ಪ್ರಶಸ್ತಿಗಾಗಿ ಕಂಗ್ರಾಜುಲೇಶನ್ಸ್ !!!

ಕರ್ನಾಟಕ ಸಾಹಿತ್ಯ ಅಕಾಡೆಮಿಯ 2008ನೇ ಸಾಲಿನ ಲಲಿತ ಪ್ರಬಂಧ ವಿಭಾಗದಲ್ಲಿ ಪುಸ್ತಕ ಪ್ರಶಸ್ತಿ ಪಡೆದ ಕೃತಿ.

ಒಳ್ಳೆಯ ಕತೆ ಬರೆಯುವವರೆಲ್ಲರೂ ಒಳ್ಳೆಯ ಪ್ರಬಂಧಗಳನ್ನು ಬರೆಯುತ್ತಾರೆಂದು ಹೇಳುವುದಕ್ಕೆ ಸಾಧ್ಯವಿಲ್ಲ. “ಹೊರಗೂ ಮಳೆ ಒಳಗೂ ಮಳೆ” ಎಂಬ ಅತ್ಯುತ್ತಮ ಕಥಾಸಂಕಲನ ಕೊಟ್ಟ ನಮ್ಮ ನಡುವಿನ ಪ್ರತಿಭಾಶಾಲಿ ಕತೆಗಾರ ಚ.ಹ. ರಘುನಾಥ ಒಳ್ಳೆಯ ಪ್ರಬಂಧಗಳನ್ನು ಬರೆದಿದ್ದಾರೆನ್ನುವುದಕ್ಕೆ ಈ ಪ್ರಬಂಧಗಳು ಸಾಕ್ಷಿ. ಇಲ್ಲಿಯ `ರಾಗಿಮುದ್ದೆ’, `ಅಧರಂ ಮಧುರಂ’, `ಮಳೆಯ ಮೂರು ಹನಿ’, `ಜಾತ್ರೆಯೆಂಬ ಕಾಮನಬಿಲ್ಲು’ ಇತ್ಯಾದಿ ಪ್ರಬಂಧಗಳು ತಮ್ಮ ಕ್ಲಾಸಿಕ್ ಲಕ್ಷಣಗಳಿಂದ ಬೆರಗುಗೊಳಿಸುತ್ತವೆ. ಕಾವ್ಯದ ಭಾಷೆಯನ್ನು ಪಡೆದು ಆಕರ್ಷಣೀಯವಾಗಿವೆ. ಸ್ವಾನುಭವಜನ್ಯ ವಿಷಯಗಳನ್ನು ಒಳಗೊಂಡರೂ ಸ್ವಪ್ರತಿಷ್ಠೆಯನ್ನು ಮೆರೆಸುವುದಿಲ್ಲ. ಬಡತನದ ಬಾಲ್ಯದ ನೆನಪುಗಳಂತೆ ಕಂಡರೂ ಇಲ್ಲಿ ಆಕ್ರೋಶವಿಲ್ಲ. ಸಾಮಾಜಿಕ ಸ್ಥಿತಿಗತಿಗಳಿಗೆ ಸ್ಪಂದಿಸುವ ಸಂವೇದನಾಶೀಲ ಲೇಖಕನೊಬ್ಬನ ಮನಸ್ಸಿಗೆ ಹಿಡಿದ ಕನ್ನಡಿಯಾಗಿವೆ. ತನ್ನ ಪಾಡಿಗೆ ತಾನು ಮೌನವಾಗಿ ಅಧ್ಯಯನದಲ್ಲಿ ತೊಡಗಿರುವ ನನಗೆ ಗೊತ್ತಿರುವ ಈ ಲೇಖಕ ತನ್ನ ಸ್ವಂತ ದನಿಯಲ್ಲಿ ಮಾತನಾಡುತ್ತಿದ್ದಾನೆನ್ನುವುದು ವಿಶೇಷ.

ಚ. ಹ. ರಘುನಾಥರು ವೃತ್ತಿಯಲ್ಲಿ ಪತ್ರಕರ್ತರಾಗಿದ್ದರೂ ಜರ್ನಲಿಸ್ಟಿಕ್ ಭಾಷೆಗೆ ಒಳಗಾಗುವುದಿಲ್ಲವಾದುದರಿಂದ ಇಲ್ಲಿಯ ಪ್ರಬಂಧಗಳೆಲ್ಲ ಶುದ್ಧ ರೂಪದ `ಎಸ್ಸೇ’ಗಳಾಗಿ ಸಾರ್ಥಕವಾಗಿವೆ.

– ಗೋಪಾಲಕೃಷ್ಣ ಪೈ (ಪುಸ್ತಕದ ಬೆನ್ನುಡಿಯಿಂದ)

ಶೀರ್ಷಿಕೆ: ರಾಗಿಮುದ್ದೆ ಲೇಖಕರು:ರಘುನಾಥ ಚ. ಹ. ಪ್ರಕಾಶಕರು:ಛಂದ ಪುಸ್ತಕ ಫುಟಗಳು:88 ಬೆಲೆ:ರೂ.40/-

ಇವನು ತಂದ ಮೀನಿಗೆ ನಾ ಮಸಾಲೆ ಮಾಡುವುದು ಎನ್ನುವಂತೆ ಸಲೀಸಾಗಿ

oora-olagana-bayalu

ಡಾ| ವಿನಯಾ ಅವರು ಈಗಾಗಲೇ ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಪ್ರಸ್ತುತ `ಊರ ಒಳಗಣ ಬಯಲುಎಂಬ ಅವರ ಈ ಮೊದಲ ಕಥಾ ಸಂಕಲನದಲ್ಲಿ ಹನ್ನೊಂದು ಕತೆಗಳಿವೆ. ಈ ಕತೆಗಳೆಲ್ಲವೂ ಸ್ವಾರಸ್ಯಕರವಾಗಿ ಓದಿಸಿಕೊಳ್ಳುವಂತಿದೆ. ಇಲ್ಲಿನ ಹೆಚ್ಚಿನ ಕತೆಗಳು ಉತ್ತರ ಕನ್ನಡ ಜಿಲ್ಲೆಯ ಹಳ್ಳಿ ಹಾಗೂ ಪಟ್ಟಣಗಳ ಜೀವನದ ಗತಕಾಲದ ನೆನಪುಗಳನ್ನು ಆಧರಿಸಿ ನಿರೂಪಿತವಾಗಿರುವ ಈ ಕತೆಗಳಲ್ಲಿ ಪಾತ್ರಗಳ ವ್ಯಕ್ತಿತ್ವ, ಅವುಗಳ ಬದುಕಿನ ಸನ್ನಿವೇಶಗಳನ್ನು ಹಾಗೂ ಅನುಭವಗಳನ್ನು ದಟ್ಟವಾಗಿ ವಿವರಗಳ ಮೂಲಕ ಓದುಗರ ಕಣ್ಣ ಮುಂದೆ ಚಿತ್ರಗಳನ್ನಾಗಿ ಮೂಡಿಸಲಾಗಿದೆ. ಈ ವಿವರಗಳು ಸ್ವಲ್ಪ ಹೆಚ್ಚಾಗಿಯೇ ಇರುವುದರಿಂದ ಓದುಗರು ಈ ಕತೆಗಳನ್ನು ಸಾವಕಾಶವಾಗಿ ಓದಿದರೆ ಮಾತ್ರ ಅವುಗಳಲ್ಲಿರುವ ಸ್ವಾರಸ್ಯವನ್ನು ಪೂರ್ತಿಯಾಗಿ ಸವಿಯಬಹುದಾಗಿದೆ.

`ಸ್ವಯ‘, `ಕ್ಷಮೆಯಿರಲಿ ಕಂದಾ‘, `ಎಲ್ಲಾ ಆರಾಮಾ?’ ದಂತಹ ಕತೆಗಳನ್ನು ಇಲ್ಲಿನ ಸಾಮಾನ್ಯ ಕತೆಗಳೆಂದು ಗುರುತಿಸಬಹುದು. `ಸ್ವಯದಲ್ಲಿ ದೇವರಾಯ ನಾಯ್ಕನ ವಿವಾಹೇತರ ಸಂಬಂಧದಿಂದಾಗಿ ಅವನಿಂದ ದೂರ ಸರಿದಿದ್ದ ಅವನ ಹೆಂಡತಿ, ಅವನು ಅಫಘಾತದಲ್ಲಿ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದಾಗ ಹತ್ತಿರವಾಗುವುದನ್ನು ಕಾಣುತ್ತೇವೆ. `ಕ್ಷಮೆಯಿರಲಿ ಕಂದಾದಲ್ಲಿ ತಮ್ಮ ಮತೀಯ ಹಿನ್ನೆಲೆಗಳನ್ನು ಮರೆತು ಆಪ್ತ ಸ್ನೇಹಿತರಾಗಿದ್ದ ಇಬ್ಬರು ವಿದ್ಯಾರ್ಥಿಗಳು ಊರಿನ ಮತೀಯ ಸಂಘಟನೆಯ ಕಾರ್ಯಕರ್ತರ ಉಪಟಳದಿಂದಾಗಿ ದೂರವಾಗುವುದನ್ನು ಆ ಕಾಲೇಜಿನ ಅಧ್ಯಾಪಕಿಯ ಅನುಭವಗಳ ಮೂಲಕ ನಿರೂಪಿಸಲಾಗಿದೆ. `ಎಲ್ಲಾ ಆರಾಮಾ?’ ದಲ್ಲಿ ಸುಜಾತ ಎಂಬ ಕಾಲೇಜು ಅಧ್ಯಾಪಕಿ, ತನ್ನ ಶಾಲಾ ಶಿಕ್ಷಕಿ `ಸಾವಿತ್ರಿ ಮೇಡಂರನ್ನು ಆಕಸ್ಮತ್ತಾಗಿ ಭೇಟಿಯಾದಾಗ, ತನ್ನ ಶಾಲಾ ದಿನಗಳಲ್ಲಿ ವಿದ್ಯಾರ್ಥಿನಿಯರಿಗೆ ಡ್ಯಾನ್ಸ್ ಕಲಿಸುವ ಮೂಲಕ ಸ್ಫೂರ್ತಿಯ ಕೇಂದ್ರವಾಗಿದ್ದ ಅವರ ವ್ಯಕ್ತಿತ್ವವನ್ನು ನೆನಪಿಸಿಕೊಳ್ಳುವುದನ್ನು ಚಿತ್ರಿಸಲಾಗಿದೆ.

ಸಂಕಲನದ ಮೊದಲ ಕತೆಯಾದ `ಒಂದು ಖಾಸಗಿ ಪತ್ರಇಲ್ಲಿನ ಅತ್ಯತ್ತಮ ಕತೆಯಾಗಿದ್ದು ಕನ್ನಡದ ಉತ್ತಮ ಕತೆಗಳ ಸಾಲಿಗೆ ಸೇರುವಂತಹದ್ದಾಗಿದೆ. ನಮ್ಮ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಎದುರಿಸಬೇಕಾಗಿರುವ ಮಾನಸಿಕ ಹಾಗೂ ದೈಹಿಕ ಹಿಂಸೆಗಳನ್ನು ಈ ಕತೆಯಲ್ಲಿ ಪರಿಣಾಮಕಾರಿಯಾಗಿ ಅನಾವರಣಗೊಳಿಸಲಾಗಿದೆ. ಈ ಕತೆ, ಪಪ್ಪಿ ಎಂಬ ಮೂವತ್ತು ವರ್ಷದ ಮಹಿಳೆ, ಈಗ ಹನ್ನೆರಡು ವರ್ಷದ ಮಗಳ ತಂದೆಯಾಗಿರುವ ಮಹೇಶ ಎಂಬ ತನ್ನ ಊರಿನ ವ್ಯಕ್ತಿಗೆ ಬರೆದ ಖಾಸಗಿ ಪತ್ರದ ರೂಪದಲ್ಲಿದೆ. ಇದರಲ್ಲಿ ಪಪ್ಪಿ ತಾನು ಹೈಸ್ಕೂಲು ಹಾಗೂ ಕಾಲೇಜುಗಳಲ್ಲಿ ಓದುತ್ತಿದ್ದಾಗ ಅವಳನ್ನು ತನ್ನ ಪ್ರೇಮಿ ಎಂದು ಪುಕಾರು ಹಬ್ಬಿಸುವ ಮೂಲಕ ಮತ್ತು ತನ್ನ ಇತರ ನಡೆ ನುಡಿಗಳಿಂದ ತನ್ನನ್ನು ವಿನಾಕಾರಣ ಸತತವಾಗಿ ಕಾಡಿದ್ದನ್ನು ನೆನಪಿಸುತ್ತಾಳೆ. ಅವನ ಈ ನಡವಳಿಕೆಗಳಿಂದಾಗಿ ತನಗೆ ತನ್ನ ಹಿರಿಯರಿಂದಾದ ಅಪಮಾನ ಹಾಗೂ ಹಿಂಸೆಗಳನ್ನು ಜೊತೆಗೆ ತನ್ನ ಊರಿನ ಇತರ ಕೆಲವು ಮಹಿಳೆಯರೂ ಪುರುಷರಿಂದ ಹಿಂಸೆಗೊಳಗಾದ ಘಟನೆಗಳ ಬಗ್ಗೆಯೂ ಹೇಳಿ ಅವನಿಗೆ ಅವನ ವ್ಯಕ್ತಿತ್ವದ ನೀಚತನವನ್ನು ಕಾಣಿಸುತ್ತಾಳೆ. `ಸತತ ಎಂಟ್ಹತ್ತು ವರ್ಷ ನಿನ್ನ ಕತೆಗಳಿಗೆ ನನ್ನ ಹೀರೋಯಿನ್ ಮಾಡಿಬಿಟ್ಟೆ. ನಾನು ಹಾಗಿಲ್ಲ ಎಂದು ಹೇಳುವ ಅವಕಾಶವೂ ಇರದ ಹಾಗೆ ನೀನೋ ದೈಹಿಕವಾಗಿ ಹಲ್ಲೆ ಮಾಡಲಿಲ್ಲ. ಕಣ್ಣೆತ್ತಿ ಮುಖ ನೋಡಲೂ ಇಲ್ಲ. ಮನಸ್ಸನ್ನು ಮಾತ್ರ ಕಚಪಚ ತುಳಿದು ಬಿಟ್ಟೆ. ಕಾಲೇಜಿನಲ್ಲಿ ನಡೆದ ಯಾವ ಕಾರ್ಯಕ್ರಮಕ್ಕೂ ನಿಲ್ಲದ ಹಾಗೆ, ಹರಟೆ ಹೊಡೆಯದ ಹಾಗೆ, ಯಾವ ಯಾವುದೋ ಸಂಶಯದ ಕಣ್ಣಿಗೆ ಸದಾ ವಸ್ತುವಾಗಿರೋ ಹಾಗೆ ಮಾಡಿಟ್ಟೆ. ಏನಿತ್ತಯ್ಯ ನಿನ್ನ ಮನಸ್ಸಿನಲ್ಲಿ? ನಾನು ಕೊಳೆಯುವುದು ಬೇಕಿತ್ತಾ? ನಿನ್ನ ಮಗಳನ್ನೊಮ್ಮೆ ಒಂದೇ ಒಂದು ಸಲ ನನ್ನ ಜಾಗದಲ್ಲಿಟ್ಟು ನೋಡುಎಂದು ಕೇಳುತ್ತಾಳೆ.

`ನೋಯದವರೆತ್ತ ಬಲ್ಲರೋ…ಕತೆಯಲ್ಲಿ ತನ್ನ ಮನೆಯವರಿಗಾಗಿ ಜೀವನಪೂರ್ತಿ ದುಡಿದು ಅವರಿಂದಲೇ ಅನ್ಯಾಯಕ್ಕೊಳಗಾದಾಗ ಆತ್ಮಹತ್ಯೆಗೆ ಶರಣಾಗುವ ಅಂಜನಕ್ಕನ ಕತೆಯಿದೆ. ಅಂಜನಕ್ಕನ ಕತೆಯನ್ನು ನಿರೂಪಿಸುವವಳು ಅವಳ ನೆರೆಮನೆಯವಳಾದ ವಸುಧಾ. ಅವಳ ಬಾಲ್ಯಕಾಲದಲ್ಲಿ ಅಂಜನಕ್ಕ ಅವಳಿಗೆ ಸ್ಫೂರ್ತಿಯ ಕೇಂದ್ರವಾಗಿದ್ದವಳು. ಅಂಜನಕ್ಕನ ಕತೆಯನ್ನು ವಸುಧಾಳ ದೃಷ್ಟಿಕೋನದಿಂದ ನಿರೂಪಿಸಿರುವುದರಿಂದ ಅವಳ ಜೀವನದ ದುರಂತ ಓದುಗರಿಗೆ ಹೆಚ್ಚು ಪರಿಣಾಮಕಾರಿಯಾಗಿ ಮುಟ್ಟುವಂತಾಗಿದೆ.

ಮೇಲಿನ ಎರಡು ಕತೆಗಳನ್ನು ಓದಿದವರಿಗೆ ಲೇಖಕಿಯವರು ಸ್ತ್ರೀವಾದಿ ಧೋರಣೆಗೆ ಬದ್ಧರಾದವರೆಂದು ಅನಿಸಬಹುದು. ಆದರೆ ಸಂಕಲನದ ಇನ್ನೆರಡು ಪರಿಣಾಮಕಾರಿ ಕತೆಗಳಾದ `ಊರ ಒಳಗಣ ಬಯಲುಮತ್ತು `ದಣಿವು ಕಾಡುವ ಹೊತ್ತುಗಳು ಅವರು ಬದುಕಿಗೆ ಬದ್ಧರಾದ ಕತೆಗಾರರು ಎಂದು ತೋರಿಸುತ್ತವೆ. `ಊರ ಒಳಗಣ ಬಯಲುಕತೆಯಲ್ಲಿ ಅನ್ಯಮತದ ಯುವತಿಯನ್ನು ಮದುವೆಯಾಗಿದ್ದರಿಂದ ತನ್ನ ಕುಟುಂಬದವರಿಂದ ದೂರವಾಗಬೇಕಾಗಿ ಬಂದ ಸುಧಾಕರ ಎಂಬ ಯುವಕ ತನ್ನ ಮೊದಲ ಮಗು ಹುಟ್ಟಿದಾಗ ತನ್ನ ಊರಿನ ದೇವಿಗೆ ಪೂಜೆ ಸಲ್ಲಿಸಲು ಬರುತ್ತಾನೆ. ಪೂಜಾರಿಯಾದ ತನ್ನ ಸ್ನೇಹಿತ ನಾಗೇಶ ಗುನಗ ಹಾಗೂ ಹೊನ್ನಪ್ಪ ಗೌಡ ಎಂಬ ಹಿರಿಯ ತನ್ನೊಡನೆ ಅಂತಕರಣದಿಂದ ನಡೆದುಕೊಂಡ ರೀತಿಯಿಂದ `ಊರನ್ನೋದು ಬರೀ ಮನಿಯಲ್ಲಎಂಬುದನ್ನು ಕಂಡುಕೊಳ್ಳುವುದನ್ನು ನೋಡುತ್ತೇವೆ. ಈ ಕ್ರಿಶ್ಚಿಯನ್ನಳನ್ನು ಮದುವೆಯಾಗಿರುವ ಸುಧಾಕರ ಹಿಂದೊಮ್ಮೆ ಊರಿನ ಉಡಾಳರ ಜೊತೆ ಸೇರಿ ಕೋಮು ಗಲಭೆಯಲ್ಲಿ ಪಾಲ್ಗೊಂಡು ಬೇರೆ ಮತದ ಯುವತಿಯನ್ನು ಹಿಡಿದೆಳೆಯಲು ಪ್ರಯತ್ನಿಸಿ ಹಿಂದೆಗೆದು ಬಂದವನೆಂಬುದು ಅವನ ಇಲ್ಲಿನ ಸ್ವಗತದಲ್ಲಿ ತಿಳಿಯುತ್ತದೆ. ಹೀಗಾಗಿ ಇದು ಒಬ್ಬ ವ್ಯಕ್ತಿಯ ವ್ಯಕ್ತಿತ್ವದಲ್ಲಾದ ಬದಲಾವಣೆಯನ್ನು ದಾಖಲಿಸುವ ಕತೆಯಾಗಿಯೂ ನಮ್ಮನ್ನು ಮುಟ್ಟುತ್ತದೆ.

`ದಣಿವು ಕಾಡುವ ಹೊತ್ತುಎಂಬ ಕತೆಯಲ್ಲಿ ಒಂದು ಶಾಲೆಯ ಹೆಡ್ಮಾಸ್ತರನಾದ ಪಾವಸ್ಕರನನ್ನು, ಅವನ ನಡವಳಿಕೆಗಳಿಂದಾಗಿ, ಹಣ ಮತ್ತು ಅಧಿಕಾರಗಳಿಗೆ ಅಂಟಿಕೊಂಡಿರುವ ಮನುಷ್ಯನೆಂದು ಅವನ ಸುತ್ತಲಿನವರು ನಿರ್ಧರಿಸಿರುತ್ತಾರೆ. ಆದರೆ ಅವನ ಹೆಂಡತಿ ಅಕಾಲ ಮರಣಕ್ಕೆ ತುತ್ತಾದಾಗ ಇದೇ ಪಾವಸ್ಕರ್ ಮಾನಸಿಕವಾಗಿ ಜರ್ಜರಿತನಾಗುವುದನ್ನು ಕಾಣುತ್ತೇವೆ.

ಇಲ್ಲಿನ ಭಾಷೆಯೂ ಬಹಳ ಆಕರ್ಷಕವಾಗಿದೆ. `ಸ್ವಯಕತೆಯಲ್ಲಿ ಬರುವ ಈ ಮಾತುಗಳನ್ನು ನೋಡಬಹುದು: `ಒಣಗಿದ ಕೆರೆಯಲ್ಲುಳಿದ ತಗ್ಗು ನೀರಿನಂತೆ ಹೊಲಸುಗಟ್ಟಿದ ಸಂಬಂಧ ವಾಕರಿಕೆ ಅನಿಸುತ್ತಿತ್ತು‘, `ಇವನು ತಂದ ಮೀನಿಗೆ ನಾ ಮಸಾಲೆ ಮಾಡುವುದು ಎನ್ನುವಂತೆ ಸಲೀಸಾಗಿ ಬದುಕಿದೆವು‘, `ಆ ರೆಪ್ಪೆಗಳು ಇಬ್ಬನಿಗೆ ಸೋತ ಹೂವಿನ ಹಾಗೆ ಬಾಗಿರುತ್ತಿತ್ತು‘, `ನೋಯದವರೆತ್ತ ಬಲ್ಲರೋ…ದಲ್ಲಿ `ಮಗಳು ಅಂದರೆ ದಾಬಿನದ ಹಾಂಗೆ, ಬೇಕಾದಾಗ ಹಾಕ್ಕೊಂಡು ಬ್ಯಾಡಾದಾಗ ತೆಗೆದಿಡಬಹುದು ಅನ್ನೋ ಅಮ್ಮನ ಧೋರಣೆ ಮೂವತ್ತು ವರ್ಷಗಳಲ್ಲಿ ಮೊದಲ ಸರ್ತಿ ಉಪರಟೆ ಹೊಡದಿದ್ದರೆ…‘, `ಹದಿನೈದು ವರ್ಷಗಟ್ಟಲೆ ನೀನು ನನ್ನೋಳೆ ಎಂದು ನಂಬಿಸಿದವನ ಮದ್ವೆ ದಿಬ್ಬಣ ತನ್ನ ಮನಿಯಂಗಳ ಹಾದು ಹೋಗುವಾಗ ಬಚ್ಚಲಿಗೆ ಹೋಗಿ ಹಂಡೆ ನೀರನ್ನೆಲ್ಲ ದಪದಪಾ ಸುರಿದುಕೊಂಡು ಹೊಸ ಹುಟ್ಟು ಹುಟ್ಟಿ ಬಂದವಳಂತೆ ಇದ್ದುಬಿಟ್ಟ ಅಂಜನಕ್ಕ‘.

ಈ ಕಥಾಸಂಕಲನ ಒಬ್ಬ ಪ್ರತಿಭಾವಂತ ಹೊಸಕತೆಗಾರರನ್ನು ಪರಿಚಯಿಸುತ್ತದೆ ಎಂದು ಹೇಳಬಹುದು.

ಗಿರೀಶ್ ವಿ. ವಾಘ್

ಶೀರ್ಷಿಕೆ: ಊರ ಒಳಗಣ ಬಯಲು ಲೇಖಕರು: ಡಾ| ವಿನಯಾ ಪ್ರಕಾಶಕರು: ಛಂದ ಪುಸ್ತಕ ಪುಟಗಳು:82 ಬೆಲೆ:ರೂ.40/-

ಕೃಪೆ : ಕನ್ನಡ ಪ್ರಭ

ಶಿಕ್ಷಣದ ಮೂಲಕ ಬದಲಾವಣೆ

leriyonka

ಹೊಸ ಪೀಳಿಗೆಯಲ್ಲಿ ಕಾಲೇಜು, ವಿಶ್ವವಿದ್ಯಾಲಯಗಳ ಶಿಕ್ಷಕ ವೃತ್ತಿಗೆ ಹೊರತಾದ ವಿಭಿನ್ನ ಕ್ಷೇತ್ರಗಳಲ್ಲಿದ್ದು ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಂಡಿರುವ ಯುವಕರ ಬರವಣಿಗೆಗಳನ್ನು ಐದು ವರ್ಷಗಳಿಂದ ಪ್ರಕಟಿಸುತ್ತಿರುವ ಛಂದ ಪುಸ್ತಕ ಹೊರತಂದ ಕೃತಿ ಇದು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಹುದ್ದೆಯಲ್ಲಿದ್ದು ಸದ್ಯ ಪೂರ್ವ ಆಫ್ರಿಕಾದ ತಾಂಜಾನಿಯದಲ್ಲಿ ವಾಸವಿರುವ ಪ್ರಶಾಂತ್ ಬೀರೂರು ಚಿಕ್ಕಣ್ಣ ದೇವರು (ಪ್ರಶಾಂತ್ ಬೀಚಿ) ಅವರು ಈ ಕೃತಿಯನ್ನು ಅನುವಾದಿಸಿದ್ದಾರೆ. ಮೂಲ ಲೇಖಕ ಹೆನ್ರಿ ಆರ್. ಓಲೆ ಕುಲೆಟ್ ಕೀನ್ಯಾ ದೇಶದ ಜನಪ್ರಿಯ ಕಾದಂಬರಿಕಾರ. ಆಫ್ರಿಕಾದ ಬುಡಕಟ್ಟುಗಳಲ್ಲಿ ಒಂದಾದ ಮಾಸಯಿ ಬುಡಕಟ್ಟಿನ ಬಾಲಕನೊಬ್ಬ ಶಾಲಾ ಶಿಕ್ಷಣ ಪಡೆಯಲು ನಗರಕ್ಕೆ ಹೋಗುವ ಮತ್ತು ನಗರದಲ್ಲಿ ಕೆಲವು ವರ್ಷ ಪಡೆಯುವ ಅನುಭವಗಳನ್ನು ಈ ಕಾದಂಬರಿ ಒಳಗೊಂಡಿದೆ.

ಶಿಕ್ಷಣವೆಂಬ ಪ್ರಪಂಚಕ್ಕೆ ಪ್ರವೇಶವೇ ಇಲ್ಲದ ತಳವರ್ಗದ ನೂರಾರು ಸಮುದಾಯಗಳು ಇತ್ತೀಚಿನವರೆಗೂ ಭಾರತದಲ್ಲಿ ಇದ್ದ ಹಿನ್ನೆಲೆಯಲ್ಲಿ ಆಫ್ರಿಕದ ಬುಡಕಟ್ಟಿನ ಈ ಕಥಾನಕ ಕನ್ನಡ ಓದುಗರಿಗೆ ಪ್ರಸ್ತುತವೆನಿಸುತ್ತದೆ. ಹೆನ್ರಿ ಕುಲೆಟ್ ಅವರ ಮೊದಲ ಕಾದಂಬರಿ `ಈಸ್ ಇಟ್ ಪಾಸಿಬಲ್ದ (1971) ಅನುವಾದವಿದು. ಇದು ಯೂರೋಪಿನ ಆಧುನಿಕತೆಯ ಎದುರು ಆಫ್ರಿಕಾದ ಸ್ಥಳೀಯ ಸಮುದಾಯಗಳು ಶಿಕ್ಷಣದ ಮೂಲಕ ಮುಖಾಮುಖಿ ಆದಾಗ ಉಂಟಾಗುವ ಸಮಸ್ತ ತಲ್ಲಣದ ಚಿತ್ರಣವೆಂದು ಬೆನ್ನುಡಿಯಲ್ಲಿ ವಿಮರ್ಶಕ ರಹಮತ್ ತರೀಕೆರೆ ಬಣ್ಣಿಸಿದ್ದಾರೆ. ಶಿಕ್ಷಣದ ಮೂಲಕ ಹೊಸ ಪ್ರಪಂಚವೊಂದನ್ನು ಕಂಡುಕೊಳ್ಳುವ ಬೆರಗು ಕ್ರಮೇಣ ಜಾಗೃತಿಯನ್ನು ಮೂಡಿಸಿ ಸ್ವತಂತ್ರ ಅಸ್ತಿತ್ವಕ್ಕಾಗಿ ತಹತಹಿಸುವ ಸ್ಥಿತಿಯನ್ನು ಮುಟ್ಟಿಸುವುದರ ಪರಿವರ್ತನೆಯ ಚಿತ್ರಣವೂ ಇಲ್ಲಿದೆ.

ದನ ಕರುಗಳ ಪೋಷಣೆಯ ಮೂಲಕವೇ ಬದುಕನ್ನು ರೂಪಿಸಿಕೊಂಡು ತಮ್ಮಷ್ಟಕ್ಕೆ ಸಂತೃಪ್ತಿಯಿಂದಿದ್ದ ಬುಡಕಟ್ಟು ಸಮುದಾಯಕ್ಕೆ ಆಧುನಿಕ ಶಿಕ್ಷಣ ಕೊಡುವ ಮೂಲಕ ಆಧುನಿಕತೆಯನ್ನು ಪರಿಚಯಿಸುವ ಪ್ರಯತ್ನ ಅವರಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆಯನ್ನೂ, ತಮ್ಮ ಮೇಲೆ ಹೇರಲಾಗಿರುವ ಹೊರಗಿನವರ ಆಳ್ವಿಕೆಯನ್ನು ಪ್ರತಿಭಟಿಸುವ ಧೈರ್ಯವನ್ನೂ ನೀಡುವುದು ಭಾರತದ ಮಟ್ಟಿಗೂ ನಿಜವಾದ ಸಂಗತಿ. ಲೇರಿಯೋಂಕನೆಂಬ ಮಾಸುಯಿ ಬುಡಕಟ್ಟಿನ ಹುಡುಗನ ಆತ್ಮಕತೆಯಂತೆ ಸಾಗುವ ಈ ಬದುಕಿನ ಪಯಣ ಕೀನ್ಯಾ, ನೈರೋಬಿಯಂಥ ನಗರಗಳವರೆಗೆ, ಬಹುಕಾಲದಿಂದ ಪರಕೀಯರ ಆಡಳಿತದಲ್ಲಿದ್ದವರು ತಮ್ಮನ್ನು ತಾವೇ ನೋಡಿಕೊಳ್ಳುವ ಸಾಮರ್ಥ್ಯ ಪಡೆದಿರುವುದಾಗಿ ಹೇಳಿಕೊಳ್ಳುವವರೆಗೆ ಮುಂದುವರೆದಿದೆ. ಕಾಡಿನ ಹುಡುಗನ ಓದಿನ ಹಾದಿಯ ಮೂಲಕ ಒಂದು ಪ್ರಾದೇಶಿಕ ಸಮುದಾಯ ಪರಕೀಯರ ಆಡಳಿತ ಎದುರು ಸ್ವಾತಂತ್ರ್ಯಕ್ಕಾಗಿ ಎಚ್ಚೆತ್ತುಕೊಳ್ಳುವ ಪರಿಯನ್ನೂ ಇಲ್ಲಿ ಗಮನಿಸಬಹುದಾಗಿದೆ.

ರಸ್ತೆ ಸೌಲಭ್ಯ, ವಾಹನ ಸಂಚಾರಗಳ ಅರಿವು ಇರುವವರಿಗೆ ಇಡೀ ದಿನ ಮತ್ತು ರಾತ್ರಿಯೆಲ್ಲ ನಡೆಯುತ್ತಲೇ ಹಿಂದೆಂದೂ ನೋಡದ ಊರನ್ನು ಪತ್ತೆ ಮಾಡುವ ಲೇರಿಯೋಂಕನ ಸಾಹಸ ನಮ್ಮ ಜಾನಪದ ಕಥೆಗಳ ಸಾಹಸಿ ರಾಜಕುಮಾರರ ಕಥೆಗಳನ್ನು ನೆನಪಿಸಬಲ್ಲದು. ಒಂದು ಕೈಯಲ್ಲಿ ಭರ್ಜಿಯನ್ನೂ ಇನ್ನೊಂದು ಕೈಯಲ್ಲಿ ಪುಸ್ತಕವನ್ನೂ ಹಿಡಿದುಕೊಂಡು ಸಮತೋಲನ ಕಾಯ್ದುಕೊಳ್ಳುವುದು ಸಾಧ್ಯ ಎಂಬುದು ಲೇರಿಯೋಂಕ ಮತ್ತು ಲಿವಿಂಗ್ಸ್ಟೋನ್ ಪಾತ್ರಗಳ ಮೂಲಕ ಪ್ರತಿಪಾದಿಸಲಾಗಿದ್ದರೂ ಈ ಕಥಾನಕ ಅದಕ್ಕಿಂತಲೂ ಮುಂದೆ ಸಾಗಿ ತಳ ಸಮುದಾಯ ಶಿಕ್ಷಣದ ಮೂಲಕ ಬದಲಾವಣೆಗೆ ಸ್ಪಂದಿಸಲು ಸಿದ್ಧವಾಗುವ ಪರಿಯನ್ನು ಬಿಚ್ಚಿಡುತ್ತದೆ.

ವಿಷದ ಹಾವಿನಿಂದ ಕಚ್ಚಿಸಿಕೊಂಡು ಗಿಡಮೂಲಿಕೆ ಮದ್ದಿನಿಂದ ಗುಣವಾಗುವ, ಹೆಬ್ಬಾವಿನ ಹೊಟ್ಟೆ ಸೇರುವ ಸ್ಥಿತಿಯಲ್ಲಿದ್ದ ವ್ಯಕ್ತಿ ಬಚಾವಾಗಿ ಆಸ್ಪತ್ರೆ ಸೇರಿಕೊಳ್ಳುವಂತಹ ರೋಚಕ ಸನ್ನಿವೇಶಗಳೂ ಇಲ್ಲಿವೆ. ಮಾಸುಯಿ ಬುಡಕಟ್ಟು ಮಾತ್ರವಲ್ಲದೆ ಆಫ್ರಿಕದ ಮೂಲನಿವಾಸಿಗಳ ಆಚರಣೆ, ನಂಬಿಕೆ, ನಡವಳಿಕೆ, ಸಂಪ್ರದಾಯ, ಕುಟುಂಬ ವ್ಯವಸ್ಥೆ, ಜೀವನ ವಿಧಾನದ ಬಗೆಗೂ ಇಲ್ಲಿ ವಿವರಗಳಿವೆ. ಆಫ್ರಿಕಾದ ಕಾಡುಗಳಲ್ಲಿ ನಡೆದಿರುವ ಈ ಕಥಾನಕ ಅನೇಕ ವಿವರಗಳಲ್ಲಿ ಮಲೆನಾಡಿನ ಚಿತ್ರಗಳನ್ನೂ ಕಟ್ಟಿಕೊಡುತ್ತದೆ.

ಲಕ್ಷ್ಮಣ ಕೊಡಸೆ

ಶೀರ್ಷಿಕೆ: ಲೇರಿಯೋಂಕ ಲೇಖಕರು: ಮೂಲ: ಕೀನ್ಯಾ ಕಾದಂಬರಿಕಾರ ಹೆನ್ರಿ ಆರ್. ಓಲೆ ಕುಲೆಟ್ ಕನ್ನಡಕ್ಕೆ: ಪ್ರಶಾಂತ್ ಬೀಚಿ ಪ್ರಕಾಶಕರು: ಛಂದ ಪುಸ್ತಕ ಪುಟಗಳು:250 ಬೆಲೆ:ರೂ.100/-

ಕೃಪೆ : ಪ್ರಜಾವಾಣಿ