ಎಲ್ಲವನ್ನು ಕೊಟ್ಟಿರುವೆ ಏನ ಬೇಡಲಿ! ಜಗವನೆನಗೆ ಬಿಟ್ಟಿರುವೆ, ಏಕೆ ಕಾಡಲಿ!

ದಿನ ನಿತ್ಯದ ಕಿಟಿಕಿಟಿ ಶ್ರಮದ ನಂತರವೂ ಜೀವನ ಪ್ರೀತಿಯನ್ನು ಮೈ ಮನದಲ್ಲಿ ತುಂಬಿಕೊಳಬಯಸುವವರಿಗೆ ತಮ್ಮ ಕವನಗಳ ಮೂಲಕ ಎಲ್ಲವನ್ನೂ ಕೊಟ್ಟ ಕೆ.ಎಸ್.ನ. ಅವರನ್ನು ಮತ್ತೆ ಏನನ್ನೂ ಬೇಡಬೇಕಾಗಿಲ್ಲ.

ನನ್ನವಳು ನನ್ನೆದೆಯ ಹೊನ್ನಾಡನಾಳುವಳು ಬೆಳಗುಗೆನ್ನೆಯ ಚೆನ್ನೆ ನನ್ನ ಮಡದಿ!

ಶಾನುಭೋಗರ ಮಗಳು ರತ್ನದಂತಹ ಹುಡುಗಿ; ಗಂಡು ಸಿಕ್ಕುವುದೊಂದು ಕಷ್ಟವಲ್ಲ; ಸರಿಯಾಗಿ ಗಂಡೊದಗಿ ಹೆಣ್ಣು ಸುಖವಾಗಿರಲಿ ತಡವಾದರೇನಂತೆ?- ನಷ್ಟವಿಲ್ಲ

ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು ಚೆಂದ ನಿನಗಾವುದೆಂದು –   ನಮ್ಮೂರು ಹೊನ್ನೂರೋ, ನಿಮ್ಮೂರು ನವಿಲೂರೋ

ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು ಒಳಗೆ ಬರಲಪ್ಪಣೆಯೆ ದೊರೆಯೇ

ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು, ನಿದ್ದೆ ಬರುವಳು ಹೊದ್ದು ಮಲಗು, ಮಗುವೇ ಸುತ್ತಿ ಹೊರಳಾಡದಿರು, ಮತ್ತೆ ಹಟ ಹೂಡದಿರು, ನಿದ್ದೆ ಬರುವಳು ಕದ್ದು ಮಲಗು, ಮಗುವೆ.

ಕೇತಕಿಯ ಬನಗಳಲಿ ಸಂಚರಿಸದಿರು ಚೆಲುವೆ, ಸರ್ಪಮಂದಿರವಂತೆ ತಂಪಿನೊಡಲು

 ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ ಅತ್ತಿತ್ತ ಸುಳಿದವರು ನೀವಲ್ಲವೇ?  ಹತ್ತಿರದ ಹೆಣ್ಣೆಂದು ಮತ್ತೆ ಮುತ್ತೂರಿನಲಿ ಒಪ್ಪಿ ಕೈ ಹಿಡಿದವರು ನೀವಲ್ಲವೇ?

. . ..                                                                                                                                                                                            ತೊತ್ತೆಂದು ಜರೆದವರು, ಮುತ್ತೆಂದು ಕರೆದವರು ಎತ್ತರದ ಮನೆಯವರು ನೀವಲ್ಲವೆ                                                                                            .

. .  .                                                                                                                                                                                               ಬಡತನವೋ, ಸಿರಿತನವೊ, ಯಾರಿರಲಿ, ಎಲ್ಲಿರಲಿ, ದೊರೆಯಾಗಿ ಮೆರೆದವರು ನೀವಲ್ಲವೇ? ಗಂಡನಿಗೆ ಒಪ್ಪಾಗಿ ಕಂದನಿಗೆ ದಿಕ್ಕಾಗಿ, ಪಯಣದಲಿ ಜೊತೆಯಾಗಿ ನಾನಿಲ್ಲವೇ?

 ಸಂಬಳದ ಸಂಜೆ ಒಳಜೇಬು ಬೆಳಕಾಗಿರಲು ಮುಗುಳು ನಗೆ ಸೂಸಬೇಕು  ತಂದ ಹಣ ತುಂಡಾಗಿ ತಲೆನೋವು ಬಂದಿರಲು ಮಂದಲಗೆ ಹಾಕಬೇಕು.

`ಹಿಂದಿನ ಸಾಲಿನ ಹುಡುಗರು’ ಎಂದರೆ ನಮಗೇನೇನೂ ಭಯವಿಲ್ಲ! ನಮ್ಮಿಂದಾಗದು ಶಾಲೆಗೆ ತೊಂದರೆ; ನಮಗೆಂದೆಂದೂ ಜಯವಿಲ್ಲ! 

. . .                                                                                                                                                                                             ಪುಸ್ತಕ ಓದದೆ ಪ್ರೀತಿಯನರಿತೆವು; ಗೆಲ್ಲದೆ ಹೆಮ್ಮೆಯ ಗಳಿಸಿದೆವು; ನಾವೀ ಶಾಲೆಯನೆಂದೂ ಬಿಡೆವು; ನೆಮ್ಮದಿಯಾಗಿಯೆ ಉಳಿಯುವೆವು!

 ಮಲ್ಲಿಗೆ ಕವಿಯ ಈ ಎಲ್ಲಾ ಕವಿತೆಗಳನ್ನು ಓದಿ ಹಗುರಾಗದವರು ಯಾರು?

ಸುವರ್ಣ ಕರ್ನಾಟಕ ವರ್ಷದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೈಗೆತ್ತಿಕೊಂಡ ಅನೇಕ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದು ಕನ್ನಡ ಪ್ರಮುಖ ಲೇಖಕರ ಸಮಗ್ರ ವಾಙ್ಮಯವನ್ನು ಮರುಮುದ್ರಣದ ಮೂಲಕ ಕನ್ನಡ ಓದುಗರಿಗೆ ಸುಲಭ ಬೆಲೆಯಲ್ಲಿ ದೊರಕಿಸುವುದು. ಈ ಯೋಜನೆಯಡಿ ಈಗ ಡಾ.ಕೆ.ಎಸ್.ನರಸಿಂಹಸ್ವಾಮಿಯವರ ಸಮಗ್ರ ವಾಙ್ಮಯ ಆರು ಸಂಪುಟಗಳಲ್ಲಿ ಪ್ರಕಟಗೊಳ್ಳುತಿದೆ.

ಆಧುನಿಕ ಕನ್ನಡದ ಅತಿಶ್ರೇಷ್ಟ ಕವಿಗಳಲ್ಲಿ ಕೆ.ಎಸ್.ನ. ಒಬ್ಬರು. ೧೯೪೨ರಲ್ಲಿ ಪ್ರಕಟವಾದ ಅವರ `ಮೈಸೂರ ಮಲ್ಲಿಗೆ’ಯಿಂದ ಅಪಾರ ಜನಪ್ರಿಯತೆಯನ್ನು ಗಳಿಸಿದ ಕೆ.ಎಸ್.ನ. ತಮ್ಮ ಕೊನೆಯ ದಿನಗಳವರೆಗೂ ಕಾವ್ಯಕ್ಷೇತ್ರದಲ್ಲಿ ಕ್ರಿಯಾಶೀಲರಾಗಿಯೇ ಇದ್ದು ಒಟ್ಟು ಹದಿನಾರು ಕವನ ಸಂಕಲನಗಳನ್ನು ರಚಿಸಿದರು. ಕಾವ್ಯ ಸೃಷ್ಟಿಯಷ್ಟೇ ಅಲ್ಲದೆ ಅನುವಾದ, ವಿಮರ್ಶೆ, ಸಣ್ಣಕಥೆ ಇತ್ಯಾದಿ ಪ್ರಬೇಧಗಳಲ್ಲಿಯೂ ಸಾಕಷ್ಟು ಕೆಲಸ ಮಾಡಿದ ಕೆ.ಎಸ್.ನ. ಅವರ ಒಟ್ಟು ಕೃತಿಗಳ ಸಂಖ್ಯೆ ಮೂವತ್ತೈದು.

ಈ ಯೋಜನೆಯ ಮೊದಲೆರಡು ಸಂಪುಟಗಳೂ ಅವರ ಸಮಗ್ರ ಕಾವ್ಯಗಳನ್ನೊಳಗೊಂಡಿದ್ದರೆ, ಉಳಿದ ನಾಲ್ಕರಲ್ಲಿ ಅವರ ಇನ್ನಿತರ ಸಾಹಿತ್ಯ ರಚನೆಗಳು ಸಂಗ್ರಹಗೊಂಡಿವೆ.

ಶೀರ್ಷಿಕೆ: ಕೆ.ಎಸ್.ನರಸಿಂಹಸ್ವಾಮಿ ಸಮಗ್ರ ವಾಙ್ಮಯ ಸಂಪುಟ ಒಂದು: ಕಾವ್ಯ ೧ ಸಂಪಾದಕರು: ಡಾ. ಸಿ.ಎನ್.ರಾಮಚಂದ್ರನ್ ಪ್ರಕಾಶಕರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪುಟಗಳು:484 ಬೆಲೆ:ರೂ.110/-

ಕಾರ್ನಾಡರ ಕುರಿತ ಎತ್ತರದ ಚರ್ಚೆ

girish-karnaad

ಸ್ವಾತಂತ್ರ್ಯೋತ್ತರ ಭಾರತದ ಮುಖ್ಯ ನಾಟಕಕಾರರಲ್ಲಿ ಗಿರೀಶ್ ಕಾರ್ನಾಡರು ಪ್ರಮುಖರು. ಅವರ ತುಘಲಕ್ ಮತ್ತು ನಾಗಮಂಡಲ ನಾಟಕಗಳು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರು ಮಾಡಿವೆ. ಇಷ್ಟಿದ್ದರೂ ಕನ್ನಡ ವಿಮರ್ಶೆ ಎಲ್ಲೋ ಒಂದು ಕಡೆ ಅವರನ್ನು ನಿರ್ಲಕ್ಷಿಸಿಕೊಂಡು ಬಂದಿದೆ ಎಂಬ ಭಾವ ನನ್ನಂಥವರಲ್ಲಿ ನಿಧಾನವಾಗಿ ಮೂಡುತ್ತಿವೆ. ಇದೀಗ 70 ದಾಟಿರುವ (ಜನನ: ಮೇ 19, 1938) ಅವರ ಎಲ್ಲಾ ಕೃತಿಗಳನ್ನು ಸಮಗ್ರವಾಗಿ ವಿಶ್ಲೇಷಿಸುವ, ಪರಿಚಯಿಸುವ (ಕನಿಷ್ಠ ಅಭಿನಂದನಾ ಗ್ರಂಥ ರೂಪದಲ್ಲಾದರೂ) ಒಂದಾದರೂ ಮಹತ್ವದ ಗ್ರಂಥವೊಂದನ್ನು ನಮಗೆ ಇದುವರೆಗೆ ಹೊರತರಲಾಗಲಿಲ್ಲ. ಸಾಮಾನ್ಯ ಬರಹಗಾರರ ಬಗೆಗೆ ಬೃಹತ್ ಗ್ರಂಥಗಳು ಪ್ರಕಟವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಇಂಥ ಗೈರು ಹಾಜರಿಯು ನಮ್ಮ ಸಾಹಿತ್ಯದ ವಾತಾವರಣ ಅಷ್ಟೇನೂ ಆರೋಗ್ಯಕರವಾಗಿಲ್ಲ ಎಂಬುದನ್ನು ಸೂಚಿಸುತ್ತದೆ.

ಇಂಥ ನಿರಾಶಾದಾಯಕ ವಿಮರ್ಶನ ಸಂದರ್ಭದಲ್ಲಿ ಡಾ.ಸಿ.ಎನ್.ರಾಮಚಂದ್ರನ್ ಅವರು ಕಾರ್ನಾಡರ ಬಗೆಗೆ ಪ್ರಸ್ತುತ ಪುಸ್ತಕವನ್ನು ಪ್ರಕಟಿಸಿ, ಕೊರತೆಯೊಂದನ್ನು ನೀಗಿಸಲು ಪ್ರಯತ್ನಿಸಿದ್ದಾರೆ.

ಈ ಕೃತಿಯ ಏಳು ಅಧ್ಯಾಯಗಳಲ್ಲಿ ಪ್ರಮುಖವಾಗಿ ಮೂರು ವಿಷಯಗಳ ಕುರಿತು ವಿವರಗಳಿವೆ. ಮೊದಲನೆಯ ಮುಖ್ಯ ವಿಷಯವೆಂದರೆ, ಆರಂಭದಲ್ಲಿ ನೀಡಲಾದ ಕಾರ್ನಾಡರ ಜೀವನ ವಿವರಗಳು. ಎರಡನೆಯದು ಇತಿಹಾಸ ಚರಿತ್ರೆಗಳ ಬಗೆಗಣ ನಮ್ಮ ಅಪಕಲ್ಪನೆಗಳ ಕುರಿತಾದ ಚರ್ಚೆ ಮತ್ತು ಕೊನೆಯದಾಗಿ ಕಾರ್ನಾಡರು ಬರೆದ ತುಘಲಕ್, ತಲೆದಂಡ ಹಾಗೂ ಟಿಪ್ಪು ಸುಲ್ತಾನ್ ಕಂಡ ಕನಸು ಈ ಮೂರು ಚಾರಿತ್ರಿಕ ನಾಟಕಗಳ ವಿಶ್ಲೇಷಣೆ.

ಮೊದಲನೆಯ ವಿಷಯಕ್ಕೆ ಸಂಬಂಧಿಸಿದಂತೆ, ಲೇಖಕರು ಕಾರ್ನಾಡರ ಬಗೆಗೆ ನಮಗೆ ಗೊತ್ತಿಲ್ಲದ ಅನೇಕ ವಿವರಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ. ಇದಕ್ಕಾಗಿ ಅವರು ಕಾರ್ನಾಡರನ್ನು ನೇರವಾಗಿ ಸಂದರ್ಶಿಸಿದ್ದಾರೆ. ಅವರ ಬಗೆಗೆ ಕನ್ನಡದಲ್ಲಿ – ಇಂಗ್ಲೀಷಿನಲ್ಲಿ ಪ್ರಕಟವಾದ ಲೇಖನ ಹಾಗೂ ಗ್ರಂಥಗಳನ್ನು ಪರಾಮರ್ಶಿಸಿದ್ದಾರೆ. ಕಾರ್ನಾಡರನ್ನು ಹತ್ತಿರದಿಂದ ಬಲ್ಲ ಗೆಳೆಯರಿಂದ ಮಾಹಿತಿ ಸಂಗ್ರಹಿಸಿದ್ದಾರೆ. 20ನೇ ಶತಮಾನದ ಉತ್ತರಾರ್ಧದ ಭಾರತೀಯ ಸಾಂಸ್ಕೃತಿಕ ಲೋಕದ ಒಳಸುಳಿವುಗಳನ್ನು ಕಾರ್ನಾಡರ ಮೂಲಕ ಅರ್ಥ ಮಾಡಿಕೊಳ್ಳ ಬಯಸುವವರಿಗೆ ಇಲ್ಲಿನ ವಿಷಯಗಳು ಬಹುವಾಗಿ ಸಹಕರಿಸಬಲ್ಲುವು.

ಎರಡನೇ ವಿಷಯಕ್ಕೆ ಸಂಬಂಧಿಸಿದಂತೆ ರಾಮಚಂದ್ರನ್ ಅವರು ತಮ್ಮ ವ್ಯಾಪಕ ಓದಿನ ಬಲದಿಂದ ಕಾರ್ನಾಡರ ಚಾರಿತ್ರಿಕ ನಾಟಕಗಳ ಸ್ಥಾನ ನಿರ್ದೇಶನ ಮಾಡಲು ಅನುಕೂಲಕರವಾಗುವಂಥ ಬೃಹತ್ ಚೌಕಟ್ಟೊಂದನ್ನು ನಿರ್ಮಿಸಿಕೊಡುತ್ತಾರೆ. `ಕಾರ್ನಾಡರು ಎಂಥ ನಾಟಕಕಾರರು? ಅವರ ನಾಟಕಗಳ ಮೂಲ ಪ್ರೇರಣೆಗಳೇನು‘ (ಪು:20) ಎಂಬಂಥ ಪ್ರಶ್ನೆಗಳನ್ನು ಕೇಳಿಕೊಂಡ ಲೇಖಕರು, ಕಾರ್ನಾಡರನ್ನು ಪ್ರಭಾವಿಸಿರಬಹುದಾದ ಪರಂಪರೆ, ಪುರಾಣಗಳು, ಜಾನಪದ, ನವ್ಯ ಸಾಹಿತ್ಯ, ವರ್ಣಾಶ್ರಮ ಧರ್ಮ ಮತ್ತಿತರ ವಿಷಯಗಳನ್ನು ಕೂಲಂಕಷವಾಗಿ ಚರ್ಚಿಸುತ್ತಾರೆ, ಚರಿತ್ರೆ-ಇತಿಹಾಸಗಳ ಬಗೆಗಣ ನಮ್ಮ ತಿಳುವಳಿಕೆಯನ್ನು ಪರಿಷ್ಕರಿಸಿಕೊಳ್ಳಲು ಒತ್ತಾಯಿಸುತ್ತಾರೆ. `ಚರಿತ್ರೆಯೆಂಬ ಜ್ಞಾನ ಮಾರ್ಗಗತವನ್ನು ಕುರಿತ ಕಥನವಾದರೂ ಅದರ ಲಕ್ಷ್ಯ ವರ್ತಮಾನವೇ (ಪು:53) ಎಂಬಂಥ ಆರೋಗ್ಯಕರವಾದ ತೀರ್ಮಾನದ ಹಿನ್ನೆಲೆಯಲ್ಲಿ ಅವರು ಕಾರ್ನಾಡರ ಚಾರಿತ್ರಿಕ ನಾಟಕಗಳ ವಿಮರ್ಶೆ-ವ್ಯಾಖ್ಯಾನಗಳನ್ನು ಮುಂದುವರೆಸುತ್ತಾರೆ.

ಕೃತಿಯ ಮುಖ್ಯ ಶರೀರವಾದ ನಾಲ್ಕು, ಐದು ಮತ್ತು ಆರನೇ ಅಧ್ಯಾಯಗಳಲ್ಲಿ ಕಾರ್ನಾಡರ ಚಾರಿತ್ರಿಕ ನಾಟಕಗಳ ಗಂಭೀರ ವಿಶ್ಲೇಷಣೆಯ ಸಂದರ್ಭದಲ್ಲಿ ಸಿ.ಎನ್.ಆರ್. ಅವರು ಕಾರ್ನಾಡರ ಚಾರಿತ್ರಿಕ ನಾಟಕಗಳಿಗೆ ಸಂವಾದಿಯಾಗಿ ಭಾರತೀಯ ಭಾಷೆಗಳಲ್ಲಿ ಹಾಗೂ ಪಾಶ್ಚಾತ್ಯ ಭಾಷೆಗಳಲ್ಲಿ ಬಂದಿರುವ ಅನೇಕ ಕೃತಿಗಳನ್ನು ಪರಿಶೀಲಿಸಿ, ಕಾರ್ನಾಡರ ನಾಟಕಗಳು ಅವುಗಳಿಗಿಂತ ಹೇಗೆ ಭಿನ್ನವಾಗಿವೆ ಎಂದು ಸ್ಪಷ್ಟಪಡಿಸುತ್ತಾರೆ. ಹೀಗಾಗಿ ಚರ್ಚೆಯ ಸಂದರ್ಭದಲ್ಲಿ ತಾನೇ ತಾನಾಗಿ ಕಮೂ, ನೆಹರೂ, ಸಫೊಕ್ಲಿಸ್, ಗೋಪಾಲ ಕೃಷ್ಣ ಅಡಿಗ, ವೃಂದಾವನಲಾಲ್ ವರ್ಮ, ಚೋ ರಾಮಸ್ವಾಮಿ, ಸಂಪ, ಬರನಿ, ವಿಜಯ ತೆಂಡೂಲ್ಕರ್, ಬಿ.ವಿ. ಕಾರಂತ, ಆನ್ವಿ, ಎಚ್.ಎಸ್.ಶಿವಪ್ರಕಾಶ್, ರಾಮಾನುಜನ್, ವಿಶ್ವಾಸ್ ಪಾಟೀಲ್, ಮತ್ತಿತರರೆಲ್ಲಾ ಹಾಯ್ದು ಹೋಗುತ್ತಾರೆ. ಎಷ್ಟೋ ಬಾರಿ ಈ ವಿಶಾಲ ಚೌಕಟ್ಟಿನ ಭಾರದಿಂದ ಕಾರ್ನಾಡರ ಬಗೆಗಣ ಓದು ಕುಸಿದು ಹೋಗುತ್ತಿರುವಂತೆ ಭಾಸವಾಗುತ್ತದೆ. ಕಾರ್ನಾಡರ ನಾಟಕಗಳು ಗೌಣವಾಗಿ ಇತರರೇ ವಿಜೃಂಭಿಸುವಂತೆ ತೋರುತ್ತದೆ. ಇಷ್ಟಿದ್ದರೂ ಕನ್ನಡದ ನಿರ್ದಿಷ್ಟ ನಾಟಕವೊಂದು ಜಗತ್ತಿನ ಇತರೆಡೆಯ ನಾಟಕಗಳಿಗಿಂತ ಹೇಗೆ ಅನನ್ಯವಾಗಿದೆ ಎಂಬುದನ್ನು ಮರೆಯುವಂತಿಲ್ಲ.

ರಾಮಚಂದ್ರನ್ ಅವರು ಕಾರ್ನಾಡರ ಕುರಿತಾದ ಚರ್ಚೆಗಳನ್ನು ಬೇರೆ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಸ್ವಾತಂತ್ರ್ಯೋತ್ತರ ಭಾರತೀಯ ರಂಗಭೂಮಿಯ ಉತ್ಥಾನಕ್ಕೆ ಗಿರೀಶರ ಕೊಡುಗೆಯನ್ನು ಅವರು ಸಾಧಾರವಾಗಿ ಸ್ಥಾಪಿಸಿದ್ದಾರೆ.

ಡಾ. ಪುರುಷೋತ್ತಮ ಬಿಳಿಮಲೆ

ಶೀರ್ಷಿಕೆ: ಗಿರೀಶ್ ಕಾರ್ನಾಡ್ ಮತ್ತು ಅವರ ಮೂರು ಚಾರಿತ್ರಿಕ ನಾಟಕಗಳು (ಸುವರ್ಣ ಸಿರಿ ಮಾಲೆ) ಲೇಖಕರು: ಡಾ. ಸಿ.ಎನ್.ರಾಮಚಂದ್ರನ್ ಪ್ರಕಾಶಕರು: ಸಪ್ನ ಬುಕ್ ಹೌಸ್ ಪುಟಗಳು:124 ಬೆಲೆ:ರೂ.60/-

ಕೃಪೆ : ಪ್ರಜಾವಾಣಿ