ರಹಮತ್ ತರೀಕೆರೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಾಗಿ ಅಭಿನಂದನೆಗಳು

ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾ ನಿಕಾಯದ ಡೀನ್ ಡಾ.ರಹಮತ್ ತರೀಕೆರೆ ಅವರ `ಕತ್ತಿಯಂಚಿನ ದಾರಿ’ ಕೃತಿಗೆ ಪ್ರಸಕ್ತ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾ ನಿಕಾಯದ ಡೀನ್ ಡಾ.ರಹಮತ್ ತರೀಕೆರೆ ಅವರ `ಕತ್ತಿಯಂಚಿನ ದಾರಿ’ ಕೃತಿಗೆ ಪ್ರಸಕ್ತ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

`ಈ ಕೃತಿಯನ್ನು 2006ರಲ್ಲಿಯೇ ರಚಿಸಿದ್ದು, ಈ ಪ್ರಶಸ್ತಿಯಿಂದ ನನಗೆ ಅತೀವ ಸಂತೋಷವಾಗಿದೆ. ನನ್ನ ಬೌದ್ಧಿಕ ಬೆಳವಣಿಗೆಗೆ ಕಾರಣವಾದ ಹಂಪಿ ಕನ್ನಡ ವಿ.ವಿ.ಯು 19ನೇ ನುಡಿಹಬ್ಬದ ಸಂಭ್ರಮದಲ್ಲಿರುವಾಗ ಈ ಪ್ರಶಸ್ತಿ ಘೋಷಣೆಯಾಗಿರುವುದರಿಂದ ಸಂತಸ ಉತ್ತುಂಗಕ್ಕೇರಿದೆ. ಈ ಎರಡೂ ಸಮ್ಮಿಲನಗಳ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಕನ್ನಡ ವಿ.ವಿ.ಗೆ ಸಮರ್ಪಿಸುತ್ತೇನೆ’ ಎಂದು ಅವರು ಪ್ರತಿಕ್ರಿಯಿಸಿದರು.

– ಕೃಪೆ ಪ್ರಜಾವಾಣಿ


ರಹಮತ್ ತರೀಕೆರೆ : ಕತ್ತಿಯಂಚಿನ ದಾರಿ (೨೦೦೬)

ಈ ಪುಸ್ತಕದ ಶೀರ್ಷಿಕೆಯು, ನಮ್ಮ ಲೇಖಕರೊಬ್ಬರು ಸಾಹಿತ್ಯ ಸಮ್ಮೇಳನದಲ್ಲಿ ಮಾಡಿದ ಭಾಷಣಕ್ಕೆ ಮಾಡಿದ ಪ್ರತಿಕ್ರಿಯೆಯಿಂದ ಬಂದಿದ್ದು;  ಇದು ನಮ್ಮ ಸುತ್ತ ಏರ್ಪಟ್ಟಿರುವ ಪರಿಸರಕ್ಕೂ ಅದನ್ನು ಮುಖಾಮುಖಿ ಮಾಡುತ್ತ ಹುಟ್ಟುತ್ತಿರುವ ನಮ್ಮ ಬರೆಹಕ್ಕೂ ನಮಗೂ ಮಧ್ಯೆ ಹುಟ್ಟಿರುವ ಬಿಕ್ಕಟ್ಟುಗಳಿಗೆ ರೂಪಕವಾಗಬಲ್ಲದು ಎಂದು ಅನಿಸಿತು. ಸಾಹಿತ್ಯ ಕೃತಿಯ ಹೊರಗಿನ ಆಕೃತಿ ಮತ್ತು ಒಳಗಿನ ಇರುವ ಆಶಯ – ಇವುಗಳ ನಡುವಣ ಸಂಬಂಧದಲ್ಲಿ ವೈರುಧ್ಯಗಳಿರುತ್ತವೆ. ಈ ವೈರುಧ್ಯಗಳ ನಡುವಣ ಸೆಳೆದಾಟಗಳ ಶೋಧ ಮಾಡುವುದು ಸಾಹಿತ್ಯ ವಿಮರ್ಶೆಗೆ ಯಾವತ್ತೂ ಸವಾಲು. ಇಲ್ಲಿನ ಲೇಖನಗಳಲ್ಲಿ ಇಂತಹದೊಂದು ಶೋಧದ ಸಣ್ಣ ಯತ್ನವಿದೆ. ಸಾಹಿತ್ಯ ವಿಮರ್ಶೆಯಲ್ಲಿ ನಿರ್ದಿಷ್ಟ ವಾದವನ್ನು ಇಟ್ಟುಕೊಂಡು ಅದಕ್ಕೆ ಬೇಕಾದ ಸಾಕ್ಷ್ಯಗಳನ್ನು ಗುಡ್ಡೆ ಹಾಕಿಕೊಂಡು ಪ್ರತಿಪಾದನೆ ಮಾಡುವುದು ಸುಲಭ. ಆದರೆ ಕೃತಿಗಳು ಬಿಟ್ಟುಕೊಡುವ ಹಲವು ವಿಭಿನ್ನ ಕೆಲವೊಮ್ಮೆ ಪರಸ್ಪರ ವಿರುದ್ಧ ದನಿಗಳನ್ನು ಹಿಡಿದು, ಒಂದಕ್ಕೆ ತೆತ್ತುಕೊಳ್ಳದೆ, ಮತ್ತೊಂದನ್ನು ಕಡೆಗಣಿಸದೆ ಅರ್ಥಮಾಡಿಕೊಳ್ಳುವುದು ಕಷ್ಟದ ಕೆಲಸ; ಈ ಕಷ್ಟ ವಿಮರ್ಶೆಯದು ಮಾತ್ರವಲ್ಲ, ನನ್ನನ್ನೂ ಒಳಗೊಂಡಂತೆ ನನ್ನ ತಲೆಮಾರಿನ ಅನೇಕರ ನಡೆ ಮತ್ತು ನುಡಿಗಳ ನಡುವೆ ಕಾಣಿಸಿರುವ ಕಷ್ಟ ಕೂಡ.


ಇದೊಂದು ಬಿಕ್ಕಟ್ಟಿನ ಕಾಲ; ಚರಿತ್ರೆಯಲ್ಲಿ ಬಿಕ್ಕಟ್ಟಿಲ್ಲದ ಕಾಲವಾದರೂ ಯಾವುದು? ಆದರೆ ನಮ್ಮ ನಾಡಿನ ಚರಿತ್ರೆಯಲ್ಲಿ ಯಾವತ್ತೂ ಇಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿರಲಿಲ್ಲ. ಜಗತ್ತಿನ ದೊಡ್ಡ ಮಿಲಿಟರಿ ಶಕ್ತಿಗಳು, ಕೋಮುವಾದ, ಪ್ರಭುತ್ವಗಳು ಹುಟ್ಟಿಸಿರುವ ಕ್ರೌರ್ಯ, ಅದಕ್ಕೆ ಎದುರಾಗಿ ಹುಟ್ಟಿಕೊಂಡ ಜನರ ಪ್ರತಿರೋಧಗಳು, ಮಧ್ಯಮವರ್ಗದ ಅವಕಾಶವಾದಿ ವರ್ತನೆ, ಜನರಿಗಾಗಿ ಕೆಲಸ ಮಾಡುವ ಚಳುವಳಿಗಾರರ ದಮನ – ಇವೆಲ್ಲವೂ ನಮ್ಮ ಓದು ಮತ್ತು ಬರೆಹದ ಮೇಲೆ ಹೇಗೋ ಆವರಿಸಿಕೊಂಡಿವೆ. ಇವನ್ನು ಮರೆತು ಬರೆಯುವಂತಿಲ್ಲ; ಮರೆಯದೆ ಬರೆದರೆ, ಬರೆದ ಬರೆಹವು ಆತ್ಮವಿಶ್ವಾಸ ಕೊಡುವುದಕ್ಕೆ ಬದಲಾಗಿ ಪ್ರಶ್ನೆಯಾಗಿ ಎದುರು ನಿಂತು ಕಾಡುತ್ತದೆ. ಇದನ್ನೆ ಕತ್ತಿಯಂಚಿನ ಹಾದಿಯಲ್ಲಿ ನಡೆವ ಕಷ್ಟ ಎಂದು ನಾನು ಭಾವಿಸಿದ್ದೇನೆ. ಕತ್ತಿಯಲುಗಿನ ಮೇಲೆ ನಡೆದರೆ ಕಾಲು ಕತ್ತರಿಸಿ ಹೋಗುತ್ತದೆ; ಬಾಗಿ ಎತ್ತಿಕೊಂಡರೆ ಕೈಯ ಆಯುಧವಾಗುತ್ತದೆ; ಸ್ವವಿಮರ್ಶೆಯನ್ನಾಗಿ ಮಾಡಿ ಚುಚ್ಚಿಕೊಂಡರೆ, ಒಡಲಲ್ಲಿ ಮುರಿದು ನೋವುಂಟು ಮಾಡುತ್ತದೆ……
– ರಹಮತ್ ತರೀಕೆರೆ
(ಮುನ್ನುಡಿಯಿಂದ)

ಕೃಪೆ : ಪುಸ್ತಕ ಜಗತ್ತು: ರಹಮತ್ ತರೀಕೆರೆ

 

 

ಹೇಳಿ ಮುಗಿಸುವ `ಅಸೀಮ ಕಾವ್ಯ’

ಕಂಡದ್ದಕ್ಕೆ ಅನುಭವಿಸಿದ್ದಕ್ಕೆ ತನ್ನೊಳಗಿನಿಂದ ಮಾತುಗಳನ್ನು ಹುಟ್ಟಿಸಿಕೊಳ್ಳದಿರುವ ಕವಿಗೆ ಹೊರಗೆ ಸಿದ್ಧವಾಗಿರುವ ಪದಗಳನ್ನು ಒದಗಿಸಿಕೊಳ್ಳುವುದರಲ್ಲಿಯೇ ಹೆಚ್ಚು ಆಸಕ್ತಿ ಇದ್ದಂತಿದೆ.

`ಅಸೀಮ ರೂಪಿ’ ನಾಲ್ಕು ದಶಕಗಳಿಂದ ಇಲ್ಲಿಯವರೆಗೆ ದೊಡ್ಡರಂಗೇಗೌಡ ಅವರು ಬರೆದಿರುವ ಆಯ್ದ ಕವಿತೆಗಳು ಹಾಗೂ ಭಾವಗೀತೆಗಳ ಸಂಕಲನ. ಈ ಸಂಗ್ರಹದಲ್ಲಿ 327 ರಚನೆಗಳಿವೆ. ಆದ ದುಃಖ, ಪುಳಕ, ಸಂಗಾತಿಗಳು ಉಳಿಸಿಹೋದ ನೆನಪು, ಅಳಿಸಿಹೋದ ಕನಸು, ಪುಟಿದೇಳುವ ಕನ್ನಡಾಭಿಮಾನ, ಯುಗಾದಿಯ ಸಡಗರ, ಮೆಚ್ಚಿನ ಮೇಷ್ಟ್ರು, ಮೊಮ್ಮಗನ ತುಂಟಾಟ, ಕಾಡುವ ಹಿರಿಯರು, ಸಮಾಜಹಿತ- ಈ ಎಲ್ಲದರ ಬಗೆಗೂ ಉತ್ಸಾಹಮಿಶ್ರಿತ ಉದ್ಗಾರದಲ್ಲಿ ಹೇಳುವ ರಚನೆಗಳಿವು. ಹೇಳುವಾಗ ಕವಿತೆಯ ಆಕಾರದಲ್ಲಿ, ಲಯ, ಪ್ರಾಸವಿಟ್ಟು ವಿಶೇಷಣಗಳನ್ನು ಕವಿ ಬೆರಸಿಡುವರು.

`ಭವ್ಯತೆ ದಿವ್ಯತೆ ಭೋ ಅಚ್ಚರಿ’, `ನಮ್ಮ ನಾಕ ಪ್ರೇಮಲೋಕ’, `ಅವಳ ತ್ಯಾಗ ಅನುಪಮ’, `ಕಲ್ಪನೆ ನೀನು ವಾಸ್ತವ ನಾನು’, `ಸೌಮ್ಯ ನಾನು ಸೌಮ್ಯಿ ನೀನು’,`ನಾದ ಸುಧೆಯ ಸಿರಿ’, `ಒಳಿತೆನೆಸಗುವುದೇ ನಮ್ಮ ಅಭಿಲಾಶೆಯಾಗಲಿ’- ಇಲ್ಲಿನ ರಚನೆಗಳ ನಮೂನೆ ಇಂತಿವೆ.

ಕಂಡದ್ದಕ್ಕೆ ಅನುಭವಿಸಿದ್ದಕ್ಕೆ ತನ್ನೊಳಗಿನಿಂದ ಮಾತುಗಳನ್ನು ಹುಟ್ಟಿಸಿಕೊಳ್ಳದಿರುವ ಕವಿಗೆ ಹೊರಗೆ ಸಿದ್ಧವಾಗಿರುವ ಪದಗಳನ್ನು ಒದಗಿಸಿಕೊಳ್ಳುವುದರಲ್ಲಿಯೇ ಹೆಚ್ಚು ಆಸಕ್ತಿ ಇದ್ದಂತಿದೆ.

ಅಸೀಮ ರೂಪಿ, ಈಂಟು, ಅಸದಳ, ತಿಮಿರ, ಅದಮ್ಯ, ಘೇರಾಯಿಸು, ವಿಜಯೀಭವ, ದವಳಾಂಜಲಿ, ಬಕುಳೆ, ಸ್ಫುರದ್ಗೀತ, ಅಳಲಹೊಳೆ, ಚೆಲುವಿನ ಚಿತ್ತಾರ, ಓಜೆ, ಅನುಬಂಧ, ಕಿಂಕಿಣಿ, ಸೌಶೀಲ್ಯ, ಮಧುರ, ನೈರಾಶ್ಯೆ, ಹೃದಯಚಿತ್ತಾರ, ಆಚಂದ್ರಾರ್ಕ, ನಾಟ್ಯಸಿರಿ, ಅಂತರಾತ್ಮ…, ಇಂಥ ಅಪಾರವಾದ ಪದಪುಂಜವನ್ನು ಕವಿ ಬಳಸುತ್ತಾರೆ.

ನಮ್ಮ ವರ್ತಮಾನದಲ್ಲಿ ಬಿರುಸಿನಿಂದ ಓಡಾಡುವ ದೇಶ, ದೇಶಿ, ದೇಶೀಕರಣ, ಸಂಸ್ಕೃತಿ, ಸಮುದಾಯ, ಕೋಮುಗಲಭೆ, ಜಾಗತೀಕರಣ, ಧರ್ಮ ಇತ್ಯಾದಿಗಳನ್ನು ಕವಿ ಸಾಲಾಗಿ ತಂದಿಡುತ್ತಾರೆ. `ಸೌಹಾರ್ದ-ಸಾಮರಸ್ಯ’ ರಚನೆಯನ್ನು ಗಮನಿಸಿ.

ಕೋಮುಗಲಭೆ ಮಾನವೀಯತೆ ಹತ್ಯೆ
ಧೂಳಿಪಟವಾಗುತ್ತಿದೆ ಎಲ್ಲ ಮೌಲ್ಯ
ಸ್ನೇಹ-ಪ್ರೀತಿ ಈಗ ಒಡೆದ ಹಾಲು
ದ್ವೇಷ ಈರ್ಶೆ ಎಲ್ಲೆಲ್ಲೂ ಸಾಲು ಸಾಲು

`ಮಹಾಕವಿ ಕುವೆಂಪು: ಕನ್ನಡದ ಶೃಂಗ ಶಿಖರ’ ಶೀರ್ಷಿಕೆಯ ರಚನೆಯನ್ನು ಗಮನಿಸಬೇಕು. ಈ ರಚನೆ ಮುಗಿಯುವುದು ಹೀಗೆ:

ಕುವೆಂಪು ನೀವೇನೆ ಪುರುಷೋತ್ತಮ! ನಿಮ್ಮ ಬರಹ ಸಹೃದಯನಿಗೆ ಹೃದಯಂಗಮ!

ಇನ್ನೊಂದು ರಚನೆ ಗಮನಿಸಿ:
ಅನುಕ್ಷಣವು ಶರಣೆನುವೆ: ಅನುದಿನವೂ ಶರಣೆನುವೆ
ಸಿದ್ಧಗಂಗೆ ಸಿದ್ಧಿಯೋಗಿಗೆ ಭಕ್ತಿಯಲ್ಲಿ ಶರಣೆನುವೆ: ಪ್ರೀತಿಯಲಿ ಶರಣೆನುವೆ
ಶಿವರೂಪಿ ಧರ್ಮಗುರುವುಗೆ

ಈ ರೀತಿಯ ವಂದನಾ ಸಲ್ಲಿಕೆ `ಕೆಂಪೇಗೌಡರ ಗುಣಗಾನ’, `ಬುದ್ಧ: ಬೆಳಕಿನಹಾದಿ’, `ಅಕ್ಕರೆಯ ಅಣ್ಣ ಕೆ.ವಿ. ಸುಬ್ಬಣ್ಣ’- ರಚನೆಗಳಲ್ಲಿಯೂ ಕಾಣಬಹುದು.

ನೋಡಿದ್ದು ಅನುಭವಿಸಿದ್ದು ಏನೋ ಇದೆಯಾದರೂ ಕವಿಗೆ ಯಾವುದನ್ನು ಮುಟ್ಟಿ ಮಿಡಿಸುವ ಮನಸ್ಸಿಲ್ಲವಾದರೂ ಎಲ್ಲವನ್ನು ಹೇಳಿ ಮುಗಿಸಿಬಿಡಬೇಕು ಎಂಬ ನಿರ್ಧಾರವಿದೆ. ಹೆಸರಿಸುವುದು, ಭಾವದ ಹೆಸರಿಡುವುದು, ಏನೇನಾಗುತ್ತಿದೆ ತೋರಿಸುವುದು, ತನ್ನ ಬಗೆಗೇ ಮರುಗುವುದು, ಬದಲಾಗಲಿ ಸಮಾಜ ಎನ್ನುವ ಇಲ್ಲಿನ ಯಾವುದೇ ರಚನೆ ಅಚ್ಚಾದ ಪದ ಸಮುಚ್ಚಯವಾಗಿ ಮಾತ್ರವೇ ತೋರುವುದರಿಂದ ಕವಿತೆ-ಭಾವಗೀತೆ ಎಂದು ಹೇಳಲು ಸಾಧ್ಯವಾಗದು.

`ಕವಿತೆ ಕಟ್ಟುವ ಕಾಯಕ’ (ಡಾ ಕೆ.ವಿ. ನಾರಾಯಣ), `ಸ್ನೇಹನುಡಿ’ (ಸು.ರುದ್ರಮೂರ್ತಿ ಶಾಸ್ತ್ರಿ), `ಗೀತೆಗಳ ಗುಂಗು ದೇಸೀ ಸೊಬಗು’ (ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್), `ದೊಡ್ಡರಂಗೇಗೌಡರ ಕವಿತೆಗಳ ಅಂತರಂಗದ ಧ್ವನಿ’ (ಡಿ.ಎಸ್.ಶ್ರೀನಿವಾಸ ಪ್ರಸಾದ್)- ಈ ಬರಹಗಳು ಇಲ್ಲಿನ ರಚನೆಗಳ ನೆಪದಲ್ಲಿ ಆಡಿರುವ ಮಾತುಗಳು ಕವಿಯನ್ನೇ ಆಲಂಗಿಸಲು ಮುಂದಾಗಿರುವುದರಿಂದ ಇವು ಕವಿತೆಯಲ್ಲ ಎಂದು ಹೇಳುವುದನ್ನೇ ಮರೆತಿವೆ.

-ಆರ್. ಸುಧೀಂದ್ರ ಕುಮಾರ್

ಶೀರ್ಷಿಕೆ: ಅಸೀಮ ರೂಪಿ ಲೇಖಕರು: ಡಾ. ದೊಡ್ಡರಂಗೇಗೌಡ, ಪ್ರಕಾಶನ : ಜ್ಞಾನಪೀಠ ಪ್ರಕಾಶನ, ಬೆಂಗಳೂರು ಪುಟ:368; ಬೆಲೆ: ರೂ. 250/-
ಕೃಪೆ : ಪ್ರಜಾವಾಣಿ

ಛಾಯಾಗ್ರಾಹಕ ಜಂಬುಕೇಶ್ವರ ಅಭಿನಂದನ ಗ್ರಂಥ

ಕರ್ನಾಟಕದ ಛಾಯಾಗ್ರಾಹಕರಾದ ಎಸ್. ಎಂ. ಜಂಬುಕೇಶ್ವರ ಅವರ ಕುರಿತಂತೆ ಹೊರತರಲಾದ ಅಭಿನಂದನ ಗ್ರಂಥವಿದು. ಛಾಯಾಗ್ರಹಣ ಮಾತ್ರವಲ್ಲ ಜಂಬುಕೇಶ್ವರ ಕಲಾವಿದರೂ ಕೂಡಾ. ಅವರು ಜಲವರ್ಣ, ತೈಲವರ್ಣದಲ್ಲಿ ಚಿತ್ರಗಳನ್ನು ಬಿಡಿಸುವುದರ ಮೂಲಕ ಸಾಕಷ್ಟು ಸಾಧನೆ ಮಾಡಿದ್ದಾರೆ. ಆದರೆ, ಬಹುಮುಖ್ಯವಾಗಿ ಅವರನ್ನು ಗುರುತಿಸುವುದು ಛಾಯಾಗ್ರಾಹಕರೆಂದೇ.

ಈ ಅಭಿನಂದನ ಗ್ರಂಥದ ಮುಖ್ಯ ಅಂಶ ಜಂಬುಕೇಶ್ವರ ಅವರು ತಮ್ಮ ಬದುಕಿನ ಕುರಿತಂತೆ ವಿವರಗಳನ್ನು ಕೊಡುತ್ತದೆ. ಇದರ ಮುಂದುವರಿಕೆಯಾಗಿ ಅವರ ಪತ್ನಿ, ಮಗ, ಗೆಳೆಯರು, ಆತ್ಮೀಯರು ಬರೆದಿದ್ದಾರೆ. ಇದಲ್ಲದೆ ಜಂಬುಕೇಶ್ವರ ಅವರು ತೆಗೆದ ಅಪರೂಪದ ಛಾಯಾಚಿತ್ರಗಳು ಇವೆ. ಇನ್ನುಳಿದ ಭಾಗಗಳು ಚಿತ್ರಕಲೆ, ಛಾಯಾಚಿತ್ರ, ಪತ್ರಿಕೋದ್ಯಮ ಕುರಿತಂತೆ ಲೇಖನಗಳನ್ನು ಒಳಗೊಂಡಿದೆ. ಇವೆಲ್ಲ ಬರಹಗಳು ಜಂಬುಕೇಶ್ವರ ಅವರ ಆಸಕ್ತಿಯ ಮತ್ತು ಅವರು ಸಾಕಷ್ಟು ಕೆಲಸ ಮಾಡಿದ ಕ್ಷೇತ್ರಗಳಾಗಿವೆ. ಇದರಲ್ಲಿನ ಮುಖ್ಯ ಲೇಖನ `ಛಾಯಾಚಿತ್ರ ಪತ್ರಿಕೋದ್ಯಮ’ (ಟಿ. ಎಸ್. ಸತ್ಯನ್) ಎಂಬುದು. ಇಂಥ ವಿಶೇಷ ಲೇಖನಗಳಿಂದ ಈ ಪುಸ್ತಕ ವ್ಯಕ್ತಿಯೊಬ್ಬನ ಸಾಧನೆಯ ಭಜನೆಯಾಗದೆ ಅರ್ಥಪೂರ್ಣವಾದ ದಾಖಲೆಯಾಗಿದೆ ಎನ್ನಬಹುದು.

ಶೀರ್ಷಿಕೆ: ಬಹುಮುಖಿ (ಎಸ್.ಎಂ.ಜಂಬುಕೇಶ್ವರ ಅಭಿನಂದನಾ ಗ್ರಂಥ) ಪ್ರಧಾನ ಸಂಪಾದಕ: ಜಿ.ಎಸ್.ಭಟ್ಟ ಸಂ:ಎಸ್.ಶಿವಲಿಂಗಪ್ಪ ಪ್ರಕಾಶಕರು: ಅಭಿನಂದನಾ ಸಮಿತಿ, ಸರಸ್ವತಿಪುರಂ, ಮೈಸೂರು ಪುಟಗಳು:323 ಬೆಲೆ:ರೂ.200/-

ಕೃಪೆ : ಪ್ರಜಾವಾಣಿ

ಒಂದು ಅಸಮಗ್ರ ಆತ್ಮಕಥನ

 

ಹಿರಿಯ ಕವಿ ಜಿ. ಎಸ್. ಶಿವರುದ್ರಪ್ಪ ತಮ್ಮ ಆತ್ಮಕಥೆಯನ್ನು ಪ್ರಕಟಿಸಿದ್ದಾರೆ. ಬಹು ಹಿಂದೆಯೇ ಪ್ರಕಟವಾದ ಈ ಪುಸ್ತಕ ಈಗ ಮೂರನೆಯ ಮುದ್ರಣವನ್ನು ಕಂಡಿದೆ. ಇದನ್ನು ಜಿ. ಎಸ್. ಎಸ್. `ಒಂದು ಅಸಮಗ್ರ ಆತ್ಮಕಥನ’ ಎಂದು ಕರೆದುಕೊಂಡಿದ್ದಾರೆ. ಏಕೆಂದರೆ ಕವಿಗಳೇ ಹೇಳಿಕೊಂಡಂತೆ, `ನನ್ನನ್ನು ಕುರಿತು ನಾನು ನಿಸ್ಸಂಕೋಚವಾಗಿ ಹೇಳಿಕೊಳ್ಳಲಾಗದ ಅನೇಕ ನಿರ್ಬಂಧಗಳಲ್ಲಿ – ಅವು ವೈಯಕ್ತಿಕವಾಗಿರಬಹುದು, ಸಾಮಾಜಿಕವಾಗಿರಬಹುದು, ಸಾಂಸ್ಕೃತಿಕವಾಗಿರಬಹುದು – ನಾನು ಹಾಗೂ ನನ್ನಂಥವರು ಬದುಕುತ್ತಿದ್ದೇವೆ ಎಂಬ ಕಾರಣದಿಂದ; ಮತ್ತು ಒಬ್ಬ ಸೃಜನಶೀಲ ಲೇಖಕ ವಾಸ್ತವವಾಗಿ ತನ್ನ ಬರಹಗಳಲ್ಲೇ ತನ್ನ ನಿಜವಾದ ಆತ್ಮಕತೆಯನ್ನು ಬರೆದುಕೊಂಡಿರುತ್ತಾನೆ ಎಂದು ನಾನು ತಿಳಿದುಕೊಂಡಿರುವುದರಿಂದ” ಎಂದಿದ್ದಾರೆ.

 ಇದೇನೇ ಇದ್ದರೂ ಕನ್ನಡದಲ್ಲಿ ಆತ್ಮಕಥನಗಳು ಕುತೂಹಲಕಾರಿಯಾದ ಸಾಂಸ್ಕೃತಿಕ ದಾಖಲೆಗಳಾಗಿವೆ. ಅವು ತಮ್ಮ ಆತ್ಮಕಥೆಯನ್ನು ನಿರೂಪಿಸುವುದರೊಂದಿಗೆ ರಾಜಕೀಯವಾದ, ಸಾಮಾಜಿಕವಾದ ಕಥೆಯನ್ನೂ ಏಕಕಾಲದಲ್ಲಿ ಹೇಳುತ್ತಿರುತ್ತವೆ. ಈ ದೃಷ್ಟಿಯಲ್ಲಿ ಜಿ.ಎಸ್.ಎಸ್. ಅವರ ಕುರಿತಂತೆ ಪೂರ್ಣವಾದ ಚಿತ್ರವನ್ನೇನೂ ಕೊಡುವುದಿಲ್ಲ. ಅವೆಲ್ಲ ಚೂರುಪಾರು ಚಿತ್ರಗಳೇ. ಅವನ್ನೆಲ್ಲ ಪೂರ್ಣ ಮಾಡುವಂಥ ಸಮಗ್ರ ಆತ್ಮಕಥೆಯನ್ನು ನಾವು ಜಿ.ಎಸ್.ಎಸ್. ರಿಂದ ನಿರೀಕ್ಷಿಸಬಹುದು.

 ಶೀರ್ಷಿಕೆ: ಚತುರಂಗ (ಒಂದು ಅಸಮಗ್ರ ಆತ್ಮಕಥನ) ಲೇಖಕರು : ಜಿ. ಎಸ್. ಶಿವರುದ್ರಪ್ಪ ಪ್ರಕಾಶಕರು : ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ಪುಟಗಳು: 87 ಬೆಲೆ: ರೂ. 40/-

ಕೃಪೆ: ಪ್ರಜಾವಾಣಿ

ಸರಳ ಸುಲಭ ರಚನೆಯ ಕವನಗಳು

ಸುಮಾರು 97 ಕವಿತೆಗಳನ್ನು ತಮ್ಮ ಕವನ ಸಂಗ್ರಹ `ಸ್ವಗತ ದಲ್ಲಿ ನೀಡಿದ್ದಾರೆ ಎಸ್. ಪ್ರಸಾದಸ್ವಾಮಿ. ಸರಳವಾಗಿ ಬರೆಯುವುದನ್ನು ತಮ್ಮ ಉದ್ದೇಶವನ್ನಾಗಿ ಉಳ್ಳ ಕವಿ ಸರಳ ಸುಲಭ ರಚನೆಗಳನ್ನು ಇಲ್ಲಿ ನೀಡಿದ್ದಾರೆ.

`ಒಲುಮೆ ಗಿಲುಮೆಯ ಮಾತು ಅಲ್ಲಿರಲಿ ಈಗನೀ ಹೆಣ್ಣು ನಾ ಗಂಡು ಅಷ್ಟೆ ಸಾಕು(

ನಲ್ಲೆಗೆ/ ೨೧) ಎಂದು ಬರೆದಿರುವುದು ಅವರ ಸರಳವಾಗಿ ಕವಿತೆಗಳನ್ನು ಹೇಳುವುದಕ್ಕೆ ಉದಾಹರಣೆಯಾಗಬಹುದು.`

ಕಾವ್ಯದ ಲಯದಲ್ಲಿ ನೀವು ತುಂಬ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.., ಅಡಿಗ, ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬ ಅರ್ಥಪೂರ್ಣವಾಗಿ ದುಡಿಸಿಕೊಂಡಿದ್ದೀರಿಎಂದು ಪುಸ್ತಕದ ಹಿನ್ನುಡಿಯಲ್ಲಿ ವಿಮರ್ಶಕ ಜಿ. ರಾಜಶೇಖರ ಬರೆದಿದ್ದಾರೆ. ಓದುಗರನ್ನು ಮುಟ್ಟುವ ಉದ್ದೇಶ ಹೊಂದಿರುವ ಕವಿ ಮಾತುಗಾರಿಕೆಯನ್ನು ಕಡಿಮೆ ಮಾಡಿ ಕಾವ್ಯ ಅಂಶದ ಕಡೆಗೆ ಗಮನ ಕೊಡುವ ಅಗತ್ಯ ಎನ್ನುವುದು ಕವಿತೆಗಳನ್ನು ಓದಿದಾಗ ಕಂಡು ಬರುವ ಅಂಶ.

ಶೀರ್ಷಿಕೆ: ಸ್ವಗತ (ಕವಿತೆಗಳು) ಲೇಖಕರು: ಡಾ. ಎಸ್. ಪ್ರಸಾದಸ್ವಾಮಿ ಪ್ರಕಾಶಕರು: ಅವಿರತ ಪುಸ್ತಕ ನಂ.70, 9ನೇ ತಿರುವು, 1ನೇ ಮುಖ್ಯರಸ್ತೆ, ಬಿಡಿಎ ಬಡಾವಣೆ, ಆವಲಹಳ್ಳಿ ಬೆಂಗಳೂರು 560 085 ಪುಟಗಳು:132 ಬೆಲೆ:ರೂ.70/-

ಕೃಪೆ: ಪ್ರಜಾವಾಣಿ

 

ಶಂಕರ ಮೊಕಾಶಿ ಪುಣೇಕರ ಅವರ ಬರಹಗಳು

scan0001

‘ಅವಧೇಶ್ವರಿ’, `ಗಂಗವ್ವ ಗಂಗಾಮಾಯಿ’,`ನಟ ನಾರಾಯಣ’ ದಂಥ ಕನ್ನಡದ ಪ್ರಮುಖ ಕಾದಂಬರಿಗಳನ್ನು ಬರೆದ ಶಂಕರ ಮೊಕಾಶಿ ಪುಣೇಕರ ಅನನ್ಯ ಒಳನೋಟಗಳ ವಿಮರ್ಶಕರೂ ಆಗಿದ್ದರು. ಅವರು ಭಾರತೀಯ ಸಂಸ್ಕ್ರತಿಯನ್ನು ಅಭ್ಯಸಿಸಿ ಬರೆದ ಲೇಖನಗಳು, ಕನ್ನಡ ಸಾಹಿತ್ಯದ ಕುರಿತಾದ ಅವರ ಲೇಖನಗಳು, ಕನ್ನಡ ಸಾಹಿತ್ಯದ ಕುರಿತಾದ ಅವರ ಲೇಖನಗಳು ತಮ್ಮ ವಿಶಿಷ್ಠ ಒಳನೋಟಗಳಿಂದಾಗಿಯೇ ಗಮನ ಸೆಳೆಯುತ್ತವೆ.

ಇಂಥ ಲೇಖಕನ ಲೇಖನಗಳನ್ನು ಒಂದೆಡೆ ತಂದಿದ್ದಾರೆ ಜಿ.ಬಿ.ಹರೀಶ್. ಇದರೊಂದಿಗೆ ಸುಮತೀಂದ್ರ ನಾಡಿಗ್, ಮಲ್ಲೇಪುರಂ ಜಿ. ವೆಂಕಟೇಶ್, ರಹಮತ್ ತರೀಕೆರೆಯವರು ಮಾಡಿದ ಅವರ ವ್ಯಕ್ತಿತ್ವವನ್ನು ಇಡಿಯಾಗಿ ಪ್ರಕಟಿಸುವ ಸಂದರ್ಶನಗಳನ್ನು ಗಮನಿಸಬಹುದು. ಇಲ್ಲಿ ಕೆಲವು ಕನ್ನಡದ ಕೃತಿಗಳ ಕುರಿತಾಗಿ ಮೊಕಾಶಿಯವರು ಬರೆದ ಬರಹಗಳೂ ಇವೆ.

ಮೊಕಾಶಿಯವರ ಲೇಖನಗಳಿಗೆ ವಿಭಿನ್ನವಾದ ವಿಮರ್ಶಾತ್ಮಕ ನೋಟಗಳು ಇವೆ. ಅದು ಅವರ `ವೇದ ಪುರಾಣ – ಮಹಾಕಾವ್ಯ’, `ಕಾವ್ಯದಲ್ಲಿ ಸ್ಮೃತಿ, ಬುದ್ಧಿ ಹಾಗೂ ಸಾಂಗತಿಕ ಪ್ರಜ್ಞೆ’, `ಭಾಷಾ ಬೋಧನೆಯಲ್ಲಿ ಚಾಮ್ ಸ್ಕಿ – ಸ್ಕಿನ್ನರ‍್ ಪ್ರಾಯೋಗಿಕ ವಿಧಾನ’ದಂತಹ ಅನೇಕ ಲೇಖನಗಳಲ್ಲಿ ಕಾಣುತ್ತದೆ. ಶಂಕರ ಮೊಕಾಶಿ ಪುಣೇಕರರ ಲೇಖನಗಳನ್ನು ಓದುವುದೆಂದರೆ ಅದೊಂದು ಬೇರೆಯಾದ ದರ್ಶನವನ್ನು ನೀಡುವ ಪ್ರಯಾಣವೇ

ಶೀರ್ಷಿಕೆ: ನೀರಬೆಳಗು (ಶಂಕರ ಮೊಕಾಶಿ ಪುಣೇಕರ ಅವರ ಬರಹಗಳು) ಸಂ:ಜಿ.ಬಿ.ಹರೀಶ ಪ್ರಕಾಶಕರು:ಸಪ್ನ ಬುಕ್ ಹೌಸ್ ಪುಟ:360 ಬೆಲೆ:ರೂ.175/-

ಕೃಪೆ: ಪ್ರಜಾವಾಣಿ

ಸಣ್ಣ ಕತೆ; ಸ್ವರೂಪ-ಚಿಂತನೆ

kalpita vasthava1

ಸಣ್ಣಕತೆ ಹೊಸಗನ್ನಡ ಸಾಹಿತ್ಯದಲ್ಲಿ ಒಂದು ಪ್ರಕಾರವಾಗಿ ರೂಪುಗೊಂಡಿದ್ದರೂ ಕತೆಯನ್ನು ಹೇಳುವ ಪರಂಪರೆ ಹೊಸದೇನೂ ಅಲ್ಲ. ಇಂಗ್ಲೀಷ್ ಸಾಹಿತ್ಯದ ಪರಿಚಯದಿಂದ ಸಣ್ಣಕತೆಯ ಮಾದರಿ ಹುಟ್ಟಿಕೊಂಡಿದೆ ಎಂದು ವಿಮರ್ಶಕರು ಪರಿಭಾವಿಸಿಕೊಂಡು ಬಂದಿದ್ದಾರೆ. ಅಂಥ ಗ್ರಹಿಕೆಯಿಂದ ಇಪ್ಪತ್ತನೆಯ ಶತಮಾನದ ಆರಂಭದಿಂದ ಇದುವರೆಗೆ ಬಂದಿರುವ ಕಥಾ ಸಾಮಾಗ್ರಿಯನ್ನು ನೋಡಲಾಗುತ್ತಿದೆ. ಗಿರಡ್ಡಿ ಗೋವಿಂದರಾಜ ಅವರ ವಿಮರ್ಶಾ ಲೇಖನಗಳ ಸಂಗ್ರಹ `ಕಲ್ಪಿತ ವಾಸ್ತವ: ಕನ್ನಡ ಸಣ್ಣಕತೆ’ ಇದೇ ಜಾಡಿನಲ್ಲಿ ಸಾಗಿರುವ ಚಿಂತನೆ. ಗಿರಡ್ಡಿ ಗೋವಿಂದರಾಜ `ಇಂದಿನ ಸಣ್ಣ ಕತೆ ನಮ್ಮ ಪ್ರಾಚೀನ ಕಥಾಪರಂಪರೆಯ ಸಹಜ ಬೆಳವಣಿಗೆಯ ಫಲವಲ್ಲ; ಪಶ್ಚಿಮದ ಆಧುನಿಕ ಸಣ್ಣ ಕತೆಯ ಸಂಪರ್ಕದಲ್ಲಿ ನಾವು ಬಂದಿರದಿದ್ದರೆ ಈಗಿನ ರೂಪದ ಸಣ್ಣಕತೆ ನಮ್ಮಲ್ಲಿ ಹುಟ್ಟುತ್ತಿರಲಿಲ್ಲ’ ಎಂದು ಸ್ಪಷ್ಟವಾಗಿಯೇ ಹೇಳಿ ತಮ್ಮ ಚಿಂತನೆಯ ದಿಕ್ಕನ್ನು ಖಚಿತಪಡಿಸಿದ್ದಾರೆ. ಇಲ್ಲಿನ ಎಲ್ಲ ೧೪ ಲೇಖನಗಳಲ್ಲಿಯೂ ಕನ್ನಡ ಸಣ್ಣಕತೆ ಬೆಳವಣಿಗೆ ಕುರಿತಾಗಿ ಅವರ ವಿವರ ವಿಶ್ಲೇಷಣೆ, ತೀರ್ಮಾನಗಳಿವೆ.

೪೫ ವರ್ಷಗಳ ಕಾಲಾವಧಿಯಲ್ಲಿ ಬರೆದಿರುವ ಇಲ್ಲಿನ ಲೇಖನಗಳಲ್ಲಿ ಕನ್ನಡ ಸಣ್ಣ ಕತೆಯ ಬೆಳವಣಿಗೆಯ ವಿವಿಧ ಹಂತಗಳನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ ಎಂಬ ವಿವರಣೆಯೂ ಇದೆ. ಲೇಖನಗಳಲ್ಲಿ ವ್ಯತ್ಯಾಸಗಳೂ ಅಭಿಪ್ರಾಯಭೇದಗಳೂ, ಮೊದಲಿನ ನಿಲುವಿಗೆ ತಿದ್ದುಪಡಿಗಳೂ ಆಗಿರುವುದನ್ನು ದಾಖಲಿಸಲಾಗಿದೆ. ಮಾಸ್ತಿಯವರನ್ನು ಕನ್ನಡದ ಸಣ್ಣ ಕತೆಯ ಯುಗಪ್ರವರ್ತಕರೆಂದು ಗುರುತಿಸಿರುವ ಗಿರಡ್ಡಿಯವರು ತಮಗೆ ಮುಖ್ಯವೆನಿಸಿದೆ ಆನಂದ, ಬಾಗಲೋಡಿ ದೇವರಾಯ, ಶಾಂತಾದೇವಿ ಕಣವಿ, ಶಾಂತಿನಾಥ ದೇಸಾಯಿ, ಜಯಂತ ಕಾಯ್ಕಿಣಿ, ಸುರೇಂದ್ರನಾಥ ಅವರ ಕತೆಗಳ ಕುರಿತಾಗಿ ವಿಸ್ತೃತವಾಗಿ ವಿಶ್ಲೇಷಣೆ ನಡೆಸಿದ್ದಾರೆ. ವ್ಯಾಪಕ ಅಧ್ಯಯನದ ಹಿನ್ನೆಲೆ ಇರುವ ಗಿರಡ್ಡಿ ಕನ್ನಡ ಸಣ್ಣಕತೆ ಬೆಳೆದು ಬಂದ ಬಗೆಯನ್ನು ವಿವರವಾಗಿ ದಾಖಲಿಸಿದ್ದಾರೆ.

`ಮರೆಯಬಾರದ ಹಳೆಯ ಕತೆಗಳು’  ಮಾಲಿಕೆಯಲ್ಲಿ ಅವರು ಪಂಜೆ, ಕೇರೂರರು, ಎಮ್.ಎನ್. ಕಾಮತ್, ಎಸ್.ಜಿ.ಶಾಸ್ತ್ರಿ , ಕೊರಡ್ಕಲ್, ಎ.ಆರ‍್.ಕೃಷ್ಣಶಾಸ್ತ್ರಿ, ಕುಲಕರ್ಣಿ ಶ್ರೀನಿವಾಸ, ಕಡಂಗೋಡ್ಲು, ಕೃಷ್ಣಕುಮಾರ ಕಲ್ಲೂರ, ಪ.ರಮಾನಂದ, ವಿ.ಜಿ.ಶ್ಯಾನಬಾಗ, ಶ್ರೀಸ್ವಾಮಿ, ಹ.ಪಿ.ಜೋಷಿ, ಸೇಡಿಯಾಪು ಕೃಷ್ಣಭಟ್ಟ, ನವರತ್ನ ರಾಮರಾಯ, ಟೇಂಗ್ಸೆ ಗೋವಿಂದರಾಯ, ಕ್ಷೀರಸಾಗರ, ಬೇಂದ್ರೆ, ಹೊಯಿಸಳ, ಮೇವುಂಡಿ ಮಲ್ಲಾರಿ, ಟಿ.ಎಸ್.ಸಂಜೀವರಾಯ, ಭಾರತೀಪ್ರಿಯ ಮೊದಲಾಗಿ 28 ಕತೆಗಾರರ ವ್ಯಕ್ತಿತ್ವ-ಕೃತಿ ಪರಿಚಯಗಳನ್ನು ಮಾಡಿಕೊಟ್ಟಿದ್ದಾರೆ.

ಇಲ್ಲಿನ ಮೂರು ಲೇಖನಗಳು ಕನ್ನಡ ಸಣ್ಣಕತೆ ನಿರ್ದಿಷ್ಟ ಕಾಲಘಟ್ಟದಲ್ಲಿ ಸಾಗಿಬಂದ ಮಜಲುಗಳನ್ನು ಪರಿಚಯಿಸುತ್ತವೆ. ಇದು ಕಳೆದ ಶತಮಾನದ 90 ರ ದಶಕದವರೆಗಿನ ಕಾಲಘಟ್ಟಕ್ಕೆ ನಿಂತುಹೋಗಿರುವುದನ್ನು ಗಮನಿಸಬಹುದಾಗಿದೆ. ಸಾಹಿತ್ಯ ಚರಿತ್ರಕಾರರು ನವೋದಯ, ನವ್ಯ ಎಂದು ಸ್ಥೂಲವಾಗಿ ಹೇಳುವ ಕಾಲಾವಧಿಯ ಲೇಖಕರು ಮಾತ್ರವೇ ಇಲ್ಲಿ ಪರಿಶೀಲನೆಗೆ ಒಳಗಾಗಿದ್ದಾರೆ. ಹೊಸ ಪೀಳಿಗೆಯ ನೂರಾರು ಬರಹಗಾರರು ಪ್ರವೇಶ ಪಡೆಯುತ್ತಿರುವ ನವ್ಯೋತ್ತರ ಕಾಲದ ಯಾವೊಬ್ಬ ಲೇಖಕರ ಕಥಾಸಾಹಿತ್ಯ ಕೃಷಿಯ ಬಗ್ಗೆಯೂ ಇಲ್ಲಿ ವಿಸ್ತ್ರತ ಚರ್ಚೆ ನಡೆದಿಲ್ಲ. ಅದಕ್ಕೆ ಸಂಬಂಧಿಸಿ `ಇತ್ತೀಚೆಗೆ ಬರೆಯುತ್ತಿರುವ ಅನೇಕ ಮಹತ್ವದ ಕತೆಗಾರ್ತಿಯರ ಬಗ್ಗೆ, ಕಿರಿಯ ಕತೆಗಾರರ ಬಗ್ಗೆ ಇಲ್ಲಿ ಪ್ರಸ್ತಾಪಿಸಲಾಗಿಲ್ಲ.’ ಎಂಬ ಅರಿವು ತಮಗಿದೆ ಎಂದು ಲೇಖಕರು ಹೇಳಿಕೊಂಡಿದ್ದಾರೆ.

ತಮ್ಮ ಈ ಸಂಕಲನದಿಂದ ಹೊಸದಾಗಿ ಕತೆಗಳನ್ನು ಬರೆಯುವವರಿಗೆ ಒಂದಿಷ್ಟು ಮಾರ್ಗದರ್ಶನ ಸಿಗಬಹುದೆಂಬ ನಿರೀಕ್ಷೆಯನ್ನು ಗೋವಿಂದರಾಜರು ಪ್ರಕಟಿಸಿದ್ದಾರೆ. ಜೊತೆಗೆ ಇಲ್ಲಿನ ಎಲ್ಲಾ ಲೇಖನಗಳೂ `ತಮ್ಮ ಸಮಗ್ರ ವಿಮರ್ಶೆ’ ಸಂಕಲನ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯ ಹೊರತಂದ ಹೊನ್ನಾರು ಮಾಲಿಕೆಯ `ಪ್ರಮಾಣು’ ಗ್ರಂಥದಲ್ಲಿ ಇರುವುದನ್ನು ತಿಳಿಸಿದ್ದಾರೆ.

ಶೀರ್ಷಿಕೆ: ಕಲ್ಪಿತ ವಾಸ್ತವ: ಕನ್ನಡ ಸಣ್ಣ ಕತೆ ಲೇಖಕರು:ಗಿರಡ್ಡಿ ಗೋವಿಂದರಾಜ ಪ್ರಕಾಶಕರು:ಸಾಹಿತ್ಯ ಪ್ರಕಾಶನ ಪುಟ:352 ಬೆಲೆ:ರೂ.250/-(ಕ್ಯಾಲಿಕೋ) ರೂ.200/-(ಸಾದಾ ಪ್ರತಿ)

ಕೃಪೆ: ಪ್ರಜಾವಾಣಿ