ಕನ್ನಡಿಗರ ಕೈಗೆ `ಜನರ ಚರಿತ್ರೆ’

poorvethihaasa-cp

‘People’s History of India’ ಯೋಜನೆ ಪ್ರೊ. ಇರ್ಫಾನ್ ಹಬಿಬ್ ರ ನೇತೃತ್ವದಲ್ಲಿ ಆರಂಭವಾಗಿ ಈಗಾಗಲೇ ಅದರ ಅಡಿಯಲ್ಲಿ ಆರು ಸಂಪುಟಗಳು ಪ್ರಕಟಗೊಂಡಿವೆ. ಈ ಮಾಲಿಕೆಯ ಮೊದಲ ಕೃತಿ, ಹಬೀಬರೇ ರಚಿಸಿರುವ Pre History ಕನ್ನಡಕ್ಕೆ ಅನುವಾದಗೊಂಡಿದೆ. ಪ್ರದೀಪ್ ಬೆಳಗಲ್ ಅನುವಾದಿತ ಕೃತಿ ಪೂರ್ವೇತಿಹಾಸ ವನ್ನು ಚಿಂತನ ಪುಸ್ತಕಪ್ರಕಾಶಕರು ಕನ್ನಡದ ಓದುಗರ ಕೈಗಿತ್ತಿದ್ದಾರೆ.

ಪೀಪಲ್ಸ್ ಹಿಸ್ಟರಿ ಸಂಪುಟಗಳು ಹೆಸರೇ ಸೂಚಿಸುವಂತೆ ಜನರಚರಿತ್ರೆಯನ್ನು ಹೇಳುವ ಉದ್ದೇಶವನ್ನು ಹೊಂದಿರುತ್ತವೆ. ಹಲವು ದೇಶಗಳಲ್ಲಿ ಆಯಾ ದೇಶದ ಜನರ ಚರಿತ್ರೆಯನ್ನು ಕಟ್ಟಿಕೊಡುವ ಪ್ರಯತ್ನಗಳನ್ನು ಚರಿತ್ರೆಕಾರರು ಮಾಡುತ್ತಾ ಬಂದಿದ್ದಾರೆ. ಭಾರತದ ಈ ಸಂಪುಟಗಳ ಜವಾಬ್ದಾರಿ ಹೊತ್ತಿರುವ ಹಬೀಬರಿಗೆ ಕೆಲವು ಖಚಿತವಾದ ಗುರಿಗಳಿವೆ. ಕೋಮುವಾದಿ ಇತಿಹಾಸವನ್ನು ತೊಡೆದು ವೈಜ್ಞಾನಿಕ ಇತಿಹಾಸವನ್ನು ರಚಿಸುವುದು ತಮ್ಮ ಉದ್ದೇಶವೆಂಬುದನ್ನು ತಮ್ಮ ಪ್ರಸ್ತಾವನೆಯಲ್ಲೇ ಅವರು ಹೇಳಿಕೊಳ್ಳುತ್ತಾರೆ.

ಯಾವುದೇ ಒಂದು ಕಾಲಮಾನದ ಚರಿತ್ರೆ ಸ್ವತಂತ್ರವಾಗಿ ಘಟಿಸುವುದಿಲ್ಲ. ಮನುಕುಲದ ಚರಿತ್ರೆಯಲ್ಲಿ ನಿರಂತರತೆ ಇರುತ್ತದೆ. ಈ ನಿರಂತರತೆಯನ್ನು ಗ್ರಹಿಸಿದಾಗ ಇಂದು ಚರಿತ್ರೆ ರಾಜಕೀಯ ಉದ್ದೇಶಕ್ಕೆ ಬಳಕೆಯಾಗುವ ಅಥವಾ ರಾಜಕೀಯ ಉದ್ದೇಶದಿಂದ ರಚಿತವಾಗುವ ಅಪಾಯವನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಸಮಕಾಲೀನ ಭಾರತದ ಸಮಸ್ಯೆಗಳಿಗೆ ಚರಿತ್ರೆಯ ತಪ್ಪು ಗ್ರಹಿಕೆಗಳೂ ಕಾರಣವಾಗಿವೆ. ಈ ಗ್ರಹಿಕೆಗಳನ್ನು ಕೇವಲ ವಿದ್ವತ್ ಪ್ರಪಂಚ ತನಗೆ ತಾನೇ ನಿವಾರಿಸಿಕೊಂಡರೆ ಸಾಲದು. ಅದನ್ನು ಜನಸಾಮಾನ್ಯರಿಗೆ ತಲುಪಿಸುವ ಜವಾಬ್ದಾರಿಯೂ ಬೇಕಾಗಿದೆ. ಆರ್ಯರು, ದ್ರಾವಿಡರು ಎಂಬ ಜನಾಂಗ ಕಲ್ಪನೆಗಳು, ಆರ್ಯರು ಭಾರತ ಮೂಲದವರೇ ಅಥವಾ ಹೊರಗಿನಿಂದ ಬಂದವರೇ ಎಂಬ ಮುಂದುವರಿದ ಚಾರಿತ್ರಿಕ ಊಹೆಗಳು, ಭಾಷಾ ಮೂಲ, ಜನಾಂಗ ಮೂಲವನ್ನು ಹೇಳಿಕೊಳ್ಳುತ್ತಾ ಪ್ರತಿಷ್ಠೆಯ ಅಥವಾ ಕೀಳರಿಮೆಯ ಭಾವನೆಯನ್ನು ಅನುಭವಿಸುವುದು ಇವೆಲ್ಲ ವಿದ್ವತ್ ಪ್ರಪಂಚದಾಚೆಗೂ ಜನರ ಒಳಗೆ ಆಳವಾಗಿ ಬಿಟ್ಟ ಬೇರುಗಳಾಗಿವೆ. ಶತಮಾನಗಳ ಚರಿತ್ರೆಯನ್ನು ಗಮನಿಸಿದಾಗ ಮಾನವನ ಬೆಳವಣಿಗೆ, ಹಿಂಜರಿಕೆ, ವಲಸೆ ಇವೆಲ್ಲವೂ ಒಂದಕ್ಕೊಂದು ಹೆಣೆದುಕೊಂಡ ಘಟನೆಗಳಾಗಿರುತ್ತವೆ. ಇಂತಹ ಒಂದು ಅದ್ಭುತವಾದ ಪ್ರವೇಶಿಕೆ ಪೂರ್ವೇತಿಹಾಸ ಕೃತಿಯ ಮೂಲಕ ದೊರೆಯುತ್ತದೆ.

ಭಾರತದ ಚರಿತ್ರೆಯನ್ನು ತಿಳಿಸುವುದೇ ಹಬೀಬರ ಉದ್ದೇಶವಾಗಿದ್ದರೂ ಅದನ್ನು ಭಾರತದ ಭೂಭಾಗ ತನ್ನ ಸ್ವರೂಪವನ್ನು ಪಡೆದುಕೊಳ್ಳುವಲ್ಲಿಂದ ಆರಂಭಿಸುತ್ತಾರೆ. ಅಂದರೆ 4600 ದಶಲಕ್ಷ ವರ್ಷಗಳಷ್ಟು ಹಿಂದಕ್ಕೆ ಕರೆದೊಯ್ಯುತ್ತಾರೆ.

ಭೂಮಿಯ ಪದರಗಳ ಚಲನೆ ಭೌಗೋಳಿಕ ಸ್ವರೂಪವನ್ನು ತಂದುಕೊಡುತ್ತಾ ಜೊತೆ ಜೊತೆಯಲ್ಲಿ ಪ್ರಾಣಿ ಮತ್ತು ಸಸ್ಯ ಸಂಕುಲಗಳನ್ನು ವಿವಿಧ ಖಂಡಗಳಲ್ಲಿ ಹಂಚಿ ಹೋಗುವಂತೆ ಮಾಡುತ್ತಾ ಬಂದಿದೆ. ಭೌಗೋಳಿಕ ಮೇಲ್ಮೈಯಲ್ಲಿ ಹಿಮಾಲಯ, ತಪ್ಪಲಿನ ಗಂಗಾ, ಸಿಂಧೂ ನದಿಗಳ ರಚನೆಯನ್ನು ವಿವರಿಸುತ್ತಾರೆ. ಇಂತಹ ಭೌಗೋಳಿಕ ಮೇಲ್ಮೈ ಲಕ್ಷಣ ವಾತಾವರಣವನ್ನು ನಿರ್ಮಿಸಿತು. ಹೀಗೆ ಭೂರಚನೆ ಮನುಕುಲದ ವಿಕಾಸಕ್ಕೆ ಕಾರಣವಾಗುತ್ತದೆ.

ಆಫ್ರಿಕಾದಲ್ಲಿ ವಿಕಾಸಗೊಂಡ ಆದಿಮಾನವ ಉಳಿದ ಭಾಗಗಳಿಗೆ ವಿಸ್ತರಿಸುತ್ತಾ ಕಲ್ಲಿನ ಉಪಕರಣಗಳನ್ನು ಬಳಕೆ ಮಾಡುತ್ತಾ ದೈಹಿಕವಾಗಿ ಆಧುನಿಕ ಮಾನವನ ಸ್ವರೂಪವನ್ನು ಪಡೆದುಕೊಳ್ಳುತ್ತಾನೆ. ಮಧ್ಯಶಿಲಾಯುಗ ಸಂಸ್ಕೃತಿಯಲ್ಲಿ ಮಾನವ ಕಲ್ಲಿನ ಅಯುಧಗಳನ್ನು ಸಾಕಷ್ಟು ಸೂಕ್ಷ್ಮವಾಗಿ ಬಳಸಲಾರಂಭಿಸಿದನು. ಈ ಕುರುಹುಗಳು ನಮ್ಮ ಸುತ್ತಲ ಪರಿಸರದಲ್ಲಿ ಕಾಣಬರುತ್ತದೆಂಬುದು ಪುಳಕಗೊಳಿಸುತ್ತದೆ. ಹೀಗೆ ಪ್ರಾಣಿಗಳನ್ನು ಸಾಕುತ್ತಾ ಬೇಟೆಯಾಡುತ್ತ ಬದುಕಿದ್ದ ಮಾಣವರು ಭೀಂಬೆಟ್ಕದಂತಹ ಪ್ರದೇಶದ ಬಂಡೆಗಳ ಮೇಲೆ ಬಿಡಿಸಿರುವ ಚಿತ್ರಗಳು ಅವನ ದಾಖಲೀಕರಣಗಳಾಗಿವೆ.

ಈ ಕೃತಿಯ ಮುಖ್ಯಭಾಗ ನವಶಿಲಾಯುಗ ಕ್ರಾಂತಿ. ಕೃಷಿಗೆ ಸಂಬಂಧಿಸಿದಂತೆ ಪ್ರಮುಖ ಬೆಳೆವಣಿಗೆ ಈ ಸಂದರ್ಭದಲ್ಲಿ ಆದುದನ್ನು ಗೊರ್ಡಾನ್ ಚೈಲ್ಡ್ರು ಗುರುತಿಸಿರುವುದನ್ನು ಹಬೀಬರು ಅನುಮೋದಿಸುತ್ತಾರೆ. ಕೃಷಿಯ ಬೆಳವಣಿಗೆ ಉತ್ಪಾದನೆ- ಅದರ ಹೆಚ್ಚಳ, ಶೇಖರಣೆ, ಅದರ ಮೇಲಿನ ಒಡೆತನ ಹೀಗೆ ಸಾಮಾಜಿಕ ವರ್ಗಗಳ ಬೆಳವಣಿಗೆಗೂ ಕಾರಣವಾಯಿತು. ಕಾಲಮಾನ ಕ್ರಿ.ಪೂ.7000ದಿಂದ 3800ರ ನಡುವೆ ಮೆಹರ್ಘಡದಲ್ಲಿ ಅಂದರೆ ಪಾಕಿಸ್ತಾನದ ಪ್ರದೇಶದಲ್ಲಿ ಗುರುತಿಸುತ್ತಾರೆ.

ನವಶಿಲಾಯುಗದ ತಂತ್ರಗಳು ಆಫಘಾನಿಸ್ತಾನದಾದ್ಯಂತ ಹರಡಿ ಅವುಗಳ ಸಿಂಧೂ ಬಯಲಿನ ಪ್ರದೇಶಕ್ಕೆ ರಂಗ ಸಿದ್ಧವಾಗಿತ್ತು ಎಂದು ಹೇಳುವ ವಾದ ಸಿಂಧೂ ನಾಗರಿಕತೆಯ ಹುಟ್ಟಿಗೆ ಪೂರ್ವ ವೇದಿಕೆಯನ್ನು ಹಾಕುತ್ತದೆ. ಮೆಹರ್ಘಡದ ಮೂರು ಹಂತದ ಬೆಳವಣಿಗೆ ಅಂದರೆ ನವಶಿಲಾಯುಗ, ತಾಮ್ರಶಿಲಾಯುಗ ಹಾಗೂ ಕಂಚಿನಯುಗದ ಬೆಳವಣಿಗೆ ರೋಚಕವೆನಿಸುತ್ತದೆ. ಸಂಶೋಧಕರು ಇಲ್ಲಿ ದೊರಕಿರುವ ವಸ್ತುಗಳ ಆಧಾರದ ಮೇಲೆ ಜನರ ವಯೋಮಿತಿ ಇತ್ಯಾದಿಗಳನ್ನು ಪರಿಶೀಲಿಸುವ ರೀತಿ ಚರಿತ್ರೆಯ ವಸ್ತು ವಿಷಯಕ್ಕೆ ಜನರನ್ನು ಸೆಳೆದು ಹಿಡಿಯುವಲ್ಲಿ ಸಮರ್ಥವಾಗಿ ಕಾಣಬರುತ್ತದೆ.

ಈ ಕೃತಿಯ ಟಿಪ್ಪಣಿಗಳೂ ಅಷ್ವೇ ಮುಖ್ಯವಾದವು, ಪೂರ್ವೇತಿಹಾಸ, ಅದರಲ್ಲೂ ಕಾಲಗಣನೆಯ ಪದ್ಧತಿಯ ವಿವರಣೆ ಹಾಗೂ ಸರಸ್ವತಿ ನದಿಯ ವಿಚಾರಗಳು ಗಮನ ಸೆಳೆಯುತ್ತವೆ. ಸರಸ್ವತಿ ನದಿಯವಾದ ಕೇವಲ ಶೈಕ್ಷಣಿಕ ಕುತೂಹಲವಾಗದೆ ಹಿಂದೂವಾದದ ತಳಹದಿಯಿಂದ ಮೂಡಿಬಂದ ವಾದವಾಗಿರುವುದರಿಂದ ಶೀಘ್ರ ತೀರ್ಮಾನಕ್ಕೆ ಎಳೆದೊಯ್ದ ಈ ವಿಚಾರಕ್ಕೆ ಇಡೀ ಕೃತಿಯೇ ಉತ್ತರವಾಗಿ ನಿಂತಂತೆ ಕಂಡು ಬರುತ್ತದೆ.

ಪ್ರೋ. ಇರ್ಫಾನ್ ಹಬೀಬರು ಮಹಾನ್ ಇತಿಹಾಸಕಾರರಲ್ಲಿ ಒಬ್ಬರು. ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು. ‘Agrarian System of Moghul India’ ದ ಮೂಲಕ ಹೆಸರುವಾಸಿಯಾದವರು. ಆರ್ಥಿಕ ಇತಿಹಾಸದಲ್ಲಿ ವಿಶೇಷ ಒಲವನ್ನು ಹೊಂದಿದ್ದವರು. ಮಾರ್ಕ್ಸ್ ವಾದಿ ಚಿಂತಕರಾದ ಇವರು ನಿರಂತರವಾಗಿ ಕೋಮುವಾದ-ವಿರೋದಿ ಚಳವಳಿಯಲ್ಲಿ ತೊಡಗಿಕೊಂಡವರು. ‘People’s History of India’ ಯೋಜನೆಗೆ ಮಧ್ಯಪ್ರದೇಶ ಸರ್ಕಾರ ಸಹಾಯವನ್ನು ನೀಡಿದ್ದು ಅದನ್ನು ಪಠ್ಯವಾಗಿ ಸ್ವೀಕರಿಸುವ ಉದ್ದೇಶವನ್ನು ಹೊಂದಿದೆ.

ಪ್ರದೀಪ್ ಬೆಳಗಲ್ ಅವರು ಕ್ಲಿಷ್ಟವಾದ, ಸಾಕಷ್ಟು ತಾಂತ್ರಿಕ ಉಕ್ತಿಗಳುಳ್ಳ ಈ ಕೃತಿಯನ್ನು ಸಾಕಷ್ಟು ಸರಾಗವಾಗಿಯೇ ಅನುವಾದ ಮಾಡಿದ್ದಾರೆ. ಒಟ್ಟಿನಲ್ಲಿ ಉತ್ತಮ ಕೃತಿಯನ್ನು ಕನ್ನಡಕ್ಕೆ ತಂದುಕೊಟ್ಟ ಶ್ರಮದ ಹಿಂದಿನ ಎಲ್ಲರನ್ನು ಅಭಿನಂದಿಸುತ್ತೇನೆ.

ಡಾ. ವಸು ಎಂ. ವಿ.

ಶೀರ್ಷಿಕೆ: ಪೂರ್ವೇತಿಹಾಸ ಲೇಖಕರು: ಇರ್ಫಾನ್ ಹಬಿಬ್ ಪ್ರಕಾಶಕರು: ಚಿಂತನ ಪುಸ್ತಕ ಪುಟಗಳು : 112 ಬೆಲೆ: ರೂ.80/-

ಕೃಪೆ : ಉದಯವಾಣಿ