ಸಮಗ್ರ ನಾಟಕ

ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಏಕಕಾಲಕ್ಕೆ ನಾಟಕ ರಚಿಸುವ ಕನ್ನಡದ ಹೆಸರಾಂತ ನಟ-ನಾಟಕಕಾರ ಗಿರೀಶ ಕಾರ್ನಾಡರ ಸಮಗ್ರ ನಾಟಕಗಳು ಇಂಗ್ಲೀಷ್ನಲ್ಲಿ ಆಕ್ಸ್ ಫರ್ಡ್ ಪ್ರೆಸ್ ನವರು ಪ್ರಕಟಿಸಿದ ನಂತರ ಇದೀಗ ಕನ್ನಡದಲ್ಲೂ ಪ್ರಕಟವಾಗಿದೆ.

ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕಾರ್ನಾಡರು ಇದುವರೆಗೆ ಬರೆದಿರುವ ನಾಟಕಗಳ ಸಂಖ್ಯೆ ಕೇವಲ 11 ಎಂಬುದು ಕೆಲವರಿಗೆ ಅಚ್ಚರಿ ಸಂಗತಿಯಾಗಬಹುದು. ಅವರು ರಚಿಸಿದ 3-4 ನಾಟಕಗಳನ್ನು ಹೊರತುಪಡಿಸಿ ಇತರ ಎಲ್ಲಾ ನಾಟಕಗಳು ಕನ್ನಡ, ಇಂಗ್ಲೀಷ್ ಹಾಗೂ ನಾಲ್ಕಾರು ಭಾರತೀಯ ಭಾಷೆಗಳಲ್ಲಿ ಹಲವು ಪ್ರಯೋಗ ಕಂಡವಷ್ಟೇ ಅಲ್ಲ. ಸಾಕಷ್ಟು ಚರ್ಚೆಗೂ ಒಳಗಾಗಿದ್ದು ಕಾರ್ನಾಡರೂ ನೂರಾರು ನಾಟಕಗಳನ್ನು ರಚಿಸಿರಬಹುದೇನೋ ಎಂಬ ಭಾವನೆ ಮೂಡಿಸಿದ್ದವು.

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವಿಶೇಷ ಯೋಜನೆಯಡಿ ಪ್ರಕಟಣೆಗೆ ಮುಂಚಿತವಾಗಿಯೇ 2,500 ಪುಸ್ತಕಗಳನ್ನು ಖರೀದಿಸಿದೆ. ಪ್ರಯೋಗ ಹಾಗೂ ಪ್ರಕಟಣೆಯ ವಿಷಯದಲ್ಲಿ ಕಾರ್ನಾಡ, ಕಂಬಾರರಂತಹ ಅದೃಷ್ಟವಂತರು ಕನ್ನಡದಲ್ಲಿ ಕಡಿಮೆ.

ಶೀರ್ಷಿಕೆ : ಸಮಗ್ರ ನಾಟಕ ಲೇಖಕರು : ಗಿರೀಶ ಕಾರ್ನಾಡ ಪ್ರಕಾಶಕರು : ಮನೋಹರ ಗ್ರಂಥಮಾಲೆ ಪುಟಗಳು :868 ಬೆಲೆ:ರೂ.500/-

ಕೃಪೆ : ಸುಧಾ

ಸಂಗೀತ ನಾಟಕ ಅದಡಾಮಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ಸಾಹಿತ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಯೇ ಮೊದಲಾದ ಪ್ರಶಸ್ತಿಗಳನ್ನು ತಮ್ಮ ಸಾಹಿತ್ಯ ಸಾಧನೆಗಾಗಿ ಪಡೆದಿರುವ ಗಿರೀಶ ಕಾರ್ನಾಡರು ತಮ್ಮ ಸಿನೆಮಾಗಳಿಗಾಗಿ ಇನ್ನೂ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ತುಘಲಕ್, ನಾಗಮಂಡಲ, ಒಡಕಲು ಬಿಂಬ, ಯಯಾತಿ, ಅಂಜು ಮಲ್ಲಿಗೆ, ಮಾ ನಿಷಾದ, ಟಿಪ್ಪುವಿನ ಕನಸುಗಳು, ತಲೆ ದಂಡ ಮುಂತಾದವು ಅವರ ನಾಟಕಗಳು.

ಕೃಪೆ : http://en.wikipedia.org/wiki/Girish_Karnad

ಈ ಉಪಖಂಡದಲ್ಲಿ ಸ್ತ್ರೀ ದಾಸ್ಯದ ವಿರುದ್ಧ ಮೊದಲು ಬಂಡೆದ್ದವಳು ಮಾಧವಿ.

ಈ ಉಪಖಂಡದಲ್ಲಿ ಸ್ತ್ರೀ ದಾಸ್ಯದ ವಿರುದ್ಧ ಮೊದಲು ಬಂಡೆದ್ದವಳು ಮಾಧವಿ.

`ನಿಯೋಗಪದ್ದತಿ `ಮಹಾಭಾರತದ ಕಾಲದಲ್ಲಿ ರೂಢಿಯಲ್ಲಿತ್ತು. ನಿಯೋಗ ಎಂದರೆ, ಹೆಂಡತಿಯನ್ನು `ಭೂಮಿಯನ್ನಾಗಿ ಮಾಡಿ ಬೇರೊಬ್ಬ ಪುರುಷನಿಂದ ಮಗನನ್ನು ಪಡೆಯುವುದು. ಕುಂತಿಗೆ ಮಕ್ಕಳಾದುದು ಹೀಗೆ. ಮಾಧವಿ ಕೂಡಾ ಮಕ್ಕಳನ್ನು ಪಡೆಯಲು `ಭೂಮಿಯಾಗಿ ಉಪಯೋಗಿಸಲ್ಪಟ್ಟವಳು. ಮೌಲ್ಯಗಳೇ ಸಂಕುಚಿತಗೊಂಡಿದ್ದುದರಿಂದ, ತಾವು ಅಬಲೆಯಾದ ಹೆಂಗಸರನ್ನು ಹಿಂಸಿಸುತ್ತಿದ್ದೇವೆ ಎಂಬ ಭಾವನೆ ಪುರುಷರಿಗೆ ಬರಲಿಲ್ಲ.

ಆಗ ಪುರುಷನ ಕಾಮಪೂರೈಕೆಗೆ ಸ್ತ್ರೀ ಒಂದು ವಸ್ತುವಾಗಿದ್ದಳು. ಅವಳ ಅಲಂಕಾರ ಗಂಡಿನ ಕಣ್ಣಿಗೆ ಅವಳು ಅಂದವಾಗಿ ಕಾಮೋತ್ತೇಜನವಾಗಿ ಕಾಣಬೇಕು ಎಂಬ ಉದ್ಧೇಶದಿಂದಲೇ ಇರುತ್ತಿತ್ತು. ಗಂಡ ತನ್ನ ಹೆಂಡತಿಯನ್ನು ಮಾರಬಹುದಿತ್ತು. ದಾನ ಕೊಡಬಹುದಿತ್ತು. ಹಸುವಿನಂತೆ ಸ್ತ್ರೀಯ ವಿಕ್ರಯ ನಡೆಯುತ್ತಿತ್ತು. ಇದು ಮಗಳಿಗೂ ಅನ್ವಯವಾಗುತ್ತಿದ್ದ ನೀತಿ. ಆದುದರಿಂದಲೇ ಯಯಾತಿ ತನ್ನ ಮಗಳನ್ನು ಅಷ್ಟು ಸುಲಭವಾಗಿ ದಾನವೀಯುತ್ತಾನೆ: ಮತ್ತು ಗಾಲವ ಅವಳನ್ನು ವಿವಿಧ ರಾಜರುಗಳಿಗೆ `ಎರವಲುಕೊಟ್ಟು ತನ್ನ ಗುರುದಕ್ಷಣೆಗೆ ಬೇಕಾದದ್ದನ್ನು ದೊರಕಿಸಿಕೊಳ್ಳುತ್ತಾನೆ.

ಮಾಧವಿ ರಾಜಕುಮಾರಿಯಾಗಿ ಹುಟ್ಟಿದ್ದರೂ ಸಾಮಾನ್ಯ ಸ್ತ್ರೀಯಂತೆಯೇ ಕಷ್ಟನಷ್ಟಗಳನ್ನು ಅನುಭವಿಸಿದವಳು. ಪುರುಷರ ಮತ್ತು ಆಗಿನ ಸಮಾಜದ ದಬ್ಬಾಳಿಕೆಗೆ, ಕ್ರೌರ್ಯಕ್ಕೆ ತುತ್ತಾದವಳು. ಮಾಧವಿಯ ಭಾವನೆಗಳು, ಪ್ರತಿಕ್ರಿಯೆಗಳು, ಎಲ್ಲಾ ಕಾಲದ ಸ್ತ್ರೀಯರೂ ತೋರಿಸುವಂಥವು. ಶೋಷಿತರು ತಮ್ಮ ಪರಿಸ್ಥಿತಿಯ ವಿರುದ್ಧ ಬಂಡೇಳುವುದೂ ಸಹಜವಾದ ಪ್ರತಿಕ್ರಿಯೆ. ಮಾಧವಿ ಹೀಗೆ ಪ್ರತಿಭಟಿಸುವುದನ್ನು ಈ ಕಾದಂಬರಿಯಲ್ಲಿ ಹಲವಾರು ಸಾರೆ ಕಾಣುತ್ತೇವೆ. ಆದರೆ ದಲಿತ ಜನಾಂಗದ ಪ್ರತಿಭಟನೆಯನ್ನು ಶಕ್ತಿವಂತರು ಹತ್ತಿಕ್ಕುವ ಹಾಗೆ ಇಲ್ಲಿಯೂ ಆಗುತ್ತದೆ. ಆತ್ಮಹತ್ಯೆ ಮಾಡಿಕೊಳ್ಳಲೂ ಮಾಧವಿಗೆ ಹಕ್ಕಿರುವುದಿಲ್ಲ. ತಂದೆ ಯಯಾತಿ ಹಸುಕರುಗಳನ್ನು ದಾನ ಮಾಡುವ ಹಾಗೆ ಮಾಧವಿಯನ್ನು ದಾನವಾಗಿ ಕೊಡುತ್ತಾನೆ. ತಾನು ಒಲ್ಲದ ಮುದಿರಾಜನ ಜೊತೆ ಅವಳು ಬಾಳಬೇಕಾಗಿ ಬಂದರೂ, ಆ ಜೀವನದ ಬಗ್ಗೆ ಹೇಸಿಗೆಯಾದರೂ ಆ ಸಮಾಜಧರ್ಮದಿಂದ ಅವಳಿಗೆ ಬಿಡುಗಡೆಯಿಲ್ಲ. ಕಡೆಯಲ್ಲಿ ಯಯಾತಿ `ನಿನಗಿಷ್ಟ ಬಂದವರನ್ನು ಆರಿಸಿಕೋಎಂಬ ಆರಿಸುವ ಸ್ವಾತಂತ್ರ್ಯ ಕೊಟ್ಟಾಗ ಆ ಮಾತು ಅವಳಿಗೆ ಅರ್ಥಹೀನವಾಗಿ ಕಾಣುತ್ತದೆ. ಜೀವನದ ಬಗ್ಗೆ, ಮನುಷ್ಯ ದಬ್ಬಾಳಿಕೆಯ ಬಗ್ಗೆ ತೀವ್ರ ತಿರಸ್ಕಾರ ಮೂಡಿದ್ದ ಮಾಧವಿ ಅವರೆಲ್ಲರಿಂದ ದೂರ ಹೊರಟು ಹೋಗುತ್ತಾಳೆ. ಇದು ಮಾಧವಿಯ ಬಂಡಾಯ. ಈ ಸಮರದಲ್ಲಿ ವೈಯಕ್ತಿಕ ಗಲುವು ಅವಳದಾಯ್ತು.

ಈ ಕಾದಂಬರಿಯಲ್ಲಿ ಆ ಕಾಲದ (ಎಲ್ಲಾ ಕಾಲದಲ್ಲೂ ನಡೆದುಬಂದಿರುವ) ಧರ್ಮದ ಬಗ್ಗೆ, ರಾಜರುಗಳ ಜೀವನದ ಶೈಲಿ, ಋಷಿಮುನಿಗಳ ಜೀವನ ಶೈಲಿ ಹಾಗೆ ಶೋಷಿತ ವರ್ಗಗಳ ಬಗ್ಗೆ ವಿವರವಿದೆ.

ಉದಾಹರಣೆಗೆ,

ಒಂದು ದಿನ ಋಷಿ ವಟವೃಕ್ಷದ ಕೆಳಗೆ ತನ್ನ ಶಿಷ್ಯರಿಗೆ ಭೋಧಿಸುತ್ತಿದ್ದುದನ್ನು ಕೇಳುತ್ತಾ ಮಾಧವಿಯೂ, ಋಷಿ ಪತ್ನಿಯೂ ಆಶ್ರಮದ ಬಾಗಿಲಲ್ಲಿ ಕುಳಿತಿದ್ದರು.

“ಧರ್ಮ ಎಂದರೆ?” – ಶಿಷ್ಯನೊಬ್ಬನ ಪ್ರಶ್ನೆ.

“ಜನರನ್ನು ನೀತಿಸಂಹಿತೆಯಲ್ಲಿ ಬಂಧಿಸೋದು ಧರ್ಮ. ಆಯಾ ವರ್ಣಗಳವರಿಗೆ ನಿಶ್ಚಯವಾಗಿರತಕ್ಕ ವೃತ್ತಿ ಧರ್ಮ ಪಾಲಿಸೋದೇ ಮುಖ್ಯ. ಆದ್ದರಿಂದ ಬೇರೆ ಬೇರೆ ಜನರಿಗೆ ಬೇರೆ ಬೇರೆ ಧರ್ಮದ ಕಟ್ಟುಗಳಿರುತ್ತವೆ. ಪ್ರಜೆಗೆ ರಾಜಾಜ್ಞೆ ಪಾಲಿಸೋದೇ ಧರ್ಮ. ರಾಜನಿಗೆ ಪ್ರಜಾಪಾನೆ ಧರ್ಮ, ಭೋಗವಿಚಾರ, ಯೋಗವಿಚಾರಗಳೆರಡೂ ಅವನು ತಿಳಿದಿರಬೇಕಾದಂಥವು. ಮಾತೂ ಮೌನವೂ ರಾಜನಲ್ಲಿರಬೇಕು. ರಾಜ ಗುರುವಿಗೆ ಸೇವಕ, ಧಾರ್ಮಿಕರಿಗೆ ಬಂಧು, ಕದನಕ್ಕೆ ಕಡುಗಲಿ, ಪ್ರಜೆಗಳಿಗೆ ಪರಿವಾರದವರಿಗೆ ಹಿತನಾಗಿರುವುದು, ಇವೆಲ್ಲ ಅವನು ಪಾಲಿಸಬೇಕಾದ ಧರ್ಮಗಳು….”

“ಎಲ್ಲ ರಾಜರೂ ಈ ಧರ್ಮಸಂಹಿತೆ ಪಾಲಿಸ್ತಾರಾ ಗುರುಗಳೇ?”

“ಪಾಲಿಸ್ಬೇಕು. ಪಾಲಿಸದಿದ್ರೂ ಆತನಿಗೆ ಕ್ಷಮೆಯುಂಟು. ಯಾಕೇಂದ್ರೆ ಅವನು ಪ್ರಜಾಪತಿ. ಅವನ ಜವಾಬ್ದಾರಿ ಹೆಚ್ಚು.”

“ಮುನಿಗಳಲ್ಲಿ ಧರ್ಮಸಂಹಿತೆ?”

“ಋಷಿಗಳು ಪ್ರತ್ಯಕ್ಷವಾಗಿ ಅಲ್ಲದಿದ್ರೂ ಪರೋಕ್ಷವಾಗಿ ಜನಹಿತಕ್ಕೆ ಲೋಕ ಕಲ್ಯಾಣಕ್ಕೆ ನೆರವಾಗ್ತಾರೆ. ಅವರು ತಪ್ಪು ಮಾಡಿದ್ರೂ ರಾಜನಂತೆಯೇ ಕ್ಷಮಾರ್ಹರು.”

“ರಾಜರಿಗೂ ಪ್ರಜೆಗಳಿಗೂ ಈ ಭೇದ ಯಾಕೆ? ಈ ಸಂಹಿತೆಗಳು ಕಾಲ ಕಾಲಕ್ಕೆ ಬದಲಾಗೋದು ಬೇಡ್ವೆ?”

ಮುಂದಿನ ವಾಕ್ಯಗಳು ಮಾಧವಿಯ ಕಿವಿಯ ಮೇಲೆ ಬೀಳಲಿಲ್ಲ.

ಅವಳ ಮನಸ್ಸಿನಲ್ಲಿ ಪ್ರಶ್ನೆ ಎದ್ದಿತು.

ಸ್ತ್ರೀ ಧರ್ಮ ಏನು?

ಮೌನವಾಗಿ ಚಕಾರವೆತ್ತದೆ ನಡೆಯುವುದೊಂದೇ ಏನು? ಮಕ್ಕಳನ್ನು ಹೆತ್ತು ಬೆಳೆಸುವುದೊಂದೇ ಅವಳ ಧರ್ಮವೇನು? ಯಾವ ಅನ್ಯಾಯಗಳಾದರೂ ಪ್ರತಿಭಟಿಸದೇ ಇರುವುದೇ ಏನು?

ಆ ಪ್ರಶ್ನೆಗಳಿಗೆ ಉತ್ತರವಿಲ್ಲ.

ಅವಳಿಗೆನಿಸಿತು: ತನಗೆಷ್ಟೇ ಅನ್ಯಾಯವಾದರೂ ಋಷಿಗಳಾಗಲೀ ಋಷಿ ಪತ್ನಿಯಾಗಲೀ ಇನ್ನೊಬ್ಬರಾಗಲೀ ತನ್ನ ಪರವಾಗಿ ಯಾರೂ ಮಾತನಾಡುವುದಿಲ್ಲ. ಮಾತನಾಡದಿರುವುದೇ ಧರ್ಮವೆಂದು ತೋರುತ್ತದೆ.

ಮಾಧವಿ ನಿಟ್ಟುಸಿರು ಬಿಟ್ಟಳು.

ಪಯಣ ಮುಂದುವರೆಯಿತು….

ಶೀರ್ಷಿಕೆ : ಮಾಧವಿ ಲೇಖಕರು : ಅನುಪಮಾ ನಿರಂಜನ ಪ್ರಕಾಶಕರು : ಡಿ. ವಿ. ಕೆ. ಮೂರ್ತಿ ಪುಟಗಳು : 190 ಬೆಲೆ: ರೂ.45/-