ಏಂಗೆಲ್ಸ್ ಚಿಂತನೆಯ ಬೆಳಕಿನಲ್ಲಿ ಮಹಿಳಾ ವಿಮೋಚನೆ ಚರ್ಚಾಗೋಷ್ಟಿಯಲ್ಲಿ ಪುಸ್ತಕ ಬಿಡುಗಡೆ ಏಂಗೆಲ್ಸ್ 200 ಪುಸ್ತಕ ಸರಣಿಯ ಪುಸ್ತಕ ಕುಟುಂಬ ಖಾಸಗಿ ಆಸ್ತಿ ಮತ್ತು ಪ್ರಭುತ್ವ ಇವುಗಳ ಉಗಮ

ಬಿಎಂಶ್ರೀ ಪ್ರತಿಷ್ಠಾನದಲ್ಲಿ ನಡೆಯುವ ಚರ್ಚಾಗೋಷ್ಟಿಯಲ್ಲಿ (zoom link ಮೂಲಕವಾದರೂ)

ಭಾಗವಹಿಸಿ

ಈ ಪುಸ್ತಕದ ಬಗ್ಗೆ ಮಹಿಳಾ ಹೋರಾಟಗಾರ್ತಿ, ಲೇಖಕಿ, ಚಿಂತಕಿ ಡಾ. ಎನ್. ಗಾಯತ್ರಿ ಅವರ ಅಭಿಪ್ರಾಯ ಇದು.

ಜಗತ್ತು ಸ್ವೀಕರಿಸಿದ ಮಾರ್ಕ್ಸ್ ವಾದವೆಂಬ ವಿಶಿಷ್ಟ ಲೋಕದೃಷ್ಟಿಗೆ ಕಾರಣಕರ್ತರಾದ ಜೋಡಿ ಪ್ರತಿಭೆಗಳು ಮಾರ್ಕ್ಸ್ ಮತ್ತು ಏಂಗೆಲ್ಸ್. ಇವರಲ್ಲಿ ಏಂಗೆಲ್ಸ್ ಬರೆದ ಕುಟುಂಬ, ಖಾಸಗಿ ಆಸ್ತಿ ಮತ್ತು ಪ್ರಭುತ್ವಗಳ ಉಗಮ – ಇಡೀ ವಿಶ್ವದ ಮೇಲೆ ಬಹುಮುಖ್ಯ ಪ್ರಭಾವ ಮತ್ತು ಪರಿಣಾಮವನ್ನು ಬೀರಿದ ಕೃತಿ. ಈ ಕೃತಿ ಪ್ರಕಟವಾದಂದಿನಿಂದ ಇಲ್ಲಿಯವರೆಗೆ ಜಗತ್ತಿನ ಜ್ಞಾನ ಪ್ರಪಂಚಕ್ಕೆ ವಿಸ್ತಾರವನ್ನು, ವೈಶಾಲ್ಯತೆಯನ್ನು ನೀಡುತ್ತಲೇ ಬಂದಿದೆ. 1884ರಲ್ಲಿ ಏಂಗೆಲ್ಸ್ ತಮ್ಮ ಮೌಲಿಕ ಕೃತಿಯಾದ `ಕುಟುಂಬ, ಖಾಸಗಿ ಆಸ್ತಿ ಮತ್ತು ಪ್ರಭುತ್ವಗಳ ಉಗಮ’ ಕೃತಿಯನ್ನು ರಚಿಸಿದರು. ಮಾನವ ಜನಾಂಗದ ಪ್ರಾಗೈತಿಹಾಸಿಕ ಕಾಲದ ಜೀವನ ವಿಧಾನವನ್ನು ತೆರೆದಿಡುವ ಈ ಗ್ರಂಥವು ಗ್ರೀಸ್, ಐರ್ಲೆಂಡ್ ಮತ್ತು ಜರ್ಮನಿಯ ಪ್ರಾಚೀನ ಸಮಾಜಗಳ ಪರಿಚಯ ಮಾಡಿಕೊಡುತ್ತದೆ. ಆರಂಭಿಕ ಹಂತದ ಸಾಮ್ಯತೆಯ ಸಮಾಜ, ಇವುಗಳ ನಿರ್ದಿಷ್ಟ ಸ್ವರೂಪವನ್ನು ಚರ್ಚಿಸುತ್ತಾ ಕುಟುಂಬದ ಉಗಮವನ್ನು ಏಂಗೆಲ್ಸ್ ಗುರುತಿಸುತ್ತಾರೆ. ಕ್ರಮೇಣ ಬೆಳೆದು ಬಂದ ಸಾಮಾಜಿಕ-ಆರ್ಥಿಕ ಸಂರಚನೆಗಳು ಸಮಾಜವನ್ನು ಒಂದು ಹಂತದಿಂದ ಇನ್ನೊಂದಕ್ಕೆ ಕೊಂಡೊಯ್ಯುತ್ತಿದ್ದಂತೆ ಕುಟುಂಬ, ಖಾಸಗಿ ಆಸ್ತಿಯನ್ನು ಆಧರಿಸಿದ ವರ್ಗ ಸಮಾಜ ಮತ್ತು ಪ್ರಭುತ್ವ ಹುಟ್ಟಿಕೊಳ್ಳುತ್ತವೆ. ಈ ಮೂರು ಘಟಕಗಳಿಗೂ ಇರುವ ಪರಸ್ಪರ ಸಂಬಂಧಗಳನ್ನು ಅರ್ಥಮಾಡಿಕೊಂಡರಷ್ಟೇ ದಮನದ ಸ್ವರೂಪ ಮತ್ತು ಕಾರಣಗಳು ಸ್ಪಷ್ಟವಾಗುತ್ತವೆ.


ಕಾಡು ಮನುಷ್ಯನ ಕಾಲದಿಂದ ನಾಗರಿಕ ಪೂರ್ವ, ನಾಗರಿಕ ಹಂತದ ಕಾಲದವರೆಗೆ ಸಾಗಿರುವ ಮನುಷ್ಯನ ವಿಕಾಸವನ್ನು ಚರ್ಚಿಸುತ್ತ ಮಾನವ ಸಂಸ್ಕೃತಿಯ ಇತಿಹಾಸವನ್ನು ಈ ಕೃತಿ ಬಿಚ್ಚಿಡುತ್ತದೆ. ಸಮಾಜದಲ್ಲಿ ಗಂಡು-ಹೆಣ್ಣಿನ ನಡುವಿನ ಲೈಂಗಿಕ ಸಂಬಂಧಗಳಲ್ಲಿ ಉಂಟಾದ ಬದಲಾವಣೆ ಈ ಚರಿತ್ರೆಯ ಭಾಗವಾಗಿದೆ. ವಿಶ್ವದ ಹಲವಾರು ಸಮಾಜಗಳಲ್ಲಿ ಕಂಡು ಬಂದ ಬಹುಪತ್ನಿತ್ವ, ಬಹುಪತಿತ್ವದಿಂದ ಏಕಪತಿ-ಪತ್ನಿತ್ವದವರೆಗೆ ಸಾಗಿದ ಸಮಾಜದಲ್ಲಿ ಯಾರು ಯಾರನ್ನು ಮದುವೆಯಾಗುತ್ತಿದ್ದರು, ಎನ್ನುವ ವಿವರಗಳು, ಗೋತ್ರ ವ್ಯವಸ್ಥೆ ಬೆಳೆದು ಬಂದ ರೀತಿ ಮುಂತಾದ ವಿಷಯಗಳನ್ನು ಈ ಕೃತಿ ಸುದೀರ್ಘವಾಗಿ ಚರ್ಚಿಸುತ್ತದೆ. ಗಂಡು-ಹೆಣ್ಣು ಇಬ್ಬರೂ ಸೇರಿ ಕೂಡಿಸುತ್ತಿದ್ದ ಕುಟುಂಬದ ಸಂಪತ್ತು ಗಂಡಸಿನ ಪಾಲಾದದ್ದು ಹೇಗೆ, ವಂಶಾವಳಿಯು ತಾಯಿ ಮತ್ತು ತಂದೆಯ ಮೂಲಕ ಹರಿದು ಬಂದ ವಿನ್ಯಾಸವನ್ನು ಕೂಡ ಚರ್ಚಿಸಲಾಗಿದೆ. ಉತ್ಪಾದನಾ ಶಕ್ತಿಯಲ್ಲಾದ ಬದಲಾವಣೆ ಶ್ರಮ ವಿಭಜನೆಯನ್ನು ಹುಟ್ಟಿ ಹಾಕಿದ್ದು ಮತ್ತು ಅದರಿಂದ ಉಂಟಾದ ವರ್ಗಗಳ ವಿಭಜನೆಯಲ್ಲಿ ಮಹಿಳೆ ಬಹುಮುಖ್ಯ ಶೋಷಿತಳಾದಳು, ಎನ್ನುವುದನ್ನು ಇಲ್ಲಿ ನೋಡಬಹುದು. ಇಂದು ನಾವು ಕಾಣುವ ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗ, ಪೊಲೀಸ್, ಸೈನಿಕರು – ಎಲ್ಲವುಗಳ ಆವಿರ್ಭಾವಕ್ಕೂ ಒಂದು ಚರಿತ್ರೆಯಿದೆಯೆಂಬುದರ ಪ್ರಾಥಮಿಕ ತಿಳುವಳಿಕೆಯನ್ನು ಮತ್ತು ಅದರ ಬದಲಾವಣೆಯ ಪ್ರಕ್ರಿಯೆಯನ್ನು ಈ ಕೃತಿ ಸಾದರಪಡಿಸುತ್ತದೆ.

ಇಂದು ನಮ್ಮೆಲ್ಲರ ಬದುಕು ಸಂಕಷ್ಟದಲ್ಲಿದೆ. ಸಮಷ್ಠಿ ಹಿತವು ಗೌಣವಾಗಿ, ವ್ಯಕ್ತಿಹಿತವು ಮೇಲುಗೈಯ್ಯಾಗಿ, ಹಿರಿದು ತಿನ್ನುವುದೇ ಈ ಯುಗದ ಮೌಲ್ಯವಾಗಿರುವ ಸಂದರ್ಭದಲ್ಲಿ ‘ಹೆಣ್ಣು’ ತನ್ನ ಅಸ್ಮಿತೆಯನ್ನು ಕಳೆದುಕೊಂಡು ಭೋಗದ ವಸ್ತುವಾಗಿದ್ದಾಳೆ; ಪುರುಷನ ಆಸ್ತಿಯಾಗಿ, ಕೌಟುಂಬಿಕ ದೌರ್ಜನ್ಯದ ಸುಳಿಯಲ್ಲಿ ಸಿಕ್ಕಿಕೊಂಡಿದ್ದಾಳೆ. ಕುಟುಂಬದೊಳಗಿನ ಅಧಿಕಾರದ ಅಸಮತೋಲನ ಸಂಬಂಧಗಳು, ಆಸ್ತಿರಹಿತ ಹೆಣ್ಣಿನ ನೋವಿಗೆ ಕಾರಣವಾಗಿವೆ. ವಿವಾಹದ ಚೌಕಟ್ಟು ವಿಸ್ತರಿಸಿದೆ. ವಿಭಿನ್ನ ಲಿಂಗಗಳ ಪರಿಕಲ್ಪನೆ ಬದಲಾಗಿದೆ. ಸಲಿಂಗಿಗಳು ಮತ್ತು ತೃತೀಯ ಲಿಂಗಿಗಳ ಜೀವನ ವಿನ್ಯಾಸಗಳು ನಮ್ಮ ಕಣ್ಣ ಮುಂದಿದೆ. ಈ ಎಲ್ಲ ಅಂಶಗಳನ್ನು ಪ್ರತಿಫಲಿಸುವ ಮತ್ತು ನಿಯಂತ್ರಿಸುವ ಪುರುಷಾಧಿಪತ್ಯದ ಪ್ರಭುತ್ವ, ಸಮಾನತೆಯ ಮಾನವೀಯ ಸಮಾಜವನ್ನು ಕನಸಿನ ಗಂಟಾಗಿಸಿದೆ. ಏಕ ಸಂಸ್ಕೃತಿಯ ದಂಡವನ್ನು ಬಹುಜನರ ಮೇಲೆ ಹೇರಲಾಗುತ್ತಿರುವ ಇಂದಿನ ಭಾರತದ ಸಂದರ್ಭದಲ್ಲಿಯಂತೂ ‘ಸಂಸ್ಕೃತಿ’ಯ ಅಪವ್ಯಾಖ್ಯಾನ ಅಮಾನುಷವಾಗಿ ನಡೆದಿದೆ. ಸಂಸ್ಕೃತಿಯೆಂಬುದು ನಿಂತ ನೀರಲ್ಲ, ಅದು ಕಾಲದ ಪ್ರವಾಹದಲ್ಲಿ ಹಲವಾರು ಸ್ಥಿತ್ಯಂತರ ಹೊಂದಿ ಬದಲಾಗಿದೆ ಮತ್ತು ಅದನ್ನು ಗಮನಿಸಿ, ಗುರುತಿಸಿದಾಗ ಮಾತ್ರ ಸಮಾಜದ ಅನಿಷ್ಟಗಳ ವಿರುದ್ಧ ಹೋರಾಡಲು ಸಾಧ್ಯ, ಎಂಬ ತಿಳುವಳಿಕೆಯ ಅಗತ್ಯ ಜರೂರಾಗಿ ಬೇಕಿದೆ. ಇಂತಹ ಅರಿವನ್ನು ಉಂಟು ಮಾಡುವ ಏಂಗೆಲ್ಸ್ ರ `ಕುಟುಂಬ, ಖಾಸಗಿ ಆಸ್ತಿ ಮತ್ತು ಪ್ರಭುತ್ವ’ ಕೃತಿಯ ಓದು ಇಂದಿನ ವರ್ತಮಾನದ ಅಗತ್ಯವೂ ಹೌದು.


ಕುಟುಂಬ ಸಮಾಜದ ಅತಿ ಮುಖ್ಯ ಘಟಕ. ಅದು ಹೆಣ್ಣಿನ ವಿಷಯದಲ್ಲಿ ಬಹು ಮುಖ್ಯ ಶೋಷಕ ಯಂತ್ರವಾಗಿದೆ. ಹೆಣ್ಣು ತನ್ನ ಶೋಷಣೆಯ ವಿರುದ್ಧ ಹೋರಾಡಲು ಅದರ ಚರಿತ್ರೆಯನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಶೋಷಣೆಯ ಚರಿತ್ರೆಯನ್ನು ವಿವರಿಸುವ ಈ ಕೃತಿ ತಮ್ಮ ದಮನದ ವಿರುದ್ಧ ಹೋರಾಟದಲ್ಲಿ ತೊಡಗಿರುವ ಎಲ್ಲರಿಗೂ ಕೈ ದೀವಿಗೆಯಾಗಿದೆ.


ಇದರ ಕನ್ನಡ ಅನುವಾದಗಳು ಈಗಾಗಲೇ ಒಂದೆರಡು ಬಂದಿದ್ದರೂ, ಈ ಅನುವಾದ ಅತ್ಯಂತ ಸರಳವಾದ ಭಾಷೆಯಲ್ಲಿ ಓದಲು ಮತ್ತು ತಿಳಿಯಲು ಅನುಕೂಲಕರವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪುಸ್ತಕದ ಮೊದಲಿಗೆ, ಅನುವಾದಕಿಯು ಬರೆದಿರುವ ದೀರ್ಘ ಮುನ್ನುಡಿಯು ಪುಸ್ತಕದ ಸಾರ ಸರ್ವಸ್ವವನ್ನು ಒಂದೆಡೆ ಹಿಡಿದಿಟ್ಟಿದೆ. ನಾಲ್ಕು ದಶಕಗಳಿಂದ ಕರ್ನಾಟಕದ ಮಹಿಳಾ ಚಳುವಳಿಯಲ್ಲಿ ತೊಡಗಿಕೊಂಡಿರುವ ಜಯಲಕ್ಷ್ಮಿಯವರು ಈ ಕೃತಿಯ ಪ್ರಸ್ತುತತೆಯನ್ನು ಇಂದಿನ ನಮ್ಮ ದೇಶದ ಪರಿಸ್ಥಿತಿಯ ಹಿನ್ನೆಲೆಯಲ್ಲಿಟ್ಟು ವಿವರಿಸಿದ್ದಾರೆ. ಅದಕ್ಕಾಗಿ ಅನುವಾದಕಿಯು ಅಭಿನಂದನಾರ್ಹರು. ಇಂತಹ ಅಗತ್ಯವಾದ ಪುಸ್ತಕದ ಯೋಜನೆಯನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿರಿಸಿರುವ ನವಕರ್ನಾಟಕ ಪ್ರಕಾಶನ ಮತ್ತು ಕ್ರಿಯಾ ಮಾಧ್ಯಮದವರಿಗೆ ಮನಃಪೂರ್ವಕ ವಂದನೆಗಳು.

ಡಾ. ಎನ್. ಗಾಯತ್ರಿ

ಅಂತರ ರಾಷ್ಟ್ರೀಯ ಮಹಿಳಾ ದಿನದ ಈ ದಿನದಂದು ಮಹಿಳೆಯರ ಮೇಲಿನ ಎಲ್ಲಾ ರೀತಿಯ ದೌರ್ಜನ್ಯವನ್ನು ಇಲ್ಲವಾಗಿಸುವ ನಿಟ್ಟಿನಲ್ಲಿ ಕೆಲಸಕ್ಕೆ ತೊಡಗಿಸಿಕೊಳ್ಳೋಣ

22.978-81-909517-5-3 Front

ಮಹಿಳೆಯರ ಪ್ರಶ್ನೆಗಳು, ಮಹಿಳಾ ಅಧ್ಯಯನ, ಸಮಾನ ಹಕ್ಕುಗಳು ಎಂಬುದೆಲ್ಲಾ ಇದೆ ಎಂದೂ ಗೊತ್ತಿರದ, ತಮ್ಮ ಬದುಕ ಬಟ್ಟಲಿನಲ್ಲಿ ಸಿಕ್ಕಿದ್ದು, ಅದನ್ನು ತಮ್ಮದೇ ಆದ ರೀತಿಯಲ್ಲಿ ದಕ್ಕಿಸಿಕೊಂಡು ವೈಯಕ್ತಿಕ ಹಕ್ಕು ಸ್ಥಾಪಿಸಿಕೊಂಡ ಜೀವಗಳ ಕಥನಗಳಿವು.
ಲೇಖಕಿ ಹೇಳುತ್ತಾರೆ,
“ನಾನು ಚಿಕ್ಕಂದಿನಿಂದಲೂ ಮಠಗಳ ಪರಿಸರದಲ್ಲಿ ಓಡಾಡಿಕೊಂಡು ಭಾಷಣ, ಪ್ರವಚನವೆಂದು ತಿರುಗಾಡಿದವಳು. ನಮ್ಮ ಭಾಗದ ಮಠಗಳ ಫೌಳಿಯಲ್ಲಿಯ ಬದುಕೆಂದರೆ ಅದೊಂದು ಸಂಕೀರ್ಣ ಅನನ್ಯ ಅನುಭವ. ಧಾರ್ಮಿಕತೆಯೊಂದಿಗೆ ಸಾಮಾಜಿಕ ಸಂಘರ್ಷ, ಬಡತನದೊಂದಿಗೆ ಜಮೀನ್ದಾರಿಯ ಒಣಧಿಮಾಕು, ಮುಗ್ಧರ ನಡುವೆಯೂ ಚಾಲಬಾಜಿಗಳ ಸಂತೆ, ಭಾವುಕ ಭಕ್ತರ ನಡುವೆಯೂ ನಾಸ್ತಿಕರ ದಂಡು. ತೀರ ಸಂಪ್ರದಾಯ ಜೀವಿಗಳ ಸಮೂಹದ ನಡುವೆ ಉಗ್ರ ವಾಸ್ತವವಾದಿಗಳ ಪಡೆಯು ಮೇಳೈಸಿಕೊಂಡಿರುತ್ತದೆ.”
ಇಲ್ಲಿನ ಬಹುತೇಕ ಲೇಖನಗಳಲ್ಲಿ ವ್ಯವಸ್ಥೆಯ ವಿರುದ್ಧ ತಮ್ಮ ಮಿತಿಯಲ್ಲಿಯೇ ದಂಗೆ ಎದ್ದ ಮಹಿಳೆಯರ ಕಥನಗಳಿವೆ. ಆ ದಂಗೆಯು ಒಮ್ಮೊಮ್ಮೆ ವೈಯಕ್ತಿಕ ರೂಪದಲ್ಲಿ ಕೆಲವೊಮ್ಮೆ  ಸಂಘಟನೆಯ ರೂಪದಲ್ಲಿಯೂ ಕಾಣಿಸಕೊಂಡಿವೆ. ಹಾಗಾಗಿ ಇವು ಕತ್ತಲಂಚಿನ ಕಿಡಿಗಳು
ಶೀರ್ಷಿಕೆ: ಕತ್ತಲಂಚಿನ ಕಿಡಿಗಳು, ಲೇಖಕರು:ಮೀನಾಕ್ಷಿ ಬಾಳಿ ಪ್ರಕಾಶಕರು:ಚಿಂತನ ಪುಸ್ತಕ, ಪುಟ:76 ಬೆಲೆ:ರೂ.40/- ಪ್ರಕಟಣಾ ವರ್ಷ:2010

`ರೊಟ್ಟಿ ಮತ್ತು ಗುಲಾಬಿ’ ಘೋಷಣೆಯ ವಿಶ್ವ ಮಹಿಳಾ ದಿನಾಚರಣೆಗೆ ನೂರರ ಸಂಭ್ರಮ

ರೊಟ್ಟಿ – ತುಂಬಿದ ಹೊಟ್ಟೆಯ ಹಾಗೂ  ಗುಲಾಬಿ – ಗೌರವಾನ್ವಿತ ಬದುಕಿನ ಸಂಕೇತ. ಕೆಲವು ಮಹಿಳೆಯರು ಮಹಿಳೆ ಎನ್ನುವ ಕಾರಣದಿಂದಲೇ ಹಸಿವಿನಿಂದ ಬಳಲುತ್ತಿದ್ದರೆ ಇನ್ನೊಂದು ಭಾಗ ಹಸಿವಿನಿಂದಲ್ಲದಿದ್ದರೂ ತನ್ನೆಲ್ಲಾ ಕೊಡುಗೆಯಿದ್ದರೂ ನಿರ್ಧಾರದಲ್ಲಿ ಹೆಣ್ಣು ಎನ್ನುವ ಕಾರಣಕ್ಕೆ `ಎರಡನೇ ದರ್ಜೆ’ಗೆ ತಳ್ಳಲ್ಪಡುವ ಅವಮಾನದಿಂದ ಬಳಲುತ್ತಿದ್ದಾಳೆ.

ಮಹಿಳೆಯ ಕುರಿತಾದ ಜೀವವಿರೋಧಿ ತಾರತಮ್ಯದ ವಿರುದ್ಧ ಹೋರಾಡಿದ, ಹೋರಾಡುತ್ತಿರುವ ಕೋಟಿ ಮಹಿಳೆಯರಿಗೆ ನಮ್ಮ ಧನ್ಯವಾದಗಳು. ಇಂತಹ ಸಮರಧೀರ ಮಹಿಳೆಯರಿಂದಾಗಿಯೇ (ನಿರಂತರ ಹೋರಾಟದ ನೂರು ವರ್ಷಗಳ ನಂತರವೂ) ಮಹಿಳೆಯರಿಗೆ ಕೆ(ಹ)ಲವು ಕೊರತೆಗಳಿದ್ದರೂ ಇಷ್ಟಾದರೂ ಒಳ್ಳೆಯ ಸ್ಥಾನ ಮಾನ ಸಿಕ್ಕಿದೆ. ಈ ಕೊರತೆಗಳ ನಿರ್ಮೂಲನೆಗಾಗಿ ನಾವು `ವಿಶ್ವ ಮಹಿಳಾ ದಿನ’ದ ಹೋರಾಟದ ಪರಂಪರೆಯನ್ನು ಮುಂದುವರಿಸಬೇಕಾಗಿದೆ.

ಮಹಿಳೆಯ ಗುಣಗಾನ ಮಾಡುವ ನೆಪದಲ್ಲಿ ಮಹಿಳೆಯ ಮೇಲೆ `ಕ್ಷಮೆ’ ಎನ್ನುವ ಗುಣವನ್ನು ಹೊರಿಸಿ ತಾನು ಅನುಭವಿಸುವ ಹಸಿವು ಅಪಮಾನ ಗಳನ್ನು ಸಹಿಸಿಕೊಂಡಿರು ಎನ್ನುವ `ಕ್ಷಮಯಾ ಧರಿತ್ರೀ’ ಎನ್ನುವ ಧರ್ಮವಾಕ್ಯ ಮಹಿಳೆಯರನ್ನು ಹೋರಾಟದ ಹಾದಿಯಿಂದ ವಿಮುಖಳಾಗಿಸು ಒಂದು ಹುನ್ನಾರ ಎನ್ನುವುದು ಮಹಿಳೆ ಅರಿತಿರಬೇಕು. ಸಮ್ಮಾನ, ಗೌರವಗಳಿಲ್ಲದ ಬರಿಯ ಹೊಗಳಿಕೆ ಇನ್ನು ಸಾಕು.

ದುಡಿಮೆಯ ಮೂಲಕ ಹಸಿವನ್ನು ನೀಗಿಸಿಕೊಳ್ಳುವ ಹಾಗೂ ಗೌರವಾನ್ವಿತ ಬದುಕನ್ನು ನಡೆಸುವುದೇ ಎಲ್ಲಾ ಮಹಿಳೆಯರ ಗುರಿಯಾಗಿರಲಿ. ಯಾವುದೇ ರೀತಿಯ ದುಡಿಮೆಯಿರಲಿ ಅದು ಮಹಿಳೆಯ ಹಸಿವನ್ನು ನೀಗುವುದು ಮಾತ್ರವಲ್ಲದೇ ಅವಳು ಗೌರವ ಪಡೆಯಲು ಅನುಕೂಲವಾಗುವಂತಿರಬೇಕು. ಅಂತಹ ದುಡಿಮೆಯ ಹಕ್ಕು ಮಹಿಳೆಯರದಾಗಬೇಕು. ಆಗಲಷ್ಟೇ ನೂರು ವರ್ಷಗಳಿಂದ ವಿವಿಧ ಬೇಡಿಕೆಗಳನ್ನಿಟ್ಟು ಹೋರಾಡಿದ ಮಹಿಳೆಯರ ಹೋರಾಟದ ಯಶಸ್ವಿಯಾಗಿದೆ ಎನ್ನಬಹುದು.

`ವಿಶ್ವ ಮಹಿಳಾ ದಿನ’ ನೂರು ವರ್ಷಗಳನ್ನು ದಾಟಿದ ಈ ಸಂದರ್ಭದಲ್ಲಿ `ಚಿಂತನ ಪುಸ್ತಕ’ ಹೊರ ತಂದಿರುವ `ಅಂತರ ರಾಷ್ಟ್ರೀಯ ಮಹಿಳಾ ದಿನ ಶತಮಾನೋತ್ಸವ ಮಾಲಿಕೆ’ ಯಲ್ಲಿ ಯೋಜಿಸಿದ 12 ಪುಸ್ತಕಗಳಲ್ಲಿ ಈಗಾಗಲೇ ಹೊರಬಂದ 4 ಪುಸ್ತಕಗಳ ಪರಿಚಯ ಇಲ್ಲಿದೆ.


ಶೀರ್ಷಿಕೆ: ಮಹಿಳಾ ವಿಮೋಚನೆಯ ಹೋರಾಟಗಳ ನೂರು ವರ್ಷಗಳು ಪ್ರಕಾಶಕರು: ಚಿಂತನ ಪುಸ್ತಕ ಲೇಖಕರು:ಎಸ್.ಕೆ.ಗೀತಾ ಪುಟ:88+4 ಬೆಲೆ:ರೂ.70/-


ಶೀರ್ಷಿಕೆ: ನೀನುಂಟು ನಿನ್ನ ರೆಕ್ಕೆಯುಂಟು ಪ್ರಕಾಶಕರು:ಚಿಂತನ ಪುಸ್ತಕ ಸಂಪಾದಕರು: ಮಾಧವಿ ಭಂಡಾರಿ ಕೆರೆಕೋಣ ಪುಟ:136+4 ಬೆಲೆ:ರೂ.95/-

ಶೀರ್ಷಿಕೆ: ವಿಶ್ವ ಮಹಿಳಾ ದಿನದ ರೂವಾರಿ ಕ್ಲಾರಾ ಜೆಟ್ಕಿನ್ ಪ್ರಕಾಶಕರು:ಚಿಂತನ ಪುಸ್ತಕ ಲೇಖಕರು: ಡಾ.ಎನ್.ಗಾಯತ್ರಿ ಪುಟ: 118+4 ಬೆಲೆ:ರೂ.80/-


ಶೀರ್ಷಿಕೆ: ದಶಕದ ಮಹಿಳಾ ಸಾಹಿತ್ಯದಲ್ಲಿ ಪ್ರತಿರೋಧದ ನೆಲೆಗಳು ಪ್ರಕಾಶಕರು:ಚಿಂತನ ಪುಸ್ತಕ ಸಂಪಾದಕರು:ಡಾ.ಸಬಿಹಾ ಭೂಮಿಗೌಡ ಪುಟ:96+4 ಬೆಲೆ:ರೂ.70

ಅಂತರ ರಾಷ್ಟ್ರೀಯ ಮಹಿಳಾ ದಿನ ಶತಮಾನೋತ್ಸವ ಮಾಲಿಕೆಯ ಬಿಡುಗಡೆಗೆ ಬನ್ನಿ

ಅಂತರ್ರಾಷ್ಟ್ರೀಯ ಮಹಿಳಾ ದಿನದ ಶತಮಾನೋತ್ಸವದ ಶುಭಾಶಯಗಳೊಂದಿಗೆ ಅಡ್ಡಗೋಡೆಗಳನ್ನೊಡೆದು ಮುನ್ನಡೆದ 12 ಮಹಿಳೆಯರ ಕಥೆಗಳು

ತಮ್ಮ ಬದುಕಿನುದ್ದಕ್ಕೂ ಒಂದು ಶೋಷಣಾತ್ಮಕ ಯಥಾಸ್ಥಿತಿಗೆ ಸವಾಲೆಸೆದು, ಭಾರತದಲ್ಲಿ ಒಂದು ಮಹಿಳಾ ವಿಮೋಚನೆಯ ಆಂದೋಲನವನ್ನು ಕಟ್ಟಲು ಶ್ರಮಿಸಿದ ಹನ್ನೆರಡು ಮಹಿಳೆಯರನ್ನು ಕುರಿತ ಪುಸ್ತಕವಿದು. ಇವು ಅಸಾಮಾನ್ಯ ಬದುಕುಗಳ ಅಸಾಮಾನ್ಯ ಕಥೆಗಳು
– ಪುಸ್ತಕದ ಬೆನ್ನುಡಿಯಿಂದ

 

 

 

 

ಇದು, ಬೃಂದಾ ಕಾರಟ್ ಅವರು ಮುನ್ನುಡಿಯಲ್ಲಿ ಹೇಳಿರುವಂತೆ, ಹನ್ನೆರಡು ಅಸಾಮಾನ್ಯ ಮಹಿಳೆಯರ ಅಸಾಮಾನ್ಯ ಕಥೆಗಳ ಒಂದು ಸಂಗ್ರಹ. ಇವರೆಲ್ಲಾ ಭಾರತದ ವಿಭಿನ್ನ ಪ್ರದೇಶಗಳಿಂದ, ವಿಭಿನ್ನ ಹಿನ್ನೆಲೆಗಳಿಂದ ಬಂದವರು. ಆದರೆ ಅವರೆಲ್ಲರಲ್ಲಿದ್ದ ಒಂದು ಸಮಾನ ಸಂಗತಿಯೆಂದರೆ ಭಾರತ ಇನ್ನೂ ಬ್ರಿಟಿಷರ ದಾಸ್ಯದಲ್ಲಿದ್ದಾಗ ಅದರ ವಿರುದ್ಧ ಹೋರಾಟಗಳಲ್ಲಿ ರಾಜಕೀಯ ಪ್ರವೇಶಿಸಿದವರು. ಕಟ್ಟುಪಾಡುಗಳನ್ನು ಮುರಿದು, ಕೆಲವೊಮ್ಮೆ ತಮ್ಮ ಕುಟುಂಬಗಳ ವಿರೋಧವನ್ನೂ ಎದುರಿಸಿ ಸಾರ್ವಜನಿಕ ಜೀವನವನ್ನು ಪ್ರವೇಶಿಸಿದವರು. ಕಾರ್ಮಿಕ ಆಂದೋಲನದ ಮುಖಂಡರಾಗಿ, ರೈತ ಆಂದೋಲನದ ಮುಖಂಡರಾಗಿ ಹೆಚ್ಚೆಚ್ಚು ಮಹಿಳೆಯರನ್ನು ಕಾರ್ಯಾಚರಣೆಗೆ ಇಳಿಸಲು ಶ್ರಮಿಸಿದವರು. ಮುಂದೆ ಸ್ವತಂತ್ರ ಭಾರತದಲ್ಲೂ ತಮ್ಮ ಚಟುವಟಿಕೆಗಳನ್ನು ಮುಂದುವರೆಸಿ ಮಹಿಳಾ ಆಂದೋಲನವನ್ನು ಕಟ್ಟಿ ಬೆಳೆಸುವುದರೊಂದಿಗೆ ಮಹಿಳೆಯರ ಪ್ರಶ್ನೆಗಳನ್ನು, ಲಿಂಗ ಅಸಮಾನತೆಯ ಪ್ರಶ್ನೆಯನ್ನು ಒಟ್ಟು ರಾಜಕೀಯ ಮತ್ತು ಆರ್ಥಿಕ ಪ್ರಶ್ನೆಯೊಂದಿಗೆ ಬೆಸೆಯಲು ಪರಿಣಾಮಕಾರಿ ಪಾತ್ರ ವಹಿಸಿದವರು.

ಮೂಲತಃ ಇಂಗ್ಲೀಷ್ ಭಾಷೆಯಲ್ಲಿ ಪಾರ್ವತಿ ಮೆನನ್ ಅವರು ರಚಿಸಿದ ಈ ಕೃತಿಯನ್ನು ನವದೆಹಲಿಯ `ಲೆಫ್ಟ್ ವರ್ಡ್’ ಪ್ರಕಟಿಸಿದೆ. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಬೆಳ್ಳಿಹಬ್ಬದ ಆಚರಣೆಯ ಸಂದರ್ಭದಲ್ಲಿ ಕನ್ನಡದಲ್ಲಿ ಇದನ್ನು ‘ಅಧ್ಯಯನ ಪ್ರಕಾಶನ’ ಪ್ರಕಟಿಸಿತ್ತು. ಈಗ ಅಂತರ್ರಾಷ್ಟ್ರೀಯ ಮಹಿಳಾ ದಿನದ ಶತಮಾನೋತ್ಸವದ ಸಂದರ್ಭದಲ್ಲಿ ಎರಡನೇ ಮುದ್ರಣವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಇದಕ್ಕೆ ಅನುಮತಿ ನೀಡಿದ ‘ಅಧ್ಯಯನ ಪ್ರಕಾಶನ’ಕ್ಕೆ, ಮೂಲ ಲೇಖಕರಾದ ಪಾರ್ವತಿ ಮೆನನ್ ಹಾಗೂ ‘ಲೆಫ್ಟ್ ವರ್ಡ್’ ಪ್ರಕಾಶನಕ್ಕೆ ಮತ್ತು ಅನುವಾದಿಸಿ ಕೊಟ್ಟ ಡಾ.ಎನ್. ಗಾಯತ್ರಿ ಯವರಿಗೆ  ನಾವು ಕೃತಜ್ಞರು.

-ಪ್ರಕಾಶಕರ ಮಾತು

ಮಹಿಳಾ ಸಾಕ್ಷರತೆಯ ದಿನವಾದ ಇಂದು ಮರೆಯಬಾರದ ವಿಮೋಚಕಿಯನ್ನು ನೆನೆಯೋಣ

ಇಂದಿನ ವಿಶ್ವ ಸಾಕ್ಷರತಾ ದಿನವನ್ನು ಯುನೆಸ್ಕೋ ಮಹಿಳಾ ಸಾಕ್ಷರತೆಯ ದಿನವಾಗಿ ಆಚರಿಸುತ್ತಿದೆ. ಮಹಿಳಾ ಸಾಕ್ಷರತೆಯ ಬಗ್ಗೆ ಮಾತನಾಡಿದಾಗ ಭಾರತೀಯ ಮಹಿಳೆಯರು ಮೊದಲು ನೆನಸಬೇಕಾದ ವ್ಯಕ್ತಿ ಸಾವಿತ್ರೀಬಾಯಿ ಫುಲೆ. ದೇಶದ ಮೊಟ್ಟ ಮೊದಲ ಮಹಿಳಾ ಗುರುವೆಂಬ ಖ್ಯಾತಿಗೆ ಪಾತ್ರರಾದ ಸಾವಿತ್ರೀಬಾಯಿ ಫುಲೆ ಅವರು ತನ್ನ ಕಾರ್ಯದಲ್ಲಿ ಸಾಕಷ್ಟು ವಿಘ್ನಗಳನ್ನು ಎದುರಿಸಿದ್ದರು. ಅವರೇ ಸ್ಥಾಪಿಸಿದ ಹೆಣ್ಣುಮಕ್ಕಳ ಶಾಲೆಗೆ ಓದಿಸಲು ಹೋಗುವಾಗ ಮೇಲು ಜಾತಿಯ ಗಂಡಸರು ಅವರ ಮೇಲೆ ಕೆಸರು, ಮಣ್ಣು, ಧೂಳುಗಳನ್ನು ಎಸೆಯುತ್ತಿದ್ದರಂತೆ. ಅಂತಹ ಸಂದರ್ಭದಲ್ಲೂ ದೃತಿಗೆಡದೆ ಮಹಿಳಾ ಸಾಕ್ಷರತೆಗಾಗಿ ದುಡಿದ ಮಹಾನ್ ಮಹಿಳೆ ಅವರು.

ಏಳಿ, ಎದ್ದೇಳಿ, ಶಿಕ್ಷಣ ಪಡೆಯಿರಿ,
ಸಂಪ್ರದಾಯಗಳನ್ನು ಸದೆಬಡಿಯಿರಿ,
ಮುಕ್ತಿ ಹೊಂದಿರಿ!
-ಸಾವಿತ್ರೀಬಾಯಿ ಫುಲೆ
ವಿಶ್ವ ಮಹಿಳಾ ಸಾಕ್ಷರತೆಯ ದಿನವಾದ ಇಂದು ಸಾವಿತ್ರೀ ಬಾಯಿ ಫುಲೆ ಅವರನ್ನು ನೆನಸಿಕೊಳ್ಳೋಣ.

ಈ ಪ್ರಬಂಧಗಳ ಸಂಗ್ರಹಣೆಯು ಸಾವಿತ್ರೀಬಾಯಿ ಫುಲೆಯವರ ಜೀವನ ಮತ್ತು ಹೋರಾಟವನ್ನು ಜೀವಂತವಾಗಿ ಇರಿಸುವ ಒಂದು ಪ್ರಯತ್ನವಾಗಿದೆ. ಪ್ರಾಯಶಃ ಹತ್ತೊಂಬತ್ತನೇ ಶತಮಾನ ಕಂಡ ಶ್ರೇಷ್ಟ ಭಾರತೀಯ ಮಹಿಳೆ ಸಾವಿತ್ರಿ. ಸಾವಿತ್ರಿಬಾಯಿ ಫುಲೆ (1821-1897) ಆ ಕಾಲದ ಅಮನಾನವೀಯ, ಪಿತೃಪ್ರಧಾನ ಮತ್ತು ದಬ್ಬಾಳಿಕೆಯ ಸಂಪ್ರದಾಯಿಕ ಶಕ್ತಿಗಳ ವಿರುದ್ಧ ಹೋರಾಟವನ್ನು ಆಯೋಜಿಸಿದರು. ಅಲ್ಲಿಂದ ಆಕೆ ಆಧುನಿಕ ಭಾರತದ ಮೊದಲ ಮಹಿಳಾ ಗುರುವಾಗಿ ಹಾಗೂ ದಲಿತರ, ಕೆಳಜಾತಿಗಳ, ಕಾರ್ಮಿಕರ, ಕೃಷಿಕರ ನಾಯಕಿಯಾಗಿ ಹೊರಹೊಮ್ಮಿದರು. ಕ್ರಾಂತಿಕಾರಿಯಾದ ತನ್ನ ಗಂಡ ಮಹಾತ್ಮಾ ಜ್ಯೋತಿ ಬಾ ಫುಲೆಯವರ ಜತೆಯಲ್ಲಿ ಹೋರಾಟ ಮತ್ತು ದುಃಖ ಅನುಭವಿಸಿದರು. ಆದರೆ ಆಕೆಯೂ ತನ್ನದೇ ಪ್ರತ್ಯೇಕ, ಕರುಣಾಮಯಿ ಮತ್ತು ಕ್ರಿಯಾಶೀಲ ವ್ಯಕ್ತಿತ್ವವನ್ನು ರೂಢಿಸಿಕೊಂಡಿದ್ದರು.

ಮೇಲ್ವರ್ಗದವರ ಶತಮಾನಗಳ ದಬ್ಬಾಳಿಕೆಯ ನಂತರ ತಳಮಟ್ಟದಲ್ಲಿ ನ್ಯಾಯಯುತ ಮತ್ತು ಮಾನವೀಯ ಸಮಾಜಕ್ಕಾಗಿ ಸಾವಿತ್ರಿಬಾಯಿ ಫುಲೆಯವರು ಮಾಡಿದ ಕಿಚ್ಚಿನ ಹೋರಾಟ, ಬದಲಾವಣೆಗಾಗಿ ಜನರ ಯೋಚನೆಗೆ ಕಿಚ್ಚು ಹೊತ್ತಿಸುತ್ತದೆ. ಕ್ರಾಂತಿಜ್ಯೋತಿಯೆಂಬ ಹೆಗ್ಗಳಿಕೆಗೆ ಪಾತ್ರರಾದ ಸಾವಿತ್ರೀಬಾಯಿ, ಆಧುನಿಕ ಮಹಾರಾಷ್ಟ್ರದ ಪ್ರೀತಿಮಯಿ ವಾತ್ಸಲ್ಯ ಮೂರ್ತಿಯಾಗಿದ್ದಾರೆ, ಮತ್ತು ಮಹಿಳೆಯರ, ದಲಿತರ ಮತ್ತು ಇತರೇ ಹಿಂದುಳಿದ ವರ್ಗಗಳ ಹೋರಾಟಗಳಲ್ಲಿ ಸ್ಪೂರ್ತಿಯ ಸೆಲೆಯಾಗಿದ್ದಾರೆ.

ಈ ಪುಸ್ತಕದಲ್ಲಿ ಕ್ರಾಂತಿಕಾರಿ ಬರಹಗಾರರ ಸಮೂಹವು ಈ ಅತ್ಯದ್ಭುತ ಮಹಿಳೆಯ ಜೀವನ ಮತ್ತು ಹೋರಾಟದ ವಿವಿಧ ಮಜಲುಗಳನ್ನು ವಿಶ್ಲೇಷಿಸಿ ಕಣ್ಣಿಗೆ ಕಟ್ಟುವಂತೆ ಅರ್ಪಿಸಿದ್ದಾರೆ.

ಶೀರ್ಷಿಕೆ:        ಮರೆತ ವಿಮೋಚಕಿ-ಸಾವಿತ್ರಿಬಾಯಿ ಫುಲೆಯ ಜೀವನ ಮತ್ತು ಹೋರಾಟ
ಸಂಪಾದಕರು:ಬ್ರಜ್ ರಂಜನ್ ಮಣಿ,ಪ್ಯಾಮೆಲ ಸರ್ದಾರ್ ಕನ್ನಡಕ್ಕೆ:ಅಲೆಮಾರಿ
ಪ್ರಕಾಶಕರು:   ಟ್ರೈನಿಂಗ್, ಎಡಿಟೋರಿಯಲ್ ಅಂಡ್ ಡೆವಲಪ್ ಮೆಂಟ್ ಸರ್ವಿಸಸ್
ಪುಟ : 80       ಬೆಲೆ: ರೂ.60/-

ಸಕಾಲಿಕ ಹಾಗೂ ಮಹಿಳಾ ಹೋರಾಟದ ಮಾರ್ಗದರ್ಶಿ

ಬೆಂಗಳೂರಿನ ಜಾಗೃತಿ ಮಹಿಳಾ ಅಧ್ಯಯನ ಕೇಂದ್ರವು ತನ್ನ ಇನ್ನಿತರ ಚಟುವಟಿಕೆಗಳ ಜೊತೆಗೆ `ಅಚಲ ಮಾಸ ಪತ್ರಿಕೆಯನ್ನೂ ಹೊರತರುತ್ತಿತ್ತು. 1985 ರ ಮಾರ್ಚ್ ತಿಂಗಳಲ್ಲಿ ಮೊದಲ ಸಂಚಿಕೆ ಹೊರಬಂದಿದ್ದು ನಿರಂತರ 22 ವರ್ಷಗಳ ಕಾಲ ನಿಯತಕಾಲಿಕೆಯಾಗಿ ಬರುತ್ತಿದ್ದ ಮಾಸ ಪತ್ರಿಕೆ ಇದು.

ಭಾರತದ ಮಹಿಳಾ ಚಳುವಳಿಯ ನಿರ್ದಿಷ್ಟ ಕಾಲಘಟ್ಟದಲ್ಲಿ ಹುಟ್ಟಿದ ಜಾಗೃತಿ ಮಹಿಳಾ ಅಧ್ಯಯನ ಮತ್ತು ಅದು ಪ್ರಕಟಿಸುತ್ತಾ ಬಂದ `ಅಚಲತನ್ನ ಸಮಕಾಲೀನ ಮಹಿಳಾ ಚಳುವಳಿಯ ಸ್ವರೂಪ ಮತ್ತು ಅದರ ಹಲವಾರು ಆಯಾಮಗಳನ್ನು ಅತ್ಯಂತ ಸೂಕ್ಷ್ಮವಾಗಿ ದಾಖಲಿಸುತ್ತಾ ಬಂದಿರುವುದು ಸಹಜವಾಗಿಯೇ ಇದೆ. ಹಾಗಾಗಿ ಈ ಪತ್ರಿಕೆಯ ಸಂಪಾದಕೀಯಗಳನ್ನು ಕಾಲಾನುಕ್ರಮಣಿಯಲ್ಲಿ ಜೋಡಿಸಿ ಓದಿದರೆ, ಮಹಿಳಾ ಚಳುವಳಿಯ ಚರಿತ್ರೆ ಪ್ರಕಾಶಗೊಳ್ಳಬಹುದೆಂಬ ಆಶಯವೇ ಈ ಪುಸ್ತಕ ಹೊರಬರಲು ಕಾರಣವಾಗಿದೆ.

ಅಂತರ ರಾಷ್ಟ್ರೀಯ ಮಹಿಳಾ ಶತಮಾನೋತ್ಸವದ ಸುಸಂದರ್ಭದಲ್ಲಿ ಪ್ರಕಟವಾಗುತ್ತಿರುವ ಈ ಪುಸ್ತಕಕ್ಕೆ ತನ್ನದೇ ಆದ ಮಹತ್ವವಿದೆ. ಅದು ಈ ಪುಸ್ತಕವನ್ನು ಓದಿದಾಗ ತಿಳಿಯುವುದು. ನೂರಾರು ಲೇಖನಗಳ ಈ ಪುಸ್ತಕ ಮಹಿಳಾ ಪ್ರಶ್ನೆಯ ನೂರಾರು ಮುಖಗಳನ್ನು ತೋರಿಸುತ್ತದೆ ಎನ್ನಬಹುದು.

 

 ಶೀರ್ಷಿಕೆ: ಸಂಚಲ ಲೇಖಕರು: ಡಾ. ಎನ್. ಗಾಯತ್ರಿ ಪ್ರಕಾಶಕರು : ಮಾಲೆ ಪ್ರಕಾಶನ ಪುಟ:238 ಬೆಲೆ:ರೂ.120/-

ಸ್ತ್ರೀಮತವನುತ್ತರಿಸಲಾಗದೇ ಧರ್ಮಶಾಸ್ತ್ರದೊಳ್

ನಾನು ಓದಿ ಮೆಚ್ಚಿದ ಕೃತಿಗಳನ್ನು, ಈ ದಿನಗಳಲ್ಲಿ, ಮತ್ತೆ ಓದುವಂತೆ ಮಾಡುತ್ತಿರುವ ಕನ್ನಡದ ಮುಖ್ಯ ವಿಮರ್ಶಕರಲ್ಲಿ ಡಾ. ಆಶಾದೇವಿ ಒಬ್ಬರು. ಒಬ್ಬರು ಮಾತ್ರವಲ್ಲ ಅನನ್ಯರು. ಸಾಹಿತ್ಯದ ವಿಷಯದಲ್ಲಿ ಇವರದು ಸ್ತ್ರೀ ದೃಷ್ಟಿಕೋನ ಎಂದು ಮೆಚ್ಚಿ ಮರೆಯುವಂತಿಲ್ಲ. ಯಾಕೆಂದರೆ ನನ್ನದೂ ಆಗಬೇಕಿದ್ದ ಒಳನೋಟಗಳನ್ನು ಆಶಾದೇವಿ ನನಗೆ ಒದಗಿಸಿದ್ದಾರೆ. ವೈದೇಹಿ ಕೃತಿಗಳ ಬಗ್ಗೆ, ಕುಮಾರವ್ಯಾಸನ ಬಗ್ಗೆ,

ಬಸವಣ್ಣನ ಬಗ್ಗೆ ಹೀಗೇ ಹಲವು ಈಚಿನ-ಹಿಂದಿನ ಲೇಖಕರ ಬಗ್ಗೆ ನಮ್ಮನ್ನು ಕೆಣಕುವಂತೆ, ಒಪ್ಪುವಂತೆ, ಅನುಮಾನಿಸುವಂತೆ ವಿಮರ್ಶೆಯ ವಿನಯದಲ್ಲಿ ಆಶಾದೇವಿ ಬರೆಯುತ್ತಾರೆ.

ಎಲ್ಲಾ ಕೃತಿಗಳಲ್ಲೂ ಇರುವ ವಾಚ್ಯಾರ್ಥಗಳು ನಿವೃತ್ತವಾಗಿ ನಮಗವು ಧ್ವನಿಸುತ್ತವೆ ಎಂದು ಸುಲಭವಾಗಿ ನಾವು ತಿಳಿದಿರುತ್ತೇವೆ. ಆಶಾದೇವಿಯವರು ಕೃತಿಯ ಈ ವಾಚ್ಯದ ಮುಖವನ್ನು ನೋಡುತ್ತಾರೆ; ಆದರೆ ಈ ವಾಚ್ಯ ಮಾತ್ರ ಮುಖ್ಯವೆನ್ನುವಂತೆ ನೋಡುವುದಿಲ್ಲ. ಕೃತಿಯಿಂದ ಹುಟ್ಟಿದ ರಸಾನುಭವವನ್ನೂ ನಮ್ಮೊಂದಿಗೆ ಹಂಚಿಕೊಳ್ಳುತ್ತ – ಸಂಭ್ರಮಿಸದಂತೆ ಅನುಮಾನಿಸುತ್ತ ಪ್ರಶ್ನಿಸುತ್ತ – ನೋಡುತ್ತಾರೆ. ಇದು ಕಷ್ಟದ ಸಾಹಸದ ಓದು; ಕೃತಿ ಪೂರ್ಣವಾಗಿ ನಮಗೆ ಒದಗುವಂತೆ ಮಾಡುವ ಓದು ಇದು. ಪ್ರಾಮಾಣಿಕತೆ, ಧೀಮಂತಿಕೆಗಳ ಜೊತೆ ಕೃತಿಗೆ ಎದುರಾಗುವ ಧೈರ್ಯವೂ ಈ ಬಗೆಯ ವಿಮರ್ಶೆಗೆ ಅಗತ್ಯ.

ಈ ದಿನಗಳಲ್ಲಿ ಕನ್ನಡ ಸಾಹಿತ್ಯ ಜೀವಂತವಾಗಿದೆ ಎನ್ನಿಸುವಂತೆ ಮಾಡಿರುವ ಆಶಾದೇವಿಗೆ ನಾವು ಕೃತಜ್ಞರು. ವಿಲಕ್ಷಣ ಪ್ರತಿಭೆಯ ನನ್ನ ಗೆಳೆಯ ಡಿ. ಆರ‍್. ನಾಗರಾಜ್ ರ ಹಾದಿಯಲ್ಲಿ ಕನ್ನಡ ಸಾಹಿತ್ಯದ ಅನುಭವವನ್ನು ಆಶಾದೇವಿ ವಿಸ್ತರಿಸುತ್ತಿದ್ದಾರೆ. ಆ ಕ್ರಮವನ್ನು ನಾವು ನಮ್ಮ ಆತ್ಮೀಯ ಓದಿನಲ್ಲಿ ಎದುರಾಗುವಂತೆ ಮಾಡುವ ಬರವಣಿಗೆ ಇಲ್ಲಿದೆ.

– ಯು. ಆರ‍್. ಅನಂತಮೂರ್ತಿ

-ಪುಸ್ತಕದ ಬೆನ್ನುಡಿಯಿಂದ

ಶೀರ್ಷಿಕೆ: ಸ್ತ್ರೀಮತವನುತ್ತರಿಸಲಾಗದೆ? ಲೇಖಕರು: ಎಂ.ಎಸ್. ಆಶಾದೇವಿ ಪ್ರಕಾಶಕರು: ಅಕ್ಷರ ಪ್ರಕಾಶನ ಪುಟ:144 ಬೆಲೆ: ರೂ.90/-

ಸ್ತ್ರೀವಾದಿ ಚಿಂತನೆಗೆ ಲಡಾಯಿಯ ಕೊಡುಗೆ

ಶೀರ್ಷಿಕೆ: ನಮಗೆ ಗೋಡೆಗಳಿಲ್ಲ ಲೇಖಕರು:ಮೂಲ ತೆಲುಗು `ಫೆಮಿನಿಸ್ಟ್ ಸ್ಟಡಿ ಸರ್ಕಲ್’ ಕನ್ನಡಕ್ಕೆ ಅನುವಾದ:ಬಿ ಸುಜ್ಞಾನ ಮೂರ್ತಿ ಪ್ರಕಾಶನ : ಲಡಾಯಿ ಪ್ರಕಾಶನ ಪುಟ: ಬೆಲೆ: ರೂ.

ಮಹಿಳಾ ದಿನಾಚರಣೆಯ ಶತಮಾನೋತ್ಸವದ ಶುಭಾಶಯಗಳು

ಶೀರ್ಷಿಕೆ : ಮಹಿಳಾ ಚಳುವಳಿಯ ಮಜಲುಗಳು ಲೇಖಕರು: ಎನ್. ಗಾಯತ್ರಿ ಪ್ರಕಾಶಕರು: ನವಕರ್ನಾಟಕ ಪ್ರಕಾಶನ ಪುಟ: ಬೆಲೆ:ರೂ.35/-