
`ವರದಕ್ಷಿಣೆ ಎಂಬುದು ಹುಟ್ಟದಿರುವ ಹೆಣ್ಣುಮಗುವಿಗೂ ಕಡುವೈರಿ‘. ಅತಿ ಹೆಚ್ಚು ಹೆಣ್ಣು ಭ್ರೂಣಹತ್ಯೆ ನಡೆಯುವ ಜಿಲ್ಲೆಗಳಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನದಲ್ಲಿರುವ ಮಂಡ್ಯ ಜಿಲ್ಲೆ ಕ್ಷೇತ್ರಕಾರ್ಯ ಸಂದರ್ಭದಲ್ಲಿ ಕಂಡುಕೊಂಡ ಅಂಶವಿದು ಎಂದು ಪುಸ್ತಕದ ಮುನ್ನುಡಿಯಲ್ಲಿ ವಿಮೋಚನಾ ಮಹಿಳಾ ಹಕ್ಕುಗಳ ವೇದಿಕೆಯ ಡೋನಾ ಫರ್ನಾಂಡೀಸ್ ಹೇಳುತ್ತಾರೆ.
ಮಂಡ್ಯ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹೆಣ್ಣು ಭ್ರೂಣ ಹತ್ಯೆಗಳಿಗೆ ಕಾರಣಗಳೇನು ಎಂಬುದನ್ನು ಕ್ಷೇತ್ರಕಾರ್ಯ ಆಧರಿಸಿದ ಅಧ್ಯಯನದಲ್ಲಿ ಕಂಡುಕೊಂಡ ಅಂಶಗಳನ್ನು ಈ ಕೃತಿ ವಿವರವಾಗಿ ದಾಖಲಿಸಿದೆ. `ಮಂಡ್ಯದ ಏಳು ತಾಲ್ಲೂಕುಗಳ ನೂರಾರು ಹಳ್ಳಿಗಳಲ್ಲಿ ಎಲ್ಲ ವಯೋಮಾನದ ಜನರೂ ಹೆಣ್ಣು ಭ್ರೂಣ ಹತ್ಯೆಗೆ ಕೊಡುವ ದೊಡ್ಡ ಕಾರಣವೆಂದರೆ ವರದಕ್ಷಿಣೆ. ತಮ್ಮ ಹೆಣ್ಣುಮಗಳ ಮದುವೆಗಾಗಿ ಸಾಲ ಮಾಡಿ ನರಳುವ, ಅದಕ್ಕಾಗಿ ಇದ್ದ ಹೊಲ ಗದ್ದೆ ಕಳೆದುಕೊಂಡು ನರಳುವ ಜನರು ಮಂಡ್ಯದ ಗ್ರಾಮೀಣ ಭಾಗದಲ್ಲಿ ಸರ್ವೇ ಸಾಮಾನ್ಯ‘ (ಪುಟ 90) ಎಂದು ಇಲ್ಲಿ ವಿಶ್ಲೇಷಿಸಲಾಗಿದೆ.
ಆಧುನಿಕ ಅಭಿವೃದ್ಧಿಯ ನೀತಿಗಳು ಆಳದಲ್ಲಿ ಜನಮಾನಸವನ್ನು ಕಂಗೆಡಿಸುವಂತಹದಾಗಿರುತ್ತದೆ. ಕೃಷ್ಣರಾಜಸಾಗರದ ನೀರಾವರಿಗೆ ಬೃಹತ್ ವಿಸ್ತರಣೆ ಸಿಕ್ಕಂತೆಲ್ಲಾ ಸಾಮಾಜಿಕ ಬದುಕಿನಲ್ಲಿ ತಮಗಿದ್ದ ಪಾತ್ರ ಮತ್ತು ಮನ್ನಣೆ ಎರಡನ್ನೂ ಮಂಡ್ಯದ ಮಹಿಳಾ ಸಂಕುಲ ಕಳೆದುಕೊಳ್ಳುತ್ತಾ ಬಂದಿದೆ ಎಂಬುದನ್ನು ಈ ಕೃತಿ ಗುರುತಿಸುತ್ತದೆ. ಇದೇ ರೀತಿ ಸರಿಸುಮಾರು ಸಂಪೂರ್ಣವಾಗಿ ನೀರಾವರಿಗೆ ಒಳಗಾಗಿರುವ ಸಕ್ಕರೆಯ ಕಣಜ ಬೆಳಗಾವಿ ಜಿಲ್ಲೆ ಅತಿ ಹೆಚ್ಚು ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವ ಜಿಲ್ಲೆಯಾಗಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ. ಆಸಕ್ತಿಯ ಸಂಗತಿ ಎಂದರೆ, 0-6 ವಯೋಮಾನದ ಗಂಡು-ಹೆಣ್ಣು ಮಕ್ಕಳ ಅನುಪಾತ ಹೆಚ್ಚಿರುವ ಜಿಲ್ಲೆಗಳಲ್ಲಿ ಕೊಡಗು ಮೊದಲ ಸ್ಥಾನ ಪಡೆದರೆ ಕೋಲಾರ ಎರಡನೆಯ ಸ್ಥಾನ ಪಡೆದಿದೆ. `ವೈದಿಕ ಧರ್ಮಕ್ಕೆ ಹೊರತಾದ ಕೊಡವ ಸಂಸ್ಕೃತಿಯನ್ನು ಹೊಂದಿರುವ ಕೊಡಗು ಹಾಗೂ ವೈದಿಕ ಧರ್ಮಕ್ಕೆ ಪಾರಂಪರಿಕವಾಗಿ ಸೆಡ್ಡು ಹೊಡೆದಿರುವ ಪರಿಶಿಷ್ಟ ಜಾತಿಗಳು ಹೆಚ್ಚಾಗಿರುವ ಕೋಲಾರದಲ್ಲಿ ಹೆಂಗಸರ ಸಂಖ್ಯೆ ಹೆಚ್ಚಾಗಿ ಇರುವುದು ಸಾಮಾಜಿಕವಾಗಿ ಅತಿ ಮಹತ್ವದ ವಿಚಾರವಾಗಿದೆ‘ (ಪುಟ 33). ಇದೇ ರೀತಿ ಹುಣಸೂರು ತಾಲ್ಲೂಕಿನಲ್ಲಿ 1000 ಗಂಡು ಮಕ್ಕಳಿಗೆ 1009 ಹೆಣ್ಣು ಮಕ್ಕಳಿರುವ ಸಕಾರಾತ್ಮಕ ಪ್ರವೃತ್ತಿಗೆ, ಈ ಪ್ರದೇಶದಲ್ಲಿ ಬಹುಸಂಖ್ಯೆಯಲ್ಲಿರುವ ಆದಿವಾಸಿ ಜನಸಮುದಾಯದ ಕೊಡುಗೆ ಕಾರಣ ಎಂಬಂತಹ ಹೆಚ್ಚಿನ ಸಾಮಾಜಿಕ ಅಧ್ಯಯನಗಳಿಗೆ ಪ್ರೇರಕವಾಗಬಹುದಾದ ಅಂಶಗಳನ್ನೂ, ಈ ಕೃತಿಯಲ್ಲಿ ಚರ್ಚಿಸಲಾಗಿದೆ.
ಇಲ್ಲಿ ದಾಖಲಾಗಿರುವ ಮಂಡ್ಯ ಜಿಲ್ಲೆಯ ಏಳೂ ತಾಲ್ಲೂಕುಗಳಲ್ಲಿ ನಡೆದಿರುವ ಹೆಣ್ಣು ಭ್ರೂಣಹತ್ಯೆಗಳ ವೈವಿಧ್ಯಮಯ ಪ್ರಕರಣಗಳು ಮತ್ತು ಪುತ್ರವ್ಯಾಮೋಹದ ನೈಜ ಕಥೆಗಳು ಬೆಚ್ಚಿ ಬೀಳಿಸುವಂತಿವೆ. ಹೆಣ್ಣು ಭ್ರೂಣಹತ್ಯೆ ಪಿಡುಗಾಗಿ ಬೆಳೆಯುತ್ತಿರುವುದಕ್ಕೆ ತಂತ್ರಜ್ಞಾನದ ಕೊಡುಗೆಗಳು, ನರ್ಸಿಂಗ್ ಹೋಮ್ ಗಳ ಪಾತ್ರ, ಕಾನೂನಿನ ಮಿತಿ ಹಾಗೂ ಈ ಪಿಡುಗಿನ ವಿರುದ್ಧ ನಡೆಯುತ್ತಿರುವ ಹೋರಾಟಗಳ ಚಿತ್ರಣವನ್ನೂ ಈ ಕೃತಿ ಕಟ್ಟಿ ಕೊಟ್ಟಿದೆ.
ಕಳೆದ ಎರಡೂವರೆ ದಶಕಗಳಲ್ಲಿ ಆಧುನಿಕ ಭಾರತದ ಪಿಡುಗಾಗಿ ಹೆಣ್ಣು ಭ್ರೂಣ ಹತ್ಯೆ ಬೆಳೆದ ಬಗೆಯ ಅವಲೋಕನ ಇಲ್ಲಿದೆ. ಜಾಗತಿಕ ನೋಟದಿಂದ ಹಿಡಿದು ಭಾರತದಲ್ಲಿ ಇದು ಆವರಿಸಿದ ರೀತಿಯ ಹಿನ್ನೋಟವೂ ಇದೆ. `ಇಂದಿಗೂ ಈ ಪಿಡುಗಿನ ವಿರುದ್ಧ ಇರುವ ಪಿಸಿ ಹಾಗೂ ಪಿಎನ್ಡಿಟಿ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ. ದೇಶದ ಉದ್ದಕ್ಕೆ ಹೆಣ್ಣು ಭ್ರೂಣಹತ್ಯೆಯ ಪ್ರಕರಣಗಳನ್ನು ಕಾನೂನಿನ ಅಡಿಯಲ್ಲಿ ದಾಖಲಿಸಿಕೊಂಡು ಸರಿಯಾದ ಕ್ರಮದಲ್ಲಿ ವಿಚಾರಣೆ ನಡೆಸಿದ ಒಬ್ಬ ಜಿಲ್ಲಾ ಆರೋಗ್ಯ ಅಧಿಕಾರಿಯೂ ನಮಗೆ ನೋಡಲು ಸಿಗುವುದಿಲ್ಲ. ಈ ಕಾಯ್ದೆಯ ಅಡಿಯಲ್ಲೆ ಹೆಣ್ಣು ಭ್ರೂಣ ಹತ್ಯೆಗಳು ಅಬಾಧಿತವಾಗಿ ನಡೆಯುತ್ತಲೇ ಇವೆ. (ಪುಟ 101) ಎಂದು ಹೇಳುವ ಈ ಪುಸ್ತಕ ಹೆಣ್ಣು ಮಗುವಿನ ಉಳಿವಿನ ಬಗ್ಗೆ ಚಿಂತನೆಗೆ ಪ್ರೇರೇಪಿಸುತ್ತದೆ.
ಶೀರ್ಷಿಕೆ: ಒಡಲ ತುಡಿತಕ್ಕೆ ಕೇಡು ಲೇಖಕರು: ಮಂಜುನಾಥ ಅದ್ದೆ ಪ್ರಕಾಶಕರು: ಸ್ತ್ರೀಲೇಖ ಪ್ರಕಟಣೆ ಪುಟಗಳು:126 ಬೆಲೆ:ರೂ.150/-
ಕೃಪೆ : ಪ್ರಜಾವಾಣಿ
Filed under: ಮಾಹಿತಿ ಸಾಹಿತ್ಯ | Tagged: ಒಡಲ ತುಡಿತಕ್ಕೆ ಕೇಡು, ಪ್ರಜಾವಾಣಿ, ಮಂಜುನಾಥ ಅದ್ದೆ, ಸ್ತ್ರೀಲೇಖ ಪ್ರಕಟಣೆ | Leave a comment »