ವಿಶ್ವ ಆರೋಗ್ಯದಿನದ ಶುಭಾಶಯಗಳೊಂದಿಗೆ

ಭಾರತದಲ್ಲಿ ಜನಾರೋಗ್ಯ ಸಾಧನೆ ದೇಶ ಸ್ವಾತಂತ್ರ್ಯ ಪಡೆದು ಆರು ದಶಕಗಳೇ ಕಳೆದರೂ ಸಾಧ್ಯವಾಗದಿರುವುದು ವಿಷಾದದ ಸಂಗತಿ. ನಮ್ಮ ದೇಶದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡುವ ಹಣ ಬಹಳ ಕಡಿಮೆ. ಬಡತನ, ಅನಕ್ಷರತೆ ಹೆಚ್ಚಾಗಿರುವ ಈ ದೇಶದಲ್ಲಿ ಸಹಜವಾಗಿಯೇ ರೋಗರುಜಿನಗಳು ಕೂಡ ಅಧಿಕ. ಔಷಧಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಾಗಿರುವುದರಿಂದ ಮತ್ತು ಸರ್ಕಾರವೂ ಕೂಡ ಖಾಸಗೀಕರಣ ನೀತಿಗೆ ಪ್ರೋತ್ಸಾಹ ಕೊಡುತ್ತಿರುವುದರಿಂದ ರೋಗ ಚಿಕಿತ್ಸೆಗೆ ತಗಲುವ ವೆಚ್ಚಕ್ಕಿಂತ ರೋಗಪತ್ತೆಯ ವಿಧಾನಗಳಿಗೆ ಜನತೆ ಹಣ ಹೆಚ್ಚು ಖರ್ಚು ಮಾಡಬೇಕಾದ ಅನಿವಾರ್ಯತೆ ಸೃಷ್ಟಯಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಬಡಜನರಿಗೆ ಮತ್ತು ಅನಕ್ಷರಸ್ಥರಿಗೆ ಆರೋಗ್ಯ ವ್ಯವಸ್ಥೆ ಕಡಿಮೆ ಖರ್ಚಿನಲ್ಲಿ ಕೈಗೆಟಕುತ್ತಿಲ್ಲ. ಆರೋಗ್ಯ ಎಂಬುದು ಅವರ ಪಾಲಿಗೆ ಮರೀಚಿಕೆಯಾಗಿದೆ. ಭಾರತೀಯ ವೈದ್ಯಪದ್ಧತಿಯ ಚಿಕಿತ್ಸಾ ವಿಧಾನಗಳನ್ನು ಯಾವ ಪ್ರಮಾಣದಲ್ಲಿ ಬಳಸಬಹುದಿತ್ತೋ ಅಷ್ಟರಮಟ್ಟಿಗೆ ಬಳಕೆಯಾಗದಿರುವುದು ಬೇಸರದ ಸಂಗತಿ.

ಜನಾರೋಗ್ಯ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಮತ್ತು ಔಷಧಿ ಕ್ರಿಯಾ ಸಮಿತಿಯಲ್ಲಿ ಸಕ್ರಿಯರಾಗಿರುವ ಡಾ. ಪ್ರಕಾಶ್ ಸಿ. ರಾವ್ ರವರು ರಚಿಸಿರುವ `ಜನಾರೋಗ್ಯದ ಸವಾಲುಗಳು’ ಪುಸ್ತಕ ವೈದ್ಯರ ಕಣ್ಣು ಹಾಗೂ ಮನಸ್ಸನ್ನು ತೆರೆಸುವಂತಿದೆ. ಪ್ರತಿಯೊಂದು ಅಧ್ಯಾಯದಲ್ಲಿಯೂ ಲೇಖಕರ ಜನಪರ ಕಾಳಜಿ ವ್ಯಕ್ತವಾಗುತ್ತದೆ. ವೈದ್ಯ ವೃತ್ತಿ ವ್ಯಾಪಾರೀಕರಣಗೊಂಡಿರುವ ಇಂದಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರ ಮತ್ತು ಔಷಧಿಗಳ ಜಗತ್ತಿನ ಹಲವು ಆಯಾಮಗಳ ಕುರಿತು ಈ ಪುಸ್ತಕ ಓದುಗರೆದುರು ಅನೇಕ ವಿಷಯಗಳನ್ನು ಅನಾವರಣಗೊಳಿಸುತ್ತಾ ಹೋಗುತ್ತದೆ. ವೃತ್ತಿಯಲ್ಲಿ ನಿರತರಾದ ಪ್ರತಿಯೊಂದು ವೈದ್ಯರೂ ಓದಲೇಬೇಕಾದಂತಹ ಕೃತಿಯಿದು. ಕೇವಲ ಓದುವುದು ಮಾತ್ರವಲ್ಲ ವೃತ್ತಿ ಬದುಕಿನಲ್ಲೂ ಅಳವಡಿಸಿಕೊಂಡಲ್ಲಿ ಡಾ. ಪ್ರಕಾಶ್ ರಾವ್ ರವರ ಶ್ರಮ, ಪ್ರಯತ್ನ ಸಫಲತೆ ಪಡೆಯುತ್ತದೆ. ವೈದ್ಯರು ಮಾತ್ರವಲ್ಲ ಜನಸಾಮಾನ್ಯರ ಈ ವಿಷಯಗಳನ್ನು ಅರಿತುಕೊಂಡಲ್ಲಿ ಒಳಿತು. ಸರ್ಕಾರದ ನೀತಿಗಳನ್ನು ರೂಪಿಸುವವರು, ಮಂತ್ರಿಗಳು, ಅಧಿಕಾರ ವರ್ಗದವರೂ ಈ ಪುಸ್ತಕ ಓದಿದಲ್ಲಿ ನೀತಿ ನಿಯಮಾವಳಿ ರೂಪಿಸುವಾಗ ಬದಲಾವಣೆ ತರಲು ಸಾಧ್ಯವಾಗಬಹುದು.

`ಜನಾರೋಗ್ಯದ ಸವಾಲುಗಳು’ ಪುಸ್ತಕದಲ್ಲಿ ಲೇಖಕರು ತಿಳಿಸಿರುವ ಕೆಮ್ಮಿನ ಔಷಧಿಗಳು, ಸಂಮಿಶ್ರ ಔಷಧಿಗಳ ಕುರಿತ ವಿಚಾರ ಓದುಗರನ್ನು ಬೆಚ್ಚಿಬೀಳಿಸುತ್ತದೆ. ಜನಪರವಾದ ಔಷಧಿ ನೀತಿ ಜಾರಿಗೊಳಿಸುವಲ್ಲಿ ಸರ್ಕಾರ ಕುರುಡು ಮತ್ತು ಕಿವುಡಾಗುವುದು ದುಃಖಕರ ಸಂಗತಿ. ಲಸಿಕಾ ಕಾರ್ಯಕ್ರಮ ಜಾರಿಗೊಳಿಸುವಾಗ ನಿಗದಿತ ನಿಯಮಗಳನ್ನು ಅನುಸರಿಸದೇ ಜನರ ಜೀವದೊಡನೆ ಆಟವಾಡುವ ವ್ಯವಸ್ಥೆ ಮುಂದುವರೆಯುತ್ತಿರುವುದು ನಿಜಕ್ಕೂ ಅಪಾಯಕಾರಿ. ಮಹಿಳೆಯರ ಮತ್ತು ಮಕ್ಕಳ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಿದ್ದಲ್ಲಿ ಮಾತೃಮರಣ ಮತ್ತು ಶಿಶುಮರಣಗಳನ್ನು ತಡೆಗಟ್ಟಬಹುದಾಗಿದೆ. ಇಡೀ ದೇಶದ ಜನರಿಗೆ ಶುದ್ಧವಾದ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಶೌಚಾಲಯ ನಿರ್ಮಾಣ ಸಾಧ್ಯವಾದಲ್ಲಿ ಜನಾರೋಗ್ಯ ಕಷ್ಟವೆನಿಸಲಾರದು.

– ಡಾ. ವಸುಂಧರ ಭೂಪತಿ (ಅಧ್ಯಕ್ಷರು, ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು)
– ಪುಸ್ತಕದ ಮುನ್ನುಡಿಯಿಂದ

ಶೀರ್ಷಿಕೆ: ಜನಾರೋಗ್ಯದ ಸವಾಲುಗಳು ಲೇಖಕರು:ಡಾ. ಪ್ರಕಾಶ್ ಸಿ ರಾವ್, ಪ್ರಕಾಶಕರು: ಚಿಂತನ ಪುಸ್ತಕ ಪುಟ:124 ಬೆಲೆ:ರೂ.60/-

ಮಹಿಳಾ ಆರೋಗ್ಯ; ಒಂದು ಮರುಚಿಂತನೆ

mahilaa aarogya ondu maruchinthane

ಡಾ.ಕೆ.ಸರೋಜಾ ಅವರು ಮಹಿಳೆಯರ ಆರೋಗ್ಯ ಕುರಿತಂತೆ ಹಲವಾರು ಲೇಖನಗಳನ್ನೂ ಪುಸ್ತಕಗಳನ್ನೂ ಬರೆದಿದ್ದಾರೆ. ಮಹಿಳೆಯರ ಆರೋಗ್ಯದ ಬಗ್ಗೆ ಆಳವಾದ ತಿಳುವಳಿಕೆಯನ್ನು ಅವರು ಪಡೆದು `ಮಹಿಳಾ ಆರೋಗ್ಯ; ಒಂದು ಮರುಚಿಂತನೆ’ ಎಂಬ ಗ್ರಂಥವನ್ನು ರಚನೆ ಮಾಡಿದ್ದಾರೆ. `ಜೀವನ್ ಭದ್ರಾಣಿ ಪಶ್ಯತಿ’ ಎಂಬ ಹಳೆಯ ಮಾತೊಂದುಂಟು. ಪ್ರತಿಯೊಬ್ಬರೂ ತಮ್ಮ ಸ್ವಾಸ್ಥ್ಯದ ಕಡೆ ಲಕ್ಷ್ಯ ವಹಿಸಬೇಕು. ಒಂದು ಪಕ್ಷ ಲಕ್ಷ್ಯ ವಹಿಸದಿದ್ದರೆ ಜೀವಕ್ಕೆ ಹಾನಿ. ಆ ಹಾನಿಯಿಂದ ಕುಟುಂಬದ ಹಾನಿ. ಹೀಗಾಗಿ, ಇದೊಂದು ಸ್ವಾಸ್ಥ್ಯದ ದುರಂತದಮಾಲೆ ಆದೀತು. ಮಹಿಳೆಯರ ದೇಹ ಮತ್ತು ವಿಶಿಷ್ಟವಾದುದು. ಪ್ರಸ್ತುತ ಗ್ರಂಥದಲ್ಲಿ ಮನೋದೇಹಿಯಾದ ಮಹಿಳೆಯರ ಆರೋಗ್ಯದ ಬಗೆಗೆ ಸೂಕ್ಷ್ಮವೂ, ಸ್ಥೂಲವೂ ಆದ ವಿವರಗಳಿವೆ. ಪ್ರತಿಯೊಬ್ಬ ಮಹಿಳೆಯೂ ಜೀವನಕ್ರಮದಲ್ಲಿ ವಹಿಸಬೇಕಾದ ಎಚ್ಚರಿಕೆಯನ್ನು ಲೇಖಕರು ಸೂಚಿಸಿದ್ದಾರೆ. ದೇಹದ ಸ್ವಾಸ್ಥ್ಯವು ಮನಸ್ಸಿನ ನೆಮ್ಮದಿಗೆ ಕಾರಣವಾಗುವ ವಿವಿಧ ಬಗೆಗಳನ್ನು ಸರಳವಾಗಿಯೂ ಹಿತವಾಗಿಯೂ ನಿರೂಪಿಸಿದ್ದಾರೆ. ಈ ಗ್ರಂಥದ ಓದಿನಿಂದ ಮಹಿಳೆಯರು ಜೀವನದಲ್ಲಿ ವಹಿಸಬೇಕಾದ ಎಚ್ಚರದ ಬಗೆಗೆ ಹೊಸ ತಿಳುವಳಿಕೆ ಒಡಮೂಡೀತು ಎಂದು ನಾನು ತಿಳಿದಿದ್ದೇನೆ. ಇಂಥದೊಂದು ಉಪಯುಕ್ತ ಗ್ರಂಥವನ್ನು ಬರೆದುಕೊಟ್ಟ ಡಾ. ಕೆ. ಸರೋಜಾ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ವಂದನೆಗಳು.
– ಬೆನ್ನುಡಿಯಿಂದ
ಶೀರ್ಷಿಕೆ : ಮಹಿಳಾ ಆರೋಗ್ಯ – ಒಂದು ಮರುಚಿಂತನೆ ಲೇಖಕರು:ಡಾ.ಕೆ.ಸರೋಜಾ ಪ್ರಕಾಶಕರು:ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ  ಪುಟ:156 ಬೆಲೆ:ರೂ.100/-

ಹೆಲ್ತ್ ಕೇರ್

scan0038

ಆರೋಗ್ಯ ಸಂಬಂಧಿ ಲೇಖನಗಳು ಯಾವತ್ತೂ ಸಕಾಲಿಕವಾದದ್ದರಿಂದ ಅವು ಸಾರ್ವಕಾಲಿಕವೂ! ಹಾಗಂತ ಅನಾರೋಗ್ಯದ ಬಗ್ಗೆ ಆರೋಗ್ಯಕರ ಲೇಖನಗಳನ್ನು ಬರೆಯುವುದು ಸುಲಭವೇನಲ್ಲ. ಸರಳತೆ ಮತ್ತು ಸ್ಪಷ್ಟತೆ ಅಲ್ಲಿ ಬಹಳ ಮುಖ್ಯ. ಇಂತಹ ಪುಸ್ತಕಗಳಿಗೆ ಮಾರುಕಟ್ಟೆಯಲ್ಲಿ ಸದಾ ಬೇಡಿಕೆ. ಕಾಯಿಲೆಗಳ ಬಗೆಗಿನ ಸಂಶಯ, ಪ್ರಶ್ನೆಗಳನ್ನು ನಿವಾರಿಸಿ ಸಮಾಧಾನ ನೀಡುವಲ್ಲಿ ಇವುಗಳ ಪಾಲು ದೊಡ್ಡದು. ಆರು ಭಾಗಗಳಲ್ಲಿ ಹರಡಿಕೊಂಡಿರುವ ಈ ಪುಸ್ತಕದಲ್ಲಿ ಕಣ್ಣಿನ ನಾನಾ ತೊಂದರೆಗಳ ಬಗ್ಗೆಯೇ ಇಪ್ಪತ್ತು ಲೇಖನಗಳಿವೆ. ಪತ್ರಿಕೆಯಲ್ಲಿ ಆಗಾಗ ಪ್ರಕಟವಾಗಿರುವ ಈ ಲೇಖನಗಳು, ಪುಸ್ತಕದಲ್ಲಿ ಒಟ್ಟಾಗಿ ಒಂದು ತರಹದ ಸಮಗ್ರತೆ ಪ್ರಾಪ್ತವಾಗಿದೆ. ಕೆಲವು ಲೇಖನಗಳಿಗೆ ಚಿತ್ರ ಸಹಾಯವೂ ಇರುವುದು ಓದಿಗೆ ಉಪಯೋಗಕಾರಿ. ನಾನಾ ಕಾಯಿಲೆಗಳ ಬಗೆಗಿನ ಪ್ರಾಥಮಿಕ ಮಾಹಿತಿ ಇಲ್ಲಿ ಸಿಗುತ್ತದೆ. ಪ್ರತಿ ಲೇಖನದಲ್ಲೂ ಉಪಶೀರ್ಷಿಕೆಗಳನ್ನು ನೀಡುತ್ತಾ, ಬಹಳ ಸ್ಪಷ್ಟವಾಗಿ, ಬಿಡಿಬಿಡಿಯಾಗಿ ವಿವರಗಳಿರುವುದು ಈ ಪುಸ್ತಕದ ವೈಶಿಷ್ಟ್ಯ.

ಶೀರ್ಷಿಕೆ: ಹೆಲ್ತ್ ಕೇರ್ ಲೇಖಕರು: ಪ್ರಕಾಶ್ ಹೆಬ್ಬಾರ ಪ್ರಕಾಶಕರು: ವಿಕ್ರಂ ಪ್ರಕಾಶನ ಪುಟಗಳು: 180 ಬೆಲೆ:ರೂ.95/-

ಕೃಪೆ : ವಿಜಯ ಕರ್ನಾಟಕ

ಪ್ರಕೃತಿ ಜೀವನ

scan0034-1

ಪ್ರಕೃತಿ ಜೀವನ ತಜ್ಞರಾಗಿ ಪ್ರಾಕೃತಿಕ ಚಿಕಿತ್ಸಾ ಕೇಂದ್ರದ ನಿರ್ದೇಶಕರಾಗಿ ಸುದೀರ್ಘ ಅನುಭವ ಮತ್ತು ಪರಿಶ್ರಮಗಳ ಫಲವಾಗಿ ಮೂಡಿದ ಕೃತಿ ಪ್ರಕೃತಿ ಜೀವನ.

ಇವತ್ತು ನಾನಾ ಕಾರಣಗಳಿಂದಾಗಿ ಮಾನವಕುಲವೇ ಪ್ರಕೃತಿಗೆ ಬೆನ್ನು ಹಾಕಿ ಹೊರಟಿದೆ. ಪ್ರಕೃತಿಯಿಂದ ದೂರವಾದಂತೆ ಅನೇಕ ಕಾಯಿಲೆಗಳ ಸಮೀಪ ಹೋಗಿದ್ದೇವೆ. ಈ ಎಲ್ಲಾ ಸಮಸ್ಯೆಗಳಿಗೆ ಮತ್ತೆ ಪ್ರಕೃತಿಯೇ ಅನೇಕ ಪರಿಹಾರಗಳನ್ನು ಒದಗಿಸಬಲ್ಲುದು.

ಈ ಪುಸ್ತಕದಲ್ಲಿ ಲೇಖಕರು ಚಿಕ್ಕಪುಟ್ಟವೆನ್ನಬಹುದಾದ ಉದಾಹರಣೆಗಳ ಮೂಲಕ ಮನಸಿನಾಳಕ್ಕೆ ಇಳಿಯುವಂತೆ ವಿವರಿಸುತ್ತಾರೆ. ನೋವಿನ ಮೂಲ, ಕಾಯಿಲೆಯ ಕಾರಣಗಳನ್ನು ಹುಡುಕುತ್ತಾ ನಂತರ ಪರಿಹಾರಗಳ ಕಡೆಗೆ ಲಕ್ಷ್ಯ ಕೊಡಬೇಕು ಎನ್ನುತ್ತಾ ಮುಳ್ಳು ಚುಚ್ಚಿ ನೋವು ಉಂಟಾದರೆ ನೋವಿಗೆ ಕಾರಣವಾದ ಮುಳ್ಳು ದೇಹದಲ್ಲಿ ಉಳಿದುಕೊಂಡಿದ್ದರೆ ಅದನ್ನು ಮೊದಲು ತೆಗೆಯುವ ಪ್ರಯತ್ನಮಾಡಬೇಕು. ಹಾಗೆ ಮಾಡದೇ ಮದ್ದು ನೀಡುವುದು ಪ್ರಯೋಜನಕ್ಕೇ ಬಾರದು ಎನ್ನುತ್ತಾರೆ. ನಾವು ತಿನ್ನುವ ಆಹಾರ ತಿನ್ನುವ ಕ್ರಮ, ಜೀರ್ಣಕ್ರಿಯೆ ಇವೆಲ್ಲ ಸರಿಯಾಗಬೇಕಾದರೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ, ಪರಿಸರದ ಸವಲತ್ತುಗಳನ್ನು ಸರಿಯಾಗಿ ಬಳಸುತ್ತಾ ಹೇಗೆ ನೆಮ್ಮದಿಯ ಜೀವನ ನಡೆಸಬಹುದು ಎಂಬುದನ್ನು ಈ ಕೃತಿ ಬಹಳ ಸೊಗಸಾಗಿ ತಿಳಿಸುತ್ತದೆ. ಜೀವ ಶಕ್ತಿಯ ಬಳಕೆ, ನೀರು, ಗಾಳಿ, ಸೂರ್ಯ ಹೇಗೆ ನಮ್ಮ ಜೀವನಕ್ಕೆ ಪ್ರಯೋಜನಕಾರಿ ಎಂಬ ವಿಚಾರಗಳ ಬಗ್ಗೆ ತುಂಬ ನವಿರಾಗಿ ತಿಳಿಸುತ್ತಾರೆ. ಚಿಕ್ಕ ಮಕ್ಕಳು ಕೂಡಾ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.

ಶೂನ್ಯ ಎಂಬ ಅಧ್ಯಾಯದಲ್ಲಿ ಉಪವಾಸದ ಬಗ್ಗೆ ಬರೆಯುತ್ತಾ ವ್ಯಾಕ್ಯೂಂ ಕ್ಲೀನರ್ ಹೇಗೆ ಶೂನ್ಯದಿಂದಲೇ ಕಸದ ಕಣವೊಂದನ್ನೂ ಬಿಡದೆ ಶುದ್ಧಗೊಳಿಸುತ್ತದೆಯೋ ಹಾಗೆ ಶೂನ್ಯ ದೇಹವನ್ನು ಎಲ್ಲ ಕೊಳೆಗಳಿಂದ ಮುಕ್ತಗೊಳಿಸುತ್ತದೆ. ಅಂದರೆ ಶೂನ್ಯ ಅಷ್ಟು ಶಕ್ತಿಶಾಲಿ ಎಂಬ ಅರಿವನ್ನು ಕೊಡುತ್ತಾರೆ. ಇಂತಹ ಅನೇಕ ವಿಚಾರಗಳು ಈ ಪುಸ್ತಕದಲ್ಲಿವೆ. ಆರೋಗ್ಯ ಪರಿಸರದ ಬಗ್ಗೆ ಕಾಳಜಿ ಇರುವ ಈ ಪುಸ್ತಕ ನಮ್ಮ ಸಂಗ್ರಹದಲ್ಲಿದ್ದರೆ ಬಹಳ ಪ್ರಯೋಜನಕಾರಿ.

ಶೀರ್ಷಿಕೆ: ಪ್ರಕೃತಿ ಜೀವನ ಲೇಖಕರು: ಡಾ.ಹೊ.ಶ್ರೀನಿವಾಸಯ್ಯ ಪ್ರಕಾಶಕರು: ಪ್ರಸಾರಾಂಗ, ಕನ್ನಡ ವಿ. ವಿ.,ಹಂಪಿ ಪುಟಗಳು: 84 ಬೆಲೆ:ರೂ. 60/-

ಕೃಪೆ : ಉದಯವಾಣಿ

ಬೈ ದ ಡಾಕ್ಟರ್, ಫಾರ್ ದ ಡಾಕ್ಟರ್, ಥಟ್ ಅಂತ ಕೊಳ್ಳಿ!

manasvi11

ಐದಕ್ಕಿಂತಲೂ ಹೆಚ್ಚು ಬಾರಿ ಮರುಮುದ್ರಣಗೊಂಡಿರುವ ಡಾ.ಸಿ.ಆರ್.ಚಂದ್ರಶೇಖರ್ ರ ಕೃತಿಗಳ ಸಂಖ್ಯೆ 30. ಸಿ.ಆರ್.ಸಿ. ಒಟ್ಟು 159 ಪುಸ್ತಕಗಳು ಒಂದಕ್ಕಿಂತ ಹೆಚ್ಚಿನ ಮರುಮುದ್ರಣ ಕಂಡಿವೆ. ಅಂದರೆ ಶೇ.75ಕ್ಕಿಂತಲೂ ಹೆಚ್ಚಿನ ಪುಸ್ತಕಗಳು ಮರುಮುದ್ರಣವನ್ನು ಕಂಡಿವೆ ಎಂದಂತಾುತು.

ಹೀಗೆ ಡಾ. ನಾ. ಸೋಮೇಶ್ವರರು ಸಿ.ಆರ್.ಸಿ. ಯವರ ಕುರಿತು ಬರೆದ `ಮನಸ್ವಿಯಲ್ಲಿ ಲೆಕ್ಕ ಹಾಕುತ್ತಾರೆ. `ಮನಸ್ವಿ ಸಿ.ಆರ್.ಸಿ.ಯವರ 60 ವರ್ಷಗಳ ಬದುಕು-ಬರಹವನ್ನು ಸೋಮೇಶ್ವರರು ವಿಶಿಷ್ಟವಾಗಿ ದಾಖಲಿಸಿರುವ ಪುಸ್ತಕ.

ಸೋಮೇಶ್ವರರು ಪ್ರೀತಿುಂದ ಹೊಗಳಿಕೆಗಳಲ್ಲೇ ಈ ಪುಸ್ತಕವನ್ನು ಬರೆದಿಲ್ಲ. ತುಲನಾತ್ಮಕ ಅಧ್ಯಯನದಿಂದ ಹೊರಬಂದಿರುವ ಕೃತಿುದು. ಸಿ.ಆರ್.ಸಿ. ಪುಸ್ತಕಗಳಿಂದ ಶತಕ ಬಾರಿಸಿರಬಹುದು. ಆದರೆ ಈ ಪುಸ್ತಕ ಸೋಮೇಶ್ವರ `ಶತಕ. ಅಪರೂಪಕ್ಕೆ ಬೈ ದ ಡಾಕ್ಟರ್, ಫಾರ್ ದ ಡಾಕ್ಟರ್ ಪುಸ್ತಕವೊಂದು ಬಂದಿದೆ. ಡಾಕ್ಟರ್ ಗಳನ್ನು ಓದುವ ಆಸಕ್ತರು `ಥಟ್ ಅಂತ ಕೊಳ್ಳಿ!

ಶೀರ್ಷಿಕೆ: ಮನಸ್ವಿ ಲೇಖಕರು: ಡಾ. ನಾ.ಸೋಮೇಶ್ವರ ಪ್ರಕಾಶಕರು:ನವಕರ್ನಟಕ ಪ್ರಕಾಶನ ಪುಟಗಳು:114 ಬೆಲೆ:ರೂ.45/-

ಕೃಪೆ : ಕನ್ನಡ ಪ್ರಭ

ನನಗೆ ಗೀತೆ, ಕುರಾನ್, ಬೈಬಲ್ ಸರ್ವವೂ ಆಗಿರುವ ಒಂದು ಪುಸ್ತಕ

mim

ಪುಸ್ತಕ ಪ್ರೀತಿ ಬ್ಲಾಗ್ ಓದುಗರಿಗೆ ಹೊಸ ವರ್ಷದ ಶುಭಾಶಯಗಳು.

ಹೊಸ ವರ್ಷದ ಮೊದಲ ದಿನ ನನಗೆ ಗೀತೆ, ಕುರಾನ್, ಬೈಬಲ್ ಸರ್ವವೂ ಆಗಿರುವ ಒಂದು ಪುಸ್ತಕದ ಬಗ್ಗೆ ಬರೆಯಲು ಇಚ್ಛಿಸುತ್ತೇನೆ. ಈ ಪುಸ್ತಕ ಮನಶ್ಶಾಸ್ತ್ರಕ್ಕೆ ಸಂಬಂದಿಸಿದ್ದು. ಇದೇನು ಮೊದಲ ವರ್ಷದ ಮೊದಲ ದಿನ ಇಂತಹ ಪುಸ್ತಕವನ್ನು ಪರಿಚಯಿಸಲು ಹೊರಟಿದ್ದು ಎಂದು ಬೇಸರಿಸಬೇಡಿ. ಇದು ಅಂತಿಂಥ ಪುಸ್ತಕವಲ್ಲ! ನನ್ನಲ್ಲಿ ನನಗೆ ನಂಬಿಕೆ ಹುಟ್ಟಿಸಿದ ಪುಸ್ತಕ ಇದು. ನನ್ನ ಎಲ್ಲಾ ನಕಾರಾತ್ಮಕ ಅನುಭವಗಳನ್ನು ನಿವಾರಿಸಿಕೊಳ್ಳಲು ಸಹಾಯ ಮಾಡಿದ ಪುಸ್ತಕ ಇದು. ಹಾಗೇ ನನ್ನ ಬಾಳಿನ ಹಾದಿಯಲ್ಲಿ ಯಾವುದೇ ನಕಾರಾತ್ಮಕ ಅನುಭವಗಳು ಆದೊಡನೆ ಈ ನಕಾರಾತ್ಮಕ ಅನುಭವಕ್ಕೆ ನಾನು ಎಷ್ಟರ ಮಟ್ಟಿಗೆ ಕಾರಣ ಅದನ್ನು ಇನ್ನು ಮುಂದೆ ನನ್ನ ಬಾಳಿನಲ್ಲಿ ಬರದಂತೆ ಮಾಡುವಲ್ಲಿ ನನ್ನ ಮಾರ್ಗದ ರ್ಶಿಯಾದದ್ದು ಈ ಪುಸ್ತಕ.

`ತಲೆ ಸರಿ ಇಲ್ಲದವರಿಗೆ ಮಾತ್ರ ಸೈಕಾಲಜಿಎಂಬ ಸಾರ್ವತ್ರಿಕ ಕಲ್ಪನೆ ಪ್ರಬಲವಾಗಿ ಚಲಾವಣೆಯಲ್ಲಿದೆ. ಆದರೆ `ತಲೆ ಸರಿ ಇರುವವರುಕೂಡ ಸೈಕಾಲಜಿ ತಿಳಿದು ತಮ್ಮ `ಸರಿಯಾದಜೀವನ ಶೈಲಿಯನ್ನು ಇನ್ನಷ್ಟು ಸರಿಮಾಡಿಕೊಳ್ಳಬಹುದು ಎಂಬುದು ವಾಸ್ತವ. ಸೈಕೋಥೆರಪಿ ಎಂದರೆ ಯಾರು ಅಥವಾ ಯಾವುದು ಸರಿ ಅಥವಾ ತಪ್ಪು ಎಂದು ನ್ಯಾಯ-ನಿರ್ಣಯ ಮಾಡಿ ಬುದ್ಧಿಮಾತು ತಿಳಿಹೇಳುವುದಲ್ಲ; ಈಗ ಇರುವ ಸಮಸ್ಯೆ ಪರಿಹಾರ ಆಗುವಂತೆ ಮನುಷ್ಯ ತನ್ನನ್ನು ಮತ್ತು ತನ್ನ ಪರಿಸರವನ್ನು ನೋಡುತ್ತಿರುವ ರೀತಿಯನ್ನು ಬದಲಾಯಿಸಿಕೊಳ್ಳುವಂತೆ ಮಾಡುವುದು. ಈ ನಿಟ್ಟಿನಲ್ಲಿ ನಮಗೆ ಸಹಾಯ ಮಾಡುವ ಪುಸ್ತಕ `ಮನಸ್ಸು ಇಲ್ಲದ ಮಾರ್ಗ.

ಮನುಷ್ಯನ ಮಿದುಳು ಒಂದು ವಿಶೇಷ ರೀತಿಯ `ಕ್ಯಾಸೆಟ್ ರೆಕಾರ್ಡರ್ ಪ್ಲೇಯರ್ನಂತೆ ಕೆಲಸ ಮಾಡುತ್ತದೆ. ಮಿದುಳಿನಲ್ಲಿ ಒಮ್ಮೆ ಮುದ್ರಿತವಾದ ವಿವರಗಳನ್ನು ಅಳಿಸಿಹಾಕಲು ಸಾಧ್ಯವಿಲ್ಲ. ಹುಟ್ಟಿದಂದಿನಿಂದ ಈ ಕ್ಷಣದವರೆಗೆ ಒಬ್ಬ ಮನುಷ್ಯನ ಜೀವನದ ಪ್ರತಿಯೊಂದು ಘಟನೆಯ ಸ್ಪರ್ಶ, ರಸ, ಗಂಧ, ದೃಶ್ಯ ಮತ್ತು ಶ್ರಾವ್ಯ ವಿವರಗಳನ್ನು ಅವನ ಮಿದುಳು ಶಾಶ್ವತ ರೂಪದಲ್ಲಿ ದಾಖಲಿಸಿಕೊಳ್ಳುತ್ತದೆ. ಜನಸಾಮಾನ್ಯರ ಕಲ್ಪನೆಯಲ್ಲಿರುವಂತೆ `ಮನಸ್ಸುಕೆಲಸ ಮಾಡುವ ಅವಯವ ಅಲ್ಲ. ಮಿದುಳು ಎಂಬ ಅವಯವದ ಎಲ್ಲ ಕ್ರಿಯೆಗಳನ್ನು ಮನಸ್ಸು ಎಂಬ ಒಂದೇ ಶಬ್ದದಡಿಯಲ್ಲಿ ವಿಜ್ಞಾನಿಗಳು ಕರೆಯುತ್ತಾರೆ (ಫಂಕ್ಶನಲ್ ಆಸ್ಪೆಕ್ಟ್ ಆಫ್ ಬ್ರೈನ್ ಈಸ್ ಮೈಂಡ್).

ಅಸಂಗತ ಮತ್ತು ಅನಾವಶ್ಯಕ ಭಯ, ದುಃಖ, ಕೋಪಗಳನ್ನು ಅನುಭವಿಸುತ್ತಾ ತಮ್ಮ ಜನ್ಮಸಿದ್ಧ ಹಕ್ಕು ಆದ ಆತ್ಮೀಯತೆ ಮತ್ತು ಸಂತೋಷದ ಅನುಭವದಿಂದ ಸ್ವಯಂ ವಂಚಿತರಾಗಿದ್ದ (ಮಾನಸಿಕ ಸಮಸ್ಯೆಯ) ವ್ಯಕ್ತಿಗಳು ಸೈಕಾಲಾಜಿಸ್ಟ್ `ಏನೋಮಾಡಿ ತಮ್ಮ `ಮನಸ್ಸನ್ನುಸರಿ ಮಾಡುತ್ತಾನೆ, ಬದಲಾಯಿಸುತ್ತಾನೆ. ಇದರಿಂದಾಗಿ ತಮ್ಮ `ಮನಸ್ಸಿನಲ್ಲಿಮತ್ತು ದೇಹದಲ್ಲಿ ಆಗುತ್ತಿರುವ ನಕಾರಾತ್ಮಕ ಅನುಭವಗಳು ನಿಲ್ಲುತ್ತವೆ ಎಂಬ ನಿರೀಕ್ಷೆ ಇಟ್ಟುಕೊಂಡು ನನ್ನ ಸಹಾಯ ಬಯಸಿ ಬಂದಿದ್ದರು. ಆದರೆ ಇವರೆಲ್ಲರಿಗೆ ನಾನು ತೋರಿಸಿದ್ದು `ಮನಸ್ಸುಇಲ್ಲದ ಮಾರ್ಗವನ್ನು, ಥೆರಪಿಯ ನವ್ಯ ಮಾರ್ಗವನ್ನು ಎನ್ನುತ್ತಾರೆ ಸ್ವತಃ ಥೆರಪಿಸ್ಟ್ ಆಗಿರುವ ಲೇಖಕರು. ಅಂದರೆ ಮನೋರೋಗದ ಸೃಷ್ಟಿ ಮತ್ತು ನಿವಾರಣೆ ಈ ಎರಡಕ್ಕೂ ಆಧಾರ ಒಂದೇ – ಮನುಷ್ಯನ ನೆನಪಿಸಿಕೊಳ್ಳುವ ಕ್ರಿಯೆ. ಈ ಕ್ರಿಯೆಯನ್ನು `ನಾನು ಮಾಡುತ್ತಿದ್ದೇನೆಎನ್ನುವವನು ಬದುಕಿನಲ್ಲಿ ಗೆಲ್ಲುತ್ತಾನೆ; `ನಾನಲ್ಲ, ನನ್ನ `ಮನಸ್ಸುಮಾಡುತ್ತಿದೆ ಎನ್ನುವವನು ಅನುಕಂಪ ಪಡೆಯುವುದರಲ್ಲಿ ಕೆಲವೊಮ್ಮೆ ಗೆಲ್ಲಬಹುದು.

ಸಾಂಪ್ರದಾಯಿಕ ಥೆರಪಿಗೆ ಪರ್ಯಾಯವಾಗಿ ಹುಟ್ಟಿದ ಎಲ್ಲ ನವ್ಯ ಥೆರಪಿಗಳ ಸಾಮಾನ್ಯ ಅಂಶ – ಮನುಷ್ಯ ಮತ್ತು ಮನಸ್ಸು ಈ ಎರಡನ್ನೂ ಒಂದಾಗಿ ಪರಿಗಣಿಸಿ ಮನುಷ್ಯನನ್ನೇ ವಾಸಿ ಮಾಡಬೇಕು ಎಂಬ `ಸಮಗ್ರ ಮನುಷ್ಯಸಿದ್ಧಾಂತ (ಹೊಲಿಸ್ಟಿಕ್ ಫಿಲಾಸಫಿ). ನವ್ಯ ಥೆರಪಿಗಳಲ್ಲಿ ತೀರ ಇತ್ತೀಚಿನದು ಟ್ರ್ಯಾನ್ಸ್ಯಾಕ್ಶನಲ್ ಅನಾಲಿಸಿಸ್-ಟಿಎ. ಪರ್ಸನಾಲಿಟಿ, ಕಮ್ಯೂನಿಕೇಶನ್ ಮತ್ತು ಮೋಟಿವೇಶನ್ ಎಂದರೆ ವ್ಯಕ್ತಿತ್ವ, ಸಂಪರ್ಕ ಮತ್ತು ಪ್ರವರ್ತಕ ಉದ್ದೇಶ ಈ ಮೂರನ್ನೂ ಒಳಗೊಂಡ ಸಮಗ್ರ ಸಿದ್ಧಾಂತ ಈ ಟಿಎ.

1970 ರಿಂದ 1982. ವೃತ್ತಿ ಜೀವನದಲ್ಲಿ ಯಶಸ್ವಿ ವೈದ್ಯ, ಆದ್ದರಿಂದ ಗೌರವಾನ್ವಿತ ವ್ಯಕ್ತಿಯಾಗಿಯೇ ಸಮಾಜದಿಂದ ಪರಿಗಣಿಸಲ್ಪಟ್ಟಿದ್ದೆ. ಆದರೆ ನನ್ನ ಬಗ್ಗೆ ನಾನು ಅತೃಪ್ತನಾಗಿದ್ದೆ. ಶೀಘ್ರಕೋಪ, ತಪ್ಪಿದರೆ ಖಿನ್ನತೆ. ಈ ಎರಡರಿಂದಾಗಿ ಜೀವನ ಪ್ರೀತಿ ಇಲ್ಲವಾಗಿತ್ತು. ಕೋಪ, ಖಿನ್ನತೆ ಕಳೆದುಕೊಳ್ಳಲು ಸೈಕ್ರಿಯಾಟ್ರಿಸ್ಟ್, ಸೈಕಾಲಾಜಿಸ್ಟರ ಬೇಟಿ. ಪರಿಣಾಮ – ಸಮಸ್ಯೆಗಳು ಹೆಚ್ಚಾಗಲಿಲ್ಲ ಎಂಬುದೊಂದೇ ಸಮಾಧಾನ. ಆದರೆ ತೊಲಗಲಿಲ್ಲ. ಸಮಸ್ಯೆಗಳನ್ನು ತೊಲಗಿಸಿಕೊಳ್ಳಲು ಮಾರ್ಗಗಳ ಹುಡುಕಾಟ ಮುಂದುವರಿಸಿಯೇ ಇದ್ದೆ. ಕೊನೆಗೊಮ್ಮೆ ಟಿಎ ಸೈಕಾಲಾಜಿಯ ನೆರವಿನಿಂದ, 1983ರಲ್ಲಿ, ನನ್ನ ಸಮಸ್ಯೆಗಳನ್ನು ನೀಗಿಕೊಳ್ಳುವಲ್ಲಿ ಯಶ ಸಾಧಿಸಿದೆ! ತರಬೇತಿಯ ಕೊನೆಯ ದಿನಗಳಲ್ಲಿ, ನಿಷ್ಕ್ರಿಯ ಮಾರ್ಗಗಳಲ್ಲಿ (ಪ್ಯಾಸಿವ್ ಅಪ್ರೋಚ್) ವ್ಯರ್ಥ ಹೋರಾಟ ಮಾಡುತ್ತಲಿರುವ ಓದು ಬಲ್ಲ ಕನ್ನಡ ಬಂಧುಗಳಿಗೆ ಟಿಎಯನ್ನು ತಲುಪಿಸಬೇಕು ಎಂಬ ಆಲೋಚನೆ ಮೂಡಿತು. ಟಿಎಯ ವೈಶಿಷ್ಟ್ಯ ಇರುವುದೇ ಇಲ್ಲಿ-ಇದನ್ನು ಅನುಭವಿಸಿದವರಲ್ಲಿ (ಓದುವುದಲ್ಲ, ತರಬೇತಿ ಶಿಬಿರದಲ್ಲಿ ಭಾಗವಹಿಸಿ ಅನುಭವಿಸಿರಬೇಕು) ಟಿಎ ಒಂದು ಸಾಮಾಜಿಕ ಹೊಣೆಯನ್ನು ಬಡಿದೆಬ್ಬಿಸುತ್ತದೆ. ಕಾಲ ಕಳೆದಂತೆ ಯೋಚನೆ ಗಟ್ಟಿ ನಿರ್ಧಾರವಾಯಿತು. ನಿರ್ಧಾರ ಕಾರ್ಯಗತವೂ ಆಯಿತು. ನನ್ನ ಮನೆಯಲ್ಲಿ ನಡೆಯುವ ಥೆರಪಿ ಗ್ರೂಪ್ ಗೆ ಸೀಮಿತವಾಗಿದ್ದ ಟಿಎ `ಮನಸ್ಸು ಇಲ್ಲದ ಮಾರ್ಗದಿಂದಾಗಿ ನಾಡಿನ ಇತರ ಭಾಗಗಳಿಗೂ ತಲುಪಿತು ಎನ್ನುತ್ತಾರೆ ಮೀನಗುಂಡಿ ಸುಬ್ರಹ್ಮಣ್ಯಂ, `ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಪುರಸ್ಕೃತ ಈ ಪುಸ್ತಕವನ್ನು ಬರೆಯುವ ತಮ್ಮ ತುಡಿತದ ಬಗ್ಗೆ ಹೇಳುತ್ತಾ.

ಮಾನಸಿಕ ಸಮಸ್ಯೆಗಳನ್ನು ಪರಿಹರಿಸಲು ಹಲವಾರು ವೈಜ್ಞಾನಿಕ ಪಂಥಗಳು ಇವೆ. ಇವುಗಳಲ್ಲಿ, ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತ ಮತ್ತು 1970 ರಿಂದೀಚೆಗೆ ಭಾರತವೂ ಸೇರಿದಂತೆ ವಿಶ್ವಾದ್ಯಂತ ಪ್ರಬಲವಾಗಿ ಬೆಳೆಯುತ್ತಿರುವ ಎರಡು ಪಂಥಗಳು ಗೆಸ್ಟಾಲ್ ಥೆರಪಿ ಮತ್ತು ಟ್ರ್ಯಾನ್ಸ್ಯಾಕ್ಶನಲ್ ಅನಾಲಿಸಿಸ್. ಈ ಎರಡು ಪಂಥಗಳನ್ನು ಆಧರಿಸಿ ಮಾನಸಿಕ ಸಮಸ್ಯೆಗಳನ್ನು ಹೇಗೆ ವಾಸಿ ಮಾಡಲಾಗುತ್ತದೆ ಎಂಬುದನ್ನು ತಿಳಿಸಲು, ಲೇಖಕರ ಉಪವೃತ್ತಿಯ, ಕೆಲವು ಚಿಕತ್ಸಾ ವರದಿಗಳನ್ನು ಇಲ್ಲಿ ನಾವು ಓದಬಹುದು. ತಮ್ಮ ಯೋಚನೆ, ಮಾತು, ಕೃತಿಗಳ ಅರ್ಥ (ಇನ್ ಸೈಟ್) ತಿಳಿದಾಗ ಮಾನಸಿಕ ಸಮಸ್ಯೆ ಇರುವ ವ್ಯಕ್ತಿಗಳು ತಮ್ಮ ನಿಲುವನ್ನು ಹೇಗೆ ಬದಲಾಯಿಸಿಕೊಳ್ಳುತ್ತಾರೆ ಎಂಬುದನ್ನು ತಿಳಿಸಲು ಚಿಕಿತ್ಸೆಯ ಸಂವಾದಗಳನ್ನು, ಅವು ನಡೆದಂತೆಯೇ ಬರೆಯಲಾಗಿದೆ. (ಗೋಪ್ಯ ಕಾಪಾಡಲು ಹೆಸರು ಬದಲಾಯಿಸಲಾಗಿದೆ.)

ಮನೋರೋಗ ಚಿಕಿತ್ಸೆಯ ಬಗ್ಗೆ ನಮ್ಮ ಪ್ರಶ್ನೆಗಳಿಗೆ ಸಂಶಯಗಳಿಗೆ ಉತ್ತರ ನಿವಾರಣೆ ಈ ಪುಸ್ತಕದಲ್ಲಿದೆ.

ಪುಸ್ತಕದ ಆರಂಭದಲ್ಲಿಯೇ `ಶಾಪಗಳಿಂದ ಬಿಡುಗಡೆ ಮಾಡಿದ `ರೆವರೆಂಡ್ ಫಾದರ್ ಜಾರ್ಜ್ ಕಂಡತ್ತಿಲ್ಲ ಎಸ್.ಜೆ. ಮತ್ತು ಸಿಸ್ಟರ್ ಅನ್ನಿ ಮಾರಿಯ ಸಿ.ಎಂ. ಅವರಿಗೆ ಸಪ್ರೇಮ ಅರ್ಪಣೆ ಎಂದಿದ್ದಾರೆ ಲೇಖಕರು. ಅರೆ! ಪುರಾಣ ಕತೆಗಳಲ್ಲಿ ಬರುವ `ಶಾಪಎನ್ನುವ ಶಬ್ದ ಈ ಪುಸ್ತಕದಲ್ಲಿ ಹೇಗೆ? ಆಶ್ಚರ್ಯವಾಗಿರಬೇಕಲ್ಲ. ಇದಕ್ಕಿಂತ ಆಶ್ಚರ್ಯ ಈ `ಶಾಪಗಳ ವಿವರಣೆಯನ್ನು ಓದಿದಾಗ ಆಗುತ್ತದೆ :

ಮಗು ತನ್ನ ಮಿದುಳಿನಲ್ಲಿ ದಾಖಲಿಸಿದ ತಂದೆ ತಾಯಿ ಮತ್ತಿತರ ಪೋಷಕರ ಮಗುವಿನ ಭವಿಷ್ಯದ ಬಗೆಗಿನ ಮಾತುಗಳನ್ನು `ಸಂದೇಶ‘ (ಮೆಸೇಜ್) ಎಂತಲೂ, ಈ ಸಂದೇಶವನ್ನು ಯಾವ ರೀತಿ ಅಥವಾ ಯಾರ ಹಾಗೆ ಸಾಧಿಸಬಹುದು ಎನ್ನುವ ಮಾಹಿತಿಗಳನ್ನು `ಮಾದರಿ‘ (ಮಾಡೆಲ್) ಎಂತಲೂ, ಅಸಹಾಯಕ ಕೋಪ, ದುಃಖದಿಂದ ಅಥವಾ ತಮಾಷೆಗೆ ಎಂದು ಮಗುವಿಗೆ ಹೇಳುವ ನಕಾರಾತ್ಮಕ ಮಾತುಗಳನ್ನು `ಶಾಪ‘ (ಇಂಜಕ್ಷನ್ ಅಥವಾ ಕರ್ಸ್ಸ್) ಎಂದೂ ಕರೆಯಲಾಗುತ್ತದೆ.

ಸಂದೇಶ, ಮಾದರಿ, ಶಾಪಗಳ ರೀತಿ ಮತ್ತು ಶಾಪಗಳ ನಕಾರಾತ್ಮಕತೆಯ ಪ್ರಮಾಣದಲ್ಲಿ ಹೆಚ್ಚು ಕಡಿಮೆ ಇರಬಹುದು ವಿನಾ ಇವನ್ನು ಕೊಡದ ತಂದೆ ತಾಯಿಯರೂ ಇಲ್ಲ, ಇವನ್ನು ಪಡೆಯದ ಮಗುವೂ ಇಲ್ಲ.

`ಪ್ರೀತಿಯಿಂದ, ಅವನು/ಳು ಕೇಳಿದ್ದೆಲ್ಲ ಕೊಟ್ಟು, ಚೆನ್ನಾಗಿಯೇ ಬೆಳೆಸಿದ್ದೇವೆ,’ ಎನ್ನುವ ತಂದೆತಾಯಂದಿರು ತಮಾಷೆಗೆ ಎಂದು ಮತ್ತು ಶಿಸ್ತು, ಸಂಯಮ, ಬುದ್ದಿ ಕಲಿಸುವ ಹೆಸರಿನಲ್ಲಿ `ಅವನ/ಳ ಒಳ್ಳೆಯದಕ್ಕೇಮಾಡುವ ಹೆಚ್ಚಿನ ಕೆಲಸಗಳೆಲ್ಲ `ಶಾಪವೇ ಆಗುವುದು ಮನುಷ್ಯ ಜೀವನದ ದುರಂತ!

ಹೀಗೆ ನಮ್ಮ ದೈನಂದಿನ ಬದುಕಿನಲ್ಲಿ ನಾವು ಎದುರಿಸುವ ಹಿಂಜರಿತ, ನೋವು, ಸುಖ, ದುಃಖ ಮುಂತಾದವುಗಳಿಗೆ ಯಾವುದೇ ಗ್ರಹಚಾರ, ದೇವರು, ದೆವ್ವ ಕಾರಣವಲ್ಲ ನಾವೇ ಅದಕ್ಕೆಲ್ಲಾ ಜವಾಬ್ದಾರರು. ನಮ್ಮ ಸುಖ/ದುಃಖ ಗಳನ್ನು ಹೇಗೆ ನಾವೇ ಅನುಭವಿಸುತ್ತೇವೋ ಅದಕ್ಕೆ ಕಾರಣರೂ ನಾವೇ. ನಮ್ಮಿಂದ ಹೊರಗೆ ಇರುವ ಬೇರೆ ವಸ್ತು ಕಾರಣವಲ್ಲ ಎಂಬ ನಿತ್ಯ ಸತ್ಯವನ್ನು ಮನಗಾಣಿಸಿ ಕೊಡುವ, ನಾವೇ ಸೃಷ್ಟಿಸುವ ನಕಾರಾತ್ಮಕ ಭಾವನೆಗಳ ಅನುಭವ ನಮಗೆ ಬೇಡವಾದಲ್ಲಿ ಅದನ್ನು ತ್ಯಜಿಸುವ ಸ್ವಾತಂತ್ರ್ಯ ನಮ್ಮದಿದೆ ಅನ್ನುವ ಸತ್ಯವನ್ನು ತಿಳಿಸುವ ಈ ಪುಸ್ತಕ ಅದ್ಭುತ.

ಪುಸ್ತಕದ ಆರಂಭದಲ್ಲೇ ಲೇಖಕರು `ಎಲ್ಲಿಂದಾದರೂ ಓದಲು ಪ್ರಾರಂಭಿಸಿದರೆ ಸರಿಯಾದ ಅರ್ಥ ಆಗುವುದಕ್ಕಿಂತ ಹೆಚ್ಚಾಗಿ ಅಪಾರ್ಥ ಅನರ್ಥಗಳೇ ಆಗುವ ಸಂಭವವಿರುವುದರಿಂದ, ದಯಮಾಡಿ, ಈ ಪುಸ್ತಕವನ್ನು ಮೊದಲ ಪುಟದಿಂದ ಅನುಕ್ರಮವಾಗಿ ಓದಿ.ಎಂದಿದ್ದಾರೆ. ಆದರೆ ಈ ಪುಸ್ತಕದ ವಿಶಾಲ ಹರಹನ್ನು ಹೇಳುವ ಉತ್ಸಾಹದಲ್ಲಿ ಅಲ್ಲೊಂದು ಇಲ್ಲೊಂದು ಮಾತುಗಳನ್ನು ಉದ್ಧರಿಸಿ ಇಲ್ಲಿ ಕೊಟ್ಟಿದ್ದೇನೆ. ಇದು ಈ ಪುಸ್ತಕದ ಲಾಭವನ್ನು ಎಲ್ಲರೂ ಪಡೆದುಕೊಳ್ಳಲಿ ಎನ್ನುವ ಸದಾಶಯದಿಂದ ಮಾಡಿದ ತಪ್ಪು. ಅದಕ್ಕಾಗಿ ಲೇಖಕರ ಕ್ಷಮೆಯನ್ನು ಇಲ್ಲಿ ಕೋರುತ್ತೇನೆ.

ಮತ್ತೊಮ್ಮೆ ಹೊಸ ವರ್ಷದಲ್ಲಿ ನೀವೆಲ್ಲ ಹೊಸ ಸಕಾರಾತ್ಮಕ ಅನುಭವ (ಸುಖ, ಸಂತೋಷ, ಉಲ್ಲಾಸ, ಸಮಾಧಾನ) ಗಳನ್ನು ಹೊಂದುವಲ್ಲಿ ಯಶಸ್ವಿಯಾಗಿರೆಂದು ಹಾರೈಸುವ

ವಿಶಾಲಮತಿ

ಶೀರ್ಷಿಕೆ: ಮಾನಸಿಕ ಸಮಸ್ಯೆಗಳಿಗೆ `ಮನಸ್ಸುಇಲ್ಲದ ಮಾರ್ಗ ಲೇಖಕರು: ಡಾ.ಮೀನಗುಂಡಿ ಸುಬ್ರಹ್ಮಣ್ಯ ಪ್ರಕಾಶಕರು:ನವಕರ್ನಟಕ ಪ್ರಕಾಶನ ಪುಟಗಳು:312 ಬೆಲೆ:ರೂ.95/-

ನಿಮ್ಮ ಕೈಯಲ್ಲಿ

aarogya-aaraike

ಡಾ. ವಸುಂಧರಾ ಭೂಪತಿ ಈ ಹೆಸರು ಯಾರು ಕೇಳಿಲ್ಲ?

ವೈದ್ಯಕೀಯ ಲೇಖನಗಳನ್ನು ಓದುವವರು ಖಂಡಿತಾ ಓದಿರುತ್ತಾರೆ. `ಜಗತ್ತಿನ ಅತ್ಯಂತ ದೊಡ್ಡ ಡಾಕ್ಟರ್ ಗಳೆಂದರೆ ಡಾ.ಪಥ್ಯ, ಡಾ. ಶಾಂತಿ, ಡಾ.ಆನಂದಎಂದು ಜೊನಾಥನ್ ಸ್ವಿಫ್ಟ್ ಹೇಳಿದ್ದಾನೆಂದು `ನನ್ನ ಮಾತುಬರೆಯುತ್ತಾರೆ ಭೂಪತಿ.

ಕೆಲವು ಸಾಮಾನ್ಯ ಕಾಯಿಲೆಗಳಿಗೆ ಕಾರಣಗಳು, ಆಹಾರ ಕ್ರಮ, ವೃದ್ಧಾಪ್ಯದ ಸಮಸ್ಯೆಗಳು ಮತ್ತು ಅವುಗಳಿಗೆ ಅನುಸರಿಸಬೇಕಾದ ಕ್ರಮಗಳು ಮುಂತಾದವುಗಳ ಕುರಿತು `ಆರೋಗ್ಯ ಆರೈಕೆ – ನಿಮ್ಮ ಕೈಯಲ್ಲಿಪುಸ್ತಕವನ್ನು ಆಯುರ್ವೇದ ಡಾಕ್ಟರ್ ಬರೆದಿದ್ದಾರೆ. `ನಮ್ಮ ಆಹಾರ ಕ್ರಮ ಸರಿಯಾಗಿದ್ದು ಮನದಲ್ಲಿ ನೆಮ್ಮದಿಯಿದ್ದರೆ ಅನಾರೋಗ್ಯ ನಮ್ಮ ಬಳಿ ಸುಳಿಯಲಾರದುಎಂದು ನಂಬುವವರು, ನಂಬದಿರುವವರು ಈ ಆರೋಗ್ಯಕರ ಪುಸ್ತಕಕ್ಕೆ ಕೈ ಇಡಬಹುದು.

ಶೀರ್ಷಿಕೆ:ಆರೋಗ್ಯ ಆರೈಕೆ-ನಿಮ್ಮ ಕೈಯಲ್ಲಿ ಲೇಖಕರು: ಡಾ. ವಸುಂಧರಾ ಭೂಪತಿ ಪ್ರಕಾಶಕರು:ಕರ್ನಟಕ ವಿಜ್ಞಾನ ಪರಿಷತ್ತು ಪುಟಗಳು:110 ಬೆಲೆ:ರೂ.40/-

ಕೃಪೆ : ಕನ್ನಡ ಪ್ರಭ

ವಿಜ್ಞಾನದ ಕಾಲದಲ್ಲಿ ತಲೆಗೆ `ಮದ್ದು ಹಾಕುವ ಕೆಲಸ’ ಈ ಚರ್ಚಾಸ್ಪದ ಪುಸ್ತಕ ಮಾಡುತ್ತದೆ!

janapada-vaydya

ವಿಜ್ಞಾನವೆಂಬ ಯಜಮಾನನಿಗೆ ಅರ್ಥಾತ್ ಆಧುನಿಕತೆಯ ಜನತೆಯ ಜ್ಞಾನ ಸೊರಗಿ, ಸೋತುಹೋಯಿತು. ಇಲ್ಲಿಂದಲೇ ಬಡವರ ಸೋಲು ಆರಂಭವಾಯಿತು. ಎಲ್ಲ ಸ್ಥಳೀಯ ಜ್ಞಾನಿಗಳು ಮತ್ತು ಕುಶಲಕರ್ಮಿಗಳು ಕೈಚೆಲ್ಲಿದರು. ಅನೇಕ ಶತಮಾನಗಳ ಜ್ಞಾನ ಅವನತಿಯ ಹಾದಿ ಹಿಡಿಯಿತು. ಇದೇ ಜಾನಪದ; ಜನರ ಜ್ಞಾನವಿಜ್ಞಾನ ಎಂದು ಬೆನ್ನುಡಿಯಲ್ಲಿ ಹೇಳಿದ್ದಾರೆ ಡಾ. ಟಿ.ಗೋವಿಂದರಾಜು ಪುಸ್ತಕ `ಜನಪದ ವೈದ್ಯ‘.

ವಿಜ್ಞಾನದ ಸಾಮಾಜಿಕರಣದ ಕುರಿತು ಮಾತನಾಡುವ ಪುಸ್ತಕವಿದು. ಶತಮಾನಗಳ ನಿರಂತರ ಜ್ಞಾನವನ್ನು ಪ್ರಸ್ತುತ ಸಂದರ್ಭಕ್ಕೆ ತಂದುಕೊಳ್ಳುವ ಪ್ರಯತ್ನವಾಗಿ ಗೋವಿಂದರಾಜುರವರು ಈ ಪುಸ್ತಕವನ್ನು ಸಂಪಾದಿಸಿದ್ದಾರೆ. ಕರ್ನಾಟಕ ಜಾನಪದ ವೈದ್ಯ – ಆದದ್ದು, ಆಗಬೇಕಾದದ್ದು, ಜನಪದ ವೈದ್ಯೋಪಚಾರ, ಮಂತ್ರಮಾಟ, ಕೈಮದ್ದು, ಹೃದ್ರೋಗ ಮತ್ತು ಜಾನಪದ, ಮಲೆನಾಡು ಮತ್ತು ಕೋಟದಲ್ಲಿರುವ ಜನಪದ ವೈದ್ಯರು – ಹೀಗೆ ಅನೇಕರು ಬರೆದ ಲೇಖನಗಳ ಸಂಗ್ರಹರೂಪಿ ಪುಸ್ತಕ ಓದಿಸಿಕೊಂಡು ಹೊಗುತ್ತದೆ.

ನಾಟಿವೈದ್ಯರ ಕುರಿತು `ನಾಟಿಮಹಾಬಲ ಸೀತಾಳಭಾವಿಯವರ ಲೇಖನವೂ ಇದೆ. ಡಾ. ಶಿವರಾಮ ಕಾರಂತರ ಅನುವಾದವಿದೆ. `ಕೈ ಮದ್ದು ಹಾಕುವುದು ಎಷ್ಟು ನಿಜ?’ ಎಂಬ ಸಿ.ಆರ್.ಚಂದ್ರಶೇಖರ್ ರ ಚರ್ಚಾಸ್ಪದ ಲೇಖನವಿದೆ. ಈ ಆಧುನಿಕ ವಿಜ್ಞಾನದ ಕಾಲದಲ್ಲಿ ತಲೆಗೆ `ಮದ್ದು ಹಾಕುವ ಕೆಲಸಈ ಚರ್ಚಾಸ್ಪದ ಪುಸ್ತಕ ಮಾಡುತ್ತದೆ. ಡಾ. ಗೋವಿಂದರಾಜುರ ಸಂಪಾದನೆಯ ಕೈವಾಡದಲ್ಲಿ ಅರಳಿರುವ `ಜನಪದಓದುವ ಸಾಹಸ ಖಂಡಿತಾ ಸ್ವಾಗತಾರ್ಹ.

ಶೀರ್ಷಿಕೆ: ಜನಪದ ವೈದ್ಯ ಲೇಖಕರು: ಡಾ. ಗೋವಿಂದರಾಜು ಪ್ರಕಾಶಕರು: ಕನ್ನಡ ಭವನ ಪುಟಗಳು: 255 ಬೆಲೆ: ರೂ.100/-

ಕೃಪೆ : ಕನ್ನಡ ಪ್ರಭ

ಕರ್ನಾಟಕ ವಿಷ ವೈದ್ಯ ಪರಂಪರೆ

ಕರ್ನಾಟಕ ವಿಷ ವೈದ್ಯ ಪರಂಪರೆ ಕೃತಿ ವೈದ್ಯಕೀಯದ ಅದರಲ್ಲೂ ಆಯುರ್ವೇದ ವೈದ್ಯ ಪದ್ಧತಿಯ ಅನೇಕ ವಿಚಾರಗಳನ್ನು ಅನಾವರಣಗೊಳಿಸಿದೆ. ವಿಷ ನಮ್ಮ ದೇಹಕ್ಕೆ ಎಷ್ಟೊಂದು ಅಪಾಯಕಾರಿ ಎಂಬುದಂತೂ ಸತ್ಯ.

ಕವಿ ಮಂಗರಸನ `ಖಗೇಂದ್ರಮಣಿದರ್ಪಣಕನ್ನಡ ಭಾಷೆಯ ಮೊದಲ ವೈದ್ಯಗ್ರಂಥ. ಇದರಲ್ಲಿ ವೈದ್ಯ ಪದ್ಧತಿಯನ್ನು ಕಂದಪದ್ಯಗಳಲ್ಲಿ ಹೇಳಲಾಗಿದೆ. ಪ್ರೊ. ಎಂ. ಮರಿಯಪ್ಪ ಭಟ್ಟರು ಸಂಪಾದಿಸಿದ ಈ ಕೃತಿಯ ನಂತರ ಇದೇ ಮಾದರಿಯ ಕೃತಿ ಕನ್ನಡದಲ್ಲಿ ಬಹುಶಃ ಬಂದಿಲ್ಲ. ಈ ಕೊರತೆಯನ್ನು ನೀಗಿಸಿದವರು ಡಾ. ಸತ್ಯನಾರಾಯಣ ಭಟ್.

ಈ ಕೃತಿಯಲ್ಲಿ ಖಗೇಂದ್ರಮಣಿಯ ಸಸ್ಯಸೂಚಿಯ ಜತೆಗೆ ವಿಷ ಚಿಕಿತ್ಸೆಗೆ ಸುಶ್ರುತ, ವಾಗ್ಭಟರ ಆದಿ ವೈದ್ಯ ಗ್ರಂಥದಲ್ಲಿ ಬಳಸಲಾದ ಗಿಡಮೂಲಿಕೆ, ಅವುಗಳ ಉಪಯೋಗ ಮುಂತಾದ ವಿಷಯಗಳನ್ನು ಸವಿವರವಾಗಿ ನೀಡಲಾಗಿದೆ. ಯಾವ ವಿಷಕ್ಕೆ ಯಾವುದು ಮದ್ದು ಎಂಬ ಬಗ್ಗೆ ವಿವರವಾದ ಮಾಹಿತಿಯಿದೆ. ಪ್ರಾಣಿಗಳ ವಿಷ, ವಸ್ತುಗಳು, ಆಹಾರಗಳಲ್ಲಿ ವಿಷ ಸೇರಿಕೊಂಡಿರುತ್ತದೆ. ಇವುಗಳಿಗಲ್ಲಾ ಏನೇನು ಔಷಧಿ ಎಂಬುದನ್ನೂ `ಕಾರಾದಿಯಾಗಿ ಕ್ರಮಬದ್ಧವಾಗಿ ಪಟ್ಟಿ ಮಾಡಲಾಗಿದೆ. ಸಾಮಾನ್ಯವಾಗಿ ವಿಷದ ಬಗ್ಗೆ, ಅದಕ್ಕೆ ಮಾಡಬೇಕಾದ ಔಷಧಿಯ ಬಗ್ಗೆ ನಮಗೆ ಕನಿಷ್ಠ ಜ್ಞಾನವೂ ಇಲ್ಲದಿರುವಾಗ ಇಲ್ಲಿ ದಾಖಲಾದ ಅನೇಕ ಸಂಗತಿಗಳು ಮಹತ್ವವೆನಿಸುತ್ತದೆ. ಉದಾ:ಕಿತ್ತಳೆ ಹಣ್ಣನ್ನು ಅತಿಯಾಗಿ ತಿಂದರೆ ವಿಷ, ಎಕ್ಕೆ ಹಾಲಿನ ವಿಷಕ್ಕೆ ಎಳನೀರು ಮದ್ದು, ಕಾಸರಿಕೆಯ ಮುಳ್ಳಿನ ನಂಜಾದರೆ ಅದರೆಲೆಯೇ ಮದ್ದು; ಕಾರೇ ಮುಳ್ಳಿಗೆ ಕಾರೆ ಎಲೆಯೇ ಮದ್ದು, ಕಣಜ ಹುಳ ಕಡಿದರೆ ಅದರ ಗೂಡನ್ನು ಅರೆದು ಲೇಪಿಸಿದರೆ ವಾಸಿಯಾಗುವುದು ಇವೆ ಮುಂತಾದ ವಿಷಯಗಳು ಇಲ್ಲಿವೆ.

ವಿಷ ವೈದ್ಯ ಪರಂಪರೆಯ ಬಗ್ಗೆ ವಿಶೇಷ ಅಧ್ಯಯನ ಮಾಡುವವರು ಈ ಪುಸ್ತಕದಿಂದ ಹಲವಾರು ಸಿದ್ಧ ಮಾಹಿತಿ ಪಡೆಯಬಹುದು. ಇಂಥವರಿಗೆ ಇದೊಂದು ಸಂಗ್ರಹಯೋಗ್ಯ ಕೃತಿ. ಆದರೆ ನಾಟಿ ಔಷಧಿ, ಗಿಡಮೂಲಿಕೆ, ಆಯುರ್ವೇದ ಮುಂತಾದ ವೈದ್ಯ ಪದ್ಧತಿಯ ಬಗ್ಗೆ ಆಸಕ್ತಿ ಇಲ್ಲದವರಿಗೆ ಈ ಗ್ರಂಥದಿಂದ ಪ್ರಯೋಜನವಾಗಲಾರದು.

ಶೀರ್ಷಿಕೆ: ಕರ್ನಾಟಕ ವಿಷ ವೈದ್ಯ ಪರಂಪರೆ ಲೇಖಕರು: ಡಾ. ಸತ್ಯನಾರಾಯಣ ಭಟ್ ಪಿ. ಪ್ರಕಾಶಕರು : ಮುದ್ದುಶ್ರೀ ಗ್ರಂಥ ಮಾಲೆ ಪುಟಗಳು : 526 ಬೆಲೆ:ರೂ.300/-

ಕೃಪೆ : ಪ್ರಜಾವಾಣಿ

ಯಶಸ್ಸು ಹಾಗೂ ನೆಮ್ಮದಿಯ ಬದುಕು

ಹಲವು ಬಗೆಯ ಜಂಜಡ, ಸಂಕೀರ್ಣತೆಗಳಿಗೆ ಒಳಗಾಗಿರುವ ಆಧುನಿಕ ಬದುಕಿನಲ್ಲಿ ಯಶಸ್ಸಿನ ಹುಡುಕಾಟ ಹಿಂದೆಂದಿಗಿಂತ ಹುಚ್ಚು ವೇಗದಲ್ಲಿ ಸಾಗಿದೆ ಮತ್ತು ಅಳಿವು-ಉಳಿವಿನ ಪ್ರಶ್ನೆಯಾಗಿ ಮಾರ್ಪಟ್ಟಿದೆ. ಒಂದೇ ನಾಣ್ಯದ ಎರಡು ಮುಖಗಳಾಗಿರುವ ಯಶಸ್ಸು ಹಾಗೂ ನೆಮ್ಮದಿಯ ಪಾರ್ಶ್ವ ಭಾಗಗಳನ್ನು ವಿವರಿಸುವ ಈ ಪುಸ್ತಕ ಕರ್ನಾಟಕದ ಖ್ಯಾತ ಮನೋವಿಜ್ಞಾನಿಗಳಲ್ಲಿ ಒಬ್ಬರಾದ ಡಾ. ಸಿ.ಆರ್. ಚಂದ್ರಶೇಖರ್ ಬರೆದಿರುವುದು ಎನ್ನುವ ಕಾರಣಕ್ಕಾಗಿಯೇ extra weightage, footage ಗಳಿಸಿಕೊಂಡಿದೆ ಎಂದರೆ ತಪ್ಪಿಲ್ಲ.

ತಿಳಿಯಾದ ಭಾಷೆಯಲ್ಲಿ ಪ್ರಶ್ನೋತ್ತರ ರೂಪದಲ್ಲಿ ಲೇಖಕರು ಸನ್ನಿವೇಶದ ಒಂದು ಅಥೆಂಟಿಕ್ ಚಿತ್ರಣ ನೀಡುತ್ತಾರೆ. ಆಲೋಪತಿ, ಹೋಮಿಯೋಪತಿ, ನ್ಯಾಚುರೋಪತಿ, ತಿರುಪತಿ ವೆಂಕಟಾಚಲಪತಿ, ಆಯುರ್ವೇದ, ರೇಖಿ, ಪ್ರಾಣಿಕ್ ಹೀಲಿಂಗ್, ಮ್ಯಾಗ್ನಟೋಥೆರಪಿ, ಆಕ್ಯುಪಂಕ್ಚರ್, ಆಕ್ಯುಪ್ರೆಶರ್, ಯೋಗ, ಧ್ಯಾನ, ಪ್ರಾಣಾಯಾಮ, ವಿವಿಧ ಸ್ವಾಮಿಗಳು, ಬಾಬಾಗಳು, ನಾಟಿ ಔಷಧಿಗಳು ಹಾಗೂ ಚಿಕಿತ್ಸೆಗಳು, ಮದ್ದು-ಮಾಟ-ಮಂತ್ರ-ಭೂತೋಚ್ಛಾಟನೆಗಳೂ ಯಾಗ-ಪೂಜೆ ಹರಕೆಗಳು ಮಾನಸಿಕವೂ-ಶರೀರ ಸಂಬಂಧಿಯೂ ಆದ ಅನೇಕ ರೋಗಗಳನ್ನು ತಡೆಯಲು ವಿಫಲವಾಗುತ್ತಿವೆ.

ಬದಲಾಗಿ, ಸರಳ-ತೃಪ್ತ ಜೀವನ ಶೈಲಿ, ಭಾವೋದ್ವೇಗಗಳಿಗೆ ಒಳಗಾಗದೇ ಯಾವುದೇ ಸನ್ನಿವೇಶ, ಸಮಸ್ಯೆ, ವ್ಯಕ್ತಿಯನ್ನು ನಿಭಾಯಿಸುವುದು, ಮೈಮನಸ್ಸುಗಳು ವಿರಮಿಸಲು ಸಹಾಯ ಮಾಡುವ ಆರೋಗ್ಯಕರ ಮತ್ತು ಸೃಜನಶೀಲ ಹವ್ಯಾಸಗಳು, ಸ್ವಹಿತ ಹಾಗೂ ಪರಹಿತದ ಸಮನ್ವಯ, ಲೌಕಿಕತೆ-ಆಧ್ಯಾತ್ಮಿಕತೆಯನ್ನು ಒಟ್ಟೊಟ್ಟಿಗೆ ಪಾಲಿಸುವುದು, ಮನೆಯ ಒಳಗೆ-ಹೊರಗೆ ಪ್ರಶಾಂತತೆ ಕಾಪಾಡಿಕೊಳ್ಳುವುದೇ ಇವುಗಳಿಗೆ ಏಕೈಕ ಪರಿಹಾರ. ಇದರಿಂದ ಯಶಸ್ಸು ನಮ್ಮದಾಗುವ ಸಂಭವವೂ ಹೆಚ್ಚು.

ಶೀರ್ಷಿಕೆ : ಯಶಸ್ಸು ಹಾಗೂ ನೆಮ್ಮದಿಯ ಬದುಕು ಲೇಖಕರು : ಡಾ. ಸಿ.ಆರ್.ಚಂದ್ರಶೇಖರ್ ಪ್ರಕಾಶಕರು : ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಪುಟಗಳು :100 ಬೆಲೆ:ರೂ.60/-

ಕೃಪೆ : ವಿಜಯ ಕರ್ನಾಟಕ