ಶ್ರೇಷ್ಠ ಶಾಲೆಗೆ ಸೇರಿಸಿಬಿಟ್ಟರೆ, ಮಗುವಿಗೆ ಶ್ರೇಷ್ಠ ಶಿಕ್ಷಣ ಸಿಗುವುದಿಲ್ಲ

ಶಿಕ್ಷಣದ ಬಗ್ಗೆ ಯಾರು ಯೋಚಿಸಬೇಕು ಎಂಬ ಒಂದು ಮಹತ್ವದ ಪ್ರಶ್ನೆ ನಮ್ಮ ಮುಂದೆ ಯಾವಾಗಲೂ ಇದೆ. … ಶಿಕ್ಷಣದ ಬಗ್ಗೆ ಯಾರಾದರೂ ಯೋಚಿಸುತ್ತಿದ್ದರೆ ಅದು ನಮಗೆ ತಿಳಿಯುವುದು ಆ ಬಗ್ಗೆ ಬರೆಯುವುದರಿಂದ ಮತ್ತು ಆ ಬಗ್ಗೆ ಮಾತನಾಡುವವರಿಂದ. ನಮ್ಮ ಪ್ರಶ್ನೆ: ಇವತ್ತು ಆ ಕೆಲಸ ಎಷ್ಟು ಮಂದಿ ಮಾಡುತ್ತಿದ್ದಾರೆ? ಎಷ್ಟು ಮಂದಿ ಬರೆಯುತ್ತಿದ್ದಾರೆ? ಎಷ್ಟು ಸಂಶೋಧನೆ ನಡೆಯುತ್ತಿದೆ? ಎಷ್ಟು ಪುಸ್ತಕಗಳು ಪ್ರಕಟವಾಗುತ್ತಿವೆ? ಸಂಶೋಧನೆಗಳ ಬಗ್ಗೆ, ಪುಸ್ತಕಗಳ ಬಗ್ಗೆ ಎಷ್ಟು ಚರ್ಚೆ ನಡೆಯುತ್ತಿದೆ? ಅಮೆರಿಕಾ ಇಂಗ್ಲಂಡು ಜರ್ಮನಿಗಳಲ್ಲದೆ ಇತರ ಹಲವು ದೇಶಗಳಲ್ಲಿ ನಿರಂತರವಾಗಿ ನಡೆಯುವ ಈ ಕೆಲಸ ನಮ್ಮಲ್ಲಿ ಯಾಕೆ ನಡೆಯುತ್ತಿಲ್ಲ? ಇಷ್ಟರವರೆಗೆ ಆಗದಿದ್ದುದು ಇನ್ನು ಬೇಗನೆ ಆದೀತು ಎಂದು ನಂಬಿ ಕೂರಲು ಸಾಧ್ಯವಿಲ್ಲ. ಯಾಕೆಂದರೆ ಇದು ನಮ್ಮ ಮಕ್ಕಳ ಭವಿಷ್ಯದ ಪ್ರಶ್ನೆ. ನಾಳೆ ನಾಡಿದ್ದರಲ್ಲಿ ಮುಗಿದುಹೋಗುವ ಉದ್ಯೋಗಾವಕಾಶಗಳಿಗಾಗಿ ವಿದ್ಯಾರ್ಥಿಗಳನ್ನು ತಯಾರು ಮಾಡುವ ವಿದ್ಯಾಭ್ಯಾಸ ಸಾಕೆ? ಅದಕ್ಕಿಂತಲೂ ದೂರದ ಭವಿಷ್ಯಕ್ಕೆ ವಿದ್ಯಾರ್ಥಿಗಳನ್ನು ತಯಾರು ಮಾಡಬೇಡವೇ? ಅಂಥ ಶಿಕ್ಷಣದ ಬಗ್ಗೆ ಯೋಚಿಸಬೇಕಾದ ಸ್ಥಿತಿ ಈಗ ನಿರ್ಮಾಣವಾಗಿಲ್ಲವೇ? ಯಾಕೆ ವಿಜ್ಞಾನ, ಇತಿಹಾಸ, ರಾಜಕಾರಣ, ಸಮಾಜ ವಿಜ್ಞಾನ, ಸಾಹಿತ್ಯ, ಅರ್ಥಶಾಸ್ತ್ರ ಮುಂತಾದ್ದು ಮೂಲೆಗುಂಪಾಗಿದೆ? ಇವು ನಮಗೆ ಬೇಡವೇ? ಇವೆಲ್ಲ ನಮ್ಮ ಬದುಕಿಗೆ ಎಷ್ಟು ಅನಿವಾರ್ಯ ಎಂಬುದನ್ನು ಕಂಡುಕೊಳ್ಳಲು ಇಂದಿನ ಶಿಕ್ಷಣದ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವಿಲ್ಲವೆ?
ಖಂಡಿತವಾಗಿಯೂ ಇದೆ. ಆದರೆ ಯಾರು ಮಾಡಬೇಕಾದ ಚಿಂತನೆ ಇದು? ಸದ್ಯದ ಸ್ಥಿತಿಯಲ್ಲಿ ಮಕ್ಕಳ ತಾಯಿತಂದೆಯರೇ ಇದನ್ನು ಮಾಡಬೇಕಾಗಿದೆ. ಶ್ರೇಷ್ಠ ಶಾಲೆಗೆ ಸೇರಿಸಿಬಿಟ್ಟರೆ, ಮಗುವಿಗೆ ಶ್ರೇಷ್ಠ ಶಿಕ್ಷಣ ಸಿಗುವುದಿಲ್ಲ ಎಂಬುದು ಸ್ಪಷ್ಟ. . . . .
ಮಗು ಸಮಾಜದಲ್ಲಿ ಓರ್ವ ಉತ್ತಮ ವ್ಯಕ್ತಿಯಾಗಿ, ಜವಾಬ್ದಾರಿಯುಳ್ಳ ಪ್ರಜೆಯಾಗಿ ಬದುಕಬೇಕು. ಸ್ವಾರ್ಥ ಸಾಧಕನೆನಿಸಿಕೊಳ್ಳದೆ, ಯಾರಿಗೂ ಹಿಂಸೆ ನೀಡದೆ, ಶಾಂತಿಯನ್ನು ಪ್ರೀತಿಸುವ, ಶಾಂತಿಯಿಂದ ಜೀವಿಸುವ ವ್ಯಕ್ತಿಯಾಗಿರಬೇಕು. ವಿದ್ಯಾಭ್ಯಾಸ ಅವನನ್ನು ಕೇವಲ ಬುದ್ಧಿವಂತನನ್ನಾಗಿಸಿದರೆ ಸಾಲದು; ಅವನ್ನು ಸನ್ನಡತೆಯವನ್ನಾಗಿಸಬೇಕು. ಅವನು ವಿವೇಕಶಾಲಿಯಾಗಿರಬೇಕು. ಪರಿಸರವನ್ನು ಪ್ರೀತಿಸುವವನಾಗಿರಬೇಕು. ಭೂತದಯೆಯುಳ್ಳವನಾಗಿರಬೇಕು. ಸಮ್ಯಕ್ ದೃಷ್ಟಿಯವನಾಗಿರಬೇಕು. ಒಬ್ಬ ಉತ್ತಮ ವ್ಯಕ್ತಿಯಾಗಿ ಬದುಕಲು ಇನ್ನೂ ಇಂಥ ಎಷ್ಟೋ ಗುಣಗಳು ಬೇಕು. ಇದು ಇವತ್ತು ಯಾವ ಶಿಕ್ಷಣ ಸಂಸ್ಥೆಯಲ್ಲಿ ಸಿಗುತ್ತದೆ? ಸಿಲೆಬಸಿನಲ್ಲಿ, ಯಾವ ಶಿಕ್ಷಣ ಕ್ರಮದಲ್ಲಿ ಇದನ್ನು ಅಳವಡಿಸಿಕೊಳ್ಳಲಾಗಿದೆ? ಈ ಪ್ರಶ್ನೆಗಳಿಗೆ ಸದ್ಯದ ಪರಿಸ್ಥಿತಿಯಲ್ಲಿ ಉತ್ತರ ಸಿಗುವುದಿಲ್ಲ.
ಆದರೆ ಇದನ್ನೆಲ್ಲ ಮನೆಯಲ್ಲೇ ನೀಡಲು ಸಾಧ್ಯವಿದೆ. ತಾಯಿತಂದೆ ಸ್ವಲ್ಪ ಪ್ರಯತ್ನಿಸಿದರೆ, ಶಿಕ್ಷಣ ಕ್ರಮದಲ್ಲಿನ ಕೊರತೆಯನ್ನು ಮನೆಯಲ್ಲಿ ಸರಿಪಡಿಸಬಹುದು. ಮನೆಯೆಂಬುದು ಶಾಲೆಯಷ್ಟೇ ಮುಖ್ಯವಾದ ಶಿಕ್ಷಣ ಗೃಹವಾಗಬಹುದು. ಈ ದಿಸೆಯಲ್ಲಿ ಚಿಂತಿಸುವ ಕೆಲಸವನ್ನು ತಾಯಿತಂದೆಯರೇ ಮಾಡಬೇಕು.
ಈ ಆಶಯವನ್ನು ಪ್ರಧಾನವಾಗಿಟ್ಟುಕೊಂಡು ಈ ಪುಸ್ತಕವನ್ನು ಸಿದ್ಧಪಡಿಸಿದ್ದೇನೆ. ತಾಯಿ ತಂದೆಯರಿಗೆ ಮಾತ್ರ ಎಂದರೆ, ಇದು ಶಿಕ್ಷಕರಿಗಲ್ಲ, ಮುಂದೆ ತಾಯಿ ತಂದೆಯರಾಗುವವರಿಗಲ್ಲ ಎಂದರ್ಥವಲ್ಲ. `ಮಗು ಮನುಷ್ಯನ ತಂದೆ’ ಎಂಬ ಮಾತಿನಂತೆ ತಾಯಿ ತಂದೆಯರು ಎಂಬುದಕ್ಕೂ ಬಹಳ ವಿಶಾಲವಾದ ಅರ್ಥವಿದೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ.
ಇದೊಂದು ದ್ವಿಭಾಷೀ(A Bilingual) ಪುಸ್ತಕ. ಈ ಪುಸ್ತಕದಲ್ಲಿ 12 ಅಧ್ಯಾಯಗಳಿವೆ. ಪ್ರತಿ ಅಧ್ಯಾಯದಲ್ಲಿಯೂ ಕೆಲವು ವಿಚಾರಗಳನ್ನು ಇಂಗ್ಲೀಷಿನಲ್ಲಿಯೂ ಕೆಲವು ವಿಚಾರಗಳನ್ನು ಕನ್ನಡದಲ್ಲಿಯೂ, ಮುಖ್ಯವಿಚಾರಗಳನ್ನು ಎರಡೂ ಭಾಷೆಗಳಲ್ಲಿಯೂ ಕೊಡಲಾಗಿದೆ. ಆದರೆ ಒಂದು ಇನ್ನೊಂದರ ನೇರ ಭಾಷಾಂತರವಾಗಿರುವುದಿಲ್ಲ. ಮುಖ್ಯ ಆಶಯವು ಮಾತ್ರಾ ಒಂದೇ ರೀತಿಯಾಗಿರುತ್ತದೆ.
-ಕೆ.ಟಿ.ಗಟ್ಟಿ (ಪುಸ್ತಕದ ಮುನ್ನುಡಿಯಿಂದ)


ಶೀರ್ಷಿಕೆ:ಗುರುಗಳಾಗಿ ತಾಯಿ-ತಂದೆ PARENTS AS EDUCATORS ಲೇಖಕರು:ಕೆ.ಟಿ.ಗಟ್ಟಿ ಪ್ರಕಾಶಕರು:ನವಕರ್ನಾಟಕ ಪ್ರಕಾಶನ ಪುಟ:216 ಬೆಲೆ:ರೂ.110/-

ವಿಶ್ವ ಸಾಕ್ಷರತಾ ದಿನದ ಶುಭಾಶಯಗಳು.

The importance of universal literacy has been recognised only recently in India. The nineties witnessed the emergence of mass literacy campaigns as the societal response-both at the level of official efforts and of people’s movements-to this belated realisation. This vivid and lively account of a celebrated mass literacy campaign in the backward district of Pudukkottai in Tamil Nadu is set in the context of India’s policies and programmes to advance adult education over the post fifty years.

Jointly written by on economist/literacy activist and a serving officer of the Indian Administrative Service, the book is divided into three sections. The first section traces India’s adult education efforts within the larger framework of mass literacy campaigns. The authors present a detailed picture of literacy trends in India, both nationally and for Tamil Nadu in particular.

The second port of the book is on extensive process account of the literacy campaign which was conducted in one of the least developed districts in the country. The authors show how the combined energies of activists and a supportive administration helped to make the campaign remarkably successful. Of particular note is the outstanding participation of women as learners, instructors, trainers and organiser-activists. Central to this campaign was the innovative feature of empowering rural women through related developmental initiatives such as managing stone quarries or producing and marketing artificial gems.

In the final section, the authors review the experience with moss literacy campaigns throughout India between 1989 and 1995, and provide critical insights drawn from the Pudukkottai experience which should be considered while formulating notional level policies.

The first book length documentation of one of the most exciting initiatives of recent times, this engrossing blend of historical analysis, contemporary narrative and critical reflection will be extremely useful to all those involved ip the fields of social work, literacy, education, development work, social movements, political science and sociology.

– ಪುಸ್ತಕದ ಬೆನ್ನುಡಿಯಿಂದ
ಶೀರ್ಷಿಕೆ: Literacy and Empowerment ಲೇಖಕರು: Venkatesh B Athreya, Sheela Rani Chunkath ಪ್ರಕಾಶಕರು: Sage Publications ಪುಟ:300 ಬೆಲೆ:ರೂ.150/-

ಅರಿವನೀವ ಗುರುವಿಗೆ ನಮನ

ಎಲ್ಲಾ ಶಿಕ್ಷಕರಿಗೆ ಶಿಕ್ಷಕರ ದಿನದ ಶುಭಾಶಯಗಳೊಂದಿಗೆ ಶಿಕ್ಷಣ ವ್ಯವಸ್ಥೆಯ ಬಗ್ಗೆ ಒಂದು ಇಣುಕು ನೋಟ.
ಇತ್ತೀಚೆಗೆ ಭಾರತದ ಶಿಕ್ಷಣ ರಂಗದಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತಿವೆ. 2005 ರಲ್ಲಿ “ರಾಷ್ಟ್ರೀಯ ಪಾಠಕ್ರಮ ಚೌಕಟ್ಟು” ಅಂಗೀಕಾರಗೊಂಡಿದೆ.
ವಿಶ್ವ ವ್ಯಾಪಾರ ಒಪ್ಪಂದದ (ವ್ಯಾಪಾರ ಮತ್ತು ಸೇವೆಗಳ ಕುರಿತ ಸಾಮಾನ್ಯ ಒಪ್ಪಂದ)ದ ಪ್ರಕಾರ ಉನ್ನತ ಶಿಕ್ಷಣದ ಖಾಸಗೀಕರಣವಾಗುತ್ತಿದೆ. ಇದಕ್ಕೆ ಒತ್ತಾಸೆಯಾಗಿ ಅನುದಾನ ಪಡೆಯದ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ರದ್ದುಪಡಿಸಿರುವ ಸುಪ್ರಿಂ ಕೋರ್ಟ್ ತೀರ್ಪು ಬಂದಿದೆ.

ಹಣಕಾಸು ಬಂಡವಾಳದ ಒತ್ತಡದಿಂದ ಶಿಕ್ಷಣದ ಮೇಲಿನ ಖರ್ಚನ್ನುಕಡಿತಗೊಳಿಸಿರುವ ಸರಕಾರಗಳು ಶಿಕ್ಷಣ ರಂಗವನ್ನು ವಿದೇಶಿ ಏಜೆನ್ಸಿಗಳಿಗೆ ವಹಿಸಿಕೊಡಲು ಸಿದ್ಧವಾಗುತ್ತಿವೆ. ಇವೆಲ್ಲಾ ಸೇರಿ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಆಮುಲಾಗ್ರ ಬದಲಾವಣೆಗಳಾಗುತ್ತಿವೆ.
ಇವು ಸಕಾರಾತ್ಮಕ ಬದಲಾವಣೆಗಳಲ್ಲ.
ನಮ್ಮ ಸ್ವಾತಂತ್ರ ಹೋರಾಟದ ಕನಸುಗಳ, ಗುರಿಗಳ ಈಡೇರಿಕೆಗೆ, ನಮ್ಮ ಸಂವಿಧಾನದಲ್ಲಿ ಪ್ರತಿಷ್ಠಾಪಿಸಿರುವ ಧ್ಯೇಯೋದ್ಧೇಶಗಳಿಗೆ ಮಾರಕವಾಗುವ ಬದಲಾವಣೆಗಳು; ದೇಶದ ಪ್ರಜಾಪ್ರಭುತ್ವವಾದಿಗಳಲ್ಲಿ ಆತಂಕ ಮೂಡಿಸಿರುವ ಬದಲಾವಣೆಗಳು, ದೇಶದ ಹಿರಿಯ ಪ್ರಾಧ್ಯಾಪಕರು, ಶಿಕ್ಷಣವೇತ್ತರು, ಚಿಂತಕರು ಈ ಬಗ್ಗೆ ನಡೆಸಿರುವ ಚಿಂತನೆಗಳ ಒಂದು ಸಂಗ್ರಹ ಇಲ್ಲಿದೆ.
ಕಾನಗೋಡ್(ಶಿರಸಿ)ದ ಪ್ರಾಧ್ಯಾಪಕರಾದ ಶ್ರೀ ಆರ್.ಡಿ.ಹೆಗಡೆಯವರು ಈ ಲೇಖನಗಳನ್ನು ಅನುವಾದಿಸಿ ಕೊಟ್ಟಿದ್ದಾರೆ.
-ಪುಸ್ತಕದ ಬೆನ್ನುಡಿಯಿಂದ
ಶೀರ್ಷಿಕೆ:    ಭಾರತದಲ್ಲಿ ಶಿಕ್ಷಣ ಸವಾಲು ಸಾಧ್ಯತೆ
ಲೇಖಕರು: ರೋಮಿಲಾ ಥಾಪರ್, ಇರ್ಫಾನ್ ಹಬೀಬ್, ಪ್ರಭಾತ್ ಪಟ್ನಾಯಕ್, ಸಿ.ಪಿ.ಚಂದ್ರಶೇಖರ್, ಕೆ.ಎಂ.ಶೀಮಾಲಿ,
ಶಮೀಮ್ ಅಖ್ತರ್, ಅರ್ಜುನ್ ದೇವ್, ವಿಜೇಂದ್ರ ಶರ್ಮ, ಅನುಭೂತಿ ಮೌರ್ಯ
ಅನುವಾದ: ಆರ್. ಡಿ. ಹೆಗಡೆ
ಪ್ರಕಾಶನ:   ಚಿಂತನ ಪುಸ್ತಕ
ಪುಟ:          99

ಪಠ್ಯಪುಸ್ತಕಗಳು ಮತ್ತು ಸಾಂಸ್ಕೃತಿಕ ರಾಜಕಾರಣ

ಏನನ್ನು ಓದಬೇಕು ಎಂದು ನಿಗದಿ ಮಾಡುವಾಗ ಕೆಲಮೊಮ್ಮೆ ಗೊತ್ತಿದ್ದೂ ಮತ್ತೆ ಕೆಲವೊಮ್ಮೆ ಗೊತ್ತಿಲ್ಲದೆಯೂ ಯಜಮಾನಿಕೆಯ ನೆಲೆಗಳು ತಮ್ಮ ಬೇರುಗಳನ್ನು ಗಟ್ಟಿಮಾಡಿಕೊಳ್ಳುತ್ತಿರುತ್ತವೆ. ಕಲಿಯುವವರು, ಮೊದಲಿನಂತೆ ತಲೆಮಾರುಗಳಿಂದ ಕಲಿಕೆ ಮತ್ತು ತಿಳಿವಿನ ಹಕ್ಕುಗಳನ್ನು ಪಡೆದುಕೊಂಡವರಷ್ಟೇ ಆಗಿಲ್ಲ. ಈಗ ಹಲವು ಮೂಲೆ ಮುಡುಕುಗಳಿಂದ ಮಕ್ಕಳು ಕಲಿಯುವ ವಲಯಕ್ಕೆ ಬರುತ್ತಿದ್ದಾರೆ. ಆದರೆ ಅವರು ಏನನ್ನು ಕಲಿಯಬೇಕೆಂದು ಹೇಳುವವರು ಮಾತ್ರ ಈ ಬದಲಾವಣೆಗೆ ತಾವು ಸಜ್ಜುಗೊಳ್ಳಬೇಕೆಂದು ತಿಳಿದಿಲ್ಲ. ಇದು ತಿಳಿವಿನ ಕೊರತೆಯೆಂದು ಹೇಳಲಾಗದು. ಬೇಕೆಂತಲೇ ಕಲಿಕೆಯಲ್ಲಿ ನಡೆಯಬೇಕಿದ್ದ ಬದಲಾವಣೆಗಳನ್ನು ಹತ್ತಿಕ್ಕುವುದು ಮತ್ತು ತಾರತಮ್ಯಗಳನ್ನು ಮುಂದುವರೆಸುವುದು ಗುರಿಗಳಾಗಿವೆ. ಇವು ಕೇವಲ ಹೇಳಿಕೆಗಳಲ್ಲ. ಈ ನಿಬಂಧ ಅದಕ್ಕೆ ತಕ್ಕ ಪುರಾವೆಗಳನ್ನು ನಮ್ಮೆದುರು ತೆರೆದಿಡುತ್ತದೆ.

– ಕೆ.ವಿ.ನಾರಾಯಣ (ಪುಸ್ತಕದ ಬೆನ್ನುಡಿಯಿಂದ)

ಶೀರ್ಷಿಕೆ: ಪಠ್ಯಪುಸ್ತಕಗಳು ಮತ್ತು ಸಾಂಸ್ಕೃತಿಕ ರಾಜಕಾರಣ ಲೇಖಕರು: ಡಾ. ಆರ‍್. ಚಲಪತಿ ಪ್ರಕಾಶಕರು : ಪ್ರಗತಿ ಗ್ರಾಫಿಕ್ಸ್ ಬೆಂಗಳೂರು ಪುಟ:232 ಬೆಲೆ:150/-

ಪ್ರಾಥಮಿಕ ಶಾಲಾ ವಿಜ್ಞಾನ ಕುರಿತು ಯುನೆಸ್ಕೋ ಸಂಪನ್ಮೂಲ ಪುಸ್ತಕ

ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ವಿಜ್ಞಾನ ಶಿಕ್ಷಣವು ಪ್ರಪಂಚದ ಅನೇಕ ಕಡೆ ಅಷ್ಟೇನು ಪ್ರಮುಖ ಸ್ಥಾನ ಪಡೆದಿಲ್ಲ. ಶಾಲೆಯೊಳಗಡೆ ವಿಜ್ಞಾನದ ಹೆಸರಿನಲ್ಲಿ ನಡೆಯುವ ಶಿಕ್ಷಣವು ಬಹುತೇಕ ಏನೇನೂ ಸಾಲದು. ಈ ಸಮಸ್ಯೆಯನ್ನು ನಿವಾರಿಸುವುದಕ್ಕೆ ಶಿಕ್ಷಕರಿಗೆ ಸೇವಾಪೂರ್ವ ಹಾಗೂ ಸೇವಾವಧಿಯಲ್ಲಿ ತರಬೇತಿ ನೀಡುವುದು ಒಂದು ಪ್ರಮುಖ ಪ್ರಯತ್ನ. ಶಾಲೆಯಲ್ಲಿ ಶಿಕ್ಷಕರು ಅನುಸರಿಸಬೇಕಾದ ಬೋಧನಾ ವಿಧಾನಗಳಿಗೆ ಪೂರಕವಾದ ತರಬೇತಿ ನೀಡುವುದು ಹೆಚ್ಚು ಪರಿಣಾಮಕಾರಿ. ಈ ಸಂಪನ್ಮೂಲ ಪುಸ್ತಕವು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತರಬೇತಿಯಲ್ಲಿ ವಿವಿಧ ರೀತಿಯ ವಿಷಯ ವಸ್ತುಗಳನ್ನು ಒದಗಿಸುತ್ತದೆ. ಇವನ್ನು ತಂಡಗಳಲ್ಲಿ ಮತ್ತು ವೈಯಕ್ತಿಕವಾಗಿ ಅಧ್ಯಯನ ಮಾಡಲು ಉಪಯೋಗಿಸಿಕೊಳ್ಳಬಹುದು.

ಡಾ. (ಶ್ರೀಮತಿ) ವೆನ್ ಹಾರ್ಲೆನ ರವರು ಸ್ಕಾಟಿಷ್ ಶಿಕ್ಷಣ ಸಂಶೋಧನಾ ಸಮಿತಿಯ ನಿರ್ದಶಕರು. ಇವರಿಗೆ ಶಾಲಾ ಕಾಲೇಜುಗಳಲ್ಲಿ ವಿಜ್ಞಾನ ಬೋಧನೆ ಮಾಡಿದ ಅಪಾರ ಅನುಭವವಿದೆ. ಇವರು ಮೊದಲಿಗೆ ಲಿವರ್ ಪೂಲ್ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದರು. ಅಲ್ಲದೆ ಬ್ರಿಸ್ಟಲ್, ರೀಡಿಂಗ್ ಮತ್ತು ಲಂಡನ್ ವಿಶ್ವವಿದ್ಯಾಲಯಗಳಲ್ಲಿ ಇವರು ಶೈಕ್ಷಣಿಕ ಹುದ್ದೆಗಳನ್ನು ಅಲಂಕರಿಸಿದ್ದರು. ಇಂಗ್ಲೆಂಡ್ ಹಾಗೂ ಪ್ರಪಂಚದಾದ್ಯಂತ ಇವರ ಹೆಸರು ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಪ್ರಸಿದ್ಧವಾಗಿದೆ. ಶ್ರೀಮತಿ ಹಾರ್ಲೆನ ರವರು ಈ ಕ್ಷೇತ್ರದಲ್ಲಿ ಅನೇಕ ಪ್ರಮುಖ ಯೋಜನೆಗಳನ್ನು ನಿರ್ದಶಿಸಿದ್ದಾರೆ. ಅದರಲ್ಲಿಯೂ ವಿದ್ಯಾರ್ಥಿಗಳ ಕಲಿಕೆಯನ್ನು ಮೌಲ್ಯಮಾಪನ ಮಾಡುವ ಹಾಗೂ ಪ್ರಶಿಕ್ಷಣದಲ್ಲಿನ ಹಲವು ಯೋಜನೆಗಳನ್ನು ಹಾರ್ಲೆನ ರವರು ನಿರ್ದಶಿಸಿದ್ದಾರೆ.

ಶ್ರೀ ಜೋಸ್ ಎಲ್ಸ್ಗೀಸ್ಟ್ ರವರು ನೆದರ್ ಲ್ಯಾಂಡ್ ದೇಶದ ಪ್ರಾಂತೀಯ ಕಲಿಕಾ ಕೇಂದ್ರ ಜೀಲ್ಯಾಂಡ್ ಇದರ ವಿಜ್ಞಾನ ಶಿಕ್ಷಣದ ಸಂಯೋಜಕರು. ಇದಕ್ಕಿಂತ ಮೊದಲು ಅವರು ತಾಂಜೇನಿಯ ಸಂಯುಕ್ತ ಗಣರಾಜ್ಯದ ಶಿಕ್ಷಕರ ತರಬೇತಿ ಕೇಂದ್ರ ಮೊರಗೊರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಶ್ರೀಯುತರು ಆಫ್ರಿಕಾದ ಪ್ರಾಥಮಿಕ ವಿಜ್ಞಾನ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವಿಜ್ಞಾನ ಶಿಕ್ಷಣದ ಯುನೆಸ್ಕೋ ಕಾರ್ಯಕ್ರಮದಲ್ಲಿಯೂ ಶ್ರೀಯುತರ ಪಾತ್ರ ಗಣನೀಯವಾದುದು. ಲೆಸೊತೊ ವಿಶ್ವವಿದ್ಯಾಲಯದಲ್ಲಿ ಶ್ರೀಯುತರು ಯುನೆಸ್ಕೊ ತಜ್ಞರಾಗಿ ಕಾರ್ಯನಿರ್ವಹಿಸಿದ್ದಾರೆ. ವಿಶೇಷವಾಗಿ ಶಿಕ್ಷಕರ ತರಬೇತಿ ಹಾಗೂ ಪ್ರಾಥಮಿಕ ಶಾಲಾ ಕಲಿಕೆಯ ಬಗ್ಗೆ ಸೃಜನಶೀಲ ವಿಧಾನಗಳನ್ನು ರೂಪಿಸುವಲ್ಲಿ ಶ್ರೀಯುತರು ಅಂತರ್ರಾಷ್ಟ್ರೀಯ ಪ್ರಸಿದ್ಧಿ ಪಡೆದಿದ್ದಾರೆ.

ಪ್ರಸಿದ್ಧ ವಿಜ್ಞಾನ ಲೇಖಕ ಡಾ. ಎಚ್.ಎಸ್. ನಿರಂಜನಾರಾಧ್ಯ ಅವರು ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಪುಸ್ತಕದ ಬೆನ್ನುಡಿಯಿಂದ.

ಶೀರ್ಷಿಕೆ : ಪ್ರಾಥಮಿಕ ಶಾಲಾ ವಿಜ್ಞಾನ ಕುರಿತು ಯುನೆಸ್ಕೋ ಸಂಪನ್ಮೂಲ ಪುಸ್ತಕ ಲೇಖಕರು : ವೆನ್ ಹಾರ್ಲೆನ್ , ಜಾಸ್ ಎಲ್ಸ್ ಗೆಯೀಸ್ಟ್ ಪ್ರಕಾಶಕರು : ಯುನೆಸ್ಕೋ ಪ್ರಕಟನಾ ಸಹಯೋಗದೊಂದಿಗೆ ನ್ಯಾಷನಲ್ ಬುಕ್ ಟ್ರಸ್ಟ್ ಪುಟಗಳು :263 ಬೆಲೆ:ರೂ.120/-

ಐದು ಶೈಕ್ಷಣಿಕ ಕೃತಿಗಳ ಬಿಡುಗಡೆ


ಕೃಪೆ : ಬೆಂಗಳೂರು ಟೈಮ್ಸ್, ದಿ ಟೈಮ್ಸ್ ಆಫ್ ಇಂಡಿಯಾ