ಕರ್ನಾಟಕ ಸಾಹಿತ್ಯ ಅಕಾಡೆಮಿ 2015ರ ‍ಗೌರವ ಪ್ರಶಸ್ತಿ ಹಾಗೂ 2014ರ ಪುಸ್ತಕ ಬಹುಮಾನ ಪಡೆದ ಸಾಹಿತಿಗಳಿಗೆ ಅಭಿನಂದನೆಗಳು

ಕರ್ನಾಟಕ ಸಾಹಿತ್ಯ ಅಕಾಡೆಮಿಯ 2015ರ ಗೌರವ ಪ್ರಶಸ್ತಿಗೆ ಡಾ. ಕೃಷ್ಣಮೂರ್ತಿ ಹನೂರು, ಡಾ. ಎಚ್.ಎಸ್. ಶಿವಪ್ರಕಾಶ್ ಸೇರಿ ಐವರು ಸಾಹಿತಿಗಳನ್ನು ಆಯ್ಕೆ ಮಾಡಲಾಗಿದೆ.

ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದರು.

ಡಾ. ಎಲ್. ಹನುಮಂತಯ್ಯ, ನೇಮಿಚಂದ್ರ ಮತ್ತು ಡಾ.ಎಚ್. ನಾಗವೇಣಿ ಅವರಿಗೂ ಗೌರವ ಪ್ರಶಸ್ತಿ ಸಂದಿದೆ.

ಪ್ರಶಸ್ತಿಯು ₹ 50 ಸಾವಿರ ನಗದು ಮತ್ತು ಫಲಕ ಒಳಗೊಂಡಿದ್ದು, ಅಕ್ಟೋಬರ್ ಅಂತ್ಯದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದೂ ಅವರು ತಿಳಿಸಿದರು.

2014ರಲ್ಲಿ ಪ್ರಕಟವಾದ ವಿವಿಧ ಪ್ರಕಾರದ 17 ಕೃತಿಗಳನ್ನು ಅತ್ಯುತ್ತಮ ಕೃತಿಗಳೆಂದು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಕೃತಿಗಳ ಲೇಖಕರಿಗೆ ತಲಾ ₹ 25 ಸಾವಿರ ನಗದು ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು ಎಂದರು. ಕೆಲವು ಸಾಹಿತ್ಯ ಪ್ರಕಾರಗಳಿಗೆ ದಾನಿಗಳು ಸ್ಥಾಪಿಸಿರುವ 6 ದತ್ತಿ ನಿಧಿ ಬಹುಮಾನಕ್ಕೆ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಚದುರಂಗ ದತ್ತಿನಿಧಿ ಬಹುಮಾನಕ್ಕೆ ₹ 15 ಸಾವಿರ ಮತ್ತು ಉಳಿದ 5 ದತ್ತಿನಿಧಿ ಬಹುಮಾನಕ್ಕೆ ತಲಾ ₹ 5 ಸಾವಿರ ನೀಡಲಾಗುವುದು ಎಂದು ವಿವರಿಸಿದರು.

ಮುಖ್ಯಾಂಶಗಳು
* ಐವರಿಗೆ ಅಕಾಡೆಮಿಯ ಗೌರವ ಪ್ರಶಸ್ತಿ
* ಫಲಕ ಹಾಗೂ ₹ 50 ಸಾವಿರ ನಗದು
ಕೃಪೆ : ಪ್ರಜಾವಾಣಿ

%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af-%e0%b2%85%e0%b2%95%e0%b2%be%e0%b2%a1%e0%b2%ae%e0%b3%86-2015

%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af-%e0%b2%85%e0%b2%95%e0%b2%be%e0%b2%a1%e0%b3%86%e0%b2%ae%e0%b2%bf-2014-%e0%b2%aa%e0%b3%81%e0%b2%b8%e0%b3%8d%e0%b2%a4%e0%b2%95-%e0%b2%ac734242

ಬೇಟ – ಬೇಟೆಗಳ ಯಶಸ್ವೀ ಆಟಗಳು

scan0024

ಖ್ಯಾತ ಕವಿ-ನಾಟಕಕಾರ ಎಚ್.ಎಸ್.ಶಿವಪ್ರಕಾಶರ ನಾಲ್ಕು ಕಿರುನಾಟಕಗಳ ಸಂಕಲನ ಮದುವೆಯ ಆಟಗಳು. `ಮದುವೆಯ ಹೆಣ್ಣು` ಎಂಬ ಮೊದಲ ನಾಟಕ ತೋಂಡ ಬುಡಕಟ್ಟಿನ ವಿಶಿಷ್ಟ ಮದುವೆಯ ಸಂಪ್ರದಾಯವನ್ನು ಆಧರಿಸಿದ್ದರೆ, ಎರಡನೆಯ ನಾಟಕವಾದ `ಕಸಂದ್ರಾ` ಈಸ್ಖಿಲಸ್ ರಚಿತ ಗ್ರೀಕ್ ನಾಟಕ ತ್ರಿವಳಿಯಲ್ಲಿ ಒಂದಾದ ಅಗಮೆಮ್ನಾನ್ ನಾಟಕದ ರೂಪಾಂತರ, ಮೂರನೆಯದಾದ `ಸತಿ` ಶಿವ-ದಾಕ್ಷಾಯಣಿ ಪುರಾಣ ಪ್ರಸಂಗವನ್ನಾಧರಿಸಿದೆ. ಕೊನೆಯ ನಾಟಕವಾದ `ಮಕರಚಂದ್ರ` ಲೇಖಕರು ದಾಖಲಿಸಿರುವಂತೆ, ಜಪಾನಿ ಭಾಷೆಯ `ನೋ ನಾಟಕ` `ಡಮಾಸ್ ಡ್ರಮ್` ಎಂಬುದನ್ನು ಆಧರಿಸಿದೆ. ಈ ನಾಲ್ಕು ನಾಟಕಗಳಲ್ಲಿ `ಕಸಂದ್ರ` ಹೊರತುಪಡಿಸಿದರೆ ಉಳಿದ ನಾಟಕಗಳೆಲ್ಲವೂ ರಂಗದ ಮೇಲೆ ಯಶಸ್ವಿಯಾಗಿ ಪ್ರದರ್ಶಿಸಲ್ಪಟ್ಟಿವೆ.

ಸಂಕಲನದ ಹೆಸರು ಓದುಗರೊಡನೆ ಆಟವಾಡುತ್ತದೆ; ಹೆಸರನ್ನು ನೋಡಿ, ಈ ನಾಟಕಗಳು ಪ್ರಹಸನಗಳೆಂದು ಓದುಗರು ನಿರೀಕ್ಷಿಸಬಹುದು. ಆದರೆ, ಇದರಲ್ಲಿರುವ ನಾಲ್ಕೂ ನಾಟಕಗಳು ಪ್ರಹಸನಗಳೆಂದು ಓದುಗರು ನಿರೀಕ್ಷಿಸಬಹುದು. ಆದರೆ, ಇದರಲ್ಲಿರುವ ನಾಲ್ಕೂ ನಾಟಕಗಳು ರುದ್ರ ನಾಟಕಗಳು. `ಆಟ` ಎಂಬ ಪದವನ್ನು ನಾಟಕಕಾರರು ಅನೇಕ ಅರ್ಥಗಳಲ್ಲಿ ಉಪಯೋಗಿಸಿದ್ದಾರೆ. ಮೊದಲನೆಯದಾಗಿ, ಭರತನ `ಕ್ರೀಡನೀಯಕಂ` ಎಂಬ ಪ್ರಯೋಗವನ್ನಾಧರಿಸಿ `ನಾಟಕ ಅಥವಾ ಪ್ರದರ್ಶನ` ಎಂಬ ಅರ್ಥದಲ್ಲಿ ಇಲ್ಲಿ `ಆಟ` ಎಂಬ ಪದ ಉಪಯೋಗಿಸಲ್ಪಟ್ಟಿದೆ. ಎರಡನೆಯದಾಗಿ, ಈ ಪದ ಗಂಡು ಹೆಣ್ಣುಗಳು ಪರಸ್ಪರ ಆಕರ್ಷಿತರಾಗಿ ಆಡುವ ಆಟಗಳನ್ನು ಸೂಚಿಸುತ್ತದೆ. ಇನ್ನೂ ಮುಂದುವರೆದು, ಮುಖ್ಯವಾಗಿ, ಕುಟುಂಬ ಎಂಬ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರುವ ಮದುವೆಯ ಆಚರಣೆಯಲ್ಲಿ ವಿಧಿ ಅಥವಾ ಸಮಕಾಲೀನ ಪ್ರಭಾವಿ ವ್ಯವಸ್ಥೆ ಆಡುವ `ಆಟಗಳ`, ಎಂದರೆ ಉಂಟುಮಾಡುವ ಅನಿರೀಕ್ಷಿತ ಹಾಗೂ ಘೋರ ಪರಿಣಾಮಗಳ ಸುತ್ತಾ ಈ ನಾಲ್ಕೂ ನಾಟಕಗಳು ಕಟ್ಟಲ್ಪಟ್ಟಿವೆ.

ಈ ಸಂಕಲನದ ನಾಲ್ಕೂ ಏಕಾಂಕಗಳ ಕೇಂದ್ರಾಶಯವೆಂದರೆ : ಎಲ್ಲಾ ಸಮಾಜಗಳಲ್ಲಿಯೂ ನಡೆಯುವ ಗಂಡು-ಹೆಣ್ಣುಗಳ ಆಟ ಅಥವಾ `ಬೇಟ` `ಬೇಟೆ`ಯಾಗುವ ದುರಂತ. `ಮದುವೆ ಹೆಣ್ಣು` ನಾಟಕದಲ್ಲಿ, ಒಂದು ಬುಡಕಟ್ಟಿನ ಸಂಪ್ರದಾಯದಂತೆ ಮದುವೆಗೆ ಮೊದಲು ವರನು ಗಂಡಾಳಿನ ತಲೆಬುರುಡೆಯೊಂದನ್ನು ವಧು ದಕ್ಷಿಣೆಯಾಗಿ ವಧುವಿನ ತಂದೆತಾುಯರಿಗೆ ಕೊಡಲು ಕಾಡಿನಲ್ಲಿ ಅಲೆಯುತ್ತಿರುವಾಗ, ಮಳೆಯ ಹಾಗೂ ಕತ್ತಲೆಯ ಕಾರಣದಿಂದ ಗೊತ್ತಾಗದೆ ತಾನು ವಿವಾಹವಾಗಲಿರುವ ತರುಣಿಯನ್ನೇ ಕೊಂದು ಅವಳ ತಲೆಬುರುಡೆಯನ್ನು ತರುತ್ತಾನೆ. ಇಲ್ಲಿ, ಬೇಟೆಯಾಡುವುದು ವಿಧಿ ಹಾಗೂ ಬುಡಕಟ್ಟಿನ ಪ್ರಾಚೀನ ಸಂಪ್ರದಾಯ ಮತ್ತು ಬೇಟೆಗೆ ಗುರಿಯಾಗುವವರು ಗಂಡು ಮತ್ತು ಹೆಣ್ಣು ಇಬ್ಬರೂ. `ಕಸಂದ್ರ` ಎಂಬ ಎರಡನೆಯ ನಾಟಕದಲ್ಲಿ, ಹೆಲನ್ ಮತ್ತು ಪ್ಯಾರಿಸ್ ಇವರುಗಳ ವಿವಾಹೇತರ ಪ್ರೇಮ-ಕಾಮಗಳ ಕಾರಣದಿಂದ ಪ್ರಾರಂಭವಾಗುವ ಟ್ರಾಯ್ ಯುದ್ಧದಲ್ಲಿ ಅಲ್ಲಿನ ರಾಜಪುತ್ರಿ ಕಸಂದ್ರ ಗ್ರೀಕರ ಸೇನಾನಿ ಅಗಮೆಮ್ನಾನ್ ಗೆ ಸೆರೆಯಾಗಿ, ಅವನ ದಾಸಿಯಾಗಿ ಗ್ರೀಸ್ ಗೆ ಹೋಗಿ, ಅಲ್ಲಿ ದುರ್ಮರಣಕ್ಕೆ ಈಡಾಗುತ್ತಾಳೆ. ಇಲ್ಲಿಯೂ ವಿಧಿ (ಅವಳು ಸರಿಯಾಗಿ ಭವಿಷ್ಯವನ್ನು ನುಡಿಯಬಲ್ಲಳು; ಆದರೆ ಅವಳನ್ನು ಯಾರೂ ನಂಬದಿರುವಂತೆ ಅವಳಿಗೆ ಶಾಪವಿದೆ) ಮತ್ತು ಯುದ್ಧ (ಈ ವ್ಯವಸ್ಥೆಯಲ್ಲಿ ವಿಜಯೀ ಸೇನೆಗೆ ಮೊದಲು ಬಲಿಯಾಗುವವಳು ಸ್ತ್ರೀಯರು) ಇವುಗಳ ಬೇಟೆಗೆ ಅವಳು ಬಲಿಯಾಗುತ್ತಾಳೆ. ಪೌರಾಣಿಕ ದಾಕ್ಷಾಯಣಿ ಪ್ರಸಂಗವನ್ನು ಆಧರಿಸಿರುವ `ಸತಿ` ದಕ್ಷ-ಶಿವ ಸಂಘರ್ಷವನ್ನು `ಆರ್ಯ-ಅನಾರ್ಯ` ಸಂಘರ್ಷವೆಂಬಂತೆ ಚಿತ್ರಿಸುತ್ತದೆ; ಮತ್ತು ಈ ಸಂಘರ್ಷದಿಂದ ಉದ್ಭವಿಸುವ ಘೋರ ಯುದ್ಧವನ್ನು ತಡೆಯಲು ದಾಕ್ಷಾಯಣಿ ತಾನೇ ಯಜ್ಞಕುಂಡಕ್ಕೆ ಹಾರಿ ಬಲಿಯಾಗುತ್ತಾಳೆ. ಈ ಮೂರೂ ನಾಟಕಗಳಿಗಿಂತ ಭಿನ್ನವಾದುದು `ಮಕರಚಂದ್ರ`. ಇದರಲ್ಲಿ, ಕೆಳ ವರ್ಗದ ಜಾಡಮಾಲಿಯೊಬ್ಬನು ತನ್ನೆದುರು ಮನೆಯಲ್ಲಿರುವ ಸುಂದರ ನಟಿಯೊಬ್ಬಳ ನೀಳ ರೇಷ್ಮೆ ಕೂದಲನ್ನು ನೋಡಿ ಅವಳನ್ನು ಮೋಹಿಸುತ್ತಾನೆ ಮತ್ತು ಅವಳಿಗೆ ಭಾವುಕ ಪ್ರೇಮಪತ್ರಗಳನ್ನು ಬರೆಯುತ್ತಾನೆ. ಆ ಪತ್ರಗಳಿಂದ ಆ ನಟಿ ಆರ್ಕತಳಾದರೂ ಅವನ ಸಾಮಾಜಿಕ ಅಂತಸ್ತನ್ನು ಅರಿತ ಕೂಡಲೇ ಅವನ ಪ್ರೇಮವನ್ನು ತಿರಸ್ಕರಿಸುತ್ತಾಳೆ ಮತ್ತು ಆ ತಿರಸ್ಕಾರವನ್ನು ಸಹಿಸಿಕೊಳ್ಳಲಾರದೆ ಆ ಬಡ ಜಾಡಮಾಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇಲ್ಲಿ, ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆ ಬೇಟೆಯಾಡುತ್ತದೆ ಮತ್ತು ಅದರಲ್ಲಿ ಆ ಬಡ ಮನುಷ್ಯ ಮಿಕವಾಗುತ್ತಾನೆ. ಈ ನಾಟಕವನ್ನು ಯಶೋಧರ ಚರಿತೆಯ ಮತ್ತೊಂದು ವಿನ್ಯಾಸವೆಂದು ನೋಡಬಹುದು; ಪ್ರಾಚೀನ ಕಾವ್ಯದ ಅಷ್ಟಾವಂಕ ಮತ್ತು ಅವನ ಸಂಗೀತ ಇವಕ್ಕೆ ಬದಲಾಗಿ ಅರವತ್ತು ವರ್ಷದ ಬಡ ಮುದುಕ ಮತ್ತು ಅವನ ಪ್ರೇಮ ಪತ್ರಗಳಿವೆ.

ಈ ಬಗೆಯ `ಬೇಟ-ಬೇಟೆ-ಬೇಟೆಗಾರ` ಚೌಕಟ್ಟಿನಲ್ಲಿ ಈ ರೂಪಕಗಳು ನಮಗೆ ದರ್ಶಿಸುವುದೇನೆಂದರೆ, ಹೆಚ್ಚಿನ ಸಂದರ್ಭಗಳಲ್ಲಿ ಪುರುಷಕೇಂದ್ರಿತ ವ್ಯವಸ್ಥೆಯೆಂಬ ಬೇಟೆಗಾರನಿಗೆ ಸಿಕ್ಕಿ ನರಳುವ/ಸಾಯುವ ಮಿಕ ಸ್ತ್ರೀ ಎಂಬುದು. ಶೌರ್ಯ-ಸಾಹಸಗಳನ್ನು ಆದರ್ಶ ಮೌಲ್ಯಗಳೆಂದು ಪರಿಗಣಿಸುವ ಯುದ್ಧ, ಬೇಟೆ ಮತ್ತು ಪಿತೃವಿಗೆ ಮಗಳ ಮೇಲೆ ಅಧಿಕಾರವನ್ನು ಕೊಡುವ ಕೌಟುಂಬಿಕ ವ್ಯವಸ್ಥೆ ಇವೆಲ್ಲವೂ ಪುರುಷನಿಗಿಂತ ಸ್ತ್ರೀಯನ್ನು ಕೀಳೆಂದು ಭಾವಿಸುವ ಪುರುಷ ನಿರ್ಮಿತ ಹಾಗೂ ಪುರುಷಕೇಂದ್ರಿತ ವ್ಯವಸ್ಥೆಯಲ್ಲಿ ತಂದೆಗೆ ಮಗಳನ್ನು ಬಲಿ ಕೊಡುವ ಅಥವಾ ಅವಳ ವಿವಾಹವನ್ನು ನಿರ್ಧರಿಸುವ ಅಧಿಕಾರವಿದೆ; ವಿಜಯೀ ಸೇನೆಗೆ ದೊರಕುವ ಕೊಳ್ಳೆಯಲ್ಲಿ ಸ್ತ್ರೀಯನ್ನು ಕೂಡಾ ಕೊಳ್ಳೆಯ ಭಾಗವೆಂದು ಪರಿಗಣಿಸುವ ಗರ್ವವಿದೆ. ಅರ್ಥಾತ್, ಸ್ತ್ರೀಯರೆಂದರೆ ಉಪಯೋಗಿಸಿ ಎಸೆಯಬಲ್ಲ ಸರಕುಗಳು ಎಂಬ ದೃಷ್ಟಿಕೋನ ಎಲ್ಲ ಸಾಮಾಜಿಕ ವ್ಯವಸ್ಥೆಗಳಲ್ಲಿಯೂ ಕ್ರಿಯಾಶೀಲವಾಗಿರುತ್ತದೆಯೆಂಬುದನ್ನು ಈ ನಾಟಕಗಳು ಪರಿಣಾಮಕಾರಿಯಾಗಿ ದರ್ಶಿಸುತ್ತದೆ. ಶ್ರೇಷ್ಟ ಕವಿಯಾಗಿರುವ ಶಿವಪ್ರಕಾಶರ ಪದ್ಯಗಂಧಿ ಗದ್ಯ ಉತ್ಕಟ ಭಾವನೆಗಳನ್ನು ಹಾಗೂ ನಾಟಕೀಯ ಸಂದರ್ಭಗಳನ್ನೂ ಸಮರ್ಥವಾಗಿ ನಿಭಾಯಿಸುತ್ತದೆ.

ಕೊನೆಯ ನಾಟಕ `ಮಕರಚಂದ್ರ` ಇವೆಲ್ಲವುಗಳಿಗಿಂತ ಭಿನ್ನವಾಗಿದೆ. ಇದರಲ್ಲಿ ಬರುವ ಪ್ರೇಮಿ ಅರವತ್ತು ವರ್ಷದ ಮತ್ತು ವಯಸ್ಕರ ಶಾಲೆಯಲ್ಲಿ ಶಿಕ್ಷಣ ಪಡೆದಿರುವ ಪೌರ ಕಾರ್ಮಿಕ. ಆದರೆ ಇವನು ತನ್ನ ಪ್ರೇಮಿಗೆ ಬರೆಯುವ ಪತ್ರಗಳಾದರೋ ಅದ್ಭುತ ಕಾವ್ಯಗಳು. ಅಲ್ಲದೆ, `ನಾಟಕ`ವನ್ನು ರಚಿಸಿ ರಂಗದ ಮೇಲೆ ತರುವವನು ಹಾಲು ಮಾರುವ 13 ವರ್ಷಗಳ ಒಬ್ಬ ಹುಡುಗ. ಈ ಕಾರಣಗಳಿಂದ ಉದ್ದಕ್ಕೂ ನಾಟಕ ಅಸಹಜ ಹಾಗೂ ಕೃತಿಮವೆಂದು ಭಾಸವಾಗುತ್ತದೆ. `ದೇಹಕ್ಕೆ ಮುಪ್ಪಾದರೂ ಮನಸ್ಸಿಗೆ ತಾರುಣ್ಯವಿರಬಹುದು, ಮತ್ತು ಪತ್ರಗಳು ಮನಸ್ಸಿನಲ್ಲೇಳುವ ಭಾವನೆಗಳ ಒಂದು ಸಾಂಕೇತಿಕ ರೂಪ` ಎಂದು ಈ ನಾಟಕವನ್ನು ಯಶಸ್ವಿಯಾಗಿ ರಂಗದ ಮೇಲೆ ತಂದಿರುವ ಕೃಷ್ಣಮೂರ್ತಿ ಕವತ್ತಾರ್ ಹೇಳುತ್ತಾರೆ. ಆದರೂ, ಕನಿಷ್ಠ ಪಕ್ಷ ಓದುವಾಗ, ಪಾತ್ರಗಳು ಮತ್ತು ಘಟನೆಗಳೆಲ್ಲವೂ ಮಕ್ಕಳ `ಆಟ`ದಂತೆಯೇ ಕಾಣುತ್ತವೆ. ನಾಟಕ ನಟಿಯ ಒಂಟಿತನ, ಕೃತಿಮ ಹಾಗೂ ಯಾಂತ್ರಿಕ ಬದುಕು, ಇವುಗಳನ್ನು ಚಿತ್ರಿಸುವ ಮೂಲಕ ಅವಳ ಪೊಳ್ಳು ಬದುಕನ್ನು ಬಡ ಹಾಗೂ ವೃದ್ಧ ಪ್ರೇಮಿಯ ಹೃದಯ ಶ್ರೀಮಂತಿಕೆಗೆ ಎದುರಾಗಿಸುತ್ತದೆ. ಆದರೂ, ಕೊನೆಯಲ್ಲಿ ಬರುವ ಅವನ ಸಾವು ಅನಿವಾರ್ಯವೆ ಎಂಬ ಪ್ರಶ್ನೆ ಓದುಗರಲ್ಲೇಳುತ್ತದೆ.

ಕೊನೆಯಲ್ಲೊಂದು ಮಾತು : ಈ ಸಂಕಲನದ ಕರಡನ್ನು ನಾಟಕಕಾರರು ಇನ್ನೂ ಹೆಚ್ಚಿನ ಎಚ್ಚರದಿಂದ ತಿದ್ದಬೇಕಾಗಿತ್ತೆಂದು ತೋರುತ್ತದೆ. . . . ಮುದ್ರಣ ದೋಷಗಳು ಉತ್ತಮ ನಾಟಕಗಳಿಗಿಟ್ಟ ಕಪ್ಪು ಚುಕ್ಕೆಗಳಂತೆ ಉದ್ದಕ್ಕೂ ಕಂಡುಬರುತ್ತದೆ.

ಶೀರ್ಷಿಕೆ: ಮದುವೆಯ ಆಟಗಳು (ನಾಟಕಗಳು) ಲೇಖಕರು: ಎಚ್ ಎಸ್ ಶಿವಪ್ರಕಾಶ್ ಪ್ರಕಾಶಕರು: ಅಭಿನವ ಪುಟಗಳು :130 ಬೆಲೆ:ರೂ.75/-

ಕೃಪೆ : ಪ್ರಜಾವಾಣಿ

ಕಟ್ಟಿದುದನ್ನು ಮುರಿದು ಮುರಿದುದನ್ನು ಕಟ್ಟುವ ಕವಿತೆಗಳು

ಎಚ್ ಎಸ್ ಶಿವಪ್ರಕಾಶರ ಈ ಹೊಸ ಕವನ ಸಂಕಲನ is a treat for the readers ಎಂದರೆ ಏನನ್ನೂ ಹೇಳಿದಂತಾಗಲಿಲ್ಲ. ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿರುವ, ಮಿಲರೇಪ, ಸಿಂಗಿರಾಜ, ಮರುಳ ಶಂಕರ, ಬಸವ, ಅಲ್ಲಮ, ನಾಗಲಿಂಗಯೋಗಿಗಳಂತಹವರ ಅನುಭಾವಕ್ಕೆ ತಮ್ಮ ಮೊದಲ ಕಟ್ಟಿದುದನ್ನು ಮುರಿದು ಮುರಿದುದನ್ನು ಕಟ್ಟುವಳಲ್ಲಿ ದನಿ ನೀಡಿರುವ ಶಿವಪ್ರಕಾಶರೆಂದರೆ ಕಷ್ಟದ ಕವಿ ಎನ್ನುವ ಭಾವನೆ ಸಹೃದಯರಲ್ಲಿದೆ.

ಆದರೆ ಪ್ರಸ್ತುತ ಸಂಕಲನದಲ್ಲಿ ಸದಾಕಾಲ ಪ್ರಯೋಗಗಳಿಗೆ ತುಡಿಯುವ, ಕಟ್ಟಿದುದನ್ನು ಮುರಿದು ಮುರಿದುದನ್ನು ಕಟ್ಟುವ, ಓದುಗರಿಗಾಗಿ ಸಖೇದಾಶ್ಚರ್ಯಗಳನ್ನು ಸ್ಟಾಕಿನಲ್ಲಿಟ್ಟಿರುವ ಅವರ ಕವಿತೆಗಳು `ಸುಲಿದ ಬಾಳೆಹಣ್ಣಿನಂದದಿಇವೆ. ವಿಮಾನ ಸಖಿಯ ನಗೆ, ನಟ್ಟಿರುಳ ಫೋನು, ನನ್ನ ಆತ್ಮೀಯ ಸ್ನೇಹಿತರ ಪುಟ್ಟ ಮಗಳು, ನಲ್ಲೆ ಕಾಯುತ್ತಲೇ ಇದ್ದಾಳೆ ಯಂತಹ ಶೀರ್ಷಿಕೆಗಳು ಇಲ್ಲಿವೆ. ಅವು ನಾವು-ನೀವೆಲ್ಲ ಯೋಚಿಸುವ, ಆದರೆ ಸೂಕ್ಷ್ಮಾಭಿವೃಕ್ತಿಸಲು ಅಸಮರ್ಥರಾದ ವಸ್ತು, ವಿಷಯಗಳನ್ನು ಒಳಗೊಂಡಿವೆ. ಭಾಷಾ ಸರಳತೆಯ ಪರಾಕಾಷ್ಠೆ, ಕವಿಯ ಎಂದಿನ ಹವ್ಯಾಸವಾದ `ಮಾತಿನಾಚೆಯದನ್ನು ಕಾಣಿಸುವಕಾಯಕಕ್ಕೆ ನೆರವಾಗಿದೆ. ಇದಕ್ಕಾಗಿ ಹೊಚ್ಚ ಹೊಸ ರೂಪಕ, ಪ್ರತಿಮೆಗಳನ್ನು ಅವರು ಹುಡುಕಿ ತೆಗೆದಿದ್ದಾರೆ. ತಮ್ಮ ಒಡಪಿನ ಭಾಷೆಗೆ ಇನ್ನೊಂದು ಆಯಾಮ ನೀಡಿದ್ದಾರೆ. ಇಲ್ಲಿನ ಕವಿತಗಳ ಇನ್ನೊಂದು ವಿಶೇಷವೆಂದರೆ, ಬೆನ್ನುಡಿಯಲ್ಲಿ ಜಿ. ರಾಜಶೇಖರ್ ಬರೆದಿರುವ ಹಾಗೆ, ಶಿಶುಪ್ರಾಸ, ಭಾವಗೀತೆ, ವಚನ, ತತ್ವಪದ, ದಾಸರ ಪದ, ಕಥನ ಕಾವ್ಯ, ಬೀದಿ ಮಾತು ಮತ್ತು ಬೈಗುಳ… ಹೀಗೆ ಕನ್ನಡದ ಮಾತಿನ ಕಣಜದಲ್ಲಿ ಇರುವ ಎಲ್ಲವೂ ಇಲ್ಲಿ ಬಳಕೆಯಾಗಿವೆ. (ಮಬ್ಬಿನ ಹಾಗೆ ಕಣಿವಿಯಾಸಿ ಯೇ ಇದಕ್ಕೊಂದು ಉದಾಹರಣೆ).

ಐಸಿಂಗ್ ಆನ್ ದಿ ಕೇಕ್ ತರ ಪುಸ್ತಕದಲ್ಲಿ ಮಿರ್ಜಾ ಗಾಲಿಬ್ ಕವಿತೆಗಳ ಅನುವಾದವೂ ಇವೆ. ಅವು, ಮುನ್ನುಡಿಕಾರ ಸಚ್ಚಿದಾನಂದ ಮೂರ್ತಿ ಮಾತುಗಳಲ್ಲಿ `ಕನ್ನಡಕ್ಕೆ ಬಂದರೆ ಹೇಗಿರಬೇಕೋ ಹಾಗಿವೆ.‘ `ಮುಕ್ತಕಗಳುಹೆಸರಿನ ಪ್ರಯೋಗವೂ ಇದೆ. `ಕೇಳಬೇಡ ಎಷ್ಟು ನೀಳ ವಿರಹದುರಿಯ ಇರುಳು/ ಅದರದೇ ತಾಲೀಮಿನಂತೆ ಗತದ ಪ್ರಳಯಗಳುನಂತಹ ಭಾವೋತ್ಕಟ ಸಾಲುಗಳು ಇರುವಂತೆ ಇವುಗಳಲ್ಲಿ ಲೋಕಜ್ಞಾನ, ವಿವೇಕದ, ನಿ ರ್ಲಿಪ್ತ `ಯಾರು ಯಾರಿಗೂ ಕಾಯಲಾರರು ಕೊನೆತನಕ/ ಯಾವುದಕ್ಕೂ ಯಾರೂ ನೋಯಲಾರರು ಕೊನೆತನಕದಂತಹ ನುಡಿಗಳೂ ಇವೆ. ಗೋಳೀಕರಣ, ಅದರಿಂದ ರೋಗಗ್ರಸ್ತವಾಗುತ್ತಿರುವ ಸಮಾಜದ ಕುರಿತು ಅನುಗಾಲವೂ ಚಿಂತಿಸುವ ಕವಿ. `ಪೆನ್ನು, ಕಾಗದ, ಹೋದರೂ ತೊಲಗಿ/ ಶಿವಪ್ರಕಾಶ ಉಪಮೆಯ ರೋಗಿಎಂದೂ ಅವರಿಲ್ಲಿ ಹೇಳಿಕೊಂಡಿದ್ದಾರೆ. ಇದಪ್ಪಾ ಶಿ.ಪ್ರ ಸಿಗ್ನೇಚರ್.

ಶೀರ್ಷಿಕೆ : ಮಬ್ಬಿನ ಹಾಗೆ ಕಣಿವಿಯಾಸಿ ಲೇಖಕರು : ಎಚ್ ಎಸ್ ಶಿವಪ್ರಕಾಶ್ ಪ್ರಕಾಶಕರು : ಅಭಿನವ, ಪುಟಗಳು :96 ಬೆಲೆ:ರೂ.50/-

ಕೃಪೆ : ವಿಜಯ ಕರ್ನಾಟಕ