`ಸದನದಲ್ಲಿ ಶ್ರೀರಾಮರೆಡ್ಡಿ’ ಪುಸ್ತಕಬಿಡುಗಡೆ ಸಮಾರಂಭಕ್ಕೆ ಆಹ್ವಾನ

ನಾನು ಹೇಳುವುದೆಲ್ಲವೂ ನನ್ನ ಪಕ್ಷದ ನಿಲುವುಗಳುಎನ್ನುವ ಧ್ಯೇಯವಾಕ್ಯದ ವಿಶಿಷ್ಟ ರಾಜಕಾರಣಿ ನಮ್ಮ ಕಾಮ್ರೇಡ್ ಶ್ರೀರಾಮರೆಡ್ಡಿ

“ನಾನು ಹೇಳುವುದೆಲ್ಲವೂ ನನ್ನ ಪಕ್ಷದ ನಿಲುವುಗಳು, ಜನರ ವಿಚಾರದಲ್ಲಿ ರಾಜಕಾರಣಿಗೆ ವೈಯಕ್ತಿಕ ನಿಲುವು-ಪಕ್ಷದ ನಿಲುವು ಎಂಬ ಇಬ್ಬಂದಿತನ ಇರಕೂಡದು” ಎಂದು ನಂಬಿದ ರಾಜಕಾರಣಿ ಕಾಮ್ರೇಡ್ ಜಿ.ವಿ. ಶ್ರೀರಾಮರೆಡ್ಡಿ ಯವರು 1994 ಮತ್ತು 2004ರಲ್ಲಿ  ಹೀಗೆ ಎರಡು ಬಾರಿ ಸಿಪಿಐ(ಎಂ) ಪಕ್ಷದ ಅಭ್ಯರ್ಥಿಯಾಗಿ ಬಾಗೇಪಲ್ಲಿಯಿಂದ ಚುನಾಯಿತರಾಗಿ ಶಾಸಕರಾಗಿದ್ದರು.

ವಿಧಾನಸಭೆಯಲ್ಲಿ ಶ್ರೀರಾಮರೆಡ್ಡಿಯವರು ಮಾತಿಗೆ ನಿಂತರೆಂದರೆ ಇಡೀ ಅಸೆಂಬ್ಲಿಯಲ್ಲಿ ಪಿನ್ ಡ್ರಾಪ್ ಸೈಲೆನ್ಸ್ ಇರುತ್ತಿತ್ತು. ಕೇವಲ ತನ್ನ ಕ್ಷೇತ್ರವಲ್ಲದೆ ಇಡೀ ರಾಜ್ಯವನ್ನು ಪ್ರತಿನಿಧಿಸಿ ಮಾತನಾಡುತ್ತಿದ್ದ ಶ್ರೀರಾಮರೆಡ್ಡಿಯವರ ವಿದ್ವತ್ತು, ಜನಪರ ಕಾಳಜಿ, ಹಣಕಾಸು, ರಾಜಕೀಯ, ಸಿದ್ದಾಂತದ ಬಗೆಗಿನ ಮಾಹಿತಿಗೆ ಇಡೀ ಸದನ ಕಣ್ಣು ಕಿವಿಗೊಟ್ಟು ಕೇಳಿಸಿಕೊಳ್ಳುತ್ತಿತ್ತು. ಶ್ರೀರಾಮರೆಡ್ಡಿಯವರು ಮಾತನಾಡುತ್ತಿದ್ದಾಗ ಯಾವುದಾದರೂ ಶಾಸಕರು ಮಧ್ಯೆ ಮಾತನಾಡಿದರೆ ಸಭಾಧ್ಯಕ್ಷರು ಅಂತಹ ಶಾಸಕರನ್ನು ಬೈದು ಕುಳ್ಳಿರಿಸಿದ್ದೂ ಇದೆ. ಶ್ರೀರಾಮ ರೆಡ್ಡಿಯವರು ವಿಧಾನಸಭೆಯಲ್ಲಿ ಮಾತನಾಡಿರುವ ದಾಖಲೆಗಳನ್ನು ತೆಗೆದು ನೋಡಿದಾಗ ಈ ಎಲ್ಲಾ ಅಂಶಗಳು ತಿಳಿದುಬರುತ್ತದೆ ಎನ್ನುತ್ತಾರೆ ಪುಸ್ತಕದ ಸಂಪಾದಕರು.

ವಿಧಾನಸಭೆಯಲ್ಲಿ ಮಾತನಾಡುವ ಶೈಲಿಯ ಜತೆಜತೆಗೆ ಇವರ ಕಾರ್ಯವೈಖರಿಯೂ ವಿಶಿಷ್ಟವಾದದ್ದು.

ಉಡುಪಿಯ ಮಣಿಪಾಲ ಕಾಲೇಜಿನಲ್ಲಿ ಓದುತ್ತಿದ್ದ ಮೆಡಿಕಲ್ ವಿದ್ಯಾರ್ಥಿಯನ್ನು ಅಪಹರಿಸಿದ್ದ ಕಿಡಿಗೇಡಿಗಳು ಅತ್ಯಾಚಾರ ಮಾಡಿದ್ದರು. ಕರಾವಳಿಯ ಶಾಸಕರಿಗೆ ಗೊತ್ತಾಗುವ ಮೊದಲೇ ಮಾಜಿ ಶಾಸಕ ಶ್ರೀರಾಮ ರೆಡ್ಡಿಯಲ್ಲಿ ಉಡುಪಿಯಲ್ಲಿದ್ದರು. ನೇರವಾಗಿ ಮಣಿಪಾಲ ಆಸ್ಪತ್ರೆಗೆ ತೆರಳಿದವರೇ, ಆಡಳಿತ ಮಂಡಳಿಯಿಂದ ಸ್ಪಷ್ಟನೆ ಕೇಳಿದರು. ಆ ಬಳಿಕ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಶ್ರೀರಾಮ ರೆಡ್ಡಿಯವರು ಅಲ್ಲೇ ಹೊರಗಡೆ ಸಿಪಿಐ(ಎಂ) ಪಕ್ಷದ ನಾಯಕರ ಜೊತೆ ಮಾತನಾಡಿ ಮಂಗಳೂರು ಉಡುಪಿಯಲ್ಲಿ ಪ್ರತಿಭಟನೆ ನಡೆಸುವಂತೆ ಸೂಚಿಸಿದರು. ಆಡಳಿತ ಮತ್ತು ವಿಪಕ್ಷಗಳಿಗೆ ವಿಷಯವೇನೆಂದು ಗೊತ್ತಾಗುವಷ್ಟರಲ್ಲಿ ಆರೋಪಿಗಳ ಬಂಧನವಾಗಿತ್ತು.

ಇಂತಹ ಗುಣಲಕ್ಷಣದ ಮಾಜಿ ಶಾಸಕ, ಸಿಪಿಐ(ಎಂ) ಮಾಜಿ ರಾಜ್ಯ ಕಾರ್ಯದರ್ಶಿ ಶ್ರೀರಾಮ ರೆಡ್ಡಿಯವರು ಸದನದಲ್ಲಿ ಮಾತನಾಡಿದ ದಾಖಲೆಗಳಿಂದ ಆಯ್ದ ಭಾಷಣಗಳ ಸಂಗ್ರಹ ಈ ಪುಸ್ತಕ.

ಪುಸ್ತಕ ಖರೀದಿಸಲು 9902249150 ಗೆ ಮೆಸೇಜ್ ಮಾಡಿ.

ಶೀರ್ಷಿಕೆ : ಸದನದಲ್ಲಿ ಶ್ರೀರಾಮರೆಡ್ಡಿ; ಸಂಪಾದಕರು:ನವೀನ್ ಸೂರಿಂಜೆ; ಪ್ರಕಟಣೆ:ಅಭಿರುಚಿ ಪ್ರಕಾಶನ; ಪ್ರಕಟಣಾ ವರ್ಷ:2022; ಪುಟಗಳು:184; ಬೆಲೆ:ರೂ.200

ಕೋಟಿ ಕೋಟಿ ಕಪ್ಪು ಜನರ ಮೊಟ್ಟ ಮೊದಲ ಮಾತು – ಅಂಬೇಡ್ಕರ್ ಜಯಂತಿಯ ಶುಭಾಶಯಗಳು

 

scan0002scan0003ಶೀರ್ಷಿಕೆ: Dr. B.R. Ambedkar Life and Work – An Appraisal, ಲೇಖಕರು: Prabhakar Sanzgiri , ಪ್ರಕಾಶಕರು: Kriya Prakashana, ಪುಟಗಳು: 64, ಬೆಲೆ: Rs.30/-

ಹ್ಯೂಗೊ ಚಾವೇಜ್ ಅಮರರಾಗಲಿ!

hugo chavez

ಶೀರ್ಷಿಕೆ : Chavez, Venezuela and the New Latin America An interview with Hugo Chavez
ಲೇಖಕರು : ಅಲೀಡಾ ಗುವೇರ Aleida Guevara
ಪ್ರಕಾಶಕರು : ಲೆಫ್ಟ್ ವರ್ಡ್ LeftWord, 2006,
ಪುಟ : 143
ಬೆಲೆ : ರೂ.95/-

`ರೊಟ್ಟಿ ಮತ್ತು ಗುಲಾಬಿ’ ಘೋಷಣೆಯ ವಿಶ್ವ ಮಹಿಳಾ ದಿನಾಚರಣೆಗೆ ನೂರರ ಸಂಭ್ರಮ

ರೊಟ್ಟಿ – ತುಂಬಿದ ಹೊಟ್ಟೆಯ ಹಾಗೂ  ಗುಲಾಬಿ – ಗೌರವಾನ್ವಿತ ಬದುಕಿನ ಸಂಕೇತ. ಕೆಲವು ಮಹಿಳೆಯರು ಮಹಿಳೆ ಎನ್ನುವ ಕಾರಣದಿಂದಲೇ ಹಸಿವಿನಿಂದ ಬಳಲುತ್ತಿದ್ದರೆ ಇನ್ನೊಂದು ಭಾಗ ಹಸಿವಿನಿಂದಲ್ಲದಿದ್ದರೂ ತನ್ನೆಲ್ಲಾ ಕೊಡುಗೆಯಿದ್ದರೂ ನಿರ್ಧಾರದಲ್ಲಿ ಹೆಣ್ಣು ಎನ್ನುವ ಕಾರಣಕ್ಕೆ `ಎರಡನೇ ದರ್ಜೆ’ಗೆ ತಳ್ಳಲ್ಪಡುವ ಅವಮಾನದಿಂದ ಬಳಲುತ್ತಿದ್ದಾಳೆ.

ಮಹಿಳೆಯ ಕುರಿತಾದ ಜೀವವಿರೋಧಿ ತಾರತಮ್ಯದ ವಿರುದ್ಧ ಹೋರಾಡಿದ, ಹೋರಾಡುತ್ತಿರುವ ಕೋಟಿ ಮಹಿಳೆಯರಿಗೆ ನಮ್ಮ ಧನ್ಯವಾದಗಳು. ಇಂತಹ ಸಮರಧೀರ ಮಹಿಳೆಯರಿಂದಾಗಿಯೇ (ನಿರಂತರ ಹೋರಾಟದ ನೂರು ವರ್ಷಗಳ ನಂತರವೂ) ಮಹಿಳೆಯರಿಗೆ ಕೆ(ಹ)ಲವು ಕೊರತೆಗಳಿದ್ದರೂ ಇಷ್ಟಾದರೂ ಒಳ್ಳೆಯ ಸ್ಥಾನ ಮಾನ ಸಿಕ್ಕಿದೆ. ಈ ಕೊರತೆಗಳ ನಿರ್ಮೂಲನೆಗಾಗಿ ನಾವು `ವಿಶ್ವ ಮಹಿಳಾ ದಿನ’ದ ಹೋರಾಟದ ಪರಂಪರೆಯನ್ನು ಮುಂದುವರಿಸಬೇಕಾಗಿದೆ.

ಮಹಿಳೆಯ ಗುಣಗಾನ ಮಾಡುವ ನೆಪದಲ್ಲಿ ಮಹಿಳೆಯ ಮೇಲೆ `ಕ್ಷಮೆ’ ಎನ್ನುವ ಗುಣವನ್ನು ಹೊರಿಸಿ ತಾನು ಅನುಭವಿಸುವ ಹಸಿವು ಅಪಮಾನ ಗಳನ್ನು ಸಹಿಸಿಕೊಂಡಿರು ಎನ್ನುವ `ಕ್ಷಮಯಾ ಧರಿತ್ರೀ’ ಎನ್ನುವ ಧರ್ಮವಾಕ್ಯ ಮಹಿಳೆಯರನ್ನು ಹೋರಾಟದ ಹಾದಿಯಿಂದ ವಿಮುಖಳಾಗಿಸು ಒಂದು ಹುನ್ನಾರ ಎನ್ನುವುದು ಮಹಿಳೆ ಅರಿತಿರಬೇಕು. ಸಮ್ಮಾನ, ಗೌರವಗಳಿಲ್ಲದ ಬರಿಯ ಹೊಗಳಿಕೆ ಇನ್ನು ಸಾಕು.

ದುಡಿಮೆಯ ಮೂಲಕ ಹಸಿವನ್ನು ನೀಗಿಸಿಕೊಳ್ಳುವ ಹಾಗೂ ಗೌರವಾನ್ವಿತ ಬದುಕನ್ನು ನಡೆಸುವುದೇ ಎಲ್ಲಾ ಮಹಿಳೆಯರ ಗುರಿಯಾಗಿರಲಿ. ಯಾವುದೇ ರೀತಿಯ ದುಡಿಮೆಯಿರಲಿ ಅದು ಮಹಿಳೆಯ ಹಸಿವನ್ನು ನೀಗುವುದು ಮಾತ್ರವಲ್ಲದೇ ಅವಳು ಗೌರವ ಪಡೆಯಲು ಅನುಕೂಲವಾಗುವಂತಿರಬೇಕು. ಅಂತಹ ದುಡಿಮೆಯ ಹಕ್ಕು ಮಹಿಳೆಯರದಾಗಬೇಕು. ಆಗಲಷ್ಟೇ ನೂರು ವರ್ಷಗಳಿಂದ ವಿವಿಧ ಬೇಡಿಕೆಗಳನ್ನಿಟ್ಟು ಹೋರಾಡಿದ ಮಹಿಳೆಯರ ಹೋರಾಟದ ಯಶಸ್ವಿಯಾಗಿದೆ ಎನ್ನಬಹುದು.

`ವಿಶ್ವ ಮಹಿಳಾ ದಿನ’ ನೂರು ವರ್ಷಗಳನ್ನು ದಾಟಿದ ಈ ಸಂದರ್ಭದಲ್ಲಿ `ಚಿಂತನ ಪುಸ್ತಕ’ ಹೊರ ತಂದಿರುವ `ಅಂತರ ರಾಷ್ಟ್ರೀಯ ಮಹಿಳಾ ದಿನ ಶತಮಾನೋತ್ಸವ ಮಾಲಿಕೆ’ ಯಲ್ಲಿ ಯೋಜಿಸಿದ 12 ಪುಸ್ತಕಗಳಲ್ಲಿ ಈಗಾಗಲೇ ಹೊರಬಂದ 4 ಪುಸ್ತಕಗಳ ಪರಿಚಯ ಇಲ್ಲಿದೆ.


ಶೀರ್ಷಿಕೆ: ಮಹಿಳಾ ವಿಮೋಚನೆಯ ಹೋರಾಟಗಳ ನೂರು ವರ್ಷಗಳು ಪ್ರಕಾಶಕರು: ಚಿಂತನ ಪುಸ್ತಕ ಲೇಖಕರು:ಎಸ್.ಕೆ.ಗೀತಾ ಪುಟ:88+4 ಬೆಲೆ:ರೂ.70/-


ಶೀರ್ಷಿಕೆ: ನೀನುಂಟು ನಿನ್ನ ರೆಕ್ಕೆಯುಂಟು ಪ್ರಕಾಶಕರು:ಚಿಂತನ ಪುಸ್ತಕ ಸಂಪಾದಕರು: ಮಾಧವಿ ಭಂಡಾರಿ ಕೆರೆಕೋಣ ಪುಟ:136+4 ಬೆಲೆ:ರೂ.95/-

ಶೀರ್ಷಿಕೆ: ವಿಶ್ವ ಮಹಿಳಾ ದಿನದ ರೂವಾರಿ ಕ್ಲಾರಾ ಜೆಟ್ಕಿನ್ ಪ್ರಕಾಶಕರು:ಚಿಂತನ ಪುಸ್ತಕ ಲೇಖಕರು: ಡಾ.ಎನ್.ಗಾಯತ್ರಿ ಪುಟ: 118+4 ಬೆಲೆ:ರೂ.80/-


ಶೀರ್ಷಿಕೆ: ದಶಕದ ಮಹಿಳಾ ಸಾಹಿತ್ಯದಲ್ಲಿ ಪ್ರತಿರೋಧದ ನೆಲೆಗಳು ಪ್ರಕಾಶಕರು:ಚಿಂತನ ಪುಸ್ತಕ ಸಂಪಾದಕರು:ಡಾ.ಸಬಿಹಾ ಭೂಮಿಗೌಡ ಪುಟ:96+4 ಬೆಲೆ:ರೂ.70

ಮಹಿಳಾ ಸಾಕ್ಷರತೆಯ ದಿನವಾದ ಇಂದು ಮರೆಯಬಾರದ ವಿಮೋಚಕಿಯನ್ನು ನೆನೆಯೋಣ

ಇಂದಿನ ವಿಶ್ವ ಸಾಕ್ಷರತಾ ದಿನವನ್ನು ಯುನೆಸ್ಕೋ ಮಹಿಳಾ ಸಾಕ್ಷರತೆಯ ದಿನವಾಗಿ ಆಚರಿಸುತ್ತಿದೆ. ಮಹಿಳಾ ಸಾಕ್ಷರತೆಯ ಬಗ್ಗೆ ಮಾತನಾಡಿದಾಗ ಭಾರತೀಯ ಮಹಿಳೆಯರು ಮೊದಲು ನೆನಸಬೇಕಾದ ವ್ಯಕ್ತಿ ಸಾವಿತ್ರೀಬಾಯಿ ಫುಲೆ. ದೇಶದ ಮೊಟ್ಟ ಮೊದಲ ಮಹಿಳಾ ಗುರುವೆಂಬ ಖ್ಯಾತಿಗೆ ಪಾತ್ರರಾದ ಸಾವಿತ್ರೀಬಾಯಿ ಫುಲೆ ಅವರು ತನ್ನ ಕಾರ್ಯದಲ್ಲಿ ಸಾಕಷ್ಟು ವಿಘ್ನಗಳನ್ನು ಎದುರಿಸಿದ್ದರು. ಅವರೇ ಸ್ಥಾಪಿಸಿದ ಹೆಣ್ಣುಮಕ್ಕಳ ಶಾಲೆಗೆ ಓದಿಸಲು ಹೋಗುವಾಗ ಮೇಲು ಜಾತಿಯ ಗಂಡಸರು ಅವರ ಮೇಲೆ ಕೆಸರು, ಮಣ್ಣು, ಧೂಳುಗಳನ್ನು ಎಸೆಯುತ್ತಿದ್ದರಂತೆ. ಅಂತಹ ಸಂದರ್ಭದಲ್ಲೂ ದೃತಿಗೆಡದೆ ಮಹಿಳಾ ಸಾಕ್ಷರತೆಗಾಗಿ ದುಡಿದ ಮಹಾನ್ ಮಹಿಳೆ ಅವರು.

ಏಳಿ, ಎದ್ದೇಳಿ, ಶಿಕ್ಷಣ ಪಡೆಯಿರಿ,
ಸಂಪ್ರದಾಯಗಳನ್ನು ಸದೆಬಡಿಯಿರಿ,
ಮುಕ್ತಿ ಹೊಂದಿರಿ!
-ಸಾವಿತ್ರೀಬಾಯಿ ಫುಲೆ
ವಿಶ್ವ ಮಹಿಳಾ ಸಾಕ್ಷರತೆಯ ದಿನವಾದ ಇಂದು ಸಾವಿತ್ರೀ ಬಾಯಿ ಫುಲೆ ಅವರನ್ನು ನೆನಸಿಕೊಳ್ಳೋಣ.

ಈ ಪ್ರಬಂಧಗಳ ಸಂಗ್ರಹಣೆಯು ಸಾವಿತ್ರೀಬಾಯಿ ಫುಲೆಯವರ ಜೀವನ ಮತ್ತು ಹೋರಾಟವನ್ನು ಜೀವಂತವಾಗಿ ಇರಿಸುವ ಒಂದು ಪ್ರಯತ್ನವಾಗಿದೆ. ಪ್ರಾಯಶಃ ಹತ್ತೊಂಬತ್ತನೇ ಶತಮಾನ ಕಂಡ ಶ್ರೇಷ್ಟ ಭಾರತೀಯ ಮಹಿಳೆ ಸಾವಿತ್ರಿ. ಸಾವಿತ್ರಿಬಾಯಿ ಫುಲೆ (1821-1897) ಆ ಕಾಲದ ಅಮನಾನವೀಯ, ಪಿತೃಪ್ರಧಾನ ಮತ್ತು ದಬ್ಬಾಳಿಕೆಯ ಸಂಪ್ರದಾಯಿಕ ಶಕ್ತಿಗಳ ವಿರುದ್ಧ ಹೋರಾಟವನ್ನು ಆಯೋಜಿಸಿದರು. ಅಲ್ಲಿಂದ ಆಕೆ ಆಧುನಿಕ ಭಾರತದ ಮೊದಲ ಮಹಿಳಾ ಗುರುವಾಗಿ ಹಾಗೂ ದಲಿತರ, ಕೆಳಜಾತಿಗಳ, ಕಾರ್ಮಿಕರ, ಕೃಷಿಕರ ನಾಯಕಿಯಾಗಿ ಹೊರಹೊಮ್ಮಿದರು. ಕ್ರಾಂತಿಕಾರಿಯಾದ ತನ್ನ ಗಂಡ ಮಹಾತ್ಮಾ ಜ್ಯೋತಿ ಬಾ ಫುಲೆಯವರ ಜತೆಯಲ್ಲಿ ಹೋರಾಟ ಮತ್ತು ದುಃಖ ಅನುಭವಿಸಿದರು. ಆದರೆ ಆಕೆಯೂ ತನ್ನದೇ ಪ್ರತ್ಯೇಕ, ಕರುಣಾಮಯಿ ಮತ್ತು ಕ್ರಿಯಾಶೀಲ ವ್ಯಕ್ತಿತ್ವವನ್ನು ರೂಢಿಸಿಕೊಂಡಿದ್ದರು.

ಮೇಲ್ವರ್ಗದವರ ಶತಮಾನಗಳ ದಬ್ಬಾಳಿಕೆಯ ನಂತರ ತಳಮಟ್ಟದಲ್ಲಿ ನ್ಯಾಯಯುತ ಮತ್ತು ಮಾನವೀಯ ಸಮಾಜಕ್ಕಾಗಿ ಸಾವಿತ್ರಿಬಾಯಿ ಫುಲೆಯವರು ಮಾಡಿದ ಕಿಚ್ಚಿನ ಹೋರಾಟ, ಬದಲಾವಣೆಗಾಗಿ ಜನರ ಯೋಚನೆಗೆ ಕಿಚ್ಚು ಹೊತ್ತಿಸುತ್ತದೆ. ಕ್ರಾಂತಿಜ್ಯೋತಿಯೆಂಬ ಹೆಗ್ಗಳಿಕೆಗೆ ಪಾತ್ರರಾದ ಸಾವಿತ್ರೀಬಾಯಿ, ಆಧುನಿಕ ಮಹಾರಾಷ್ಟ್ರದ ಪ್ರೀತಿಮಯಿ ವಾತ್ಸಲ್ಯ ಮೂರ್ತಿಯಾಗಿದ್ದಾರೆ, ಮತ್ತು ಮಹಿಳೆಯರ, ದಲಿತರ ಮತ್ತು ಇತರೇ ಹಿಂದುಳಿದ ವರ್ಗಗಳ ಹೋರಾಟಗಳಲ್ಲಿ ಸ್ಪೂರ್ತಿಯ ಸೆಲೆಯಾಗಿದ್ದಾರೆ.

ಈ ಪುಸ್ತಕದಲ್ಲಿ ಕ್ರಾಂತಿಕಾರಿ ಬರಹಗಾರರ ಸಮೂಹವು ಈ ಅತ್ಯದ್ಭುತ ಮಹಿಳೆಯ ಜೀವನ ಮತ್ತು ಹೋರಾಟದ ವಿವಿಧ ಮಜಲುಗಳನ್ನು ವಿಶ್ಲೇಷಿಸಿ ಕಣ್ಣಿಗೆ ಕಟ್ಟುವಂತೆ ಅರ್ಪಿಸಿದ್ದಾರೆ.

ಶೀರ್ಷಿಕೆ:        ಮರೆತ ವಿಮೋಚಕಿ-ಸಾವಿತ್ರಿಬಾಯಿ ಫುಲೆಯ ಜೀವನ ಮತ್ತು ಹೋರಾಟ
ಸಂಪಾದಕರು:ಬ್ರಜ್ ರಂಜನ್ ಮಣಿ,ಪ್ಯಾಮೆಲ ಸರ್ದಾರ್ ಕನ್ನಡಕ್ಕೆ:ಅಲೆಮಾರಿ
ಪ್ರಕಾಶಕರು:   ಟ್ರೈನಿಂಗ್, ಎಡಿಟೋರಿಯಲ್ ಅಂಡ್ ಡೆವಲಪ್ ಮೆಂಟ್ ಸರ್ವಿಸಸ್
ಪುಟ : 80       ಬೆಲೆ: ರೂ.60/-

ಪ್ರಾಸ ಪ್ರಯಾಸ ಪ್ರವೀಣ!

ಬಿ.ಎಸ್. ಕೇಶವರಾವ್, ಚಿಕ್ಕದಾಗಿ, ಬಿ.ಎಸ್.ಕೆ. ಹಾಗೆಂದರೆ `ಬಿಟ್ಟರೆ ಸಿಗದ ಕೇಡಿಎಂದು ವೈ.ಎನ್.ಕೆ. ಹೇಳುತ್ತಿದ್ದರಂತೆ. ವೈ.ಎನ್.ಕೆ. ಕುರಿತು ಬಿ.ಎಸ್.ಕೆ. ಬರೆಯುತ್ತಾರೆ:`ಪೂರ್ವದಿಂದಲೂ ಅಷ್ಟೇ, ಪದಗಳೊಡನೆ ಫನ್ ಮಾಡುವುದರಲ್ಲಿ ಪಾಖಡಾ ಎನ್ನುವಂತೆ ತಮ್ಮ ಪೆನ್ ಬಳಸಿ ಪ್ರಖ್ಯಾತರಾಗಿದ್ದ ವೈ.ಎನ್.ಎ. ಇತ್ತೀಚೆಗೆ ವಿಮಾನದಲ್ಲಿ ಹಾರುತ್ತಿರುವಾಗ ಹೃದಯಾಘಾತಕ್ಕೊಳಗಾಗಿ ಯಾರೊಬ್ಬರಿಗೂ ಚಿಕಿತ್ಸೆ ನೀಡುವ ಅವಕಾಶ ಕೊಡದೇ ಆಕಾಶದಲ್ಲೇ ಅಸುನೀಗಿ ಅದೃಶ್ಯರಾಗಿ ಹೋದರು.

ಇದು ಅವರ ಪ್ರಾಸಭರಿತ ಶೈಲಿಗೊಂದು ಸಣ್ಣ ಉದಾಹರಣೆ. ಪ್ರಾಣ ಹೋದರೂ ಪ್ರಾಸ ಬಿಡುವುದಿಲ್ಲ ಎನ್ನುವ ಹೊಸಗಾದೆಯನ್ನೂ ಅವರಿಗೋಸ್ಕರ ಸೃಷ್ಟಿಸಬಹುದು. ಎಂದೋ ಬರೆದ ಲೇಖನ ಪುಸ್ತಕದಲ್ಲಿ ಬರುವ ಹೊತ್ತಿಗೆ ಸಣ್ಣಪುಟ್ಟ ತಿದ್ದುಪಡಿಗೆ ಒಳಪಡದೇ ಹೋದರೆ, 2008ರ ಅಕ್ಪೋಬರ್ ನಲ್ಲಿ ಕೈಗೆತ್ತಿಕೊಂಡರೂ `ವೈ.ಎನ್.ಕೆ. ಇತ್ತೀಚೆಗೆ ಅಸು ನೀಗುತ್ತಾರೆ’.

ಅಡಿಗರ ಕುರಿತು ಬಿ.ಎಸ್.ಕೆ. ಬರೆಯುತ್ತಾರೆ: ಬಕ್ಕತಲೆಯವರಾಗಿದ್ದರೂ ಬರೆಯುವುದರಲ್ಲವರು ಬ್ರಹ್ಮರಾಕ್ಷಸ. ಬಕ್ಕತಲೆಯವರು ಎಂಬ ಪ್ರಸ್ತಾಪ ಅಲ್ಲಿ ಬೇಕಿತ್ತೇ? ಬಕ್ಕತಲೆಯವರು ಬರೆಯುವುದಿಲ್ಲವೇ? ಬ್ರಹ್ಮರಾಕ್ಷಸ ಯಾವಾಗ ಬರೆದ ಎಂದು ಕೇಳಬೇಡಿ. ಪ್ರಾಸ ಮುಖ್ಯ. ಶಿವರಾಮ ಕಾರಂತರ ಕುರಿತ ಬರಹ ನೋಡಿ: ಸದಾಕಾಲವೂ ಸಿಂಡರಿಸಿಕೊಂಡಂತೆ ಸೀರಿಯಸ್ಸಾಗೇ ಇರುತ್ತಿದ್ದದ್ದು ಸ್ವಭಾವ!

ಈ ಪ್ರಾಸೋಪವೇಶದಿಂದ ಪಾರಾದರೆ ಕೇಶವರಾವ್ ಲೇಖನಗಳು ಖುಷಿ ಕೊಡುತ್ತವೆ. ಕೈಲಾಸಂ ಕುರಿತಂತೂ ಅವರದೇ ಅಧಿಕೃತ ವಾಣಿ. ಅಷ್ಟೇ ಅಲ್ಲ, `ಕಂಡವರ, ಕಾಣದವರ, ಕೇಳಿದವರ, ಕೇಳದವರ, ಕತೆಯಾದವರ ಕುರಿತೂ ಕೇಶವರಾವ್ ಕಣ್ಣಿಗೆ ಕಟ್ಟುವಂತೆ ಕಥಿಸಬಲ್ಲರು‘!

ಬಿ.ಎಸ್.ಕೆ. ಬರೆದ ಮರೆಯಲಾಗದವರು ಹಾಗೂ `ಕನ್ನಡಕ್ಕೊಬ್ಬನೇ ಕೈಲಾಸಂಮರುಮುದ್ರಣ ಕಂಡಿವೆ.

ಐವತ್ತೆಂಟು ಕನ್ನಡ ಪ್ರತಿಭೆಗಳ ಕುರಿತು `ಮರೆಯಲಾಗದವರುಕೃತಿಯಲ್ಲಿ ಕೇಶವರಾವ್ ಸೊಗಸಾಗಿ ಬರೆದಿದ್ದಾರೆ. ನಗುವ, ನಗಿಸುವ, ನಗಿಸಿ, ನಗುತ ಬರೆಯುವುದು, ಬಾಳುವುದು ಜೀವನದ ಧ್ಯೇಯ ಎಂದು ನಂಬಿರುವ ಕೇಶವರಾವ್ ಕೃತಿಗಳು ಓದುವ ಸಂತೋಷವನ್ನಂತೂ ಧಾರಾಳವಾಗಿ ಕೊಡುತ್ತವೆ.

ಶೀರ್ಷಿಕೆ: ಮರೆಯಲಾಗದವರು ಲೇಖಕರು: ಬಿ.ಎಸ್. ಕೇಶವರಾವ್ ಪ್ರಕಾಶಕರು : ಐ.ಬಿ.ಎಚ್. ಪ್ರಕಾಶನ ಪುಟಗಳು : 482 ಬೆಲೆ:ರೂ. 290/-

ಕೃಪೆ : ಕನ್ನಡ ಪ್ರಭಾ

ಜುಗಲಬಂದಿ ಚಿಂತಕ

ಅತ್ಯುತ್ತಮ ಕತೆ ಕಾದಂಬರಿ ಬರೆದು, ವಿಮರ್ಶ ಮಾರ್ಗವನ್ನು ರೂಪಿಸಿ, ಸಂಸ್ಕೃತಿ ಚಿಂತನೆಗೆ ಹೊರಳಿ ಅಲ್ಲಿ ಗಟ್ಟಿಯಾಗಿ ನಿಲ್ಲಲು ಅನಂತಮೂರ್ತಿಯವರು ಹವಣಿಸಿದ್ದು ಚಲಾವಣೆಯ ಒತ್ತಡವೇ?

ಸಮಾಜವಾದಿಯಾಗಿ ಸಾಹಿತ್ಯಲೋಕ ಪ್ರವೇಶಿಸಿ, ಸಂಸ್ಕೃತಿ ಚಿಂತಕರಾಗಿ ಬೆಳೆದು ಈಗ `ಸಮಾಜವಾದಿಎಂದು ಕೇವಲ ಹೇಳಿಕೊಳ್ಳಬೇಕಾದ ತಮ್ಮ ಬೆಳವಣಿಗೆಯನ್ನು ಅನಂತಮೂರ್ತಿ ನೇರವಾಗಿ ಎದುರಿಸಿದ್ದಾರೆಯೇ

ಇಂಥ ಪ್ರಶ್ನೆಗಳನ್ನು ಕೇಳುತ್ತಿರುವವರು ಜಿ.ಕೆ.ರವೀಂದ್ರಕುಮಾರ್. ಅನಂತಮೂರ್ತಿಯವರು ತಮ್ಮ ಏಕಾಂತವನ್ನು ಕಳೆದುಕೊಂಡಿದ್ದಾರೆ. ಗಾಂಧೀಜಿಯನ್ನು ಹೆಜ್ಜೆಹೆಜ್ಜೆಗೂ ಜ್ಞಾಪಿಸಿಕೊಳ್ಳುವ ಅವರು ಗಾಂಧೀಜಿಯ ಮೌನವನ್ನು ಬಲವಂತವಾಗಿ ಆದರೂ ಒಂದು ವ್ರತದಂತೆ ಕಾಣಬೇಕಾಗಿದೆ ಎಂದೂ ರವೀಂದ್ರಕುಮಾರ್ ಅಭಿಪ್ರಾಯ.

ಚೇತನ ಸಾಹಿತ್ಯ ಮಾಲೆ ಆಧುನಿಕ ಬರಹಗಾರರು ಮಾಲಿಕೆಯಲ್ಲಿ ಜಿ.ಎಸ್.ಭಟ್ಟ ಸಂಪಾದಕತ್ವದಲ್ಲಿ ಹಿರಿಯ ಚೇತನಗಳನ್ನು ಪರಿಚಯ ಮಾಡಿಕೊಡುವ ಕಿರುಹೊತ್ತಿಗೆಗಳನ್ನು ಪ್ರಕಟಿಸುತ್ತಿದೆ. ಈ ಮಾಲಿಕೆಯ ಇತ್ತೀಚಿನ ಪ್ರಕಟಣೆ `ಜುಗಲಬಂದಿ ಚಿಂತಕ – ಯು ಆರ್ ಅನಂತಮೂರ್ತಿ‘.

ಅನಂತಮೂರ್ತಿ `ಷೇಕ್ ಆಗಿರುವರೆ ಎಂಬ ಪ್ರಶ್ನೆಯಿಂದ ಹಿಡಿದು, ತಮ್ಮ ಕುರಿತ ಟೀಕೆ ಟಿಪ್ಪಣಿಗಳಲ್ಲಿ ಅವರು ಕಳೆದುದೆಷ್ಟು ಬೆಳೆದುದೆಷ್ಟು ಎಂಬ ಪ್ರಶ್ನೆಯ ತನಕ ರವೀಂದ್ರಕುಮಾರ್ ಅವರ ಕೃತಿ ವಸ್ತುನಿಷ್ಟ. ಬಹುಶಃ ಒಬ್ಬ ಲೇಖಕನನ್ನು ಇಷ್ಟು ಸಮಗ್ರವಾಗಿ ಮೆಚ್ಚಿಕೊಳ್ಳುತ್ತಲೇ `ಕೋರ್ಟ ಮಾರ್ಷಲ್ಮಾಡುವ ಅಪರೂಪದ ಕೃತಿ ಇದು. ಇಲ್ಲಿ ಅವರನ್ನು ವಿರೋಧಿಸುವವರಿಗೂ ಮೆಚ್ಚುವವರಿಗೂ ತಮ್ಮ ತಮ್ಮ ವಾದಗಳನ್ನು ಸಮರ್ಥಿಸಿಕೊಳ್ಳುವುದಕ್ಕೆ ಸಾಕಷ್ಟು ಸಾಮಾಗ್ರಿ ಲಭ್ಯ.

ಪುಸ್ತಕದ ಗುಣಮಟ್ಟ, ಬಳಸಿದ ಕಾಗದ ಮತ್ತು ವಿನ್ಯಾಸ ಇನ್ನಷ್ಟು ಸೊಗಸಾಗಿರಬೇಕಿತ್ತು.

ಶೀರ್ಷಿಕೆ: ಜುಗಲಬಂದಿ ಚಿಂತಕ ಯು. ಆರ್. ಅನಂತಮೂರ್ತಿ ಲೇಖಕರು: ಜಿ. ಕೆ. ರವೀಂದ್ರ ಕುಮಾರ್ ಪ್ರಕಾಶಕರು : ಚೇತನ ಪ್ರಿಂಟರ್ಸ್ ಪುಟಗಳು : 128 ಬೆಲೆ:ರೂ.60/-

ಕೃಪೆ : ಕನ್ನಡ ಪ್ರಭಾ