ದೊರೆತಿರುವ ವಸ್ತು ಅವಶೇಷಗಳು ಏನು ತಿಳಿಸುತ್ತವೆ

ಕೋಮುವಾದಿ ಮನೋಧರ್ಮದಿಂದ ಭಾರತದ ಇತಿಹಾಸವನ್ನು ಬರೆಯ ಹೋಗುವುದು ದೇಶದ ನಿಜವಾದ ಇತಿಹಾಸವನ್ನು ತಿಳಿಯುವುದಕ್ಕೂ ಅದರ ಕೂಲಂಕಷ ಅಧ್ಯಯನಕ್ಕೂ ಅನೇಕ ಅಡಚಣೆಗಳನ್ನು ತಂದೊಡ್ಡುತ್ತದೆ. ಯಾವುವು ಈ ಅಡಚಣೆಗಳು, ಅವು ಎಂತಹ ಮಿತಿಗಳನ್ನು ಸೃಷ್ಟಿಸುತ್ತವೆ ಮತ್ತು ಇವುಗಳನ್ನು ನಿವಾರಿಸಿಕೊಳ್ಳಬೇಕಾದರೆ ಯಾವ ಮನೋಧರ್ಮ ತಳೆಯಬೇಕು ಅನ್ನುವುದನ್ನು ಈ ಕಿರು ಹೊತ್ತಗೆಯಲ್ಲಿ ಸೂಕ್ತ ಉದಾಹರಣೆಗಳೊಂದಿಗೆ ಸ್ಥೂಲವಾಗಿ ವಿವೇಚಿಸಲಾಗಿದೆ.

ಇತಿಹಾಸದ ನೈಜ ಚಿತ್ರಣವೆಂದರೆ ಆಯಾ ಕಾಲಗಳಲ್ಲಿದ್ದ ಸಾಮಾನ್ಯ ಜನರ ಜೀವನ ಚಿತ್ರಣ; ಆಗ ಇದ್ದ ಸಾಮಾಜಿಕ ಸಂರಚನೆಯ ಒಳನೋಟದ ದರ್ಶನ; ಆಗ ಇದ್ದ ಉತ್ಪಾದಕ ಶಕ್ತಿಗಳ ಹಾಗೂ ತಾಂತ್ರಿಕ ಬೆಳವಣಿಗೆಯ ಮಟ್ಟದ ಮತ್ತು ಉತ್ಪಾದನಾ ಸಂಬಂಧಗಳ ಸ್ಥಿತಿಗತಿಗಳ ಪ್ರತಿಬಿಂಬನೆ. ಇದಷ್ಟೇ ಇತಿಹಾಸ ಲೇಖನದಲ್ಲಿ ನೈಜ ನಿರಂತರತೆಯನ್ನೂ ಒದಗಿಸಬಲ್ಲದೆಉ.

ಈ ವಿಚಾರದ ಹಿನ್ನೆಲೆಯಲ್ಲಿ ಈ ಕಿರು ಹೊತ್ತಗೆಯ ಮೂವರು ವಿದ್ವಾಂಸ-ಲೇಖಕರೂ, ಕೋಮುವಾದಿ ಮನೋಧರ್ಮವು ಇತಿಹಾಸ ಲೇಖನದಲ್ಲಿ ಎಂತಹ ವಿರೂಪಗಳಿಗೆ ಎಡೆ ಮಾಡಿಕೊಡುತ್ತದೆ ಮತ್ತೆ ಅವನ್ನು ನಿವಾರಿಸಲು ಯಾವ ದೃಷ್ಟಿಕೋನದಿಂದ ಇತಿಹಾಸ ಲೇಖನ ಕಾರ್ಯ ಕೈಗೊಳ್ಳಬೇಕು ಎಂಬುದನ್ನು ವಿಶದಗೊಳಿಸಿದ್ದಾರೆ.

– ಪುಸ್ತಕದ ಬೆನ್ನುಡಿಯಿಂದ

ಶೀರ್ಷಿಕೆ: ಕೋಮುವಾದ ಹಾಗೂ ಭಾರತೀಯ ಇತಿಹಾಸ ಲೇಖನ ಲೇಖಕರು:ರೋಮಿಲ ಥಾಪರ‍್, ಹರ್ಬನ್ಸ್ ಮುಖಿಯ ಮತ್ತು ಬಿಪನ್ ಚಂದ್ರ ಅನುವಾದ:ಕೆ. ಎಲ್. ಗೋಪಾಲಕೃಷ್ಣ ರಾವ್ ಪ್ರಕಾಶನ: ನವಕರ್ನಾಟಕ ಪ್ರಕಾಶನ ಪುಟ:88 ಬೆಲೆ:ರೂ.22/

ಮಹಾಮತ್ತಿನ ಮಠಗಳು

scan0006

ಕೆಳದಿಯ ಅರಸರ ಕಾಲದಲ್ಲಿ ನಿರ್ಮಾಣವಾದ ಮಹಾಮತ್ತಿನ ಮಠಗಳಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕವಲೆದುರ್ಗದ ಮಥವೂ ಒಂದು. ಇದು ವೀರಶೈವ ಪರಂಪರೆಗೆ ಸೇರಿದ ಮಠ. ಇಂಥ ಅನೇಕ ಮಥಗಳು ನಿರ್ಮಾನವಾಗಿದ್ದರೂ ಅವುಗಳಲ್ಲಿ ಕೆಲವು ಈಗ ಇಲ್ಲವಾಗಿವೆ. ಈಗ ಬೆಂಗಳೂರು, ತುಮಕೂರು, ಕರಾವಳಿ, ಕೊಡಗಿನಲ್ಲಿರುವ ಮಹತ್ತಿನ ಮಠಗಳ ಬಗ್ಗೆ ನಡೆಸಿದ ಅಧ್ಯಯನ ಈ ಪುಸ್ತಕದಲ್ಲಿದೆ. ಇದನ್ನು ಕವಲೆದುರ್ಗದ ಮಠವೇ ಪ್ರಕಟಿಸಿದೆ.
ಕರ್ನಾಟಕದ ವೀರಶೈವ ಮಠಗಳಲ್ಲಿ ಎರಡು ಪರಂಪರೆಗಳು ಇವೆ. ಒಂದು ರಾಜಾಶ್ರಯ ಪಡೆದು, ನೂರಾರು ಶಾಖೆಗಳನ್ನು ಹೊಂದಿರುವ ಮಹಾಮತ್ತಿನ ಮಠಗಳು. ಇದರಲ್ಲಿ ಕವಲೆದುರ್ಗದ ಮಠವೂ ಒಂದು. ಇನ್ನೊಂದು ರಾಜಾಶ್ರಯ ಒಲ್ಲದ ಸ್ವತಂತ್ರವಾಗಿ ಬೆಳೆದ ವಿರಕ್ತಮಠ ಪರಂಪರೆ. ಮಹಾಮತ್ತಿನ ಪರಂಪರೆ ಬೆಳೆದದ್ದು ಕೆಳದಿ ಅರಸರ ಕಾಲದಲ್ಲಿ.
ಈ ಪುಸ್ತಕದಲ್ಲಿ ಕರ್ನಾಟಕದ ಮಹಾಮತ್ತಿನ ಮಠಗಳು, ಕವಲೇ ದುರ್ಗದ ಮಠದ ಚರಿತ್ರೆ, ಸಮಕಾಲೀನ ವೀರಶೈವ ಮಠಗಳು, ಅವುಗಳ ದಾನದತ್ತಿಗಳು – ಹೀಗೆ ಅವುಗಳಿಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಇಲ್ಲಿ ವಿವರವಾಗಿ ಕೊಡಲಾಗಿದೆ.
ಮಹಾಮತ್ತಿನ ಮಠಗಳ ಕುರಿತು ಒಂದು ಅಧ್ಯಯನಾತ್ಮಕ ಪುಸ್ತಕವೊಂದು ಈ ಮೂಲಕ ದೊರೆತಂತಾಗಿದೆ. ಇದು ಆಸಕ್ತರ ಕುತೂಹಲವನ್ನು ತಣಿಸುವುದರಲ್ಲಿ ಸಂದೇಹವಿಲ್ಲ.

ಶೀರ್ಷಿಕೆ: ಮಹಾಮತ್ತಿನ ಮಠಗಳು – ಒಂದು ಅಧ್ಯಯನ  ಲೇಖಕರು:ಜಯದೇಪ್ಪ ಜೈನಕೇರಿ, ಡಾ.ಜಗದೀಶ ಪ್ರಕಾಶಕರು: ಮರುಳಸಿದ್ದೇಶ್ವರ ವೀರಶೈವ ಅಧ್ಯಯನ ಕೇಂದ್ರ  ಪುಟ:285, ಬೆಲೆ:ರೂ.160/-

ಕೃಪೆ : ಪ್ರಜಾವಾಣಿ

ಮರಾಟಿ ಕುಣುಬಿಗಳು

scan0003

ಉತ್ತರ ಕನ್ನಡದ ಕಾಳಿ ನದಿಯ ದಂಡೆಯಿಂದ ಶರಾವತಿ, ತುಂಗಾ ನದಿಗಳವರೆಗೆ ತಮ್ಮ ವಾಸದ ವ್ಯಾಪ್ತಿಯನ್ನು ಹೊಂದಿರುವ ಮರಾಟಿ ಕುಣಬಿಗಳು ಒಂದು ವಿಶಿಷ್ಟ ಬುಡಕಟ್ಟಾಗಿದೆ. ಮಲೆನಾಡಿನಲ್ಲಿ ಹರಡಿಕೊಂಡಿರುವ ಈ ಬುಡಕಟ್ಟಿನ ಬಗ್ಗೆ ಸೂಕ್ಷ್ಮವಾಗಿ, ವಸ್ತುನಿಷ್ಟವಾಗಿ ಅಧ್ಯಯನ ಮಾಡಿದ್ದಾರೆ ಜೆ.ಕೆ.ರಮೇಶ್.
ಮರಾಟಿ ಕುಣಬಿಗಳು ಗಿರಿಜನರು. ಅವರು ಪ್ರಕೃತಿಯನ್ನು ಅವಲಂಬಿಸಿ ಬದುಕುತ್ತಿರುವವರು. ಅವರು ಮಾಡುತ್ತಿರುವ ವ್ಯವಸಾಯ ಕುಮರಿ ಬೇಸಾಯ. ಇದರೊಂದಿಗೆ ಅವರು ಇಲ್ಲಿ ವಲಸೆ ಬಂದು ಕರ್ನಾಟಕದಲ್ಲಿ ನೆಲೆಯಾದವರು.
ಇಂಥ ಕಾಡಿನ ಜೀವಿಗಳ ಸಂಪ್ರದಾಯ, ಸಾಮಾಜಿಕ ಕಟ್ಟಳೆಗಳು, ಅದರ ಸ್ವರೂಪ, ಕಲೆ, ಹಾಡು ಹಿನ್ನೆಲೆ ಇವನ್ನೆಲ್ಲ ದಾಖಲಿಸಿದ್ದಾರೆ ಜಿ.ಕೆ.ರಮೇಶ್. ಇದರೊಂದಿಗೆ ಅವರು ಇಲ್ಲಿ ವಲಸೆ ಬರಲು ಇದ್ದ ಐತಿಹಾಸಿಕ ಕಾರಣಗಳನ್ನು ದಾಖಲಿಸಿದ್ದಾರೆ.
ಮನೆ ಮಾತು ಮರಾಠಿಯಾದರೂ ಅವರು ಹೆಚ್ಚಾಗಿ ಬಳಸುವುದು ಕನ್ನಡವನ್ನು. ಇಂಥ ಗಿರಿಜನ ವಾಸಿಗಳ ಬಗ್ಗೆ ದಟ್ಟ ಚಿತ್ರವನ್ನು ಲೇಖಕರು ನೀಡಿದ್ದಾರೆ. ಪುಸ್ತಕದ ಕೊನೆಯಲ್ಲಿ ಅವರ ಜಾನಪದ ಹಾಡುಗಳನ್ನು ಕೂಡ ನೀಡಲಾಗಿದೆ.
ಅವುಗಳು ಬಹಳಷ್ಟು ಮರಾಠಿಯಲ್ಲಿದ್ದರೆ, ಕೆಲವು ಮಾತ್ರ ಕನ್ನಡದಲ್ಲಿವೆ. ಮರಾಠಿ ಹಾಡುಗಳ ಅನುವಾದವನ್ನು ಕೊಟ್ಟಿದ್ದರೆ ಈ ಪುಸ್ತಕದ ಉಪಯುಕ್ತತೆ ಇನ್ನಷ್ಟು ಹೆಚ್ಚಾಗುತ್ತಿತ್ತು. ಇಲ್ಲಿನ ಒಂದು ಕೋಲಾಟದ ಹಾಡು ಅರ್ಥಪೂರ್ಣವಾಗಿದೆ.
ದಾಸ ಬಣ್ಣದ ಹೂವ ತಂದೆ ನಾನು
ದಾಸ ಬಣ್ಣದ ಹೂವ ತಂದೆ
ಹೂವ ಮುಡಿವಾ ಜನರಲ್ಲೋ ನಾವು
ಹೂವ ಮುಡಿವ ಜನರಲ್ಲಾ

ಶೀರ್ಷಿಕೆ: ಮರಾಟಿ ಕುಣುಬಿಗಳು ಲೇಖಕರು:ಜೆ.ಕೆ.ರಮೇಶ್ ಪ್ರಕಾಶಕರು: ಚಕೋರ ಪ್ರಕಾಶನ ಪುಟ:84, ಬೆಲೆ:ರೂ.65/-

ಕೃಪೆ : ಪ್ರಜಾವಾಣಿ

ಚಿತ್ರದುರ್ಗದ ಕೋಟೆ ಪರಿಸರದ ದೇವಾಲಯಗಳು

ಈ ವಿಷಯದ ಬಗ್ಗೆ ಇದೇ ಮೊದಲ ಬಾರಿಗೆ ಇಂತಹದೊಂದು ಪುಸ್ತಕ ಹೊರಬಂದಿದೆ. ಎನ್. ಎಸ್. ಮಹಂತೇಶ ಇನ್ನೂ ಯುವಕರಾದರೂ ಆಳವಾದ ಅಧ್ಯಯನ ಹಾಗೂ ಅಗಾಧವಾದ ಕ್ಷೇತ್ರಕಾರ್ಯದ ಮೂಲಕ ಈಗಾಗಲೇ ಚಿತ್ರದುರ್ಗ ಇತಿಹಾಸದ ಬಗ್ಗೆ ಇರುವ ತಕ್ಕ ಮಟ್ಟಿನ ಸಂಶೋಧನಾ ಗ್ರಂಥಗಳ ಜತೆಗೆ ಮತ್ತೊಂದು ಹೊಸ ವಿಷಯವನ್ನು ಸೇರ್ಪಡೆ ಮಾಡಿದ್ದಾರೆ.

ಹುಲ್ಲೂರು ಶ್ರೀನಿವಾಸ ಜೋಯಿಸ, ಲಕ್ಷ್ಮಣ ತೆಲಗಾವಿ, ಬಿ. ರಾಜಶೇಖರಪ್ಪ, ಶ್ರೀ ಶೈಲಾರಾಧ್ಯ – ಮುಂತಾದ ನಾಡಿನ ಹೆಸರಾಂತ ಸಂಶೋಧಕರು ಚಿತ್ರದುರ್ಗದ ಇತಿಹಾಸದ ಬಗ್ಗೆ ಅಪಾರ ಸಂಶೋಧನೆ ಮಾಡಿದ್ದಾರೆ. ಅವರ ಕೆಲಸದ ಮುಂದುವರಿಕೆಯಾಗಿ ಪುಸ್ತಕ ಗಮನ ಸೆಳೆಯುತ್ತದೆ.

ಶೀರ್ಷಿಕೆ : ಚಿತ್ರದುರ್ಗದ ಕೋಟೆ ಪರಿಸರದ ದೇವಾಲಯಗಳು ಲೇಖಕರು : ಎನ್. ಎಸ್. ಮಹಂತೇಶ ಪ್ರಕಾಶಕರು : ರೇಣುಕ ಪ್ರಕಾಶನ ಪುಟಗಳು : 160 ಬೆಲೆ: ರೂ.100/-

ಕೃಪೆ : ಸುಧಾ