ಮಕ್ಕಳ ಪೋಷಣೆಗೆ ಪೂರಕವಾದ ಲೇಖನಗಳು

scan0038

ಅವಿಭಕ್ತ ಕುಟುಂಬಗಳಲ್ಲಿ ಮಕ್ಕಳ ಲಾಲನೆ ಪಾಲನೆಯ ಜವಾಬ್ದಾರಿಯನ್ನು ಆ ಮನೆಯಲ್ಲಿರುವ ಇತರ ಸದಸ್ಯರು, ಅಜ್ಜ-ಅಜ್ಜಿಯರು ವಹಿಸುತ್ತಿದ್ದರು. ಆದರೆ ವಿದ್ಯಾವಂತ ವಿಭಕ್ತ ಕುಟುಂಬಗಳಲ್ಲಿ ಮಕ್ಕಳ ಪೋಷಣೆಯೇ ದೊಡ್ಡ ಸಮಸ್ಯೆಯಾಗಿದೆ. ಇದೊಂದು ಅನಿವಾರ್ಯ ಸ್ಥಿತಿ. ಹಾಗಾದರೆ ಮಕ್ಕಳನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಿ, ಅವರನ್ನು ಉತ್ತಮ ನಾಗರೀಕರನ್ನಾಗಿ ಮಾಡುವುದು ಹೇಗೆ? ಈ ಕುರಿತು ಶಿಕ್ಷಣ, ಮನಶ್ಯಾಸ್ತ್ರ, ವೈದ್ಯಕೀಯ ಕ್ಷೇತ್ರಗಳ ತಜ್ಞರು ಅಲ್ಲಲ್ಲಿ ಲೇಖನಗಳನ್ನು ಬರೆದೇ ಇದ್ದಾರೆ. ಮಕ್ಕಳ ಪೋಷಣೆಗೆ ಪೂರಕವಾದ ಇಂತಹ ಹಲವು ಉಪಯುಕ್ತ ಲೇಖನಗಳನ್ನು ಹನುಮಂತಪ್ಪ ಒಂದೆಡೆ ಇಲ್ಲಿ ಕಲೆಹಾಕಿದ್ದಾರೆ. ಕೆಲವನ್ನು ಹೊಸದಾಗಿ ಬರೆಯಿಸಿದ್ದಾರೆ. ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಬಂದ ಲೇಖನಗಳನ್ನು ಎತ್ತಿಕೊಂಡಿದ್ದಾರೆ. ಈ ಹಂತದಲ್ಲಿ ತುಂಬ ಶ್ರಮವಹಿಸಿ ಅವನ್ನೆಲ್ಲ ಕ್ರಮಬದ್ಧವಾದ ಒಂದು ಮಾಲೆಯನ್ನಾಗಿ ಹೆಣೆದು ಕೊಟ್ಟಿದ್ದಾರೆ.

ತಂದೆ-ತಾಯಿ, ಪೋಷಕರು, ಶಿಕ್ಷಕರು ಓದಬೇಕಾದ ಪುಸ್ತಕ ಇದಾಗಿದೆ. ವಿವಿಧ ಲೇಖಕರು ಬರೆದವಾದ್ದರಿಂದ ಅಲ್ಲಲ್ಲಿ ಪುನರಾವರ್ತನೆ ಅನಿವಾರ್ಯವಾಗಿದೆ.

ಶೀರ್ಷಿಕೆ:ನಮ್ಮ ಮಕ್ಕಳು ಮತ್ತು ನಾವು ಲೇಖಕರು: ಬಳ್ಳೇಕೆರೆ ಹನುಮಂತಪ್ಪ ಪ್ರಕಾಶಕರು: ಐಬಿಎಚ್ ಪ್ರಕಾಶನ ಪುಟಗಳು : 389 ಬೆಲೆ: ರೂ. 225/-

ಕೃಪೆ : ಸುಧಾ

Advertisements

ಪ್ರಾಸ ಪ್ರಯಾಸ ಪ್ರವೀಣ!

ಬಿ.ಎಸ್. ಕೇಶವರಾವ್, ಚಿಕ್ಕದಾಗಿ, ಬಿ.ಎಸ್.ಕೆ. ಹಾಗೆಂದರೆ `ಬಿಟ್ಟರೆ ಸಿಗದ ಕೇಡಿಎಂದು ವೈ.ಎನ್.ಕೆ. ಹೇಳುತ್ತಿದ್ದರಂತೆ. ವೈ.ಎನ್.ಕೆ. ಕುರಿತು ಬಿ.ಎಸ್.ಕೆ. ಬರೆಯುತ್ತಾರೆ:`ಪೂರ್ವದಿಂದಲೂ ಅಷ್ಟೇ, ಪದಗಳೊಡನೆ ಫನ್ ಮಾಡುವುದರಲ್ಲಿ ಪಾಖಡಾ ಎನ್ನುವಂತೆ ತಮ್ಮ ಪೆನ್ ಬಳಸಿ ಪ್ರಖ್ಯಾತರಾಗಿದ್ದ ವೈ.ಎನ್.ಎ. ಇತ್ತೀಚೆಗೆ ವಿಮಾನದಲ್ಲಿ ಹಾರುತ್ತಿರುವಾಗ ಹೃದಯಾಘಾತಕ್ಕೊಳಗಾಗಿ ಯಾರೊಬ್ಬರಿಗೂ ಚಿಕಿತ್ಸೆ ನೀಡುವ ಅವಕಾಶ ಕೊಡದೇ ಆಕಾಶದಲ್ಲೇ ಅಸುನೀಗಿ ಅದೃಶ್ಯರಾಗಿ ಹೋದರು.

ಇದು ಅವರ ಪ್ರಾಸಭರಿತ ಶೈಲಿಗೊಂದು ಸಣ್ಣ ಉದಾಹರಣೆ. ಪ್ರಾಣ ಹೋದರೂ ಪ್ರಾಸ ಬಿಡುವುದಿಲ್ಲ ಎನ್ನುವ ಹೊಸಗಾದೆಯನ್ನೂ ಅವರಿಗೋಸ್ಕರ ಸೃಷ್ಟಿಸಬಹುದು. ಎಂದೋ ಬರೆದ ಲೇಖನ ಪುಸ್ತಕದಲ್ಲಿ ಬರುವ ಹೊತ್ತಿಗೆ ಸಣ್ಣಪುಟ್ಟ ತಿದ್ದುಪಡಿಗೆ ಒಳಪಡದೇ ಹೋದರೆ, 2008ರ ಅಕ್ಪೋಬರ್ ನಲ್ಲಿ ಕೈಗೆತ್ತಿಕೊಂಡರೂ `ವೈ.ಎನ್.ಕೆ. ಇತ್ತೀಚೆಗೆ ಅಸು ನೀಗುತ್ತಾರೆ’.

ಅಡಿಗರ ಕುರಿತು ಬಿ.ಎಸ್.ಕೆ. ಬರೆಯುತ್ತಾರೆ: ಬಕ್ಕತಲೆಯವರಾಗಿದ್ದರೂ ಬರೆಯುವುದರಲ್ಲವರು ಬ್ರಹ್ಮರಾಕ್ಷಸ. ಬಕ್ಕತಲೆಯವರು ಎಂಬ ಪ್ರಸ್ತಾಪ ಅಲ್ಲಿ ಬೇಕಿತ್ತೇ? ಬಕ್ಕತಲೆಯವರು ಬರೆಯುವುದಿಲ್ಲವೇ? ಬ್ರಹ್ಮರಾಕ್ಷಸ ಯಾವಾಗ ಬರೆದ ಎಂದು ಕೇಳಬೇಡಿ. ಪ್ರಾಸ ಮುಖ್ಯ. ಶಿವರಾಮ ಕಾರಂತರ ಕುರಿತ ಬರಹ ನೋಡಿ: ಸದಾಕಾಲವೂ ಸಿಂಡರಿಸಿಕೊಂಡಂತೆ ಸೀರಿಯಸ್ಸಾಗೇ ಇರುತ್ತಿದ್ದದ್ದು ಸ್ವಭಾವ!

ಈ ಪ್ರಾಸೋಪವೇಶದಿಂದ ಪಾರಾದರೆ ಕೇಶವರಾವ್ ಲೇಖನಗಳು ಖುಷಿ ಕೊಡುತ್ತವೆ. ಕೈಲಾಸಂ ಕುರಿತಂತೂ ಅವರದೇ ಅಧಿಕೃತ ವಾಣಿ. ಅಷ್ಟೇ ಅಲ್ಲ, `ಕಂಡವರ, ಕಾಣದವರ, ಕೇಳಿದವರ, ಕೇಳದವರ, ಕತೆಯಾದವರ ಕುರಿತೂ ಕೇಶವರಾವ್ ಕಣ್ಣಿಗೆ ಕಟ್ಟುವಂತೆ ಕಥಿಸಬಲ್ಲರು‘!

ಬಿ.ಎಸ್.ಕೆ. ಬರೆದ ಮರೆಯಲಾಗದವರು ಹಾಗೂ `ಕನ್ನಡಕ್ಕೊಬ್ಬನೇ ಕೈಲಾಸಂಮರುಮುದ್ರಣ ಕಂಡಿವೆ.

ಐವತ್ತೆಂಟು ಕನ್ನಡ ಪ್ರತಿಭೆಗಳ ಕುರಿತು `ಮರೆಯಲಾಗದವರುಕೃತಿಯಲ್ಲಿ ಕೇಶವರಾವ್ ಸೊಗಸಾಗಿ ಬರೆದಿದ್ದಾರೆ. ನಗುವ, ನಗಿಸುವ, ನಗಿಸಿ, ನಗುತ ಬರೆಯುವುದು, ಬಾಳುವುದು ಜೀವನದ ಧ್ಯೇಯ ಎಂದು ನಂಬಿರುವ ಕೇಶವರಾವ್ ಕೃತಿಗಳು ಓದುವ ಸಂತೋಷವನ್ನಂತೂ ಧಾರಾಳವಾಗಿ ಕೊಡುತ್ತವೆ.

ಶೀರ್ಷಿಕೆ: ಮರೆಯಲಾಗದವರು ಲೇಖಕರು: ಬಿ.ಎಸ್. ಕೇಶವರಾವ್ ಪ್ರಕಾಶಕರು : ಐ.ಬಿ.ಎಚ್. ಪ್ರಕಾಶನ ಪುಟಗಳು : 482 ಬೆಲೆ:ರೂ. 290/-

ಕೃಪೆ : ಕನ್ನಡ ಪ್ರಭಾ