ಯಾದ್ ವಶೀಮ್ ಗೆ ೨೦೦೭ ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

scan0007

ಐವರಿಗೆ ಸಾಹಿತ್ಯ ಅಕಾಡೆಮಿ ಗರಿ
ಹಿರಿಯ ಸಾಹಿತಿ ಪ್ರೊ.ಅ.ರಾ.ಮಿತ್ರ ರೊಂದಿಗೆ ಹಸನಬಿ ಬೀಳಗಿ, ವಿಷ್ಣು ನಾಯ್ಕ, ಪ್ರೊ.ಮಲ್ಲಿಕಾರ್ಜುನ ಹಿರೇಮಠ ಮತ್ತು ಲಕ್ಷ್ಮಣ್ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ 2008ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
2007ನೇ ಸಾಲಿನ ಪುಸ್ತಕ ಬಹುಮಾನಕ್ಕಾಗಿ ಕಾವ್ಯ ಕಾದಂಬರಿ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಿಂದ 18 ಕೃತಿಗಳನ್ನು ಆಯ್ಕೆ ಮಾಡಲಾಗಿದೆ.
ಬಹುಮಾನಿತ ಕೃತಿಗಳು :
ಕಾವ್ಯ – ಒಡೆಯಲಾರದ ಪ್ರತಿಮೆ – ಬಸವರಾಜ ವಕ್ಕುಂದ
ಕಾದಂಬರಿ – ಯಾದ್ ವಶೀಮ್ – ನೇಮಿಚಂದ್ರ
ಸಣ್ಣಕತೆ – ನನ್ನ ಇನ್ನಷ್ಟು ಕತೆಗಳು – ಮಹಮ್ಮದ್ ಕುಳಾಯಿ
ನಾಟಕ – ದಾಳ – ಪ್ರೊ.ಎಸ್.ಜಿ.ಸಿದ್ಧರಾಮಯ್ಯ
ಲಲಿತ ಪ್ರಬಂಧ – ದೇವರುಗಳ ಟೈಮೇ ಸರಿಯಿಲ್ಲ – ಎಚ್.ಎಲ್.ಕೇಶವಮೂರ್ತಿ
ಪ್ರವಾಸ ಸಾಹಿತ್ಯ – ದುಬೈ ಎಂಬ ಮಾಯಾನಗರಿ – ಸಂಗಮೇಶ ಕೋಟಿ
ಜೀವನ ಚರಿತ್ರೆ – ಬಣ್ಣದ ಬದುಕಿನ ಚಿನ್ನದ ದಿನಗಳು – `ಪ್ರಜಾವಾಣಿ’ಯ ಗಣೇಶ ಅಮೀನಗಡ
ಸಾಹಿತ್ಯ ವಿಮರ್ಶೆ – ಉಲ್ಲೇಖ – ಕೆ.ವಿ.ತಿರುಮಲೇಶ್
ಗ್ರಂಥ ಸಂಪಾದನೆ – ನಂದಪ್ಪದೇವರ ಪ್ರಭುಚರಿತ್ರೆ – ಪ್ರೊ.ಎಸ್.ಉಮಾಪತಿ
ಮಕ್ಕಳ ಸಾಹಿತ್ಯ – ರೋಬೋಟ್ ಮತ್ತು ಚಿನ್ಹೆಗಳು – ನಾ.ಸು.ಭರತನ ಹಳ್ಳಿ
ವಿಜ್ಞಾನ ಸಾಹಿತ್ಯ – ಆಚಿನ ಲೋಕಕ್ಕೆ ಕಾಲಕೋಶ – ನಾಗೇಶ ಹೆಗಡೆ
ಮಾನವಿಕ – ಮಹಿಳಾ ಚಳವಳಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆ – ಹಾಲತಿ ಸೋಮಶೇಖರ‍್
ಸಂಶೋದನೆ – ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ – ಎಸ್.ಶೆಟ್ಟರ‍್
ಅನುವಾದ (ಸೃಜನಶೀಲ) – ನೆಲವೆದ್ದು ಬಡಿಯಿತು – ಚಂದ್ರಕಾಂತ ಪೊಕಳೆ
ಅನುವಾದ (ಸೃಜನೇತರ) – ಅಧಿಕಾರ ಮೀಮಾಂಸೆ – ಪಿ.ವಿ.ನಾರಾಯಣ
ಸಂಕೀರ್ಣ – ವಕೀಲರೊಬ್ಬರ ವಗೈರೆಗಳು – ಸಿ.ಎಚ್.ಹನುಮಂತರಾಯ
ಲೇಖಕರ ಮೊದಲ ಕೃತಿ – ತತ್ರಾಣಿ – ಬಸವರಾಜ ಹೂಗಾರ
ಕನ್ನಡದಿಂದ ಇಂಗ್ಲೀಷ್ ಗೆ ಅನುವಾದ – ಆರಿಜಿನ್ ಆಫ್ ಕ್ರಿಶ್ಚಿಯನ್ ಇನ್ ಅಂಡ್ ಅರೌಂಡ್ ಶ್ರೀರಂಗಪಟ್ಟಣ – ಫಾದರ‍್ ಡಾ.ಐ.ಅಂತಪ್ಪ
ಆಸಕ್ತರು ಅಕಾಡೆಮಿಯ ವೆಬ್ ಸೈಟ್ (www.karnatakasahithyaacademy.org) ನಲ್ಲಿ ಲೇಖಕರ ವಿಳಾಸ, ಪ್ರಶಸ್ತಿ ಮತ್ತು ಇನ್ನಿತರ ಮಾಹಿತಿಗಳನ್ನು ಪಡೆಯಬಹುದು

ಕೃಪೆ – ಪ್ರಜಾವಾಣಿ

ದುಡಿಯುವ ದಂಪತಿಗಳಿಗಾಗಿ

ನವಕರ್ನಾಟಕ ಪ್ರಕಾಶನದ ವ್ಯಕ್ತಿವಿಕಸನ ಮಾಲೆಯ ಮೊದಲನೇ ಕಂತಿನ 12 ಕೃತಿಗಳು 2004 ರಲ್ಲಿ ಪ್ರಕಟವಾದವು. ಮೊದಲನೇ ಕಂತಿನ ಯಶಸ್ಸಿನ ಪ್ರೇರಣೆಯಿಂದ ಈ ಪುಸ್ತಕಮಾಲೆಯ 2 ನೇ ಕಂತಿನ ಪುಸ್ತಕಗಳು 2007 ರಲ್ಲಿ ಪ್ರಕಟಗೊಂಡವು. ಈ ಮಾಲೆಯಲ್ಲಿ ಬಂದ ಪುಸ್ತಕಗಳು ಬದುಕಿನ ಎಲ್ಲಾ ಕ್ಷೇತ್ರಗಳಲ್ಲಿ ವ್ಯಕ್ತಿಗಳು, ಮಕ್ಕಳು, ಶಿಕ್ಷಕರು, ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು, ದಂಪತಿಗಳು – ಹೀಗೆ ಸಮಾಜದ ಎಲ್ಲಾ ಸ್ತರಗಳವರು ತಮ್ಮ ಬದುಕಿನ ಮಾರ್ಗಗಳನ್ನು ಮತ್ತಷ್ಟು ಸುಗಮಗೊಳಿಸಲು ಸಹಾಯವಾಗುವಂತೆ ಆಯಾ ಕ್ಷೇತ್ರಗಳಲ್ಲಿ ಪರಿಣಿತರಾದವರು ಬರೆದವುಗಳಾಗಿವೆ.

ಈ ಪುಸ್ತಕಮಾಲೆಯಲ್ಲಿ ದಂಪತಿಗಳಿಗಾಗಿ ಲೇಖಕಿ ನೇಮಿಚಂದ್ರ ಬರೆದ `ದುಡಿವ ಹಾದಿಯಲಿ ಜೊತೆಯಾಗಿಪುಸ್ತಕವೂ ಒಂದು.

ಈ ಪುಸ್ತಕದಲ್ಲಿ ನನಗಿಷ್ಟವಾದ ವಾಕ್ಯಗಳನ್ನು ಹೇಳ ಹೊರಟರೆ ಇಡೀ ಪುಸ್ತಕವೇ ಇಲ್ಲಿ ಇಳಿದ ಬರುತ್ತದೆ. ಆದ್ದರಿಂದ ಕಷ್ಟಪಟ್ಟು ಕೆಲವೇ ವಾಕ್ಯಗಳನ್ನು ಇಲ್ಲಿ ಉದ್ದರಿಸಿದ್ದೇನೆ.

¨ ಇದು ನನ್ನ ಮನೆ, ಈಕೆ ನನ್ನವಳು, ಈತ ನನ್ನವನು. ಈಕೆ/ಈತ ನೊಡನೆ ಹಂಗಿಸುವ ಭಯವಿಲ್ಲದೆ, ಹೋಲಿಸುವ ಹೊರೆಯಿಲ್ಲದೆ ನಾವು ನಾವಾಗಿ ಬಿಚ್ಚಿಕೊಳ್ಳುವ ಮನೆ ನಮ್ಮದಾಗಬೇಕು

¨ ತಮ್ಮ ಪತಿಯ ಹುದ್ದೆ, ಬಡ್ತಿ, ಯಶಸ್ಸನ್ನು ಕಂಡು ಹೆಂಡತಿಯರು ಸಂಭ್ರಮಿಸುವಷ್ಟೇ ಹೃತ್ಪೂರ್ವಕವಾಗಿ ಪತಿಯರು ತಮ್ಮ ಪತ್ನಿಯರ ಏಳಿಗೆಯನ್ನು ಸಂಭ್ರಮಿಸಿದರೆ ಅಭಿಮಾನದ ಅನಾಹುತಕಾರಿ ಅಡ್ಡಗೋಡೆ ಏರುವುದಿಲ್ಲ

¨ ಮಗುವಿಗೆ ತಂದೆಯ ಆವಶ್ಯಕತೆ ತಾಯಿಯಷ್ಟೇ ಉಂಟು. ತಂದೆಯು ತಾಯಿಯಷ್ಟೇ ಹತ್ತಿರವಿದ್ದು ತಮ್ಮ ಸಮಯ, ಸಹನೆ ನೀಡಿದರೆ ಮಗು ಅಷ್ಟೇ ಆರೋಗ್ಯಪೂರ್ಣವಾಗಿ ಬೆಳೆಯಬಲ್ಲದು.

¨ ದುಡಿಯುವ ನವದಂಪತಿಗಳಿಗೆ ಸಣ್ಣ ಕಿವಿಮಾತು ` ಈ ಇಂಪ್ರೆಸ್ ಮಾಡುವ ಆತುರದಲ್ಲಿ ಎಲ್ಲವನ್ನು ಹೆಗಲಿಗೆ ಹೇರಿಕೊಳ್ಳಬೇಡಿ. ಹಂಚಿ ದುಡಿಯುವ, ಹೊಸ ಜೀವನ ಕ್ರಮಕ್ಕೆ ನಾಂದಿ ಹಾಡಿ.ಇದು ಹೇಳುವಷ್ಟು ಸುಲಭವಲ್ಲ. ಆದರೆ ಅಸಾಧ್ಯವಲ್ಲ. ಅಸಂಭವವಂತೂ ಅಲ್ಲವೇ ಅಲ್ಲ.

¨ ಅತ್ತೆ ಮಾವರ ಸೇವೆ ಮಾಡುವುದು ಭಾರತೀಯ ಮಹಿಳೆ ಸಹಜವಾಗಿ ಸ್ವೀಕರಿಸಿದರೂ, ಇಂದು ದುಡಿಯುವ ಹುಡುಗಿಯರಿಗೆ ತಾಯಿ, ತಂದೆ, ತವರಿನ ಜವಾಬ್ದಾರಿಯೂ ತಮ್ಮದೆಂಬ ಅರಿವಿದೆ. ಅದಕ್ಕೆ ಅಡ್ಡ ನಿಲ್ಲುವ ಪತಿಯನ್ನು ಕುರಿತ ದುಡಿಯುವ ಮಹಿಳೆಯ ಕುರಿತು ರೋಸಿಹೋಗುತ್ತದೆ.

¨ ಮಹಿಳಾ ಐ.ಎ.ಎಸ್. ಅಧಿಕಾರಿ ರೂಪೆನ್ ಬಜಾಜ್ ಮಹಿಳೆಯ ಘನತೆ, ಗೌರವಕ್ಕೆ ಧಕ್ಕೆ ಬರುವಂತೆ ವರ್ತಿಸಿದ ಪಂಜಾಬಿನ ಐ.ಪಿ.ಎಸ್. ಅಧಿಕಾರಿ ಕೆ.ಪಿ.ಎಸ್. ಗಿಲ್ ಅವರನ್ನು ಕೋರ್ಟಿಗಗೆಳೆದು ಆತನ ತಪ್ಪಿಗೆ ಶಿಕ್ಷೆಯಾಗಬೇಕೆಂದು ಪಣ ತೊಟ್ಟ ಅಪರೂಪದ ಮಹಿಳೆ. ಅವರ ಜೊತೆ ನಿಂತ ಪತಿ, ಅಷ್ಟೇ ಅಪರೂಪದ ವ್ಯಕ್ತಿ

¨ ದುಡಿಯುವ ತಾಯಿಯ ಮಕ್ಕಳು ಎಂದೂ ಅನಾಥರಾಗರು

¨ ಹೆಂಗಸರು ಬಾಲ್ಯದಿಂದಲೇ ತಮ್ಮ ಬದುಕನ್ನು ನಿರ್ಮಿಸವತ್ತ ಚಿಂತಿಸಬೇಕು. ಹುಡುಗಿಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುವವರೆಗೆ ವಿವಾಹವಾಗಕೂಡದು.

¨ ಮುಖ್ಯವಾಗಿ ನಾವು ಮಾನಸಿಕವಾಗಿ ಬೆಳೆಯಬೇಕಿದೆ. ನಮ್ಮ ಕನಸುಗಳನ್ನು ಯಾರದೋ ದುರ್ಬಲ ಹೆಗಲುಗಳ ಮೇಲೆ ಹೇರುವ ಬದಲು ಅದಕ್ಕಾಗಿ ದುಡಿಯಲು ತಯಾರಾಗಬೇಕಾಗಿದೆ.

¨ ನಮ್ಮ ದುಡಿಮೆ ನಮ್ಮ ಬದುಕಿಗೆ ಅಗತ್ಯವಾದದ್ದು. ಈ ದುಡಿಮೆ ಬೇತಾಳವಾಗಬೇಕಾಗಿಲ್ಲ. …. ನನ್ನ ಕೆಲಸದಿಂದ ನಾನು ಕೇವಲ ಸಂಬಳ ಮಾತ್ರ ಪಡೆದಿಲ್ಲ. ಆತ್ಮ ವಿಶ್ವಾಸವನ್ನು, ಬದುಕಿನ ಅಪರೂಪದ ಅವಕಾಶವನ್ನೂ ಪಡೆದೆ.

¨ ಮೇರಿ ಕ್ಯೂರಿಗೆಂದೂ ವಿವಾಹ-ವಿಜ್ಞಾನಗಳ ನಡುವೆ ಆಯ್ದುಕೊಳ್ಳುವ ವಿಚಾರವೇ ಬಂದಿರಲಿಲ್ಲ. ಅವಳಲ್ಲಿ ಶಕ್ತಿಯಿತ್ತು. ಛಲವಿತ್ತು, ವಿವಾಹವನ್ನು, ತಾಯ್ತನವನ್ನು, ವಿಜ್ಞಾನವನ್ನು ಎಲ್ಲವನ್ನೂ ತನ್ನ ಪ್ರೀತಿಯಿಂದ, ತೀರ್ವತೆಯಿಂದ ನಿಭಾಯಿಸಿ ಗೆಲ್ಲಬಲ್ಲ ಆತ್ಮವಿಶ್ವಾಸವಿತ್ತು. ….. ಎಲ್ಲಾ ಕೆಲಸ, ಸಂಶೋಧನೆಯ ನಡುವೆಯೂ, ಹಗಲಿರುಳ ಪರಿಶ್ರಮದಲ್ಲೂ ಮೇರಿಗೆ ಸಮಯವಿತ್ತು ಹತ್ತು ತಿಂಗಳ ಐರಿನಳ ದಿನದಿನದ ತೂಕವನ್ನು, ಇಟ್ಟ ಒಂದೊಂದು ಹೆಜ್ಜೆಯನ್ನು, ಬೊಚ್ಚುಬಾಯಿ ಬಿಟ್ಟು ನಕ್ಕಿದ್ದನ್ನು, ಹಲ್ಲು ಮೊಳೆತಿದ್ದನ್ನು ತನ್ನ ದಿನಚರಿಯಲ್ಲಿ ದಾಖಲಿಸಲು ಮೇರಿಗೆ ಸಮಯವಿತ್ತು. …… ಸಮಯವಿತ್ತು ಮೇರಿಗೆ ತನ್ನ ಮಕ್ಕಳ ಬದುಕನ್ನು ರೂಪಿಸಲು, ತನ್ನ ಹೆಣ್ಣು ಮಕ್ಕಳನ್ನು ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ ಸಬಲಗೊಳಿಸಲು…..

¨ ಐಟಿ ಕಂಪನಿಗಳಲ್ಲಿ ದುಡಿವ ದಂಪತಿಗಳೂ ಕೂಡಾ ಬದುಕು ಬರಿದಾಗದಂತೆ ಪ್ರೀತಿ, ಸ್ನೇಹ, ಸಂಬಂಧ, ಸಂಸಾರ, ಹವ್ಯಾಸಗಳನ್ನು ಉಳಿಸಿಕೊಳ್ಳಬಹುದಿದೆ. ಮನಸ್ಸಿದ್ದರೆ ಸಮಯವಿರುತ್ತದೆ. ನೂರು ಮಾರ್ಗಗಳು ತೆರೆದುಕೊಳ್ಳುತ್ತದೆ.

ಹೀಗೆ ಬದುಕನ್ನು ಪ್ರೀತಿಯಿಂದ ಅನುಭವಿಸುತ್ತಾ ತಮ್ಮ ಲವಲವಿಕೆಯ ಬದುಕಿಗೆ ನಮ್ಮನ್ನೂ ಕೊಂಡೊಯ್ಯುವ ಮಾಂತ್ರಿಕತೆ ಈ ಪುಸ್ತಕದಲ್ಲಿದೆ.

ದುಡಿಮೆಯ ಹಾದಿಯಲ್ಲಿ ಜೊತೆಯಾಗಿ ನಡೆದ ಅನೇಕರ ಬದುಕನ್ನು ನಮಗೆ ತೋರಿಕೊಟ್ಟ ಈ ಲೇಖನಮಾಲೆ ನಿಜಕ್ಕೂ ವ್ಯಕ್ತಿವಿಕಸನ ಮಾಲೆಯಲ್ಲಿ ಸೇರತಕ್ಕದ್ದೇ ಸರಿ.

ಪುಸ್ತಕಕ್ಕೆ ವೈದ್ಯ-ಲೇಖಕ, ಖ್ಯಾತ ಮನೋವೈದ್ಯ ಡಾ. ಸಿ. ಆರ್. ಚಂದ್ರಶೇಖರ್ ಅವರು ಬರೆದ ಮುನ್ನುಡಿ ಈ ಪುಸ್ತಕಕ್ಕೆ ಮತ್ತಷ್ಟು ಮೆರುಗು ತಂದಿದೆ.

ಒಟ್ಟಿನಲ್ಲಿ ಗಂಡು ಹೆಣ್ಣು ಎನ್ನುವ ಭೇದವಿಲ್ಲದೇ ಪ್ರತಿಯೊಬ್ಬರಿಗೂ ಸಂದೇಶವಿರುವ, ಓದಲೇ ಬೇಕಾದ, ಓದಿ ಪಾಲಿಸಲು (ಚೆನ್ನಾಗಿ ಬದುಕಲು) ಬೇಕಾದಷ್ಟು ಸೂತ್ರವಿರುವ ಪುಸ್ತಕ ಇದು.

ನೇಮಿಚಂದ್ರರಿಗೆ ಅನಂತಾನಂತ ಧನ್ಯವಾದಗಳು.

ವಿಶಾಲ ಮತಿ

ಶೀರ್ಷಿಕೆ : ದುಡಿಯುವ ಹಾದಿಯಲ್ಲಿ ಜೊತೆಯಾಗಿ ಲೇಖಕರು : ನೇಮಿ ಚಂದ್ರ ಪ್ರಕಾಶಕರು : ನವ ಕರ್ನಾಟಕ ಪ್ರಕಾಶನ ಪುಟಗಳು :128 ಬೆಲೆ:ರೂ.40/-