ಎದೆಯ ಹೊಲದಲಿ ಬಿತ್ತಿ ಬೆಳೆವೆವು ಅಮರ ಪ್ರೀತಿಯ ಕಾಳನು

ಕನ್ನಡದ ಮಕ್ಕಳ ರಂಗಭೂಮಿಯಲ್ಲಿ ಡಾ. ಆರ್.ವಿ. ಭಂಡಾರಿ ಆದ್ಯರು. ಮಕ್ಕಳ ಕತೆ, ಕಾದಂಬರಿ, ನಾಟಕ ಯಾವುದೇ ಇರಲಿ ಇವುಗಳ ರಚನೆಯಲ್ಲಿ ಅವರು `ಪ್ರಸಿದ್ಧ’ರಲ್ಲದಿದ್ದರೂ `ಸಿದ್ಧ’ರು. ಮಕ್ಕಳ ರಂಗಭೂಮಿಯ ಚಹರೆ ಇನ್ನೂ ಸ್ಪಷ್ಟವಾಗುತ್ತಿದ್ದ ಕಾಲದಲ್ಲಿಯೇ ಅವರು ಇಂದು ನಾವು ಯಾವುದನ್ನು ಮಕ್ಕಳ ರಂಗಭೂಮಿಯ ಗಂಭೀರ ಪ್ರಯೋಗ ಅನ್ನುತ್ತಿದ್ದೇವೆಯೋ ಅಂತಹ ಮಾದರಿಗಳನ್ನು ರಚಿಸಿದವರು, ಪ್ರಯೋಗಿಸಿದವರು.

ಆರ್.ವಿ. ಮಕ್ಕಳ ನಾಟಕಗಳನ್ನು `ಚಂದಕ್ಕಾಗಿ’ ಬರೆದವರಲ್ಲ. ಅದನ್ನು ಚಂದಗೊಳಿಸಲಿಕ್ಕಾಗಿಯೇ ಕಷ್ಟಪಟ್ಟವರಲ್ಲ. ನಿರ್ದಷ್ಟ `ಆಶಯಗಳು’ ಅದರ ಬೆನ್ನ ಹಿಂದೆಯೇ ಇರುತ್ತದೆ. ಆದರೆ ಅವು ಗೊಂದಲಗೊಳ್ಳದೇ ಸರಳ, ಸಹಜವಾಗಿ ರೂಪಿತವಾಗುತ್ತವೆ. ಹಾಗಾಗಿಯೇ ಅವರ ಎಲ್ಲ ಮಕ್ಕಳ ನಾಟಕಗಳೂ ಪ್ರಯೋಗಿಸಲ್ಪಟ್ಟಿವೆ. `ಬೆಳಕು ಹಂಚಿದ ಬಾಲಕ’, `ಬೆಳಕಿನೆಡೆಗೆ’, `ಉಪ್ಪಿನ ಸತ್ಯಾಗ್ರಹ’, ಮುದುಕನೂ ಹುಲಿಯೂ’ ಇವೆಲ್ಲಾ ಮಕ್ಕಳ ರಂಗಭೂಮಿಯ ಮಹತ್ವದ ದಾಖಲೆಗಳಾಗಿವೆ. ಆಶಯಗಳು ಸುಂದರ ಆಕೃತಿಗಳಾಗಿವೆ.

ಇಲ್ಲಿ ಎರಡು ನಾಟಕಗಳಿವೆ.

`ಪ್ರೀತಿಯ ಕಾಳು’ – ಮನುಷ್ಯನ ಎದೆಗೆ ಪ್ರೀತಿಯನ್ನು ತುಂಬುವ ಮಹತ್ತರ ಆಶಯವನ್ನು ಪಡೆದುದು. ತುಂಬ ಬಳಸಿ ಬಳಸಿ ಕ್ಷೀಷೆಗೊಂಡ ಕಥನ ಕ್ರಮವೊಂದನ್ನು ಆರ್.ವಿ. ಇಲ್ಲಿ ಹೊಸದಾಗಿ ನಿರೂಪಿಸಿದ್ದಾರೆ. ಅದನ್ನು ರೂಪಕವಾಗಿಸಿದ್ದಾರೆ. ಕಾವ್ಯಾತ್ಮಕವಾದ ಸರಳ ಲಯದಲ್ಲಿ ಇಡೀ ನಾಟಕ ಜೀಕುತ್ತದೆ. ರೂಪಾಂತರ ಕ್ರಿಯೆಗೊಂದು ಸೊಗಸಾದ ಉದಾಹರಣೆ ಇದು.

`ಒಂದೇ ಬಣ್ಣದ ಹಕ್ಕಿಗಳು’ – ಬಾಲ ಕಾರ್ಮಕರ ಬದುಕನ್ನು ಕುರಿತದ್ದು. ಹದಗೆಟ್ಟ ಬದುಕಿನಲ್ಲಿ ಆದರ್ಶದ ಹೆಜ್ಜೆಗಳ ಇಡುವ, ಬದುಕಿನ ಅಮೃತಕ್ಕೆ ಹೆಣಗುವ ಗರುಡನ ಕಥೆ ಇದು.

ಈ ಎರಡು ನಾಟಕಗಳೂ ಹಸಿವಿನ ಕುರಿತು ಮಾತನಾಡುತ್ತವೆ. ಅದು ಪ್ರೀತಿಯ ಹಸಿವಾಗಿರಬಹುದು ಅಥವಾ ಅನ್ನದ ಹಸಿವಾಗಿರಬಹುದು. ಆಳದಲ್ಲಿ ಪ್ರೀತಿಗೂ ಅನ್ನಕ್ಕೂ ಇರುವ ಒಳ ಸಂಬಂಧವನ್ನು ನಾಟಕ ಧ್ವನಿಸುತ್ತದೆ. ಇವುಗಳಲ್ಲಿ ಆದರ್ಶವಿದೆ, ಕನಸಿದೆ. ತತ್ಕಾಲದಲ್ಲಿ ನನಸಾಗದ ಆದರೆ ಭವಿಷ್ಯದಲ್ಲಿ ಬದುಕನ್ನು ಧನಾತ್ಮಕವಾಗಿ ಕಾಣುವ ಹಂಬಲವಿದೆ. ಅದನ್ನು ತಲುಪುವ ದಾರಿಯ ಕುರಿತು ಉದ್ದೇಶಿತ ನಿಲುವಿದೆ. ಹಾಗಾಗಿ ಇದು ಓದುಗನನ್ನೂ/ನೋಡುಗನನ್ನೂ ಚಿಂತನೆಗೆ ಹಚ್ಚುತ್ತದೆ.

ಡಾ.ಆರ್.ವಿ. ಇರುವುದೇ ಇಲ್ಲಿ.

ಎಂದು ಶ್ರೀ ಪಾದ ಭಟ್ ಅವರ ಬೆನ್ನುಡಿ ಹೊಂದಿರುವ ಈ ಪುಸ್ತಕದಲ್ಲಿ ನಾಟಕಕ್ಕೆ ಹೊಂದುವ ರೇಖಾಚಿತ್ರಗಳು ಪುಸ್ತಕದ ಚಂದವನ್ನು ಹೆಚ್ಚಿಸಿವೆ.

ಶೀರ್ಷಿಕೆ: ಬಣ್ಣದ ಹಕ್ಕಿ(ಮಕ್ಕಳಿಗಾಗಿ ಎರಡು ನಾಟಕಗಳು) ಲೇಖಕರು:ಆರ್.ವಿ.ಭಂಡಾರಿ ಪ್ರಕಾಶಕರು: ಬಂಡಾಯ ಪ್ರಕಾಶನ ಪುಟಗಳು:52 ಬೆಲೆ:ರೂ. 15/-

Advertisements