ಜುಲೈ ೫ ರಂದು ಬಿಡುಗಡೆಯಾದ ಕೆಲವು ಪುಸ್ತಕಗಳು

scan0007(2)ಶೀರ್ಷಿಕೆ:ನೂರೆಂಟು ಸುಭಾಷಿತಗಳು ಲೇಖಕರು:ಮಹಾಬಲ ಸೀತಾಳಭಾವಿ ಪ್ರಕಾಶನ:ಅಂಕಿತ ಪುಸ್ತಕ

scan0004ಶೀರ್ಷಿಕೆ:ಆಂಟನ್ ಚೆಕಾಫ್ ಕಥೆಗಳು ಪ್ರಕಾಶನ:ಅಂಕಿತ ಪುಸ್ತಕ

scan0008(2)ಶೀರ್ಷಿಕೆ:ಪಟ್ಟದ ಗೊಂಬೆಯೂ ಪರದೇಶವೂ ಲೇಖಕರು:ಶಾಂತಾ ನಾಗರಾಜ್ ಪ್ರಕಾಶಕರು:ಅಂಕಿತ ಪುಸ್ತಕ

scan0005(2)

ಶೀರ್ಷಿಕೆ:ನನ್ನ ಅಜ್ಜಿಯ ಜಗತ್ತು ಲೇಖಕರು:ರಜನೀ ನರಹಳ್ಳಿ ಪ್ರಕಾಶಕರು:ಸುಮುಖ ಪ್ರಕಾಶನ

scan0006

ಶೀರ್ಷಿಕೆ:ಘಳಿಗೆಗೊಂದು ಗುಳಿಗೆ ಲೇಖಕರು:ಸಿ.ಎನ್.ಕೃಷ್ಣಮಾಚಾರ‍್ ಪ್ರಕಾಶಕರು:ಸುಮುಖ ಪ್ರಕಾಶನ

ಕೃಪೆ: ಉದಯವಾಣಿ

ಕನ್ನಡಿಗರ ಕೈಗೆ `ಜನರ ಚರಿತ್ರೆ’

poorvethihaasa-cp

‘People’s History of India’ ಯೋಜನೆ ಪ್ರೊ. ಇರ್ಫಾನ್ ಹಬಿಬ್ ರ ನೇತೃತ್ವದಲ್ಲಿ ಆರಂಭವಾಗಿ ಈಗಾಗಲೇ ಅದರ ಅಡಿಯಲ್ಲಿ ಆರು ಸಂಪುಟಗಳು ಪ್ರಕಟಗೊಂಡಿವೆ. ಈ ಮಾಲಿಕೆಯ ಮೊದಲ ಕೃತಿ, ಹಬೀಬರೇ ರಚಿಸಿರುವ Pre History ಕನ್ನಡಕ್ಕೆ ಅನುವಾದಗೊಂಡಿದೆ. ಪ್ರದೀಪ್ ಬೆಳಗಲ್ ಅನುವಾದಿತ ಕೃತಿ ಪೂರ್ವೇತಿಹಾಸ ವನ್ನು ಚಿಂತನ ಪುಸ್ತಕಪ್ರಕಾಶಕರು ಕನ್ನಡದ ಓದುಗರ ಕೈಗಿತ್ತಿದ್ದಾರೆ.

ಪೀಪಲ್ಸ್ ಹಿಸ್ಟರಿ ಸಂಪುಟಗಳು ಹೆಸರೇ ಸೂಚಿಸುವಂತೆ ಜನರಚರಿತ್ರೆಯನ್ನು ಹೇಳುವ ಉದ್ದೇಶವನ್ನು ಹೊಂದಿರುತ್ತವೆ. ಹಲವು ದೇಶಗಳಲ್ಲಿ ಆಯಾ ದೇಶದ ಜನರ ಚರಿತ್ರೆಯನ್ನು ಕಟ್ಟಿಕೊಡುವ ಪ್ರಯತ್ನಗಳನ್ನು ಚರಿತ್ರೆಕಾರರು ಮಾಡುತ್ತಾ ಬಂದಿದ್ದಾರೆ. ಭಾರತದ ಈ ಸಂಪುಟಗಳ ಜವಾಬ್ದಾರಿ ಹೊತ್ತಿರುವ ಹಬೀಬರಿಗೆ ಕೆಲವು ಖಚಿತವಾದ ಗುರಿಗಳಿವೆ. ಕೋಮುವಾದಿ ಇತಿಹಾಸವನ್ನು ತೊಡೆದು ವೈಜ್ಞಾನಿಕ ಇತಿಹಾಸವನ್ನು ರಚಿಸುವುದು ತಮ್ಮ ಉದ್ದೇಶವೆಂಬುದನ್ನು ತಮ್ಮ ಪ್ರಸ್ತಾವನೆಯಲ್ಲೇ ಅವರು ಹೇಳಿಕೊಳ್ಳುತ್ತಾರೆ.

ಯಾವುದೇ ಒಂದು ಕಾಲಮಾನದ ಚರಿತ್ರೆ ಸ್ವತಂತ್ರವಾಗಿ ಘಟಿಸುವುದಿಲ್ಲ. ಮನುಕುಲದ ಚರಿತ್ರೆಯಲ್ಲಿ ನಿರಂತರತೆ ಇರುತ್ತದೆ. ಈ ನಿರಂತರತೆಯನ್ನು ಗ್ರಹಿಸಿದಾಗ ಇಂದು ಚರಿತ್ರೆ ರಾಜಕೀಯ ಉದ್ದೇಶಕ್ಕೆ ಬಳಕೆಯಾಗುವ ಅಥವಾ ರಾಜಕೀಯ ಉದ್ದೇಶದಿಂದ ರಚಿತವಾಗುವ ಅಪಾಯವನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಸಮಕಾಲೀನ ಭಾರತದ ಸಮಸ್ಯೆಗಳಿಗೆ ಚರಿತ್ರೆಯ ತಪ್ಪು ಗ್ರಹಿಕೆಗಳೂ ಕಾರಣವಾಗಿವೆ. ಈ ಗ್ರಹಿಕೆಗಳನ್ನು ಕೇವಲ ವಿದ್ವತ್ ಪ್ರಪಂಚ ತನಗೆ ತಾನೇ ನಿವಾರಿಸಿಕೊಂಡರೆ ಸಾಲದು. ಅದನ್ನು ಜನಸಾಮಾನ್ಯರಿಗೆ ತಲುಪಿಸುವ ಜವಾಬ್ದಾರಿಯೂ ಬೇಕಾಗಿದೆ. ಆರ್ಯರು, ದ್ರಾವಿಡರು ಎಂಬ ಜನಾಂಗ ಕಲ್ಪನೆಗಳು, ಆರ್ಯರು ಭಾರತ ಮೂಲದವರೇ ಅಥವಾ ಹೊರಗಿನಿಂದ ಬಂದವರೇ ಎಂಬ ಮುಂದುವರಿದ ಚಾರಿತ್ರಿಕ ಊಹೆಗಳು, ಭಾಷಾ ಮೂಲ, ಜನಾಂಗ ಮೂಲವನ್ನು ಹೇಳಿಕೊಳ್ಳುತ್ತಾ ಪ್ರತಿಷ್ಠೆಯ ಅಥವಾ ಕೀಳರಿಮೆಯ ಭಾವನೆಯನ್ನು ಅನುಭವಿಸುವುದು ಇವೆಲ್ಲ ವಿದ್ವತ್ ಪ್ರಪಂಚದಾಚೆಗೂ ಜನರ ಒಳಗೆ ಆಳವಾಗಿ ಬಿಟ್ಟ ಬೇರುಗಳಾಗಿವೆ. ಶತಮಾನಗಳ ಚರಿತ್ರೆಯನ್ನು ಗಮನಿಸಿದಾಗ ಮಾನವನ ಬೆಳವಣಿಗೆ, ಹಿಂಜರಿಕೆ, ವಲಸೆ ಇವೆಲ್ಲವೂ ಒಂದಕ್ಕೊಂದು ಹೆಣೆದುಕೊಂಡ ಘಟನೆಗಳಾಗಿರುತ್ತವೆ. ಇಂತಹ ಒಂದು ಅದ್ಭುತವಾದ ಪ್ರವೇಶಿಕೆ ಪೂರ್ವೇತಿಹಾಸ ಕೃತಿಯ ಮೂಲಕ ದೊರೆಯುತ್ತದೆ.

ಭಾರತದ ಚರಿತ್ರೆಯನ್ನು ತಿಳಿಸುವುದೇ ಹಬೀಬರ ಉದ್ದೇಶವಾಗಿದ್ದರೂ ಅದನ್ನು ಭಾರತದ ಭೂಭಾಗ ತನ್ನ ಸ್ವರೂಪವನ್ನು ಪಡೆದುಕೊಳ್ಳುವಲ್ಲಿಂದ ಆರಂಭಿಸುತ್ತಾರೆ. ಅಂದರೆ 4600 ದಶಲಕ್ಷ ವರ್ಷಗಳಷ್ಟು ಹಿಂದಕ್ಕೆ ಕರೆದೊಯ್ಯುತ್ತಾರೆ.

ಭೂಮಿಯ ಪದರಗಳ ಚಲನೆ ಭೌಗೋಳಿಕ ಸ್ವರೂಪವನ್ನು ತಂದುಕೊಡುತ್ತಾ ಜೊತೆ ಜೊತೆಯಲ್ಲಿ ಪ್ರಾಣಿ ಮತ್ತು ಸಸ್ಯ ಸಂಕುಲಗಳನ್ನು ವಿವಿಧ ಖಂಡಗಳಲ್ಲಿ ಹಂಚಿ ಹೋಗುವಂತೆ ಮಾಡುತ್ತಾ ಬಂದಿದೆ. ಭೌಗೋಳಿಕ ಮೇಲ್ಮೈಯಲ್ಲಿ ಹಿಮಾಲಯ, ತಪ್ಪಲಿನ ಗಂಗಾ, ಸಿಂಧೂ ನದಿಗಳ ರಚನೆಯನ್ನು ವಿವರಿಸುತ್ತಾರೆ. ಇಂತಹ ಭೌಗೋಳಿಕ ಮೇಲ್ಮೈ ಲಕ್ಷಣ ವಾತಾವರಣವನ್ನು ನಿರ್ಮಿಸಿತು. ಹೀಗೆ ಭೂರಚನೆ ಮನುಕುಲದ ವಿಕಾಸಕ್ಕೆ ಕಾರಣವಾಗುತ್ತದೆ.

ಆಫ್ರಿಕಾದಲ್ಲಿ ವಿಕಾಸಗೊಂಡ ಆದಿಮಾನವ ಉಳಿದ ಭಾಗಗಳಿಗೆ ವಿಸ್ತರಿಸುತ್ತಾ ಕಲ್ಲಿನ ಉಪಕರಣಗಳನ್ನು ಬಳಕೆ ಮಾಡುತ್ತಾ ದೈಹಿಕವಾಗಿ ಆಧುನಿಕ ಮಾನವನ ಸ್ವರೂಪವನ್ನು ಪಡೆದುಕೊಳ್ಳುತ್ತಾನೆ. ಮಧ್ಯಶಿಲಾಯುಗ ಸಂಸ್ಕೃತಿಯಲ್ಲಿ ಮಾನವ ಕಲ್ಲಿನ ಅಯುಧಗಳನ್ನು ಸಾಕಷ್ಟು ಸೂಕ್ಷ್ಮವಾಗಿ ಬಳಸಲಾರಂಭಿಸಿದನು. ಈ ಕುರುಹುಗಳು ನಮ್ಮ ಸುತ್ತಲ ಪರಿಸರದಲ್ಲಿ ಕಾಣಬರುತ್ತದೆಂಬುದು ಪುಳಕಗೊಳಿಸುತ್ತದೆ. ಹೀಗೆ ಪ್ರಾಣಿಗಳನ್ನು ಸಾಕುತ್ತಾ ಬೇಟೆಯಾಡುತ್ತ ಬದುಕಿದ್ದ ಮಾಣವರು ಭೀಂಬೆಟ್ಕದಂತಹ ಪ್ರದೇಶದ ಬಂಡೆಗಳ ಮೇಲೆ ಬಿಡಿಸಿರುವ ಚಿತ್ರಗಳು ಅವನ ದಾಖಲೀಕರಣಗಳಾಗಿವೆ.

ಈ ಕೃತಿಯ ಮುಖ್ಯಭಾಗ ನವಶಿಲಾಯುಗ ಕ್ರಾಂತಿ. ಕೃಷಿಗೆ ಸಂಬಂಧಿಸಿದಂತೆ ಪ್ರಮುಖ ಬೆಳೆವಣಿಗೆ ಈ ಸಂದರ್ಭದಲ್ಲಿ ಆದುದನ್ನು ಗೊರ್ಡಾನ್ ಚೈಲ್ಡ್ರು ಗುರುತಿಸಿರುವುದನ್ನು ಹಬೀಬರು ಅನುಮೋದಿಸುತ್ತಾರೆ. ಕೃಷಿಯ ಬೆಳವಣಿಗೆ ಉತ್ಪಾದನೆ- ಅದರ ಹೆಚ್ಚಳ, ಶೇಖರಣೆ, ಅದರ ಮೇಲಿನ ಒಡೆತನ ಹೀಗೆ ಸಾಮಾಜಿಕ ವರ್ಗಗಳ ಬೆಳವಣಿಗೆಗೂ ಕಾರಣವಾಯಿತು. ಕಾಲಮಾನ ಕ್ರಿ.ಪೂ.7000ದಿಂದ 3800ರ ನಡುವೆ ಮೆಹರ್ಘಡದಲ್ಲಿ ಅಂದರೆ ಪಾಕಿಸ್ತಾನದ ಪ್ರದೇಶದಲ್ಲಿ ಗುರುತಿಸುತ್ತಾರೆ.

ನವಶಿಲಾಯುಗದ ತಂತ್ರಗಳು ಆಫಘಾನಿಸ್ತಾನದಾದ್ಯಂತ ಹರಡಿ ಅವುಗಳ ಸಿಂಧೂ ಬಯಲಿನ ಪ್ರದೇಶಕ್ಕೆ ರಂಗ ಸಿದ್ಧವಾಗಿತ್ತು ಎಂದು ಹೇಳುವ ವಾದ ಸಿಂಧೂ ನಾಗರಿಕತೆಯ ಹುಟ್ಟಿಗೆ ಪೂರ್ವ ವೇದಿಕೆಯನ್ನು ಹಾಕುತ್ತದೆ. ಮೆಹರ್ಘಡದ ಮೂರು ಹಂತದ ಬೆಳವಣಿಗೆ ಅಂದರೆ ನವಶಿಲಾಯುಗ, ತಾಮ್ರಶಿಲಾಯುಗ ಹಾಗೂ ಕಂಚಿನಯುಗದ ಬೆಳವಣಿಗೆ ರೋಚಕವೆನಿಸುತ್ತದೆ. ಸಂಶೋಧಕರು ಇಲ್ಲಿ ದೊರಕಿರುವ ವಸ್ತುಗಳ ಆಧಾರದ ಮೇಲೆ ಜನರ ವಯೋಮಿತಿ ಇತ್ಯಾದಿಗಳನ್ನು ಪರಿಶೀಲಿಸುವ ರೀತಿ ಚರಿತ್ರೆಯ ವಸ್ತು ವಿಷಯಕ್ಕೆ ಜನರನ್ನು ಸೆಳೆದು ಹಿಡಿಯುವಲ್ಲಿ ಸಮರ್ಥವಾಗಿ ಕಾಣಬರುತ್ತದೆ.

ಈ ಕೃತಿಯ ಟಿಪ್ಪಣಿಗಳೂ ಅಷ್ವೇ ಮುಖ್ಯವಾದವು, ಪೂರ್ವೇತಿಹಾಸ, ಅದರಲ್ಲೂ ಕಾಲಗಣನೆಯ ಪದ್ಧತಿಯ ವಿವರಣೆ ಹಾಗೂ ಸರಸ್ವತಿ ನದಿಯ ವಿಚಾರಗಳು ಗಮನ ಸೆಳೆಯುತ್ತವೆ. ಸರಸ್ವತಿ ನದಿಯವಾದ ಕೇವಲ ಶೈಕ್ಷಣಿಕ ಕುತೂಹಲವಾಗದೆ ಹಿಂದೂವಾದದ ತಳಹದಿಯಿಂದ ಮೂಡಿಬಂದ ವಾದವಾಗಿರುವುದರಿಂದ ಶೀಘ್ರ ತೀರ್ಮಾನಕ್ಕೆ ಎಳೆದೊಯ್ದ ಈ ವಿಚಾರಕ್ಕೆ ಇಡೀ ಕೃತಿಯೇ ಉತ್ತರವಾಗಿ ನಿಂತಂತೆ ಕಂಡು ಬರುತ್ತದೆ.

ಪ್ರೋ. ಇರ್ಫಾನ್ ಹಬೀಬರು ಮಹಾನ್ ಇತಿಹಾಸಕಾರರಲ್ಲಿ ಒಬ್ಬರು. ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು. ‘Agrarian System of Moghul India’ ದ ಮೂಲಕ ಹೆಸರುವಾಸಿಯಾದವರು. ಆರ್ಥಿಕ ಇತಿಹಾಸದಲ್ಲಿ ವಿಶೇಷ ಒಲವನ್ನು ಹೊಂದಿದ್ದವರು. ಮಾರ್ಕ್ಸ್ ವಾದಿ ಚಿಂತಕರಾದ ಇವರು ನಿರಂತರವಾಗಿ ಕೋಮುವಾದ-ವಿರೋದಿ ಚಳವಳಿಯಲ್ಲಿ ತೊಡಗಿಕೊಂಡವರು. ‘People’s History of India’ ಯೋಜನೆಗೆ ಮಧ್ಯಪ್ರದೇಶ ಸರ್ಕಾರ ಸಹಾಯವನ್ನು ನೀಡಿದ್ದು ಅದನ್ನು ಪಠ್ಯವಾಗಿ ಸ್ವೀಕರಿಸುವ ಉದ್ದೇಶವನ್ನು ಹೊಂದಿದೆ.

ಪ್ರದೀಪ್ ಬೆಳಗಲ್ ಅವರು ಕ್ಲಿಷ್ಟವಾದ, ಸಾಕಷ್ಟು ತಾಂತ್ರಿಕ ಉಕ್ತಿಗಳುಳ್ಳ ಈ ಕೃತಿಯನ್ನು ಸಾಕಷ್ಟು ಸರಾಗವಾಗಿಯೇ ಅನುವಾದ ಮಾಡಿದ್ದಾರೆ. ಒಟ್ಟಿನಲ್ಲಿ ಉತ್ತಮ ಕೃತಿಯನ್ನು ಕನ್ನಡಕ್ಕೆ ತಂದುಕೊಟ್ಟ ಶ್ರಮದ ಹಿಂದಿನ ಎಲ್ಲರನ್ನು ಅಭಿನಂದಿಸುತ್ತೇನೆ.

ಡಾ. ವಸು ಎಂ. ವಿ.

ಶೀರ್ಷಿಕೆ: ಪೂರ್ವೇತಿಹಾಸ ಲೇಖಕರು: ಇರ್ಫಾನ್ ಹಬಿಬ್ ಪ್ರಕಾಶಕರು: ಚಿಂತನ ಪುಸ್ತಕ ಪುಟಗಳು : 112 ಬೆಲೆ: ರೂ.80/-

ಕೃಪೆ : ಉದಯವಾಣಿ

ಮಾನವತೆಯ ಹುಡುಕಾಟ

scan0027-1

ಮೂಲತಃ ಪ್ರಾಣಿಯಾದ ಮನುಷ್ಯ `ಮಾನವೀಯತೆಯನ್ನು ರೂಢಿಸಿಕೊಂಡಿದ್ದರಿಂದ ಪ್ರಾಣಿಗಳಿಗಿಂತ ಭಿನ್ನನಾಗಿ ಮಾನವನೆಂದು ಕರೆಸಿಕೊಂಡ. ಪ್ರತಿಯೊಬ್ಬರ ಆಳದಲ್ಲಿರುವ ಸಹಜ ಕ್ರೌರ್ಯ, ಹಿಂಸಾತ್ಮಕ ಸ್ವಭಾವವನ್ನು ಮೀರುತ್ತಲೇ ವ್ಯಕ್ತಿತ್ವವನ್ನು ಕಟ್ಟಿಕೊಂಡ. ಹಿಂಸೆ ತ್ಯಜಿಸಿ ಸದ್ವ್ಯಕ್ತಿಯಾಗುವುದೇ ಸಮಾಜದ ಪುರೋಗಾಮಿ ಚಿಂತನೆ.

ಮನುಷ್ಯನ ಆಳದಲ್ಲಿರುವ ಪ್ರಾಣಿ ಸಹಜ ಹಿಂಸಾ ಮನೋವಿಕಾರ ಕೆಲವೊಮ್ಮೆ ರಕ್ಕಸ ಕುಣಿತ ಮಾಡಿಬಿಡುತ್ತದೆ. ದೇಶಗಳ ಮಧ್ಯದ ಯುದ್ಧದಲ್ಲಿ, ಪೋಲೀಸ್ ದೌರ್ಜನ್ಯದಲ್ಲಿ, ಜಾತಿ ವೈಷಮ್ಯದಲ್ಲಿ, ಕೋಮು ಗಲಭೆಯಲ್ಲಿ ಮನುಷ್ಯ ಮತ್ತೆ ಕಾಡು ಮೃಗಗಳನ್ನೂ ಮೀರಿಸುವ ಹಿಂಸಾಪ್ರವೃತ್ತಿ ಪ್ರದರ್ಶಿಸಿಬಿಡುತ್ತಾನೆ.

ಹೀಗೆ ಕೌರ್ಯ ವಿಜೃಂಭಿಸಿದಾಗೆಲ್ಲಾ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿರುತ್ತದೆ. ಸಹವತ್ರಿಗಳ ಹಕ್ಕುಗಳನ್ನು ನಿರಾಕರಿಸುತ್ತಲೇ ತಮ್ಮ ಮೇಲಾಧಿಕಾರವನ್ನು ಮನುಷ್ಯ ಸ್ಥಾಪಿಸುತ್ತಾನೆ. ಇತಿಹಾಸದುದ್ದಕ್ಕೂ ಇಂತಹ ಸಂಗತಿಗಳು ಸಾಕಷ್ಟು ನಡೆದಿವೆ.

ಡಾ. ರೇವಯ್ಯ ಒಡೆಯರ್ ರಚಿಸಿದ `ಮಾನವ ಹಕ್ಕುಗಳು – ಮಾನವತೆಯ ಶಾಸನರೂಪಎಂಬ ಪುಸ್ತಕ ಮಾನವೀಯ ನೆಲೆಯ ಹುಡುಕಾಟ. ವಿವಿಧ ಆಯಾಮಗಳಿಂದ ಮಾನವ ಹಕ್ಕುಗಳನ್ನು ಶೋಧಿಸುವ ಒಡೆಯರ್, ಅದಕ್ಕೊಂದು ಸೈದ್ಧಾಂತಿಕ ನೆಲೆಗಟ್ಟು ರೂಪಿಸಿಕೊಡುತ್ತಾರೆ.

ಶಾಸನಾತ್ಮಕ ವಿವರಗಳಿಗೆ ಸೀಮಿತವಾಗದೇ ವಾಸ್ತವ ವಿವರಗಳನ್ನು ಮುಖಾಮುಖಿಯಾಗಿಸುತ್ತಾ ಮಾನವ ಹಕ್ಕುಗಳ ಉಲ್ಲಂಘನೆ ಬಗೆಗಳನ್ನು ಕಣ್ಮುಂದೆ ಕಟ್ಟಿಕೊಡುತ್ತಾರೆ.

ಪುಸ್ತಕಕ್ಕಾಗಿ ಅಕ್ಷರ ಜೋಡಿಸುವ ಕಾಯಕ ಇಲ್ಲಿಯದಲ್ಲ. ಲೇಖಕನ ಮನದಾಳದ ಪಾತಳಿಯಲ್ಲಿ ಅಪಾರ ಮಾನವೀಯ ಅಂತಃಕರಣ, ಹಕ್ಕಿನ ನಿರಾಕರಣೆಯ ಬಗ್ಗೆ ಆಕ್ರೋಶ, ಘಟನೆಗಳನ್ನು ಪೋಣಿಸುವಾಗ ವ್ಯಕ್ತವಾಗುವ ಹೃದಯ ತುಂಬಿದ ಆದ್ರ್ರತೆ ವಿಶೇಷವಾಗಿ ಗಮನಸೆಳೆಯುತ್ತದೆ.

ಚೆರ್ನೊಬಿಲ್ ಅಣುಸ್ಪೋಟ, ಬಾಗೂರು-ನವಿಲೆ ದೌರ್ಜನ್ಯ, ಕಾರ್ಗಿಲ್ ಯುದ್ಧಗಳ ನಿದರ್ಶನಗಳ ಮುಖೇನ ಮಾನವಹಕ್ಕುಗಳ ಹುಡುಗಾಟಕ್ಕೆ ಹೊರಡುವ ಒಡೆಯರ್, ಹಕ್ಕು ಸ್ಥಾಪಿಸಲು ವಿವಿಧ ನೆಲೆಗಳ ಮೊರೆ ಹೋಗುತ್ತಾರೆ. ಧಾರ್ಮಿಕ, ವೈಚಾರಿಕ, ಮಾನಸಿಕ, ಬೌದ್ಧಿಕ ನೆಲೆಗಟ್ಟುಗಳಲ್ಲಿ ನಿಂತು ಹಕ್ಕುಗಳಿಗೆ ಆಕೃತಿಯೊಂದನ್ನು ರೂಪಿಸಿಕೊಡುತ್ತಾರೆ. ಜಾಗತಿಕ ಹಾಗೂ ಭಾರತೀಯ ನೆಲೆಯಲ್ಲಿ ಮಾನವೀಯ ಮೌಲ್ಯಗಳ ವಿಶ್ಲೇಷಣೆ ಮಾಡುತ್ತಾರೆ.

ವಿವರಗಳಿಗೆ ಸೀಮಿತವಾಗದ ಈ ಪುಸ್ತಕ ಕೇವಲ ಅಸ್ಥಿಪಂಜರವಾಗಿ ಉಳಿಯದೇ ರಕ್ತಮಾಂಸ, ಮಾನವೀಯ ಅನುಕಂಪ, ಹೃದಯಸ್ಪಂದನೆಯನ್ನು ಮೈತುಂಬಿಕೊಂಡು ಬೆಳೆಯುತ್ತದೆ. ಮಾನವಹಕ್ಕುಗಳ ಉಲ್ಲಂಘನೆಯ ಬಗ್ಗೆ ಪದೇ ಪದೇ ಆಕ್ಷೇಪಗಳು ಕೇಳಿ ಬರುತ್ತಿರುವ ಹೊತ್ತಲ್ಲಿ ಪುಸ್ತಕ ವಿಶೇಷ ಮಹತ್ವ ಪಡೆದುಕೊಳ್ಳುತ್ತದೆ. ಸರಳ ಹಾಗೂ ಮನಮುಟ್ಟುವ ನಿರೂಪಣಾ ಶೈಲಿ, ವಿಷಯ ಮಂಡಿಸುವ ಪರಿ, ಒಪ್ಪಿಸುವ ಗುಣವುಳ್ಳ ಕಲೆಗಾರಿಕೆ ಲೇಖಕರಿಗೆ ಸಿದ್ಧಿಸಿದೆ. ಮಾನವ ಹಕ್ಕು ಕಾರ್ಯಕರ್ತರು ಸಂಗ್ರಹಿಸಿಕೊಟ್ಟುಕೊಳ್ಳುವ ಪುಸ್ತಕವಿದಾಗಿದೆ.

ಶೀರ್ಷಿಕೆ: ಮಾನವ ಹಕ್ಕುಗಳು ಲೇಖಕರು: ಡಾ.ರೇವಯ್ಯ ಒಡೆಯರ್ ಪ್ರಕಾಶಕರು: ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣೆ ಸಂಸ್ಥೆ ಪುಟಗಳು: 110 ಬೆಲೆ:ರೂ.175/-

ಕೃಪೆ : ಉದಯವಾಣಿ

ಪ್ರಕೃತಿ ಜೀವನ

scan0034-1

ಪ್ರಕೃತಿ ಜೀವನ ತಜ್ಞರಾಗಿ ಪ್ರಾಕೃತಿಕ ಚಿಕಿತ್ಸಾ ಕೇಂದ್ರದ ನಿರ್ದೇಶಕರಾಗಿ ಸುದೀರ್ಘ ಅನುಭವ ಮತ್ತು ಪರಿಶ್ರಮಗಳ ಫಲವಾಗಿ ಮೂಡಿದ ಕೃತಿ ಪ್ರಕೃತಿ ಜೀವನ.

ಇವತ್ತು ನಾನಾ ಕಾರಣಗಳಿಂದಾಗಿ ಮಾನವಕುಲವೇ ಪ್ರಕೃತಿಗೆ ಬೆನ್ನು ಹಾಕಿ ಹೊರಟಿದೆ. ಪ್ರಕೃತಿಯಿಂದ ದೂರವಾದಂತೆ ಅನೇಕ ಕಾಯಿಲೆಗಳ ಸಮೀಪ ಹೋಗಿದ್ದೇವೆ. ಈ ಎಲ್ಲಾ ಸಮಸ್ಯೆಗಳಿಗೆ ಮತ್ತೆ ಪ್ರಕೃತಿಯೇ ಅನೇಕ ಪರಿಹಾರಗಳನ್ನು ಒದಗಿಸಬಲ್ಲುದು.

ಈ ಪುಸ್ತಕದಲ್ಲಿ ಲೇಖಕರು ಚಿಕ್ಕಪುಟ್ಟವೆನ್ನಬಹುದಾದ ಉದಾಹರಣೆಗಳ ಮೂಲಕ ಮನಸಿನಾಳಕ್ಕೆ ಇಳಿಯುವಂತೆ ವಿವರಿಸುತ್ತಾರೆ. ನೋವಿನ ಮೂಲ, ಕಾಯಿಲೆಯ ಕಾರಣಗಳನ್ನು ಹುಡುಕುತ್ತಾ ನಂತರ ಪರಿಹಾರಗಳ ಕಡೆಗೆ ಲಕ್ಷ್ಯ ಕೊಡಬೇಕು ಎನ್ನುತ್ತಾ ಮುಳ್ಳು ಚುಚ್ಚಿ ನೋವು ಉಂಟಾದರೆ ನೋವಿಗೆ ಕಾರಣವಾದ ಮುಳ್ಳು ದೇಹದಲ್ಲಿ ಉಳಿದುಕೊಂಡಿದ್ದರೆ ಅದನ್ನು ಮೊದಲು ತೆಗೆಯುವ ಪ್ರಯತ್ನಮಾಡಬೇಕು. ಹಾಗೆ ಮಾಡದೇ ಮದ್ದು ನೀಡುವುದು ಪ್ರಯೋಜನಕ್ಕೇ ಬಾರದು ಎನ್ನುತ್ತಾರೆ. ನಾವು ತಿನ್ನುವ ಆಹಾರ ತಿನ್ನುವ ಕ್ರಮ, ಜೀರ್ಣಕ್ರಿಯೆ ಇವೆಲ್ಲ ಸರಿಯಾಗಬೇಕಾದರೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ, ಪರಿಸರದ ಸವಲತ್ತುಗಳನ್ನು ಸರಿಯಾಗಿ ಬಳಸುತ್ತಾ ಹೇಗೆ ನೆಮ್ಮದಿಯ ಜೀವನ ನಡೆಸಬಹುದು ಎಂಬುದನ್ನು ಈ ಕೃತಿ ಬಹಳ ಸೊಗಸಾಗಿ ತಿಳಿಸುತ್ತದೆ. ಜೀವ ಶಕ್ತಿಯ ಬಳಕೆ, ನೀರು, ಗಾಳಿ, ಸೂರ್ಯ ಹೇಗೆ ನಮ್ಮ ಜೀವನಕ್ಕೆ ಪ್ರಯೋಜನಕಾರಿ ಎಂಬ ವಿಚಾರಗಳ ಬಗ್ಗೆ ತುಂಬ ನವಿರಾಗಿ ತಿಳಿಸುತ್ತಾರೆ. ಚಿಕ್ಕ ಮಕ್ಕಳು ಕೂಡಾ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.

ಶೂನ್ಯ ಎಂಬ ಅಧ್ಯಾಯದಲ್ಲಿ ಉಪವಾಸದ ಬಗ್ಗೆ ಬರೆಯುತ್ತಾ ವ್ಯಾಕ್ಯೂಂ ಕ್ಲೀನರ್ ಹೇಗೆ ಶೂನ್ಯದಿಂದಲೇ ಕಸದ ಕಣವೊಂದನ್ನೂ ಬಿಡದೆ ಶುದ್ಧಗೊಳಿಸುತ್ತದೆಯೋ ಹಾಗೆ ಶೂನ್ಯ ದೇಹವನ್ನು ಎಲ್ಲ ಕೊಳೆಗಳಿಂದ ಮುಕ್ತಗೊಳಿಸುತ್ತದೆ. ಅಂದರೆ ಶೂನ್ಯ ಅಷ್ಟು ಶಕ್ತಿಶಾಲಿ ಎಂಬ ಅರಿವನ್ನು ಕೊಡುತ್ತಾರೆ. ಇಂತಹ ಅನೇಕ ವಿಚಾರಗಳು ಈ ಪುಸ್ತಕದಲ್ಲಿವೆ. ಆರೋಗ್ಯ ಪರಿಸರದ ಬಗ್ಗೆ ಕಾಳಜಿ ಇರುವ ಈ ಪುಸ್ತಕ ನಮ್ಮ ಸಂಗ್ರಹದಲ್ಲಿದ್ದರೆ ಬಹಳ ಪ್ರಯೋಜನಕಾರಿ.

ಶೀರ್ಷಿಕೆ: ಪ್ರಕೃತಿ ಜೀವನ ಲೇಖಕರು: ಡಾ.ಹೊ.ಶ್ರೀನಿವಾಸಯ್ಯ ಪ್ರಕಾಶಕರು: ಪ್ರಸಾರಾಂಗ, ಕನ್ನಡ ವಿ. ವಿ.,ಹಂಪಿ ಪುಟಗಳು: 84 ಬೆಲೆ:ರೂ. 60/-

ಕೃಪೆ : ಉದಯವಾಣಿ

ಗೋಲಿಬಾರ್ ಗೌರ್ಮೆಂಟಿನಲ್ಲಿ ರೈತರ ಕಗ್ಗೊಲೆ

scan0026-1

ಹೊಸ ಸರ್ಕಾರ ಅಧಿಕಾರಕ್ಕೆ ಬಂದು ಕೆಲವೇ ದಿನಗಳಲ್ಲಿ ರಸಗೊಬ್ಬರದ ಕೊರತೆಯ ವಿರುದ್ಧ ಬೀದಿಗಿಳಿದ ರೈತರ ಸಾವಿಗೆ ಕಾರಣವಾದ ಗೋಲೀಬಾರ್ ಘಟನೆಯನ್ನು ಹಿನ್ನೆಲೆಯಾಗಿಸಿಕೊಂಡು ಪ್ರಕಟವಾದ ಕೃತಿ ಇದು. ಇದರಲ್ಲಿ ಗೋಲಿಬಾರ್ ಘಟನೆಗೆ ಸಂಬಂಧಿಸಿದಂತೆ ನಾಡಿನ ವಿವಿಧ ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮಗಳಲ್ಲಿ ಬಂದ ವಿಶ್ಲೇಷಣಾತ್ಮಕ ವರದಿಗಳು, ಸಂದರ್ಶನಗಳ ಸಂಗ್ರಹ ಮಾಡಲಾಗಿದೆ. ಅಷ್ಟೇ ಅಲ್ಲ ಯಾವತ್ತಿಗೂ ಸಾಂದರ್ಭಿಕವಾಗಬಲ್ಲ ರೈತರ ಪರ ನಿಜದ ಧ್ವನಿಯಾಗಿದ್ದ ಎಂ. ಡಿ. ನಂಜುಂಡಸ್ವಾಮಿಯವರು ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನ ಮತ್ತು ಅವರ ಕೊನೆಯ ಪತ್ರ ಕೂಡಾ ಇದೆ. ಒಟ್ಟು ನಮ್ಮ ವ್ಯವಸ್ಥೆ ಸರ್ಕಾರಗಳ ವೈಫಲ್ಯ, ಆಧಾರರಹಿತ ಚರ್ಚೆಗಳು, ರೈತರಿಗೇ ಮಾರಕವಾದ ವಿದೇಶಿ ಕಂಪೆನಿಗಳ ಬಗ್ಗೆ, ಸ್ವತಃ ರೈತ ಸಂಘಟನೆಯಲ್ಲಿಯೆ ಪ್ರತಿಧ್ವನಿಸುತ್ತಿರುವ ಒಡಕು ಧ್ವನಿಗಳ ಬಗ್ಗೆ ನಂಜುಂಡ ಸ್ವಾಮಿಯವರ ಅಂತರಂಗದ ಮಾತುಗಳನ್ನು ದಾಖಲಿಸಿದ್ದು ನಿಜಕ್ಕೂ ಅರ್ಥಪೂರ್ಣ.

ರೈತ ಮುಖಂಡರು, ಕೃಷಿ ತಜ್ಞರು, ಕೃಷಿ ವಿಜ್ಞಾನಿಗಳೂ ಇಲ್ಲಿ ತಮ್ಮ ಚಿಂತನೆಗಳನ್ನು ದಾಖಲಿಸಿದ್ದಾರೆ. ಬೇಗ ಹಣಗಳಿಸುವ ಆಸೆಗೆ ಬಿದ್ದ ರೈತ ಹೇಗೆ ಭೂಮಿಯ ಫಲವತ್ತತೆ ನಾಶವಾಗುವಲ್ಲಿ ಕಾರಣವಾಗುತ್ತಾನೆ ಎಂಬೆಲ್ಲ ವಿಚಾರಗಳ ಬಗ್ಗೆ ಆರೋಗ್ಯಕರ ಲೇಖನಗಳನ್ನು ಈ ಕೃತಿ ಒಳಗೊಂಡಿದೆ.

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಈ ಪುಸ್ತಕದಲ್ಲಿರುವ ಅಷ್ಟೂ ಬರಹದ ಲೇಖಕರು ಯಾವುದೋ ಹಿನ್ನೆಲೆಯಿಂದ ಬಂದ ಮತ್ತು ರೈತ ಮಕ್ಕಳೇ ಆಗಿದ್ದರೂ ಬದುಕಿನ ಬುತ್ತಿಗಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಕೊಂಡ ಯುವ ಬರಹಗಾರರು, ಛಿದ್ರಗೊಂಡ ಭರವಸೆಗಳ ನಡುವೆಯೂ ನಾಗರೀಕ ಸಮಾಜವನ್ನು ಅಣಕಿಸುವಂತಹ ಇಂತಹ ಘಟನೆಗಳು ನಡೆದಾಗ ಬರಹದ ಮೂಲಕ ಸ್ಪಂದಿಸಿದ್ದಾರೆ. ನಮ್ಮ ನಮ್ಮ ಅಸಹಾಯಕತೆಗಳ ಮದ್ಯೆ ಸಾಮಾಜಿಕ ಕಾಳಜಿಯನ್ನು, ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಹಾಗಾಗಿ ಸಾಮಾಜಿಕ ಕಳಕಳಿಯ ಹಿನ್ನೆಲೆಯಿಂದ ಓದಲೇಬೇಕಾದ ಪುಸ್ತಕ ಗೋಲಿಬಾರ್ ಗೌರ್ಮೆಂಟಿನಲ್ಲಿ ರೈತರ ಕಗ್ಗೊಲೆ.

ಶೀರ್ಷಿಕೆ:ಗೋಲಿಬಾರ್ ಗೌರ್ಮೆಂಟಿನಲ್ಲಿ ರೈತರ ಕಗ್ಗೊಲೆ ಲೇಖಕರು: ಲಿಂಗದಹಳ್ಳಿ ಚೇತನಕುಮಾರ್ ಪ್ರಕಾಶಕರು: ನೆಲದವ್ವ ಪ್ರಕಾಶನ ಪುಟಗಳು: 83 ಬೆಲೆ:ರೂ.65/-

ಕೃಪೆ : ಉದಯವಾಣಿ

ಮಹಿಳಾ ಆರೋಗ್ಯ – ಒಂದು ಮರುಚಿಂತನೆ

scan0023-1

ಆರೋಗ್ಯವಂತ ಹೆಣ್ಣು ಇರುವ ಕುಟುಂಬವೇ ಆರೋಗ್ಯವಂತವಾಗಿರುತ್ತದೆ. ಹೆಣ್ಣಿನ ಅಸ್ತಿತ್ವ, ಸ್ವಾತಂತ್ರ್ಯ, ಮೂಲಭೂತ ಅಗತ್ಯಗಳನ್ನೇ ಕಡೆಗಣಿಸುತ್ತಾ ಬಂದ ಭಾರತೀಯ ಸಮಾಜ ಒಂದು ರೀತಿಯಲ್ಲಿ ಇಡೀ ದೇಶದ ಹಿಂದುಳಿಯುವಿಕೆಗೆ ಕಾರಣವಾಗಿದೆಯೆಂದರೆ ತಪ್ಪಾಗದು.

ಈ ನಿಟ್ಟಿನಲ್ಲಿ ಮಹಿಳಾ ಆರೋಗ್ಯ ಒಂದು ಮರುಚಿಂತನೆ ಪುಸ್ತಕ ಆರೋಗ್ಯಕರ ಪುಸ್ತಕ. ಇಲ್ಲಿ ಚರ್ಚೆಯಾಗಿರುವ ವಿಷಯಗಳು ಮತ್ತು ಅಂಕಿ ಅಂಶಗಳನ್ನು ಗಮನಿಸಿದರೆ ಅಚ್ಚರಿಯಾಗುತ್ತದೆ. ಇವತ್ತಿಗೂ ನಮ್ಮ ಸಮಾಜದಲ್ಲಿ ಮಕ್ಕಳಾಗದ ದಂಪತಿಗಳಲ್ಲಿ ಹೆಣ್ಣಿನ ಸಮಸ್ಯೆಯೇ ದೊಡ್ಡದೆಂಬಂತೆ ಬಿಂಬಿಸಲಾಗುತ್ತಿದೆ. ಹೆರುವ ಹೊಟ್ಟೆ ಅವಳದಾದ ಕಾರಣಕ್ಕೆ ಅವಳನ್ನೆ ಅಪರಾಧಿಯಂತೆ ಕಾಣಲಾಗುತ್ತದೆ. ಗಂಡಸು ಪರೀಕ್ಷೆಗೊಳಪಡುವುದೆ ಅಪಮಾನವೆಂಬಂತೆ ನಡೆದುಕೊಳ್ಳುತ್ತಾರೆ. ಯಾವ ಶಿಕ್ಷಣದಿಂದಲೂ ಈ ಮನೋಧರ್ಮ ಬದಲಾಗಿಲ್ಲ.

ಈ ನಿಟ್ಟಿನಲ್ಲಿ ಅನೇಕ ವಿಚಾರಗಳ ಚರ್ಚೆ ಈ ಕೃತಿಯಲ್ಲಿ ನಡೆಸಲಾಗಿದೆ. ಹದಿಹರೆಯದ ಹೆಣ್ಣು ಮಕ್ಕಳ ಆರೋಗ್ಯ ರಕ್ಷಣೆ ಬಗ್ಗೆ ಅವರಿಗೆ ಅರಿವು ಮೂಡಿಸುವ ಬಗ್ಗೆ ಬಹಳ ಚೆನ್ನಾಗಿ ಬರೆದಿದ್ದಾರೆ. ಮಹಿಳೆಯರು ತಾವೇ ಅಲಕ್ಷಿಸಿಕೊಂಡ ಸಮಸ್ಯೆಗಳ ಬಗ್ಗೆ, ಜಾಗತೀಕರಣದ ಸಂದರ್ಭದಲ್ಲಿ ಸ್ತ್ರೀ ಆರೋಗ್ಯ ಸಬಲೀಕರಣ ಮುಂತಾದ ಸೂಕ್ಷ್ಮ ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ. ಹೆಣ್ಣಿನ ದೈಹಿಕ, ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಇಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ. ನಿಜಕ್ಕೂ ಈ ಪುಸ್ತಕ ನಮ್ಮ ಶಿಕ್ಷಣದಲ್ಲಿ ಪಠ್ಯವಾಗಬೇಕಾದ ಅನೇಕ ವಿಷಯಗಳನ್ನು ಒಳಗೊಂಡಿದೆ. ಸ್ತ್ರೀ ಆರೋಗ್ಯದ ಬಗ್ಗೆ ಇಡೀ ಸಮಾಜಕ್ಕೆ ಶಿಕ್ಷಣದ ಅಗತ್ಯವಿದೆ. ಆ ದೃಷ್ಟಿಯಿಂದ ಈ ಪುಸ್ತಕ ಮೌಲಿಕವಾಗಿದೆ.

ಶೀರ್ಷಿಕೆ: ಮಹಿಳಾ ಆರೋಗ್ಯ – ಒಂದು ಮರುಚಿಂತನೆ ಲೇಖಕರು: ಡಾ. ಕೆ. ಸರೋಜ ಪ್ರಕಾಶಕರು: ಪ್ರಸಾರಾಂಗ, ಕನ್ನಡ ವಿ. ವಿ.,ಹಂಪಿ ಪುಟಗಳು: 156 ಬೆಲೆ:ರೂ.100/-

ಕೃಪೆ : ಉದಯವಾಣಿ

ಭಾರತ ರತ್ನ ಭೀಮಸೇನ ಜೋಶಿ

bhimsen2

ಭಾರತರತ್ನ ಭೀಮಸೇನ ಜೋಶಿ ಅವರನ್ನು ಕುರಿತು ವಸಂತ ಪೋತದಾರು ಮರಾಠಿಯಲ್ಲಿ ಬರೆದಿರುವ `ಭೀಮಸೇನಎಂಬ ಜೀವನಚರಿತ್ರೆಯ ಕನ್ನಡ ಭಾಷಾಂತರವನ್ನು ಧಾರವಾಡದ ಮನೋಹರ ಗ್ರಂಥಮಾಲೆ ಪ್ರಕಟಿಸಿದೆ. (2006). ಈ ಪುಸ್ತಕವನ್ನು ನಾನು ಸಪ್ಟೆಂಬರ್ 23, 2007`ಪುಸ್ತಕ ಪ್ರೀತಿಅಂಕಣದಲ್ಲಿ ಪರಿಚಯಿಸಿದ್ದೆ. `ಗಾಯಕ ಒಬ್ಬ ಕಳ್ಳನಿರಬೇಕು. ಪ್ರತಿಯೊಬ್ಬ ಗಾಯಕ ಎಲ್ಲರಿಂದ ಉತ್ತಮವಾದುದನ್ನು ತೆಗೆದುಕೊಂಡು ತನ್ನದೇ ರಸಾಯನ ಸಿದ್ಧಗೊಳಿಸಬೇಕುಎನ್ನುವ ಭೀಮಸೇನ ಜೋಶಿಯವರ ಜೀವ ಚರಿತ್ರೆ ಒಂದು ಯಶಸ್ವೀ ಕಾದಂಬರಿಯಂತೆ ಓದಿಸಿಕೊಂಡು ಹೋಗುತ್ತದೆ.

ಪಂಡರಪುರದಲ್ಲಿ ಕಾನಡಿ ವಿಠ್ಠಲ, ಪೂನಾದಲ್ಲಿ ಕನ್ನಡ ಗಂಧರ್ವ ಜೋಶಿ. ಗದುಗಿನ ಜೋಶಿ ಹಾಡಿದರೆಂದರೆ ಹಿಂದೂಸ್ಥಾನವು ಕುಣಿಯುವುದು. ಇದು ಕನ್ನಡಿಗರ ಅಗ್ಗಳಿಕೆ.

ಮುರಾಳೀಧರ ಉಪಾಧ್ಯ ಹಿರಿಯಡಕ

ಶೀರ್ಷಿಕೆ: ಭೀಮಸೇನ ಲೇಖಕರು: ಮೂಲ ಮರಾಠಿ – ವಸಂತ ಪೋತದಾರು ಪ್ರಕಾಶಕರು: ಮನೋಹರ ಗ್ರಂಥಮಾಲೆ ಪುಟಗಳು : ಬೆಲೆ:ರೂ. 200/-

ಕೃಪೆ : ಉದಯವಾಣಿ