ನಿಮ್ಮ ಮಕ್ಕಳ ಗ್ರಂಥಾಲಯಕ್ಕೆ ಎರಡು ಹೊಸ ಪುಸ್ತಕಗಳು

ಶೀರ್ಷಿಕೆ: ಕಥೆ ಬರೆಯುವುದು ಹೇಗೆ? ಮತ್ತು ಇತರ ಕಥೆಗಳು ಲೇಖಕರು:ಎಂ.ಆರ್.ಶಿವಶಂಕರ್ ಪ್ರಕಾಶಕರು:ವಿನಾಯಕ ಪ್ರಕಾಶನ ಪುಟಗಳು:52 ಬೆಲೆ: ರೂ.30/-ಶೀರ್ಷಿಕೆ: ತುಂಟ ಪಿಶಾಚಿಗಳು ಲೇಖಕರು:ಎಂ.ಆರ್.ಶಿವಶಂಕರ್ ಪ್ರಕಾಶಕರು:ವಿನಾಯಕ ಪ್ರಕಾಶನ ಪುಟಗಳು:40 ಬೆಲೆ: ರೂ.30/-

ಬೋಳುವಾರ‍್ ಮಹಮ್ಮದ್ ಕುಞ್ಙಿ ಅವರಿಗೆ ಮತ್ತೊಮ್ಮೆ ಅಭಿನಂದನೆಗಳು

Dr U R Anathamurthy will release the English version and Prof G Siddaramaiah, Former Chairman of Kannada Pustaka Pradhikara will release the reprinted Kannada version.
Author Bolwar Mahamad Kunhi and Translator Rajagopal Acharya [Arya] will be present.

ಕನ್ನಡದಿಂದ ಇಂಗ್ಲೀಷ್ ಗೆ ಅನುವಾದಿಸಲ್ಪಟ್ಟ ವಿಶೇಷ ಪುಸ್ತಕಗಳಲ್ಲೊಂದು ಈ ಪುಸ್ತಕ. ಬೋಳುವಾರ‍್ ಮಹಮ್ಮದ್ ಕುಞ್ಙಿ ಅವರಿಗೆ ಮತ್ತೊಮ್ಮೆ ಅಭಿನಂದನೆಗಳು.

`ಪಾಪು ಗಾಂಧಿ, ಗಾಂಧಿ ಬಾಪು ಆದ ಕತೆ’ ಇಂಗ್ಲೀಷ್ ಗೆ ಅನುವಾದವಾಗಿದ್ದು ನಮ್ಮೆಲ್ಲರಿಗೆ ಹೆಮ್ಮೆ ತರುವ ವಿಷಯ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಈ ಪುಸ್ತಕದ ಪರಿಚಯ ಹಿಂದೆ ಪುಸ್ತಕ ಪ್ರೀತಿಯಲ್ಲಿ ಬಂದಾಗೆ ಉತ್ತರ ಕನ್ನಡದ ಕಿರಣ್ ಭಟ್ ಅವರು ಈ ರೀತಿ ಸ್ಪಂದಿಸಿದ್ದರು.

ಕನ್ನಡದ ಮಕ್ಕಳಿಗೆ ಗಾಂಧಿಯನ್ನು ಸರಳವಾಗಿ ಪರಿಚಯಿಸಬಲ್ಲ ಅತ್ಯುತ್ತಮ ಪುಸ್ತಕ ಇದು.
ಈ ಪುಸ್ತಕವನ್ನಧರಿಸಿ ನಾವು `ಚಿಂತನ ರಂಗ ಅಧ್ಯಯನ ಕೇಂದ್ರ’ ದ `ಚಿಂತನ ರೆಪರ್ಟರಿ’ ಗಾಗಿ `ಪಾಪು ಬಾಪು ಆದ ಕತೆ’ ನಾಟಕವನ್ನು ಕಳೆದ ವರ್ಷ ಆಡಿದ್ದೆವು.
ಹಳ್ಳಿಯ ಶಾಲೆಗಳಲ್ಲಿ, ಸಾರ್ವಜನಿಕರಿಗಾಗಿ ಸುಮಾರು ಅರವತ್ತು ಪ್ರದರ್ಶನಗಳನ್ನು ನೀಡಿದ್ದೆವು. ರೆಪರ್ಟರಿಯ ತಿರುಗಾಟದ ಜೊತೆಯಲ್ಲಿ ಈ ಪುಸ್ತಕವನ್ನೂ ಒಯ್ದು ಸಾಕಷ್ಟು ಸಂಖ್ಯೆಯಲ್ಲಿ ಮಾರಿದ್ದೆವು.

ಇದು ಕನ್ನಡ ಬಾರದ ಇಂಗ್ಲೀಷ್ ಓದಬಲ್ಲ ನಮ್ಮ ಕಂದಮ್ಮಗಳಿಗೆ ಉಡುಗೊರೆಯಾಗಿ ಕೊಡಲೇ ಬೇಕಾದ ಒಂದು ಒಳ್ಳೆಯ ಪುಸ್ತಕ.

ಮಹಾತ್ಮ ಗಾಂಧಿಯೆಂದರೆ ಯಾರಿಗೂ ನಿಲುಕದ ಅತಿಮಾನವನಲ್ಲ

ಬೋಳುವಾರು ಮಹಮದ್ ಕುಞ್ಞಿ ಅವರಿಗೆ ಅಭಿನಂದನೆಗಳು

 

ಬೋಳುವಾರು ಮಹಮದ್ ಕುಞ್ಞಿ ಅವರಿಗೆ ಅಭಿನಂದನೆಗಳು

ಬೆಂಗಳೂರು : ಆಗಸ್ಟ ೨೨ : ಹೆಸರಾಂತ ಕನ್ನಡ ಲೇಖಕರಾದ ಬೋಳುವಾರು ಮಹಮದ್ ಕುಞ್ಞಿ ಅವರನ್ನು ೨೦೧೦ ನೇ ವರ್ಷದ ಪ್ರತಿಷ್ಟಿತ `ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ’ ಗಾಗಿ ಅವರ ಪುಸ್ತಕ “ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ” ಆಯ್ಕೆ ಮಾಡಲಾಗಿದೆ.ಪ್ರಶಸ್ತಿ ಪ್ರಧಾನ ಸಮಾರಂಭ ದೆಹಲಿಯಲ್ಲಿ ನವೆಂಬರ್ ತಿಂಗಳಲ್ಲಿ ನಡೆಯುತ್ತದೆ.

ಪ್ರತಿಕ್ರಿಯೆ “ಭಾರತ ಉನ್ನತ ಪ್ರಶಸ್ತಿಯಾದ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಗಾಗಿ ನನ್ನನ್ನು ಆಯ್ಕೆ ಮಾಡಿರುವುದು ನನಗೆ ತುಂಬಾ ಸಂತೋಷವನ್ನುಂಟು ಮಾಡಿದೆ. ಈ ಪ್ರಶಸ್ತಿ ಹಲವು ಮಕ್ಕಳನ್ನು ಈ ಪುಸ್ತಕ ಓದುವಂತೆ ಆ ಮೂಲಕ ರಾಷ್ಟಪಿತ ನ ಬಗ್ಗೆ ಎಳೆಯ ಹೃದಯಗಳಲ್ಲಿ ಗೌರವ ಮೂಡುವಂತೆ ಮಾಡಲು ಪ್ರೇರೇಪಿಸಬಹುದು.

ಕನ್ನಡ ಪುಸ್ತಕ ಪ್ರಾಧಿಕಾರ ಈ ಪುಸ್ತಕದ ಪ್ರಕಾಶಕರು. ಈ ಪುಸ್ತಕಕ್ಕೆ `ಮಕ್ಕಳ ಸಾಹಿತ್ಯ’ ವಿಭಾಗದಿಂದ ಈ ಪ್ರಶಸ್ತಿ ಬಂದಿದೆ.

ಅವರ ಇತರ ಕೃತಿಗಳು : ಕಥಾಸಂಗ್ರಹಗಳಾದ `ಅತ್ತ ಇತ್ತಗಳ ಸುತ್ತ ಮುತ್ತ’, `ಅಂಕ’, `ದೇವರುಗಳ ರಾಜ್ಯದಲ್ಲಿ’, `ಆಕಾಶಕ್ಕೆ ನೀಲಿ ಪರದೆ’, `ಒಂದು ತುಂಡು ಗೋಡೆ’ , ಕಾದಂಬರಿ `ಜಿಹಾದ್’, ಮಕ್ಕಳ ಹಾಡುಗಳ ಸಂಗ್ರಹ `ತಟ್ಟು ಚಪ್ಪಾಳೆ ಪುಟ್ಟ ಮಗು’ ಇವುಗಳಲ್ಲದೆ ಅವರು ೧೨ ಮಕ್ಕಳ ನಾಟಕಗಳನ್ನು ರಚಿಸಿದ್ದಾರೆ.

ಅವರಿಗೆ ಕರ್ನಾಟಕ ಸಾಹಿತ್ಯ ಪ್ರಶಸ್ತಿ ಯನ್ನೊಳಗೊಂಡು ಹಲವು ಪ್ರಶಸ್ತಿಗಳು ದೊರೆತಿವೆ.

ಕೃಪೆ:

Bolavaru Muhammad Kunhi to receive Kendra Sahitya Academy Award



ಶೀರ್ಷಿಕೆ: ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ ಲೇಖಕರು:ಬೋಳುವಾರು ಮಹಮದ್ ಕುಂಞ್ಞಿ ಪ್ರಕಾಶಕರು:ಕನ್ನಡ ಪುಸ್ತಕ ಪ್ರಾಧಿಕಾರ ಪುಟ:184 ಬೆಲೆ:ರೂ.90/-

ಇಂದು ವಿಶ್ವ ಭೂಮಿ ದಿನಕ್ಕೆ 40 ತುಂಬಿತು


ಇಂದು ವಿಶ್ವ ಭೂಮಿ ದಿನಕ್ಕೆ 40 ತುಂಬಿತು. ವಿಶ್ವ ಭೂಮಿ ದಿನ ಅಂದರೆ ಭೂಮಿತಾಯಿಯ ಬಗ್ಗೆ ಪ್ರೀತಿ ವಿಶ್ವಾಸ ಗೌರವವನ್ನು ತೋರಿಸಿ ಆಕೆಯ ಆರೈಕೆ ಮಾಡುವ ಮತ್ತು ನಮ್ಮ ಮಕ್ಕಳು ಇದೇ ದಾರಿಯಲ್ಲಿ ಮುನ್ನಡೆಯುವಂತೆ ಮಾಡುವ ಕರ್ತವ್ಯವನ್ನು ನೆನಪಿಸುವ ದಿನ.  ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಚಿಟಿಕೆ ಹೊಡೆಯಿರಿ. www.earthday.org/earthday2010 , http://www.earthday.org/earthday2010 , http://www.earthday.org/pledges/make-children-habituate-planting-trees-will-save-our-earth-educate-people-use-solar-power

ಇತ್ತೀಚೆಗೆ ಭೂಮಿ ತಾಯಿಗೆ ಜ್ವರ ಬರುತ್ತಿದೆ. ಯಾಕೆ ಬರುತ್ತಿರಬಹುದು. ಭೂಮಿ ತಾಯಿಯ ಜ್ವರವನ್ನು ಇಳಿಸಲು ನಾವು ಏನು ಮಾಡಬಹುದು. ಭೂಮಿ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಮಕ್ಕಳಿಗೆ ತಿಳಿಸಿಕೊಡದೆ ಭೂಮಿಯ ಆರೈಕೆ ಬಗ್ಗೆ ಅವರ ಮನವೊಲಿಸುವುದು ಅಸಾಧ್ಯ. ಅದಕ್ಕಾಗಿಯೇ ಈ ಪುಸ್ತಕ.

ಈ ಪುಸ್ತಕ ಮಕ್ಕಳಲ್ಲಿ ಹಾಗೂ ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವತ್ತ ಒಂದು ಹೆಜ್ಜೆ. ಭೂಮಿಯ ಬಗ್ಗೆ, ನಿಸರ್ಗದ ಬಗ್ಗೆ, ಸಮಾಜದ ಬಗ್ಗೆ, ವಿಜ್ಞಾನದ ಬಗ್ಗೆ ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ ಮಾಹಿತಿ ಒದಗಿಸುತ್ತದೆ. ಈ ಪುಸ್ತಕ.

ಶೀರ್ಷಿಕೆ: ನಿಸರ್ಗ ಸಮಾಜ ವಿಜ್ಞಾನ ಲೇಖಕರು:ಕೆ. ಕೆ. ಕೃಷ್ಣಕುಮಾರ‍್ ಅನುವಾದ: ಎಚ್. ಎಸ್. ನಿರಂಜನಾರಾಧ್ಯ, ಸಿ. ಯತಿರಾಜು ಪ್ರಕಾಶಕರು : ಭಾರತ ಜ್ಞಾನ ವಿಜ್ಞಾನ ಸಮಿತಿ, ಕರ್ನಾಟಕ ಪುಟ:104 ಬೆಲೆ. ರೂ.15/-

ಸಂಧ್ಯಾಮಾಮಿ ಸ್ಟೋರಿ

sandhyamaami-helida-pranigala-kathegalu1

ಕ್ಲಾಸಿಕ್ ಕತೆಗಳು, ಪ್ರಾಣಿಗಳ ಕತೆಗಳು, ಬುದ್ಧಿವಂತರ ಕತೆಗಳು, ಜಾಣರ ಕತೆಗಳು, ಗಮ್ಮತ್ತಿನ ಕತೆಗಳು ಹೀಗೆ `ಕಲ್ಲುಸಕ್ಕರೆಸರಣಿಯಲ್ಲಿ ಐದು ಪುಸ್ತಕಗಳಲ್ಲಿ ಸಂಧ್ಯಾಮಾಮಿ ಮಕ್ಕಳಿಗೆ ಕತೆಯನ್ನು ಹೇಳಿದ್ದಾರೆ. ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಮಕ್ಕಳ ಕತೆಗಳಿಗೆ ಅಷ್ಟೇ ಪ್ರಾಮುಖ್ಯತೆ ಕೊಟ್ಟು ಪ್ರಕಟಿಸುವ ಕೆಲಸ ಮಾಡಿದೆ. ಮಕ್ಕಳಿಗೆ ಮುದ ಕೊಡುವ ಚಿತ್ರಗಳಿವೆ. ಒಳಗಿನ ಚಿತ್ರಗಳು ಕಪ್ಪು ಬಿಳುಪು ಎಂಬುದನ್ನು ಬಿಟ್ಟರೆ ಪುಸ್ತಕ ಕಲರ್ ಫುಲ್ಲಾಗಿದೆ. ಕತೆಗಳಲ್ಲಿ ಯಾವುದೇ ವಿಚಾರವಾದ ಇರದ ಕಾರಣ ಮಕ್ಕಳಿಗೆ ಪ್ರಿಯವಾಗುತ್ತದೆ.

`ಸುಖವನ್ನು, ಸಂತೋಷವನ್ನು ಹಂಚಿಕೊಂಡರೆ ನೂರ್ಮಡಿಯಾಗುತ್ತದೆ ಎಂದರು ಬಲ್ಲವರು. ನನ್ನ ಕಥೆಗಳಿಗೂ ಈ ಯೋಗ ಬಂತು. `ತರಂಗದ ಮಕ್ಕಳ ಪುಟದಲ್ಲಿ ಸೇರಿಕೊಂಡು ಕೇಳಿದ, ಓದಿದ ಕಥೆಗಳು ಹೊಸ ಆಯಾಮ ಕಂಡವು. ಲಕ್ಷಾಂತರ ಪುಟ್ಟರು, ಚಿಣ್ಣರು ಓದಿಸಿ, ಕೇಳಿ, ಓದಿ ಖುಷಿಪಟ್ಟರುಎಂದಿದ್ದಾರೆ ಸಂಧ್ಯಾಮಾಮಿ.

ಓದದ ಚಿಣ್ಣರು, ಪುಟ್ಟರು ಈ ಪುಸ್ತಕ ಮಿಸ್ ಮಾಡೋ ಹಾಗಿಲ್ಲ. ಇದು ಮಕ್ಕಳಿಗೆ ಕತೆಗಳ ಹಬ್ಬ, ಪೋಷಕರು ಮತ್ತು ಶಾಲಾ ಟೀಚರ್ ಗಳಿಗೂ ಕೂಡಾ ಎಂದು ಎಲ್ಲರೂ ಅಭಿಪ್ರಾಯ ಪಡಬಹುದು.

ಶೀರ್ಷಿಕೆ: ಕಲ್ಲುಸಕ್ಕರೆ – 2 ಸಂಧ್ಯಾಮಾಮಿ ಹೇಳಿದ ಪ್ರಾಣಿಗಳ ಕತೆಗಳು ಲೇಖಕರು: ಸಂಧ್ಯಾಮಾಮಿ ಪ್ರಕಾಶಕರು: ಸಾಹಿತ್ಯ ಪ್ರಕಾಶನ ಪ್ರತೀ ಪುಸ್ತಕದ ಪುಟಗಳು : ಕನಿಷ್ಠ 78 ಪ್ರತೀ ಪುಸ್ತಕದ ಬೆಲೆ:ರೂ. 30/-

ಕೃಪೆ : ಪ್ರಜಾವಾಣಿ

ವಾತಾವರಣದ ತುಂಬ ಮಧುರತೆ ತುಂಬಿದೆ; ಬಹುಶಃ ನೀನೆಲ್ಲೋ ಮಾತನಾಡುತ್ತಿರಬಹುದು

scan00491

ಈ ಪುಟ್ಟ ಮೂರು ಕವಿತಾ ಸಂಕಲನಗಳನ್ನು ಅಂದವಾಗಿ ಮುದ್ರಿಸಲಾಗಿದೆ. `ನೀರಜಶಿಶು ಪದ್ಯಗಳ ವಸ್ತು ನಿತ್ಯದ ಸಹಜ ಸಂಗತಿಗಳು. ಮಗುವಿಗೆ ಕಥೆಯನ್ನು ಸರಳವಾಗಿ ಹೇಳುವಂತೆ ಇಲ್ಲಿ ಅವನ್ನು ಪುಟ್ಟ ಕವಿತೆ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ನೀರಜ ನೀನು ಬಾಯ್ದೆರೆದೆ/ಅಲ್ಲಿ ಬ್ರಹ್ಮಾಂಡವಿರಲಿಲ್ಲ / ಮಣ್ಣಿತ್ತು, ಕಲ್ಲಿತ್ತು, ನೀರಿತ್ತು, ಕಾಳಿತ್ತು/ – ಇಂತಹ ಚಿಕ್ಕ ಚಿಕ್ಕ ರೂಪಕಗಳು ರೇಖಾ ಚಿತ್ರಗಳೊಂದಿಗೆ ಮಕ್ಕಳ ಗಮನವನ್ನು ಥಟ್ಟನೆ ಸೆಳೆಯುವಂತಿವೆ. ಕವಿತೆಗಳನ್ನು ಮತ್ತಷ್ಟು ಧ್ವನಿ ಪೂರ್ಣವಾಗಿಸಿರುವುದು ಇಲ್ಲಿನ ಶಿವ ಹೂಗಾರರ ರೇಖಾ ಚಿತ್ರಗಳು. ವಾತಾವರಣದ ತುಂಬ ಮಧುರತೆ ತುಂಬಿದೆ / ಬಹುಶಃ ನೀನೆಲ್ಲೋ ಮಾತನಾಡುತ್ತಿರಬಹುದು / – ಸಹ ಸೌಂದರ್ಯದ ಇಂತಹ ಹೈಕುಗಳಿಂದ `ಮಂದಹಾಸಬೀರುತ್ತದೆ. ಹೈಕುಗಳ ಬಗ್ಗೆ ನಮ್ಮಲ್ಲಿ ಆಕರ್ಷಣೆ ಹುಟ್ಟಿಸುವಷ್ಟು ಸರಳವಾದ ರೂಪಕಗಳು ಇವು. `ಕನ್ನಡಿಸಂಕಲನದಲ್ಲೂ ಇಂತಹದೇ ಚುಟುಕುಗಳಿದ್ದರೂ ಒಂದು ಸಾಲು ಅಥವಾ ಒಂದು ಶಬ್ದದ ಮೂಲಕ ಅನುಪಮವಾದ ಅರ್ಥ ಸ್ಫೋಟಿಸುವ ಹೈಕುಗಳ ವಿಶಿಷ್ಟತೆಯನ್ನು ಮನಗಾಣಿಸಲೆಂದೇ ಚುಟುಕು ಮತ್ತು ಹೈಕುಗಳು ಎಂದು ಪ್ರತ್ಯೇಕವಾಗಿ ಹೆಸರಿಸಲಾಗಿದೆ. `ಚೀನಾ ಮತ್ತು ಜಪಾನ್ ಮೂಲದ ಹೈಕುಗಳೂ ಇಡೀ ವಿಶ್ವಸಾಹಿತ್ಯದಲ್ಲೇ ಸಂಚಲನ ತಂದವು. ಆದರೆ ವಚನ ಪರಂಪರೆ ಇರುವ ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಹೈಕುಗಳು ತೀರಾ ಹೊಸದಾಗಿರಲಿಲ್ಲಎಂದು ಶಾರದಾ ಮುಳ್ಳೂರ ಅವರಿಗೆ ಹೈಕುಗಳನ್ನು ರಚಿಸಲು ಪ್ರೇರಣೆ ನೀಡಿದ ಕವಿ ಸರಜೂ ಕಾಟ್ಕರ್ ಇಲ್ಲಿನ ತಮ್ಮ ಮುನ್ನುಡಿಯಲ್ಲಿ ಅಭಿಪ್ರಾಯಪಡುತ್ತಾರೆ.

ಶೀರ್ಷಿಕೆ: ನೀರಜ (ಮಗು ಪದ್ಯಗಳು) , ಮಂದಹಾಸ (ಹೈಕುಗಳು), ಕನ್ನಡಿ (ಚುಟುಕಗಳು ಮತ್ತು ಹೈಕುಗಳು) ಲೇಖಕರು: ಶಾರದಾ ಮುಳ್ಳೂರ ಪ್ರಕಾಶಕರು: ವಿನಯ ಪ್ರಕಾಶನ ಪುಟಗಳು : ಬೆಲೆ:

ಕೃಪೆ : ಸುಧಾ

ಮೂಗ್ನಲ್ ಕನ್ನಡ ಪದವಾಡ್ತೀನಿ

ಮಕ್ಕಳಿಗಾಗಿ ರಾಜರತ್ನಂ ಪುಸ್ತಕಗಳು

`ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ‘ – ಇದು ರಾಜರತ್ನಂ ಅವರು ಮಕ್ಕಳಿಗಾಗಿ ಬರೆದ ಮೊದಲ ಕವನ. ರಾಜರತ್ನಂ ಶತಮಾನೋತ್ಸವದ ಸಂದರ್ಭದಲ್ಲಿ (2008) ಬೆಂಗಳೂರಿನ ಸಪ್ನ ಬುಕ್ ಹೌಸ್(http://www.sapnaonline.com) ಅವರ ಐವತ್ತು ಪುಸ್ತಕಗಳನ್ನು ಪುನರ್ ಮುದ್ರಿಸಿದೆ. `ಕಂದನ ಕಾವ್ಯಮಾಲೆಕನ್ನಡದ ಎಲ್ಲ ಕಂದಮ್ಮಗಳ ಕೈಗೆ ಸಿಗಬೇಕಾದ ಸಂಕಲನ. `ಗರುಡನ ಬಳಗ‘, `ಪುಟಾಣಿ ಪಂಚತಂತ್ರ‘, `ಹತ್ತು ದಿಕ್ಕಿನ ಬೆಳಕು‘, `ಏಕಲವ್ಯನ ಕತೆಗಳು‘, `ಮಕ್ಕಳಿಗೆ ಮಣಿದೀಪ‘, `ನರಕದ ನ್ಯಾಯ‘, `ಕಪಿಧ್ವಜ‘, `ಶ್ರೀ ಪಾಶ್ವನಾಥರ ಕತೆಗಳುಇವು ಒಂದಕ್ಕಿಂತ ಒಂದು ಆಕರ್ಷಕವಾಗಿ ಮುದ್ರಣಗೊಂಡಿವೆ.

ಈ ವರ್ಷದ ದೀಪಾವಳಿ ಪಟಾಕಿಯ ಖರ್ಚನ್ನು ಕಡಿಮೆ ಮಾಡಿ ಈ ಪುಸ್ತಕಗಳ ಕಟ್ಟನ್ನು ಕನ್ನಡದ ಜಾಣ-ಜಾಣೆಯರ ಕೈಗೆ ಕೊಟ್ಟರೆ ಶತಮಾನೋತ್ಸವದ ಸಂದರ್ಭದಲ್ಲಿ ರತ್ನನ ಪದಗಳ ರಾಜರತ್ನಂ ಅವರಿಗೆ ಅರ್ಥಪೂರ್ಣ ಅಭಿನಂದನೆ ಸಲ್ಲಿಸಿದಂತಾಗುತ್ತದೆ.

– ಮುರಳೀಧರ ಉಪಾಧ್ಯ ಹಿರಿಯಡ್ಕ

ಕೃಪೆ : ಉದಯವಾಣಿ

ವಿಜ್ಞಾನದ ಪರಿಕಲ್ಪನೆ ಹಾಗೂ ಚಟುವಟಿಕೆಗಳು

ಕಳೆದ ಇಪ್ಪತ್ತು ವರ್ಷಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚಿನ ಶಾಲೆಗಳಲ್ಲಿ ಲೇಖಕರು ನಡೆಸಿದ ವಿಜ್ಞಾನ ಚಟುವಟಿಕೆಗಳ ಫಲವೇ ಈ ಪುಸ್ತಕ. ವಿವರವಾದ ಚಿತ್ರಗಳ ಸಹಿತ ಪ್ರತಿ ಚಟುವಟಿಕೆಯನ್ನು ಸ್ಪಷ್ಟವಾಗಿ ತಿಳಿಸಲಾಗಿದೆ. ಮಕ್ಕಳು ವಿಜ್ಙಾನ ಚಟುವಟಿಕೆಗಳನ್ನು ಮಾಡುವುದಕ್ಕೆ ಅತ್ಯಾಧುನಿಕ ಪ್ರಯೋಗಾಲಯಗಳು ಮತ್ತು ದುಬಾರಿ ಬೆಲೆಯ ಉಪಕರಣಗಳು ಬೇಕಿಲ್ಲ. ಮನೆಯಲ್ಲಿನ ನಿರುಪಯೋಗಿ ವಸ್ತುಗಳನ್ನು ಉಪಯೋಗಿಸಿಕೊಂಡು ಹಲವಾರು ಚಟುವಟಿಕೆಗಳನ್ನು ಮಾಡಬಹುದು. ಮಕ್ಕಳು ಸಾಮಾನ್ಯವಾದ ವಸ್ತುಗಳನ್ನು ಬಳಸಿದಾಗ ಮಾತ್ರ ಅವರು ದಿನನಿತ್ಯ ಜೀವನದಲ್ಲಿ ವಿಜ್ಞಾನದ ಪ್ರಸ್ತುತತೆಯನ್ನು ಮನಗಾಣಬಲ್ಲರು.

ಈ ಪುಸ್ತಕದ ಲೇಖಕರಾದ ಶ್ರೀ ಅರವಿಂದ ಗುಪ್ತ ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐ.ಐ.ಟಿ) ಯಿಂದ 1975ರಲ್ಲಿ ಎಲಕ್ಟ್ರಿಕಲ್ ಇಂಜಿನಿಯರ್ ಪದವಿ ಪಡೆದರು. ಇವರು ವಿಜ್ಞಾನ ಚಟುವಟಿಕೆಗಳ ಬಗ್ಗೆ ಹತ್ತು ಪುಸ್ತಕಗಳನ್ನು ಬರೆದಿದ್ದಾರೆ. ಐವತ್ತಕಿಂತಲೂ ಹೆಚ್ಚಿನ ಪುಸ್ತಕಗಳನ್ನು ಅನುವಾದಿಸಿದ್ದಾರೆ ಹಾಗೂ ವಿಜ್ಞಾನ ಚಟುವಟಿಕೆಗಳ ಬಗ್ಗೆ ಎಪ್ಪತ್ತು ಚಲನಚಿತ್ರಗಳನ್ನು ಸಿದ್ಧಪಡಿಸಿದ್ದಾರೆ. ಅವರಿಗೆ ಹಲವು ಪ್ರಶಸ್ತಿ ಸಂದಿವೆ. ಮಕ್ಕಳಲ್ಲಿ ವಿಜ್ಞಾನ ಜನಪ್ರಿಯಗೊಳಿಸುವುದಕ್ಕೆ ಮೊದಲ ರಾಷ್ಟ್ರ ಪ್ರಶಸ್ತಿ ಹಾಗೂ ಮಕ್ಕಳಿಗೆ ವಿಜ್ಞಾನದಲ್ಲಿ ಕುತೂಹಲ ಬೆಳೆಸಿದ್ದಕ್ಕಾಗಿ ಕಾನ್ಪುರದ ಐ.ಐ.ಟಿ. ಯಿಂದ ಪ್ರತಿಷ್ಠಿತ ಹಳೆಯ ವಿದ್ಯಾರ್ಥಿ ಪ್ರಶಸ್ತಿಗಳು ಪ್ರಮುಖವಾದವು.

ಅವಿನಾಶ ದೇಶಪಾಂಡೆಯವರು ಮುಂಬೈನ ಜೆ.ಜೆ. ಕಲಾಶಾಲೆಯಿಂದ ಪದವಿ ಪಡೆದಿದ್ದಾರೆ. ಅವರು ಬುಡಮಟ್ಟದ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಅನುವಾದಕ ಡಾ. ಎಚ್.ಎಸ್.ನಿರಂಜನ ಆರಾಧ್ಯ ಅವರು ಪ್ರಸಿದ್ಧ ವಿಜ್ಞಾನ ಲೇಖಕರು. ಟ್ರಸ್ಟ್ ಗಾಗಿ ಇನ್ನೂ ಕೆಲವು ಪುಸ್ತಕಗಳನ್ನು ಅವರು ಅನುವಾದಿಸಿದ್ದಾರೆ.

ಪುಸ್ತಕದ ಬೆನ್ನುಡಿಯಿಂದ

ಶೀರ್ಷಿಕೆ : ಹತ್ತು ಪುಟಾಣಿ ಬೆರಳುಗಳು ಲೇಖಕರು : ಅರವಿಂದ ಗುಪ್ತ ಅನುವಾದ: ಎಚ್. ಎಸ್. ನಿರಂಜನ ಆರಾಧ್ಯ ಪ್ರಕಾಶಕರು : ನ್ಯಾಷನಲ್ ಬುಕ್ ಟ್ರಸ್ಟ್ ಪುಟಗಳು :120 ಬೆಲೆ:ರೂ.95/-

ಮಕ್ಕಳ ಕಾದಂಬರಿ

ಈಗಾಗಲೇ ಮಕ್ಕಳ ಕಾದಂಬರಿಗಳನ್ನು ಬರೆದು ಅನುಭವವಿರುವ ಶರಣಗೌಡ ಎರಡೆತ್ತಿನ ಅವರ ಹೊಸ ಮಕ್ಕಳ ಕಾದಂಬರಿ `ಸಪ್ತರ್ಷಿ
ದ್ವೀಪವಿದ್ಯಾರ್ಥಿ ಗಳ ಸ್ವಾರಸ್ಯ ಹಾಗೂ ಕೌತುಕಭರಿತ ಪ್ರವಾಸ ಕಥನ ಲೇಖಕರ ಸುಲಲಿತ ನಿರೂಪಣೆಯಲ್ಲಿ ಮೂಡಿ ಬಂದಿದೆ.

ಮಕ್ಕಳ ಮನಸ್ಸಿಗೆ ರಂಜನೆ ಒದಗಿಸುವುದು `ಸಪ್ತರ್ಷಿ ದ್ವೀಪಕಾದಂಬರಿಯ ಮುಖ್ಯ ಉದ್ದೇಶವಾಗಿದ್ದರೂ, ರಂಜನೆಯ ಜೊತೆಗೆ ದೇಶಭಕ್ತಿ ಹಾಗೂ ಸಾಹಸ ಪ್ರವೃತ್ತಿ ಉದ್ದೀಪನದ ಕೆಲಸವನ್ನೂ ಕಾದಂಬರಿ ಮಾಡುತ್ತದೆ.

`ಶಾಲೆ, ಬೋಧಕ ವರ್ಗ ಮತ್ತು ವಿದ್ಯಾರ್ಥಿ ಗಳಲ್ಲಿಯ ಸರಸ ಸುಮಧುರ ಪ್ರೀತಿ ವಿಶ್ವಾಸಗಳ ಸಂಬಂಧವನ್ನು ಶರಣಗೌಡ ಅವರು ಸೊಗಸಾಗಿ-ಸಹಜವಾಗಿ ಕಥನ ರೂಪಕವಾಗಿ ಅಭಿವ್ಯಕ್ತಿಗೊಳಿಸಿದ್ದಾರೆಎಂದು ಈಶ್ವರಚಂದ್ರ ಚಿಂತಾಮಣಿ ಮುನ್ನುಡಿಯಲ್ಲಿ ಶ್ಲಾಘಿಸಿದ್ದಾರೆ. ಕಾದಂಬರಿಯಲ್ಲಿ ಬಳಸಿಕೊಂಡಿರುವ ಚಿತ್ರಗಳು ಪುಸ್ತಕದ ಸೌಂದರ್ಯವನ್ನು ಹೆಚ್ಚಿಸಿವೆ.

ಶೀರ್ಷಿಕೆ : ಸಪ್ತರ್ಷಿ ದ್ವೀಪ ಲೇಖಕರು : ಶರಣಗೌಡ ಎರಡೆತ್ತಿನ ಪ್ರಕಾಶಕರು : ಆನಂದಕಂದ ಗ್ರಂಥಮಾಲೆ ಪುಟಗಳು : 104 ಬೆಲೆ: ರೂ.50/-

ಕೃಪೆ : ಪ್ರಜಾವಾಣಿ

ಕಾಪ್ಸೂಲ್ ತಂತ್ರದ ಮಕ್ಕಳ ಕಥೆಗಳು

ಗುಳಿಗೆಯ ರೂಪದಲ್ಲಿ ಪ್ರತಿ ವಿಷಯವನ್ನೂ ನೀಡುವುದು ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಜನಪ್ರಿಯಗೊಳ್ಳುತ್ತಿರುವ ಕಥನ ತಂತ್ರ. ಓದಲಿಕ್ಕೆ ಪುರಸೊತ್ತಿಲ್ಲದ, ಕೇವಲ ಓದುವ ಸುಖಕ್ಕಾಗಿ ಮಾತ್ರ ಪುಸ್ತಕ ಕೈಗೆತ್ತಿಕೊಳ್ಳುವ ಸಹೃದಯರು ಕಡಿಮೆ ಆಗುತ್ತಿರುವುದೇ ಈ ಕ್ಯಾಪ್ಸೂಲ್ ತಂತ್ರದ ಜನಪ್ರಿಯತೆಗೆ ಕಾರಣ. ಇಂಥ ಸಂದರ್ಭದಲ್ಲಿ ಜೀನಹಳ್ಳಿ ಸಿದ್ದಲಿಂಗಪ್ಪನವರ ಕೃತಿ ಪ್ರಕಟವಾಗಿದೆ.

ಮನೋವಿಕಾಸಕ್ಕಾಗಿ, ಮನರಂಜನೆಗಾಗಿ ಅಥವಾ ಭಾಷೆ ಕಲಿಯುವ ಉದ್ದೇಶದಿಂದ ಮಕ್ಕಳು ಕಥೆ ಕೇಳುವ ಕಾಲ ಮುಗಿಯಿತು ಎಂದು ಲೇಖಕರು ಭಾವಿಸಿರುವುದರಿಂದಲೋ ಏನೋ, ಕಥೆಗಳಿಗೆ ಜಾಣ್ಮೆಯ ನಂಟು ಕಲ್ಪಿಸಿದ್ದಾರೆ. ಇಲ್ಲಿನ ಕಥೆಗಳನ್ನು ಓದುವ ಮಕ್ಕಳು ಕಥೆಯ ಖುಷಿಯೊಂದಿಗೆ – ಒಗಟು, ಗಾದೆಯನ್ನು ಅಥವಾ ಗಣಿತದ ಲೆಕ್ಕವನ್ನು ಕಲಿಯುತ್ತಾರೆ ಎನ್ನುವ ಆಶಯ ಅವರದ್ದು.

`ಮಕ್ಕಳ ಜಾಣ್ಮೆಯ ಕಥೆಗಳುಪುಸ್ತಕದಲ್ಲಿ ಒಟ್ಟು ಮೂವತ್ತಮೂರು ಕಥೆಗಳಿವೆ. ಮಕ್ಕಳ ಸಾಹಿತ್ಯ ರಚನೆಯಲ್ಲಿ ಪಳಗಿರುವ ಸಿದ್ಧಲಿಂಗಪ್ಪನವರು ಸಲೀಸಾಗಿ ಕಥೆ ಹೇಳಿದ್ದಾರೆ. ಕಥೆಗಳಿಗೆ ಪೂರಕವಾಗಿ ಬಳಸಿಕೊಂಡಿರುವ ಚಿತ್ರಗಳು ಪುಸ್ತಕದ ಸೊಗಸು ಹೆಚ್ಚಿಸಿವೆ.

ಕಥೆಗಳ ಮೂಲಕ ಕಲಿಕೆಯೂ ಸಾಧ್ಯವಿರುವುದರಿಂದ ಪೋಷಕರು ಕೂಡ ಈ ಕಥೆಯನ್ನು ಓದಿ ಎಂದು ತಮ್ಮ ಮಕ್ಕಳ ಬೆನ್ನು ತಟ್ಟಬಹುದು. ಮಕ್ಕಳು ತಾವು ಓದಿದ ಈ ಕಥೆಗಳನ್ನು ಗೆಳೆಯರೊಂದಿಗೆ ಹೇಳಿಕೊಂಡು ಪಾಠದ ಆಟ ಆಡಲೂ ಬಹುದು. ಆದರೆ ಕಥೆಯ ಸ್ವಾರಸ್ಯಕಿಂತ, ಕಥೆಯ ಮೂಲಕ ಉಂಟಾಗಬಹುದಾದ ಮನೋವಿಕಾಸಕ್ಕಿಂತಲೂ ಜಾಣ್ಮೆಯ ಅಂಶವೇ ಇಲಿನ ಕಥೆಗಳಲ್ಲಿ ಹೆಚ್ಚಾಗಿವೆ. ಈ ಜಾಣ್ಮೆಯ ಕಸರತ್ತು ಮಕ್ಕಳ ಲೋಕದ ರಮ್ಯತೆಯನ್ನು ಮರೆಸುವಂತಹದ್ದು. ಕಲಿಕೆ ಎನ್ನುವುದು ಪರೋಕ್ಷ ಸಾಧನೆ ಆಗಬೇಕೇ ಹೊರತು ಅದುವೇ ಮುಖ್ಯವಾಗಬಾರದು.

ಶೀರ್ಷಿಕೆ : ಮಕ್ಕಳ ಜಾಣ್ಮೆಯ ಕಥೆಗಳು ಲೇಖಕರು : ಜೀನಹಳ್ಳಿ ಸಿದ್ಡಲಿಂಗಪ್ಪ ಪ್ರಕಾಶಕರು : ಪ್ರೇಮ ಪ್ರಕಾಶನ ಪುಟಗಳು : 160 ಬೆಲೆ: ರೂ.80/-

ಕೃಪೆ : ಪ್ರಜಾವಾಣಿ