ನೊಬೆಲ್ – ಮಾಹಿತಿ ಕೋಶ

ಮನು ಕುಲಕ್ಕೆ ಸಂದ ಅತ್ಯಮೂಲ್ಯ ಕೊಡುಗೆಗಳಾಗಿ 1901 ರಿಂದ ಭೌತ, ರಸಾಯನ, ವೈದ್ಯ, ಸಾಹಿತ್ಯ ಮತ್ತು ಶಾಂತಿ ನೊಬೆಲ್ ಪುರಸ್ಕಾರಗಳಿಗೆ ಭಾಜನರಾದವರನ್ನು ಹಾಗೂ 1969 ರಿಂದ ಚಲಾವಣೆಗೆ ಬಂದ, ಸ್ವೀಡನ್ನ ಸೆಂಟ್ರಲ್ ಬ್ಯಾಂಕ್ ಅರ್ಥಶಾಸ್ತ್ರ ಸಂಶೋಧನೆಗಳಿಗೆ ನೀಡುವ ಪುರಸ್ಕಾರಕ್ಕೆ (ಇದನ್ನೂ ನೊಬೆಲ್ ಪ್ರಶಸ್ತಿ ಎಂದೇ ಕರೆಯುತ್ತಾರೆ) ಪಾತ್ರರಾದವರ ಸಮಗ್ರ ಮಾಹಿತಿ ಈ ಪುಸ್ತಕದಲ್ಲಿದೆ. ಹಾಗೆ 774 ವಿಜ್ಙಾನಿಗಳು, ಸಾಹಿತಿಗಳು, ಶಾಂತಿಪ್ರಿಯರು ಮತ್ತು ಅರ್ಥಶಾಸ್ತ್ರಜ್ಞರು 320 ಪುಟಗಳ ಈ ಪುಸ್ತಕದಲ್ಲಿ ಶೋಭಿಸುತ್ತಾರೆ. (ಅವರ ಛಾಯಾಚಿತ್ರಗಳ ಮುದ್ರಣ ಅಷ್ಟು ಸೊಗಸಾಗಿದೆ.)

ಶಾಲಾ ಕಾಲೇಜುಗಳ ಗ್ರಂಥ ಭಂಡಾರಗಳಲ್ಲಿ ಅಗತ್ಯವಾಗಿ ಇಡಬೇಕಾದ ಪುಸ್ತಕ. ಭೌತ ವಿಜ್ಙಾನ ಹಾಗೂ ಜೀವ ವಿಜ್ಙಾನಗಳ ಪ್ರಶಸ್ತಿ ವಿಜೇತರ ಕುರಿತು ಬರೆಯುವಾಗ ಎಕ್ಸ್ ಕಿರಣ ವಿವರ್ತನೆ, ಸ್ಪಟಿಕ ಸಂರಚನೆ, ರೋಹಿತ, ಪ್ರೋಟೀನ್, ನ್ಯೂಕ್ಲಿಕ್ ಆಮ್ಲ, ಮುಂತಾದ ಪಾರಿಭಾಷಿಕ ಪದಗಳನ್ನು ಬಳಸುವುದರಿಂದ, ಮುನ್ನುಡಿ ಬರೆದಿರುವ ಜನಪ್ರಿಯ ವಿಜ್ಙಾನ ಲೇಖಕ ಅಡ್ಯನಡ್ಕ ಕೃಷ್ಣಭಟ್ ಹೇಳುವಂತೆ ಈ ಕಾರ್ಯಕ್ಷೇತ್ರಗಳ ಬರಿಯ ಸ್ಥೂಲ ತಿಳುವಳಿಕೆ ಪಡಯಲೂ ಸ್ವಲ್ಪಮಟ್ಟಿಗೆ ಓದುಗರ ಪ್ರಯತ್ನ ಬೇಕಾಗುತ್ತದೆ.

ಇದನ್ನು ಗಮನದಲ್ಲಿರಿಸಿಕೊಂಡರೆ ಒಳ್ಳೆಯದು. ಪ್ರಕಾಶನ ಸಂಸ್ಥೆಯ ರಾಜಾರಾಂ `ವರುಷಗಳು ಕಳೆದಂತೆ ನೊಬೆಲ್ ಪಾರಿತೋಷಕಗಳ ಸಂಖ್ಯೆಯೂ ಹೆಚ್ಚುತ್ತಾ ಹೋಗುವುದರಿಂದ, ಹೊಸ ಸೇರ್ಪಡೆಗಳನ್ನು ಅನುಬಂಧದ ರೂಪದಲ್ಲಿ ನೀಡುತ್ತಾ ಹೋಗುವುದಾಗಿ ತಿಳಿಸಿದ್ದಾರೆ. ಸ್ವಾಗತಾರ್ಹ

ಶೀರ್ಷಿಕೆ : ನೊಬೆಲ್ ಪುರಸ್ಕೃತರು – ಸಮಗ್ರ ಮಾಹಿತಿ ಕೋಶ ಲೇಖಕರು : ಸಿ. ಆರ್. ಕೃಷ್ಣರಾವ್ ಪ್ರಕಾಶಕರು : ನವ ಕರ್ನಾಟಕ ಪ್ರಕಾಶನ ಪುಟಗಳು : 320 ಬೆಲೆ: ರೂ.400/-

ಕೃಪೆ : ವಿಜಯ ಕರ್ನಾಟಕ