ಹೇಳತೇನ ಕೇಳ…ಕನ್ನಡಕ್ಕೆ ಮತ್ತೊಂದು ಜ್ಞಾನಪೀಠ ಪ್ರಶಸ್ತಿ

ಕನ್ನಡದ ಹಿರಿಯ ಕವಿ ಚಂದ್ರಶೇಖರ ಕಂಬಾರರಿಗೀಗ ಜ್ಞಾನಪೀಠ ಪ್ರಶಸ್ತಿಯ ಸಂಭ್ರಮ. ಹದಿಮೂರು ವರ್ಷಗಳ ಅಂತರದ ನಂತರ ಕಂಬಾರರ ಮೂಲಕ ಕನ್ನಡಕ್ಕೆ ಮತ್ತೊಂದು ಜ್ಞಾನಪೀಠ ದೊರೆಯುವುದರೊಂದಿಗೆ, ಕನ್ನಡದ `ಜ್ಞಾನಪೀಠ ಸಪ್ತರ್ಷಿ ಮಂಡಲ`ದ ಪುನರ‌್ರಚನೆಯಾಗಿದ್ದು, ಆ ಸಂಖ್ಯೆ ಎಂಟಕ್ಕೇರಿದೆ. ಕನ್ನಡದ ಜ್ಞಾನಪೀಠಿಗಳದೀಗ `ಅಷ್ಟ ದಿಕ್ಪಾಲಕ` ಪಡೆ.

ಏಳು ಲಕ್ಷ ರೂಪಾಯಿ ನಗದು, ಸರಸ್ವತಿ ದೇವಿಯ ಕಂಚಿನ ಪ್ರತಿಮೆ ಹಾಗೂ ಬಿನ್ನವತ್ತಳೆ ಹೊಂದಿರುವ ಜ್ಞಾನಪೀಠ ಪ್ರಶಸ್ತಿ ಭಾರತೀಯ ಸಾಹಿತ್ಯಕ್ಷೇತ್ರದಲ್ಲಿ ಅತ್ಯುನ್ನತ ಗೌರವ. ಈ ಮೇರುಮನ್ನಣೆಗೆ ಕಂಬಾರರು ಪಾತ್ರ. ಅನೇಕ ವರ್ಷಗಳಿಂದ ಜ್ಞಾನಪೀಠ ಕಂಬಾರರತ್ತ ಮುಖ ಮಾಡಿಯೇ ಇತ್ತಾದರೂ, ಮುಹೂರ್ತ ಕೂಡಿಬಂದಿರುವುದು ಈಗ. ಜ್ಞಾನಪೀಠದ ಪ್ರಭೆಯಲ್ಲಿ ಮಿನುಗುತ್ತಿರುವ ಕಂಬಾರರ ಬಗ್ಗೆ ಮಾತನಾಡುವಾಗ ಅವರ ದಶಮುಖಗಳು ಕಣ್ಮುಂದೆ ಸುಳಿಯುತ್ತವೆ. ನಾಟಕಕಾರ, ಕಾದಂಬರಿಕಾರ, ಕನ್ನಡ ವಿಶ್ವವಿದ್ಯಾಲಯದ ಬುನಾದಿ ಗಟ್ಟಿಗೊಳಿಸಿದ ಆಡಳಿತಗಾರ, ಸಂಶೋಧಕ- ಹೀಗೆ ಕಂಬಾರರದು ಬಹುರೂಪ. ಆದರೆ, ಇವೆಲ್ಲವುಗಳ ಮುನ್ನೆಲೆಯಲ್ಲಿ ನಿಲ್ಲುವುದು ಅವರ ಕಾವ್ಯಪ್ರೀತಿ. ಕಾವ್ಯವೆನ್ನುವುದು ಅವರ ಪಾಲಿಗೆ ಆತ್ಮದ ಕಸುಬುದಾರಿಕೆ.

`ಕವಿ ಮತ್ತು ಕವಿತೆ ಮುಖಾಮುಖಿಯಾಗಬೇಕು. ಕಾವ್ಯ ರಚನೆ ಅಂದ್ರೆ ಅದು ಏಕಾಂತದ ಸಂವಾದ, ಗುದ್ದಾಟ. ಇದರ ಅರಿವು ಕವಿಗೆ ಇರಬೇಕು. ನನ್ನ ಎಲ್ಲವನ್ನೂ ಹಿಂಡಿ ಹೊರಬಂದಿದೆ ಎನ್ನಿಸಬೇಕು ಕವಿತೆ. ಅದು, ಆತ್ಮ ಹಿಂಡಿ ಬರಬೇಕು. ನೀರು ಕಡೆದರೆ ಬೆಣ್ಣೆ ಬರುತ್ತಲ್ಲ, ಹಾಗೆ. ಅದು ಹುಡುಗಿಯೊಂದಿಗಿನ ಪ್ರೀತಿಯಂತೆ ತೀರಾ ಖಾಸಗಿಯಾದುದು. ದೇವರ ಮುಂದೆಯೂ ಹೇಳಿಕೊಳ್ಳಲಾಗದ ಪ್ರೀತಿಯಂತಹದ್ದು`. ಇದು ಕಾವ್ಯದ ಬಗ್ಗೆ ಕಂಬಾರರ ನಿಲುವು.

ಶೀರ್ಷಿಕೆ: ಸಿಂಗಾರೆವ್ವ ಮತ್ತು ಅರಮನೆ ಲೇಖಕರು: ಚಂದ್ರಶೇಖರ ಕಂಬಾರ ಪ್ರಕಾಶಕರು:ಪ್ರಿಂಟರ್ಸ್ ಪ್ರಕಾಶನ ಪುಟ:೨೦೨

ಈವರೆಗಿನ ಹೇಳತೇನ ಕೇಳ…
ಕಾವ್ಯ: ಮುಗುಳು, ಹೇಳತೇನ ಕೇಳ, ತಕರಾರಿನವರು, ಸಾವಿರದ ನೆರಳು, ಚಕೋರಿ, ಆಯ್ದ ಕವನಗಳು, ಬೆಳ್ಳಿಮೀನು, ಈವರೆಗಿನ ಹೇಳತೇನ ಕೇಳ (ಸಮಗ್ರ-1994), ಅಕ್ಕಕ್ಕು ಹಾಡುಗಳೇ, ಎಲ್ಲಿದೆ ಶಿವಾಪುರ?
ನಾಟಕ: ಬೆಂಬತ್ತಿದ ಕಣ್ಣು, ನಾರ್ಸಿಸಸ್, ಋಷ್ಯಶೃಂಗ, ಜೋಕುಮಾರಸ್ವಾಮಿ, ಚಾಳೇಶ, ಸಂಗ್ಯಾಬಾಳ್ಯಾ ಅನಬೇಕೋ ನಾಡೊಳಗ, ಕಿಟ್ಟಿಯ ಕಥೆ, ಖರೋಖರ, ಮತಾಂತರ, ಹರಕೆಯ ಕುರಿ, ಸಾಂಬಶಿವ ಪ್ರಹಸನ, ಸಿರಿ ಸಂಪಿಗೆ, ಹುಲಿಯ ನೆರಳು, ಬೆಪ್ಪು ತಕ್ಕಡಿ ಬೋಳೇಶಂಕರ, ಪುಷ್ಪರಾಶಿ, ತುಕ್ರನ ಕನಸು, ಮಹಾಮಾಯಿ, ಶಿವರಾತ್ರಿ.
ಕಾದಂಬರಿ: ಅಣ್ಣತಂಗಿ, ಕರಿಮಾಯಿ, ಜಿ.ಕೆ.ಮಾಸ್ತರ ಪ್ರಣಯ ಪ್ರಸಂಗ, ಸಿಂಗಾರೆವ್ವ ಮತ್ತು ಅರಮನೆ, ಶಿಖರ ಸೂರ್ಯ.

ಸಂಶೋಧನೆ: ಸಂಗ್ಯಾ ಬಾಳ್ಯಾ, ಬಣ್ಣೀಸಿ ಹಾಡವ್ವ ನನ್ನ ಬಳಗ, ಬಯಲಾಟ, ಮಾತಾಡೋ ಲಿಂಗವೇ, ನಮ್ಮ ಜಾನಪದ, ಬಂದಿದೆ ನನ್ನ ಜಡೆಯೊಳಗೆ, ಕನ್ನಡ ನಾಟಕ ಸಂಪುಟ, ಕನ್ನಡ ಜಾನಪದ ವಿಶ್ವಕೋಶ, ಲಕ್ಷಾಪತಿ ರಾಜನ ಕತೆ, ಬೇಡರ ಹುಡುಗ ಮತ್ತು ಗಿಳಿ, ಕಾಸಿಗೊಂದು ಸೇರು, ನೆಲದ ಮರೆಯ ನಿದಾನ, ಬೃಹದ್ದೇಶಿ ಚಿಂತನೆ.

ಪಿಎಚ್.ಡಿ ಮಹಾಪ್ರಬಂಧ: ಉತ್ತರ ಕರ್ನಾಟಕದ ಜಾನಪದ ರಂಗಭೂಮಿ.

ಪ್ರಶಸ್ತಿ-ಪುರಸ್ಕಾರ: ರಾಜ್ಯ ನಾಟಕ ಅಕಾಡೆಮಿ ಬಹುಮಾನಗಳು, ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನಗಳು, ಕೇರಳದ ಆಶಾನ್ ಪ್ರಶಸ್ತಿ, ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇತ್ಯಾದಿ.

ಕಂಬಾರರ ಆಸೆ : ಒಂದರಿಂದ ಹತ್ತನೆಯ ತರಗತಿಯವರೆಗೆ ಸರ್ಕಾರವೇ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕು. ಅಲ್ಲದೆ, ಅಂಗನವಾಡಿಯಿಂದ ಸ್ನಾತಕೋತ್ತರ ವಿಜ್ಞಾನ, ಕಲೆ ಪದವಿಗಳನ್ನು ಕನ್ನಡದಲ್ಲೇ ಕಲಿಸುವ ಮಹಾವಿದ್ಯಾಲಯವೊಂದು ಕನ್ನಡ ನೆಲದಲ್ಲಿ ತಲೆಯೆತ್ತಬೇಕು.

 

ಕೃಪೆ: ಪ್ರಜಾವಾಣಿ

ಸಮಗ್ರ ನಾಟಕ

ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಏಕಕಾಲಕ್ಕೆ ನಾಟಕ ರಚಿಸುವ ಕನ್ನಡದ ಹೆಸರಾಂತ ನಟ-ನಾಟಕಕಾರ ಗಿರೀಶ ಕಾರ್ನಾಡರ ಸಮಗ್ರ ನಾಟಕಗಳು ಇಂಗ್ಲೀಷ್ನಲ್ಲಿ ಆಕ್ಸ್ ಫರ್ಡ್ ಪ್ರೆಸ್ ನವರು ಪ್ರಕಟಿಸಿದ ನಂತರ ಇದೀಗ ಕನ್ನಡದಲ್ಲೂ ಪ್ರಕಟವಾಗಿದೆ.

ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕಾರ್ನಾಡರು ಇದುವರೆಗೆ ಬರೆದಿರುವ ನಾಟಕಗಳ ಸಂಖ್ಯೆ ಕೇವಲ 11 ಎಂಬುದು ಕೆಲವರಿಗೆ ಅಚ್ಚರಿ ಸಂಗತಿಯಾಗಬಹುದು. ಅವರು ರಚಿಸಿದ 3-4 ನಾಟಕಗಳನ್ನು ಹೊರತುಪಡಿಸಿ ಇತರ ಎಲ್ಲಾ ನಾಟಕಗಳು ಕನ್ನಡ, ಇಂಗ್ಲೀಷ್ ಹಾಗೂ ನಾಲ್ಕಾರು ಭಾರತೀಯ ಭಾಷೆಗಳಲ್ಲಿ ಹಲವು ಪ್ರಯೋಗ ಕಂಡವಷ್ಟೇ ಅಲ್ಲ. ಸಾಕಷ್ಟು ಚರ್ಚೆಗೂ ಒಳಗಾಗಿದ್ದು ಕಾರ್ನಾಡರೂ ನೂರಾರು ನಾಟಕಗಳನ್ನು ರಚಿಸಿರಬಹುದೇನೋ ಎಂಬ ಭಾವನೆ ಮೂಡಿಸಿದ್ದವು.

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವಿಶೇಷ ಯೋಜನೆಯಡಿ ಪ್ರಕಟಣೆಗೆ ಮುಂಚಿತವಾಗಿಯೇ 2,500 ಪುಸ್ತಕಗಳನ್ನು ಖರೀದಿಸಿದೆ. ಪ್ರಯೋಗ ಹಾಗೂ ಪ್ರಕಟಣೆಯ ವಿಷಯದಲ್ಲಿ ಕಾರ್ನಾಡ, ಕಂಬಾರರಂತಹ ಅದೃಷ್ಟವಂತರು ಕನ್ನಡದಲ್ಲಿ ಕಡಿಮೆ.

ಶೀರ್ಷಿಕೆ : ಸಮಗ್ರ ನಾಟಕ ಲೇಖಕರು : ಗಿರೀಶ ಕಾರ್ನಾಡ ಪ್ರಕಾಶಕರು : ಮನೋಹರ ಗ್ರಂಥಮಾಲೆ ಪುಟಗಳು :868 ಬೆಲೆ:ರೂ.500/-

ಕೃಪೆ : ಸುಧಾ

ಸಂಗೀತ ನಾಟಕ ಅದಡಾಮಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ಸಾಹಿತ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಯೇ ಮೊದಲಾದ ಪ್ರಶಸ್ತಿಗಳನ್ನು ತಮ್ಮ ಸಾಹಿತ್ಯ ಸಾಧನೆಗಾಗಿ ಪಡೆದಿರುವ ಗಿರೀಶ ಕಾರ್ನಾಡರು ತಮ್ಮ ಸಿನೆಮಾಗಳಿಗಾಗಿ ಇನ್ನೂ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ತುಘಲಕ್, ನಾಗಮಂಡಲ, ಒಡಕಲು ಬಿಂಬ, ಯಯಾತಿ, ಅಂಜು ಮಲ್ಲಿಗೆ, ಮಾ ನಿಷಾದ, ಟಿಪ್ಪುವಿನ ಕನಸುಗಳು, ತಲೆ ದಂಡ ಮುಂತಾದವು ಅವರ ನಾಟಕಗಳು.

ಕೃಪೆ : http://en.wikipedia.org/wiki/Girish_Karnad