Filed under: ರಾಜಕೀಯ, ವಿಮರ್ಶೆ, ವೈಚಾರಿಕ ಸಾಹಿತ್ಯ, Uncategorized | Tagged: ಅಭಿವೃದ್ಧಿ ಮತ್ತು ರಾಜಕೀಯ, ಚಂದ್ರ ಪೂಜಾರಿ, ತಿಂಗಳ ಮಾತುಕತೆ-1, ನಾಡೋಜ ಬರಗೂರು ರಾಮಚಂದ್ರಪ್ಪ | 2 Comments »
ಅಪವ್ಯಾಖ್ಯಾನಗಳನ್ನು ನಿಜವ್ಯಾಖ್ಯಾನಗಳಿಂದ ಹಿಮ್ಮೆಟ್ಟಿಸಲು ಪುಸ್ತಕಪ್ರೀತಿ ಮಾತುಕತೆ – ಬರಗೂರು
ನಾಚಿಕೆಯಿಂದ ತಲೆತಗ್ಗಿಸುವ ದಿನ
ಡಿಸೆಂಬರ‍್ 6, 1992.
ತಮ್ಮ ಜಾತ್ಯಾತೀತ ಸಂವಿಧಾನದ ಬಗ್ಗೆ ಹೆಮ್ಮೆ ಪಡುವಂತಹ ಭಾರತೀಯರೆಲ್ಲರೂ ನಾಚಿಕೆಯಿಂದ ತಲೆತಗ್ಗಿಸುವ ದಿನ. ಈ ದಿನದಂದು ಭಾರತೀಯರ ಹೆಮ್ಮೆಯ ಜಾತ್ಯಾತೀತ, ಪ್ರಜಾಪ್ರಭುತ್ವ ಹಾಗೂ ಸಂವಿಧಾನ ನಿಷ್ಟೆಯ ಮಹಾ ಗೋಪುರಗಳು ನೆಲಕಚ್ಚಿದ ದಿನ.
ರೇಡಿಯೋ ಅಂಗಡಿಯಿಂದ ಆಕಸ್ಮಿತವಾಗಿ ವ್ಯಂಗ್ಯಲೋಕಕ್ಕೆ ಜಿಗಿದ ಪಿ. ಮಹಮ್ಮದ್ ಇಂದು ನಮ್ಮೊಂದಿಗಿನ ಅತ್ಯುತ್ತಮ ವ್ಯಂಗ್ಯಚಿತ್ರಕಾರರಲ್ಲೊಬ್ಬರು. ದಕ್ಷಿಣ ಕನ್ನಡ ಜಿಲ್ಲೆಯ ಪಡುಬಿದ್ರಿಯ ಮಹಮ್ಮದ್ ಇಂದು ಪರಿಚಿತ ಹೆಸರು. `ಸಂಯುಕ್ತ ಕರ್ನಾಟಕ’, `ಮುಂಗಾರು’ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಕಾರರಾಗಿ ದುಡಿದಿರುವ ಮಹಮ್ಮದ್ ಖ್ಯಾತ ಆಂಗ್ಲ ದೈನಿಕ `ಹಿಂದುಸ್ತಾನ್ ಟೈಮ್ಸ್’ನ ಪ್ರತಿಷ್ಟಿತ ವ್ಯಂಗ್ಯಚಿತ್ರ ಪ್ರಶಸ್ತಿಯನ್ನು ಕರ್ನಾಟಕಕ್ಕೆ 3 ಬಾರಿ ತಂದುಕೊಟ್ಟ ಹೆಮ್ಮೆ ಇವರದ್ದು. ಹೆಸರಾಂತ ವ್ಯಂಗ್ಯಚಿತ್ರಕಾರ ಆರ‍್.ಕೆ.ಲಕ್ಷ್ಮಣರ ರೇಖೆಗಳಿಗೆ ಮಾರುಹೋದ ಇವರು ಸದಾ ಸಮಾಜದ ನೋವಿಗೆ ಸ್ಪಂದಿಸಿದರು. ಕೇಂದ್ರ ಸರ್ಕಾರದ ಆರ್ಥಿಕ ನೀತಿಯಿಂದ ಹಿಡಿದು ಅಯೊದ್ಯೆಯವರೆಗೆ ಇವರ ಬತ್ತಳಿಕೆಯಲ್ಲಿ ಹಲವು ವ್ಯಂಗ್ಯಬಾಣಗಳು.
ಕೋಮುವಾದ ತನ್ನ ಕರಾಳ ಹಸ್ತಗಳನ್ನು ಎಲ್ಲೆಡೆ ಚಾಚುತ್ತಿರುವುದನ್ನು ಕಂಡ ಖ್ಯಾತ ವ್ಯಂಗ್ಯಚಿತ್ರಕಾರ ಅಬಿದ್ ಸುರ್ತಿ `ನನ್ನ ಜೋಳಿಗೆಯಲ್ಲಿ ಇನ್ನು ವ್ಯಂಗ್ಯದ ಬಾಣಗಳಿಲ್ಲ’ ಎಂದು ಕಣ್ಣೀರಿಟ್ಟರು. ಅಂತೆಯೇ ಪಿ. ಮಹಮ್ಮದ್ ವ್ಯಂಗ್ಯರೇಖೆಗಳಲ್ಲಿ ಕಂಡ ವಿಷಾದದ ಚಿತ್ರಗಳು ಈ ಪುಸ್ತಕದಲ್ಲಿವೆ.
-ಪುಸ್ತಕದ ಬೆನ್ನುಡಿಯಿಂದ
ಶೀರ್ಷಿಕೆ: ಅಯೊಧ್ಯಾ ಕಣೀರ ಕಾಂಡ ಕಲಾವಿದರು:ಪಿ. ಮಹಮ್ಮದ್ ಪ್ರಕಾಶಕರು:ಜನಸ್ನೇಹ ಪ್ರಕಾಶನ ಪುಟ:28 ಮೊದಲ ಮುದ್ರಣ:1993 ಬೆಲೆ:ರೂ.3/-
Filed under: ಕಲೆ, ರಾಜಕೀಯ, ವಿಮರ್ಶೆ, ವೈಚಾರಿಕ ಸಾಹಿತ್ಯ, ಹಾಸ್ಯ ಸಾಹಿತ್ಯ | 3 Comments »
ಸಾಹಿತ್ಯ ವಿಮರ್ಶೆಯ ಲೋಕದರ್ಶನ
ಕಾವ್ಯ, ಕಥೆ, ನಾಟಕ, ಅಂಕಣ ಬರಹ, ಸಾಮಾಜಿಕ ಅಧ್ಯಯನ, ಮುಂತಾಗಿ ಕನ್ನಡ ಸಾಹಿತ್ಯ ವಲಯದ ಅನೇಕ ಮುಖ್ಯ ಕ್ರಿಯಾಶೀಲ ಬರಹಗಳ ಜೊತೆ ಅಷ್ಟೇ ಕ್ರಿಯಾಶೀಲವಾಗಿ ಒಡನಾಡುತ್ತ ಬಂದ ಅಧ್ಯಯನಶೀಲನ ಟಿಪ್ಪಣಿಗಳಿವು.
ಇದು ಕಳೆದ ನಲವತ್ತು ವರ್ಷಗಳ ಸುದೀರ್ಘ ಅವಧಿಯಲ್ಲಿ ಎಚ್.ಎಸ್.ರಾಘವೇಂದ್ರರಾವ್ ಅವರು ಬರೆದ ಮೂವತ್ತೆಂಟು ಮುನ್ನುಡಿ ಮತ್ತು ಪ್ರಸ್ತಾವನೆಗಳ ಸಂಗ್ರಹ. ಕಾವ್ಯ, ಕಥೆ, ನಾಟಕ, ಅಂಕಣ ಬರಹ, ಸಾಮಾಜಿಕ ಅಧ್ಯಯನ, ಮುಂತಾಗಿ ಕನ್ನಡ ಸಾಹಿತ್ಯ ವಲಯದ ಅನೇಕ ಮುಖ್ಯ ಕ್ರಿಯಾಶೀಲ ಬರಹಗಳ ಜೊತೆ ಅಷ್ಟೇ ಕ್ರಿಯಾಶೀಲವಾಗಿ ಒಡನಾಡುತ್ತ ಬಂದ ಅಧ್ಯಯನಶೀಲನ ಟಿಪ್ಪಣಿಗಳಿವು.
ಅಂದಿನಿಂದ ಇಂದಿನವರೆಗೆ ಉಳಿದುಕೊಂಡು ಬಂದಿರುವ ಕೆಲವು ನಂಬಿಕೆಗಳು, ಲಕ್ಷಣಗಳ ಜೊತೆಯಲ್ಲೇ ಒಟ್ಟು ಪರಿಸರದಲ್ಲಿ ಆಗಿರುವ ಬದಲಾವಣೆಗಳನ್ನೂ ಅವರು ಸಾವಧಾನದಿಂದ ಪರಿಶೀಲಿಸುತ್ತಾರೆ. ಗುರಿಯಿಲ್ಲದ ಹಿಂಸಾಪರತೆ, ಜಾಗತೀಕರಣ, ವ್ಯಾಪಾರೀಕರಣಗಳ ಅವಕಾಶವಾದ, ಹುಸಿ ಮತ್ತು ದಿಟಗಳ ನಡುವಿನ ಅಂತರವನ್ನೇ ಅಳಿಸಿಹಾಕಿರುವ ಕಲುಷಿತ ಅಲೋಚನಾಕ್ರಮ, ಸೂಕ್ಷ್ಮವಾಗಿ ಮೊಳಕೆ ಒಡೆಯುತ್ತಿರುವ ಜಾತೀಯತೆ…
ಇವೆಲ್ಲ ಹುಟ್ಟಿಸುತ್ತಿರುವ ಆತಂಕ, ಕಳವಳ ಈ ಲೇಖಕರ ಬರಹಗಳ ಹಿಂದಿದೆ. ಅವರ ದೃಷ್ಟಿಯಲ್ಲಿ ವಿಮರ್ಶಕನೂ ಸೃಷ್ಟಿಶೀಲ ಸಾಹಿತಿಗಳ ದಾರಿಯಲ್ಲೇ ನಡೆಯುತ್ತಿರುವ ಪಯಣಿಗ. ಅವರು, `ವಿಮರ್ಶೆ ನಮ್ಮ ಸುತ್ತಲಿನ ಬದುಕು ಮತ್ತು ಸಮಾಜಗಳನ್ನು ಕಾಣುವ, ತಿಳಿದುಕೊಳ್ಳುವ, ಅದರ ಒಳಸುಳಿಗಳನ್ನು ಗ್ರಹಿಸುವ ಉಪಕರಣ’ವೆಂದು ತಿಳಿಯುತ್ತಾರೆ.
ಸಾಹಿತ್ಯ ಚರಿತ್ರೆಯ ಕೃತಕ ನಿರ್ಮಾಣಗಳಿಗಿಂತ ಭಿನ್ನವಾಗಿ ವಾಸ್ತವದ ಸಾಂಸ್ಕೃತಿಕ ಲೋಕದ ಸ್ವರೂಪ ಹೇಗಿದ್ದೀತೆಂಬ ಕುತೂಹಲದ ಹುಡುಕಾಟ `ಇಪ್ಪತ್ತನೆಯ ಶತಮಾನದ ಕಾವ್ಯ’ದ ಪ್ರಸ್ತಾವನೆಯಲ್ಲಿದೆ. ಭಾಷೆಯನ್ನು ಅವರು `ನಿತ್ಯಮದುವಣಗಿತ್ತಿ’ ಎಂದು ವರ್ಣಿಸುತ್ತಾರೆ.
ಆಧುನಿಕಗೊಳ್ಳುವಾಗಲೂ ಸಾತತ್ಯವನ್ನು ಕಾಪಾಡಿಕೊಳ್ಳುವ ಯತ್ನದಲ್ಲಿ ಅಥವಾ ಸಾತತ್ಯ ಉಳಿಸಿಕೊಳ್ಳುತ್ತಲೇ ಆಧುನಿಕಗೊಳ್ಳುವ ತಹತಹದಲ್ಲಿ ಗಳಿಸಿದ್ದೆಷ್ಟು, ಕಳೆದದ್ದೆಷ್ಟು? ಅಕ್ಷರಲೋಕದ ಅಂಚಿನ ಸುಪ್ತ ಜಾನಪದದ ಲೋಕದರ್ಶನದಲ್ಲಿ ಒಟ್ಟು ಸಮುದಾಯದ ಅನುಭವದ ಎದೆಬಡಿತ ಕೇಳಬಹುದೆಂಬ ನಿರೀಕ್ಷೆ ಅವರದು. ಸಾಹಿತ್ಯ ಚರಿತ್ರೆಯ ರಚಿತ ಆಕೃತಿಗಿಂತ ಬೇರೆಯೇ ಆಗಿರಬಹುದಾದ ನಿಜ ಜೀವನದರ್ಶನವನ್ನು ಅನುಸಂಧಾನಗೈವ ಅಪೇಕ್ಷೆ ಇಲ್ಲಿಯ ಬರಹಗಳ ಹಿಂದಿದೆ.
ಇದು ಎಚ್.ಎಸ್.ಆರ್. ಕ್ರಿಯಾಶೀಲವಾಗಿ ವಿಮರ್ಶಾ ಬರಹಗಳಲ್ಲಿ ತೊಡಗಿಕೊಂಡ ಕಾಲಘಟ್ಟದಲ್ಲಿ- ಅಂದರೆ ಸರಿಸುಮಾರು ಕಳೆದ ನಾಲ್ಕು ದಶಕಗಳಲ್ಲಿ- ಒಟ್ಟಾರೆಯಾಗಿ ಕನ್ನಡ ಸಾಹಿತ್ಯ ತುಂಬ ಆಸಕ್ತಿಯಿಂದ ಪರಿಶೀಲಿಸಿದ ಮಹತ್ವದೊಂದು ಸವಾಲು. ಲೇಖಕರೇ ಹೇಳುವಂತೆ- `ವಿಮರ್ಶೆಯು ಸಂಸ್ಕೃತಿ- ಸಮಾಜ ಕೇಂದ್ರಿತವಾದ ನೆಲೆಗಳನ್ನು ವಿಪುಲವಾಗಿ ಪಡೆದುಕೊಂಡಿದ್ದು ಈ ಅವಧಿಯಲ್ಲಿಯೇ’. ಇಲ್ಲಿಂದ ಮುಂದೆ ಎಚ್.ಎಸ್.ಆರ್ ಇನ್ನೊಂದು ಮುಖ್ಯ ಪ್ರಶ್ನೆ ಕೇಳಿಕೊಳ್ಳುತ್ತಾರೆ:
`ಕನ್ನಡ ಸೃಜನಶೀಲ ಸಾಹಿತ್ಯವು ಎದುರಿಸಿದ, ಬಿಡಿಸಿದ ಸಾಮಾಜಿಕ- ಸಾಂಸ್ಕೃತಿಕ ಸವಾಲುಗಳನ್ನು ಅಷ್ಟೇ ಸಂಕೀರ್ಣವಾಗಿ, ವೈವಿಧ್ಯಮಯವಾಗಿ ವಿಮರ್ಶೆಯು ಅನುಸಂಧಾನ ಮಾಡಿದೆಯೇ?’. ಕನ್ನಡ ವಿಮರ್ಶೆಯಲ್ಲಿ ಅಂಥ ಅಪರೂಪದ ಹೊಳಹುಗಳಿರುವುದಾದರೂ ಸ್ವಯಂಪೂರ್ಣವಾದ ಲೋಕದರ್ಶನ ಮೂಡಿರುವ ಕುರಿತು ಅವರು ಸಂಶಯ ತಾಳುತ್ತಾರೆ. ವಾಸ್ತವಿಕವಾಗಿ ಸ್ವತಃ ರಾಘವೇಂದ್ರರಾವ್ ಅವರ ಬರಹಗಳು ಆ ನಿಟ್ಟಿನಲ್ಲಿ ಸಾಕಷ್ಟು ದೂರ ನಡೆದಿವೆ.
`ವಿಮರ್ಶೆಯು ಸಹಪ್ರಯಾಣ ಮಾತ್ರವಾಗದೆ ಸ್ವತಂತ್ರವಾದ ಹುಡುಕಾಟವೂ ಆಗಿರುತ್ತದೆ’ ಚಂಪಾ ಕಾವ್ಯ ಕುರಿತ ಲೇಖನ. ಕೆ.ಎಸ್.ನ. ಕಾವ್ಯದ ಕುರಿತು ಬರೆಯುವಾಗ ಅವರು ಆಡುವ ಮಾತುಗಳನ್ನು ಗಮನಿಸಿ: `…ಅವರು ಜನಪದದ ಅರ್ಕವನ್ನು ಮಧ್ಯಮವರ್ಗದ ಭಾಷೆ ಮತ್ತು ಮೌಲ್ಯಸಂಹಿತೆಯ ನೆಲೆಗಟ್ಟಿಗೆ ಪರಿವರ್ತಿಸಿದರು…
ಇಪ್ಪತ್ತನೆಯ ಶತಮಾನದ ಕನ್ನಡ ಜನಪದದ ಚಲನಶೀಲತೆಯನ್ನು ಅವರ ಹಾಗೆ ಹಿಡಿದಿಟ್ಟಿರುವವರು ಬಹಳ ಕಡಿಮೆ’. ಸಂವಹನಶೀಲವಲ್ಲದ ಬಿಗಿ ಆಕೃತಿಗಿಂತ ಸರಳ ನುಡಿಗಟ್ಟುಗಳು ಮುಖ್ಯವೆಂಬ ಕವಿಯ (ಕೆಎಸ್‌ನ) ನಿಲುವಿಗೂ, ಸಮಾಜದ ಅಪೇಕ್ಷೆಗಳಿಗೂ ಇರಬಹುದಾದ ಸಂಬಂಧದ ಕುರಿತು ಈ ಲೇಖನ ಯೋಚಿಸಲು ತೊಡಗಿಸುತ್ತದೆ.
ರಾಮಚಂದ್ರ ಶರ್ಮರ `ಸಮಗ್ರಕಾವ್ಯ’ಕ್ಕೆ ಬರೆದ ಮುನ್ನುಡಿಯಲ್ಲಿ ಆಧುನಿಕ ಕನ್ನಡ ಕಾವ್ಯಸೃಷ್ಟಿಯ ಸಾಂಸ್ಕೃತಿಕ ಸನ್ನಿವೇಶದ ಅಪೇಕ್ಷೆಗಳಿಂದ, ಅವಶ್ಯಕತೆಗಳಿಂದ ಭಿನ್ನವಾಗಿಯೇ ಉಳಿದ ಅವರ ಕಾವ್ಯಭಾಷೆ, ಅನುಭವ ಪ್ರಪಂಚಗಳ ಬಿಕ್ಕಟ್ಟನ್ನು ಕುರಿತು ಈ ವಿಮರ್ಶಕರು ಮಾಡಿರುವ ಪರಿಶೀಲನೆ; ಮನೆ ಜಗಳ ಮತ್ತು ಹೊರಗಿನ ಮಾರಿಗಳೆರಡನ್ನೂ ಏಕಕಾಲಕ್ಕೆ ಎದುರಿಸಬೇಕಾಗಿರುವ ದಲಿತ ಕಾವ್ಯದೆದುರಿಗಿರುವ ಪಂಥಹ್ವಾನದ ಕುರಿತ ವಿವೇಚನೆ (ಮಾಲಗತ್ತಿ ಕಾವ್ಯ ಚರ್ಚೆ)- ಇವು ರಾಘವೇಂದ್ರರಾವ್ ಅವರ ವಿಮರ್ಶಾ ಬರಹಗಳು ಕೃತಿಸಮೀಕ್ಷೆಯ ಒಟ್ಟೊಟ್ಟಿಗೇ ಇಡಿಯ ಕನ್ನಡ ಸಾಹಿತ್ಯ, ಸಂಸ್ಕೃತಿ, ಸಮಾಜದ ಸಂಕೀರ್ಣ ಸಮಸ್ಯೆಗಳನ್ನು ಎದುರುಗೊಳ್ಳುವ ಬಗೆಯನ್ನು ತೋರುವ ಎರಡು ಉದಾಹರಣೆಗಳು.
ಹೊಸದಾಗಿ ಕಾವ್ಯರಚನೆಗೆ ತೊಡಗಿದ ಹುಡುಗನಿಂದ ಹಿಡಿದು ಹಿರಿಯ ಮುಖ್ಯಲೇಖಕರ ಕೃತಿಗಳವರೆಗೂ ಇಲ್ಲಿ ಮುನ್ನುಡಿ ಬರಹಗಳ ಹರಹು ಇದೆ. ಆ ಎಲ್ಲ ಬರಹಗಳ ಹಿಂದೆ ಶಿಕ್ಷಣದ ಶ್ರದ್ಧೆ, ಶಿಸ್ತಿನಿಂದ ರಾಘವೇಂದ್ರರಾವ್ ತಮ್ಮ ವಿಮರ್ಶೆಯ ಮುಖ್ಯ ಕಾಳಜಿಗಳೊಂದಿಗೆ ಕಾರ್ಯಪ್ರವೃತ್ತರಾಗಿರುವುದು ಕಂಡು ಬರುತ್ತದೆ.
ವಯೋಮಾನದ ದೃಷ್ಟಿಯಿಂದ ಮಾತ್ರವಲ್ಲ, ಪಂಥ ಪ್ರವೃತ್ತಿಗಳ ನೆಲೆಗಳಿಂದಲೂ ಇಲ್ಲಿಯ ಮುನ್ನುಡಿಗಳನ್ನು ಪಡೆದವರು ವಿವಿಧ ವಿಭಾಗಗಳಲ್ಲಿ ಹಂಚಿ ಹೋಗುವವರು. ಎಚ್.ಎಸ್.ಆರ್. ಅವರ ವಿಮರ್ಶನ ಪ್ರಜ್ಞೆಯು ಈ ಎಲ್ಲ ವೈವಿಧ್ಯಗಳನ್ನೂ ಸಹಜ ಕುತೂಹಲ ಮತ್ತು ವಿನಯದಿಂದ ಮುಟ್ಟಲು, ಅರಿಯಲು ಬಯಸುತ್ತದೆ ಎಂಬುದು ಅದರ ಸ್ಥಾನವನ್ನು ವಿಶಿಷ್ಟಗೊಳಿಸಿದೆ.
ಲೇಖಕರು ವಿಮರ್ಶಕರ ಆತ್ಮೀಯರಾದಾಗಲೂ (ಚಿ.ಶ್ರೀನಿವಾಸರಾಜು, ಎಸ್.ಜಿ.ಸಿದ್ದರಾಮಯ್ಯ, ಶೂದ್ರ ಶ್ರೀನಿವಾಸ, ಕೆ ಮರುಳಸಿದ್ದಪ್ಪ…) ಒಲವಿನ ನೆನಕೆಯೊಂದಿಗೇ ರಾಘವೇಂದ್ರರಾವ್ ಮುಂಭಾಗಗಳಲ್ಲಿ ವಿಮರ್ಶನೋದ್ಯಮದಲ್ಲಿ ನಿರಾತಂಕವಾಗಿ ತಲ್ಲೆನರಾಗುತ್ತಾರೆ. ಪ್ರತ್ಯಕ್ಷ ಒಡನಾಟವಿಲ್ಲದ ಲೇಖಕರ ವಿಷಯದಲ್ಲೂ ಅವರದು ವಿಶ್ವಾಸಪೂರ್ಣ ದೃಷ್ಟಿಯೇ. ಈ ಮಾತನ್ನು ಇಷ್ಟು ವಿವರವಾಗಿ ಹೇಳಿದುದಕ್ಕೆ ಕಾರಣವಿದೆ.
ಎಚ್.ಎಸ್.ಆರ್. ಅವರದು ನಿರ್ಮಮ ಧೋರಣೆಯಲ್ಲ. ಅದು ಒಟ್ಟಾರೆಯಾಗಿ ಸೃಷ್ಟಿಶೀಲವಾದ ಎಲ್ಲ ಕೃತಿಗಳನ್ನೂ, ಕೃತಿಕಾರರನ್ನೂ ಪ್ರೀತಿ, ಆದರಗಳಿಂದ ಕಾಣುವಂಥದು. ಒಟ್ಟು ಕನ್ನಡ ಸಾಹಿತ್ಯದ ಗತಿ, ಕ್ರಿಯಾಶೀಲತೆಗಳನ್ನು ತಾಯ ಪ್ರೇಮದಿಂದ ಕಾವು ಕೊಟ್ಟು ಪೊರೆಯುವ ಅಂತಃಕರಣ ಈ ಬರಹಗಳೊಳಗೆ ಮಿಡಿಯುತ್ತಿದೆ. ಇದಕ್ಕೆ ಅಪವಾದ ಎನ್ನಬಹುದಾದ ಒಂದು ಸಾಲನ್ನೂ ನಾನು ಕಾಣಲಿಲ್ಲ.
`ವಿಮರ್ಶೆಯು ಯಾವಾಗಲೂ ಸಾಹಿತ್ಯ ಕೃತಿಗಳ ವಿಶ್ಲೇಷಣೆ, ವಿಮರ್ಶೆಗಳಿಗೆ ಮೀಸಲಾದ ಪರಾವಲಂಬೀ ಚಟುವಟಿಕೆಯಾಗಿಲ್ಲ. ಬದಲಾಗಿ ಒಂದು ಸಂಸ್ಕೃತಿಯು ಸ್ವಾಭಿಮುಖವಾಗಿ ತೊಡಗಿಕೊಂಡು ಜ್ಞಾನಸೃಷ್ಟಿ ಮಾಡುವ ಜವಾಬ್ದಾರಿ ಹೊತ್ತುಕೊಂಡಾಗ ನಡೆಯುವ ಎಲ್ಲ ಪವಾಡಗಳೂ ಸಾಹಿತ್ಯ ವಿಮರ್ಶೆಯಲ್ಲಿಯೂ ಒಂದು ಮಿತಿಯೊಳಗೆ ನಡೆದಿವೆ’ (ಶತಮಾನದ ಸಾಹಿತ್ಯ ವಿಮರ್ಶೆ) ಎಂದು ಹೇಳುವಾಗಲೂ ಎಚ್.ಎಸ್.ಆರ್. ಅದರ ಮಿತಿಯತ್ತಲೂ ಗಮನ ಸೆಳೆಯಲು ಮರೆಯುವುದಿಲ್ಲ:
`ಜೀವಂತವಾದ ಕೃತಿಯು ಓದುಗನ ಮನಸಿನಲ್ಲಿ ಅಸಂಖ್ಯ ಸಾಧ್ಯತೆಗಳನ್ನು ಕಂಡುಕೊಳ್ಳುತ್ತದೆ. ಆದ್ದರಿಂದಲೇ ವಿಮರ್ಶೆ-ವಿಶ್ಲೇಷಣೆಗಳಿಗೆ ಅಲ್ಪಾಯುಷ್ಯದ ಶಾಪವಿರುತ್ತದೆ. ಅವು ತಾವು ರಚಿತವಾಗುತ್ತಿರುವ ಕಾಲದ ಒತ್ತಡಗಳಿಗೆ ಹಿಡಿದ ಕನ್ನಡಿಗಳು’ (`ಭೃಂಗಮಾರ್ಗ’ದ ಪ್ರಸ್ತಾವನೆ). ಸಾಹಿತ್ಯದ ಯಾವ ನೆಲೆಗಳು ಯಾಕೆ ಮುನ್ನೆಲೆಗೆ ಬರುತ್ತವೆ ಎಂಬುದಕ್ಕೂ, ಅದನ್ನು ಯಾವಾಗ ಯಾರು ಓದುತ್ತಾರೆ ಎಂಬುದಕ್ಕೂ ನಿಕಟ ಸಂಬಂಧವಿದೆ ಎಂದು ಎಚ್.ಎಸ್.ಆರ್. ಪ್ರತಿಪಾದಿಸುತ್ತಾರೆ.
ಕಳೆದ ಸರಿಸುಮಾರು ನೂರು ವರ್ಷಗಳಲ್ಲಿ ನಮ್ಮ ಸಂಸ್ಕೃತಿಗಳು ಗಳಿಸಿಕೊಂಡಿದ್ದು, ಕಳೆದುಕೊಂಡಿದ್ದು, ಬೇಕೆಂದೇ ಬದಿಗೆ ತಳ್ಳಿದ್ದು ಎಲ್ಲವನ್ನೂ ಮತ್ತೊಮ್ಮೆ ನೋಡುವ, ಕಾಪಾಡಿಕೊಳ್ಳುವ ಕೆಲಸವು ಈಗಾಗಲೇ ಮೊದಲಾಗಿದೆ ಮತ್ತು ರಾಘವೇಂದ್ರರಾವ್ ಅವರೂ ಕೂಡ ತಮ್ಮೆಲ್ಲ ವಿಮರ್ಶಾ ಸಾಹಿತ್ಯದೊಡನೆ ಆ ಕೆಲಸದಲ್ಲಿ ಪ್ರೀತಿಯಿಂದ ತೊಡಗಿಕೊಂಡಿದ್ದಾರೆ.
`ಆಧುನಿಕ ಕನ್ನಡ ಸಾಹಿತ್ಯದಲ್ಲಿ ಇದು ನಿಧಿಧ್ಯಾಸದ ಕಾಲ’- ಇದೂ ಲೇಖಕರದೇ ಮಾತು. ನಮ್ಮ ಲೋಕದೃಷ್ಟಿಯೇ ನಮ್ಮ ಲೋಕದರ್ಶನವನ್ನೂ ರೂಪಿಸುವುದಾದರೂ ಕನ್ನಡಕ ಕಡಿವಾಣವಾಗಬಾರದು ಎಂಬ ಆತಂಕ ಅವರದು. ಎಂಥ ಖಚಿತವಾದ ಧೋರಣೆಯೂ, ತನಗಿರುವ ವಿನಯದ ಮೂಲಕವೇ ಲೋಕವನ್ನು ಸಮೀಪಿಸಬೇಕೆಂಬ, ಅದರಿಂದಲೇ ಅದು ಮುಕ್ತತೆಯನ್ನು ಪಡೆಯಲು ಸಾಧ್ಯವೆಂಬ ಎಚ್.ಎಸ್.ಆರ್. ಅವರ ತಾತ್ತ್ವಿಕ ನಿಲುವಿಗೆ ಅವರ ಬರಹಗಳೇ ಸಾರ್ಥಕ ನಿದರ್ಶನಗಳಾಗಿವೆ.
-ಡಾ. ಚಿಂತಾಮಣಿ ಕೊಡ್ಲೆಕೆರೆ
ಶೀರ್ಷಿಕೆ: ಸಂಗಡ ಲೇಖಕರು : ಡಾ.ಎಚ್.ಎಸ್.ರಾಘವೇಂದ್ರರಾವ್; ಪ್ರಕಾಶಕರು: ಕನ್ನಡ ವೇದಿಕೆ, ಜೈನ್ ವಿ.ವಿ., ಬೆಂಗಳೂರು ಪುಟ: ಬೆಲೆ: ರೂ. 200/-
ಕೃಪೆ:ಪ್ರಜಾವಾಣಿ ಸಾಪ್ತಾಹಿಕ ಪುರವಣಿ
Filed under: ವಿಮರ್ಶೆ | Tagged: ಕನ್ನಡ ವೇದಿಕ ಜೈನ್ ವಿ.ವಿ. ಬೆಂಗಳೂರು, ಡಾ. ಚಿಂತಾಮಣಿ ಕೊಡ್ಲೆಕೆರೆ, ಡಾ.ಎಚ್.ಎಸ್.ರಾಘವೇಂದ್ರರಾವ್;, ಪ್ರಜಾವಾಣಿ ಸಾಪ್ತಾಹಿಕ ಪುರವಣಿ, ಸಂಗಡ | Leave a comment »
ವರ್ಧಮಾನ ಪ್ರಶಸ್ತಿ ವಿಜೇತರಿಗೆ ಅಭಿನಂದನೆಗಳು
ಕನ್ನಡದ ಮುಖ್ಯ ವಿಮರ್ಶಕರಾದ ಡಾ.ಎಚ್.ಎಸ್.ರಾಘವೇಂದ್ರ ರಾವ್ ಅವರು ತಮ್ಮ `ತರು ತಳೆದ ಪುಷ್ಪ’ ವಿಮರ್ಶಾ ಕೃತಿಗೆ ವರ್ಧಮಾನ ಪ್ರಶಸ್ತಿ ಪಡೆದಿದ್ದಾರೆ. ಹಾಗೂ ಉದಯೋನ್ಮುಖ ಲೇಖಕ ವಸುದೇಂದ್ರ ತಮ್ಮ `ಯುಗಾದಿ’ ಕಥಾ ಸಂಕಲನಕ್ಕೆ ಉದಯೋನ್ಮುಖ ವರ್ಧಮಾನ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರಿಬ್ಬರಿಗೂ ನಮ್ಮ ಪ್ರೀತಿಪೂರ್ವಕ, ಗೌರವಪೂರ್ವಕ ಅಭಿನಂದನೆಗಳು.
`ನನಗೆ ಭಾವನೆಗಳಿಲ್ಲದ ಲೋಕದಲ್ಲಿ ನಂಬಿಗೆಯಿಲ್ಲ, ನಾವು ದ್ವೀಪಗಳಾಗುವುದು ಬೇಡ, ಗೋಡೆ ಕಟ್ಟುವುದು ಬೇಡ, ನಾವು ಸೇತುವೆ ಕಟ್ಠೋಣ ದೀಪ ಹಚ್ಚೋಣ. ‘ ಇದು ಖ್ಯಾತ ವಿಮರ್ಶಕ ಡಾ.ಎಚ್.ಎಸ್.ರಾಘವೇಂದ್ರ ರಾವ್ ಅವರು ಮೂಡುಬಿದಿರೆಯ ರಮಾರಾಣಿ ಸಂಶೋಧನೆ ಕೇಂದ್ರದಲ್ಲಿ ಭಾನುವಾರ ನಡೆದ ವರ್ಧಮಾನ ಪ್ರಶಸ್ತಿ ಪೀಠದ ವರ್ಧಮಾನ ಪ್ರಶಸ್ತಿ ಸ್ವೀಕರಿಸಿ ಹೇಳಿದ ಮಾತು.
`ಕತೆಗಾರರು ಕಡಿಮೆ ಮಾ ತಾಡಿದ್ರೆ ಒಳ್ಳೆಯದು. ಅವರು ಹೇಳುವುದನ್ನು ಕತೆಯಲ್ಲಿ ಹೇಳುತ್ತಾನೆ. ನನಗೆ ಮನುಷ್ಯನೇ ನನಗೇ ಶ್ರೇಷ್ಠ ಧರ್ಮ.’ ಇದು ವರ್ಧಮಾನ ಉದಯೋನ್ಮುಖ ಪ್ರಶಸ್ತಿ ಸ್ವೀಕರಿಸಿದ ವಸುದೇಂದ್ರ ಅವರ ಅಭಿಪ್ರಾಯ.
ಕೃಪೆ: http://www.gulfkannadiga.com/news-30693.html
ವರ್ಧಮಾನ ಪ್ರಶಸ್ತಿ ಪಡೆದ ಕೃತಿ
ಈ ಪುಸ್ತಕವು ನಾನು ಪತ್ರಿಕೆಗಳಿಗೆಂದು ಬರೆದ ಹಲವು ಅಂಕಣಗಳು ಮತ್ತು ಕೆಲವು ಬಿಡಿ ಬರಹಗಳ ಸಂಕಲನ. ಮೊದಲ ಮೂವತ್ಮೂರು ಬರಹಗಳು `ಜನವಾಹಿನಿ’ ದಿನಪತ್ರಿಕೆಯ ಭಾನುವಾರದ ಪುರವಣಿಯಲ್ಲಿ 08-03-2001 ರಿಂದ 28-10-2001 ರ ಅವಧಿಯಲ್ಲಿ ನಿರಂತರವಾಗಿ ಪ್ರಕಟವಾದವು. ಆ ಅಂಕಣಕ್ಕೂ `ತರು ತಳೆದ ಪುಷ್ಪ’ ಎಂಬ ಶೀರ್ಷಿಕೆಯೇ ಇತ್ತು. ಉಳಿದವು ಬೇರೆ ಕಡೆ ಪ್ರಕಟವಾದರೂ ಆಶಯಗಳ ಸಾಮ್ಯದಿಂದ ಇಲ್ಲಿ ಜಾಗ ಪಡೆದಿವೆ.
ಹಲವು ವರ್ಷಗಳಿಂದ, ಪತ್ರಿಕೆಗಳಿಗೆ ಬರೆಯುವುದನ್ನು ತಪ್ಪಿಸಿಕೊಳ್ಳುತ್ತಾ ಬಂದ ನನಗೆ ಈ ಬಗೆಯ ಬರವಣಿಗೆ ಕೊಂಚ ಹೊಸದು. ಸಾಹಿತ್ಯಕ ಪತ್ರಿಕೆಗಳಲ್ಲಿ ಬರೆಯುವುದಕ್ಕೂ ಸಾಕಷ್ಟು ದೊಡ್ಡ ಓದುಗ ಸಮುದಾಯವನ್ನು ತಲುಪುವ ಪತ್ರಿಕೆಗಳಲ್ಲಿ ಬರೆಯುವುದಕ್ಕೂ ವ್ಯತ್ಯಾಸವಿದೆ. ಸಂವಹನಶೀಲತೆ ಮತ್ತು ಸಂಕೀರ್ಣತೆಗಳ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳುವುದು ಕಷ್ಟ. ಹಾಗೆಂದು ಸರಳವಾದ ವಿವರಣೆಗಳನ್ನು ನೀಡೋಣವೆಂದರೆ ಪುಟಮಿತಿ, ಪದಮಿತಿಗಳು ಅಡ್ಡಬರುತ್ತವೆ. ಇದು ಪತ್ರಿಕೆಗಳನ್ನು ಓದುವವರ ಬೌದ್ಧಿಕ ಸಾಮರ್ಥ್ಯವನ್ನು ಶಂಕಿಸುವ ಹುಂಬ ಕೆಲಸ ಅಲ್ಲ. ವಿಮರ್ಶೆಗೆ ಸಹಜವಾದ ಪರಿಭಾಷೆಯನ್ನು ಎಷ್ಟು ಹೇಗೆ ಬಳಸಬಹುದು ಎನ್ನುವುದು ಇಲ್ಲಿನ ಪ್ರಶ್ನೆ. ಹೆಚ್ಚು ರಾಜಿಗಳನ್ನು ಮಾಡಿಕೊಳ್ಳದೆ ಬರೆದರೆ, ಇಂಥ ಬರವಣಿಗೆಯು ಕಲಿಯುವ, ಕಲಿಸುವ ಕೆಲಸವೂ ಆಗಬಹುದು. ಪತ್ರಿಕೆಗಳನ್ನು ಓದುವವರೆಲ್ಲರೂ ಇಂಥ ಅಂಕಣಗಳನ್ನು ಓದುವುದಿಲ್ಲವೆಂಬ ವಾಸ್ತವಜ್ಞಾನವು ಇಲ್ಲಿನ ನನ್ನ ಧೋರಣೆಯನ್ನು ರೂಪಿಸಿದೆ.
ನನ್ನ ಆಯ್ಕೆಯ ಪುಸ್ತಕಗಳ ಬಗ್ಗೆ ಬರೆಯುವ ಸ್ವಾತಂತ್ರವು ನನಗೆ ಸಿಕ್ಕಿತ್ತು. ಸಂಪಾದಕರ ಸೆನ್ಸಾರ‍್ ಇರಲಿಲ್ಲ. ನಮ್ಮ ಸಂಸ್ಕೃತಿಗೆ ಮುಖ್ಯವೆಂದು ತೋರಿದ, ನನಗೆ ಸಂತೋಷಕೊಟ್ಟ ಕೃತಿಗಳನ್ನು ನಾನು ಆರಿಸಿಕೊಂಡಿದ್ದೇನೆ. ಸಾಂಸ್ಕೃತಿಕ ಹಾಗೂ ಸಾಮಾಜಿಕ ಸನ್ನಿವೇಶಗಳ ಬಗ್ಗೆ ಕಾಳಜಿಯಿಟ್ಟುಕೊಂಡೇ ಕೃತಿ ಕೇಂದ್ರಿತವಾದ ಸಾಹಿತ್ಯಕ ವಿಧಾನಗಳನ್ನು ಬಳಸುವುದು ಇಲ್ಲಿ ನನ್ನ ಆಯ್ಕೆಯಾಗಿದೆ. ಕಾಲಮಿತಿ ಹಾಗೂ ಪದಮಿತಿಗಳಲ್ಲಿ ಬರೆಯುವುದು ಅನಿವಾರ್ಯವಾದ ಈ ಕೆಲಸವು ನನಗೆ ಕೆಲವು ಪಾಠಗಳನ್ನು ಕಲಿಸಿದೆ. ಬರೆದುದನ್ನು ಮತ್ತೆ ಓದುವುದರಿಂದ ಹಿಡಿದು ಸೂಕ್ತ ಪದಗಳ ಆಯ್ಕೆ ಮತ್ತು ವಾಕ್ಯರಚನೆಗಳವರೆಗೆ ಈ ಕಲಿಕೆಯ ಹರಹಿದೆ.
-ಪುಸ್ತಕದ ಲೇಖಕರ ಮಾತಿನಿಂದ
ಶೀರ್ಷಿಕೆ: ತರು ತಳೆದ ಪುಷ್ಪ ಲೇಖಕರು:ಎಚ್ ಎಸ್ ರಾಘವೇಂದ್ರ ರಾವ್ ಪ್ರಕಾಶನ:ಕ್ರೈಸ್ಟ್ ಕಾಲೇಜು ಕನ್ನಡ ಸಂಘ ಪುಟ:200 ಬೆಲೆ:
ವರ್ಧಮಾನ ಉದಯೋನ್ಮುಖ ಪ್ರಶಸ್ತಿ ಪಡೆದ ಕೃತಿ
`ಯುಗಾದಿ’ ಕತೆಯಲ್ಲಿ ಹೊಸ ತಲೆಮಾರಿನ ಜೀವನ ಕ್ರಮವೊಂದನ್ನು ಹಳೆಯ ತಲೆಮಾರಿನ ಕಣ್ಣುಗಳಿಂದ ಕಾಣುವ ಪ್ರಯತ್ನವಿದೆ. ತಾವು ಬದುಕಿ ಬಂದ ರೀತಿಗೆ ತಮ್ಮ ಮಗ ಬದುಕುತ್ತಿರುವ ರೀತಿಯನ್ನು ಹೋಲಿಸುತ್ತಾ ಅದನ್ನು ತಮ್ಮ ಗ್ರಹಿಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವ ಗೋಪಣ್ಣ ಮಾಸ್ತರರಿಗೆ ಆಗುವ ಗಲಿಬಿಲಿಗಳು ಮನನೀಯವಾಗಿವೆ. ಮುಖ್ಯವಾದ ಸಂಗತಿ ಎಂದರೆ ತಮ್ಮ ಮಗನ ಜೀವನದ ಇತಿಮಿತಿಗಳು ಗೋಚರಿಸುವಂತೆ ಹೊಸ ತಲೆಮಾರಿನ ಪ್ರಚಂಡ ಶಕ್ತಿಯ ಅರಿವೂ ಅವರಿಗೆ ಆಗುವುದು; ತಮಗೆ ಅಸಾಧ್ಯವಾಗಿದ್ದು, ಕಷ್ಟಸಾಧ್ಯವಾಗಿದ್ದು ತನ್ನ ಮಗನಿಗೆ ಸುಲಭವಾಗಿ, ಸರಳವಾಗಿ ಸಾಧ್ಯವಾಗುತ್ತಿರುವುದು. ಈ ಕತೆ ಗುರುತಿಸುವ ಮತ್ತೊಂದು ಮಹತ್ವದ ಸಂಗತಿ ಎಂದರೆ ಗೋಪಣ್ಣ ಮಾಸ್ತರರಿಗೆ ತಮ್ಮ ಮಗನ ಜೀವನಕ್ರಮ, ಅವನ ಆದ್ಯತೆಗಳು, ಮೌಲ್ಯಗಳು ಇನ್ನೂ ಅರ್ಥವಾಗದ ನಿಗೂಢ, ಅರ್ಥೈಸಿಕೊಳ್ಳಲಾಗದ ಗೋಜಲು; ಆದರೆ ಪ್ರಹ್ಲಾದನಿಗೆ ತನ್ನ ಅಪ್ಪ ಹಾಗೆ ಒಂದು ಸಮಸ್ಯೆ ಏನಲ್ಲ. ಅಂದರೆ ಹೊಸ ತಲೆಮಾರನ್ನು ಹಳೆಯ ತಲೆಮಾರು ಅರ್ಥ ಮಾಡಿಕೊಳ್ಳುವ ಜಟಿಲ ಪ್ರಕ್ರಿಯೆಯೊಂದರ ಕಥನವಾಗಿ `ಯುಗಾದಿ’ ಯನ್ನು ಓದಬಹುದಾಗಿದೆ. `ಬೆಟ್ಟದ ಜೀವ’ದ ಗೋಪಾಲಯ್ಯನಿಗೆ ತನ್ನ ಮಗ ಶಂಭುವಿನ ಜೀವನಕ್ರಮದ ಭೌತಿಕ ಸ್ವರೂಪ ಅದರ ಅಧಿಕೃತ ವಿವರಗಳಲ್ಲಿ ಅರಿವಿಗೇ ಬರುವುದಿಲ್ಲ.ಅವರಿಬ್ಬರ ಜಗತ್ತುಗಳು ನಿಜವಾಗಿ ಸಂಧಿಸುವುದೇ ಇಲ್ಲ.
ಅಡಿಗರ `ವರ್ಧಮಾನ’, ಅನಂತಮೂರ್ತಿಯವರ `ಸೂರ್ಯನಕುದುರೆ’ ಮುಂತಾದ ಕೃತಿಗಳಲ್ಲಿ ಹೊಸ ತಲೆಮಾರಿನಲ್ಲಿ ಸುಪ್ತವಾಗಿರುವ ವಿಕಾಸದ ಸಾಧ್ಯತೆಗಳು ಅಸ್ಪಷ್ಟವಾಗಿಯಾದರೂ ಗೋಚರಿಸುತ್ತವೆ. ವಸುಧೇಂದ್ರರ , `ಯುಗಾದಿ’ಯಲ್ಲಿ ಎರಡೂ ಜಗತ್ತುಗಳು ಭೌತಿಕವಾಗಿ ಸಂಧಿಸುವುದಷ್ಟೇ ಅಲ್ಲ ಹೆಚ್ಚಿನ ಸಹಾನುಭೂತಿಯಲ್ಲಿ ಅರ್ಥಪೂರ್ಣವಾದ ಅನುಸಂಧಾನಕ್ಕಾಗಿ ಪ್ರಯತ್ನಿಸುವ ವಿನ್ಯಾಸವೊಂದು ಸೂಚಿತವಾಗುತ್ತದೆ.
– ಟಿ.ಪಿ. ಅಶೋಕ
ಶೀರ್ಷಿಕೆ:ಯುಗಾದಿ ಲೇಖಕರು:ವಸುದೇಂದ್ರ ಪ್ರಕಾಶನ:ಛಂದ ಪ್ರಕಾಶನ ಪುಟ:206 ಬೆಲೆ:ರೂ.95
Filed under: ಕಥಾ ಸಂಕಲನ, ವಿಮರ್ಶೆ | Tagged: ಕ್ರೈಸ್ಟ್ ಕಾಲೇಜು ಕನ್, ಛಂದ ಪ್ರಕಾಶನ, ಟಿ.ಪಿ. ಅಶೋಕ, ಡಾ.ಎಚ್.ಎಸ್.ರಾಘವೇಂದ್ರ ರಾವ್, ತರು ತಳೆದ ಪುಷ್ಪ, ಯುಗಾದಿ, ವರ್ಧಮಾನ ಉದಯೋನ್ಮುಖ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ವಸುದೇಂದ್ರ | Leave a comment »
ಸ್ತ್ರೀಮತವನುತ್ತರಿಸಲಾಗದೇ ಧರ್ಮಶಾಸ್ತ್ರದೊಳ್
ನಾನು ಓದಿ ಮೆಚ್ಚಿದ ಕೃತಿಗಳನ್ನು, ಈ ದಿನಗಳಲ್ಲಿ, ಮತ್ತೆ ಓದುವಂತೆ ಮಾಡುತ್ತಿರುವ ಕನ್ನಡದ ಮುಖ್ಯ ವಿಮರ್ಶಕರಲ್ಲಿ ಡಾ. ಆಶಾದೇವಿ ಒಬ್ಬರು. ಒಬ್ಬರು ಮಾತ್ರವಲ್ಲ ಅನನ್ಯರು. ಸಾಹಿತ್ಯದ ವಿಷಯದಲ್ಲಿ ಇವರದು ಸ್ತ್ರೀ ದೃಷ್ಟಿಕೋನ ಎಂದು ಮೆಚ್ಚಿ ಮರೆಯುವಂತಿಲ್ಲ. ಯಾಕೆಂದರೆ ನನ್ನದೂ ಆಗಬೇಕಿದ್ದ ಒಳನೋಟಗಳನ್ನು ಆಶಾದೇವಿ ನನಗೆ ಒದಗಿಸಿದ್ದಾರೆ. ವೈದೇಹಿ ಕೃತಿಗಳ ಬಗ್ಗೆ, ಕುಮಾರವ್ಯಾಸನ ಬಗ್ಗೆ,
ಬಸವಣ್ಣನ ಬಗ್ಗೆ ಹೀಗೇ ಹಲವು ಈಚಿನ-ಹಿಂದಿನ ಲೇಖಕರ ಬಗ್ಗೆ ನಮ್ಮನ್ನು ಕೆಣಕುವಂತೆ, ಒಪ್ಪುವಂತೆ, ಅನುಮಾನಿಸುವಂತೆ ವಿಮರ್ಶೆಯ ವಿನಯದಲ್ಲಿ ಆಶಾದೇವಿ ಬರೆಯುತ್ತಾರೆ.
ಎಲ್ಲಾ ಕೃತಿಗಳಲ್ಲೂ ಇರುವ ವಾಚ್ಯಾರ್ಥಗಳು ನಿವೃತ್ತವಾಗಿ ನಮಗವು ಧ್ವನಿಸುತ್ತವೆ ಎಂದು ಸುಲಭವಾಗಿ ನಾವು ತಿಳಿದಿರುತ್ತೇವೆ. ಆಶಾದೇವಿಯವರು ಕೃತಿಯ ಈ ವಾಚ್ಯದ ಮುಖವನ್ನು ನೋಡುತ್ತಾರೆ; ಆದರೆ ಈ ವಾಚ್ಯ ಮಾತ್ರ ಮುಖ್ಯವೆನ್ನುವಂತೆ ನೋಡುವುದಿಲ್ಲ. ಕೃತಿಯಿಂದ ಹುಟ್ಟಿದ ರಸಾನುಭವವನ್ನೂ ನಮ್ಮೊಂದಿಗೆ ಹಂಚಿಕೊಳ್ಳುತ್ತ – ಸಂಭ್ರಮಿಸದಂತೆ ಅನುಮಾನಿಸುತ್ತ ಪ್ರಶ್ನಿಸುತ್ತ – ನೋಡುತ್ತಾರೆ. ಇದು ಕಷ್ಟದ ಸಾಹಸದ ಓದು; ಕೃತಿ ಪೂರ್ಣವಾಗಿ ನಮಗೆ ಒದಗುವಂತೆ ಮಾಡುವ ಓದು ಇದು. ಪ್ರಾಮಾಣಿಕತೆ, ಧೀಮಂತಿಕೆಗಳ ಜೊತೆ ಕೃತಿಗೆ ಎದುರಾಗುವ ಧೈರ್ಯವೂ ಈ ಬಗೆಯ ವಿಮರ್ಶೆಗೆ ಅಗತ್ಯ.
ಈ ದಿನಗಳಲ್ಲಿ ಕನ್ನಡ ಸಾಹಿತ್ಯ ಜೀವಂತವಾಗಿದೆ ಎನ್ನಿಸುವಂತೆ ಮಾಡಿರುವ ಆಶಾದೇವಿಗೆ ನಾವು ಕೃತಜ್ಞರು. ವಿಲಕ್ಷಣ ಪ್ರತಿಭೆಯ ನನ್ನ ಗೆಳೆಯ ಡಿ. ಆರ್. ನಾಗರಾಜ್ ರ ಹಾದಿಯಲ್ಲಿ ಕನ್ನಡ ಸಾಹಿತ್ಯದ ಅನುಭವವನ್ನು ಆಶಾದೇವಿ ವಿಸ್ತರಿಸುತ್ತಿದ್ದಾರೆ. ಆ ಕ್ರಮವನ್ನು ನಾವು ನಮ್ಮ ಆತ್ಮೀಯ ಓದಿನಲ್ಲಿ ಎದುರಾಗುವಂತೆ ಮಾಡುವ ಬರವಣಿಗೆ ಇಲ್ಲಿದೆ.
– ಯು. ಆರ‍್. ಅನಂತಮೂರ್ತಿ
-ಪುಸ್ತಕದ ಬೆನ್ನುಡಿಯಿಂದ
Filed under: ಮಹಿಳಾ ಸಾಹಿತ್ಯ, ವಿಮರ್ಶೆ, ವೈಜ್ಞಾನಿಕ ಸಾಹಿತ್ಯ | Tagged: ಎಂ.ಎಸ್. ಆಶಾದೇವಿ, ಕುಮಾರವ್ಯಾಸ, ಡಿ. ಆರ್. ನಾಗರಾಜ್, ಬಸವಣ್ಣ, ಯು. ಆರ‍್. ಅನಂತಮೂರ್ತಿ, ವೈದೇಹಿ, ಸ್ತ್ರೀಮತವನುತ್ತರಿಸಲಾಗದೆ? | Leave a comment »
ತಾವು ಒಬ್ಬ ಓದುಗ ಎಂಬ ವಿನಯದಿಂದಲೇ
ಆನಂದ ಋಗ್ವೇದಿಯವರು ಕವಿ, ಕಥೆಗಾರ ಹಾಗೂ ನಾಟಕಕಾರರೂ ಆಗಿದ್ದಾರೆ. ಅವರು ಬರೆದ ವಿಮರ್ಶಾತ್ಮಕ ಲೇಖನಗಳ ಸಂಗ್ರಹ ಇದು. ಇದು ಕೇವಲ ವಿಮರ್ಶಾತ್ಮಕ ಲೇಖನಗಳ ಸಂಗ್ರಹ ಮಾತ್ರವಾಗಿಲ್ಲ. ಇಲ್ಲಿ ಕನ್ನಡ ಲೇಖಕರ ಕುರಿತಂತೆ ನುಡಿ ಚಿತ್ರಗಳೂ ಇವೆ. ಈ ಭಾಗದಲ್ಲಿ ಅಕಾಲಿಕ ನಿಧನ ಹೊಂದಿದ ವಿಭಾ ತಿರಕಪಡಿ, ಮುದೇನೂರು ಸಂಗಣ್ಣ, ಚಿ.ಶ್ರೀನಿವಾಸರಾಜು ಅವರ ಕುರಿತ ನುಡಿಚಿತ್ರಗಳು ಆಪ್ತವಾಗಿವೆ. ಇವೆಲ್ಲವೂ ಅವರ ವೈಯಕ್ತಿಕ ಸಂಬಂಧ ಹಾಗೂ ನೆನಪುಗಳಿಂದ ಕಟ್ಟಿದ ನುಡಿಚಿತ್ರಗಳಾಗಿವೆ.
`ಹಾದಿ ಒಂದು’ ಎಂಬ ಭಾಗದಲ್ಲಿ ಹಿ.ಚಿ.ಬೋರಲಿಂಗಯ್ಯ, ಬಾಳಾಸಾಹೇಬ ಲೋಕಾಪುರ, ಮಹಾಶ್ವೇತಾದೇವಿ, ಎಸ್.ಎಸ್.ಹಿರೇಮಠ, ಸುರೇಂದ್ರನಾಥ್, ಎಂ.ವ್ಯಾಸ ಮುಂತಾದವರ ಪುಸ್ತಕಗಳನ್ನು ಲೇಖಕರು ವಿಮರ್ಶಿಸಿದ್ದಾರೆ. ಇವೆಲ್ಲ ಅಕಾಡೆಮಿಕ್ ಶಿಸ್ತಿನ ಬರಹಗಳು. ಆದರೂ, ಲೇಖಕರು ತಾವು ಒಬ್ಬ ಓದುಗ ಎಂಬ ವಿನಯದಿಂದಲೇ ಈ ಪುಸ್ತಕಗಳನ್ನು ಪ್ರವೇಶಿಸುತ್ತಾರೆ. ಒಂದು ತಾತ್ವಿಕ ಅಭಿಪ್ರಾಯಗಳಿಗೆ ಬರುತ್ತಾರೆ. ಪುಸ್ತಕದ ಮೂರನೇ ಭಾಗದಲ್ಲಿ ಲೇಖಕರು ವಿವಿಧ ಸಂದರ್ಭದಲ್ಲಿ ಪ್ರತಿಕ್ರಯಿಸಿದ್ದು ಹಾಗೂ ಅವರ ಮುನ್ನುಡಿಗಳು ಇವೆ. ಇಂದಿನ ಕಾಲದ ಹಾಗೂ ಇಂದು ಬರೆಯುತ್ತಿರುವ ಲೇಖಕರ ತಳಮಳವನ್ನು ಸರಿಯಾಗಿ ಇವು ವ್ಯಕ್ತಪಡಿಸುತ್ತವೆ ಎಂದು ಹೇಳಬಹುದು.
ಶೀರ್ಷಿಕೆ : ತಳಮಳದ ಹಾದಿ (ಸಾಹಿತ್ಯ ಅಭ್ಯಾಸಿಯ ವಿಮರ್ಶಾತ್ಮಕ ಟಿಪ್ಪಣಿಗಳು) ಲೇಖಕರು:ಆನಂದ ಋಗ್ವೇದಿ ಪ್ರಕಾಶಕರು:ಪಲ್ಲವ ಪ್ರಕಾಶನ ಪುಟ:120 ಬೆಲೆ:ರೂ.80/-
ಕೃಪೆ: ಪ್ರಜಾವಾಣಿ
Filed under: ವಿಮರ್ಶೆ | Tagged: ಆನಂದ ಋಗ್ವೇದಿ, ತಳಮಳದ ಹಾದಿ (ಸಾಹಿತ್ಯ ಅಭ್ಯಾಸಿಯ ವಿಮರ್ಶಾತ್ಮಕ ಟಿಪ್ಪಣಿಗಳು), ಪಲ್ಲವ ಪ್ರಕಾಶನ, ಪ್ರಜಾವಾಣಿ | Leave a comment »
ಚಿತ್ರ-ಕತೆ
ಕತೆಗಾರ, ಅನುವಾದಕ ಎ.ಎನ್.ಪ್ರಸನ್ನ ನಾಟಕ, ಕಿರುತೆರೆ, ಸಿನಿಮಾರಂಗದಲ್ಲೂ ತಮ್ಮ ಆಸಕ್ತಿ ಹರಿಯಬಿಟ್ಟವರು. ಅವರ `ಚಿತ್ರ-ಕತೆ’ ಪುಸ್ತಕ ಜಾಗತಿಕ ಸಿನಿಮಾಗಳ ಬಗ್ಗೆ ಮಾಹಿತಿ ನೀಡುವ ಪುಸ್ತಕಗಳಲ್ಲಿ ಒಂದು.
ಸಿನೆಮಾ ಒಂದು ಭಾಷೆ ಎಂದು ಹೇಳುತ್ತಲೇ ಅದೊಂದು ಕಲಾಪ್ರಕಾರ ಎನ್ನುವ ಲೇಖಕರು ಪುಸ್ತಕದಲ್ಲಿ ಅದನ್ನು ವಿವರಿಸಿದ್ದಾರೆ. ಸಿನೆಮಾ ಭಾಷೆಯ ರೀತಿ ಕೆಲಸ ಮಾಡುತ್ತದೆ. ಅದು ಹಾಗೆ ಕೆಲಸ ಮಾಡುವುದರಿಂದ ಕತೆಯನ್ನು ಪ್ರಸ್ತುತಪಡಿಸುವುದಿಲ್ಲ. ಕತೆಯನ್ನು ಹೇಳುತ್ತದೆ. ಅದರಿಂದಲೇ ಸಿನಿಮಾವನ್ನು ಅರ್ಥಮಾಡಿಕೊಳ್ಳುವುದು ಸುಲಭ ಎಂಬುದು ಅವರ ಅಭಿಪ್ರಾಯ. ಅಲ್ಲದೆ ಸಿನಿಮಾವನ್ನು ನೋಡುವುದಕ್ಕಿಂತ ನೋಡದ ಭಾಗದಿಂದಲೇ ಹೆಚ್ಚು ತಿಳಿಯಲು ಸಾಧ್ಯ. ಚಲನಚಿತ್ರಗಳಲ್ಲಿ ಈ ಗುಣ ತುಂಬಾ ಮುಖ್ಯ. ಅದರಿಂದಲೇ ಒಳ್ಳೆಯ ಮತ್ತು ಕೆಟ್ಟ ಸಿನಿಮಾ ಎಂದು ವರ್ಗೀಕರಣ ಮಾಡಲಾಗುತ್ತದೆ.
1895ರಲ್ಲಿ ಫ್ರಾನ್ಸ್ ನಲ್ಲಿ ಹುಟ್ಟಿದ ಸಿನಿಮಾ ಅನಂತರ ಬೆಳೆದು ಬಂದ ಬಗೆ, ನಿರೂಪಣೆಯಲ್ಲಿ ಆದ ಬದಲಾವಣೆ, ತಾಂತ್ರಿಕ ಅಂಶಗಳ ಅಳವಡಿಕೆ ಕುರಿತು ಅವರು ಜಗತ್ತಿನ ಪ್ರಮುಖ ಚಲನಚಿತ್ರಗಳ ಬಗ್ಗೆ ಬರೆಯುತ್ತಾ ವಿವರಿಸುತ್ತಾರೆ. ಮೊದಲ ಪತ್ತೇದಾರಿ ಸಿನಿಮಾ, ಮೊದಲ ಹಾಸ್ಯ ಸಿನಮಾ ಸೇರಿದಂತೆ ಪ್ರಾತಿನಿಧಿಕ ಚಿತ್ರಗಳು ಬೆಳೆದು ಬಂದ ಬಗ್ಗೆ ಅವರ ಲೇಖನಗಳು ಮಾಹಿತಿ ನೀಡುತ್ತವೆ. ಜಾಗತಿಕ ಸಿನಿಮಾಗಳಲ್ಲಿ ಶ್ರೇಷ್ಟ ಎನ್ನಿಸಿರುವ ಸಿಟಿಜೆನ್ ಕೇನ್, ಬೈಸಿಕಲ್ ಥೀಫ್, ರಾಶೋಮಾನ್, ಬಿಟ್ಟರ್ ಶುಗರ್, ಟಾಕ್ ಟು ಹರ್, ಬ್ಲೋ ಅಪ್ ಸೇರಿದಂತೆ ಹಲವು ಚಿತ್ರಗಳ ಮಾಹಿತಿಯನ್ನು ಸರಳವಾಗಿ ವಿವರಿಸುತ್ತಾರೆ. ಪುಸ್ತಕವನ್ನು ಮೆಚ್ಚಿ ಚಿತ್ರ ನಿದರ್ೇಶಕ ಗಿರೀಶ್ ಕಾಸರವಳ್ಳಿ ಬೆನ್ನುಪುಟದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿನಿಮಾದಲ್ಲಿ ಆಸಕ್ತಿ ಇರುವವರಿಗೂ ಇದು ಮಾಹಿತಿಯುಕ್ತ ಪುಸ್ತಕವಾಗಬಲ್ಲದು. ಚಿತ್ರ-ಕತೆ (ಜಗತ್ತಿನ ಸಿನಿಮಾಗಳ ಅವಲೋಕನ)
ಶೀರ್ಷಿಕೆ : ಚಿತ್ರ-ಕತೆ ಲೇಖಕರು : ಎ.ಎನ್.ಪ್ರಸನ್ನ ಪ್ರಕಾಶಕರು : ಚಿಂತನ ಪುಸ್ತಕ ಪುಟಗಳು :260 ಬೆಲೆ: ರೂ.140/-
ಕೃಪೆ : ಪ್ರಜಾವಾಣಿ
Filed under: ವಿಮರ್ಶೆ | Tagged: ಎ.ಎನ್.ಪ್ರಸನ್ನ, ಚಿಂತನ ಪುಸ್ತಕ, ಚಿತ್ರ-ಕತೆ, ಪ್ರಜಾವಾಣಿ | Leave a comment »
ಅಶೋಕ ವೃಕ್ಷ
ಟಿ.ಪಿ.ಅಶೋಕ ಕಳೆದ 15 ವರ್ಷಗಳಲ್ಲಿ ಬರೆದ 37 ವಿಮರ್ಶಾತ್ಮಕ ಲೇಖನಗಳ ಸಂಕಲನ `ಸಾಹಿತ್ಯ ಸಂಬಂಧ‘. ಆಧುನಿಕ ಕನ್ನಡ ಸಾಹಿತ್ಯದ ಅನೇಕ ಮುಖ್ಯ ಲೇಖಕರು, ಕೃತಿಗಳು ಮತ್ತು ಅನುಭವಗಳ ಸುತ್ತ ಹೆಣೆದಿರುವ ಬರಹಗಳಿವು. ಕಂಬಾರರಿಂದ ಶಂಕರ ಮೊಕಾಶಿಯವರೆಗೆ, ಚಿನು ಅಚಿಬೆಯಿಂದ ಚದುರಂಗರವರೆಗೆ ಈ ಪುಸ್ತಕ ವಿಸ್ತರಿಸುತ್ತದೆ.
ಕವಿತೆ, ಕತೆ, ಕಾದಂಬರಿ, ನಾಟಕ, ವಿಮರ್ಶೆ ಈ ವಿಭಾಗಗಳಲ್ಲಿ ಟಿ.ಪಿ.ಚಿಂತನೆಯ ಬೀಜ ಬಿತ್ತಿದ್ದಾರೆ. `ಸಾಹಿತ್ಯ ಅಧ್ಯಯನ ಶಿಬಿರಗಳಲ್ಲಿ ಓದುಗರೊಡನೆ ಅವರು ನಡೆಸಿರುವ ನೇರ ಸಂವಾದಗಳಿಂದ ಚೋದಿತವಾಗಿರುವ ಇಲ್ಲಿನ ಬಹಳಷ್ಟು ಬರಹಗಳು ತೋಂಡಿ ಮತ್ತು ಲಿಖಿತ ಸಂವಹನಗಳ ಅಂತರವನ್ನು ಅಳಿಸಿಹಾಕುವ ಮಹತ್ವಾಕಾಂಕ್ಷೆಯನ್ನು ಪ್ರಕಟಪಡಿಸುತ್ತವೆ‘ ಎನ್ನುತ್ತದೆ ಬೆನ್ನುಡಿ.
ಕೆ.ವಿ. ಅಕ್ಷರರ ಮುನ್ನುಡಿಯ ಕೆಲವು ಸಾಲುಗಳು. `ಆಗಾಗ ಮಾಧ್ಯಮದಲ್ಲಿ ಬರುವ ವಿಮರ್ಶೆಗಳು ಸಾಹಿತ್ಯದ ಉಲ್ಲೇಖ ಮಾಡುತ್ತವೆಯಾದರೂ, ಸರಳೀಕೃತ ಪರಿಚಯ ಮತ್ತು ಕೆಲವೊಮ್ಮೆ ತತ್ಕಾಲೀನ ರಾಜಕಾರಣದಲ್ಲಿ ಸಮರ್ಪಕವೆನ್ನಿಸುವ ಮೇಲುಮೇಲಿನ ಪ್ರತಿಕ್ರಿಯೆ – ಇದಕ್ಕಿಂತ ಹೆಚ್ಚು ಮಾಡಿದ್ದು ತೀರ ಅಪರೂಪ. ಈಚೀಚಿಗಂತೂ ನಮ್ಮ ಮಾಧ್ಯಮಗಳಲ್ಲಿ ಸಾಹಿತ್ಯಕ್ಕಿಂತ ಸಾಹಿತ್ಯದ ರಾಜಕಾರಣವನ್ನೇ ಮೇಲೆತ್ತಿ ರಂಜಿಸುವ ಪರಿ ಎದ್ದು ಕಾಣುತ್ತದೆ‘.
ಅಶೋಕರ ಹಲವು ಉತ್ತಮ ಬರಹಗಳಿರುವ ಪುಸ್ತಕವಿದು, ಅಕ್ಷರ ಖಜಾನೆ ಎಂದು ವಿಮರ್ಶಕರು ಖಂಡಿತಾ ಮೆಚ್ಚಬಹುದು. ಸಾಹಿತ್ಯದ ಹುಚ್ಚರಿದ್ದರೆ ಖಂಡಿತಾ ಪ್ರಿಯವಾಗುತ್ತದೆ.
ಶೀರ್ಷಿಕೆ: ಸಾಹಿತ್ಯ ಸಂಬಂಧ ಲೇಖಕರು: ಟಿ.ಪಿ.ಅಶೋಕ ಪ್ರಕಾಶಕರು: ಅಕ್ಷರ ಪ್ರಕಾಶನ ಪುಟಗಳು:360 ಬೆಲೆ:ರೂ.215/-
ಕೃಪೆ : ಕನ್ನಡ ಪ್ರಭ
Filed under: ವಿಮರ್ಶೆ | Tagged: ಅಕ್ಷರ ಪ್ರಕಾಶನ, ಕನ್ನಡ ಪ್ರಭ, ಟಿ.ಪಿ.ಅಶೋಕ, ಸಾಹಿತ್ಯ ಸಂಬಂಧ | Leave a comment »
ಅನ್ಯೋನ್ಯ
ಜಿ.ಎನ್.ಆರ್. ಅವರ ಈ ವಿಮರ್ಶಾ ಕೃತಿಯ ವೈಶಿಷ್ಟ್ಯವೆಂದರೆ, ಅನಂತಮೂರ್ತಿಯವರ `ಭವ್ಯ‘, ಕುಂವೀ ಅವರ `ಅರಮನೆ‘ಯಂತಹ ಲೇಟೆಸ್ಟ್ ಕೃತಿಗಳ ಕುರಿತು ಬರಹಗಳಿರುವುದು. ಯಾವ ತೂಕದ ವಿಮರ್ಶಾ ಕೃತಿ ತೆಗೆದುಕೊಂಡರೂ ಅದರಲ್ಲಿನ್ನೂ ಯಶೋಧರನ ಜನ್ನ ಚರಿತ್ರೆ, ಆನಂದಕಂದರ ಕತೆಗಳು ಮುಂತಾದ ತಲೆಬರಹಗಳನ್ನೂ ನೋಡಿ ಬೇಜಾರು ಬರುತ್ತಿರುವಾಗ ಇಂತಹದೊಂದು ಪ್ರಸ್ತುತತೆ ಅವಶ್ಯ.
ರಂಗನಾಥರಾವ್ ಪತ್ರಿಕೆಯೊಂದರ ಪುರವಣಿ ಸಂಪಾದಕರೂ ಆಗಿದ್ದ ಕಾರಣ ಹೀಗೆ ಪ್ರೆಸ್ ನಿಂದ ಹೊರಬೀಳುವ ಗರಿ ಗರಿ ಕಾದಂಬರಿಗಳ ಕಡೆ ಅವರ ಗಮನ ಹರಿದಿದ್ದೀತು. ಆದರೆ ಅವರ ಶೈಲಿ ಮಾತ್ರ ಗರಿ ಗರಿಗೆ ವಿರುದ್ಧವಾಗಿದೆ. ಅಂದರೆ ಸಾಮಾನ್ಯೀಕರಣದ ಪದಗಳಿಂದ, ಚಿಂತನೆಗಳಿಂದ, ಹಿಂದೆ-ಮುಂದೆ ಯಾವ ಅರ್ಥ ವಿನ್ಯಾಸ, ಭಾವ ವಿಸ್ತಾರಗಳನ್ನೂ ಹೊಂದಿರದ ಚುಟುಕು ವಾಕ್ಯಗಳಿಂದ ಕುಗ್ಗಿದೆ. ಉದಾಹರಣೆಗಾಗಿ ನೀವೆಲ್ಲ ಓದಿರಬಹುದಾದ ವಿವೇಕ ಶಾನಭಾಗರ ಇತ್ತೀಚಿನ ಕಾದಂಬರಿ `ಒಂದು ಬದಿ ಕಡಲು‘ ಕುರಿತು ಜಿ.ಎನ್.ಆರ್. ಹೀಗೆ ಬರೆಯುತ್ತಾರೆ: ಕಾದಂಬರಿ ಸಾಂಪ್ರದಾಯಿಕ ಪರಿಕಲ್ಪನೆಯಲ್ಲಿ ವಿಮರ್ಶೆಯ ನೆರವಿಗೆ ಒದಗಿಬರುವ ಸೂತ್ರಬದ್ಧ ಕತೆಯಾಗಲೀ, ಕಪ್ಪು-ಬಿಳುಪು-ವರ್ಣರಂಜಿತ ಪಾತ್ರಗಳಾಗಲೀ, ಗೊತ್ತು ಗುರಿಗಳಾಗಲೀ, ಇವು ಯಾವುದೂ ಇಲ್ಲಿ ಢಾಳವಗಿ ಗೋಚರಿಸುವುದಿಲ್ಲ! (ಆಶ್ಚರ್ಯಸೂಚಕ ಚಿಹ್ನೆ ನಾವು ಹಾಕಿದ್ದು).
ಶೀರ್ಷಿಕೆ: ಅನ್ಯೋನ್ಯ ಲೇಖಕರು: ಜಿ.ಎನ್.ರಂಗನಾಥ ರಾವ್ ಪ್ರಕಾಶಕರು: ಸಪ್ನ ಬುಕ್ ಹೌಸ್ ಪುಟಗಳು: 172 ಬೆಲೆ: ರೂ.85/-
ಕೃಪೆ : ವಿಜಯ ಕರ್ನಾಟಕ
Filed under: ವಿಮರ್ಶೆ | Tagged: ಅನ್ಯೋನ್ಯ, ಜಿ.ಎನ್.ರಂಗನಾಥ ರಾವ್, ವಿಜಯ ಕರ್ನಾಟಕ, ಸಪ್ನ ಬುಕ್ ಹೌಸ್ | Leave a comment »
ವಿಮರ್ಶೆ : ನಮ್ಮಲ್ಲಿ ಸಸಿ ನೆಟ್ಟ ಕೂಡಲೇ ಒಣಗಿ ಹೋಗುತ್ತಿರುವ ದುರಂತ
ವಿಫುಲವಾಗಿ ಒಂದೇ ಸಮನಾಗಿ ವಿಮರ್ಶಾ ಬರವಣಿಗೆಯನ್ನು ಮಾಡಿಕೊಂಡು ಬಂದಿರುವ ಹಿರಿಯ ವಿಮರ್ಶಕ ಜಿ.ಎಸ್.ಆಮೂರ, ತಮ್ಮ ಈ ಸಂಕಲನಕ್ಕೆ `ಪ್ರಕಾರ,ಪ್ರೇರಣೆ, ಪ್ರಯೋಗ‘ ಎಂಬ ಅಡಿಸಾಲನ್ನು ಕೊಟ್ಟಿದ್ದಾರೆ.
`ಪ್ರಕಾರಗಳು‘ ವಿಭಾಗದಡಿ ಸಣ್ಣ ಕತೆ ಒಂದು ವ್ಯಾಖ್ಯೆ ತರದ ಎವರ್ ಗ್ರೀನ್ ವಿಷಯಗಳಿವೆ. ಕಾವ್ಯದಲ್ಲಿ ಆಕೃತಿ ಹಾಗೂ ಆಶಯ, ಕಾದಂಬರಿಯ ಸ್ವರೂಪ, ನಾಟಕ ಕುರಿತ ಲೇಖನಗಳಲ್ಲಿ ಅರಿಸ್ಟಾಟಲ್ ಉಲ್ಲೇಖವಿರುವಂತೆ ಭಾರತೀಯ ಕಾವ್ಯ ಮೀಮಾಂಸೆಯ ಉಲ್ಲೇಖವೂ ಇದೆ.
`ಪ್ರೇರಣೆಗಳು‘ ವಿಭಾಗದಲ್ಲಿ ಎಮರ್ಸನ್ ನಲ್ಲಿ ರೂಪದ ಕಲ್ಪನೆ, ಟಿ.ಎಸ್.ಎಲಿಯೆಟ್ ಕಾವ್ಯ ಮೀಮಾಂಸೆ ಜತೆ ತುಸು ಲೇಟೆಸ್ಟ್ ಎನ್ನಬಹುದಾದ ಎಡ್ವರ್ಡ್ ಸೈದ್ ಕುರಿತಾಗಿಯೂ ಬರಹಗಳಿವೆ.
`ಪ್ರಯೋಗಗಳು‘ ವಿಭಾಗದಲ್ಲಿ ಆಧುನಿಕ ಕನ್ನಡ ವಿಮರ್ಶೆಯ ಒಲವುಗಳನ್ನು ಡಿ.ಆರ್.ನಾಗರಾಜ್ ವರೆಗೆ ಟ್ರೇಸ್ ಮಾಡಲಾಗಿದೆ. ಆಮೇಲೆ ಶೂನ್ಯ.
ಅದಕ್ಕೆ ಕಾರಣಗಳೇನೆಂಬುದನ್ನು ಲೇಖಕರು ಸಮಾರೋಪದಲ್ಲಿ ಗುರುತಿಸುತ್ತಾರೆ: ಇಂದು ನಮಗೆ ಬೇಕಾದುದು ವಿಮರ್ಶೆಯಲ್ಲ, ಒಳ್ಳೆಯ ಕತೆ, ಕಾದಂಬರಿ, ಕಾವ್ಯ, ನಾಟಕಗಳು ಎನ್ನುವ ವಾದ.
ಸೃಜನಶೀಲ ಸಾಹಿತಿಗಳಲ್ಲಿ ವಿಮರ್ಶಕನ ಕುರಿತು ಉಂಟಾಗಿರುವ ಪ್ರೀತಿ-ದ್ವೇಷಗಳ ಸಂಬಂಧ, ಒಂದು ಘಟ್ಟದಲ್ಲಿ ಅದಕ್ಕೆ ಅಂಟಿಕೊಂಡ ಎಲಿಟಿಸ್ಟ್ ಪ್ರವೃತ್ತಿ…ಪರಿಣಾಮ, ಯುರೋಪ್, ಅಮೇರಿಕಾಗಳಲ್ಲಿ ಹುಲುಸಾಗಿ ಬೆಳೆಯುತ್ತಿರುವ ವಿಮರ್ಶೆ ನಮ್ಮಲ್ಲಿ ಸಸಿ ನೆಟ್ಟ ಕೂಡಲೇ ಒಣಗಿ ಹೋಗುತ್ತಿರುವ ದುರಂತ. ಇಂತಹದೊಂದು ಪ್ರನೌನ್ಸ್ ಮೆಂಟ್ ಆಮೂರರಂಥ ಹಿರಿಯ ವಿಮರ್ಶಾ ವ್ಯವಸಾಯಿಯಿಂದಲೇ ಬಂದಿರುವುದು ಸನ್ನಿವೇಶದ ಗಂಭೀರತೆಯನ್ನು ಮನದಟ್ಟುಮಾಡುತ್ತದೆ.
ಶೀರ್ಷಿಕೆ: ಆಧುನಿಕ ಕನ್ನಡ ವಿಮರ್ಶೆ ಲೇಖಕರು: ಜಿ.ಎಸ್.ಅಮೂರ ಪ್ರಕಾಶಕರು: ಸಪ್ನ ಬುಕ್ ಹೌಸ್ ಪುಟಗಳು:271 ಬೆಲೆ: ರೂ.130/-
ಕೃಪೆ : ವಿಜಯ ಕರ್ನಾಟಕ
Filed under: ವಿಮರ್ಶೆ | Tagged: ಆಧುನಿಕ ಕನ್ನಡ ವಿಮರ್ಶ, ಜಿ.ಎಸ್.ಅಮೂರ, ವಿಜಯ ಕರ್ನಾಟಕ, ಸಪ್ನ ಬುಕ್ ಹೌಸ್ | Leave a comment »