ಸಪ್ನ ಬುಕ್ ಹೌಸ್ – ಟಾಪ್ 10

ಕೃಪೆ – ಕನ್ನಡ ಪ್ರಭ

ಬಿತ್ತಿದಂತೆ ಅತ್ತು

ವರ್ಷಗಳಿಂದ ಇಂಗ್ಲೀಷಿನಲ್ಲಿ ಬರೆದ ವರದಿ, ಲೇಖನಗಳ ಕನ್ನಡಾನುವಾದ `ಬಿತ್ತಿದ್ದೀರಿ … ಅದಕ್ಕೆ ಅಳುತ್ತೀರಿ’. ಸಾಯಿನಾಥ್ ಅವರ ತೀವ್ರ ಕಾಳಜಿ, ಕ್ಷೇತ್ರ ಸಮೀಕ್ಷೆಯ ಗಟ್ಟಿ ನೆಲೆ, ಮನಮುಟ್ಟುವ ವಿಶಿಷ್ಟ ಶೈಲಿ, ಹರಿತವಾದ ವಿಶ್ಲೇಷಣೆ ಈ ಬರವಣಿಗೆಗಳಲ್ಲಿ ಕಾಣುತ್ತದೆ.

ಸಾಯಿನಾಥ್ ಅವರ ಇಂಗ್ಲೀಷ್ ಲೇಖನಗಳು ಮೊದಲ ನೋಟಕ್ಕೆ ಸರಳ ಎನ್ನಿಸಿದರೂ ವಾಸ್ತವದ ಸಂಕೀರ್ಣತೆಯ ಚಿತ್ರಣ, ಕಥನ ಶೈಲಿ, ವ್ಯಂಗ್ಯದ ಮೊನಚು, ವಿಶಿಷ್ಟ ನುಡಿಗಟ್ಟಿನ ಶಕ್ತಿಯನ್ನು ಕನ್ನಡದಲ್ಲಿ ಹಿಡಿದಿಡುವ ಕಷ್ಟದ ಕೆಲಸವನ್ನು ಲೇಖಕ ಟಿ. ಎಲ್. ಕೃಷ್ಣೇಗೌಡ ಯಶಸ್ವಿಯಾಗಿ ಮಾಡಿದ್ದಾರೆ.

ಶೀರ್ಷಿಕೆ: ಬಿತ್ತಿದ್ದೀರಿ … ಅದಕ್ಕೆ ಅಳುತ್ತೀರಿ  ಲೇಖಕರು: ಪಿ. ಸಾಯಿನಾಥ್ ಅನುವಾದ: ಟಿ. ಎಲ್. ಕೃಷ್ಣೇಗೌಡ ಪ್ರಕಾಶಕರು: ಚಿಂತನ ಪುಸ್ತಕ ಪುಟಗಳು: 180 ಬೆಲೆ:ರೂ. 100/-

ಕೃಪೆ: ಕನ್ನಡ ಪ್ರಭ

ಹನ್ನೆರಡರ ಹುಡುಗ

scan0009(2)
ಇಟೆಲಿಯ ಪತ್ರಕರ್ತ, ಬರಹಗಾರ ಇಟಾಲೋ ಕಾಲ್ವಿನೋನ ‘ಬ್ಯಾರನ್ ಇನ್ ದಿ ಟ್ರೀಸ್’ ಕಾದಂಬರಿಯನ್ನು ಕೆ.ಪಿ.ಸುರೇಶ ಕನ್ನಡಕ್ಕೆ ತಂದಿದ್ದಾರೆ. ಹನ್ನೆರಡು ವರುಷದ ಹುಡುಗನೊಬ್ಬನ ಸಾಕ್ಷೀ ಪ್ರಜ್ಞೆಯಲ್ಲಿ ನಿರೂಪಿತವಾಗಿರುವ ಕತೆ ಇದು.
‘ಕಾಡು ಮತ್ತು ನಾಡುಗಳ ಮಧ್ಯೆ ಚಲಿಸುತ್ತಾ ಎರಡರಿಂದಲೂ ಬೆಳೆಯುತ್ತಿರುವ ಕನ್ನಡ ಕವಿ’ ಕೆ.ಪಿ.ಸುರೇಶ್ ಅನುವಾದವನ್ನು ಎಚ್.ಎಸ್. ರಾಘವೇಂದ್ರರಾವ್ ಅತಿಯಾಗಿ ಮೆಚ್ಚಿಕೊಂಡಿದ್ದಾರೆ. ‘ಕನ್ನಡ ಕಾದಂಬರಿಗಳ ಈಚಿನ ಚಪಲಗಳನ್ನು ಮೀರಿ, ಬರವಣಿಗೆಯ ಹೊಸ ಸಾಧ್ಯತೆಗಳನ್ನು ಶೋಧಿಸುವ ಈ ಅನುವಾದ ನನಗೆ ಖುಷಿ ಕೊಟ್ಟದೆ‘ ಎಂದಿದ್ದಾರೆ. ಈಚಿನ ಚಪಲಗಳ ಬಗ್ಗೆ ಅವರೊಂದಷ್ಟು ವಿವರವಾಗಿ ಹೇಳಬಹುದಿತ್ತೇನೋ?
ಕಾಲ್ವಿನೋನ ತ್ರಿವಳಿ ಕಾದಂಬರಿಗಳಲ್ಲಿ ಅತ್ಯಂತ ಜನಪ್ರಿಯವಾದ ‘ಬ್ಯಾರನ್ ಇನ್ ದಿ ಟ್ರೀಸ್‘ಕಾದಂಬರಿ ಈಗ ಕನ್ನಡದಲ್ಲಿ ಲಭ್ಯ.

ಶೀರ್ಷಿಕೆ: ಕೊಸಿಮೊ  ಅನುವಾದ:ಕೆ.ಪಿ.ಸುರೇಶ್  ಪ್ರಕಾಶಕರು: ಅಭಿನವ ಪುಟ:216, ಬೆಲೆ:ರೂ.100/-

ಕೃಪೆ : ಕನ್ನಡ ಪ್ರಭ

ರಾಮಬಾಣ

scan0007
ಕರುಣಾಳು ಬಾ ಬೆಳಕೆ
ಮಸುಕಿದೀ ಪಬ್ಬಿನಲಿ
ಕೈ ಹಿಡಿದು ಕುಡಿಸೆನ್ನನು
ವೈ.ಎನ್.ಕೆ. ಬರೆದ ಈ ಅಣಕವಾಡು ಸಾರ್ವಕಾಲಿಕ. ಕನ್ನಡದ ಹಿರಿಯ ಕವಿಗಳೂ ಅಣಕವಾಡು ಬರೆದಿದ್ದಾರೆ. ಹಿರಿಯ ಕವಿಗಳ ಕವಿತೆಗಳೂ ಸೊಗಸಾದ ಅಣಕವಾಡುಗಳಾಗಿ ರಂಜಿಸಿವೆ. ಬ್ರಹ್ಮಮುರಾರಿ ಸದಾಶಿವ ಲಿಂಗಂ ಎಂಬ ಲಿಂಗಾಷ್ಟಕದ ಸಾಲುಗಳನ್ನೂ ಬುದ್ದಿವಂತರು ಅಣಕು ಮಾಡಿದ್ದಾರೆ:
ಮೋಹಿನಿ ಮೋಹಕ ಮಾದಕ ಲಂಚಮ್
ಮಡದಿಯ ಕೋಪ ನಿವಾರಕ ಲಂಚಮ್
ಮಂತ್ರಿಯ ಮನವನು ಗೆಲ್ಲುವ ಲಂಚಮ್
ತತ್ಪ್ರಣಮಾಮಿ ಸದಾಪ್ರಿಯ ಲಂಚಮ್
ಇಂಥ ಸೊಗಸಾದ ಅಣಕವಾಡುಗಳನ್ನು ಬರೆಯುತ್ತಾ ಬಂದಿರುವವರು ಎನ್.ರಾಮನಾಥ್. ‘ಹಗಲು ಹರಿಯಿತು ಇರುಳು ಕರಗಿತು, ಏಳು ಪಯಣಿಗ ಎಚ್ಚರಾ‘ ಎಂಬ ಚಕ್ರತೀರ್ಥದ ಹಾಡು ಅವರ ಅಣಕವಾಡುವಿನಲ್ಲಿ ‘ಕೊರೆತ ಮುಗಿಯಿತು ಸಭೆಯು ಕರಗಿತು ಏಳು ಸಭಿಕನೆ ಎಚ್ಚರಾ‘ ಎಂದಾಗುತ್ತದೆ. ಇದಕ್ಕೆ ಇನ್ನೆರಡು ಅಣಕವಾಡುಗಳನ್ನೂ ಅವರೇ ಕೊಟ್ಟಿದ್ದಾರೆ: ‘ಕದವು ತೆರೆಯಿತು ಇರುಳು ಸರಿಯಿತು ಏಳು ಕುಡುಕನೇ ಎಚ್ಚರ, ಮುಗಿಲು ಹರಿಯಿತು ಮಳೆಯು ಸುರಿಯಿತು ಸಾಗು ಪಯಣಿಗ ಎಚ್ಚರ‘.

ಶೀರ್ಷಿಕೆ: ಮಾಸದ ಅಣಕು ಗೀತೆಗಳು ಲೇಖಕರು:ಎನ್.ರಾಮನಾಥ್ ಪ್ರಕಾಶಕರು: ಪ್ರಶಾಂತ ಪ್ರಕಾಶನ ಪುಟ:118, ಬೆಲೆ:ರೂ.55/-

ಕೃಪೆ : ಕನ್ನಡ ಪ್ರಭ

ವೇಣು ನಿನಾದ

scan0008(2)
1981 ರಲ್ಲಿ ಪ್ರಕಟವಾದ ‘ಗಂಡುಗಲಿ ಮದಕರಿನಾಯಕ‘ ಕಾದಂಬರಿಯನ್ನು ಚಿತ್ರದುರ್ಗ ಸಾಹಿತ್ಯ ಸಮ್ಮೇಳನದ ನಿಮಿತ್ತ, ಮರುಮುದ್ರಣ ಮಾಡಿದ್ದಾರೆ. ಇದು ನಾಲ್ಕನೆಯ ಮುದ್ರಣ. ಸಾಹಿತ್ಯ ಸಮ್ಮೇಳನದಲ್ಲಿ ಈ ಕಾದಂಬರಿಯ 748 ಪ್ರತಿಗಳು ಮಾರಾಟವಾಗಿವೆ ಎನ್ನುತ್ತಾರೆ ಪ್ರಕಾಶಕರು.
ದಲಿತ, ಬಂಡಾಯ, ಸಸ್ಪೆನ್ಸ್, ಪಾಲಿಟಿಕ್ಸ್, ಡೀಪ್ ಲವ್, ಐತಿಹಾಸಿಕ, ಕೌಟುಂಬಿಕ, ಸಂಗೀತ, ನೃತ್ಯ- ಯಾವ ಪ್ರಕಾರವನ್ನೇ ಆರಿಸಿಕೊಂಡರೂ ಅಧ್ಯಯನ ಮಾಡಿ ವಸ್ತುನಿಷ್ಟವಾಗಿಯೂ ಬರೆವ ವೇಣು ಯಾವುದೇ ಲೇಬಲ್ ಅಂಟಿಸಿಕೊಳ್ಳದ ಸೃಜನಶೀಲ ಬರಹಗಾರರು. ಐತಿಹಾಸಿಕ ಕಾದಂಬರಿಗಳ ಅವನತಿಯ ಕಾಲದಲ್ಲಿ ಓಯಸ್ಸಿಸ್ ನಂತೆ ದುರ್ಗದ ಇತಿಹಾಸ ಕುರಿತಂತೆ ಕೃತಿ ರಚನೆಗಿಳಿದು ‘ಜನಪ್ರಿಯತೆ ಮತ್ತು ಮೌಲ್ವಿಕತೆ ಬೇರೆ ಬೇರೆ ಎಂಬ ಅಭಿಪ್ರಾಯವನ್ನು ಹುಸಿಯಾಗಿಸಿ ಬೆಳೆದ ಲೇಖಕ‘ ಎಂಬ ಮೆಚ್ಚುಗೆಯ ಸಾಲುಗಳು ಈ ಲೇಖಕನ ಬಗ್ಗೆ ಮುನ್ನುಡಿಯಲ್ಲಿವೆ.
ಈ ಕಾದಂಬರಿಯನ್ನು ಓದಬೇಕೆಂಬ ಆಸೆ ಹುಟ್ಟಿಸುವುದಕ್ಕೆ ಇಷ್ಟು ವಿವರಗಳು ಸಾಕಲ್ಲವೇ?

ಶೀರ್ಷಿಕೆ: ಗಂಡುಗಲಿ ಮದಕರಿನಾಯಕ  ಲೇಖಕರು:ಬಿ.ಎಲ್.ವೇಣು  ಪ್ರಕಾಶಕರು: ಗೀತಾಂಜಲಿ, ಶಿವಮೊಗ್ಗ ಪುಟ:236, ಬೆಲೆ:ರೂ.195/-

ಕೃಪೆ : ಕನ್ನಡ ಪ್ರಭ

ಈ ಶಾಲೆ ನನಗೆ ಇಷ್ಟವಾಯಿತು

scan0015

“ಈಗ ನೀನು ಈ ಶಾಲೆಯ ವಿದ್ಯಾರ್ಥಿನಿ” ಎಂದು ಮುಖ್ಯೋಪಧ್ಯಾಯರು ಹೇಳಿದ ಮೇಲೆ ತೊತ್ತೊ-ಚಾನ್ ನಾಳೆ ಬೆಳಗಾಗುವುದನ್ನೇ ಕಾಯ್ದಳು. ಈ ಮೊದಲು ಆಕೆ ಎಂದೂ ಹಾಗೆ ಕಾಯ್ದಿರಲಿಲ್ಲ.

ಪುಟ್ಟ ತೊತ್ತೊ-ಚಾನ್ ತೊಮೊಯೆ ಗಾಕುಯೆನ್ ಶಾಲೆಯ ವಾತಾವರಣ ತಾನು ಹಾಗೂ ತನ್ನ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಇಷ್ಟವಾಗಬೇಕು ಹಾಗೂ ಸಮವಸ್ತ್ರ ಮತ್ತು ಪಠ್ಯಕ್ರಮಕ್ಕಿಂತ ಮಕ್ಕಳಿಗೆ ಬೇಕಾದ ಸ್ವಾದಿಷ್ಟ ಊಟದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಮುಖ್ಯೋಪದ್ಯಾಯರು ಇರಬೇಕು ಎಂದು ಆಶಿಸಿದ್ದಳು. ಅಲ್ಲಿ ಎಲ್ಲ ಮಕ್ಕಳು ಸಂಗೀತ ಕಲಿಯುತ್ತಿದ್ದರು, ಆಟವಾಡುತ್ತಿದ್ದರು, ಬೇಸಿಗೆಯಲ್ಲಿ ಹೊರಗೆ ಕ್ಯಾಂಪು ಹಾಕುತ್ತಿದ್ದರು, ಬಿಸಿನೀರಿನ ಬುಗ್ಗೆಯಲ್ಲಿ ನಡೆದಾಡುತ್ತಿದ್ದರು, ನಾಟಕ ಆಡುತ್ತಿದ್ದರು ಹಾಗೂ ಬಯಲಿನಲ್ಲಿ ಅಡುಗೆ ಮಾಡುವ ಆನಂದ ಅನುಭವಿಸುತ್ತಿದ್ದರು. ಆ ಮಕ್ಕಳಲ್ಲಿ ಕೆಲವರು ಹಾಡುಗಾರರಿದ್ದರು, ಆಟಗಾರರಿದ್ದರು ಹಾಗೂ ಒಬ್ಬ ಭಾವೀ ಡಾಕ್ಟರ‍್ ಕೂಡಾ ಇದ್ದ.

ಇದೆಲ್ಲವೂ ಸ್ನೇಹಶೀಲ ಹಾಗೂ ಕಲ್ಪನಾಶೀಲ ಮುಖ್ಯೋಪಧ್ಯಾಯ ಶ್ರೀ ಕೊಬಾಯಾಶಿ ಅವರಿಂದ ಸಾಧ್ಯವಾಯಿತು. ಅವರು ತೊತ್ತೊ-ಚಾನ್ ಗೆ ಯಾವಾಗಲೂ ಹೇಳುತ್ತಿದ್ದರು. “ನೀನು ಖಂಡಿತಾ ಒಳ್ಳೆಯ ಹುಡುಗಿ!”. ನಿಸ್ಸಂದೇಹವಾಗಿ ಅವರು ಇದೇ ಪ್ರೋತ್ಸಾಹಕ ಮಾತನ್ನು ಇತರ ಮಕ್ಕಳಿಗೂ ಹೇಳುತ್ತಿದ್ದಿರಬೇಕು. ಮಕ್ಕಳನ್ನು ಉಲ್ಲಾಸದಿಂದಿಡುವ ಕಡೆಗೆ ಅವರು ಹೆಚ್ಚಿನ ಗಮನ ಹರಿಸುತ್ತಿದ್ದರು. ಅವಳ ಶಾಲೆ ಮಕ್ಕಳಿಗೆ ಮನೆಯಿಂದ ದೂರವಿರುವ ಮತ್ತೊಂದು ಮನೆಯಂತಿತ್ತು. ಆಗಿನ ಪುಟ್ಟ ಹುಡುಗಿ ತೊತ್ತೊ-ಚಾನ್ ಈಗ ದೊಡ್ಡವಳಾಗಿ ತೆತ್ಸುಕೋ ಕುರೋಯಾನಾಗಿ ಎಂಬ ಹೆಸರಿನಲ್ಲಿ ಜಪಾನಿನಾದ್ಯಂತ ಪ್ರಸಿದ್ಧಿ ಪಡೆದ ಯಶಸ್ವೀ ಟೆಲಿವಿಷನ್ ಕಲಾವಿದೆ. ಜಪಾನಿನಿಂದ ಯುನಿಸೆಫ್ ನ ಸದ್ಭಾವನಾ ರಾಯಬಾರಿಯಾಗಿ ನೇಮಕಗೊಂಡಿರುವ ಅವರಿಂದ ಮಕ್ಕಳು, ಹಾಗೆಯೇ ಮಕ್ಕಳ ಜೊತೆಯೇ ಒಂದಲ್ಲ ಒಂದು ರೀತಿಯ ಸಂಬಂಧವನ್ನು ಹೊಂದಿರುವ ಶಿಕ್ಷಕರು, ತಂದೆ-ತಾಯಿಯರು, ಅಜ್ಜ-ಅಜ್ಜಿಯರು ತಿಳಿದುಕೊಳ್ಳುವುದು ಬಹಳಷ್ಟಿದೆ. ಜಪಾನಿನ ಈ ಜನಪ್ರಿಯ ಪುಸ್ತಕ ತನ್ನ ಪ್ರಭಾವಶಾಲಿ ಸಂದೇಶ ಸಾರುತ್ತಿದೆ:

ಅರಳಲಿ ಹೂಗಳು ನೂರಾರು

ನಡೆಯಲಿ ವಿಚಾರ ಸಂಘರ್ಷಗಳು ಸಾವಿರಾರು.

– ಪುಸ್ತಕದ ಬೆನ್ನುಡಿಯಿಂದ

ಮಕ್ಕಳ ಕುರಿತು ಮಕ್ಕಳೇ ಪ್ರಧಾನ ಪಾತ್ರದಲ್ಲಿರುವ ಒಂದು ಕಾದಂಬರಿ ತೊತ್ತೊ-ಚಾನ್ . ‘ತೊತ್ತೊ-ಚಾನ್’ ಅತ್ಯಂತ ಹೆಚ್ಚು ಬಾಷೆಗಳಿಗೆ ಅನುವಾದಗೊಂಡ ಅತ್ಯಂತ ಹೆಚ್ಚು ಮಾರಾಟ ಕಂಡ ಕೃತಿ. ಈ ಬೇಸಿಗೆ ರಜೆಯಲ್ಲಿ ನಿಮ್ಮ ಮಕ್ಕಳಿಗೆ ಓದಿಸಿ ನೀವೂ ಓದಿ ಎಂಬ ಆಶಯ ‘ಕನ್ನಡ ಪ್ರಭ’ ದ್ದು.

ಶೀರ್ಷಿಕೆ: ತೊತ್ತೊ-ಚಾನ್ ಲೇಖಕರು:ತೆತ್ಸುಕೊ ಕುರೋಯಾನಾಗಿ ಅನುವಾದ:ವಿ.ಗಾಯತ್ರಿ  ಪ್ರಕಾಶಕರು:ನ್ಯಾಷನಲ್ ಬುಕ್ ಟ್ರಸ್ಟ್  ಪುಟಗಳು:೧೫೩ ಬೆಲೆ:ರೂ೪೦/-

ಮತ್ತೆ ಉಮರ್

scan0001

ಉಮರ್ ಖಯ್ಯಾಮನ ರೂಬಾಯತುಗಳನ್ನು ಡಿವಿಜಿ ಕನ್ನಡಕ್ಕೆ ತಂದಿದ್ದರು. ಕೆಲವು ವರುಷಗಳ ಹಿಂದೆ ಶಾ. ಬಾಲೂರಾವ್ ಕೂಡ ಅವನ್ನು ಅನುವಾದಿಸಿದ್ದರು. ಇದೀಗ ಅವು ಜಗದೀಶ್ ಕೊಪ್ಪ ಅನುವಾದದಲ್ಲಿ ಮತ್ತೆ ಕನ್ನಡಕ್ಕೆ ಕಾಲಿಟಿವೆ.

ಖಯ್ಯಾಮ್ ಕವಿತೆಗಳ ಇಂಗ್ಲೀಷ್ ಅನುವಾದಗಳ ಪೈಕಿ ಅತ್ಯುತ್ತಮ ಎಂದು ಕರೆಸಿಕೊಳ್ಳುವುದು ಪಿಟ್ ಜೆರಾಲ್ಡ್ ಅವರ ಭಾಷಾಂತರ. ಡಿ.ವಿ.ಜಿ ಮತ್ತು ಬಾಲೂರಾವ್ ಕೂಡ ಅದನ್ನೇ ಇಟ್ಟುಕೊಂಡು ಕವಿತೆಗಳನ್ನು ಅನುವಾದ ಮಾಡಿದ್ದರು. ಜಗದೀಶ್ ಕೂಡ ಅದನ್ನೇ ಮುಂದಿಟ್ಟುಕೊಂಡಿದ್ದಾರೆ.

There was the Door to which I found no Key;

There was the Veil through which I might not see:

Some little talk awhile of ME and THEE

There was-and then no more of THEE and ME.

ಖಯ್ಯಾಮನ ಈ ಜನಪ್ರಿಯ ರೂಬಾಯತನ್ನು ಡಿವಿಜಿ ಹೀಗೆ ಅನುವಾದಿಸಿದ್ದರು:

ಹಿಂದೊಂದು ಬಾಗಿಲ್; ಆ ಬೀಗಕ್ಕೆ ಕೈ ಕೈಯಿಲ್ಲ.

ಮುಂದೊಂದು ತೆರೆ; ಅದನ್ನೆತ್ತಿ ನೋಡಲಳವಲ್ಲ.

ಈ ಎಡೆಯೊಳೊಂದೆರಡು ದಿನ ನಾನು ನೀನೆಂದು

ಹರಟುವೆವು; ಬಳಿಕಿಲ್ಲ, ನಾನು ನೀನುಗಳು

ಆ ಕಾಲಕ್ಕೊಪ್ಪುವ ಭಾಷೆಗೆ ತಕ್ಕಂತೆ ಡಿವಿಜಿ ಅನುವಾದಿಸಿದ್ದರೆ, ಆಮೇಲೆ ಅದನ್ನು ಶಾ. ಬಾಲೂರಾವ್ ಲಯವನ್ನು ಬಿಟ್ಟು ಅರ್ಥವನ್ನಷ್ಟೇ ಉಳಿಸಿಕೊಂಡು ಕನ್ನಡಕ್ಕೆ ತಂದರು. ಇದೀಗ ಕೊಪ್ಪ ಅವರ ಅನುವಾದ ಹೀಗಿದೆ:

ಸಖಿ, ಅಲ್ಲೊಂದು ಮರವಿರಲಿ

ಆ ಮರದಡಿಯಲ್ಲಿ

ಒಂದಿನಿತು ರೊಟ್ಟಿ

ಬಟ್ಟಲು ತುಂಬ ಮದ್ಯ

ಜೊತೆಗೆ ನೀನು

ನಿನ್ನ ಹಾಡುಗಳ ಅನುರಣಗಳಿರಲಿ

ಇವಿಷ್ಟು ಸಾಕು

ಸ್ವರ್ಗವಾದರೂ ಏಕೆ ಬೇಕು?

ಅನುರಣವೋ ಅನುರಣನವೋ ಎಂಬ ಜಿಜ್ಞಾಸೆ ಹಾಗೇ ಉಳಿದುಕೊಳ್ಳುತ್ತದೆ.

ಶೀರ್ಷಿಕೆ: ಉಮರ್ ಖಯ್ಯಾಮನ ಪದ್ಯಗಳು ಲೇಖಕರು: ಎನ್.ಜಗದೀಶ್ ಕೊಪ್ಪ ಪ್ರಕಾಶಕರು: ಲಡಾಯಿ ಪ್ರಕಾಶನ ಪುಟಗಳು:80 ಬೆಲೆ:ರೂ.50/-

ಕೃಪೆ : ಕನ್ನಡ ಪ್ರಭ