿದೆ. 1884ರಲ್ಲಿ ಏಂಗೆಲ್ಸ್ ತಮ್ಮ ಮೌಲಿಕ ಕೃತಿಯಾದ `ಕುಟುಂಬ, ಖಾಸಗಿ ಆಸ್ತಿ ಮತ್ತು ಪ್ರಭುತ್ವಗಳ ಉಗಮ’ ಕೃತಿಯನ್ನು ರಚಿಸಿದರು. ಮಾನವ ಜನಾಂಗದ ಪ್ರಾಗೈತಿಹಾಸಿಕ ಕಾಲದ ಜೀವನ ವಿಧಾನವನ್ನು ತೆರೆದಿಡುವ ಈ ಗ್ರಂಥವು ಗ್ರೀಸ್, ಐರ್ಲೆಂಡ್ ಮತ್ತು ಜರ್ಮನಿಯ ಪ್ರಾಚೀನ ಸಮಾಜಗಳ ಪರಿಚಯ ಮಾಡಿಕೊಡುತ್ತದೆ. ಆರಂಭಿಕ ಹಂತದ ಸಾಮ್ಯತೆಯ ಸಮಾಜ, ಇವುಗಳ ನಿರ್ದಿಷ್ಟ ಸ್ವರೂಪವನ್ನು ಚರ್ಚಿಸುತ್ತಾ ಕುಟುಂಬದ ಉಗಮವನ್ನು ಏಂಗೆಲ್ಸ್ ಗುರುತಿಸುತ್ತಾರೆ. ಕ್ರಮೇಣ ಬೆಳೆದು ಬಂದ ಸಾಮಾಜಿಕ-ಆರ್ಥಿಕ ಸಂರಚನೆಗಳು ಸಮಾಜವನ್ನು ಒಂದು ಹಂತದಿಂದ ಇನ್ನೊಂದಕ್ಕೆ ಕೊಂಡೊಯ್ಯುತ್ತಿದ್ದಂತೆ ಕುಟುಂಬ, ಖಾಸಗಿ ಆಸ್ತಿಯನ್ನು ಆಧರಿಸಿದ ವರ್ಗ ಸಮಾಜ ಮತ್ತು ಪ್ರಭುತ್ವ ಹುಟ್ಟಿಕೊಳ್ಳುತ್ತವೆ. ಈ ಮೂರು ಘಟಕಗಳಿಗೂ ಇರುವ ಪರಸ್ಪರ ಸಂಬಂಧಗಳನ್ನು ಅರ್ಥಮಾಡಿಕೊಂಡರಷ್ಟೇ ದಮನದ ಸ್ವರೂಪ ಮತ್ತು ಕಾರಣಗಳು ಸ್ಪಷ್ಟವಾಗುತ್ತವೆ.
ಕಾಡು ಮನುಷ್ಯನ ಕಾಲದಿಂದ ನಾಗರಿಕ ಪೂರ್ವ, ನಾಗರಿಕ ಹಂತದ ಕಾಲದವರೆಗೆ ಸಾಗಿರುವ ಮನುಷ್ಯನ ವಿಕಾಸವನ್ನು ಚರ್ಚಿಸುತ್ತ ಮಾನವ ಸಂಸ್ಕೃತಿಯ ಇತಿಹಾಸವನ್ನು ಈ ಕೃತಿ ಬಿಚ್ಚಿಡುತ್ತದೆ. ಸಮಾಜದಲ್ಲಿ ಗಂಡು-ಹೆಣ್ಣಿನ ನಡುವಿನ ಲೈಂಗಿಕ ಸಂಬಂಧಗಳಲ್ಲಿ ಉಂಟಾದ ಬದಲಾವಣೆ ಈ ಚರಿತ್ರೆಯ ಭಾಗವಾಗಿದೆ. ವಿಶ್ವದ ಹಲವಾರು ಸಮಾಜಗಳಲ್ಲಿ ಕಂಡು ಬಂದ ಬಹುಪತ್ನಿತ್ವ, ಬಹುಪತಿತ್ವದಿಂದ ಏಕಪತಿ-ಪತ್ನಿತ್ವದವರೆಗೆ ಸಾಗಿದ ಸಮಾಜದಲ್ಲಿ ಯಾರು ಯಾರನ್ನು ಮದುವೆಯಾಗುತ್ತಿದ್ದರು, ಎನ್ನುವ ವಿವರಗಳು, ಗೋತ್ರ ವ್ಯವಸ್ಥೆ ಬೆಳೆದು ಬಂದ ರೀತಿ ಮುಂತಾದ ವಿಷಯಗಳನ್ನು ಈ ಕೃತಿ ಸುದೀರ್ಘವಾಗಿ ಚರ್ಚಿಸುತ್ತದೆ. ಗಂಡು-ಹೆಣ್ಣು ಇಬ್ಬರೂ ಸೇರಿ ಕೂಡಿಸುತ್ತಿದ್ದ ಕುಟುಂಬದ ಸಂಪತ್ತು ಗಂಡಸಿನ ಪಾಲಾದದ್ದು ಹೇಗೆ, ವಂಶಾವಳಿಯು ತಾಯಿ ಮತ್ತು ತಂದೆಯ ಮೂಲಕ ಹರಿದು ಬಂದ ವಿನ್ಯಾಸವನ್ನು ಕೂಡ ಚರ್ಚಿಸಲಾಗಿದೆ. ಉತ್ಪಾದನಾ ಶಕ್ತಿಯಲ್ಲಾದ ಬದಲಾವಣೆ ಶ್ರಮ ವಿಭಜನೆಯನ್ನು ಹುಟ್ಟಿ ಹಾಕಿದ್ದು ಮತ್ತು ಅದರಿಂದ ಉಂಟಾದ ವರ್ಗಗಳ ವಿಭಜನೆಯಲ್ಲಿ ಮಹಿಳೆ ಬಹುಮುಖ್ಯ ಶೋಷಿತಳಾದಳು, ಎನ್ನುವುದನ್ನು ಇಲ್ಲಿ ನೋಡಬಹುದು. ಇಂದು ನಾವು ಕಾಣುವ ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗ, ಪೊಲೀಸ್, ಸೈನಿಕರು – ಎಲ್ಲವುಗಳ ಆವಿರ್ಭಾವಕ್ಕೂ ಒಂದು ಚರಿತ್ರೆಯಿದೆಯೆಂಬುದರ ಪ್ರಾಥಮಿಕ ತಿಳುವಳಿಕೆಯನ್ನು ಮತ್ತು ಅದರ ಬದಲಾವಣೆಯ ಪ್ರಕ್ರಿಯೆಯನ್ನು ಈ ಕೃತಿ ಸಾದರಪಡಿಸುತ್ತದೆ.
ಇಂದು ನಮ್ಮೆಲ್ಲರ ಬದುಕು ಸಂಕಷ್ಟದಲ್ಲಿದೆ. ಸಮಷ್ಠಿ ಹಿತವು ಗೌಣವಾಗಿ, ವ್ಯಕ್ತಿಹಿತವು ಮೇಲುಗೈಯ್ಯಾಗಿ, ಹಿರಿದು ತಿನ್ನುವುದೇ ಈ ಯುಗದ ಮೌಲ್ಯವಾಗಿರುವ ಸಂದರ್ಭದಲ್ಲಿ ‘ಹೆಣ್ಣು’ ತನ್ನ ಅಸ್ಮಿತೆಯನ್ನು ಕಳೆದುಕೊಂಡು ಭೋಗದ ವಸ್ತುವಾಗಿದ್ದಾಳೆ; ಪುರುಷನ ಆಸ್ತಿಯಾಗಿ, ಕೌಟುಂಬಿಕ ದೌರ್ಜನ್ಯದ ಸುಳಿಯಲ್ಲಿ ಸಿಕ್ಕಿಕೊಂಡಿದ್ದಾಳೆ. ಕುಟುಂಬದೊಳಗಿನ ಅಧಿಕಾರದ ಅಸಮತೋಲನ ಸಂಬಂಧಗಳು, ಆಸ್ತಿರಹಿತ ಹೆಣ್ಣಿನ ನೋವಿಗೆ ಕಾರಣವಾಗಿವೆ. ವಿವಾಹದ ಚೌಕಟ್ಟು ವಿಸ್ತರಿಸಿದೆ. ವಿಭಿನ್ನ ಲಿಂಗಗಳ ಪರಿಕಲ್ಪನೆ ಬದಲಾಗಿದೆ. ಸಲಿಂಗಿಗಳು ಮತ್ತು ತೃತೀಯ ಲಿಂಗಿಗಳ ಜೀವನ ವಿನ್ಯಾಸಗಳು ನಮ್ಮ ಕಣ್ಣ ಮುಂದಿದೆ. ಈ ಎಲ್ಲ ಅಂಶಗಳನ್ನು ಪ್ರತಿಫಲಿಸುವ ಮತ್ತು ನಿಯಂತ್ರಿಸುವ ಪುರುಷಾಧಿಪತ್ಯದ ಪ್ರಭುತ್ವ, ಸಮಾನತೆಯ ಮಾನವೀಯ ಸಮಾಜವನ್ನು ಕನಸಿನ ಗಂಟಾಗಿಸಿದೆ. ಏಕ ಸಂಸ್ಕೃತಿಯ ದಂಡವನ್ನು ಬಹುಜನರ ಮೇಲೆ ಹೇರಲಾಗುತ್ತಿರುವ ಇಂದಿನ ಭಾರತದ ಸಂದರ್ಭದಲ್ಲಿಯಂತೂ ‘ಸಂಸ್ಕೃತಿ’ಯ ಅಪವ್ಯಾಖ್ಯಾನ ಅಮಾನುಷವಾಗಿ ನಡೆದಿದೆ. ಸಂಸ್ಕೃತಿಯೆಂಬುದು ನಿಂತ ನೀರಲ್ಲ, ಅದು ಕಾಲದ ಪ್ರವಾಹದಲ್ಲಿ ಹಲವಾರು ಸ್ಥಿತ್ಯಂತರ ಹೊಂದಿ ಬದಲಾಗಿದೆ ಮತ್ತು ಅದನ್ನು ಗಮನಿಸಿ, ಗುರುತಿಸಿದಾಗ ಮಾತ್ರ ಸಮಾಜದ ಅನಿಷ್ಟಗಳ ವಿರುದ್ಧ ಹೋರಾಡಲು ಸಾಧ್ಯ, ಎಂಬ ತಿಳುವಳಿಕೆಯ ಅಗತ್ಯ ಜರೂರಾಗಿ ಬೇಕಿದೆ. ಇಂತಹ ಅರಿವನ್ನು ಉಂಟು ಮಾಡುವ ಏಂಗೆಲ್ಸ್ ರ `ಕುಟುಂಬ, ಖಾಸಗಿ ಆಸ್ತಿ ಮತ್ತು ಪ್ರಭುತ್ವ’ ಕೃತಿಯ ಓದು ಇಂದಿನ ವರ್ತಮಾನದ ಅಗತ್ಯವೂ ಹೌದು.
ಕುಟುಂಬ ಸಮಾಜದ ಅತಿ ಮುಖ್ಯ ಘಟಕ. ಅದು ಹೆಣ್ಣಿನ ವಿಷಯದಲ್ಲಿ ಬಹು ಮುಖ್ಯ ಶೋಷಕ ಯಂತ್ರವಾಗಿದೆ. ಹೆಣ್ಣು ತನ್ನ ಶೋಷಣೆಯ ವಿರುದ್ಧ ಹೋರಾಡಲು ಅದರ ಚರಿತ್ರೆಯನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಶೋಷಣೆಯ ಚರಿತ್ರೆಯನ್ನು ವಿವರಿಸುವ ಈ ಕೃತಿ ತಮ್ಮ ದಮನದ ವಿರುದ್ಧ ಹೋರಾಟದಲ್ಲಿ ತೊಡಗಿರುವ ಎಲ್ಲರಿಗೂ ಕೈ ದೀವಿಗೆಯಾಗಿದೆ.
ಇದರ ಕನ್ನಡ ಅನುವಾದಗಳು ಈಗಾಗಲೇ ಒಂದೆರಡು ಬಂದಿದ್ದರೂ, ಈ ಅನುವಾದ ಅತ್ಯಂತ ಸರಳವಾದ ಭಾಷೆಯಲ್ಲಿ ಓದಲು ಮತ್ತು ತಿಳಿಯಲು ಅನುಕೂಲಕರವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪುಸ್ತಕದ ಮೊದಲಿಗೆ, ಅನುವಾದಕಿಯು ಬರೆದಿರುವ ದೀರ್ಘ ಮುನ್ನುಡಿಯು ಪುಸ್ತಕದ ಸಾರ ಸರ್ವಸ್ವವನ್ನು ಒಂದೆಡೆ ಹಿಡಿದಿಟ್ಟಿದೆ. ನಾಲ್ಕು ದಶಕಗಳಿಂದ ಕರ್ನಾಟಕದ ಮಹಿಳಾ ಚಳುವಳಿಯಲ್ಲಿ ತೊಡಗಿಕೊಂಡಿರುವ ಜಯಲಕ್ಷ್ಮಿಯವರು ಈ ಕೃತಿಯ ಪ್ರಸ್ತುತತೆಯನ್ನು ಇಂದಿನ ನಮ್ಮ ದೇಶದ ಪರಿಸ್ಥಿತಿಯ ಹಿನ್ನೆಲೆಯಲ್ಲಿಟ್ಟು ವಿವರಿಸಿದ್ದಾರೆ. ಅದಕ್ಕಾಗಿ ಅನುವಾದಕಿಯು ಅಭಿನಂದನಾರ್ಹರು. ಇಂತಹ ಅಗತ್ಯವಾದ ಪುಸ್ತಕದ ಯೋಜನೆಯನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿರಿಸಿರುವ ನವಕರ್ನಾಟಕ ಪ್ರಕಾಶನ ಮತ್ತು ಕ್ರಿಯಾ ಮಾಧ್ಯಮದವರಿಗೆ ಮನಃಪೂರ್ವಕ ವಂದನೆಗಳು.
“ನಾನು ಹೇಳುವುದೆಲ್ಲವೂ ನನ್ನ ಪಕ್ಷದ ನಿಲುವುಗಳು” ಎನ್ನುವ ಧ್ಯೇಯವಾಕ್ಯದ ವಿಶಿಷ್ಟ ರಾಜಕಾರಣಿ ನಮ್ಮ ಕಾಮ್ರೇಡ್ ಶ್ರೀರಾಮರೆಡ್ಡಿ
“ನಾನು ಹೇಳುವುದೆಲ್ಲವೂ ನನ್ನ ಪಕ್ಷದ ನಿಲುವುಗಳು, ಜನರ ವಿಚಾರದಲ್ಲಿ ರಾಜಕಾರಣಿಗೆ ವೈಯಕ್ತಿಕ ನಿಲುವು-ಪಕ್ಷದ ನಿಲುವು ಎಂಬ ಇಬ್ಬಂದಿತನ ಇರಕೂಡದು” ಎಂದು ನಂಬಿದ ರಾಜಕಾರಣಿ ಕಾಮ್ರೇಡ್ ಜಿ.ವಿ. ಶ್ರೀರಾಮರೆಡ್ಡಿ ಯವರು 1994 ಮತ್ತು 2004ರಲ್ಲಿ ಹೀಗೆ ಎರಡು ಬಾರಿ ಸಿಪಿಐ(ಎಂ) ಪಕ್ಷದ ಅಭ್ಯರ್ಥಿಯಾಗಿ ಬಾಗೇಪಲ್ಲಿಯಿಂದ ಚುನಾಯಿತರಾಗಿ ಶಾಸಕರಾಗಿದ್ದರು.
ವಿಧಾನಸಭೆಯಲ್ಲಿ ಶ್ರೀರಾಮರೆಡ್ಡಿಯವರು ಮಾತಿಗೆ ನಿಂತರೆಂದರೆ ಇಡೀ ಅಸೆಂಬ್ಲಿಯಲ್ಲಿ ಪಿನ್ ಡ್ರಾಪ್ ಸೈಲೆನ್ಸ್ ಇರುತ್ತಿತ್ತು. ಕೇವಲ ತನ್ನ ಕ್ಷೇತ್ರವಲ್ಲದೆ ಇಡೀ ರಾಜ್ಯವನ್ನು ಪ್ರತಿನಿಧಿಸಿ ಮಾತನಾಡುತ್ತಿದ್ದ ಶ್ರೀರಾಮರೆಡ್ಡಿಯವರ ವಿದ್ವತ್ತು, ಜನಪರ ಕಾಳಜಿ, ಹಣಕಾಸು, ರಾಜಕೀಯ, ಸಿದ್ದಾಂತದ ಬಗೆಗಿನ ಮಾಹಿತಿಗೆ ಇಡೀ ಸದನ ಕಣ್ಣು ಕಿವಿಗೊಟ್ಟು ಕೇಳಿಸಿಕೊಳ್ಳುತ್ತಿತ್ತು. ಶ್ರೀರಾಮರೆಡ್ಡಿಯವರು ಮಾತನಾಡುತ್ತಿದ್ದಾಗ ಯಾವುದಾದರೂ ಶಾಸಕರು ಮಧ್ಯೆ ಮಾತನಾಡಿದರೆ ಸಭಾಧ್ಯಕ್ಷರು ಅಂತಹ ಶಾಸಕರನ್ನು ಬೈದು ಕುಳ್ಳಿರಿಸಿದ್ದೂ ಇದೆ. ಶ್ರೀರಾಮ ರೆಡ್ಡಿಯವರು ವಿಧಾನಸಭೆಯಲ್ಲಿ ಮಾತನಾಡಿರುವ ದಾಖಲೆಗಳನ್ನು ತೆಗೆದು ನೋಡಿದಾಗ ಈ ಎಲ್ಲಾ ಅಂಶಗಳು ತಿಳಿದುಬರುತ್ತದೆ ಎನ್ನುತ್ತಾರೆ ಪುಸ್ತಕದ ಸಂಪಾದಕರು.
ವಿಧಾನಸಭೆಯಲ್ಲಿ ಮಾತನಾಡುವ ಶೈಲಿಯ ಜತೆಜತೆಗೆ ಇವರ ಕಾರ್ಯವೈಖರಿಯೂ ವಿಶಿಷ್ಟವಾದದ್ದು.
ಉಡುಪಿಯ ಮಣಿಪಾಲ ಕಾಲೇಜಿನಲ್ಲಿ ಓದುತ್ತಿದ್ದ ಮೆಡಿಕಲ್ ವಿದ್ಯಾರ್ಥಿಯನ್ನು ಅಪಹರಿಸಿದ್ದ ಕಿಡಿಗೇಡಿಗಳು ಅತ್ಯಾಚಾರ ಮಾಡಿದ್ದರು. ಕರಾವಳಿಯ ಶಾಸಕರಿಗೆ ಗೊತ್ತಾಗುವ ಮೊದಲೇ ಮಾಜಿ ಶಾಸಕ ಶ್ರೀರಾಮ ರೆಡ್ಡಿಯಲ್ಲಿ ಉಡುಪಿಯಲ್ಲಿದ್ದರು. ನೇರವಾಗಿ ಮಣಿಪಾಲ ಆಸ್ಪತ್ರೆಗೆ ತೆರಳಿದವರೇ, ಆಡಳಿತ ಮಂಡಳಿಯಿಂದ ಸ್ಪಷ್ಟನೆ ಕೇಳಿದರು. ಆ ಬಳಿಕ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಶ್ರೀರಾಮ ರೆಡ್ಡಿಯವರು ಅಲ್ಲೇ ಹೊರಗಡೆ ಸಿಪಿಐ(ಎಂ) ಪಕ್ಷದ ನಾಯಕರ ಜೊತೆ ಮಾತನಾಡಿ ಮಂಗಳೂರು ಉಡುಪಿಯಲ್ಲಿ ಪ್ರತಿಭಟನೆ ನಡೆಸುವಂತೆ ಸೂಚಿಸಿದರು. ಆಡಳಿತ ಮತ್ತು ವಿಪಕ್ಷಗಳಿಗೆ ವಿಷಯವೇನೆಂದು ಗೊತ್ತಾಗುವಷ್ಟರಲ್ಲಿ ಆರೋಪಿಗಳ ಬಂಧನವಾಗಿತ್ತು.
ಇಂತಹ ಗುಣಲಕ್ಷಣದ ಮಾಜಿ ಶಾಸಕ, ಸಿಪಿಐ(ಎಂ) ಮಾಜಿ ರಾಜ್ಯ ಕಾರ್ಯದರ್ಶಿ ಶ್ರೀರಾಮ ರೆಡ್ಡಿಯವರು ಸದನದಲ್ಲಿ ಮಾತನಾಡಿದ ದಾಖಲೆಗಳಿಂದ ಆಯ್ದ ಭಾಷಣಗಳ ಸಂಗ್ರಹ ಈ ಪುಸ್ತಕ.
ಸಫ್ದರ್ ಹಾಶ್ಮಿಯ ಸಾವು ಮತ್ತು ಬದುಕಿನ ಕುರಿತಾದ ‘ಹಲ್ಲಾಬೋಲ್’ ಪುಸ್ತಕವು ಅಕ್ಟೋಬರ್ 30 ರಂದು ಸಂಜೆ 5 ಗಂಟೆಗೆ ಬಿಡುಗಡೆಯಾಗುತ್ತಿದೆ. ಸುಧನ್ವ ದೇಶಪಾಂಡೆಯವರ ಮೂಲಕೃತಿಯನ್ನು ಕನ್ನಡಕ್ಕೆ ಎಂ.ಜಿ.ವೆಂಕಟೇಶ್ ಅನುವಾದಿಸಿದ್ದಾರೆ. ಕ್ರಿಯಾ ಮಾಧ್ಯಮ ಪುಸ್ತಕವನ್ನು ಹೊರತರುತ್ತಿದೆ. ಖ್ಯಾತ ಚಲನಚಿತ್ರ ನಟ ನಸೀರುದ್ದೀನ್ ಶಾ ಬಿಡುಗಡೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಪುಸ್ತಕದ ಕುರಿತು ಹೊಳಹು ನೀಡುವ ಖ್ಯಾತ ಲೇಖಕ ಬೊಳುವಾರು ಮಹ್ಮದ್ ಕುಂಞ ಪುಸ್ತಕಕ್ಕೆ ಬರೆದ ಮುನ್ನುಡಿ
ಚಂದವನ್ನು ಕೊಂದ ಬಳಿಕ…
`ನಾವು ಪಯಣಿಸಬೇಕಾಗಿರುವ ಬಸ್ಸು,
ಒಂದಲ್ಲ ಒಂದು ದಿನ, ಸಮಯಕ್ಕೆ ಸರಿಯಾಗಿ ಬಂದೇ ಬರಲಿದೆ’
`ನಿಮ್ಮ ಒಬ್ಬರು ಆ ರಸ್ತೆಯಲ್ಲಿ ಸಾಯುತ್ತಿದ್ದಾರೆ. ಅಲ್ಲಿ ಎಲ್ಲ ಕಡೆಗಳಲ್ಲೂ ಹೆಣಗಳು ಬಿದ್ದಿವೆ. ಐದು ಹೆಣಗಳು..!’ ಹೆಣ್ಣು ಮಗಳೊಬ್ಬಳು, ನಾವು ಬೀದಿನಾಟಕ ಪ್ರದರ್ಶಿಸಿದ್ದ ಜಾಗದತ್ತ ಕೈ ತೋರಿಸುತ್ತಾ ಆತಂಕದಿAದ ಹೇಳಿದ್ದಳು. ಸಿ.ಐ.ಟಿ.ಯು. ಕಚೇರಿಯನ್ನು `ಅವರು’ ಧ್ವಂಸ ಮಾಡುತ್ತಿರುವುದನ್ನು ಕಣ್ಣಾರೆ ಕಂಡಿದ್ದರೂ, ಕೊಂದಿದ್ದಾರೆ ಎಂಬುದನ್ನು ನಂಬಲು ಸಾಧ್ಯವಾಗಿದ್ದಿರಲಿಲ್ಲ. ಅದೂ ಐದು ಹೆಣಗಳು! ಯಾಕೋ ಉತ್ಪ್ರೇಕ್ಷೆ ಅನ್ನಿಸಿತ್ತು. ಅಲ್ಲಿಗೆ ಹೋಗಿ ನೋಡಲು ನಿರ್ಧರಿಸಿದೆವು. ಬ್ರಿಜೇಶ್ ಮುಂದೆ ಹೊರಟ. ಅವನ ಹಿಂದೆ ನಾನು, ನನ್ನ ಹಿಂದೆ ಬಿಸ್ವಜೀತ್. ಬ್ರಿಜೇಶನಿಗೆ ಅಲ್ಲೇನೋ ಕಂಡಿರಬೇಕು. ಬಾಣದಂತೆ ಚಿಮ್ಮಿದ. ಅವನೇಕೆ ಹಾಗೆ ಓಡಿದನೆಂಬುದು ಅರ್ಥವಾಗದೆ, ನಾನೂ ಅತ್ತ ಧಾವಿಸಿದೆ. ಅವನು ಮೂಲೆಯಲ್ಲಿ ತಿರುಗಿದ. ನಾನೂ ತಿರುಗಿದೆ. ಅವನು ನೆಲದಲ್ಲಿ ಬಿದ್ದಿದ್ದ ಮನುಷ್ಯನೊಬ್ಬನ ಬಳಿ ನಿಂತುಬಿಟ್ಟಿದ್ದ. ಬಿದ್ದಿದ್ದವನು ನಮ್ಮ ಕಲಾವಿದರಲ್ಲಿ ಒಬ್ಬನಾದ ವಿನೋದ್’ನಂತೆ ಕಾಣಿಸಿದ್ದ ಒಂದು ಕ್ಷಣ; ಅಲ್ಲ. ಆನಂತರ ಕಾಣಿಸಿದ್ದು ಆ ಹಸಿರು ಸ್ವೆಟರ್. ಚಂದದ ಸಫ್ದರ್.’
*******
ಸುಮಾರು ನಾಲ್ಕು ದಶಕಗಳ ಹಿಂದಿನ ಒಂದು ಮಧ್ಯಾಹ್ನದ ಹೊತ್ತು. ಚರಣ ಸಿಂಗರ ಪ್ರಧಾನಿತ್ವದ ಸುಡುವ ತಿಂಗಳು ಎಂಬ ನೆನಪು. ದೆಹಲಿಯ ಆರ್.ಕೆ. ಪುರಂ’ನಲ್ಲಿರುವ ಕರ್ನಾಟಕ ಸಂಘದ ಬಳಿಯಿದ್ದ ಬಸ್ ನಿಲ್ದಾಣದಲ್ಲಿ ನಿಂತಿದ್ದೆ. ನನ್ನ ಎಡಬಲಗಳಲ್ಲಿ ಸುಮಾರು ಒಂದು ಹತ್ತು ಮಂದಿ, ಕತ್ತುಗಳನ್ನೆತ್ತಿ ಅತ್ತಿತ್ತ ನೋಡುತ್ತಾ, `ಇಸ್ಕಿ ಮಾ.., ಯೇ ದೇಶ್ ಕಭೀಭೀ ಸುಧರ್ನೇವಾಲೀ ನಹೀ..’ ಎಂದೆಲ್ಲ ಗೊಣಗುತ್ತಾ, ಬಾರದ ಬಸ್ಸುಗಳಿಗೆ ಶಾಪ ಹಾಕುತ್ತಿದ್ದರು. ಅಷ್ಟರಲ್ಲಿ ವಿದ್ಯಾರ್ಥಿಗಳಂತೆ ಕಾಣಿಸುತ್ತಿದ್ದ ಒಂದಷ್ಟು ಹುಡುಗ ಹುಡುಗಿಯರು ಆಕಾಶದಿಂದ ಉದುರಿ ಬಿದ್ದವರಂತೆ ನಮ್ಮೆದುರು ಕಾಣಿಸಿಕೊಂಡಾಗ, ಪಕ್ಕದಲ್ಲಿ ನಿಂತಿದ್ದ ವಯಸ್ಸಾದ ಮಹಿಳೆಯೊಬ್ಬಳು, `ಓಹ್..! ಖುದುರತ್ಕೇ ಫರಿಸ್ತೇ ಯಹಾಂ ಭೀ ಆಗಯೇ..’ ಎಂದು ಉದ್ಗರಿಸಿದ್ದಳು! ನಾನು ಅಚ್ಚರಿಯಿಂದ ಆಕೆಯತ್ತ ಪ್ರಶ್ನೆಯಂತೆ ಬಾಗಿದಾಗ, `ತುಮ್ ದೇಖ್ತೇ ರಹೋ.., ಯೇ ಬಚ್ಚೋಂಕೋ ಜಾದಾ ಉಮರ್ ದೇನೇಕೇ ಲಿಯೇ ಈಶ್ವರ್ ಸೇ ದುವಾ ಕರೋ..’ ಎಂದಿದ್ದಳು.
`ನಾವು ನಿಮ್ಮೆದುರು ಒಂದು ನಾಟಕ ಆಡಿ ತೋರಿಸಲಿದ್ದೇವೆ. ದಯವಿಟ್ಟು ನೀವೆಲ್ಲ ಸಹಕರಿಸಬೇಕು..’ ಎತ್ತರದ ಸಣಕಲು ಯುವಕನೊಬ್ಬ ಗಟ್ಟಿಯಾಗಿ ಹೇಳುತ್ತಿದ್ದಂತೆಯೇ ಮತ್ತಿಬ್ಬರು ಹುಡುಗರು, `ಜನನಾಟ್ಯ ಮಂಚ್’ ಎಂದು ಹಿಂದಿಯಲ್ಲಿ ಬರೆದಿದ್ದ ಎರಡು ಮಾರು ಅಗಲದ ಬ್ಯಾನರ್ ಹಿಡಿದುಕೊಂಡು ಬಂದರು. ಹುಡುಗಿಯೊಬ್ಬಳು ಡಿಟಿಸಿ (ದೆಹಲಿ ಸಾರಿಗೆ..?) ಎಂದು ಬರೆದಿದ್ದ ಫಲಕವೊಂದನ್ನು ಹಿಡಿದು ನಿಂತಳು. ಅವಳ ಎಡಬಲದಲ್ಲಿ ಬಂದು ನಿಂತ ಐದಾರು ಹುಡುಗರು. `ನಾವು ಪಯಣಿಸಬೇಕಾಗಿರುವ ಬಸ್ ಒಂದಲ್ಲ ಒಂದು ದಿನ ಸಮಯಕ್ಕೆ ಸರಿಯಾಗಿ ಬಂದೇ ಬರಲಿದೆ.’ ಎಂದು ಗಟ್ಟಿಯಾಗಿ ಹೇಳಿದಾಗ, ತಮ್ಮ ತಮ್ಮ ಬಸ್ಸುಗಳಿಗಾಗಿ ಕಾತರಿಸುತ್ತಿದ್ದ ನನ್ನಂತಹ ಪ್ರಯಾಣಿಕರೆಲ್ಲ, ಎಲ್ಲವನ್ನೂ ಮರೆತು `ಡೀಟೀಸೀ ಕಾ ದಾಂದಲೀ’ ನಾಟಕದ ಪಾತ್ರಗಳಾಗಿ ಬಿಟ್ಟಿದ್ದೆವು.
*********
ನಲುವತ್ತು ವರ್ಷಗಳ ಹಿಂದೆ (1979) ದೆಹಲಿಯ `ಜನನಾಟ್ಯ ಮಂಚ’ವನ್ನು ಕನ್ನಡ ನಾಡಿಗೆ ಪರಿಚಯಿಸಿದವರು, `ಸಮುದಾಯ’ ಸಂಘಟನೆಯ ರೂವಾರಿಗಳಲ್ಲೊಬ್ಬರಾಗಿದ್ದ ಎಸ್. ಮಾಲತಿಯವರು. ಇಂದಿನ ದಿನಗಳಲ್ಲಿ ಕೆಲವರಿಗೆ ಬಿಸಿತುಪ್ಪದಂತಾಗಿರುವ, ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಹುಡುಗ ಹುಡುಗಿಯರನ್ನು, ತಾವು ಸಂಪಾದಿಸುತ್ತಿದ್ದ `ಸಮುದಾಯ ವಾರ್ತಾಪತ್ರ’ದ `ಮಂಚ’ದಲ್ಲಿರಿಸಿ ಜೋಗುಳ ಹಾಡಿದ್ದ ತಾಯಿ ಅವರು.
ಮಾತುಗಳಿಂದಲೇ ಮಂಟಪ ಕಟ್ಟುವ ಬೀದಿ ನಾಟಕದ ಮಾತುಗಳಿಗೆ ವ್ಯಾಕರಣದ ಹಂಗಿಲ್ಲ. ಮಾತುಗಳು ನಾಟಕವಾಗಿ ಬೆಳೆಯುವುದು ಅಭಿನಯಿಸುವವರ ಬದುಕಿನ ಅನುಭವಗಳಿಂದ. ಅದೊಂದು ಸಮರಶೀಲ ರಾಜಕೀಯದ `ಪ್ರತಿಭಟನಾ ರಂಗಭೂಮಿ’. ರಾಜಕೀಯ ಅಥವಾ ಪ್ರತಿಭಟನೆ ಎಂದ ಕೂಡಲೇ ಮೂಗು ಮುರಿಯಬೇಕಾಗಿಲ್ಲ. ಪ್ರಜಾಪ್ರಭುತ್ವ ಉಳಿಯುವುದು ಮತ್ತು ಬೆಳೆಯುವುದು ಪ್ರಜೆಪರವಾಗಿರುವ ರಾಜಕೀಯ ಪ್ರತಿಭಟನೆಗಳಿಂದಲೇ. ಸಫ್ದರ್ ಹೇಳುವಂತೆ, `ಪರಿಚಿತ ವಸ್ತುಗಳಿಂದಲೇ ಭೀತಿಗೊಳಿಸುವ ಬೀದಿ ನಾಟಕಗಳು ಸಾಕ್ಷ್ಯಚಿತ್ರಗಳಂತೆ ಸಂಕ್ಷಿಪ್ತ.’ ಅವುಗಳ ಪರಿಣಾಮಗಳು ಹೊರನೋಟದಲ್ಲಿ ಭಾವನಾತ್ಮಕವಾಗಿ ಕಾಣಿಸಿದರೂ ಅವು ತರ್ಕಬದ್ಧ. ಸೂಕ್ಷ್ಮವಾದ ಅಥವಾ ಆಳವಾದ ವಿಶ್ಲೇಷಣೆಗಳು ಬೀದಿನಾಟಕಗಳಲ್ಲಿ ಇರಲೇಬೇಕೆಂದಿಲ್ಲ. ಆದ್ದರಿಂದಲೇ ಅವು ಸಾಮಾನ್ಯ ಪ್ರೇಕ್ಷಕರ ಮನಸ್ಸುಗಳೊಳಗೆ ನೇರವಾಗಿ ನುಗ್ಗುತ್ತವೆ ಮತ್ತು ಬಹಳ ಕಾಲ ಕಾಡುತ್ತವೆ. ತಮ್ಮ ಸುತ್ತಮುತ್ತ ಘಟಿಸುತ್ತಿರುವ ಸಮಕಾಲೀನ ಸಂಗತಿಗಳಿಗೆ ಪ್ರೇಕ್ಷಕರ ನಿಲುವುಗಳನ್ನು ರೂಪಿಸುತ್ತವೆ. ಸಾಂಸ್ಕೃತಿಕ ಹಸಿವುನಿಂದ ಕೂಡಿರುವ ಜನತೆಗೆ ಆರೋಗ್ಯಕರ ಮನರಂಜನೆಯನ್ನೂ ಒದಗಿಸುತ್ತವೆ. ಅಧ್ಬುತ ಮತ್ತು ತಮಾಷೆಗಳು ಸಕಾಲಿಕವಾಗಿ ಪ್ರಕಟಗೊಳ್ಳುವುದೇ ಬೀದಿ ನಾಟಕಗಳ ಹೆಗ್ಗಳಿಕೆ.
ಬೇರೆ ಪ್ರದರ್ಶನ ಪ್ರಕಾರಗಳಿಗೆ ತೀರಾ ಅನಿವಾರ್ಯವೇನೂ ಆಗಿರದ ಶಿಸ್ತನ್ನು ಬೀದಿನಾಟಕಗಳು ಹೆಚ್ಚಾಗಿ ಬಯಸುವುದರಿಂದಲೇ ಇರಬೇಕು, ಅವು ಯಾವನೇ `ಸ್ಟಾರ್’ಗೂ ಮೇಲೇರುವ ಏಣಿಯಾಗಲಿಲ್ಲ. ಹಾಗೆಂದು ಬೀದಿನಾಟಕಗಳು ಪ್ರೊಸೇನಿಯಮ್ ನಾಟಕಗಳ ವಿರುದ್ಧದ ಬಂಡಾಯವೆಂಬಂತೆಯೂ ಕಾಣಿಸಿಕೊಳ್ಳಲಿಲ್ಲ. ಹಾಗಾಗಿರುತ್ತಿದ್ದರೆ, ಕನ್ನಡ ನಾಟಕಗಳಿಗೆ ಹೊಸದಿಕ್ಕು ಕೊಟ್ಟ `ಸಮುದಾಯ’ದ ಯಶಸ್ವೀ ನಾಟಕಗಳಾದ ಹುತ್ತವ ಬಡಿದರೆ, ತಾಯಿ, ಗೆಲಿಲಿಯೋ’ಗಳ ಜೊತೆಯಲ್ಲೇ `ಬೆಲ್ಚಿ’ ಬೀದಿ ನಾಟಕವು 2500 ಪ್ರದರ್ಶನಗಳನ್ನು ಕಾಣಲು ಸಾಧ್ಯವಾಗುತ್ತಿರಲಿಲ್ಲ. ಈ ಎಲ್ಲ ಕಾರಣಗಳಿಂದಾಗಿಯೇ ಕನ್ನಡದ ರಂಗ ಚಟುವಟಿಕೆಗಳು `ಜನಪರ ಚಳುವಳಿ’ಗಳತ್ತ ಹೊರಳಿಕೊಂಡವು. ಬಾದಲ್ ಸರ್ಕಾರ್ ಅವರ ಮುಕ್ತ ರಂಗಭೂಮಿ ಕನ್ನಡ ನೆಲಕ್ಕೆ ಕಾಲಿಟ್ಟದ್ದು ಆಗ. ಸಾವಿರಾರು ಪ್ರದರ್ಶನಗಳನ್ನು ಕಂಡ ಬೀದಿನಾಟಕಗಳಾದ ಬೆಲ್ಚಿ, ಪತ್ರೆ ಸಂಗಪ್ಪನ ಕೊಲೆ, ಮೆಶೀನ್, ಆಲಿಘರ್, ಹತ್ಯಾರೇ’ಗಳು ಕನ್ನಡ ನಾಡಿನ ಮನೆಯಂಗಳದ ಮಾತುಗಳಾದದ್ದು ಆಗ. ಈ ಎಲ್ಲದರ ಬೆನ್ನ ಹಿಂದೆಯೂ, `ಸತ್ಯವನ್ನಷ್ಟೇ ಹೇಳುವೆ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ’ ಎಂದು ನಡುಬೀದಿಯ ನ್ಯಾಯಾಲಯದಲ್ಲಿ ಪ್ರಮಾಣ ಮಾಡುತ್ತಿದ್ದ ಮಾತ್ರವಲ್ಲ, ಪ್ರೇಕ್ಷಕರಿಂದಲೂ ಪ್ರಮಾಣ ಮಾಡಿಸುತ್ತಿದ್ದ `ಸಫ್ದರ್’ ಎಂಬ ಚಂದದ ಹುಡುಗನ `ಹಲ್ಲಾ ಬೋಲ್’ ಪ್ರಭಾವ ಎದ್ದು ಕಾಣಿಸುತ್ತದೆ.
ಸುಧನ್ವ ದೇಶಪಾಂಡೆಯವರು, ತಮ್ಮ `ಹಲ್ಲಾ ಬೋಲ್’ ಕೃತಿರಚನೆಗಾಗಿ ಗೆಳೆಯ ಸಫ್ದರ್ ಹಾಶ್ಮಿಯ ಜೊತೆಗಿದ್ದ, ಕನ್ನಡ ನಾಟಕಾಸಕ್ತರಲ್ಲಿ ಕೆಲವರಿಗಾದರೂ ಪರಿಚಯವಿರಬಹುದಾದ, ಆದಿತ್ಯ ನಿಗಮ್, ಬಿಜೇಂದರ್ ಸಿಂಗ್, ಬೃಂದಾ ಕಾರೆಟ್, ಕಾಜಲ್ ಘೋಷ್, ಮಲಯಶ್ರೀ ಹಾಶ್ಮಿ, ಸುಭೋದ್ ವರ್ಮಾ, ಕಮಲಾ ಭಾಸಿನ್, ಸೀತಾರಾಮ್ ಯೆಚೂರಿ.. ಹೀಗೆ ಹಲವರ ನೆನಪುಗಳನ್ನೂ ಬಳಸಿಕೊಂಡಿದ್ದಾರೆ. ದೆಹಲಿಯ `ವೈಕಿಂಗ್’ ನವರು, `ಫಿಫ್ತ್ ಪ್ಲೇಮ್’ ಎಂಬ ಹೆಸರಲ್ಲಿ ಪ್ರಕಟಿಸಿದ್ದ, ಸಫ್ದರ್ ತಾಯಿ ಖಮರ್ ಅಜಾದ್ ಹಾಶ್ಮಿಯವರ `ಪಾಂಚ್ವಾ ಚಿರಾಗ್’ ಹಾಗೂ ಹಬೀಬ್ ತನ್ವೀರ್ ಅವರ `ಸಫ್ದರ್ ನೆನಪುಗಳು’ ಕೃತಿಗಳ ಮಾಹಿತಿಗಳೂ ಇವೆ. `ನಮಗೆ ತಿಳಿದಿರುವುದನ್ನಷ್ಟೇ ನಮ್ಮಿಂದ ಊಹಿಸಿಕೊಳ್ಳಲು ಸಾಧ್ಯ’ ಎಂಬ ಶೆಲ್ಲಿಯ ಮಾತುಗಳೂ ಇಲ್ಲಿ ಪ್ರಸ್ತುತ. ಪುಸ್ತಕವೊಂದು ಕವರ್ ಪೇಜ್’ನಲ್ಲಿರುವ ಲೇಖಕರ ಹೆಸರನ್ನು ಅದೆಷ್ಟೇ `ಟಾಂ ಟಾಂ’ ಮಾಡಿದರೂ, ಅದೊಂದು ಸಾಮೂಹಿಕ ಸೃಷ್ಟಿಯೇ ಆಗಿರುತ್ತದೆ. ರಂಗಭೂಮಿಯಂತೂ ಒಬ್ಬನ ಖಾಸಗಿ ಸೊತ್ತಾಗಲು ಸಾಧ್ಯವೇ ಇಲ್ಲ. . `ಜನನಾಟ್ಯ ಮಂಚ’ ಇಲ್ಲದಿರುತ್ತಿದ್ದರೆ ಅಥವಾ `ಜನಮ್’ ಇಲ್ಲದಿರುತ್ತಿದ್ದರೆ `ಸಫ್ದರ್’ ಇರುತ್ತಿರಲಿಲ್ಲ.
ಈ ದೇಶದ ನಡುಬೀದಿಯಲ್ಲಿ ಕೊಲೆಯಾದ ಕಲೆಗಾರನೊಬ್ಬನ ಸಾವು ಮತ್ತು ಬದುಕಿನ ಕತೆಯನ್ನು (ಗಮನಿಸಬೇಕು – ಬದುಕು ಮತ್ತು ಸಾವಿನ ಕತೆಯಲ್ಲ), ಕಣ್ಣಿಗೆ ಕಟ್ಟುವಂತೆ ದಾಖಲಿಸಿದ್ದ ಸುಧನ್ವ ದೇಶಪಾಂಡೆಯವರ ಆಂಗ್ಲ ಭಾಷೆಯ `ಹಲ್ಲಾ ಬೋಲ್’ ಕೃತಿಯ ಕನ್ನಡ ರೂಪ ಇದು. ಇದರಲ್ಲಿ, ಸಫ್ದರ್ ಹಾಶ್ಮಿಯವರ ಸಾವಿನ ಕತೆಯನ್ನು, ಅವರ ಬದುಕಿನ ಕತೆಗಳ ಜೊತೆಗೆ ಹೆಣೆಯಲಾಗಿದೆ. ಬೀದಿ ನಾಟಕಗಳಂತೆಯೇ ಪದ-ವ್ಯಾಕರಣಗಳ ಹಂಗಿಲ್ಲದೆ, ನೆನಪುಗಳ ಬುಟ್ಟಿಗಳನ್ನು ರಸ್ತೆಬದಿಯ ಅಂಗಡಿಗಳಲ್ಲಿ ತೆರೆದಿರಿಸುವ ಪರಿಯಲ್ಲಿ ಜೋಡಿಸಿಕೊಂಡ ಮಾತುಗಳನ್ನು ಮತ್ತೊಂದು ಭಾಷೆಯಲ್ಲಿ ಕಟ್ಟಿಕೊಡುವುದು ಬಲು ಕಷ್ಟದ ಕೆಲಸ. ಕಳೆದ ನಾಲ್ಕೈದು ದಶಕಗಳಿಂದ `ಸಮುದಾಯ’ ಸಂಘಟನೆಯ ಭಾಗವೇ ಆಗಿರುವ ಕಾರಣಕ್ಕೋ ಏನೋ, ಯಾವುದೇ ತಡವರಿಕೆಯಿಲ್ಲದೆ ಅವುಗಳನ್ನೆಲ್ಲ `ಹಲ್ಲಾ ಬೋಲ್’ ಎಂದು ಕನ್ನಡದಲ್ಲಿ ಹೆಣೆದಿರುವ ಸಂಗಾತಿಯ ಸಾಹಸಕ್ಕೆ `ಭಳಿರೇ’ ಎನ್ನುವೆ.
`ಸಫ್ದರ್’ ಎಂಬ ಹೆಸರಲ್ಲಿ ಓಡಾಡುತ್ತಿದ್ದ, ರಸ್ತೆ ಬದಿಯ ಗಾಡಿಗಳೆದುರು ಚಹ ಹೀರುತ್ತಿದ್ದ, ಪಕ್ಕದ ಗಲ್ಲಿಯಲ್ಲಿ ಕಾಣಿಸಿದ್ದವರನ್ನು ಗಟ್ಟಿಧ್ವನಿಯಲ್ಲಿ ಮುಟ್ಟಿ ಮಾತಾಡಿಸುತ್ತಿದ್ದ ಮನುಷ್ಯನೊಬ್ಬನ ಕೆಂಪು ರಕ್ತವನ್ನು ನಡುಬೀದಿಯಲ್ಲಿ ಚೆಲ್ಲಿದ ದೇಶ ನಮ್ಮದು. ಆದರೆ, ದೇಹದೊಂದಿಗೆ ಸಫ್ದರ್ ಕೂಡಾ ಸತ್ತುಹೋಗಬಹುದು ಎಂದು ನಂಬಿದ್ದ ಕೊಲೆಗಾರರಿಗೆ ಸಹಜವಾಗಿ ನಿರಾಸೆಯಾಗಿದೆ. ಸಿಟ್ಟೂ ಬಂದಿದೆ. `ಸಫ್ದರ್ ಚಿಂತನೆ’ಗಳನ್ನು ಮತ್ತೊಮ್ಮೆ ಕೊಲ್ಲುವ ಸಲುವಾಗಿ ಸುಳ್ಳು ಸುಳ್ಳು ಕಾರಣಗಳನ್ನು ಸೃಷ್ಟಿಸಲಾಗುತ್ತಿದೆ. ಇಂತಹ ಹೊತ್ತಲ್ಲಿ, ಒಂದಷ್ಟು ಹೊತ್ತಾದರೂ ಮನುಷ್ಯರಾಗುವಂತೆ ನಮ್ಮನ್ನು ಒತ್ತಾಯಿಸುವ ಈ ನೋವಿನ ಕೃತಿಯನ್ನು ಕನ್ನಡಕ್ಕೆ ಪರಿಚಯಿಸುತ್ತಿರುವ `ಸಮುದಾಯ’ದ ಎಂ.ಜಿ. ವೆಂಕಟೇಶ್ ಅವರ ಹತ್ತಿರದ ಸಂಗಾತಿಗಳಲ್ಲಿ ನಾನೂ ಒಬ್ಬ ಎಂಬುದು ನನಗೂ ಹೆಮ್ಮೆಯ ಸಂಗತಿ.
ಜಗತ್ತಿನ ಮೇಲೆ ಅಗಾಧ ಪ್ರಭಾವ ಬೀರಿರುವ ಮೇರು ಗ್ರಂಥ ಕಾರ್ಲ್ ಮಾರ್ಕ್ಸ್‌ರವರ ’ಬಂಡವಾಳ’. ಮೂರು ಸಂಪುಟಗಳಿರುವ ಈ ಗ್ರಂಥದ ಸಂಪುಟ-೧ ಈಗ ಕನ್ನಡದಲ್ಲಿ ಪ್ರಕಟವಾಗುತ್ತಿದೆ. ಇದೊಂದು ಚಾರಿತ್ರಿಕ ಘಟನೆ. ಇದು ಮುಖ್ಯವಾಗಿ, ಜಗತ್ತಿನ ಸಂಪತ್ತನ್ನು ಸೃಷ್ಟಿಸುವ ದುಡಿಮೆಗಾರರ ಆಂದೋಲನವನ್ನು ಒಂದು ಪ್ರಮುಖ ಶಕ್ತಿಯಾಗಿ ರೂಪಿಸಿರುವ ಗ್ರಂಥ. ಜಗತ್ತಿನ ಹಲವಾರು ಭಾಗಗಳಿಗೆ ಅನುವಾದಗೊಂಡಿರುವ ಉದ್ಗ್ರಂಥ. ಇದು ಆಳವಾದ ಅಧ್ಯಯನದ ಆಧಾರದಲ್ಲಿ ರಚಿಸಿದ, ರಾಜಕೀಯ ಅರ್ಥಶಾಸ್ತ್ರದ ಬೆಳವಣಿಗೆಯಲ್ಲಿಯೇ ಮೈಲಿಗಲ್ಲಾದ ಒಂದು ಗ್ರಂಥ.
ಗಂಭೀರ ಅಧ್ಯಯನಶೀಲರಿಗೂ, ದೇಶದ ಸಂಪತ್ತನ್ನು ಸೃಷ್ಟಿಸುತ್ತಿರುವ ಶ್ರಮಜೀವಿಗಳಿಗೂ ಸಮಾನ ರೀತಿಯಲ್ಲಿ ಬಹು ಉಪಯುಕ್ತವಾದ ಈ ಗ್ರಂಥವನ್ನು ನಾಡಿನ ಇಪ್ಪತ್ತಕ್ಕೂ ಹೆಚ್ಚು ಅನುವಾದಕರ ನೆರವಿನಿಂದ ಕನ್ನಡದಲ್ಲಿ ತರುತ್ತಿದ್ದು, ಆಗಸ್ಟ್ ೨ರಂದು ’ಬಂಡವಾಳ ಸಂಪುಟ-೧’ರ ಬಿಡುಗಡೆಯ ಸಮಾರಂಭವನ್ನು ಯೋಜಿಸಲಾಗಿದೆ.
ಈ ಸಮಾರಂಭದಲ್ಲಿ ಮೂರು ಗೋಷ್ಟಿಗಳಿರುತ್ತವೆ.
ಬೆಳಿಗ್ಗೆ ಮೊದಲ ಗೋಷ್ಠಿಯಲ್ಲಿ ’ಬಂಡವಾಳ’ದ ೧೫೦ ವ?ಗಳು ಮತ್ತು ಎಡಪಂಥದ ಮರುಶೋಧನೆ ಎಂಬ ವಿಷಯದ ಮೇಲೆ ವಿಚಾರ ಸಂಕಿರಣ ಇರುತ್ತದೆ. ದೇಶದ ಪ್ರಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಜನಪರ ಚಿಂತಕರಾದ ಪ್ರೊ. ಪ್ರಭಾತ್ ಪಟ್ನಾಯಕ್ ದಿಕ್ಸೂಚಿ ಭಾಷಣವನ್ನು ಮಾಡುತ್ತಾರೆ. ನಂತರ ಈ ಬಗ್ಗೆ ಚರ್ಚೆಗಳು ನಡೆಯುತ್ತವೆ.
ಮಧ್ಯಾಹ್ನ ನಡೆಯುವ ಎರಡನೇ ಗೋಷ್ಠಿ ’ಬಂಡವಾಳ ಇಂದು ಯಾಕೆ ಓದಬೇಕು?’ ಎಂಬುದರ ಬಗ್ಗೆ ಇರುತ್ತದೆ.
ಸಂಜೆ ನಡೆಯುವ ಮೂರನೇ ಗೋಷ್ಠಿಯಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪನವರು ಇತರ ಹಲವು ಗಣ್ಯರ ಉಪಸ್ಥಿತಿಯಲ್ಲಿ ಇದರ ಲೋಕಾರ್ಪಣೆ ಮಾಡುತ್ತಾರೆ.
ಈ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲು ನಿಮಗೆ ಆಹ್ವಾನ.
ಇಂದಿನಿಂದ ಪುಸ್ತಕ ಬಿಡುಗಡೆಯವರೆಗೆ `ಬಂಡವಾಳ ಸಂಪುಟ – 1′ ಕ್ಕೆ ಪ್ರಕಟಣಾ ಪೂರ್ವ ರಿಯಾಯತಿ ಬೆಲೆಯಲ್ಲಿ ಖರೀದಿಸಬಹುದಾಗಿದೆ.
ಪುಸ್ತಕದ ಸಾದಾ ಪ್ರತಿಯ ಬೆಲೆ ರೂ.1000/- ಪ್ರಕಟಣಾ ಪೂರ್ವ ಬೆಲೆ -ರೂ.700/-
ಕ್ಯಾಲಿಕೋ ಪ್ರತಿ ಬೆಲೆ ರೂ.1250/- ಪ್ರಕಟಣಾ ಪೂರ್ವ ಬೆಲೆ – 900/-
ಎಂದು ಪ್ರಕಟಿಸಲಾಗಿದೆ. ಈ ರಿಯಾಯತಿ ಬೆಲೆ ಆಗಸ್ಟ್ 2 ರವರೆಗೆ ಮಾತ್ರ ಇರುತ್ತದೆ.
ಆಸಕ್ತರು ಈ ಕೆಳಗಿನ ಬ್ಯಾಂಕ್ ಅಕೌಂಟ್ ಗೆ ಮೊತ್ತ ಪಾವತಿ ಮಾಡಿಪೋನ್ ನಂ 9902249150 ಗೆ ಪಾವತಿಯ ವಿವರವನ್ನು WhatApp Message ನ ಮೂಲಕ ಕಳುಹಿಸಬೇಕಾಗಿ ವಿನಂತಿ. ಹಾಗೆಯೇ ತಮ್ಮ ಹೆಸರು, ವಿಳಾಸ, ಇ-ಮೈಲ್ ವಿಳಾಸ ಹಾಗೂ ಅಂಚೆ ವಿಳಾಸ ಮುಂತಾದ ವಿವರಗಳನ್ನು ಕೊಡಬೇಕಾಗಿ ವಿನಂತಿ.